Andolana originals

ಕಾಡಿನಲ್ಲಿ ಶರಣ್ಯಳನ್ನು ಹುಡುಕಿದ್ದು ಯಾರು?

ಅಬ್ದುಲ್ ರಶೀದ್

ಕೊಡಗಿನ ಪರಿಶಿಷ್ಟ ಅಡಿಯ ಜನಾಂಗದ ಕೂಲಿ ಕಾರ್ಮಿಕ ಯುವಕರಾದ ಸುಬ್ರಮಣಿ, ರಾಜು, ಅಯ್ಯಪ್ಪ, ಮಣಿಕಂಠ, ಮಣಿ ಸಾಹಸಗಾಥೆ

ಮೈಸೂರು: ಕೊಡಗಿನ ದುರ್ಗಮ ತಡಿಯಾಂಡಮೋಳ್ ಪರ್ವತ ಪ್ರದೇಶದಲ್ಲಿ ಮೂರು ಇರುಳು ನಾಲ್ಕು ಹಗಲು ಕಳೆದಿದ್ದ ಕೇರಳದ ಅತಿ ಸಾಹಸಿ ಯುವತಿ ಶರಣ್ಯ ಪತ್ತೆಯಾಗಿದ್ದು ಇವತ್ತಿನ ದೊಡ್ಡ ಸುದ್ದಿ. ಅದರಷ್ಟೇ ಮುಖ್ಯವಾದ ಸುದ್ದಿ ಕೊಡಗು ಕೇರಳ ಗಡಿಯ ಈ ಕಾಡು ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಅಡಿಯಾಳುಗಳಾಗಿ ಬದುಕುತ್ತಿರುವ ಪರಿಶಿಷ್ಟ ಅಡಿಯ ಪಂಗಡಕ್ಕೆ ಸೇರಿದ ಐವರು ಯುವಕರು. ಯಾಕೆಂದರೆ ಇವರೇ ಈ ಯುವತಿಯನ್ನು ಹುಡುಕಿದವರು.

ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಶ್ವಾನದಳ, ಡ್ರೋನುಗಳು ಇವು ಯಾವುವೂ ಕಂಡು ಹಿಡಿಯದ ಈ ಪ್ರದೇಶವನ್ನು ಜಾಲಾಡಿ ಈ ಯುವತಿಯ ಸುಳಿವು ಕಂಡು ಹುಡುಕಿದವರು ಕೊಡಗು ನಾಪೋಕ್ಲು ಬಳಿಯ ಕಕ್ಕಬೆ ಕಬ್ಬಿನಕಾಡು ಪ್ರದೇಶದ ಕೆರೆತಟ್ಟು ಪೈಸಾರಿ ಕಾಲೋನಿಯಲ್ಲಿ ಬಡತನ ದಲ್ಲಿ ಬದುಕುತ್ತಿರುವ ಅಡಿಯ ಜನಾಂಗದ ಯುವಕರಾದ ಸುಬ್ರಮಣಿ, ರಾಜು, ಅಯ್ಯಪ್ಪ, ಮಣಿಕಂಠ ಮತ್ತು ಮಣಿ ಎಂಬವರು.

ಆದರೆ ಮಾಧ್ಯಮಗಳಲ್ಲಿ, ಸರ್ಕಾರಿ ಪ್ರಕಟಣೆಯಲ್ಲಿ ಈ ಜನಾಂಗದ ಮತ್ತು ಈ ಯುವಕರ ಪ್ರಸ್ತಾಪವೇ ಇಲ್ಲ. ಯಾಕೆಂದರೆ ಹೊರಗಿನ ಪ್ರಪಂಚಕ್ಕೆ ಇವರು ಅಸ್ಥಿತ್ವವೇ ಇಲ್ಲದ ಅನಾಮಿಕರು. ಯಾವುದೇ ಲಾಭದ ಆಸೆಯಿಲ್ಲದೆ, ಯಾರದೇ ಬೆಂಬಲವೂ ಇಲ್ಲದೆ ತಮ್ಮ ಊರಿನ ಗ್ರಾಮದೇವತೆಗಳನ್ನು ಪೂಜಿಸಿ ಬೆಳಿಗ್ಗೆ ಕಾಡಿಗೆ ಹೊರಟ ಇವರು ಸಂಜೆ ವಾಪಾಸು ಬಂದಿದ್ದು ಶರಣ್ಯಳ ಜೊತೆಗೆ. ತಮ್ಮ ಈ ಸಾಧನೆಯ ಕುರಿತು ಯಾವುದೇ ಹಮ್ಮು ಇಲ್ಲದೆ ಯಾವ ಪ್ರತಿಫಲವನ್ನೂ ಕೇಳದೆ ಕಾಲೋನಿಯ ತಮ್ಮ ಬಿಡಾರಗಳಿಗೆ ಮರಳಿದ ಇವರು ಮಾತನಾಡಿದ್ದು ಇಲ್ಲಿದೆ.

