Andolana originals

ಮಳೆಯ ನೆನಪು. . . ಮನದ ಕಡಲು

‘ಆಂದೋಲನ’ ಸಂದರ್ಶನದಲ್ಲಿ ಯೋಗರಾಜ್ ಭಟ್ ಮನದ ಮಾತು

ಚಿರಂಜೀವಿ ಸಿ. ಹುಲ್ಲಹಳ್ಳಿ

ಮೈಸೂರು: ಕನ್ನಡ ಸಿನಿ ಪ್ರೇಕ್ಷಕರನ್ನು ‘ಮುಂಗಾರು ಮಳೆ’ಯಲ್ಲಿ ತೋಯಿಸಿದ ಜೋಡಿ ಮತ್ತೇ ಒಂದಾಗಿ ‘ಮನದ ಕಡಲು’ ಕಾವ್ಯಾತ್ಮಕ ಶೀರ್ಷಿಕೆಯಡಿ ಪ್ರಣಯದ ಕಡಲಿನಲ್ಲಿ ತೇಲಿಸಲು ಮುಂದಾಗಿದೆ.

ಮುಂಗಾರು ಮಳೆ ಸಿನಿಮಾ ಬಿಡುಗಡೆಯಾಗಿ ೧೮ ವರ್ಷಗಳಾಗಿವೆ. ಈಗ ಮತ್ತೊಮ್ಮೆ ಯೋಗರಾಜ್ ಭಟ್ ಮತ್ತು ನಿರ್ಮಾ ಪಕ ಇ. ಕೃಷ್ಣಪ್ಪ ಜೋಡಿಯಾಗಿ ಮತ್ತೊಂದು ಪ್ರಣಯದ ಕಥೆಯೊಂದನ್ನು ಪ್ರೇಕ್ಷಕರ ಮುಂದಿಡಲು ಮಳೆಯ ನೆನಪಲ್ಲಿ ಕಡಲಲಿ ಈಜಲು ತಯಾರಿ ನಡೆಸಿದೆ.

ಇದೇ ಮಾ. ೨೮ರಂದು ರಾಜ್ಯಾದ್ಯಂತ ‘ಮನದ ಕಡಲು’ ಸಿನಿಮಾ ಬಿಡುಗಡೆಗೆ ಅಣಿಯಾಗುತ್ತಿದೆ. ಈ ಬಗ್ಗೆ ಚಿತ್ರದ ‘ಮುಂಗಾರು ಮಳೆ’ಯಂತಹ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟ ಚಲನಚಿತ್ರ ನಿರ್ದೇಶಕ, ಗೀತ ರಚನೆಕಾರ, ನಿರ್ಮಾಪಕ ಯೋಗರಾಜ್ ಭಟ್ ‘ಆಂದೋಲನ’ಕ್ಕೆ ನೀಡಿದ ಸಂದರ್ಶನ ಇಲ್ಲಿದೆ.

ಆಂದೋಲನ: ನಿಮ್ಮದೇ ನಿರ್ದೇಶನದ ‘ಮುಂಗಾರು ಮಳೆ’ ಚಿತ್ರಕ್ಕಿಂತ ‘ಮನದ ಕಡಲು’ ಹೇಗೆ ಭಿನ್ನ? ಯೋಗರಾಜ್ ಭಟ್: ಮುಂಗಾರು ಮಳೆಯಲ್ಲಿ ಬೆಟ್ಟ-ಗುಡ್ಡ, ಮಳೆ, ಜೋಗ ಜಲಪಾತವನ್ನು ಸೊಗಸಾಗಿ ಸೆರೆ ಹಿಡಿಯಲಾಗಿತ್ತು. ಅದಕ್ಕಿಂತ ಸೊಗಸಾಗಿ ಮನದ ಕಡಲು ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸಿನಿಮಾವನ್ನು ಚಿತ್ರಮಂದಿರ ದಲ್ಲಿ ವೀಕ್ಷಿಸುವ ಪ್ರೇಕ್ಷಕನಿಗೆ ಅದರ ಅನುಭವವಾಗಲಿದೆ. ಅವತ್ತಿನ ಮುಂಗಾರು ಮಳೆಯಂತೆ ಇವತ್ತಿನ ಮನದ ಕಡಲು ಸಿನಿಮಾ ಯಶಸ್ಸು ಗಳಿಸುವ ನಿರೀಕ್ಷೆ ಇದೆ.

