Andolana originals

ಕರ್ತವ್ಯದ ಒತ್ತಡ ಮತ್ತು ಸಮಾಜ-ಪೊಲೀಸ್ ಬಾಂಧವ್ಯ

ಎಸ್.ಎಲ್.ಚೆನ್ನಬಸವಣ್ಣ , ಐಪಿಎಸ್, ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು

ನೀರಿಲ್ಲದೆ ಮೀನು ಬದುಕಲಾರದು; ಹಾಗೆಯೇ ಜಲಚರಗಳಿಲ್ಲದ ನೀರು ಮೃತ ಸರೋವರದಂತೆ

ನಿಮ್ಮ ಸಾಹೇಬರ ಜೊತೆಗೆ ಸೇರಿ ನೀವು ನಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನವೇ ನೀಡುತ್ತಿಲ್ಲ. ಅವರೇನೋ ದೊಡ್ಡವರು ಹೇಗೋ ನಡೆಯುತ್ತೆ, ನಮ್ಮ ಮಕ್ಕಳ ಭವಿಷ್ಯ ಯಾರು ನೋಡೋರು? ನಿಶ್ಶಬ್ದ ರಾತ್ರಿಯಲ್ಲಿ ನನ್ನ ಗನ್‌ಮ್ಯಾನ್‌ಗೆ ಆತನ ಪತ್ನಿ ಮೊಬೈಲ್‌ನಲ್ಲಿ ಹೀಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಮಾತುಗಳು, ಕಾರಿನ ಕಿಟಕಿಯಲ್ಲಿ ಸಾವಕಾಶವಾಗಿ ನಿದ್ರೆಗೆ ಜರುತ್ತಿದ್ದ ಬೀದರ್ ನಗರದ ಗತವೈಭವವನ್ನು ಕಲ್ಪಿಸಿಕೊಳ್ಳುತ್ತಿದ್ದ ನನ್ನ ಕಿವಿಗೆ ಬೇಡವೆಂದರೂ ಬಿದ್ದವು. ಆತ ಕಷ್ಟಪಟ್ಟು ತನ್ನ ಪತ್ನಿಯನ್ನು ಸಮಾಧಾನ ಪಡಿಸಲು ಹೆಣಗಾಡುತ್ತಿದ್ದರೆ, ನನ್ನ ಮನಸ್ಸು ಒಂದು ಕ್ಷಣ ಕಸಿವಿಸಿಗೊಂಡಿತು.

‘ಬಹುಶಃ ನಾನು ನನ್ನೊಂದಿಗೆ ನನ್ನ ಸಿಬ್ಬಂದಿ ಮತ್ತು ಸಹೋದ್ಯೋಗಿಗಳನ್ನೆ ಕೆಲಸದ ಒತ್ತಡದಲ್ಲಿ ಸಿಲುಕಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದೇನಲ್ಲ’! ಎಂಬ ಅಪರಾಧಿ ಭಾವ ನನ್ನ ಮನದಲ್ಲಿ ಆಳವಾಗಿ ಕಾಡತೊಡಗಿತು.

