ಆಂದೋಲನ ಪುರವಣಿ

ಆಂದೋಲನ ಬರಹ ಬದುಕು : ಡಿಸೆಂಬರಿನ ಚಳಿ ಮತ್ತು ನೂರಾರು ಕನ್ನಡ ಪುಸ್ತಕಗಳು

ಫಾತಿಮಾ ರಲಿಯಾ

ಮೊಬೈಲೊಂದು ಕೈಗೆ ಬಂದ ಮೇಲೆ ’ಖಾಲಿ ಕೂತಿದ್ದೇನೆ’ ಎಂದು ಅನ್ನಿಸಿದ್ದೇ ಕಡಿಮೆ. ಏಕಾಂತವನ್ನೆಲ್ಲಾ ಮೊಬೈಲು ಕಿತ್ತುಕೊಂಡ ಮೇಲೆ ’ಸೋಶಿಯಲ್ ಮೀಡಿಯಾ’ ಅಡಿಕ್ಷನ್ನು ಜಾಸ್ತಿ ಆಯ್ತು ಅಂತ ಒಂದಿನ ದಿಢೀರಾಗಿ ಜ್ಞಾನೋದಯಆಗಿ ಮೊಬೈಲಲ್ಲಿರುವ ಕೆಲವು ಆಪ್  ಡಿಲೀಟ್ ಮಾಡಿ ಇನ್ನುಳಿದಿರುವ ಆಪ್‌ಗಳಿಗೆ ದಿನಕ್ಕೆ ಇಂತಿಷ್ಟೇ ಹೊತ್ತು ಬಳಸುತ್ತೇನೆ ಎಂದು  ಟೈಮ್ ನಿಗದಿ ಮಾಡಿ, ಆಮೇಲೂ ಆ ಸಮಯವನ್ನು ದಿನಕ್ಕೆರಡು ಬಾರಿಯಾದರೂ ಬದಲಿಸುವ ನನಗೆ ಈಗ ಇಳಿ  ಮಧ್ಯಾಹ್ನದ ಹೊತ್ತಲ್ಲಿ ಕಿಟಕಿಯಿಂದ ತೂರಿ ಬರುವ ಬಿಸಿಲುಕೋಲನ್ನು ಬೊಗಸೆಯೊಳಗೆ ಬಂಧಿಯಾಗಿಸಲು ಯತ್ನಿಸುವ ಪುಟ್ಟ ಮಗುವಂತೆ ಅಚ್ಚರಿ ಹುಟ್ಟಿಸುತ್ತಿರುವುದು ಬೆಂಗಳೂರಲ್ಲಿ ದಿನಾ ಬಿಡುಗಡೆಯಾಗುತ್ತಿರುವ ಪುಸ್ತಕಗಳು ಮತ್ತು ಹಬ್ಬದಂತೆ ಸೋಶಿಯಲ್ ಮೀಡಿಯಾದಲ್ಲಿ ಬರುತ್ತಿರುವ ಫೊಟೋಗಳು.

ಮಹಾನಗರದಲ್ಲಿ ಡಿಸೆಂಬರ್ ತಿಂಗಳೊಂದರಲ್ಲೇ ಸುಮಾರು ನೂರು ಪುಸ್ತಕಗಳು ಪ್ರಕಟ ಆಗಿ ಅದ್ಧೂರಿ ಬಿಡುಗಡೆ ಭಾಗ್ಯವನ್ನೂ ಕಾಣುತ್ತಿವೆ. ಆ ರಾತ್ರಿ ಅಲ್ಲಿ ಬಿಡುಗಡೆ ಆಗ್ತಿರೋ ಪುಸ್ತಕಗಳನ್ನು ಡಿಸೆಂಬರ್‌ನ ಅಕೌಂಟಿಗೆ ಸೇರಿಸಬೇಕೋ ಅಥವಾ ಜನವರಿಯ ಅಕೌಂಟಿಗೋ ಎನ್ನುವ ಗೊಂದಲವನ್ನು ಹೊರತುಪಡಿಸಿದರೆ ಈ ಎಲ್ಲಾ ಪುಸ್ತಕ ಬಿಡುಗಡೆಗಳ ಬಗ್ಗೆ ನನಗೆ ನನಗಿರುವುದು ದೊಡ್ಡ ಬೆರಗು ಮತ್ತು ತೀರದ ಅಚ್ಚರಿ.