ಆಂದೋಲನ: ಅಲ್ಲಿ ಮಳೆ, ಇಲ್ಲಿ ಕಡಲು, ಹದಿನೆಂಟು ವರ್ಷಗಳ ನಂತರ ನೀವು ಮತ್ತು ನಿರ್ಮಾಪಕ ಇ. ಕೃಷ್ಣಪ್ಪ ಜತೆಯಾಗಿದ್ದೀರಿ. ಈ ಬಾರಿ ಪ್ರೇಕ್ಷಕರು ಏನನ್ನು ನಿರೀಕ್ಷಿಸಬಹುದು?

ಯೋಗರಾಜ್ ಭಟ್: ಪ್ರಸ್ತುತ ಕಾಲಘಟ್ಟದಲ್ಲಿ ಒಂದು ಒಳ್ಳೆಯ ಪ್ರೇಮ ಕಥೆಯ ಅವಶ್ಯವಿತ್ತು. ಮನದ ಕಡಲು ಸಿನಿಮಾದ ಮೂಲಕ ಕನ್ನಡ ಸಿನಿಪ್ರಿಯರಿಗೆ ಕೊಡುತ್ತಿದ್ದೇವೆ. ಈ ಕಾಲದ ವಯಸ್ಸಿನ ಯುವಕರ ಪ್ರೇಮಕಥೆಯಲ್ಲಿ ಬಹಳ ಆಸ್ವಾದ ಇರಲಿದೆ. ಆ ಮಜಾ ತೆಗೆದುಕೊಂಡು ಕಥೆ ಬರೆದಿದ್ದೇನೆ. ಪ್ರೇಮದ ಹಲವು ವೈಶಿಷ್ಟ್ಯಗಳು ಮನದ ಕಡಲಿನಲ್ಲಿ ಚೆನ್ನಾಗಿ ವರ್ಕೌಟ್ ಆಗಿವೆ. ಬದುಕು ಪ್ರೇಮಕ್ಕಿಂತ ದೊಡ್ಡದು ಎನ್ನುವ ಸಮಾಚಾರವನ್ನು ಈ ಚಿತ್ರ ಹೇಳಲಿದೆ. ಮಹಾರಾಷ್ಟ್ರ ಮತ್ತು ಸಮುದ್ರದ ತೀರದಲ್ಲಿ ಚಿತ್ರೀಕರಿಸಲಾಗಿದೆ. ಏಕೆಂದರೆ ಅದು ಮಳೆ, ಇದು ಕಡಲು. ಮಳೆಯ ತವರು ಮನೆ ಕಡಲು. ಜನ ಸಾಗರವನ್ನು ಮುಂಗಾರು ಮಳೆ ಸೇರಿಸಿತ್ತು. ಇದು ಅದಕ್ಕಿಂತ ದೊಡ್ಡ ಜನ ಸಾಗರವನ್ನು ಸೇರಿಸಬೇಕು ಎಂಬುದು ನನ್ನ ಆಸೆ, ‘ದುರಾಸೆ’. ಇದಕ್ಕಾಗಿ ಇ. ಕೃಷ್ಣಪ್ಪ ಚಿತ್ರಕ್ಕೆ ಸಂಪೂರ್ಣ ಬೆಂಬಲವಾಗಿದ್ದಾರೆ.

ಆಂದೋಲನ: ಸಾಮಾನ್ಯವಾಗಿ ಚಿತ್ರವೊಂದರ ಗೆಲುವು, ನಿರ್ದೇಶಕರಿಗಿಂತ ಅದರ ನಟನಿಗೆ ಹೆಚ್ಚಿನ ಅವಕಾಶ ತಂದು ಕೊಡುತ್ತದೆ. ‘ಮನದ ಕಡಲು’ ಚಿತ್ರದ ಸುಮುಖ ಅವರನ್ನು ಕುರಿತು ಏನು ಹೇಳುತ್ತೀರಿ?