ಸಮರ್ಪಣೆಯ ಎರಡು ಮುಖಗಳು: ಪೊಲೀಸ್ ಇಲಾಖೆಯಲ್ಲಿ ಎರಡು ಪ್ರಕಾರದ ಅಧಿಕಾರಿ ಮತ್ತು ಸಿಬ್ಬಂದಿಗಳಿರುತ್ತಾರೆ. ಒಂದಿಷ್ಟು ಜನ ಗಡಿಯಾರದ ಮುಳ್ಳನ್ನು ನೋಡುತ್ತಾ ಯಾಂತ್ರಿಕವಾಗಿ ಕರ್ತವ್ಯ ನಿರ್ವಹಿಸಿದರೆ, ಇನ್ನೊಂದಿಷ್ಟು ಜನ ಸಮಯದ ಪರಿವೆಯೇ ಇಲ್ಲದೆ ಸಮಾಜಕ್ಕೋಸ್ಕರ ನಿಸ್ವಾರ್ಥವಾಗಿ ತಮ್ಮನ್ನು ತಾವು ಮುಡುಪಾಗಿಟ್ಟುಕೊಂಡು ಸೇವೆ ಸಲ್ಲಿಸುತ್ತಾರೆ. ಅಂಥವರ ಸಂಖ್ಯೆ ಕಡಿಮೆ ಇದ್ದರೂ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತಾ ‘ಎಲೆ ಮರೆಯ ಕಾಯಿ’ಯಂತೆ ಇಲಾಖೆಯ ಗೌರವವನ್ನು ಎತ್ತಿ ಹಿಡಿಯಲು ಅವರು ಅವಿರತವಾಗಿ ಶ್ರಮಿಸುತ್ತಿರುತ್ತಾರೆ. ಇವರು ಶರಣರ ವಚನದಂತೆ ‘ಮಾಡುವಂತಿರಬೇಕು, ಮಾಡದಂತಿರಬೇಕು, ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು’ ಎಂಬ ಆದರ್ಶದ ಕಾಯಕ ಜೀವಿಗಳಗಿರುತ್ತಾರೆ. ನಡೆಯುವವನೇ ಎಡವುತ್ತಾನೆ ಎಂಬ ಮಾತಿನಂತೆ ಕೆಲವೊಮ್ಮೆ ಅವರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ; ಆದರೆ ಆ ಪರಿಶ್ರಮವೇ ಯಾವುದೋ ರೂಪದಲ್ಲಿ ಅವರ ಕೈಹಿಡಿದು, ಆಂತರಿಕವಾಗಿ ಅವರನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಕಿರಣ್ ಬೇಡಿ ಅವರು ನೀಡಿದ ಸಂದರ್ಶನವೊಂದು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ. ಅದರಲ್ಲಿ ಸಂದರ್ಶನಕಾರರ ಪ್ರಶ್ನೆಗೆ ಉತ್ತರಿಸುತ್ತಾ ಅವರು, ಸಮಾಜ ಮತ್ತು ನಾಗರಿಕರು ನಮ್ಮ ಪೊಲೀಸರಿಗೆ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ನೀಡುವ ಮಟ್ಟದ ಗೌರವವನ್ನು ನೀಡಿದ್ದೇ ಆದರೆ, ಪೊಲೀಸರ ಮನೋಬಲ ಇನ್ನಷ್ಟು ಹೆಚ್ಚಾಗುತ್ತದೆ ಮತ್ತು ಅವರು ಸಮಾಜದ ಕಡೆಗೆ ಹೆಚ್ಚಿನ ವಿಶ್ವಾಸ ಹಾಗೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬಹುದಾಗಿದೆ ಎಂದು ಹೇಳಿದ್ದರು.

ಪೊಲೀಸ್ ಸೇವೆಯ ಮುಖ್ಯ ಭಾಗವಾದ ಅಪರಾಧಗಳ ತಡೆಗಟ್ಟುವಿಕೆ ಮತ್ತು ಪತ್ತೆಹಚ್ಚುವಿಕೆಯ ಕುರಿತು ಹೇಳುವುದಾದರೆ, ಸಮಾಜದಲ್ಲಿ ಇಂದು ನಡೆಯಬಹುದಾಗಿದ್ದ ಅಪರಾಧಗಳಲ್ಲಿ ಶೇಕಡಾ ೫೦ರಷ್ಟು ಪ್ರಕರಣಗಳು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳಿಂದಾಗಿ ಘಟಿಸುವುದೇ ಇಲ್ಲ. ಇನ್ನು ಘಟಿಸಿದ ಅಪರಾಧಗಳನ್ನು ಹಲವಾರು ಕೆಲಸದ ಒತ್ತಡಗಳ ನಡುವೆಯೂ ನಿಗದಿತ ಸಮಯದೊಳಗೆ ಪತ್ತೆಹಚ್ಚಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸವನ್ನೂ ಅವರು ಮಾಡುತ್ತಾರೆ. ಆದರೆ ಸಮಾಜದ ಬಹುತೇಕರಿಗೆ ಇದ್ಯಾವುದರ ಅರಿವೇ ಇರುವುದಿಲ್ಲ ಎನ್ನುವುದು ಸತ್ಯ.

