ಆಂದೋಲನ ಪುರವಣಿ

ಅಣ್ಣಯ್ಯನ ನೆನೆಯುತ್ತಾ ಅಂಬಾರಿ ನೋಡಿದ್ದು

ಬಂತಲ್ಲಾ ನಮ್ಮ ಆನೆ! ಅಂಬಾರಿ ಹೊತ್ತ ನಮ್ಮ ದೊಡ್ಡ ಆನೆ. ಅಲಂಕಾರಗೊಂಡ ರಾಜವೈಭವದ ಆನೆ. ಗಂಭೀರ ನಡಿಗೆಯ ಆನೆ. ಅಂಬಾರಿಯೊಳಗೆ ಏನಿದೆಯೋ… ಅದಕ್ಕಿಂತ ಮೊದಲು ನನ್ನ ಕಣ್ಣು ಹೊರಳಿದ್ದು ಮಾವುತನ ಮೇಲೆ. ವೇಷಪಲ್ಲಟಗೊಂಡ ನಮ್ಮ ಅಣ್ಣಯ್ಯನೇ ಆ ಮಾವುತ. ಗಂಟಲು ಕಟ್ಟಿ ಬಂತು. ಕಣ್ಣು ನೀರಾಡಿತು. ಖುಷಿಯಿಂದ ಮನಸ್ಸು ಕುಣಿದಾಡಿತು.

ಬಿ.ಆರ್.ಜೋಯಪ್ಪ deepakjoyappa1@gmail.com

‘‘ನೋಡಲ್ಲಿ ನೋಡಲ್ಲಿ, ಒಮ್ಮೆ ನೋಡು! ಅಣ್ಣಯ್ಯನ ನೋಡಲ್ಲಿ!! ಆನೆ ಮಾವುತ ಅಣ್ಣಯ್ಯ… ನಮ್ಮ ಅಣ್ಣಯ್ಯ, ನಮ್ಮ ಆನೆ…’’ ಅಂತ ಒಂದೇ ಸಮನೆ ಬಡ ಬಡಿಸಿದೆ, ತಡಬಡಿಸಿದೆ. ‘‘ವಿಶಲ್ ಹಾಕ್ಲಾ… ಚಪ್ಪಾಳೆ ತಟ್ಟಲಾ… ಜೋರಾಗಿ ಕೂಗಿ ಕರೆಯಲಾ…’’ ಆಗ ನನ್ನ ಅಕ್ಕನದು ಎಲ್ಲಾ ಪ್ರಶ್ನೆಗಳಿಗೂ ಒಂದೇ ಉತ್ತರ. ‘‘ಬೇಡ ಬೇಡ. ಇದು ಸಿಟಿ. ಇಲ್ಲೆಲ್ಲಾ ಹಾಗೆ ಮಾಡಬಾರದು’’ ಆ ಒಂದು ಕ್ಷಣದಲ್ಲಿ ನಾನು ನಾನಾಗಿರಲಿಲ್ಲ. ಅಕ್ಕನ ಮಾತಿಗೆ ತಣ್ಣಗಾದೆ. ಸುಮಾರು ಐವತ್ತು ವರ್ಷಗಳ ಹಿಂದೆ ದಸರಾ ಸಮಯದಲ್ಲಿ ಮೈಸೂರಿನಲ್ಲಾದ ಘಟನೆಯಿದು.

