karnataka flag
ಕನ್ನಡ ಮನೆಮಾತು ಅಲ್ಲದವರ ಎದೆ ತುಂಬಿದ ಮಾತುಗಳು
ನನಗೆ ಕನ್ನಡ ಅಡಗುದಾಣವೂ ಹೌದು, ಶೋಧನೆಯ ನಿವೇದನೆಯ ತಾಣವೂ ಹೌದು…:
ಡಾ.ಕವಿತಾ ರೈ
ನನಗೆ ಸ್ಪಷ್ಟವಾಗಿ ಕನ್ನಡ ಮಾತನಾಡಲಯ ಕಲಿಸಿಕೊಟ್ಟಿದ್ದು ಶಾಲೆ ಮತ್ತು ಮನೆಯ ಪರಿಸರ. ಸಾಹಿತ್ಯದತ್ತ ಅಷ್ಟಾಗಿ ಒಲವಿರದಿದ್ದ ದಿನಗಳಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದ ನನ್ನಜ್ಜ ನಿಂಗಪ್ಪ ರೈಗಳು ಸಂಪಾಜೆ, ಸುಳ್ಯ, ಪುತ್ತೂರು ಕಡೆಗಳಲ್ಲಿತಾಳಮದ್ದಳೆ, ಯಕ್ಷಗಾನ ಇದ್ದರೆ ನನ್ನನ್ನೂ ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ನನಗೆ ಕನ್ನಡ ಪದಭಂಡಾರದ ಪರಿಚಯ ಇನ್ನಷ್ಟು ಆಯಿತು.
ಆರನೇ ತರಗತಿಯಲ್ಲಿ ಓದುತ್ತಿದ್ದ ದಿನಗಳಲ್ಲಿ ಒಂದು ಸಲ ಶಾಲಾ ವಾರ್ಷಿಕೋ ತ್ಸವಕ್ಕೆ ಕನ್ನಡ ಕವಿತೆ ಸ್ಪರ್ಧೆ ಏರ್ಪಡಿಸಿದ್ದರು. ನನ್ನ ಮನೆಮಾತು ತುಳು. ಕೊಡಗಿನ ಮಡಿಕೇರಿಯಲ್ಲಿ ಹುಟ್ಟಿದ ಕಾರಣ ಕೊಡವ ಭಾಷೆ ಮಾತನಾಡುವ ಸ್ನೇಹಿತರು ಜಾಸ್ತಿಯಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಆಸೆಯಲ್ಲಿಅಜ್ಜನ ಬಳಿ ಕವಿತೆ ಬರೆಯಲು ಹೇಳಿಕೊಡುವಂತೆ ಕೇಳಿದೆ.
‘ನಿನ್ನ ಹೆಸರೇ ಕವಿತಾ ಆಗಿರುವಾಗ ಸಹಜವಾಗಿ ಬರೆಯಬಲ್ಲೆ. ಕಷ್ಟವೇನಿಲ್ಲ, ಮನಸ್ಸಿನಲ್ಲಿ ಮೂಡಿದ್ದನ್ನು ತಿರುಗಾಮುರುಗಾ ಬರೆದರಾಯಿತು‘ ಎಂದು ಹೇಳಿ ತಲೆಗೆ ಹುಳ ಬಿಟ್ಟರು.