ನನ್ನ ಗನ್‌ಮ್ಯಾನ್ ಪರಿಸ್ಥಿತಿಯೇ ನನ್ನ ಪರಿಸ್ಥಿತಿಯೂ ಆಗಿತ್ತು. ಕೆಲವೊಮ್ಮೆ ಸಾರ್ವಜನಿಕರ ಅಹವಾಲುಗಳನ್ನು ಕೇಳುತ್ತಾ ರಾತ್ರಿ ೮ ಗಂಟೆಯಾಗಿ, ನಂತರ ರಾತ್ರಿ ಗಸ್ತಿನ ವಿವರ, ಚುನಾವಣೆಯ ಪೂರ್ವ ತಯಾರಿ ಹೀಗೆ ಕೆಲಸ ಮುಗಿಸಿ ಮನೆಗೆ ವಾಪಸಾಗುವಷ್ಟರಲ್ಲಿ ರಾತ್ರಿ ೧೦ ಗಂಟೆಯಾಗಿರುತ್ತಿತ್ತು. ಬಸವಣ್ಣನವರು ಹೇಳುವಂತೆ:

‘ನಂಟರು ಬಂದಡೆ ಸಮಯವಿನ್ನಿ.. ಪ್ರಜೆಗಳು (ಒಡೆಯರು) ಬಂದರೆ ಗುಡಿ ತೋರಣವ ಕಟ್ಟಿ’ ಈ ಮಾರ್ಮಿಕ ಮಾತುಗಳು ಸಾರ್ವ ಜನಿಕರ ತೆರಿಗೆಯ ಹಣದಲ್ಲಿ ಸೇವೆ ಸಲ್ಲಿಸುವ ನಮಗೆ ನಿಜವಾಗಿಯೂ ದಾರಿ ದೀಪ.

ಕಣ್ಣೀರಾದ ಭಾವುಕ ಕ್ಷಣ ಮತ್ತು ಬದಲಾದ ದೃಷ್ಟಿಕೋನ: ಒಂದು ದಿನ, ನಗರದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಎರಡು ವರ್ಷದ ಪುಟ್ಟ ಮಗುವನ್ನು ಮಹಿಳೆಯೊಬ್ಬಳು ಅಪಹರಣ ಮಾಡಿಕೊಂಡು ಹೋಗಿದ್ದಾಳೆ ಎಂಬ ದೂರು ನಗರದ ಠಾಣೆಗೆ ಬಂತು. ಖುದ್ದು ಸ್ಥಳಕ್ಕೆ ತೆರಳಿ ಪಾಲಕರಿಗೆ ಧೈರ್ಯ ತುಂಬಿ, ಕೂಡಲೇ ಪ್ರಕರಣ ದಾಖಲಿಸಿಕೊಂಡು ನಗರದಲ್ಲಿದ್ದ ಸಿಸಿಟಿವಿಗಳನ್ನು ಪರಿಶೀಲಿಸುತ್ತಾ ನಮ್ಮ ತಂಡ ಪತ್ತೆ ಕಾರ್ಯ ಆರಂಭಿಸಿತು.

