Andolana originals

ಡಿಕೆಶಿ ಸಂಪುಟದಲ್ಲಿ ಯಾರ‍್ಯಾರಿಗೆ ಒಲಿಯಲಿದೆ ಮಂತ್ರಿ ಸ್ಥಾನ?

ಕೆ.ಬಿ.ರಮೇಶನಾಯಕ

ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್‌ಗೆ ಮಂತ್ರಿ ಸ್ಥಾನ ಸಾಧ್ಯತೆ

ಎಚ್‌ಸಿಎಂಗೆ ಪ್ರಬಲ ಖಾತೆ ಕೊಡಿಸಲು ಹೈಕಮಾಂಡ್ ಮಟ್ಟದಲ್ಲಿ ಲಾಬಿ

ಎಂಎಲ್‌ಸಿ ಡಾ.ಯತೀಂದ್ರಗೆ ಡಿಸಿಎಂ ಸ್ಥಾನ ಕೊಡಿಸಲು ಪರೋಕ್ಷ ಪ್ರಸ್ತಾಪ

ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನಗಳಿಗೆ ಕಣ್ಣಿಟ್ಟ ಮುಖಂಡರು

ಮೈಸೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದಾಗಿ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣಕ್ಕೆ ದಿನಗಣನೆ ಶುರುವಾಗಿದ್ದು, ನೂತನ ಸಚಿವ ಸಂಪುಟದಲ್ಲಿ ಹಳೆಯ ಮೈಸೂರು ಭಾಗದಿಂದ ಯಾರ‍್ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿರುವ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಅವರು ನೂತನ ಸಂಪುಟದಲ್ಲಿ ಸ್ಥಾನ ಉಳಿಸಿ ಕೊಳ್ಳುವರೇ ಅಥವಾ ಇಲ್ಲವೇ ಎನ್ನುವ ಚರ್ಚೆಗಳು ಕಾಂಗ್ರೆಸ್‌ನಲ್ಲಿ ಶುರುವಾಗಿದ್ದು, ನರಸಿಂಹ ರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್‌ಗೆ ಮಂತ್ರಿ ಭಾಗ್ಯ ದೊರೆಯುವುದು ನಿಶ್ಚಿತವಾಗಿದ್ದರೆ, ಚಾಮರಾಜ ನಗರ ಜಿಲ್ಲೆಯಿಂದ ಸಿ.ಪುಟ್ಟರಂಗಶೆಟ್ಟಿ, ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಡಿಕೇರಿ ಕ್ಷೇತ್ರದ ಶಾಸಕ ಮಂಥರ್‌ಗೌಡ ಹೆಸರು ಚರ್ಚೆಯಲ್ಲಿದೆ. ಹಿರಿತನ ಹಾಗೂ ಅಲ್ಪಸಂಖ್ಯಾತರ ಕೋಟಾದಡಿ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡರೂ ಬಹಿರಂಗವಾಗಿ ತೋರ್ಪಡಿಸದೆ ಪಕ್ಷ ನಿಷ್ಠೆ ಮೆರೆದಿದ್ದ ತನ್ವೀರ್ ಸೇಠ್‌ಗೆ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆಯವುದು ನಿಶ್ಚಿತವಾಗಿರುವುದರಿಂದ ಕೆ.ವೆಂಕಟೇಶ್ ಅವರಿಗೆ ಕೊಕ್ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.

೨೦೨೩ರ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಾಗ ಮೈಸೂರು ಜಿಲ್ಲೆಯ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರೆ, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಸಚಿವರಾದರು. ಅಲ್ಪಸಂಖ್ಯಾತರ ಕೋಟಾದಡಿ ಬಯಸಿದ್ದ ಸಚಿವ ಸ್ಥಾನ ತನ್ವೀರ್‌ಸೇಠ್ ಬದಲಿಗೆ ಜಮೀರ್ ಅಹಮದ್ ಖಾನ್ ಪಾಲಾಯಿತು. ಹೀಗಿದ್ದರೂ ಪಕ್ಷದ ನಾಯಕತ್ವದ ಬಗ್ಗೆ ಎಲ್ಲಿಯೂ ಅಪಸ್ವರದ ಮಾತುಗಳನ್ನಾಡದೆ ಬಂದಿದ್ದ ತನ್ವೀರ್ ಸೇಠ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ ಸಮಾಧಾನಪಡಿಸಲಾಗಿತ್ತು.

