Andolana originals

ಬಲಾಬಲ ಪ್ರದರ್ಶನ ಬೇಡ, ಬೆಂಬಲ ಕೊಡಿ

ನ.೨೬ರಂದು ಮೈಸೂರಿನಲ್ಲಿ ಆಯೋಜಿಸಿರುವ ಸಂವಿಧಾನ ದಿನಾಚರಣೆ ಬಗ್ಗೆ ಪರ-ವಿರೋಧ ಚರ್ಚೆ

‘ಆಂದೋಲನ’ ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ದಲಿತ ಮುಖಂಡರು

ಮೈಸೂರು: ನವೆಂಬರ್ ೨೬ ಸಂವಿಧಾನ ದಿನ. ಮೈಸೂರಿನಲ್ಲಿ ಅಂದು ರಾಜ್ಯ ಸರ್ಕಾರ ಹಾಗೂ ದಲಿತ ಸಂಘರ್ಷ ಸಮಿತಿ ಪ್ರತ್ಯೇಕವಾಗಿ ಕಾರ್ಯಕ್ರಮ ಆಯೋಜಿಸಿವೆ. ಇದು ಸಾಮಾಜಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವರೂ ಆದ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಅವರ ನಡುವಿನ ಸಂಬಂಧ ಹಾಗೂ ರಾಜಕೀಯ ನಿಲುವುಗಳನ್ನು ಮುಂದಿಟ್ಟುಕೊಂಡು ಪರ- ವಿರೋಧದ ಚರ್ಚೆಗಳು ಬೆಂಬಲಿಗ ರಿಂದ ನಡೆಯುತ್ತಿವೆ. ಆದರೆ, ಇದನ್ನು ಬದಿಗೊತ್ತಿ ಓರ್ವ ವ್ಯಕ್ತಿ ಅಥವಾ ಒಬ್ಬ ನಾಯಕನ ಬದಲಾಗಿ ಸಂವಿಧಾನದ ಆಶಯ, ಅಹಿಂದ ಚಳವಳಿ ಭವಿಷ್ಯ ಮತ್ತು ಶೋಷಿತ ಸಮುದಾಯಗಳ ಐಕ್ಯತೆ ದೃಷ್ಟಿಕೋನದಲ್ಲಿ ನೋಡುವುದು ಅಗತ್ಯವಿದೆ.

ಭಾರತದ ಸಂವಿಧಾನದ ಆಶಯವು ಶತಮಾನಗಳಿಂದ ಸಾಮಾಜಿಕ ಅಸಮಾನತೆ, ಜಾತಿ ತಾರತಮ್ಯ, ಅಸ್ಪೃಶ್ಯತೆ ಮತ್ತು ಶೋಷಣೆಗೆ ಒಳಗಾದ ಜನ ಸಮುದಾಯಗಳಿಗೆ ಘನತೆಯ ಬದುಕು ಕಲ್ಪಿಸುವ ಮಹತ್ವದ ಉದ್ದೇಶದ್ದು. ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರತಿಪಾದಿಸಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವದ ಮೌಲ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದಾಗ ಮಾತ್ರವೇ ಸಂವಿಧಾನದ ಆಶಯ ಸಾಕಾರಗೊಳ್ಳಲು ಸಾಧ್ಯ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಅಹಿಂದ ಚಳವಳಿಯನ್ನು ನೋಡಬೇಕಿದೆ. ಚಳವಳಿಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಮತ್ತು ಡಾ.ಎಚ್.ಸಿ. ಮಹದೇವಪ್ಪ ಅವರಿಬ್ಬರ ಪಾತ್ರವನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಅಲ್ಲದೆ, ಇಂದು ಈ ಇಬ್ಬರೂ ನಾಯಕರ ಹೆಸರಿನಲ್ಲಿ ನಡೆಯುತ್ತಿರುವ ಪರ- ವಿರೋಧದ ಚರ್ಚೆಗಳು ಅಹಿಂದ ಚಳವಳಿಯ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕಿದೆ.