ನಮ್ಮ ಕುಟುಂಬ ಆಗ ವ್ಯವಸಾಯ ಮಾಡಿಕೊಂಡು ವಾಸವಿದ್ದುದು ಕೊಡಗಿನ ತಿತಿಮತಿ ಪಕ್ಕದ ಕಾಟಿ ಬೆಟ್ಟ ಎಂಬ ಕಾಡಂಚಿನಲ್ಲಿ ಕಾಡಾನೆ, ಹುಲಿ ಮುಂತಾದ ಪ್ರಾಣಿಗಳಿದ್ದ ಕಾಡದು. ನಮ್ಮ ಕಾಟಿ ಬೆಟ್ಟ ಎಂಬಲ್ಲಿಂದ ಸುಮಾರು ನಾಲ್ಕೆ ದು ಮೈಲು ದೂರದಲ್ಲಿ ಮಡೆನೂರು ಎಂಬಲ್ಲಿ ಆನೆ ಕ್ಯಾಂಪಿತ್ತು. ಇನ್ನೊಂದು ಈಚೂರು ಎಂಬಲ್ಲಿಯೂ ಆನೆ ಕ್ಯಾಂಪಿತ್ತು. ಆದರೆ ಮಡೆನೂರು ಕ್ಯಾಂಪೇ ನಮ್ಮ ಮನೆಗೆ ಹತ್ತಿರವಾಗಿತ್ತು.

ಶಾಲೆಗೆ ರಜೆ ಇದ್ದ ದಿನಗಳಲ್ಲಿ ನಾನು ಮತ್ತು ನನ್ನ ಅಕ್ಕ ದನಗಳನ್ನು ಮೇಯಲಿಕ್ಕೆ ಬಿಡಲು ಆ ಆನೆ ಕ್ಯಾಂಪಿನ ಮಡೆನೂರು ಬಯಲಿಗೆ ಹೋಗುತ್ತಿದ್ದೆವು. ನಮ್ಮ ಶಾಲಾ ದಿನಗಳಲ್ಲಿ ನಮ್ಮ ಅಮ್ಮನದೇ ಆ ಕೆಲಸವಾಗಿತ್ತು. ನಾನು ಮತ್ತು ಅಕ್ಕ ದನಗಳನ್ನು ಅಟ್ಟಿಕೊಂಡು ಹೋಗಿ ಮೇಯಲು ಬಿಟ್ಟು ಆನೆ ಕ್ಯಾಂಪಿಗೆ ಬಂದು ಗಂಟೆಗಟ್ಟಲೆ ಅಲ್ಲಿರುತ್ತಿದ್ದೆವು. ಅಲ್ಲೊಂದು ಕೆರೆಯಿತ್ತು. ನಿತ್ಯವೂ ಆ ಕೆರೆಯಲ್ಲಿ ಆನೆಗಳನ್ನು ಸ್ನಾನ ಮಾಡಿಸುತ್ತಿದ್ದರು. ನಂತರ ಅವುಗಳನ್ನು ಕ್ಯಾಂಪಿಗೆ ಅಟ್ಟಿಕೊಂಡು ಬರುತ್ತಿದ್ದರು. ಆಗ ನಾವಿಬ್ಬರು ಆನೆಗಳ ಹಿಂದೆ ಹಿಂದೆ ಬಂದು ಕ್ಯಾಂಪಿನ ಅಂಗಳದಲ್ಲಿ ನಿಲ್ಲುತ್ತಿದ್ದೆವು. ಆನೆಗಳ ಊಟೋಪಚಾರವನ್ನು ನೋಡುವುದೇ ಚಂದ. ಹುಲ್ಲು, ಬೆಲ್ಲ, ಬೇಯಿಸಿದ ಹುರುಳು, ರಾಗಿ ಮುದ್ದೆ ಇವೆಲ್ಲವನ್ನು ತಿನ್ನಲು ಕೊಡುತ್ತಿದ್ದರು. ಆನೆಯನ್ನು ಹೊಸದಾಗಿ ಹಿಡಿದು ತಂದಾಗ ಆದ ಹಲವಾರು ಗಾಯಗಳಿಗೆ ಮದ್ದು ಹಾಕುವುದು, ಬೇವಿನ ಎಣ್ಣೆಯನ್ನು ಹಚ್ಚುವುದು ಮಾಡುತ್ತಿದ್ದರು. ನಂತರ ಭಾಷೆಯನ್ನು ಕಲಿಸುವುದು, ಎಡಕ್ಕೆ ಬಲಕ್ಕೆ ನಡೆಯಲು ಕಲಿಸುವುದು ಮುಂತಾದ ತರಬೇತು ಕೊಡುವುದನ್ನೆಲ್ಲಾ ನೋಡುತ್ತಿದ್ದೆವು. ಆಗ ಮಾವುತರು ಆನೆಗೆಂದು ಬೇಯಿಸಿದ ಒಂದಿಷ್ಟು ಹುರುಳಿ ಕಾಳನ್ನು ನಮಗೆ ತಿನ್ನಲು ಕೊಡುತ್ತಿದ್ದರು. ಬಾಯಿ ಚಪ್ಪರಿಸುತ್ತಾ ನಾವು ನಮ್ಮ ಮನೆಯತ್ತ ಹೆಜ್ಜೆ ಹಾಕುತ್ತಿದ್ದೆವು. ಇನ್ನೊಂದು ಭಾನುವಾರವನ್ನು ನೆನೆಯುತ್ತಾ… ಆನೆ ಕ್ಯಾಂಪಿನ ಆ ಮಾವುತರ, ಕಾವಾಡಿಗಳ ಅವರ ಸಂಸಾರದ ಪ್ರೀತಿಯನ್ನು ಮರೆಯಲು ಸಾಧ್ಯವೆ?