ಇದೀಗ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು, ಸೋಮವಾರದೊಳಗೆ ಡಿ.ಕೆ.ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗುವ ಹೊತ್ತಲ್ಲೇ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್‌ಗೂ ಸಚಿವ ಸ್ಥಾನ ದೊರೆಯಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ಕೆ.ವೆಂಕಟೇಶ್‌ಗೆ ಅನುಮಾನ: ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದವರಲ್ಲಿ ಅರ್ಧದಷ್ಟು ಮಂದಿಯನ್ನು ಕೈ ಬಿಡುವ ಸಾಧ್ಯತೆ ಇದ್ದು, ಇದರಲ್ಲಿ ರೇಷ್ಮೆ ಮತ್ತು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರನ್ನು ಕೈಬಿಡುವ ಮಾತುಗಳು ದಟ್ಟವಾಗಿವೆ. ಒಕ್ಕಲಿಗ ಸಮಾಜಕ್ಕೆ ಸೇರಿದ ಕೆ.ವೆಂಕಟೇಶ್ ಅವರನ್ನು ಮುಂದುವರಿಸುವ ಬಗ್ಗೆ ಸಿದ್ದರಾಮಯ್ಯ ಅವರಿಗೆ ಒಲವಿದ್ದರೂ ಹಳೆಯ ಮೈಸೂರು ಭಾಗದವರೇ ಸಿಎಂ ಆಗುವ ಕಾರಣ ಮುಂದುವರಿಯುವುದು ಕಷ್ಟ ಎಂದು ಗೊತ್ತಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಉಳಿಸುವಂತೆ ಸಿದ್ದರಾಮಯ್ಯ ಹೊಸದಿಲ್ಲಿಯಲ್ಲಿ ಪ್ರಭಾವ ಬೀರಿದ್ದು, ಸಮಾಜ ಕಲ್ಯಾಣ ಇಲಾಖೆ ಬದಲಿಗೆ ಬೇರೆ ಪ್ರಬಲ ಖಾತೆ ಸಿಗುವ ನಿರೀಕ್ಷೆ ಇದೆ.

ಹಿಂದುಳಿದ ಉಪ್ಪಾರ ಸಮುದಾಯಕ್ಕೆ ಸೇರಿದ ಸಿ.ಪುಟ್ಟರಂಗಶೆಟ್ಟರಿಗೆ ಅವಕಾಶ ನೀಡಿ, ಚಾಮರಾಜನಗರ ಜಿಲ್ಲೆಗೆ ಪ್ರಾತಿನಿಧ್ಯ ಕಲ್ಪಿಸಬೇಕೆಂಬ ಕೂಗು ಎದ್ದಿರುವ ಕಾರಣ ಅವಕಾಶ ಸಿಗಬಹುದಾಗಿದೆ ಎನ್ನಲಾಗಿದೆ. ಮತ್ತೊಂದೆಡೆ ಸಿದ್ದರಾಮಯ್ಯ ಪುತ್ರ, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿಮಾಡಿ ಕಂದಾಯ ಅಥವಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆ ಕೊಡಿಸುವ ಕುರಿತು ಹೊಸದಿಲ್ಲಿಯ ನಾಯಕರಿಗೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಮಂಥರ್ ಗೌಡರಿಗೆ ಅವಕಾಶ ನೀಡಿ ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಚಿಂತನೆ ಇದ್ದು, ಅದಕ್ಕಾಗಿ ಮಂತ್ರಿ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆಯಿದೆ.

ನಿಗಮ-ಮಂಡಳಿಗಳತ್ತ ಮುಖಂಡರ ಚಿತ್ತ: ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ವಿವಿಧ ಅಕಾಡೆಮಿಗಳು, ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆ ಇರುವ ಕಾರಣ ಅತ್ತ ಅನೇಕ ಮುಖಂಡರು ಕಣ್ಣಿಟ್ಟಿದ್ದಾರೆ. ಈ ಹಿಂದೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮೈಲ್ಯಾಕ್ ಅಧ್ಯಕ್ಷ ಎಚ್ .ಡಿ.ಗಣೇಶ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಡ್ಯ ರಂಗಸ್ವಾಮಿ ಅವರನ್ನು ನೇಮಕ ಮಾಡಲಾಗಿತ್ತು.