ನವೆಂಬರ್ ೨೬ರಂದು ನಡೆಯುವ ಎರಡು ಕಾರ್ಯಕ್ರಮಗಳನ್ನೂ ಯಾರು ದೊಡ್ಡವರು, ಯಾರಿಗೆ ಹೆಚ್ಚು ಜನಬೆಂಬಲ, ಯಾರ ಪ್ರಭಾವ ಹೆಚ್ಚಿದೆ ಎಂಬ ದೃಷ್ಟಿಯಿಂದ ಅಳೆಯುವುದಕ್ಕಿಂತ ಅವು ಸಂವಿಧಾನದ ಆಶಯಗಳನ್ನು ಜನರಿಗೆ ಎಷ್ಟರ ಮಟ್ಟಿಗೆ ತಲುಪಿಸುತ್ತವೆ ಎಂಬುದೇ ಮುಖ್ಯವಾಗ ಬೇಕು.

ವೇದಿಕೆಗಳು ಬೇರೆ ಬೇರೆಯಾಗಿರಬಹುದು. ಆದರೆ, ಗುರಿ ಒಂದೇ ಆಗಿರಬೇಕು. ಈ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರರು ‘ಆಂದೋಲನ’ ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ

ಸಂವಿಧಾನ ದಿನಕ್ಕೆ ಬಿಕ್ಕಟ್ಟು ಪ್ರದರ್ಶನ ಬೇಡ:  ಸಂವಿಧಾನದ ಆಶಯಗಳನ್ನು ರಾಜ್ಯದ ಹಳ್ಳಿ ಹಳ್ಳಿಗೂ ತಲುಪಿಸುವ ಉದ್ದೇಶದಿಂದ ದಲಿತ ಸಂಘರ್ಷ ಸಮಿತಿ ಒಂದು ವರ್ಷದ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ನ.೨೬ರಂದು ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮ ಈ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮವಷ್ಟೇ. ಇದನ್ನು ಸಿದ್ದರಾಮಯ್ಯ ಮತ್ತು ಡಾ.ಎಚ್.ಸಿ. ಮಹದೇವಪ್ಪ ನಡುವಿನ ಬಿಕ್ಕಟ್ಟಿಗೆ ತಳುಕು ಹಾಕುವುದು ಸರಿಯಲ್ಲ. ಅಂಬೇಡ್ಕರ್ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಸಂವಿಧಾನದ ವಿಚಾರಗಳನ್ನು ಹಳ್ಳಿ ಹಳ್ಳಿಗಳಿಗೂ ತಲುಪಿಸಲು ಸಾಹಿತ್ಯ ಮತ್ತು ಕಾರ್ಯಕ್ರ ಮದ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಮೈಸೂರಿನಿಂದ ಅಭಿಯಾನಕ್ಕೆ ಚಾಲನೆ ನೀಡಲು ನಿರ್ಧರಿಸಿದ್ದೆವು. ಸರ್ಕಾರವೂ ಅದೇ ದಿನ ಕಾರ್ಯಕ್ರಮ ಆಯೋಜಿಸಿರು ವುದು ಕಾಕತಾಳೀಯ. ಸರ್ಕಾರದ ಕಾರ್ಯಕ್ರಮಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ನಮ್ಮ ಕಾರ್ಯಕ್ರಮವನ್ನು ಸಂಜೆ ೪ ಗಂಟೆಯ ನಂತರ ನಡೆಸಲು ತೀರ್ಮಾನಿಸಲಾಗಿದೆ. ಸಿದ್ದರಾಮಯ್ಯ ಮತ್ತು ಮಹದೇವಪ್ಪ ನಡುವೆ ಬಿರುಕು ಮೂಡಿದೆ ಎಂಬಂತೆ ಬಿಂಬಿಸುವುದರಿಂದ ಯಾರಿಗೆ ಲಾಭವಾಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಇಬ್ಬರೂ ನಾಯಕರು ಸಮುದಾಯದ ಹಿತದೃಷ್ಟಿಯಿಂದ ಒಂದಾಗಬೇಕು ಎಂಬುದು ನಮ್ಮ ಆಶಯ. ಈ ಹೋರಾಟದ ಉದ್ದೇಶ ಶೋಷಿತ ಸಮುದಾಯಗಳ ಐಕ್ಯತೆ ಬಲಪಡಿಸುವುದೇ ಹೊರತು, ತಾತ್ಕಾಲಿಕ ರಾಜಕೀಯ ಲಾಭವಲ್ಲ.