‘ನನ್ನ ಅಪ್ಪನಿಗೆ ಟೀ ಇಷ್ಟ ಅಮ್ಮನಿಗೆ ಕಾಫಿ ಇಷ್ಟ ನನಗೋ! ಕಾಟೀ ಇಷ್ಟ’ ಕಾಫಿ ಮತ್ತು ಟೀ ಸೇರಿಸಿ ಒಂದು ಕವಿತೆ ಬರೆದು ಅಜ್ಜನ ಮುಂದಿಟ್ಟೆ. ಓದಿದ ಅಜ್ಜ ‘ಇನ್ನೆಂದೂ ನೀನು ಕವಿತೆ ಬರೆಯಬೇಡ’ ಎಂದುಬಿಟ್ಟರು. ಕಾರಣ! ಸ್ಥಳೀಯ ಭಾಷೆಯಲ್ಲಿ ‘ಕಾಟೀ’ ಎಂದರೆ ಶರಾಬು ಎಂಬುದಾಗಿತ್ತು. ಹೈಸ್ಕೂಲ್ ಓದುವ ಸಮಯದಲ್ಲಿ ಅಜ್ಜ ತೀರಿಕೊಂಡರು. ಅವರನ್ನು ನಿರಾಸೆಗೊಳಿಸಿದೆನೆಂಬ ನೋವು ಯಾವಾಗಲೂ ನನ್ನನ್ನು ಕಾಡುತ್ತಿತ್ತು. ಹತ್ತನೇ ತರಗತಿಯಲ್ಲಿದ್ದಾಗ ಕೊಡವ ಲೇಖಕರ, ಕಲಾವಿದರ ಬಳಗ ಏರ್ಪಡಿಸಿದ ಕವನ ಸ್ಪರ್ಧೆಗೆ ಗಂಭೀರವಾದ ಕವನ ಬರೆಯಲು ಪ್ರೇರಣೆಯಾಯಿತು.
ನನ್ನದು ಅಂತರ್ಮುಖಿ ಸ್ವಭಾವವಾದುದರಿಂದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾಭ್ಯಾಸದ ಸಮಯದಲ್ಲಿ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡೆ. ನನ್ನ ಜಗತ್ತನ್ನು ವಿಸ್ತಾರಗೊಳಿಸಿದ್ದು ಕನ್ನಡ ಸಾಹಿತ್ಯ. ಅದರೊಳಗೆ ನಾನು ಮೂಕಿಯೂ ಕಿವುಡಿಯೂ ಅಲ್ಲ. ಹೇಳುವುದನ್ನು ಹೇಳುವುದಕ್ಕೆ ಕನ್ನಡದಲ್ಲಿ ತುಂಬಾ ಸುಲಭ. ನನ್ನೊಳಗಿನ ಗ್ರಹಿಕೆಯ ಜಡತ್ವವನ್ನು ಕನ್ನಡವು ನಿವಾರಿಸಿದೆ. ನನಗೆ ಕನ್ನಡ ಅಡಗುದಾಣವೂ ಹೌದು, ಶೋಧನೆಯ ನಿವೇದನೆಯ ತಾಣವೂ ಹೌದು. ನಾಚಿಕೆ, ನಿರಾಕರಣೆ, ದಿಗ್ಭ್ರಮೆ, ಕನಸು, ಅವಮಾನ, ತಿಳಿಯದೇ ಬಿದ್ದ ಹೊಡೆತ, ಅವಕಾಶದ ನಿಭಾಯಿಸುವಿಕೆ ಮತ್ತು ವಿವೇಕದ ಜತನ ಹೀಗೆ ಎಲ್ಲವನ್ನೂ ಅದು ಕಲಿಸಿಕೊಟ್ಟಿದೆ.
ನಾನು ನಾಲ್ಕೈದು ಭಾಷೆಯನ್ನು ಮಾತನಾಡಬಲ್ಲೆನಾದರೂ ಆಳವಾದ ಸಂವೇದನೆಯ ದಕ್ಕುವಿಕೆ ಸಿಗುವುದು ಕನ್ನಡ ಭಾಷೆಯಲ್ಲಷ್ಟೇ. ಆವತ್ತೂ ಇವತ್ತೂ ಎಂದೆಂದಿಗೂ ಈ ಎಲ್ಲ ಕಾರಣಗಳಿಗಾಗಿ ಬೇಂದ್ರೆಯವರ ‘ಕನ್ನಡವು ಕನ್ನಡವ ಕನ್ನಡಿಸುತ್ತಿರಬೇಕು’ ಎಂಬ ಸಾಲನ್ನು ಬಹಳ ಇಷ್ಟಪಡುತ್ತೇನೆ.