ಮಾವುತರು, ಕಾವಾಡಿಗಳು, ಅವರ ಹೆಂಡತಿ ಮಕ್ಕಳು ಅಂದು ಸಾಕ್ಷರರಲ್ಲ. ಆದರೆ ಅವರೆಲ್ಲರೂ ಆನೆಗಳಿಗೆ ಗುರುಗಳೇ! ಅವರ ಮಕ್ಕಳ ಕೈಯಲ್ಲೊಂದು ಕೋಲು ಇದ್ದರೂ ಸಾಕು, ಆ ಕ್ಯಾಂಪಿನ ಆನೆಗಳೆಲ್ಲವೂ ಶಿಸ್ತಿನ ಸಿಪಾಯಿಗಳೇ. ಸಂಜೆ ಹೊತ್ತಲ್ಲಿ ಆನೆಗಳನ್ನು ಮೇಯಲು ಕಾಡಿಗಟ್ಟುತ್ತಿದ್ದುದೂ ಮಕ್ಕಳೇ. ಉತ್ಪ್ರೇಕ್ಷೆಯ ಮಾತಲ್ಲವಿದು, ಕಣ್ಣಾರೆ ಕಂಡು ಅನುಭವಿಸಿದ ಮಾತಿದು.

ಆನೆಗಳಿಗೆ ಆಹಾರ ಮುಗಿದಾಗ ಸಾಮಗ್ರಿ ತರಲು ಮಡೆನೂರಿನಿಂದ ಕಾಟಿ ಬೆಟ್ಟದ ನಮ್ಮ ಮನೆಗಾಗಿ ಆನೆಗಳೊಡನೆ ತಿತಿಮತಿಗೆ ಹೋಗುತ್ತಿದ್ದರು. ತಿತಿಮತಿಯಿಂದ ಸಾಮಗ್ರಿಯನ್ನು ಹೊತ್ತುಕೊಂಡು ಬರುವಾಗ ನಮ್ಮ ಮನೆಯಲ್ಲೊಂದು ನಿಲುಗಡೆ ಮಾಡುತ್ತಿದ್ದರು. ನಾಲ್ಕೆ ದು ಆನೆಗಳು ನಮ್ಮ ಮನೆಯ ಅಂಗಳದ ಅಂಚಿನಲ್ಲಿ ಶಿಸ್ತಿನಿಂದ ನಿಂತಿರುತ್ತಿದ್ದವು. ಹೂವಿನ ಗಿಡಗಳನ್ನಾಗಲಿ. ಯಾವುದೇ ಗಿಡಗಳನ್ನಾಲಿ ಮುಟ್ಟಕೂಡದೆಂಬ ಮಾವುತನ ಆದೇಶವನ್ನು ಆನೆಗಳು ಚಾಚೂತಪ್ಪದೆ ಪಾಲಿಸುತ್ತಿದ್ದವು. ಗಂಡಾನೆಗಳು ಸೊಂಡಿಲನ್ನು ದಂತಕ್ಕೆ ಸುತ್ತಿಕೊಂಡು ನಿಂತರೆ, ಹೆಣ್ಣಾನೆಗಳು ಸೊಂಡಿಲನ್ನು ಇಳಿಯಬಿಟ್ಟು ನಿಲ್ಲುತ್ತಿದ್ದವು. ಒಮ್ಮೊಮ್ಮೆ ಕೆಲವು ಆನೆಗಳು ಪಕ್ಕದ ಆನೆಯ ಬಾೊಂಳಗೆ ಸೊಂಡಿಲು ಹಾಕಿ ‘‘ಏನನ್ನಾದರೂ ತಿಂದಿರುವೆಯಾ?’’ ಎಂದು ಪರೀಕ್ಷಿಸುತ್ತಿದ್ದುದು ನಮಗೆ ಮೋಜೆನಿಸುತ್ತಿತ್ತು. ನಾನು ಮತ್ತು ಅಕ್ಕ ಜಗಲಿಯಲ್ಲಿ ಕುಳಿತುಕೊಂಡು ಆನೆಗಳನ್ನೇ ನೋಡುತ್ತಿದ್ದೆವು. ಆನೆಗಳು ನಮ್ಮನ್ನು, ಮಾವುತರನ್ನು ನೋಡುತ್ತಾ ನಿಂತಿರುತ್ತಿದ್ದವು. ಮಾವುತರು ನಮ್ಮಲ್ಲಿ ನೀರನ್ನೊ, ಮಜ್ಜಿಗೆಯನ್ನೋ ಕುಡಿಯುತ್ತಾ ಕೊಂಚ ಹೊತ್ತು ನಮ್ಮೊಡನೆ ಪಟ್ಟಾಂಗ ಹೊಡೆಯುತ್ತಿದ್ದರು. ಕಾಡಾನೆಗಳನ್ನು ಬೀಳಿಸಲು ಕಪ್ಪ (ಗುಂಡಿ)ವನ್ನು ತೋಡುವುದು, ಕಪ್ಪಕ್ಕೆ ಬಿದ್ದ ಆನೆಯನ್ನು ಮೇಲೆತ್ತುವುದು, ಅದನ್ನು ಕ್ಯಾಂಪಿಗೆ ತಂದು ಪಳಗಿಸುವುದು ಇಂಥದನ್ನೆಲ್ಲಾ ಹೇಳುತ್ತಿದ್ದರು. ನಾವು ಕಣ್ಣು ಬಾಯಿ ಬಿಟ್ಟು ಅವರ ಅನುಭವದ ಮಾತನ್ನು ಕೇಳುತ್ತಿದ್ದೆವು.

ಹಾಗೆ ಪಟ್ಟಾಂಗ ಹೊಡೆಯುತ್ತಿದ್ದವರಲ್ಲಿ ಅಣ್ಣಯ್ಯ ಎಂಬ ಹೆಸರಿನ ಮಾವುತನೂ ಒಬ್ಬ. ಅಂಗಳದಂಚಿನಲ್ಲಿ ಸಾಲಾಗಿ ನಿಂತ ಆನೆಗಳಲ್ಲಿ ಅತೀ ಎತ್ತರದ ಆನೆಯ ಮಾವುತನೇ ಅಣ್ಣಯ್ಯ. ಹಾಗಾಗಿ ಆತ ‘ನಮ್ಮ ಅಣ್ಣಯ್ಯ’, ಆ ಆನೆ ‘ನಮ್ಮ ಆನೆ’!