-ಮಾವಳ್ಳಿ ಶಂಕರ್, ಹಿರಿಯ ಹೋರಾಟಗಾರ, ದಸಂಸ 

ಸಂವಿಧಾನ ದಿನಾಚರಣೆ ಗೌಣವಾಗದಿರಲಿ:  ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಶಕ್ತಿಗಳ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಜ್ಞಾವಂತರು ಒಗ್ಗೂಡಿ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಬೇಕಿದೆ. ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವವನ್ನು ಉಳಿಸುವ ನಿಟ್ಟಿನಲ್ಲಿ ದಲಿತರೂ ಸೇರಿದಂತೆ ಎಲ್ಲ ಶೋಷಿತ ವರ್ಗಗಳು ಹಾಗೂ ಜಾತ್ಯತೀತ ಸಂಘಟನೆಗಳು ಒಂದಾಗಿ ಧ್ವನಿ ಎತ್ತಬೇಕಾದ ಐತಿಹಾಸಿಕ ಅನಿವಾರ್ಯತೆ ಎದುರಾಗಿದೆ. ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕರ್ನಾಟಕ ದಾದ್ಯಂತ ಒಂದು ವರ್ಷದರೆಗೆ ಸಂವಿಧಾನ ದಿನಾಚರಣೆ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ. ಆದರೆ, ಸಂವಿಧಾನ ದಿನಾಚರಣೆಯ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಸಿದ್ದರಾಮಯ್ಯ ಮತ್ತು ಡಾ. ಎಚ್.ಸಿ.ಮಹದೇವಪ್ಪ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳ ದೃಷ್ಟಿಯಿಂದ ನೋಡುವುದು ಸರಿಯಲ್ಲ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಅವುಗಳನ್ನು ದೊಡ್ಡದಾಗಿ ಬಿಂಬಿಸುವ ಮೂಲಕ ಸಂವಿಧಾನದ ಆಶಯ ಮತ್ತು ಸಾಮಾಜಿಕ ನ್ಯಾಯದ ಮೂಲ ಉದ್ದೇಶವನ್ನು ಗೌಣಗೊಳಿಸಬಾರದು.