ಪುಸ್ತಕ ಬಿಡುಗಡೆಯ ಪ್ರಪಂಚದೊಳಕ್ಕೆ ಈಗೀಗಷ್ಟೇ ಪುಟ್ಟ ಪುಟ್ಟದಾಗಿ ಹೆಜ್ಜೆಯಿಟ್ಟುಕೊಂಡು ಬರುತ್ತಿರುವ, ನಮ್ಮ ದೊಡ್ಡ ಕುಟುಂಬದ ಮೊದಲ ’ಬರಹಗಾರ್ತಿ’ ಎನ್ನುವ ಪುಳಕವನ್ನು ಚೂರುಚೂರಾಗೇ ಎದೆಯೊಳಗಿಳಿಸಿಕೊಳ್ಳುತ್ತಿರುವ, ಬೆಂಗಳೂರಿಂದ ನಾಲ್ಕುನೂರು ಚಿಲ್ಲರೆ ಕಿ.ಮೀ ದೂರದಲ್ಲಿರುವ ನನ್ನೊಳಗೆ ದೂರದ ಬೆಂಗಳೂರಲ್ಲಿ, ಮೈಸೂರಲ್ಲಿ ನಡೆಯುವ ಪುಸ್ತಕ ಹಬ್ಬಗಳೆಲ್ಲವೂ ನಗರ ಸಂಸ್ಕ್ರತಿಯ ಕಿರೀಟಕ್ಕೆ, ಒಂದಾನೊಂದು ಕಾಲದಲ್ಲಿ ’ಮರಿ ಇಡುವ’ ಅಪಾರ ನಂಬಿಕೆಯಿಂದ ನಮ್ಮ ಪುಸ್ತಕಗಳೆಡೆಯಲ್ಲಿಡುತ್ತಿದ್ದ ನವಿಲುಗರಿಯನ್ನು ನಿರಮ್ಮಳವಾಗಿ ಸಿಕ್ಕಿಸುವ ಒಂದು ಪರಮಾಪ್ತ ಭಾವದಂತೆ ಭಾಸವಾಗುತ್ತದೆ.

ಜಗಮಗಿಸೋ ವೇದಿಕೆ, ಬಿಡುಗಡೆ ಆಗ್ತಿರೋ ತಮ್ಮ ಪುಸ್ತಕಗಳೊಂದಿಗೆ ಸಂಭ್ರಮದಿಂದ ನಿಂತಿರೋ ಹತ್ತಾರು ಲೇಖಕರು, ಅತಿಥಿಗಳು, ಪ್ರಕಾಶಕರು, ತಮ್ಮ ನೆಚ್ಚಿನ ಲೇಖಕ/ಲೇಖಕಿಯರ ಪುಸ್ತಕ ಕೊಳ್ಳಲು, ಮಾತು ಕೇಳಲು ಬಂದಿರುವ ಪ್ರೀತಿಯ ಓದುಗರು… ಎಲ್ಲರ ಚಿತ್ರವನ್ನು ಹೊತ್ತಿರುವ ದಿನಪತ್ರಿಕೆಗಳು ಅಥವಾ ಪ್ರಕಾಶಕರ/ಲೇಖಕರ ಫೇಸ್‌ಬುಕ್ ಪುಟಗಳನ್ನು ನೋಡುವಾಗ ಅಕ್ಷರ ಪ್ರಪಂಚದೊಂದಿಗೆ ಬಿಟ್ಟೂ ಬಿಡದಂತೆ ಹೆಣೆದುಕೊಂಡಿರುವ ಈ ಸಂಭ್ರಮಗಳೆಲ್ಲಾ ಎಷ್ಟು ಚಂದ ಅಲ್ವಾ ಅಂತ ಅನ್ನಿಸುತ್ತದೆ. ಜೊತೆಗೆ, ಬದುಕು ನಿಜಕ್ಕೂ ಕಳೆ ಕಟ್ಟುವುದು ಇಂತಹ ಸಂಭ್ರಮಗಳಲ್ಲಿ ಭಾಗಿಯಾದಾಗಲೇನೋ ಎನ್ನುವ ಭಾವವೂ. ಅದರ ಜೊತೆಗೆ ನಗರದಿಂದ ಸಾಕಷ್ಟು ದೂರದಲ್ಲಿರುವ ನನಗೆ ಇದರಲ್ಲೆಲ್ಲಾ ಮನಸ್ಸಿಗೆ ತೃಪ್ತಿಯಾಗುವಷ್ಟು ಭಾಗಿಯಾಗಲಾಗುತ್ತಿಲ್ಲ ಎನ್ನುವ ಅಸಮಾಧಾನವೂ ಸುಮ್ಮನೆ ಹಾದುಹೋಗುತ್ತದೆ.