ಡಾ.ಕವಿತಾ ರೈ (ಮಾತೃಭಾಷೆ ತುಳು) ಲೇಖಕಿ ಮತ್ತು ಕನ್ನಡ ಪ್ರಾಧ್ಯಾಪಕಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು
ನಾನು ಮಲಯಾಳಿ: ಉಸಿರಾಡುವುದು ಕನ್ನಡ
ಮೀನಾ ಗೋಪಾಲಕೃಷ್ಣ
ನಾವು ಮಲಯಾಳಿಗರಾದರೂ ಅಜ್ಜ ಬಂದು ನೆಲೆಸಿದ್ದು ಕರ್ನಾಟಕದಲ್ಲಿ. ನಾನು ಈ ಮಣ್ಣಲ್ಲಿ ಹುಟ್ಟಿದ ಕಾರಣ ಕನ್ನಡದಲ್ಲೇ ಕಲಿಯಬೇಕು ಎಂಬುದು ನನ್ನಜ್ಜನ ಆಸೆ ಯಾಗಿತ್ತು. ಕನ್ನಡವೇ ನನ್ನ ಮಾತೃಭಾಷೆಯಾಗಬೇಕು ಎಂಬ ಕಾರಣಕ್ಕೆ ನನ್ನನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದರು. ಅಜ್ಜನೇ ನನ್ನ ಕನ್ನಡ ಪ್ರೀತಿಗೆ ಮೊದಲ ಪ್ರೇರಣೆ. ಅಮ್ಮನೂ ಮೂಲ ಮಲಯಾಳಿಯಾಗಿದ್ದರೂ ಕನ್ನಡ ಓದಿ, ಬರೆಯುತ್ತಿದ್ದರು. ಮನೆಯಲ್ಲಿ ಸಾಕಷ್ಟು ಕನ್ನಡ ಕಾದಂಬರಿಗಳಿದ್ದವು. ಅಮ್ಮನೇ ಕನ್ನಡ ಇಷ್ಟು ಚೆನ್ನಾಗಿ ಓದಬಲ್ಲಳು, ಬರೆಯ ಬಲ್ಲಳು ಎಂದಾದ ಮೇಲೆ ನನಗ್ಯಾಕೆ ಆಗಬಾರದು ಎಂಬ ಹಠವೂ ಹುಟ್ಟಿತು. ಕನ್ನಡಕ್ಕೆ ನಾನು ಹೆಚ್ಚು ಹತ್ತಿರವಾಗಿದ್ದು ಪ್ರೌಢಶಾಲೆಯಲ್ಲಿ. ವ್ಯಾಕರಣ ಎಂದರೆ ಬರೀ ಪರೀಕ್ಷೆಗಷ್ಟೇ ಎಂದು ಓದುತ್ತಿದ್ದವಳು ವ್ಯಾಕರಣದತ್ತ ಒಲವು ತೋರಿದ್ದು ಕನ್ನಡ ಶಿಕ್ಷಕರಾಗಿದ್ದ ಶಿವಮೂರ್ತಿ ಸರ್ ಅವರಿಂದ.