ಮುನಿಸ್ವಾಮಿ, ಹಿರಿಯ ಹೋರಾಟಗಾರ, ದಸಂಸ 

ಭಿನ್ನಾಭಿಪ್ರಾಯಗಳ ಗುಮ್ಮ ತೋರಿಸಿ ಲಾಭಕ್ಕೆ ಯತ್ನ: ನ.೨೬ರ ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಉಂಟಾಗಿರುವ ಗೊಂದಲ ಹಾಗೂ ದಲಿತ ಸಮುದಾಯದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ಚರ್ಚೆಗಳು ಸರಿಯಲ್ಲ. ಸಿದ್ದರಾಮಯ್ಯ ಮತ್ತು ಡಾ.ಎಚ್.ಸಿ.ಮಹದೇವಪ್ಪ ಅವರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಗುಮ್ಮ ತೋರಿಸಿ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿ ಕಾರ್ಯಕ್ರಮ ಆಯೋಜನೆ ಕುರಿತು ಎಂಟು-ಹತ್ತು ತಿಂಗಳ ಹಿಂದೆಯೇ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಡಾ.ಎಚ್.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಸಚಿವರಾಗಿದ್ದಾಗಲೇ ಚರ್ಚೆ ಆರಂಭವಾಗಿತ್ತು. ಸರ್ಕಾರ ಬೆಂಗಳೂರಿನಲ್ಲಿ ಸಂವಿಧಾನ ದಿನಾಚರಣೆ ಕಾಯ ಕ್ರಮ ಆಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು. ಮಾಜಿ ಚುನಾವಣಾ ಆಯುಕ್ತ ಖುರೇಷಿ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಿ ಸಂವಿಧಾನದ ಆಶಯಗಳ ಕುರಿತು ಚರ್ಚೆ ನಡೆಸುವ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಆದರೆ, ಸಂವಿಧಾನ ದಿನದಂದು ಅನಗತ್ಯ ಗೊಂದಲ ಮತ್ತು ಸಂಘರ್ಷಗಳಿಗೆ ಅವಕಾಶವಾಗಬಾರದು ಎಂಬ ಉದ್ದೇಶದಿಂದ ಎರಡು ದಿನಗಳ ಕಾರ್ಯಕ್ರಮವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿದೆ.

ಗುರುಪ್ರಸಾದ್ ಕೆರಗೋಡು, ರಾಜ್ಯ ಸಂಚಾಲಕ,ದಸಂಸ

ಚುನಾವಣೆ ಲೆಕ್ಕಾಚಾರ ಹಾಕಿ ಗೊಂದಲ ಸೃಷ್ಟಿ: ಸಂವಿಧಾನದ ರಕ್ಷಣೆಗಾಗಿ ಡಾ.ಎಚ್.ಸಿ.ಮಹದೇವಪ್ಪ ಅವರು ಸಚಿವರಾಗಿದ್ದಾಗಿನಿಂದಲೂ ಸೈದ್ಧಾಂತಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಶಾಸಕರಾಗಿದ್ದರೂ ಅದೇ ಪ್ರಯತ್ನ ಮುಂದುವರಿಸಿದ್ದಾರೆ. ಅಹಿಂದ ವರ್ಗಗಳನ್ನು ಒಗ್ಗೂಡಿ ಸುವ ಪ್ರಾಮಾಣಿಕ ಪ್ರಯತ್ನವೂ ನಡೆಯುತ್ತಿದೆ. ಆದರೆ, ಕೆಲವರು ಸ್ವಹಿತಾಸಕ್ತಿ ಮತ್ತು ಮುಂದಿನ ಚುನಾವಣೆಯ ಲೆಕ್ಕಾಚಾರದಿಂದ ಕಾರ್ಯಕ್ರಮದ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಮಹದೇವಪ್ಪ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿ ದ್ದರೂ ಅಹಿಂದ ನೆಲೆಗಟ್ಟಿನಲ್ಲಿಯೇ ಕರ್ನಾಟಕವನ್ನು ಕಟ್ಟಬೇಕಿದೆ. ಇಬ್ಬರೂ ಈ ವಿಚಾರವನ್ನು ಅರಿತು ಚಳವಳಿಗೆ ಬೆಂಬಲ ನೀಡಬೇಕು. ಸಿದ್ದರಾಮಯ್ಯ ಮತ್ತು ಮಹದೇವಪ್ಪ ಇಬ್ಬರನ್ನೂ ಸಂಪರ್ಕಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಅವರ ಒಪ್ಪಿಗೆಯ ನಂತರವೇ ಆಹ್ವಾನ ಪತ್ರಿಕೆಯಲ್ಲಿ ಹೆಸರುಗಳನ್ನು ಸೇರಿಸಲಾಗಿದೆ. ಸಂವಿಧಾನ ಮತ್ತು ಜಾತ್ಯತೀತ ಆಶಯಗಳ ಪರವಾಗಿ ಸುಮಾರು ಐದು ದಶಕಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಚಳವಳಿಯನ್ನು ಸಂಘಟನಾತ್ಮಕವಾಗಿ ಹಾಗೂ ರಾಜಕೀಯವಾಗಿ ಬಲಪಡಿಸುವುದು ನಮ್ಮ ಉದ್ದೇಶ.