ಒಮ್ಮೊಮ್ಮೆ ಸಾಂಸ್ಕ್ರತಿಕ  ಜಗತ್ತಿನೊಂದಿಗೆ ಅವಿನಾಭಾವ ಸಂಬಂಧವೊಂದನ್ನು ಇಟ್ಟುಕೊಳ್ಳುವುದಕ್ಕೆ ಬೆಂಗಳೂರು, ಮೈಸೂರುಗಳಂತಹ ನಗರಗಳಲ್ಲಿ ಕನಿಷ್ಠ ಶಿವಮೊಗ್ಗದಲ್ಲಾದರೂ ಇರಬೇಕಿತ್ತು ಅಂತ ಅನ್ನಿಸುವುದೂ ಇದೆ. ಅದೇ ಹೊತ್ತಿಗೆ ನಾನಿರೋ ಈ ಪುಟ್ಟ ಊರು, ನನ್ನ ಉಸಿರಿನೊಂದಿಗೆ ಬೆರೆತು ಹೋಗಿರುವ ಇಲ್ಲಿನ ಕಡಲು ಮತ್ತದರ ನೀಲಿ, ಅದು ನನ್ನೊಳಗೆ ಹುಟ್ಟಿಸುವ ಭಾವಸ್ಪುರಣೆ, ಈ ನೆಲದೊಂದಿಗಿನ ಅಪಾರ ಪ್ರೀತಿ, ಒಳಗಿಂದೊಳಗೆ ಹಬೆಯಾಡುವ ತಲ್ಲಣಗಳು, ಕಳೆದ ಒಂದೂವರೆ ದಶಕಗಳಿಂದ ಇಲ್ಲಾಗುತ್ತಿರುವ ಸಂಘರ್ಷಗಳು, ಅಧಿಕಾರ ಕೇಂದ್ರದಲ್ಲಿರುವವರು ಸುಮ್ಮನೆ ಬೀಸಿದ ಕಲ್ಲೊಂದು ಇಲ್ಲಿನ ತಿಳಿಗೊಳವನ್ನು ಆಗಾಗ ಕಲಕುತ್ತಿದೆ ಎನ್ನುವ ಭಾವ ಮೂಡಿದಾಗೆಲ್ಲಾ ಕಾಡುವ ಆತಂಕಗಳು ಇವೆಲ್ಲಾ ನನ್ನ ಬದುಕನ್ನು, ಬರಹವನ್ನು ಕಲಕಿದಂತೆ ಇನ್ನಾವುದೂ ಕಲಕದು ಅನ್ನಿಸಿ ಸಮಾಧಾನದ ಬೆನ್ನು ಹತ್ತುವುದೂ ಇದೆ.

