ಕೀರ್ತಿ ಬೈಂದೂರು
ಅಂದು ಸಂಜೆಗತ್ತಲಿನಲ್ಲಿ ಅರಮನೆ ಸಂಗೀತವನ್ನೇ ಮೈಹೊದ್ದು ನಿಂತಿತ್ತು. ‘ಪ್ರೀಣಯಾಮೋ ವಾಸುದೇವಂ’ ಎಂದು ಕರ್ನಾಟಕ ವಾದ್ಯ ವೃಂದದ ಕಲಾವಿದರೆಲ್ಲ ಸ್ವರ ನುಡಿಸುತ್ತಿದ್ದರೆ, ಜನಸ್ತೋಮವೇ ಭಕ್ತಿಭಾವದಿಂದ ತಲೆದೂಗುತ್ತಿತ್ತು. ಇಂಗ್ಲಿಷ್ ವಾದ್ಯ ವೃಂದ ನುಡಿಸುತ್ತಿದ್ದ ಗೀತೆಗೂ ಜನರ ಬೆರಳುಗಳೆಲ್ಲ ಲಯತಪ್ಪದಂತೆ ಅಲುಗುತ್ತಿದ್ದವು. ಮೈಸೂರಿನ ಅರಮನೆ ಬ್ಯಾಂಡ್ ಎಂದೇ ಹೆಸರಾಗಿದ್ದ ಪೊಲೀಸ್ ಬ್ಯಾಂಡ್‌ನ ವಿಶೇಷತೆಯೇ ಇದು.
ಎಲ್ಲ ಬಗೆಯ ಗೀತಪ್ರಿಯರಿಗೂ ಸಂಗೀತ ಸವಿಯನ್ನು ಉಣಬಡಿಸುತ್ತದೆ. ಅರಮನೆಯ ಈ ಸಂಗೀತಕ್ಕೆ ಒಂದೂವರೆ ಶತಮಾನಗಳ ಪರಂಪರೆಯೇ ಇದೆ. ಹಿಂದೂಸ್ಥಾನಿ ಮತ್ತು ಪಾಶ್ಚಾತ್ಯ ಸಂಗೀತಗಳ ನಾದ ಅಂದಿನಿಂದ ಇಂದಿನವರೆಗೂ ಜನರನ್ನು ತನ್ಮಯಗೊಳಿಸುತ್ತಲೇ ಇದೆ. ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಮಹಾರಾಜ ಚಾಮರಾಜ ಒಡೆಯರು ಅನೇಕ ಬಗೆಯ ವಾದ್ಯಗಳನ್ನು ನುಡಿಸಲು ಕಲಿತಿದ್ದರು. ವಯಲಿನ್ ವಾದ್ಯ ಟಿಪ್ಪು ಸುಲ್ತಾನರ ಕಾಲದಲ್ಲಿ ಮೊದಲ ಬಾರಿಗೆ ಶ್ರೀರಂಗಪಟ್ಟಣಕ್ಕೆ ಪರಿಚಯವಾಯಿತು.
ಕರ್ಣಾಟಕ ಮತ್ತು ಪಾಶ್ಚಾತ್ಯ ಸಂಗೀತಗಳಲ್ಲಿ ವಯಲಿನ್ ವಾದ್ಯದ ಪ್ರಚಾರ ಹೆಚ್ಚುತ್ತಿದ್ದ ಕಾಲವದು. ಸಹಜವಾಗಿ ಹೊಸ ಕಲಿಕೆಗೆ ಸದಾ ತುಡಿಯುತ್ತಿದ್ದ ಚಾಮರಾಜ ಒಡೆಯರಿಗೆ ಈ ವಾದ್ಯವನ್ನು ಕಲಿಯಬೇಕೆನಿಸಿತು. ತಾವು ಕಲಿತದ್ದಷ್ಟೇ ಅಲ್ಲ, ತಮ್ಮ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್, ಅವರ ಕಿರಿಯ ಸಹೋದರ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಮತ್ತು ರಾಜಕುಮಾರಿಯರಿಗೆಲ್ಲ ಪಿಯಾನೋ ಮೊದಲಾದ ಪಾಶ್ಚಾತ್ಯ ಸಂಗೀತಗಳನ್ನು ಅಭ್ಯಾಸ ಮಾಡಬೇಕೆಂದು ನಿರ್ದೇಶಿಸಿದ್ದರು. ಅರಮನೆಯ ಯುರೋಪಿಯನ್ ಬ್ಯಾಂಡ್ ನಿರ್ದೇಶಕರಾಗಿದ್ದ ಡಿ. ಫ್ರೆಸ್ ಎಂಬವರಲ್ಲಿ ಕೇವಲ ರಾಜಮನೆತನದ ಸದಸ್ಯರು ಮಾತ್ರವಲ್ಲ, ಅರಮನೆಯ ಬ್ಯಾಂಡ್‌ಗೆಂದು ಸೇರಿಕೊಳ್ಳುವವರಿಗೂ ಕಲಿಯಲು ಅವಕಾಶ ಕಲ್ಪಿಸಲಾಗಿತ್ತು. ಸಂಗೀತ ಕಲಿಯಬೇಕೆಂದು ಬಂದ ವೆಂಕಟಗಿರಿಯಪ್ಪ ಅವರು ಡಿ. ಫ್ರೆಸ್ ಅವರಿಂದಲೇ ಅಭ್ಯಾಸ ಮಾಡಬೇಕಿತ್ತು.