ಅದೇ ಆನೆ ಮೈಸೂರು ದಸರದಲ್ಲಿ ಅಂಬಾರಿ ಹೊರುವ ಆನೆ- ದಶಕಗಳ ಹಿಂದೆ. ಅದು ಬಲರಾಮನೋ, ದ್ರೋಣನೋ, ಭೀಮನೋ ನೆನಪಿಲ್ಲ. ಸುಮಾರು ಐವತ್ತು ವರ್ಷಗಳ ಹಿಂದೆ ನಡೆದ ಘಟನೆ ಅಂತ ಅಂದೆನಲ್ಲಾ, ಹೌದು. ಒಂದು ಸಂಜೆ ನಾನು ಮತ್ತು ಅಕ್ಕ ಇಬ್ಬರೂ ಮೈಸೂರಿನ ಕೆ.ಆರ್.ಸರ್ಕಲ್ ಬಳಿ ನಿಂತಿದ್ದೆವು. ಅದು ಸಂಜೆ ಹೊತ್ತು. ಆಚೆ ದೇವರಾಜ ಮಾರುಕಟ್ಟೆ, ಮಾರುಕಟ್ಟೆ ಈಚೆ ಬಸ್ ನಿಲ್ದಾಣ. (ಆಗ ಗ್ರಾಮೀಣ ಮತ್ತು ನಗರ ಸಾರಿಗೆ ಅಂತ ಒಂದೇ ನಿಲ್ದಾಣ ಇದ್ದುದು.) ನಡುವೆ ಬನ್ನಿಮಂಟಪಕ್ಕೆ ಹೋಗುವ ಸಯ್ಯಾಜಿರಾವ್ ರಸ್ತೆ. ನಾವು ಇನ್ನೇನು ಬಸ್ ನಿಲ್ದಾಣದ ಕಡೆಗೆ ರಸೆ ದಾಟಬೇಕೆನ್ನುವಷ್ಟರಲ್ಲಿ ಮಾರುಕಟ್ಟೆ ಕಡೆಯಿಂದ ಹಲವಾರು ಆನೆಗಳು ಸಾಲಾಗಿ ಬರುತ್ತಿದ್ದವು. ನಾವು ಆನೆಗಳನ್ನು ನೋಡಿದ ಕೂಡಲೆ ಕಾಲಬೆಟ್ಟದ ನಮ್ಮ ಮನೆಯ ಅಂಗಳದಲ್ಲಿ ನಿಂತ ಆನೆಗಳು ನೆನಪಾದವು. ಮಡೆನೂರು ಕ್ಯಾಂಪು ನೆನಪಾಯಿತು. ಇಲ್ಲಿ ಈ ಆನೆಗಳ ಸಾಲಿನಲ್ಲಿದ್ದ ಮೊದಲಿನ ಆನೆಯನ್ನು ನೋಡಿದೆವು. ಅದೇ ಆ ಸಾಲಿನಲ್ಲಿದ್ದ ಅತೀ ಎತ್ತರದ ಆನೆಯಾಗಿತ್ತು. ಮಾವುತನನ್ನು ನೋಡಿದೆ. ಆತನನ್ನು ಎಲ್ಲೋ ನೋಡಿದ ನೆನಪಾಯಿತು. ಹೌದು, ಅವನೇ ನಮ್ಮ ಮನೆಯ ಜಗಲಿಯಲ್ಲಿ ಕುಳಿತು ಮಾತನಾಡುತ್ತಿದ್ದ ಮಾವುತ ಅಣ್ಣಯ್ಯ, ‘‘ನೋಡಲ್ಲಿ, ನೋಡಲ್ಲಿ ಅಣ್ಣಯ್ಯ, ನಮ್ಮ ಅಣ್ಣಯ್ಯ, ಮಾವುತ ಅಣ್ಣಯ್ಯ. ಅದು ನಮ್ಮ ಆನೆ’’ ಎಂದು ಉದ್ಗರಿಸಿದೆ. ಅವನನ್ನು ತಬ್ಬಿಕೊಳ್ಳಬೇಕೆನ್ನುವಷ್ಟರ ಮಟ್ಟಿಗೆ ನಾನು ಕಾತರಿಸಿದೆ. ಸದಾ ಕಾಡಿನಲ್ಲಿರುತ್ತಿದ್ದಾತ ಮೈಸೂರೆಂಬ ಮಹಾನಗರದ ರಾಜಬೀದಿಯಲ್ಲಿ ಈ ರೀತಿ ಕಾಣಿಸಿಕೊಳ್ಳುತ್ತಾನೆಂದು ಭಾವಿಸಿರಲಿಲ್ಲ.