ವ್ಯಾಕರಣ, ಸಮಾಸ, ಸಂಧಿಗಳ ಬಗ್ಗೆ ಎಷ್ಟು ಚೆನ್ನಾಗಿ ಹೇಳುತ್ತಿದ್ದರೆಂದರೆ ಕನ್ನಡ ಕುರಿತ ನನ್ನ ಆಸಕ್ತಿ ಬೆಳೆಯಲಾರಂಭಿಸಿತು. ಹಳೆಗನ್ನಡ ವನ್ನು ಸ್ಪಷ್ಟವಾಗಿ ಓದಲು ಕಲಿತೆ. ಹತ್ತನೇ ಕ್ಲಾಸ್ ಮುಗಿಯುತ್ತಿದ್ದಂತೆ ಹೆಣ್ಮಕ್ಳನ್ನು ಮದುವೆ ಮಾಡಿ ಕಳುಹಿಸುತ್ತಿದ್ದ ಕಾಲ ಅದು. ಬರೀ ಕನ್ನಡವಷ್ಟೇಗೊತ್ತಿದ್ದರೆ ಮದುವೆಯಾದ ಮೇಲೆ ಕಷ್ಟವೆಂದು ಕೇರಳದಲ್ಲಿ ಓದು ಮುಂದುವರಿಸಲು ಮನೆಯಲ್ಲಿ ತೀರ್ಮಾನಿಸಿದರು. ನಾನು ಕೇರಳಕ್ಕೆ ಹೋಗುವ ಸಂದರ್ಭ ದಲ್ಲಿ ಸರ್ ರೆದುಕೊಟ್ಟ ಪತ್ರದಲ್ಲಿದ್ದ ಮೊದಲ ಸಾಲು ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ಕನ್ನಡವಾಗಿರು’. ಆ ಸಾಲು ನನ್ನನ್ನು ಇನ್ನಷ್ಟು ಪ್ರೇರೇಪಿಸಿತು. ಕೇರಳದಲ್ಲಿ ಕನ್ನಡದ ರೇಡಿಯೋ ಸ್ಟೇಷನ್ ಸಿಗುತ್ತದೆಯೇ ಎಂದು ಹುಡುಕಾಡಿದಾಗ ‘ಆಕಾಶವಾಣಿ ಧಾರವಾಡ’ ಮನೆಯ ಒಂದು ಮೂಲೆಯಲ್ಲಿ ನಿಂತರೆ ಕೇಳಿಸುತ್ತಿತ್ತು. ಅಲ್ಲಿ ನಿಂತು ಕನ್ನಡದ ಕಾರ್ಯಕ್ರಮಗಳನ್ನು ಕೇಳುತ್ತಿದ್ದೆ.
ಮಹಲಿಂಗ ರಂಗರ ‘ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ ತಿಳಿದು……’ ಎಂಬ ಸಾಲಿನಂತೆ ಕನ್ನಡವೇ ನನ್ನನ್ನು ಸೆಳೆಯುತ್ತಿತ್ತು. ಮನೆಯಿಂದ ಹೊರಹೋದಾಗಲೇ ನಮ್ಮವರ ಬೆಲೆ ತಿಳಿಯುವುದು ಎಂಬ ಮಾತು ನಿಜವೆನ್ನಿಸಿತು. ಕೇರಳದಲ್ಲಿದ್ದರೂ ಮನಸ್ಸು ಕನ್ನಡದೊಳಗೆ ಸೇರಿಹೋಗಿತ್ತು. ಮಲಯಾಳಂ ಓದುವುದು, ಬರೆಯುವುದು ಕಷ್ಟವಾದರೂ ಕಲಿತೆ. ಆದರೆ, ಯೋಚನೆಯೇ ಬೇರೆ ಮಾತೇ ಬೇರೆ ಎಂದೆನ್ನಿಸಿ ಅತ್ತಿದ್ದೆ. ಕೇರಳದಲ್ಲಿ ನನ್ನ ಮಾವ ಮಲಯಾಳಂ ಶಿಕ್ಷಕರಾಗಿದ್ದರು. ಅವರಲ್ಲಿ ಭಾಷೆಯ ಕುರಿತಾಗಿ ಚರ್ಚಿಸುತ್ತಿದ್ದ ಕಾರಣ, ನನ್ನ ಕನ್ನಡ ಪ್ರೀತಿ ಕಂಡು ‘ಈಕೆಗೆ ಕನ್ನಡದಲ್ಲಿ ಬಹಳ ಆಸಕ್ತಿಯಿದೆ. ಇವಳು ಅಲ್ಲೇ ಓದಿದರೆ ಒಳ್ಳೆಯದು’ ಎಂದಾಗ ಖುಷಿಪಟ್ಟೆ. ಧಾರವಾಡ ಆಕಾಶವಾಣಿಯಲ್ಲಿ ಒಮ್ಮೆ ‘ತಾಯೆ ಬಾರೆ ಮೊಗವ ತೋರೆ’ ಹಾಡು ಕೇಳಿದಾಗ ‘ದೇಶಪ್ರೇಮ ಹಾಗೂ ನಾಡಪ್ರೇಮ ಯಾವಾಗ್ಲೂ ಇರ್ಬೇಕು’ ಎಂಬ ಅಜ್ಜನ ಮಾತು ನೆನಪಾಗಿ ರೋಮಾಂಚನವಾಯಿತು. ಹೀಗೆ ಹೆಚ್ಚೆಚ್ಚು ಕನ್ನಡದತ್ತ ಒಲವು ಮೂಡಿತು.