‘ತಡಿಯಂಡಮೋಳು ಬೆಟ್ಟದ ಕೆಳಗೆ ಪಾಂಡನಮಲೆ ಕಾಡಿನ ತಗ್ಗಿನಲ್ಲಿ ಬಂಡೆಯ ಮೇಲೆ ಶರಣ್ಯ ಕಂಡಳು. ಈ ಜಾಗ ನಮಗೆ ಹೇಗೆ ಗೊತ್ತಾಯ್ತು ಅಂದರೆ ನಾವು ತುಂಬಾ ದಿನದಿಂದ ಜೇನು ತೆಗೆಯೋಕೆ ಆಗಾಗ ಬೆಟ್ಟಕ್ಕೆ ಹೋಗುತ್ತಿರುತ್ತೇವೆ. ಅಲ್ಲಿಗೆ ಹೋಗಿ ಶರಣ್ಯ ಎಂದು ನಾವು ಕೂಗಿದೆವು. ಆಗ ನಮಗೆ ಒಂದು ಧ್ವನಿ ಕೇಳಿಸಿತು. ಆ ಧ್ವನಿ ಸರಿ ಸುಮಾರು ೭ ಕಿಮೀ ದೂರದಿಂದ ಬಂದ ಧ್ವನಿ ಆಗಿತ್ತು. ಆಗ ನಾವು ಅರ್ಧ ಗಂಟೆ ನಡೆದು ಶರಣ್ಯ ಕುಳಿತಿದ್ದ ಬಂಡೆಯ ಬಳಿ ತಲುಪಿದೆವು’. ‘ನಮ್ಮನ್ನ ಕಂಡಾಕ್ಷಣ ಆಕೆಯ ಮುಖದಲ್ಲಿ ನಗು ಕಂಡಿತು. ಕಳೆದ ನಾಲ್ಕು ದಿನಗಳಿಂದ ಊಟ ಇರದೇ ಬರೀ ನೀರಲ್ಲೇ ಇದ್ದರು. ನಾವು ನೀರು ಬಿಸ್ಕತ್ತು ಕೊಟ್ಟೆವು’.

ನಿಮಗೆ ಯಾಕೆ ಶರಣ್ಯರನ್ನ ಹುಡುಕಬೇಕು ಅನಿಸಿತು…? ‘ನಮ್ಮ ಊರಿಂದ ಶರಣ್ಯ ಇದ್ದ ಜಾಗ ೧೦ ಕಿ.ಮೀ. ದೂರ ಇದೆ. ಒಂದು ಹುಡುಗಿ ಕಾಣೆಯಾಗಿದ್ದಾಳೆ ಅಂದಾಗ ನಮ್ಮ ಮನಸ್ಸಿಗೆ ತುಂಬಾ ನೋವಾಯಿತು. ಆಕೆ ಕೂಡ ನನ್ನ ತಂಗಿನೋ, ಅಕ್ಕನೋ ಎಂದು ಭಾವಿಸಿ ನಮಗೆ ಯಾವುದೇ ಹಣ ಹಾಗೂ ಇತರೆ ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ನಮ್ಮನೆ ಹುಡುಗಿ ತಪ್ಪಿಸಿಕೊಂಡಿದ್ದರೆ ಎಂಬ ಭಾವದಿಂದ ಹುಡುಕಲು ಹೋದೆವು’.