ತಿಂಗಳಿಗೆ ಇಂತಿಷ್ಟು ಪುಸ್ತಕ ಕೊಳ್ಳುವ, ಓದುವ ನಾನು ಇದುವರೆಗಿನ ಬದುಕಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾದದ್ದು ಒಮ್ಮೆ ಮಾತ್ರ. ಆ ಸಮಾರಂಭದಲ್ಲೂ ಬಿಡುಗಡೆಯ ಹೊತ್ತಿಗೆ ಅಲ್ಲಿ ನಿಲ್ಲಲಾಗದೆ ಹತ್ತೋ ಹದಿನೈದೋ ನಿಮಿಷ ಸಮಾರಂಭದಲ್ಲಿ ಭಾಗಿಯಾಗಿ ಒಂದಿಷ್ಟು ಪುಸ್ತಕಗಳನ್ನು ಖರೀದಿಸಿ ಮನೆಗೆ ಮರಳಿದ್ದೆ. ಗಂಭೀರ ಭಾಷಣ, ಘನವಾದ ಸಾಂಸ್ಕ್ರತಿಕ ವಿಚಾರ ವಿನಿಮಯ ಇರಬಹುದು ಎಂಬ ಅನಿಸಿಕೆಯೊಂದಿಗೆ ಅಲ್ಲಿ ಹೋಗಿದ್ದರೆ, ಲೇಖಕರು ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿ ಕಾಫಿ, ತಿಂಡಿ ನೀಡಿ ಉಪಚರಿಸಿದ್ದರು. ತಲೆಯಲ್ಲಿ ಏನೇನೋ ಇಟ್ಟುಕೊಂಡು ಹೋಗಿದ್ದ ನನ್ನನ್ನು ಅಲ್ಲಿನ ಆತ್ಮೀಯತೆ, ಕಾಡು ಹರಟೆ ಸಾಹಿತ್ಯಿಕ ಸಮಾರಂಭವೆಂದರೆ ಬರಿ ವೈಚಾರಿಕತೆ ಮಾತ್ರವಲ್ಲ ಅದು ಆಪ್ತ ಅನುಭವವೊಂದನ್ನು ನೀಡಬಲ್ಲ ’ಗೆಟ್ ಟುಗೆದರ್’ ಕೂಡ ಆಗಬಹುದು ಎಂಬ ಅರಿವಿನ, ಮುಕ್ತತೆಯ ದರ್ಶನ ಮಾಡಿಸಿತ್ತು.

ಆದರೆ ಒಮ್ಮೆ ಕಾರ್ಯಕ್ರಮ  ನಡೆಯುವ ಹಾಲ್‌ನೊಳಗೆ ಪ್ರವೇಶಿಸಿದಂತೆ ಹೊರಗೆ ಜಿಟಿಜಿಟಿ ಮಳೆ ಸುರಿಯಲಾರಂಭಿಸಿತ್ತು. ಆಗಿನ್ನೂ ಒಂದೂವರೆ ವರ್ಷದ ಪುಟ್ಟ ಮಗುವಾಗಿದ್ದ ಮಗಳು ಹಿಬಾ, ಪುಸ್ತಕ, ಅದು ಬಿಡುಗಡೆಗೊಳ್ಳುವ ಯಾವ ಸಂಭ್ರಮಕ್ಕೂ ತನಗೂ ಚೂರೇ ಚೂರು ಸಂಬಂಧವಿಲ್ಲ ಎಂಬಂತೆ ಪೂರ್ತಿ ಹಾಲ್ ಓಡಾಡಿ ಗದ್ದಲವೆಬ್ಬಿಸುತ್ತಿದ್ದಳು. ಜೊತೆಗೆ ಹೊರಗೆ ಐಸ್‌ಕ್ಯಾಂಡಿಯವನ ಕಿಣಿಕಿಣಿ ಸದ್ದು ಕೇಳುತ್ತಿದ್ದಂತೆ ಎಲ್ಲಾ ಬಿಟ್ಟು ಆ ನಾದದ ಹಿಂದೆ ಓಡಿ ಹೋದಳು. ನಾನು ಪುಸ್ತಕ ಬಿಡುಗಡೆಯನ್ನು ಕಣ್ಣುತುಂಬಿಕೊಳ್ಳಲಾಗದೆ ಅನಿವಾರ್ಯವಾಗಿ ಅವಳ ಹಿಂದೆ ಹೋದೆ. ಅಲ್ಲಿಗೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾದೆ ಎಂದು ಪೂರ್ತಿಯಾಗಿ ಹೇಳಿಕೊಳ್ಳುವ ಅವಕಾಶವನ್ನೂ ತಪ್ಪಿಸಿಕೊಂಡೆ.