ವೈದಿಕ ಬ್ರಾಹ್ಮಣರಾಗಿದ್ದ ವೆಂಕಟಗಿರಿಯಪ್ಪ ಅವರಿಗೆ ಇವರ ಬಳಿ ನಿಲ್ಲುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಹೊತ್ತುಗೊತ್ತಿನ ಅರಿವಿಲ್ಲದೆ ಬೇಕೆಂದಾಗೆಲ್ಲ ಮದ್ಯಪಾನ ಮಾಡುತ್ತಿದ್ದ ಇವರಲ್ಲಿ ಒದ್ದಾಡಿಕೊಂಡು ಸಂಗೀತ ಕಲಿಯುತ್ತಿದ್ದರು. ಮದ್ಯಪಾನದ ವಾಸನೆಯಲ್ಲಿ ಹೈರಾಣಾದ ವೆಂಕಟಗಿರಿಯಪ್ಪ ಅವರು ಮಹಾರಾಜರಲ್ಲಿ ಫ್ರೆಸ್ ಅವರ ವಿಷಯ ಪ್ರಸ್ತಾಪಿಸಿದರು. ಮಹಾರಾಜರು ನೇರವಾಗಿ, ವಿದ್ವತ್ತು ಪಡೆಯಬೇಕೆಂದರೆ ತೊಂದರೆಯನ್ನೂ ಸಹಿಸಿಕೊಳ್ಳಬೇಕು ಎಂದುಬಿಟ್ಟರು! ಫ್ರೆಸ್ ಎಂಬ ಪ್ರಖ್ಯಾತ ಸಂಗೀತ ವಿದ್ವಾಂಸರಲ್ಲಿ ನಾಲ್ವಡಿ ಅವರ ಸಂಗೀತಾಭ್ಯಾಸ ಆರಂಭವಾಯಿತು. ನಂತರದಲ್ಲಿ ನಿರ್ದೇಶಕರಾಗಿ ಬಂದ ಫೌಕ್ಸ್ ಮತ್ತು ಓಟೋಸ್ಮಿತ್ ಅವರಲ್ಲಿ ಕಲಿಕೆ ಮುಂದುವರಿಯಿತು. ಪಿಯಾನೋ, ಪಿಟೀಲು, ಸ್ಯಾಕ್ಸೋಫೋನ್, ಕ್ಲಾರಿಯೋನೆಟ್ ಹೀಗೆ ಅನೇಕ ವಾದ್ಯಗಳನ್ನು ಪೂರ್ವಭಾವಿ ಅಭ್ಯಾಸವಿಲ್ಲದೆ, ಕೇವಲ ಸ್ವರಲಿಪಿಯ ಮೇಲೆ ಕಣ್ಣಾಯಿಸುತ್ತಾ ನುಡಿಸಬಲ್ಲ ಪ್ರತಿಭೆ ಅವರದು.