ಪದವಿ ಮುಗಿಸಿದ ಮೇಲೆ ಆಕಾಶವಾಣಿಯಲ್ಲಿ ತಾತ್ಕಾಲಿಕಉದ್ಘೋಷಕಿಯಾಗಿ ಸೇರಿದ ನಂತರ ನನ್ನ ಕನ್ನಡ ಜ್ಞಾನ ಇನ್ನಷ್ಟು ಹೆಚ್ಚುತ್ತಾ ಹೋಯಿತು. ಗೂಗಲ್, ಚಾಟ್ ಜಿ.ಪಿ.ಟಿ. ಇತ್ಯಾದಿಗಳಿಲ್ಲದ ಆಗಿನ ದಿನಗಳಲ್ಲಿ ಓದಿನಿಂದಲೇ ಮಾಹಿತಿ ಕಲೆಹಾಕಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದುದರಿಂದ ಕನ್ನಡದ ಒಡನಾಟ ಬೆಳೆಯಿತು. ತಮಾಷೆಯೆಂದರೆ, ‘ಈಕೆ ಮಲಯಾಳಿ, ಓದುವುದು ತಮಾಷೆಯಾಗಿರುತ್ತೆ’ ಅಂಥ ನನ್ನನ್ನು ದೂರದರ್ಶನದಲ್ಲಿ ವಾರ್ತಾವಾಚಕಿಯಾಗಿ ಆಯ್ಕೆ ಮಾಡಿದರು. ಆದರೆ ನನ್ನ ಭಾಷಾ ಸ್ಪಷ್ಟತೆ ಅವರ ನಿರೀಕ್ಷೆಯನ್ನು ಸುಳ್ಳಾಗಿಸಿತು. ನನ್ನ ‘ಮಾತೃ’ವಿನ ಭಾಷೆ ಮಲಯಾಳಂ, ಆದರೆ ನನ್ನ ಮಾತೃಭಾಷೆ ಕನ್ನಡ. ಎಲ್ಲೇ ಹೋದರೂ ಕನ್ನಡ ಬರೆಹ ಕಂಡರೆ ಪುಳಕಿತಳಾಗುತ್ತೇನೆ. ಕನ್ನಡ ನನಗೆ ಬಹಳಷ್ಟುಕೊಟ್ಟಿದೆ. ಕನ್ನಡದಿಂದ ಕನ್ನಡದಲ್ಲಿ ತುಂಬಾ ಕಲಿತಿದ್ದೇನೆ, ಕಲಿಯುತ್ತಿದ್ದೇನೆ.