ಯೋಗರಾಜ್ ಭಟ್: ಸುಮುಖ ಉತ್ಕೃಷ್ಟ ನಟ. ಜ್ಞಾನಿ, ಪಂಡಿತ, ಅಚ್ಚ ಕನ್ನಡಿಗ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಸ ಹೊಡೆದು ಬಂದವನು. ಸೈಡಿಗೆ ಗೋಡೆ ಹಾರಿ ಹೋಗುವ ಹುಡುಗನಲ್ಲ. ಒಂದಿಪ್ಪತ್ತು ವರ್ಷ ನಾಯಕನ ನಟನಾಗಿ ನಿಲ್ಲಬಲ್ಲ. ಚಿತ್ರದಲ್ಲಿ ರಿಷಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರೂ ಅದ್ಭುತ ಕಲಾವಿದರು. ರಂಗಾಯಣ ರಘು ಆದಿವಾಸಿ ಪಾತ್ರದಲ್ಲಿ ನಟಿಸಿದ್ದಾರೆ. ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ.

ಆಂದೋಲನ: ಕನ್ನಡ ಅಥವಾ ಬೇರೆ ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಿಸಿ, ಅದನ್ನು ಡಬ್ ಮಾಡಿ ಪ್ಯಾನ್ ಇಂಡಿಯಾ ಸಿನಿಮಾ ಹೆಸರಿನಲ್ಲಿ ಬಿಡುಗಡೆ ಮಾಡುವುದರ ಕುರಿತು ನಿಮ್ಮ ಅಭಿಪ್ರಾಯವೇನು? ಯೋಗರಾಜ್ ಭಟ್: ಅದರಲ್ಲೇನಿದೆ? ಬಿಡುಗಡೆ ಮಾಡಿಕೊಳ್ಳಲಿ. ‘ಮನದ ಕಡಲು’ ಸಿನಿಮಾ ತಾನಾಗಿಯೇ ಪ್ಯಾನ್ ಇಂಡಿಯಾ ಮಟ್ಟದ ಯಶಸ್ಸು ಗಳಿಸಲಿದೆ. ಒಂದು ವಾರದೊಳಗೆ ೫ ಭಾಷೆಗಳಲ್ಲಿ ಸಿನಿಮಾ ಬರಲಿದೆ. ಮುಂಗಾರು ಮಳೆ ೧೮ ಭಾಷೆಗಳಲ್ಲಿ ಓಡಿದೆ. ಮೂರು ಭಾಷೆಗಳಲ್ಲಿ ಮಾತ್ರ ಡಬ್ ಆಗಿತ್ತು.

ಆಂದೋಲನ: ಕನ್ನಡ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಯಶಸ್ವಿಯಾಗುತ್ತಿಲ್ಲ. ಕನ್ನಡ ಚಿತ್ರಗಳಿಂದ ಪ್ರೇಕ್ಷಕ ದೂರವಾಗುತ್ತಿದ್ದಾನೆಯೇ?

ಯೋಗರಾಜ್ ಭಟ್: ಈ ಕೂಗು ಅನೇಕ ವರ್ಷಗಳಿಂದಲೂ ಇದೆ. ಆದರೆ, ನಾನು ಇದನ್ನು ಒಪ್ಪುವುದಿಲ್ಲ. ಜನರನ್ನು ಎಂದಿಗೂ ನಾನು ದೂಷಣೆ ಮಾಡಲ್ಲ. ನೆಟ್ಟಗೆ ಅಡುಗೆ ಮಾಡಿದರೆ ಮಕ್ಕಳು ಮನೆಯಲ್ಲಿಯೇ ಊಟ ಮಾಡ್ತಾವೆ, ಇಲ್ಲಂದ್ರೆ ಹೋಟೆಲ್‌ಗೆ ಹೋಗ್ತಾವೆ. ಸಿಂಗಲ್ ಸ್ಕ್ರೀನ್‌ಗಳು ಜಾತ್ರೆ ವಾತಾವರಣವನ್ನು ಸೃಷ್ಟಿ ಮಾಡುತ್ತವೆ. ಓಟಿಟಿ ಪ್ಲಾಟ್ -ರಂಗಳಿಂದ ಪ್ರೇಕ್ಷಕರ ಕೊರತೆ ಆಗಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಒಳ್ಳೆಯ ಸಿನಿಮಾ ಬಂದರೆ ಚಿತ್ರಮಂದಿರಕ್ಕೆ ಜನ ಬಂದೇ ಬರುತ್ತಾರೆ. ಮತ್ತೊಮ್ಮೆ ಸಿಂಗಲ್ ಸ್ಕ್ರೀನ್‌ಗಳ ಜಾತ್ರೆ ವಾತಾವರಣ ಮರು ಸ್ಥಾಪಿಸುವ ಕಾಲ ಬರಲಿದೆ.