ಜಂಬೂ ಸವಾರಿಯ ದಿನ: ದಸರಾ ಮೆರವಣಿಗೆಯ ದಿನವೂ ಬಂತು. ಅಂದು ನಾನು ಮತ್ತು ಅಕ್ಕ ಮೆರವಣಿಗೆ ನೋಡಲು ಹೋದೆವು. ಅಬ್ಬಬ್ಬಾ! ಎಷ್ಟೊಂದು ಜನರು! ನಡೆದು ಬರುವ ಸ್ಥಳೀಯರು, ಬಸ್ಸಿನಲ್ಲಿ ಬರುವ ಪರ ಊರವರು, ಜಟಕಾದಲ್ಲಿ ಬರುವ ಅವರಿವರು… ನೂರಲ್ಲ, ಸಾವಿರ ಸಾವಿರ ಜನರು.
ಆ ಜನಜಂಗುಳಿಯಲ್ಲಿ ಕೈ ತಪ್ಪಿದರೊ ತಪ್ಪಿೆುೀಂ ಹೋಗುವ ಸ್ಥಿತಿ! ಬನ್ನಿಮಂಟಪದ ರಸ್ತೆಯ ಇಕ್ಕೆಲಗಳಲ್ಲಿ ಜನರ ಗುಜು ಗುಜು ಸದ್ದೋ ಸದ್ದು. ಮೆರವಣಿಗೆ ಇನ್ನೇನು ಪ್ರಾರಂಭವಾಯಿತೆನ್ನುವಷ್ಟರಲ್ಲಿ ಕುದುರೆ ಸವಾರಿ ಬಂದು. ಆ ಕುಣಿತ ಈ ಕುಣಿತ… ಯಾವ ಯಾವ್ದೋ ತಂಡಗಳ ಆಗಮನವಾಯಿತು. ನೋಡ ನೋಡುತ್ತಿದ್ದಂತೆ ಆನೆಗಳು ಬರತೊಡಗಿದವು- ಅಲಂಕಾರಗೊಂಡು!

ಬಂತಲ್ಲಾ ನಮ್ಮ ಆನೆ! ಅಂಬಾರಿ ಹೊತ್ತ ನಮ್ಮ ದೊಡ್ಡ ಆನೆ. ಅಲಂಕಾರಗೊಂಡ ರಾಜವೈಭವದ ಆನೆ. ಗಂಭೀರ ನಡಿಗೆಯ ಆನೆ. ಅಂಬಾರಿೊಂಳಗೆ ಏನಿದೆೋಂ… ಅದಕ್ಕಿಂತ ಮೊದಲು ನನ್ನ ಕಣ್ಣು ಹೊರಳಿದ್ದು ಮಾವುತನ ಮೇಲೆ. ವೇಷಪಲ್ಲಟಗೊಂಡ ನಮ್ಮ ಅಣ್ಣಯ್ಯನೇ ಮಾವುತ. ಗಂಟಲು ಕಟ್ಟಿ ಬಂತು. ಕಣ್ಣು ನೀರಾಡಿತು. ಖುಷಿಯಿಂದ ಮನಸ್ಸು ಕುಣಿದಾಡಿತು. ಛೇ, ಪಾಪ! ಇದೇ ಆನೆ ಕಾಡಿನಲ್ಲಿ ಮರದ ದಿಮ್ಮಿಯನ್ನು ಎಳೆಯಬೇಕಲ್ಲಾ, ಮರವನ್ನು ರಾಶಿ ಮಾಡಬೇಕಲ್ಲಾ, ಲಾರಿಗೆ ಏರಿಸಬೇಕಲ್ಲಾ… ಬಿಡಿ, ಹೇಗಿದ್ದರೂ ಮನುಷ್ಯರಾದ ನಾವು ಸಮಯವರ್ತಿಗಳಲ್ಲವೆ?