ಇದರಲ್ಲಿ ಅಯೂಬ್ ಖಾನ್, ಮರಿಸ್ವಾಮಿ ಅವರನ್ನು ಮುಂದುವರಿಸಲಾಗಿದೆ. ಹೀಗಾಗಿ, ಹೊಸಬರಿಗೆ ಅವಕಾಶ ಮಾಡಿಕೊಡಲು ಕೆಲವರನ್ನು ಬದಲಿಸುವ ಸಾಧ್ಯತೆ ಇರುವ ಕಾರಣ ಡಿಕೆಶಿ ಬಳಗದಲ್ಲಿ ಗುರುತಿಸಿಕೊಂಡಿದ್ದ ಅನೇಕ ಮುಖಂಡರು ಪೈಪೋಟಿ ನೀಡುವ ಸಾಧ್ಯತೆ ನಿರ್ಮಾಣವಾಗಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವೂ ಒಂದು ವರ್ಷದಿಂದ ಖಾಲಿ ಇದ್ದು, ಇದಕ್ಕೆ ಯಾರು ನೇಮಕಗೊಳ್ಳುತ್ತಾರೆ ಎಂಬುದು ಮುಂದೆ ಗೊತ್ತಾಗಲಿದೆ

” ತನ್ವೀರ್ ಸೇಠ್ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ಮೂರನೇ ಬಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದಂತಾಗಲಿದೆ. ಧರಂಸಿಂಗ್ ನೇತೃತ್ವದ ಕಾಂಗ್ರೆಸ್-ಜಾ.ದಳದ ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಕೆಲಸ ಮಾಡಿದ್ದರೆ, ೨೦೧೩-೧೮ರ ಅವಧಿಯ ಕೊನೆ ಎರಡು ವರ್ಷಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಅಲ್ಪಸಂಖ್ಯಾತರ ಕೋಟಾದಡಿ ಸ್ಪೀಕರ್ ಯು.ಟಿ.ಖಾದರ್, ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್, ಶಾಸಕ ಮೊಹಮ್ಮದ್ ಹ್ಯಾರಿಸ್ ಸಚಿವ ಸ್ಥಾನಕ್ಕೆ ಕಟ್ಟಿಣ್ಣಿದ್ದರೂ ಹಿರಿತನದ ಆಧಾರದ ಮೇಲೆ ಅವಕಾಶ ದೊರೆಯಲಿದೆ ಎನ್ನಲಾಗಿದೆ. ಅಜೀಜ್ ಸೇಠ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ೨೦೦೨ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜಯಗಳಿಸಿದ ತನ್ವೀರ್ ಸೇಠ್ ಈತನಕ ಹಿಂತಿರುಗಿ ನೋಡಿಲ್ಲ. ೨೦೦೪, ೨೦೦೮, ೨೦೧೩, ೨೦೧೮ ಮತ್ತು ೨೦೨೩ರ ಚುನಾವಣೆಯಲ್ಲಿ ಸತತವಾಗಿ ಆರು ಬಾರಿ ಜಯಗಳಿಸಿರುವುದು ವಿಶೇಷವಾಗಿದೆ.”

 

 

ಆಂದೋಲನ ಡೆಸ್ಕ್

Recent Posts

ಸಿಇಸಿ ಜ್ಞಾನೇಶ್​ ಕುಮಾರ್​ರನ್ನು ಹುದ್ದೆಯಿಂದ ಕೆಳಗಿಳಿಸುವ ನಿರ್ಣಯ; ಕೇರಳಂ ವಿಧಾನಸಭೆಯಲ್ಲಿ ಪಾಸ್​​

ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್‌…

17 hours ago

ಧನಂಜಯ ಆನೆಯ ಹೆಗಲಿಗೆ ಶ್ರೀರಂಗಪಟ್ಟಣ ದಸರಾ ಜವಾಬ್ದಾರಿ

ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…

19 hours ago

ದಸರಾ ಗಜಪಡೆಗೆ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು…

19 hours ago

ಸತ್ಯಕ್ಕೆ ಅಂತಿಮ ಗೆಲುವಾಗಲಿದೆ: ರಾಹುಲ್‌ ಗಾಂಧಿ

ನವದೆಹಲಿ: ಸತ್ಯಕ್ಕೆ ಅಂತಿಮ ಗೆಲುವಾಗಲಿದೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್…

19 hours ago

ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್

ಮೈಸೂರು: ಬಹುಭಾಷಾ ನಟ ಪ್ರಭುದೇವ್‌ ಅವರು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ನಾಳೆ…

19 hours ago

ಹೆಣ ಹಾಕಬೇಕಿದ್ದು ತೋಪಿನಲ್ಲಿ; ಬಿಸಾಕಿದ್ದು…?

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…

23 hours ago