ಆದರೆ ಇವೆಲ್ಲವನ್ನೂ ಮೀರಿ ಒಳಗೊಳಗೆ ಕಾಡುತ್ತಿದ್ದ ಆತಂಕವೇ ಬೇರೆ. ಥಳುಕು ಬಳುಕಿನ, ಅಗಾಧ ಸಾಧ್ಯತೆಗಳನ್ನೂ ಅಸೀಮ ಸಂಭವನೀಯತೆಗಳನ್ನೂ ಒಡಲಲ್ಲಿಟ್ಟುಕೊಂಡಿರುವ ಈ ನಗರ, ನಗರ ಪ್ರಜ್ಞೆಯ ಲವಲೇಶವೂ ಗೊತ್ತಿಲ್ಲದ, ನಗರದ ರೀತಿ ರಿವಾಜುಗಳ ಬಗ್ಗೆ ಚೂರೂ ಅರಿವಿಲ್ಲದ ನನ್ನನ್ನು ಹೇಗೆ ಸ್ವೀಕರಿಸಬಹುದು ಎನ್ನುವ ಕುತೂಹಲ ಮತ್ತು ಭಯ ಇತ್ತು. ಜೊತೆಗೆ ವೈಚಾರಿಕತೆೆಯೆಂದರೆ, ಆಧುನಿಕತೆೆಯೆಂದರೆ ಎಲ್ಲಾ ರೀತಿ ರಿವಾಜುಗಳನ್ನು ಧಿಕ್ಕರಿಸುವುದು ಅಂತಲೇ ಬಹುಪಾಲು ಮಂದಿ ಅಂದುಕೊಂಡಿರುವ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ವಲಯದ ವಕ್ತಾರರು ಬುರ್ಖಾಧಾರಿಯಾಗಿರುವ ನನ್ನನ್ನು ಯಾವ ದೃಷ್ಟಿಯಿಂದ ಒಳಗೊಳ್ಳಬಹುದು ಎನ್ನುವ ಆತಂಕವೂ ಇತ್ತು. ಈ ಬಗ್ಗೆ ಆ ಕವಿಗೋಷ್ಠಿಯಲ್ಲಿ ಭಾಗವಹಿಸುವ ಇತರ ಕವಿಗಳಲ್ಲಿ ಮೊದಲೇ ಚರ್ಚಿಸಿಯೂ  ಇದ್ದೆ. ಬೆಂಗಳೂರಲ್ಲಿ ಬದುಕು ಕಟ್ಟಿಕೊಂಡಿರುವ ಆ ಗೆಳೆಯರು ’ನಿನ್ನ ಅಸ್ಮಿತೆ, ನಿನ್ನ ಅಲಂಕಾರ ನಿನಗೆ. ಆ ಬಗ್ಗೆ ತಲೆ ಕೆಡಿಸ್ಕೊಳ್ಬೇಡ’ ಅಂದಿದ್ರು. ನನಗೆ ಮಾತ್ರ ತೀರಾ ವೇದಿಕೆ ಹತ್ತಿ ಮೈಕ್ ಹಿಡಿಯುವವರೆಗೂ ಆ ಆತಂಕ ಇದ್ದೇ ಇತ್ತು.ಜೊತೆಗೆ ಇಷ್ಟು ಓದಿಕೊಂಡಿರುವ, ಕಾವ್ಯದ ರೂಪಕ, ಪ್ರತಿಮೆ ಅಂತೆಲ್ಲಾ ಗಂಟೆಗಟ್ಟಲೆ ಮಾತಾಡಬಲ್ಲ, ಕವಿತೆ ಹೀಗೆೆಯೇ ಇರಬೇಕು, ಹೀಗಿದ್ದರೆ ಮಾತ್ರ ಅದು ಕಾವ್ಯವಾಗಬಲ್ಲುದು ಅಂತೆಲ್ಲಾ ಗಟ್ಟಿ ಧ್ವನಿಯಲ್ಲಿ ಹೇಳಬಲ್ಲವರ ಮುಂದೆ ಕವಿತೆಯನ್ನೂ, ಕಥೆಯನ್ನೂ, ಬೇರೆ ಯಾವ ಸಾಹಿತ್ಯವನ್ನೂ ಗಂಭೀರವಾಗಿ ಅಧ್ಯಯನ ಮಾಡದ ನಾನು ಎಷ್ಟು ಪೇಲವವಾಗಿ ಕಾಣಿಸಬಹುದು ಎನ್ನುವ ಪುಟ್ಟ ಅಭದ್ರತೆಯೂ  ಆಗಾಗ ಮನಸ್ಸಿನೊಳಗೆ ಇಣುಕಿ ಹೋಗುತ್ತಿತ್ತು.