ಪ್ರತೀ ವರ್ಷದಂತೆ ಆ ವರ್ಷವೂ ನವರಾತ್ರಿಯ ಉತ್ಸವ ಸಂಗೀತದಿಂದ ಇನ್ನಷ್ಟು ಮೆರುಗಾಗಿತ್ತು. ಜಯ ಮಾರ್ತಾಂಡ ಮಹಾದ್ವಾರದ ಹೊರಗಿನ ಮೈದಾನದಲ್ಲಿ ಬ್ಯಾಂಡ್‌ನವರೆಲ್ಲ ಒಟ್ಟುಗೂಡಿ, ನಿಗದಿತ ಸಮಯಕ್ಕೆ ಅಲ್ಲಿಂದ ಹೊರಟು ಅರಮನೆಯ ಎದುರುಗಡೆ ತಮಗೆ ಸೂಚಿಸಿದ ಸ್ಥಳದಲ್ಲಿ ಬಂದು ಸೇರಬೇಕಿತ್ತು. ಆ ಹೊತ್ತಿನಲ್ಲಿ ಸಂಜೆಯ ದರ್ಬಾರಿಗೆಂದು ಸಿದ್ಧವಾಗುತ್ತಿದ್ದ ನಾಲ್ವಡಿಯವರ ಚಿತ್ತ, ಇಂಗ್ಲಿಷ್ ಬ್ಯಾಂಡ್‌ದಳದವರು ನುಡಿಸಿಕೊಂಡು ಬರುತ್ತಿದ್ದ ‘ಮಾರ್ಚ್ ಸಾಂಗ್’ ಕಡೆಗೆ ಹಾಯಿತು. ‘ಅರೇ! ಅಪಸ್ವರವೊಂದು ಕೇಳುತ್ತಿದೆಯಲ್ಲಾ’ ಎಂದು ತಕ್ಷಣವೇ ಹೇಳಬೇಕೆನಿಸಿತು. ಆದರೆ ಬ್ಯಾಂಡ್ ನಿರ್ದೇಶಕರು, ಅವರ ಗುರುಗಳೂ ಆಗಿದ್ದ ಓಟೋಸ್ಮಿತ್ ಅವರಲ್ಲಿ ಕೇಳುವುದು ತರವಲ್ಲವೆನಿಸಿ ಸುಮ್ಮನಾದರು. ಮಾರನೇ ದಿನದ ಸಂಜೆಯೂ ಅದೇ ರಚನೆಯನ್ನು ನುಡಿಸುವಂತೆ ನಾಲ್ವಡಿಯವರು ಆದೇಶಿಸಿದರು. ಮತ್ತದೇ ಸ್ಥಳದಲ್ಲಿ ಅಪಸ್ವರ ಕೇಳಿತು! ದಸರಾ ಜಂಬೂ ಸವಾರಿಯನ್ನು ಪೂರೈಸಿ, ಕಂಕಣ ವಿಸರ್ಜನೆ ಮಾಡಿದ ನಾಲ್ವಡಿಯವರು ಮರುದಿನದ ಬೆಳಿಗ್ಗೆ ಎಂದಿನಂತೆ ಬ್ಯಾಂಡ್‌ಸ್ಟ್ಯಾಂಡ್‌ಗೆ ತೆರಳಿ, ಆ ರಚನೆಯನ್ನು ಮತ್ತೆ ನುಡಿಸಬೇಕೆಂದು ತಿಳಿಸಿದರು. ಪದೇ ಪದೇ ಅದೇ ರಚನೆಯನ್ನು ಮಹಾರಾಜರು ಕೇಳುತ್ತಿದ್ದರೆ, ಬ್ಯಾಂಡ್ ಕಲಾವಿದರ ಕಥೆ ಏನಾಗಿರಬೇಡ! ಒಳಗೊಳಗೆ ಆತಂಕ, ಭಯ.