ಎನ್.ವೆಂಕಟೇಶ್, ಹಿರಿಯ ಹೋರಾಟಗಾರ, ದಸಂಸ

 

 

 

ಆಂದೋಲನ ಡೆಸ್ಕ್

Recent Posts

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದರ್ಶನ್‌ ಮನವಿ; ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಿಕೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಹೊಸ…

18 hours ago

ತಿಂಗಳಿಂದ ಆತಂಕ ಸೃಷ್ಟಿಸಿದ್ದ ಚಿರತೆ ಬೋನಿಗೆ; ಕೆ.ಆರ್‌.ನಗರದ ಗ್ರಾಮಸ್ಥರು ನಿರಾಳ!

ಕೆ.ಆರ್.ನಗರ: ಕಳೆದೊಂದು ತಿಂಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಗಂಡು ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಕೆ.ಆರ್‌.ನಗರ ತಾಲೂಕಿನ ಹೆಬ್ಬಾಳು…

18 hours ago

‘ಬಾಯಿಮಾತಿನ ಅನುಕಂಪ ಸಾಕಾಗಲ್ಲ’ ಆಶಾ ಕಾರ್ಯಕರ್ತೆಯರ ಪರ ಕುಮಾರಸ್ವಾಮಿ ಆಗ್ರಹ!

 ಬೆಂಗಳೂರು: ‘ಡಿಕೆ ಶಿವಕುಮಾರ್‌ ಅವರದ್ದು ಬಂಡೆ ಹೃದಯವಲ್ಲ, ಹೂವಿನ ಹೃದಯ. ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುತ್ತಾರೆ’ ಎಂದು ಕೇಂದ್ರ ಸಚಿವ…

19 hours ago

ಬಾಟಲಿ ನೀರು ಎಷ್ಟು ಸುರಕ್ಷಿತ? ಗುಣಮಟ್ಟ, ಲೇಬಲ್‌ಗಳ ಮೇಲೆ FSSAI ಕಣ್ಣು!

ನವದೆಹಲಿ: ನೀವು ಖರೀದಿಸುವ ಬಾಟಲಿ ನೀರಿನ ಗುಣಮಟ್ಟ ಹೇಗಿದೆ? ಬಿಸ್ಲೆರಿ ನೀರಿನ ವಿವಾದದ ಬೆನ್ನಲ್ಲೇ, ವಿವಿಧ ಬ್ರ್ಯಾಂಡ್‌ಗಳ ಪ್ಯಾಕೇಜ್ಡ್‌ ಕುಡಿಯುವ…

19 hours ago

7ನೇ ದಿನಕ್ಕೆ ಆಶಾ ಕಾರ್ಯಕರ್ತೆಯರ ಧರಣಿ; 17 ಮಂದಿ ಆಸ್ಪತ್ರೆಗೆ ದಾಖಲು!

ಬೆಂಗಳೂರು: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ ಏಳನೇ ದಿನಕ್ಕೆ ಕಾಲಿಟ್ಟಿದೆ.…

22 hours ago

ಬಂಡೀಪುರದ ಕುಂದುಕೆರೆ ವಲಯದಲ್ಲಿ ಗಂಡಾನೆ ಕಳೇಬರ ಪತ್ತೆ!

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದಲ್ಲಿ ಗಂಡಾನೆಯ ಕಳೇಬರ ಪತ್ತೆಯಾಗಿದೆ. ಕುಂದುಕೆರೆ ಗಸ್ತಿನ ಬೂದಿಕಟ್ಟೆ ಅರಣ್ಯ ಪ್ರದೇಶದಲ್ಲಿ…

22 hours ago