ಆ ದಿನ ನಾನು ಕಚೇರಿಯ ಕೆಲಸ ಮುಗಿಸಿಕೊಂಡು ರಾತ್ರಿ ೯ ಗಂಟೆಗೆ ಮನೆಗೆ ಹಿಂದಿರುಗುತ್ತಿದ್ದಾಗ, ಆ ಪುಟ್ಟ ಮಗುವಿನ ಮುಖ ನನ್ನ ಕಣ್ಣೆದುರಿಗೆ ಬಂತು. ತಕ್ಷಣವೇ ನಾನು ಕೂಡ ಪತ್ತೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ತಂಡದೊಂದಿಗೆ ಕೈಜೋಡಿಸಿದೆ. ರಾತ್ರಿಯಿಡೀ ಸ್ಥಳೀಯ ಯುವಕರ ಸಹಾಯದೊಂದಿಗೆ ನಗರದಾದ್ಯಂತ ಸಾರ್ವಜನಿಕರ ಮನೆಗಳಲ್ಲಿ ಅಳವಡಿ ಸಿದ್ದ ಸಿಸಿಟಿವಿಗಳನ್ನೂ ಪರಿಶೀಲಿಸಿದೆವು. ಮರುದಿನ ತೆಲಂಗಾಣ ಪೊಲೀಸ್ ಅಧಿಕಾರಿಗಳ ನೆರವಿನೊಂದಿಗೆ ಬಸ್ ನಿಲ್ದಾಣವೊಂದರ ಬಳಿ ಮಹಿಳೆಯಿಂದ ಮಗುವನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ಪಾಲಕರಿಗೆ ಒಪ್ಪಿಸಲಾಯಿತು. ಮಗುವನ್ನು ತಬ್ಬಿಕೊಂಡು ಕಣ್ಣೀರಿಡುತ್ತಾ ತಾಯಿ, ನನ್ನ ಮಗುವನ್ನು ದೊಡ್ಡವನಾದ ಮೇಲೆ ಪೊಲೀಸ್ ಅಧಿಕಾರಿಯನ್ನಾಗಿ ಮಾಡುತ್ತೇನೆ ಎಂದಾಗ, ಕಳೆದ ೨೪ ಗಂಟೆಗಳಿಂದ ನಿದ್ದೆಗೆಟ್ಟು ಶ್ರಮಿಸಿದ್ದ ನಮ್ಮ ತಂಡದ ಅಧಿಕಾರಿ- ಸಿಬ್ಬಂದಿಗಳಿಗೆಲ್ಲ ಅದೊಂದು ಅತ್ಯಂತ ಭಾವುಕ ಕ್ಷಣವಾಗಿತ್ತು.

ಆ ಪ್ರಕರಣ ಪತ್ತೆಯಾದ ಕೆಲವು ದಿನಗಳ ನಂತರ, ನಗರದ ಪ್ರತಿಷ್ಠಿತ ಶಾಲೆಯೊಂದರ ಮುಖ್ಯಸ್ಥರು ನನ್ನನ್ನು ಭೇಟಿಯಾಗಲು ಬಂದರು. ಸರ್, ನೀವು ಮತ್ತು ನಿಮ್ಮ ತಂಡ ಶ್ರೀಮಂತ ಕುಟುಂಬದ ಮಗು ಅಪಹರಣವಾದಾಗ ಇಂತಹ ಪತ್ತೆ ಕಾರ್ಯ ಮಾಡಿದ್ದರೆ ನಮಗೆ ವಿಶೇಷವೆನಿಸುತ್ತಿರಲಿಲ್ಲ. ಆದರೆ ಬಡ ಕುಟುಂಬದ ಮಗುವಿಗಾಗಿ ನೀವೇ ಖುದ್ದಾಗಿ ರಾತ್ರಿಯಿಡೀ ನಗರದ ಸುತ್ತಾಡಿ, ಸ್ಥಳೀಯ ಯುವಕರೊಂದಿಗೆ ಸೇರಿ ಪತ್ತೆ ಮಾಡಿದ್ದು ನೋಡಿ ಇಲಾಖೆಯ ಬಗ್ಗೆ ನಮ್ಮ ಗೌರವ ನೂರು ಪಟ್ಟು ಹೆಚ್ಚಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಗ ನಾನು, ಇಲಾಖೆಯ ಸಿಬ್ಬಂದಿಗಳ ಪರಿಶ್ರಮದಿಂದ ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಾದ್ಯಂತ ಶೇಕಡಾ ೧೪ರಷ್ಟು ಅಪರಾಧ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿರುವ ಪ್ರಮುಖ ದಾಖಲೆಯನ್ನು ಅವರಿಗೆ ತಿಳಿಸಿದೆ. ಜೊತೆಗೆ, ಇಷ್ಟೆ ಕಷ್ಟಪಟ್ಟು ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ- ಸಿಬ್ಬಂದಿಗಳ ಮಕ್ಕಳ ಶಿಕ್ಷಣದ ಕಡೆಗೆ ನಮಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವನ್ನು ಹಂಚಿಕೊಂಡು, ನನ್ನ ಗನ್‌ಮ್ಯಾನ್ ಕುಟುಂಬದ ಫೋನ್ ಸಂಭಾಷಣೆಯ ಘಟನೆಯನ್ನೂ ವಿಷಾದದಿಂದ ವಿವರಿಸಿದೆ.