ಆದ್ರೆ ಒಮ್ಮೆ ಪದ್ಯ ಓದೋಕೆ ನಿಂತ ಮೇಲೆ ಅವೆಲ್ಲವೂ ಮರೆತು ಹೋಯಿತು. ನಾನು, ನನ್ನ ಹಿನ್ನೆಲೆ, ನನ್ನ ಹಳ್ಳಿ, ನಮ್ಮ ಕಡಲು, ತೀರಾ ಬಿಡುಬೀಸಾಗಿ ಮನೆಯಿಂದ ಎದ್ದು ಬರಲಾಗದ ಸನ್ನಿವೇಶ ಎಲ್ಲ ಮರೆತು ಹೋಗಿ ಅಲ್ಲಿರುವ ಆಡಿಯನ್ಸ್ ಮುಂದೆ ಕವಿತೆ ಓದುವ ವಾಚಕಿ ಮಾತ್ರ ಆಗುಳಿದೆ. ಆಮೇಲಿದ್ದು ಮಾತ್ರ ನನ್ನ ಬದುಕಲ್ಲಿ ಯಾವತ್ತೂ ಮರೆಯಲಾರದ ವಿಶಿಷ್ಟ ಅನುಭೂತಿ.

ಆದ್ರೆ ನಮ್ಮೂರುಗಳಲ್ಲಿ ದಂಡಿಯಾಗಿ ಕಾಣಸಿಗುವ ಮನುಷ್ಯ ಮನುಷ್ಯರ ನಡುವಿನ ನಂಬಿಕೆ ಮಹಾನಗರದೊಳಗೆ ಅಡಗಿಕೊಂಡಿರುವ ಮಡಿಕೆಗಳಲ್ಲಿ ಕಾಣಸಿಕ್ಕೀತೇ? ಯಾಕೋ ಅನುಮಾನ.