‘ಶರಣ್ಯ ಸಿಕ್ಕಿದಾಗ ಮೊದಲಿಗೆ ನಾವು ಅವಳ ಕಣ್ಣಲ್ಲಿ ಕಣ್ಣೀರು ಕಂಡೆವು. ನಮಗೂ ಕಣ್ಣೀರು ಬಂತು. ವಾಪಸ್ಸು ಬರುವ ದಾರಿಯಲ್ಲಿ ಆನೆ ಹಿಂಡುಕೂಡ ಇತ್ತು. ಆನೆ ದಾರಿ ತಪ್ಪಿಸಿ ಕಾಡಿನಿಂದ ಮೇಲೆ ಬಂದೆವು. ಯಾವುದೇ ತೊಂದರೆ ಆಗಲಿಲ್ಲ’.

‘ಕಾಡಿನ ಆ ಪ್ರದೇಶಕ್ಕೆ ವರ್ಷಕ್ಕೆ ಅಂದರೆ ಮೇ ತಿಂಗಳಲ್ಲಿ ಒಮ್ಮೆ ಒಂದು ವಾರ ಅಲ್ಲಿಗೆ ಹೋಗ್ತೀವಿ. ಹಾಗಾಗಿ ಈ ಕಾಡಿನ ಪ್ರದೇಶ ನಮಗೆ ಪರಿಚಯ. ಇಲ್ಲಿ ಆನೆ, ಹುಲಿ ಸೇರಿದಂತೆ ಅನೇಕ ಪ್ರಾಣಿಗಳಿವೆ. ಇಷ್ಟೆಲ್ಲಾ ಪ್ರಾಣಿಗಳು ಇದ್ದರೂ ಕೂಡ ಆಕೆ ಧೈರ್ಯವಾಗಿ ಇದ್ದಳು. ಆಕೆಗೆ ಯಾವುದೇ ಆಯಾಸ ಆಗಿರಲಿಲ್ಲ. ಆಕೆಗೆ ಇಲ್ಲಿಂದ ಹೊರಗೆ ಹೋಗ್ತೀನಿ ಅನ್ನುವ ಆಶಾಭಾವನೆ ಇರಲಿಲ್ಲ. ನಮ್ಮನ್ನ ನೋಡಿ ಆಕೆಗೆ ಭರವಸೆ ಬಂತು’. ‘ನಾವು ಬೆಳಿಗ್ಗೆ ಹೋಗುವಾಗ ನಮ್ಮ ದೇವರಿಗೆ ಪ್ರಾರ್ಥನೆ ಮಾಡಿ ಕಾಲಿಟ್ಟಿದ್ದು, ನಮ್ಮ ತಂಡವೇ ಶರಣ್ಯರನ್ನ ಕಂಡು ಹಿಡಿದಿದ್ದು. ಅರಣ್ಯ ಸಿಬ್ಬಂದಿ ಶರಣ್ಯನ್ನ ಕಂಡು ಹಿಡಿಯಲಿಲ್ಲ. ನಾವು ಶರಣ್ಯರನ್ನ ಪತ್ತೆ ಮಾಡಿದ್ದು, ನೋಡಿ ಸಾರ್, ಉಪಕಾರ ಮಾಡಿದರೆ ಹೀಗೆ ಆಗುತ್ತೆ. ನಿಜವಾಗಿ ಶರಣ್ಯರನ್ನ ಹುಡುಕಿದ್ದು ಹಾಡಿಯ ಜನಾಂಗದ ನಾವು. ಶರಣ್ಯರನ್ನ ಮೊದಲು ನೋಡಿದ್ದು ನಾವೇ, ಈಗ ಟಿವಿಯಲ್ಲಿ, ರೀಲಿನಲ್ಲಿ ನಮ್ಮ ಜನಾಂಗದ ಹೆಸರಿನ ಬದಲು ಇನ್ನೊಂದು ಜನಾಂಗದ ಹೆಸರು. ನಮಗೆ ಈ ಕುರಿತು ಬೇಜಾರಿಲ್ಲ. ನಮಗೆ ಹೆಸರೂ ಬೇಡ, ಏನೂ ಬೇಡ. ಆಕೆ ಸಿಕ್ಕಿದ್ದೇ ಸಂತೋಷ. ಕಾಡಿನಲ್ಲಿ ಆಕೆಯ ಪರಿಸ್ಥಿತಿ ಯೋಚಿಸಿ ನಮಗೆ ನಿನ್ನೆ ರಾತ್ರಿಯೆಲ್ಲ ನಿದ್ದೆ ಬಂದಿರಲಿಲ್ಲ. ಇವತ್ತು ನಾವು ಸಮಾಧಾನದಲ್ಲಿ ನಿದ್ದೆ ಮಾಡುತ್ತೇವೆ. ನಮಗೆ ಅದೇ ತೃಪ್ತಿ, ಬೇರೆ ಏನೂ ಬೇಡ’ ಎಂದ ಅಯ್ಯಪ್ಪ.