ಮಕ್ಕಳ ಭವಿಷ್ಯಕ್ಕೆ ಆಸರೆಯಾದ ಸಹೃದಯತೆ: 

ಅದಕ್ಕೆ ಅವರು, ಸರ್, ಅದಕ್ಕೆ ಏಕೆ ಇಷ್ಟೊಂದು ಬೇಸರ ಮಾಡಿಕೊಳ್ಳುತ್ತೀರಿ? ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಮಕ್ಕಳು ಓದುವ ಶಾಲೆಯ ಎಲ್ಲಾ ಆಡಳಿತ ಮಂಡಳಿಯವರನ್ನು ನಿಮ್ಮ ಬಳಿಗೆ ಕರೆದುಕೊಂಡು ಬರುತ್ತೇನೆ ಎಂದು ಭರವಸೆ ನೀಡಿದರು. ಕೆಲವೇ ದಿನಗಳಲ್ಲಿ ಸಭೆಯೊಂದನ್ನು ಆಯೋಜಿಸಿದರು. ಆ ಸಭೆಯಲ್ಲಿ ನಾನು ಜಿಯಾದ್ಯಂತ ಹಮ್ಮಿಕೊಂಡಿದ್ದ ಹಲವಾರು ಜನ ಪರ ಕಾರ್ಯಕ್ರಮಗಳಿಂದಾಗಿ ಅಪರಾಧ ಪ್ರಮಾಣದಲ್ಲಿ ಆದ ಗಣನೀಯ ಇಳಿಕೆಯನ್ನು ಅಂಕಿ-ಅಂಶಗಳ ಮೂಲಕ ಮನವರಿಕೆ ಮಾಡಿದೆ. ಅದನ್ನು ಕಂಡು ಎಲ್ಲರಲ್ಲೂ ಇಲಾಖೆಯ ಬಗ್ಗೆ ಆದರದ ಭಾವ ಮೂಡಿತು. ಮುಂದುವರಿದು ನಾನು, ಇಷ್ಟೆ ಶ್ರಮವಹಿಸಿ ಕೆಲಸ ಮಾಡುವ ಸಿಬ್ಬಂದಿ-ಅಧಿಕಾರಿಗಳ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ವೈಯಕ್ತಿಕವಾಗಿ ಗಮನಹರಿಸಲು ಆಗದೆ, ನಾವೆ ಸಮಾಜವನ್ನು ತಿದ್ದುವ ಭರದಲ್ಲಿ ನಮ್ಮ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಎಡವುತ್ತಿದ್ದೇವೆಯೇ ಎಂಬ ಭಾವನೆ ಕಾಡುತ್ತಿದೆ ಎಂದು ಹೇಳಿದೆ. ಅದಕ್ಕೆ ಸ್ಪಂದಿಸಿದ ಅವರು, ನಮ್ಮ ಪೊಲೀಸ್ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ಮಕ್ಕಳ ಸಂಪೂರ್ಣ ಪಟ್ಟಿಯನ್ನು ಪಡೆದುಕೊಂಡು, ಮುಂದಿನ ದಿನಗಳಲ್ಲಿ ಅವರ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ವಹಿಸುವುದಾಗಿ ತಿಳಿಸಿದರು. ಮಕ್ಕಳ ಪ್ರಗತಿಯನ್ನು ಗಮನಿಸಲು ಹಿರಿಯ ಅಧಿಕಾರಿಗಳಲ್ಲಿ ಒಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಅವರೊಂದಿಗೆ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿದರು.