ಸದಾ ಬಿಜಿಬಿಜಿಯಿರುವ, ವಿಪರೀತ ಒತ್ತಡ, ಧಾವಂತದಲ್ಲಿರುವ ನಗರದ ಬದುಕು ಅನಿವಾರ್ಯತೆ ಎನ್ನುವ ಸೋಗಿನೊಳಗೆ ಇದನ್ನೆಲ್ಲಾಒಪ್ಪಿಕೊಳ್ಳುತ್ತದೇನೋ, ಅಥವಾ ಸಹಜ ಬದುಕಿನ ರೀತಿ ನೀತಿಯೇ ಇದು ಎಂದೇ ತಿಳಿದುಕೊಂಡಿದಾ ಗೊತ್ತಿಲ್ಲ. ನನಗದು ಪೂರ್ತಿಯಾಗಿ ಅನುಭವಕ್ಕೆ ಬಾರದೇ ಇದ್ದರೂ ಈ ಘಟನೆ ನೆನಪಾದಾಗೆಲ್ಲಾ ವಿಚಿತ್ರ ತಲ್ಲಣವೊಂದು ಮಹಾನಗರಗಳ ಬಗ್ಗೆಯೇ ಸಣ್ಣ ಮಟ್ಟಿಗಿನ ಅಸಹನೆ ಮೂಡುವಂತೆ ಮಾಡುತ್ತದೆ. ಜೊತೆಗೆ ಈ ನಗರಗಳಲ್ಲಿರುವ ಸಾಂಸ್ಕ್ರತಿಕ ರಾಜಕಾರಣದ ಭಾಗವಾಗಬಾರದು ಎನ್ನುವ ಎಚ್ಚರವನ್ನೂ.

ಆದರೆ ಇವೆಲ್ಲವುಗಳನ್ನೂ ಮೀರಿ ಮಹಾನಗರಗಳೆಡೆ ಒಂದು ಒಲವು ಹುಟ್ಟಿಸುವಂತೆ, ಅಲ್ಲೇ ಇರಬೇಕಿತ್ತು ಎನ್ನುವ ಭಾವ ಮೂಡುವಂತೆ ಮಾಡುವುದು ಪುಸ್ತಕ ಬಿಡುಗಡೆ ಸವಾರಂಭಗಳು. ಅವು ಹುಟ್ಟಿಸುವ ತಪನೆ, ಕಡು ಮೋಹ ಖಂಡಿತಾ ಸಣ್ಣದಲ್ಲ. ಆದರೆ ಒಟ್ಟಿಗೆ ಹತ್ತೋ ಹದಿನೈದು ಪುಸ್ತಕ ಬಿಡುಗಡೆಯಾದಾಗ ಗುಂಪಿನಲ್ಲಿ ಗೋವಿಂದ ಅನ್ನಿಸೋದಿಲ್ವಾ ಅನ್ನುವ ಪ್ರಶ್ನೆಯೂ ಈ ಸಮಾರಂಭಗಳ ಫೊಟೋ ನೋಡುವಾಗ ಕಾಡುತ್ತದೆ.

ನಿನ್ನೆ ಇದನ್ನೇ ಯುವ ಬರಹಗಾರರೂ ಆಗಿರುವ ಪ್ರಕಾಶಕರೊಬ್ಬರ ಬಳಿ ಕೇಳಿದ್ದೆ. ‘ಒಬ್ಬ ಲೇಖಕರ ಪುಸ್ತಕ ಮಾತ್ರ ಬಿಡುಗಡೆ ಮಾಡಿ ಒಬ್ಬ ಲೇಖಕರ ಓದುಗರನ್ನು ಮಾತ್ರ ತಲುಪುವುದಕ್ಕಿಂತ ಹಲವರ ಪುಸ್ತಕಗಳನ್ನು ಒಟ್ಟಿಗೆ ಬಿಡುಗಡೆ ಮಾಡಿ ಎಲ್ಲರನ್ನೂ ತಲುಪೋದು ಪ್ರಕಾಶಕರ ದೃಷಿಕೋನದಿಂದ ಒಳ್ಳೆಯದು‘ ಅಂದು ಅತ್ಯಂತ ಪ್ರಾಯೋಗಿಕವಾದ ಮತ್ತು ಸಮಯೋಚಿತವಾದ ಉತ್ತರ ಹೇಳಿ ನನ್ನ ಕುತೂಹಲ ತಣಿಸಿದ್ದಾರೆ. ಇವೆಲ್ಲಾ ಮಾರುಕಟ್ಟೆ ತಂತ್ರಗಾರಿಕೆ ಅನಿಸಿದರೂ, ನಾವೆಷ್ಟೇ ಮಾರುಕಟ್ಟೆ ಪ್ರೇರಿತ ಪುಸ್ತಕ ಸಂಸ್ಕ್ರತಿಯನ್ನು ಬೆಳೆಸಬಾರದು ಅಂತ ಹೇಳಿದರೂ ಅಂತಿಮವಾಗಿ ಲೇಖಕನೊಬ್ಬನ ಪುಸ್ತಕ, ಬರಹಗಳು ಓದುಗರನ್ನು ತಲುಪೋದು, ಓದುಗರ ಹೃದಯಕ್ಕೆ ಹತ್ತಿರವಾಗೋದೇ ಮುಖ್ಯವಾಗುತ್ತದೆ. 