*******************

ಕತ್ತಲಾಗುತ್ತಿದ್ದಂತೆ ಮೈಸೂರು ನಗರ ವಿದ್ಯುದ್ದೀಪದ ಬೆಳಕಿನಲ್ಲಿ ರಾರಾಜಿಸುತ್ತದೆ. ಆಗಂತೂ ನಗರದ ಬೀದಿಗಳಲ್ಲಿ ಓಡಾಡುವವರಿಗೆ ಮೈ ಪುಳಕ! ಅದರಲ್ಲೂ ಮೈಸೂರು ಅರಮನೆಯ ದೀಪಾಲಂಕಾರವಂತೆ ಎಂಬ ಮಾತನ್ನು ಕೇಳುವಾಗಲೇ ಮನಸ್ಸು ಕುಣಿಯುತ್ತದೆ. ಇನ್ನು ಸಹಸ್ರ ಸಹಸ್ರ ಬಲ್ಬುಗಳು ಏಕಕಾಲಕ್ಕೆ ಬೆಳಗಿದರೆ? ಆ ನಿರೀಕ್ಷೆಯಲ್ಲೆ ಜನರು ಅರಮನೆಯ ಸುತ್ತ ನಿಂತಿರುತ್ತಾರೆ. ಪಳ್ಳನೆ ದೀಪ ಬೆಳಗಿದಾಗ ಜನರು ಹರ್ಷೋದ್ಗಾರಗೆಯ್ದು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಾರೆ. ನಾನೂ ಅದನ್ನು ನೋಡಿ ನಲಿದಾಡಿದ್ದೆ, ಐದು ದಶಕಗಳ ಹಿಂದೆ!

ಕಾಟಿ ಬೆಟ್ಟದ ಕಾಡಿಗೆ ಬೆಂಕಿ ಬಿದ್ದಾಗ ರಾತ್ರಿಯಾದರೂ ಬೆಂಕಿ ಉರಿಯುತ್ತಿದ್ದುದನ್ನು ಕಂಡಿದ್ದೇನೆ. ಆ ಬೆಂಕಿ ನೆಲ ಹಂತದ ತರಗೆಲೆಯ ಬೆಂಕಿ. ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಮೈಲುಗಟ್ಟಲೆ ಉರಿಯುತ್ತಿದ್ದ ಬೆಂಕಿ ರಸ್ತೆ ಬದಿಯ ಸಾಲು ದೀಪದಂತೆ ಕಾಣುತ್ತಿತ್ತು. ಇನ್ನು ಬಿದಿರು ಮೆಳೆಗೆ ಬೆಂಕಿ ಹಿಡಿದರೆ ಅದಂತೂ ರೌದ್ರ ರಮಣೀಯ ನೋಟ.

ನೂರಾರು ಬಿದಿರು ಉರಿಯುವಾಗ ಅದರ ಬೆಳಕು ಎಷ್ಟೋ ದೂರದವರೆಗೆ ಹರಡುತ್ತದೆ. ಬಿದಿರಿನ ಗಂಟು ಸಿಡಿಯುವಾಗಂತೂ ಅದರ ಸದ್ದು, ಆಗ ಚೆಲ್ಲಾಡುವ ಕೆಂಡದುಂಡೆಗಳು, ಅದರ ಕಿಡಿ, ಬೆಂಕಿಯ ಕಾವು, ಎತ್ತರೆತ್ತರ, ಮರದೆತ್ತರ ಉರಿವ ಅಗ್ನಿ, ಕೆನ್ನಾಲಗೆಯ ರುದ್ರ ನರ್ತನ, ಕಾಡಿನಲ್ಲಿ ಬೆಳಕಿನ ತೇರು! ಕಾಡಿನ ಹುಡುಗನಾಗಿದ್ದ ನನ್ನ ಮನಸ್ಸಿನಲ್ಲಿ ಹತ್ತಾರು ನೆನಪುಗಳು ಕಾಡಿದ್ದಂತು ನಿಜ- ಅರಮನೆಯ ದೀಪಾಲಂಕಾರದ ಮುಂದೆ!

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

9 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

9 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

10 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

10 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

10 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

10 hours ago