ಮೀನಾ ಗೋಪಾಕೃಷ್ಣ (ಮಾತೃಭಾಷೆ ಮಲಯಾಳಂ), ರೇಡಿಯೋ ಉದ್ಘೋಷಕಿ ಮತ್ತು ನಿರೂಪಕಿ, ಮೈಸೂರು
ತವರಿಲ್ಲದ ನನಗೆ ತಾಯಿ ಮಡಿಲು ಕನ್ನಡ
ಕೆ.ಸೆಲ್ವಿ ಗೌಡ
ನನ್ನ ಮಾತೃಭಾಷೆ ತಮಿಳು. ಆದರೆ ನಾನು ಓದಿದ್ದು, ಬದುಕಿದ್ದು, ಉಸಿರಾಡಿದ್ದು ಎಲ್ಲವೂ ಕನ್ನಡದಲ್ಲಿಯೆ. ಯಾವುದೇಪರಿಸ್ಥಿತಿಯನ್ನು ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿಸಿದ್ದು ಕನ್ನಡ. ನಾವು ಮೂಲತಃ ತಮಿಳುನಾಡಿನವರಾದರೂ ನಾನು ಹುಟ್ಟಿದ್ದು ಕರ್ನಾಟಕದಲ್ಲಿ. ನನ್ನ ಸುತ್ತಮುತ್ತ ಇದ್ದವರೆಲ್ಲರೂ ಕನ್ನಡದವರೇ. ಐದನೇ ತರಗತಿಗೆ ಬರುವವರೆಗೂ ತಮಿಳು ಎಂಬುದೊಂದು ಭಾಷೆಯೆಂಬುದೇ ತಿಳಿದಿರಲಿಲ್ಲ. ಮಾತೃಭಾಷೆಯಾದರೂ ಮಾತನಾಡಲು ಗೊತ್ತಿರಲಿಲ್ಲ. ನಂತರ ಮನೆಯಲ್ಲಿ ಕಲಿಸಿದರೂ ಇಂದಿಗೂ ತಮಿಳು ನನ್ನ ಪಾಲಿಗೆ ಹೆಚ್ಚುವರಿ ಭಾಷೆಯಾಗಿಯೇ ಉಳಿದಿದೆ. ಬರೆಹ, ಓದು ಎರಡಕ್ಕೂ ನನ್ನ ಮೊದಲ ಆದ್ಯತೇ ಕನ್ನಡ. ಸಣ್ಣವಳಿದ್ದಾಗ ಬಹಳಷ್ಟು ಕವಿತೆಗಳನ್ನು ಬರೆಯುತ್ತಿದ್ದೆ. ಈಗ ಬರೆಯುವ ಹವ್ಯಾಸದಿಂದ ದೂರವಾದರೂ ಓದಿನ ಪ್ರೀತಿ ಕಡಿಮೆಯಾಗಿಲ್ಲ. ಕನ್ನಡದಲ್ಲಿನ ಭಾಷಾ ಭೇದ ನನಗೆ ಗೊತ್ತಿಲ್ಲ. ಆಚ್ಚಕನ್ನಡಿಗರನ್ನು ಬಹಳ ಇಷ್ಟಪಡುತ್ತೇನೆ. ನನ್ನ ಟ್ರಕ್ ಸವಾರಿಯ ಕುರಿತು ‘ಹಳ್ಳಿಯಿಂದ ದಿಲ್ಲಿಗೆ ಹೋದ ಹುಡುಗಿ’ ಎಂಬ ವರದಿ ಮೊದಲು ಪ್ರಕಟವಾಗಿದ್ದು ಕನ್ನಡ ಪತ್ರಿಕೆಯಲ್ಲಿ. ಇತ್ತೀಚೆಗೆ ಬಂದ ನನ್ನ ಬಗೆಗಿನ ಕಿರುಚಿತ್ರದಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದೇನೆ. ನಂತರ ಅದು ಬೇರೆ ಭಾಷೆಗಳಿಗೆ ಡಬ್ಬಿಂಗ್ ಆಗಿದೆ. ತಿಳಿಯದ ಭಾಷೆಯಲ್ಲಿ ಸಾವಿರಸಲ ಹೇಳುವುದಕ್ಕಿಂತ ತಿಳಿ ಯುವ ಭಾಷೆಯಲ್ಲಿಯೇ ಒಂದ್ಸಲ ಹೇಳುವುದು ಸುಲಭ. ಈಗ ತಮಿಳುನಾಡಿನಲ್ಲಿ ನೆಲೆಸಿದ್ದರೂ ತವರಿಲ್ಲದ ನನಗೆ ತಾಯಿ ಮಡಿಲು ಮೈಸೂರು. ನನ್ನ ಸ್ನೇಹಿತರಿರುವ ಮೈಸೂರು ನೆನಪಾದಾಗೆಲ್ಲ ಕಾರು ಹತ್ತಿ ಹೊರಟುಬಿಡುತ್ತೇನೆ. ಹಿರಿಯರ ಮಾತೃ ಭಾಷೆ ತಮಿಳೆಂದು ಒಪ್ಪಿಕೊಳ್ಳುತ್ತೇನೆ. ಆದರೆ ನನಗೆ ‘ಕನ್ನಡವೇ ತಾಯ್ನುಡಿ. ನಾನು ಕನ್ನಡತಿ’
ಕೆ.ಸೆಲ್ವಿ ಗೌಡ (ಮಾತೃಭಾಷೆ ತಮಿಳು) ದೇಶದ ಮೊದಲ ಮಹಿಳಾ ಟ್ಯಾಕ್ಸಿ ಡೈವರ್ ಈಗ ನೆಲೆಸಿರುವುದು ತಮಿಳುನಾಡಿನ ಈರೋಡ್
ಆತ್ಮವ ಹಿಡಿದಿಡಲು ಇರುವುದು ಕನ್ನಡ
ಸುಧಾ ಆಡುಕಳ
ಪ್ರೌಢಶಾಲೆಯ ಕೊನೆಯ ವರ್ಷದಲ್ಲಿ ಅನಿವಾರ್ಯವಾಗಿ ಶಾಲೆಯನ್ನು ಬದಲಾಯಿಸಬೇಕಾಯಿತು. ಹೊಸಶಾಲೆಗೆ ಹೊಂದಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ಒಂದು ದಿನ ಅಟೆಂಡರ್ ಬಂದು, ‘ನಿಮ್ಮನ್ನು ಕನ್ನಡ ಸರ್ ಕರೆಯುತ್ತಿದ್ದಾರೆ’ ಎಂದರು. ತರಗತಿಯಲ್ಲಿರುವವರೆಲ್ಲರೂ ನನ್ನನ್ನು ಮಿಕದಂತೆ ನೋಡತೊಡಗಿದರು. ಯಾಕೆಂದರೆ ವಿದ್ಯಾರ್ಥಿಗಳ ಪಾಲಿಗೆ ಅವರು ಸಿಂಹಸ್ವಪ್ನರಾಗಿದ್ದರು. ಹೆದರುತ್ತಲೇ ಅವರ ಬಳಿಗೆ ಹೋದಾಗ ನಾನು ಬರೆದ ಕನ್ನಡ ಉತ್ತರ ಪತ್ರಿಕೆಯನ್ನು ನನ್ನೆದುರು ಹಿಡಿದು, ‘ನಿನ್ನನ್ನು ಏನೋ ಅಂದುಕೊಂಡಿದ್ದೆ. ನೀನು ನನ್ನನ್ನು ತೀರಾ ನಿರಾಸೆಗೊಳಿಸಿದೆ’ ಎಂದರು. ಕನ್ನಡ ಸರ್ ಕಟ್ಟುನಿಟ್ಟು ಎಂದು ಬೇರೆಯವರಿಂದ ಕೇಳಿದ್ದ ನಾನು ಪ್ರಶ್ನೆಗಳಿಗೆಲ್ಲ ಪುಸ್ತಕದಲ್ಲಿದ್ದ ವಾಕ್ಯಗಳನ್ನಷ್ಟೇ ಬರೆದು ಉತ್ತರಿಸಿದ್ದೆ. ‘ತ್ರಿಭಾಷಾ ಪಂಡಿತರ ಶಿಷ್ಯೆ ಹೀಗೆ ಬರೆದರೆ ಹೇಗೆ?’ ಎಂದು ಪ್ರಶ್ನಾರ್ಥಕವಾಗಿ ನನ್ನನ್ನು ನೋಡಿದರು. ನಾನು ಮೊದಲು ಓದುತ್ತಿದ್ದ ಶಾಲೆಯ ಕನ್ನಡ ಪಂಡಿತರು ಅವರಿಗೆ ಪರಿಚಿತರು ಎಂಬುದು ನನಗೆ ತಿಳಿಯಿತು. ನನಗೆ ಬೇಸರವಾಯಿತಾದರೂ ತರಗತಿಯಲ್ಲಿ ಎಲ್ಲರೆದುರು ಇದನ್ನೆಲ್ಲ ಹೇಳಿ ಹೀಯಾಳಿಸಲಿಲ್ಲವಲ್ಲ ಎಂಬ ಸಮಾಧಾನದಿಂದ ಹೊರಬಂದೆ.