andolana

Recent Posts

ಕುಶಾಲನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ

• ಕೆ.ಬಿ.ಶಂಶುದ್ದೀನ್ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪಟ್ಟಣ ಅಭಿವೃದ್ಧಿಯಾದಂತೆ ಕಳ್ಳತನವೂ ಹೆಚ್ಚಳ; ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ…

6 mins ago

ಬಸವನಕಟ್ಟೆ ಏರಿಯಲ್ಲಿ ಬಿರುಕು; ನೀರು ಪೋಲು

ವಡೆಯನಪುರ ಸಮೀಪದ ಕೆರೆ ಒಡೆಯುವ ಆತಂಕ; ಏರಿಯನ್ನು ದುರಸ್ತಿಪಡಿಸಲು ಒತ್ತಾಯ • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ವಡೆಯನಪುರದ ಸಮೀಪವಿರುವ…

13 mins ago

ಹೊಲಗದ್ದೆಗಳಲ್ಲಿ ಹಕ್ಕಿಪಕ್ಷಿಗಳು ಏಕೆ ಬೇಕು?

• ರಮೇಶ್ ಪಿ.ರಂಗಸಮುದ್ರ ಪಕ್ಷಿಗಳಿಗೂ ಕೃಷಿಗೂ ಅವಿನಾಭಾವ ಸಂಬಂಧವಿದೆ. ಪಕ್ಷಿಗಳು ಮಾನವನಿಗಿಂತಲೂ ಹೆಚ್ಚಾಗಿ ಪ್ರಕೃತಿಯೊಡನೆ ಬೆರೆತಿವೆ. ಸಸ್ಯ ವೈವಿಧ್ಯತೆಯ ನಡುವೆ…

31 mins ago

ಕೊಬ್ಬರಿ ಬೆಂಬಲ ಬೆಲೆ ಏರಿಕೆ

ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 100 ರೂ. ಹಾಗೂ ಹೋಳಾದ ಕೊಬ್ಬರಿಗೆ 420 ರೂ. ದರ ಹೆಚ್ಚಿಸಲಾಗಿದೆ ಎಂದು ಕೇಂದ್ರ…

44 mins ago

ಭತ್ತದ ಕೊಯ್ಲಿಗೆ ಮುನ್ನ ಕೆಲವು ಸಲಹೆಗಳು

• ಜಿ.ಕೃಷ್ಣ ಪ್ರಸಾದ್ ಕಾವೇರಿ ಬಯಲಿನಲ್ಲಿ ಭತ್ತದ ಕಟಾವು ಶುರುವಾಗಿದೆ. ದೈತ್ಯ ಗಾತ್ರದ ಕಟಾವು ಯಂತ್ರಗಳು ಗದ್ದೆಗೆ ಲಗ್ಗೆ ಇಟ್ಟಿವೆ.…

50 mins ago

ರಾಜ್ಯದಲ್ಲಿ ಬಗೆಹರಿಯದ ಬಿಜೆಪಿ ಬಣ ಹೋರಾಟ

ರಾಜ್ಯ ಬಿಜೆಪಿಯ ಆಂತರಿಕ ಸಂಘರ್ಷ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ಕಡೆ ಪಕ್ಷಾಧ್ಯಕ್ಷ ವಿಜಯೇಂದ್ರ ಅವರ ಬಣ ಮತ್ತೊಂದು ಕಡೆ…

59 mins ago