ಆಂದೋಲನ: ಚಿತ್ರಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ನಿರ್ಮಾಪಕರು ವಿಫಲವಾಗುವುದಕ್ಕೆ ನವ ಮಾಧ್ಯಮ ಕೊಡುಗೆ ಇದೆ ಅನಿಸುತ್ತಿದೆಯೇ?

ಯೋಗರಾಜ್ ಭಟ್: ಸಾಮಾಜಿಕ ತಾಣವು ಜನರನ್ನು ನಿಯಂತ್ರಿಸುತ್ತಿದೆಯೋ ಅಥವಾ ಜನರು ಸಾಮಾಜಿಕ ತಾಣವನ್ನು ನಿಯಂತ್ರಿಸುತ್ತಿದ್ದಾರೋ ಎಂಬುದು ಗೊತ್ತಿಲ್ಲ. ಮನುಷ್ಯ ಕಂಡುಹಿಡಿದಿರುವುದೆಲ್ಲವೂ ಪರ-ವಿರೋಧಾಭಾಸ ಇರುವುದೇ. ಸಾಮಾಜಿಕ ಜಾಲತಾಣವೂ ಪ್ರಪಂಚದೊಂದಿಗೆ ಕನೆಕ್ಟ್ ಮಾಡಲಿದೆ. ಆದರೆ, ಅದರಲ್ಲಿ ಏನೇನೋ ಮಾಡುವುದು, ನೋಡುವುದು ಮಾಡಿದರೆ ವ್ಯಕ್ತಿಯ ವೈಯಕ್ತಿಕ ಹಾನಿಯಾಗಲಿದೆ. ಮೊದಲೆಲ್ಲ ಬೇರೆಯದರಿಂದ ಹಾಳಾಗುತ್ತಿದ್ದ ಮನುಷ್ಯ, ಈಗ ಮೊಬೈಲ್‌ನಿಂದ ಹಾಳಾಗುತ್ತಿದ್ದಾನೆ. ಮುಂದೆ ಇನ್ನೂ ಹೊಸ ಆವಿಷ್ಕಾರಗಳಾಗಲಿವೆ. ಅವು ಇದೇ ರೀತಿ. ಹೀಗೆ ಹಾಳಾಗೋರು ಹಾಳಾಗ್ತಾರೆ. ಉದ್ಧಾರ ಆಗೋರು ಉದ್ಧಾರ ಆಗ್ತಾರೆ.