ಮರುದಿನ ನಮಗೆ ಬಿ.ಎಂ.ಶ್ರೀ. ಅವರ ‘ಏನು ಸುಖಿಯೋ ತಾನು ಹುಟ್ಟಿನಲಿ ಕಲಿಕೆಯಲಿ?’ ಕವನವನ್ನು ಪಾಠಮಾಡಿ ಕವಿತೆಯ ಸಾರಾಂಶವನ್ನು ಬರೆದು ತರುವಂತೆ ಹೇಳಿದರು. ನಾನು ಹೆದರಿಕೆಯನ್ನೆಲ್ಲ ಬದಿಗಿಟ್ಟು ಮೊದಲಿನ ಶಾಲೆಯಲ್ಲಿ ಬರೆಯುವಂತೆ ನನ್ನದೇ ಮಾತಿನಲ್ಲಿ ಸಾರಾಂಶವನ್ನು ಬರೆದುಕೊಂಡು ಹೋಗಿ ಅವರ ಟೇಬಲ್ ಮೇಲಿಟ್ಟು ತರಗತಿಗೆ ನಡೆದೆ. ಕನ್ನಡ ಅವಧಿಯಲ್ಲಿ ತರಗತಿಗೆ ಬಂದ ಅವರ ಕೈಯಲ್ಲಿ ನನ್ನ ನೋಟ್ಸ್ ನೋಡಿ ನನ್ನ ಎದೆಬಡಿತ ಹೆಚ್ಚಾಯಿತು. ಅವರು ನಾನು ಬರೆದ ಸಾರಾಂಶವನ್ನು ಇಡಿ ತರಗತಿಗೆ ಓದಿ ಹೇಳಿ, ‘ಕವನದ ಆತ್ಮವನ್ನುಹಿಡಿದಿಡುವುದು ಎಂದರೆ ಇದು. ನಾನಿದನ್ನು ಮಾದರಿಯಾಗಿ ಇಟ್ಟುಕೊಳ್ಳುವೆ’ ಎಂದು ನನ್ನನ್ನು ನೋಡಿ ಹೇಳಿದರು. ಆ ಕ್ಷಣಕ್ಕೆ ಪುಸ್ತಕದ ಕನ್ನಡವೂ ನಾವು ಮನೆಯಲ್ಲಿ ಮಾತನಾಡುವ ಹವ್ಯಕ ಕನ್ನಡದಂತೆಯೇ ನನ್ನೆದೆಯ ಭಾಷೆ ಎನಿಸಿಬಿಟ್ಟಿತು. ನನ್ನೊಳಗಿನ ಭಾವಗಳಿಗೆ ಕನ್ನಡವು ಮಾಧ್ಯಮವಾಗಿ ಒದಗಿಬಂದಿತು.
ಸುಧಾ ಆಡುಕಳ (ಮಾತೃಭಾಷೆ ಹವ್ಯಕ) ಖ್ಯಾತ ಲೇಖಕಿ ಮತ್ತು ಗಣಿತ ಉಪನ್ಯಾಸಕಿ
ಮಹಾದೇಶ್ ಎಂ ಗೌಡ ಹನೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ…
ಮಹಾದೇಶ್ ಎಂ ಗೌಡ ಹನೂರು: ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ…
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…