ಅಷ್ಟೇ ಅಲ್ಲದೆ, ಪ್ರತಿ ಶಾಲೆಯಲ್ಲೂ ನಿರ್ದಿಷ್ಟ ಶೇಕಡಾವಾರು ಸೀಟುಗಳನ್ನು ಪೊಲೀಸ್ ಕುಟುಂಬದ ಮಕ್ಕಳಿಗೆ ಪ್ರತ್ಯೇಕವಾಗಿ ಮೀಸಲಿಟ್ಟು, ಶುಲ್ಕದಲ್ಲೂ ರಿಯಾಯಿತಿ ನೀಡುವುದಾಗಿ ಘೋಷಿಸಿದರು. ಅವರಿಗೆ ನಾನು ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದೆ. ದೇಶದ ಭದ್ರತಾ ಪಡೆಗಳಂತೆ ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಾದ ನಾವು ಕೇವಲ ಸಿಬ್ಬಂದಿಯಿಂದ ಕರ್ತವ್ಯ ನಿರೀಕ್ಷಿಸದೆ ಅವರ ಕುಟುಂಬ ಮತ್ತು ಕಲ್ಯಾಣ ಕ್ಕಾಗಿ ಸ್ವಲ್ಪ ಹೃದಯದಿಂದ ಸ್ಪಂದಿಸಿದರೆ ಅವರ ವೈಯಕ್ತಿಕ ಬದುಕು ಹಸನಾಗಿ ಕರ್ತವ್ಯದ ಉತ್ಕೃಷ್ಟತೆ ಹೆಚ್ಚುತ್ತದೆ ಎಂಬುದು ನನ್ನ ಬಲವಾದ ನಂಬಿಕೆ.

ನೀರು ಮತ್ತು ಮೀನಿನ ಸುಸ್ಥಿರ ಬಾಂಧವ್ಯ: ಈ ಬೆಳವಣಿಗೆಯಿಂದಾಗಿ ಸಮಾಜ ಪೊಲೀಸರನ್ನು ಮತ್ತು ಪೊಲೀಸರು ಸಮಾಜವನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಹೋಯಿತು ಎಂದರೆ ತಪ್ಪಾಗಲಾರದು.

” ಸಮಾಜ ಮತ್ತು ಪೊಲೀಸ್ ಇಲಾಖೆ ‘ನೀರು ಮತ್ತು ಮೀನು’ ಇದ್ದಂತೆ-ನೀರಿಲ್ಲದೆ ಮೀನು ಬದುಕಲಾರದು; ಹಾಗೆಯೇ ಜಲಚರಗಳಿಲ್ಲದ ನೀರು ಮೃತ ಸರೋವರದಂತೆ. ಈ ಪ್ರಜ್ಞೆ ಪೊಲೀಸ್ ಅಧಿಕಾರಿಗಳು ಮತ್ತು ಸಮಾಜದಲ್ಲಿ ಏಕಕಾಲಕ್ಕೆ ಮೂಡಿದಾಗ, ಅದೊಂದು ಸುಸ್ಥಿರವಾದ ಹಾಗೂ ಗಟ್ಟಿಯಾದ ಬಾಂಧವ್ಯವಾಗಿ ರೂಪುಗೊಳ್ಳುತ್ತದೆ.”

 

 

ಆಂದೋಲನ ಡೆಸ್ಕ್

Recent Posts

ಅದ್ದೂರಿಯಷ್ಟೇ ಅರ್ಥಪೂರ್ಣವಾಗಿರಲಿ ಮೈಸೂರು ದಸರಾ

ಜಿ.ಎಲ್.ತ್ರಿಪುರಾಂತಕ ಪೂರ್ವಭಾವಿ ಸಭೆಯಂತೆ ದಸರಾ ಪರಾಮರ್ಶನ ಸಭೆಯೂ ಇರಲಿ ಅರಮನೆಗಳ ನಗರಿ, ಸಾಂಸ್ಕೃತಿಕ ರಾಜಧಾನಿ ಮೈಸೂರು ಅನೇಕ ವಿಷಯಗಳಿಗೆ ಜಗದ್ವಿಖ್ಯಾತಿಯನ್ನು…

2 mins ago

ಬಲಾಬಲ ಪ್ರದರ್ಶನ ಬೇಡ, ಬೆಂಬಲ ಕೊಡಿ

ನ.೨೬ರಂದು ಮೈಸೂರಿನಲ್ಲಿ ಆಯೋಜಿಸಿರುವ ಸಂವಿಧಾನ ದಿನಾಚರಣೆ ಬಗ್ಗೆ ಪರ-ವಿರೋಧ ಚರ್ಚೆ ‘ಆಂದೋಲನ’ ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ದಲಿತ ಮುಖಂಡರು…

25 mins ago

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದರ್ಶನ್‌ ಮನವಿ; ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಿಕೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಹೊಸ…

18 hours ago

ತಿಂಗಳಿಂದ ಆತಂಕ ಸೃಷ್ಟಿಸಿದ್ದ ಚಿರತೆ ಬೋನಿಗೆ; ಕೆ.ಆರ್‌.ನಗರದ ಗ್ರಾಮಸ್ಥರು ನಿರಾಳ!

ಕೆ.ಆರ್.ನಗರ: ಕಳೆದೊಂದು ತಿಂಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಗಂಡು ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಕೆ.ಆರ್‌.ನಗರ ತಾಲೂಕಿನ ಹೆಬ್ಬಾಳು…

19 hours ago

‘ಬಾಯಿಮಾತಿನ ಅನುಕಂಪ ಸಾಕಾಗಲ್ಲ’ ಆಶಾ ಕಾರ್ಯಕರ್ತೆಯರ ಪರ ಕುಮಾರಸ್ವಾಮಿ ಆಗ್ರಹ!

 ಬೆಂಗಳೂರು: ‘ಡಿಕೆ ಶಿವಕುಮಾರ್‌ ಅವರದ್ದು ಬಂಡೆ ಹೃದಯವಲ್ಲ, ಹೂವಿನ ಹೃದಯ. ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುತ್ತಾರೆ’ ಎಂದು ಕೇಂದ್ರ ಸಚಿವ…

20 hours ago

ಬಾಟಲಿ ನೀರು ಎಷ್ಟು ಸುರಕ್ಷಿತ? ಗುಣಮಟ್ಟ, ಲೇಬಲ್‌ಗಳ ಮೇಲೆ FSSAI ಕಣ್ಣು!

ನವದೆಹಲಿ: ನೀವು ಖರೀದಿಸುವ ಬಾಟಲಿ ನೀರಿನ ಗುಣಮಟ್ಟ ಹೇಗಿದೆ? ಬಿಸ್ಲೆರಿ ನೀರಿನ ವಿವಾದದ ಬೆನ್ನಲ್ಲೇ, ವಿವಿಧ ಬ್ರ್ಯಾಂಡ್‌ಗಳ ಪ್ಯಾಕೇಜ್ಡ್‌ ಕುಡಿಯುವ…

20 hours ago