 ಆಂದೋಲನ: ಚಿತ್ರೋದ್ಯಮಕ್ಕೆ ಕೈಗಾರಿಕೆಯ ಸ್ಥಾನಮಾನ ನೀಡುವುದಾಗಿ ಮುಖ್ಯಮಂತ್ರಿಗಳು ಮುಂಗಡ ಪತ್ರದಲ್ಲಿ ಪ್ರಕಟಿಸಿದ್ದಾರೆ. ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ ಕುರಿತೂ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಯೋಗರಾಜ್ ಭಟ್: ಮೈಸೂರು ಚಿತ್ರರಂಗದ ಅಕ್ಷಯ ಪಾತ್ರೆ ಇದ್ದ ಹಾಗೆ. ‘ಮುಂಗಾರು ಮಳೆ’ ಬಿಡುಗಡೆ ಗೊಂಡಾಗ ೧೦ ದಿನಗಳು ಚಿತ್ರತಂಡಕ್ಕೆ ಆತಂಕವಿತ್ತು. ಆದರೆ, ಸಿನಿಮಾ ಮೆಚ್ಚಿಕೊಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೂ ಮೈಸೂರಿನಿಂದಲೇ ಅದ್ಭುತ ಪ್ರತಿಕ್ರಿಯೆ ಶುರುವಾಗಿತ್ತು. ನಾನೂ ಒಂದು ರೀತಿಯಲ್ಲಿ ಮೈಸೂರಿಗ. ಏಕೆಂದರೆ, ಮೈಸೂರಿನ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಒಂದೂವರೆ ವರ್ಷ ವ್ಯಾಸಂಗ ಮಾಡಿದ್ದೆ. ಮೈಸೂರು ದೊಡ್ಡ ನಗರಗಳ ಧಾವಂತವನ್ನು ಹೊಂದಿಲ್ಲ. ಇಲ್ಲಿನ ಜನರಲ್ಲಿ ಸಜ್ಜನಿಕೆ ಇದೆ. ಇಲ್ಲಿಗೆ ಬಂದರೆ ಶಾಂತಿ, ನೆಮ್ಮದಿ ಸಿಗುತ್ತದೆ. ಇಂತಹ ಊರಿನಲ್ಲಿ ಚಿತ್ರನಗರಿ ಆದರೆ ಸಂತೋಷ.

ಅಪ್ಪು ಸಿನಿಮಾ ವೀಕ್ಷಣೆ

‘ಮನದ ಕಡಲು’ ಸಿನಿಮಾ ಬಿಡುಗಡೆ ಪೂರ್ವ ಕಾರ್ಯದಲ್ಲಿ ನಿರತವಾಗಿದ್ದೇನೆ. ಈ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿನ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದೆ. ಅಲ್ಲಿ ‘ಅಪ್ಪು’ ಚಿತ್ರ ಪ್ರದರ್ಶನವಾಗುತ್ತಿದೆ. ೨೪ ವರ್ಷಗಳ ನಂತರ ಅವರ ಚಿತ್ರ ಮತ್ತೆ ಬಿಡುಗಡೆಯಾಗಿದೆ. ‘ಅಪ್ಪು’ ನನಗೆ ಪರಮಾಪ್ತ ಗೆಳೆಯರು. ಅಪ್ಪು ಅವರಿಗೆ ವಿಶೇಷವಾದ ಅಭಿಮಾನಿಗಳ ಬಳಗವಿದೆ. ಚಿತ್ರಮಂದಿರದಲ್ಲಿ ಅವರನ್ನು ಕಣ್ತುಂಬಿಕೊಳ್ಳಬೇಕು ಎಂದು ‘ಅಪ್ಪು’ ಸಿನಿಮಾಗೆ ಹೋಗಿದ್ದೆ. ‘ಪರಮಾತ್ಮ’ ಸಿನಿಮಾ ಮರು ಬಿಡುಗಡೆ ಕುರಿತು ನಿರ್ಮಾಪಕ ಜಯಣ್ಣ ಅವರೊಂದಿಗೆ ಮೊದಲೇ ಚರ್ಚೆಯಾಗಿದೆ. ಮುಂದೆ ನೋಡೋಣ ಎಂದರು.

 

ಆಂದೋಲನ ಡೆಸ್ಕ್

Recent Posts

ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರು ಬದಲಾವಣೆ : ಸಂಸದ ಯದುವೀರ್‌

ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…

6 hours ago

ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯರಿ : ರೈತರಿಗೆ ಸಿಎಂ ಕರೆ

ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…

6 hours ago

ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ :ಸೂರ್ಯಕುಮಾರ್ ಯಾದವ್ ನಾಯಕ

ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…

6 hours ago

ಮೊಟ್ಟೆ ಕ್ಯಾನ್ಸರ್‌ ಕಾರಕವಲ್ಲ : ಕೇಂದ್ರ ವರದಿ

ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…

6 hours ago

‘ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಿ’ : ಶಿವಶಂಕರ್ ಸೂಚನೆ

ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…

6 hours ago

ಮೈಸೂರು | ನಾಳೆಯಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ

ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…

7 hours ago