ಟೆಕ್ಕಿ ಜಿ.ಎಸ್.ಶರಣ್ಯ ಕೊನೆಗೂ ರಕ್ಷಣೆ: 

ಮಡಿಕೇರಿ: ಮಡಿಕೇರಿಯ ತಡಿಯಾಂಡ ಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ದಾರಿ ತಪ್ಪಿ ಏ.೨ರಂದು ನಾಪತ್ತೆಯಾಗಿದ್ದ ಕೇರಳದ ಐಟಿ ಉದ್ಯೋಗಿ ಜಿ.ಎಸ್.ಶರಣ್ಯ (೩೬) ಕೊನೆಗೂ ಪತ್ತೆಯಾಗಿದ್ದಾರೆ. ಕೊಡಗಿನ ಪರಿಶಿಷ್ಟ ಅಡಿಯ ಜನಾಂಗದ ಕೂಲಿ ಕಾರ್ಮಿಕ ಯುವಕರಾದ ಸುಬ್ರಮಣಿ, ರಾಜು, ಅಯ್ಯಪ್ಪ, ಮಣಿಕಂಠ, ಮಣಿ ಅವರು ಶರಣ್ಯ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ದಿನಗಳಿಂದ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ | ರಾಜ್ಯ ವಿಧಾನ ಮಂಡಲ ಅಧಿವೇಶನ ಸದ್ಬಳಕೆಗೆ ದಾರಿ ಯಾವುದಯ್ಯ!?

ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…

20 hours ago

ಓದುಗರ ಪತ್ರ | ಹಿಂದಿ ಶಿಕ್ಷಕರ ನೇಮಕಾತಿ ಏಕಿಲ್ಲ?

15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಶಿಕ್ಷಕರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಇದು ಸಂವಿಧಾನ ಬಾಹಿರ ನಡೆ. ಇದು ಹಿಂದಿ…

21 hours ago

ಓದುಗರ ಪತ್ರ | ಕನ್ನಡ ಚಿತ್ರ; ಟಿಕೆಟ್‌ಗಳಲ್ಲಿ ಆಂಗ್ಲ ಹೆಸರು !

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ... ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್‌ನಲ್ಲಿ ಚಿತ್ರದ…

21 hours ago

ಓದುಗರ ಪತ್ರ | ಮತದಾರರ ಕರಡು ಪಟ್ಟಿಯ ತಪ್ಪುಗಳನ್ನು ಸರಿಪಡಿಸಿ

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್-೨೬) ಕಾರ್ಯ ಮುಗಿದು ಇದೀಗ ಕರಡು ಪಟ್ಟಿ ಬಿಡುಗಡೆಯಾಗಿದೆ. ಎಸ್‌ಐಆರ್ ಬಗ್ಗೆ ಹಲವಾರು ಅನುಮಾನ…

21 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಕಳಚಿದ ಚಲನಚಿತ್ರ ಪತ್ರಿಕೋದ್ಯಮದ ಹಿರಿಯ ಕೊಂಡಿ ಶ್ರೀಕೃಪಾ

ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಸಂದರ್ಭ. ಕನ್ನಡ ಚಿತ್ರರಂಗದ ಕಡೆ ಭಾರತದ ಉಳಿದ ಚಿತ್ರೋದ್ಯಮಗಳು ತಿರುಗಿ ನೋಡುವ ಬೆಳವಣಿಗೆ.…

21 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 28  ಶುಕ್ರವಾರ

21 hours ago