ಆಗಲೂ ಅದೇ ಅಪಸ್ವರ ಮರುಕಳಿಸಿದಾಗ, ಓಟೋಸ್ಮಿತ್ ಅವರಲ್ಲಿ ನೇರವಾಗಿ ತಿಳಿಸಿದರು. ಅಪಸ್ವರ ಕೇಳೇ ಇಲ್ಲವಲ್ಲಾ ಎಂಬ ಭಾವದಲ್ಲಿದ್ದ ತಮ್ಮ ಗುರುಗಳೆದುರು ವಾದಿಸಲಿಲ್ಲ. ಕ್ಲಾರಿಯೋನೆಟ್ ಕಲಾವಿದರೊಬ್ಬರು ಅಪಸ್ವರ ನುಡಿಸುತ್ತಿದ್ದದ್ದನ್ನು ಪತ್ತೆಮಾಡಿ, ಅವರೊಬ್ಬರೇ ನುಡಿಸುವಂತೆ ಹೇಳಿದರು. ಅದೇ ಅಪಸ್ವರವನ್ನು ನುಡಿಸಿ, ಅಭ್ಯಾಸವಾಗಿದ್ದ ಕಾರಣ ಸತ್ಯ ತಿಳಿಯಲು ಸಮಯವೇ ಬೇಕಿರಲಿಲ್ಲ. ಸ್ಮಿತ್ ಅವರು ತಲೆತಗ್ಗಿಸಿದ್ದನ್ನು ನೋಡಿದ ನಾಲ್ವಡಿಯವರು, ‘ಗುರುಗಳಿಗೆ ಅಗೌರವ ಸೂಚಿಸಬೇಕೆಂಬುದು ಉದ್ದೇಶವಲ್ಲ. ನನ್ನ ಗ್ರಹಿಕೆ ಸರಿಯೋ ತಪ್ಪೋ ಎಂದು ತಿಳಿಯುವುದಕ್ಕಾಗಿ ಪುನಃ ಪರೀಕ್ಷಿಸುತ್ತಿದ್ದೆ. ಮನಸ್ಸಿಗೆ ಘಾಸಿಯಾಗಿದ್ದರೆ ಕ್ಷಮಿಸಬೇಕು’ ಎಂದರು. ನಾಲ್ವಡಿಯವರಲ್ಲಿ ಸಂಗೀತ ಜ್ಞಾನಸಂಪತ್ತು ಎಷ್ಟು ಅಗಾಧವಾಗಿತ್ತೆಂಬುದಕ್ಕೆ ಈ ಘಟನೆಯೊಂದು ಉದಾಹರಣೆಯಷ್ಟೇ. ಪಾಶ್ಚಾತ್ಯ ಸಂಗೀತಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಅಷ್ಟಿಷ್ಟಲ್ಲ. ಸಂಗೀತದಲ್ಲಿ ಉತ್ತಮ ಅಭಿರುಚಿಯುಳ್ಳ ಯುವ ಕಲಾವಿದರಿಗೆ ಅರಮನೆಯ ವತಿಯಿಂದ ಬ್ಯಾಂಡ್ ಹೌಸ್ ಮತ್ತು ಗುಡ್‌ಶೆಫರ್ಡ್ ಕಾನ್ವೆಂಟಿನಲ್ಲಿಯೂ ಉಚಿತವಾಗಿ ಶಿಕ್ಷಣ ಕೊಡಿಸುತ್ತಿದ್ದರು.
ವರ್ಷದ ಕೊನೆಗೆ ಲಂಡನ್ನಿನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್‌ನ ಪರೀಕ್ಷೆಗಳು ಅರಮನೆಯಲ್ಲಿ ನಡೆಯುತ್ತಿದ್ದವು. ವಿದ್ಯಾರ್ಥಿಗಳು ಭಾರತೀಯರೆಂಬ ಕಾರಣಕ್ಕಾಗಿ ಯಾವುದೇ ತಾರತಮ್ಯ ವಾಗಲಿ, ವಿಶೇಷ ಆದ್ಯತೆಯಾಗಲಿ ನೀಡಬಾರದೆಂದು ಪರೀಕ್ಷಕರಾಗಿ ಬರುತ್ತಿದ್ದ ವಿದ್ವಾಂಸರಲ್ಲಿ ಮಹಾರಾಜರು ವಿನಂತಿಸುತ್ತಿದ್ದರು. ವೈಣಿಕ ಆರ್. ಎಸ್. ಕೇಶವಮೂರ್ತಿ, ಸ್ವರಮೂರ್ತಿ ವಿ. ಎನ್. ರಾವ್, ನವಮುರಳಿ ಎಸ್. ಕೆ. ರಾಮಾಚಾರ್, ವೀಣಾ ದೊರೆಸ್ವಾಮಿ ಅಯ್ಯಂಗಾರ್, ಆರ್. ಎನ್. ದೊರೆಸ್ವಾಮಿ, ವಿ. ವೆಂಕಟಸುಬ್ಬರಾವ್, ಎಸ್. ಕೃಷ್ಣಮೂರ್ತಿ ಸೇರಿದಂತೆ ಅನೇಕರು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ, ಆ ಕಾಲಕ್ಕೆ ಮಹಾರಾಜರಿಂದ ೫೦ ರೂಪಾಯಿಗಳಷ್ಟು ಗೌರವ ಸಂಭಾವನೆಯನ್ನು ಪಡೆದಿದ್ದರು. ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಬ್ಯಾಂಡ್ ದಳ ಸೇರುತ್ತಿದ್ದುದೇನೊ ನಿಜ. ಆದರೆ ಶ್ರದ್ಧೆ ಮತ್ತು ಆಸಕ್ತಿಯನ್ನೂ ಅರ್ಹತೆಯಾಗಿ ಪರಿಗಣಿಸಿದ್ದ ಮಹಾರಾಜರು ಈ ಉದ್ದೇಶವಿಟ್ಟುಕೊಂಡು ಬಂದ ಕಲಾವಿದರಿಗೆ ವಾದ್ಯಗಳ ಕುರಿತು ತರಬೇತಿ ನೀಡಿಯೇ ಬ್ಯಾಂಡ್‌ಗೆ ಆಯ್ಕೆ ಮಾಡಿಕೊಳ್ಳುತ್ತಿದ್ದರು.
ಹೀಗೆ ಅರಮನೆಯ ಬ್ಯಾಂಡ್ ಸೇರಿದ್ದ ಡಿ. ರಾಮು ಅವರು, ಪ್ರಸಿದ್ಧಿಯ ಜೊತೆಗೆ ಇಂಗ್ಲಿಷ್ ಬ್ಯಾಂಡ್ ಬದುಕನ್ನು ರೂಪಿಸಿದ ದಿನಗಳನ್ನೂ ಭಾವುಕರಾಗಿ ನೆನೆಯುತ್ತಾರೆ. ೯೦ರ ವಯಸ್ಸಿನಲ್ಲಿಯೂ ಕ್ಲಾರಿಯೋನೆಟ್ ನುಡಿಸುವ ಸಾಮರ್ಥ್ಯವುಳ್ಳ ಡಿ. ರಾಮು ಅವರು ೪೫ ವರ್ಷಗಳವರೆಗೆ ಅರಮನೆಯ ಇಂಗ್ಲಿಷ್ ಬ್ಯಾಂಡ್ ನಲ್ಲಿದ್ದವರು. ಅವರ ತಂದೆ ದಾಸಪ್ಪನವರು ಅರಮನೆಯ ಬ್ಯಾಂಡ್ ಕಲಾವಿದರಾಗಿದ್ದರು. ಆದರೆ ಇವರು ಸೇರುವ ಹೊತ್ತಿಗೆ ದಾಸಪ್ಪ ನಿವೃತ್ತರಾಗಿದ್ದರು. ರಾಮು ಅವರ ಅಣ್ಣ ಶೀನಪ್ಪನವರು ಆಗಲೇ ಬ್ಯಾಂಡ್ ದಳಕ್ಕೆ ಸೇರಿಯಾಗಿತ್ತು. ನಾಲ್ಕನೇ ತರಗತಿ ಓದಿದ್ದ ರಾಮು ಅವರನ್ನು ಬ್ಯಾಂಡ್ ಮಾಸ್ಟರ್ ಎದುರು ನಿಲ್ಲಿಸಿ, ‘ಮಗನಿಗೆ ಆಸಕ್ತಿಯಿದೆ ಬ್ಯಾಂಡ್‌ಗೆ ಸೇರಿಸಿಕೊಳ್ಳಿ’ ಎಂದರು. ಆಗ ಇವರಿಗೆ ಹತ್ತು ವರ್ಷ. ಬ್ಯಾಂಡ್ ಮಾಸ್ಟರ್ ಆಗಿದ್ದ ಪೆರಿಯಾರ ಅವರು ಕ್ಲಾರಿಯೋನೆಟ್ ನುಡಿಸುವುದನ್ನು ಕಲಿಯೆಂದು ಕಳಿಸಿದರು. ಹಾಗಾಗಿ ವಾದ್ಯದ ಆಯ್ಕೆ ಅವರದ್ದಾಗಿರಲಿಲ್ಲ. ಮುಂದೊಂದು ದಿನ ಮಹಾರಾಜರು ಸಿಂಹಾಸನದ ಮೇಲೆ ನಿಂತು ವಂದನೆ ಸ್ವೀಕರಿಸುವ ಸಂದರ್ಭ, ಅನತಿ ದೂರದಲ್ಲಿ ಮೈಸೂರು ಸಂಸ್ಥಾನ ಗೀತೆ ‘ಕಾಯೌ ಶ್ರೀ ಗೌರಿ’ ನುಡಿಸುವ ಕ್ಷಣ ತನ್ನ ಬದುಕಿಗೆ ಒದಗಬಹುದೆಂಬ ಯಾವ ಸುಳಿವೂ ರಾಮು ಅವರಿಗೆ ಇರಲಿಲ್ಲ.
ವಾದ್ಯವನ್ನು ಪಕ್ವವಾಗಿ ನುಡಿಸಿದರಷ್ಟೇ ಆಗ ಸಂಬಳ ನೀಡುತ್ತಿದ್ದರು. ಹಾಗಾಗಿ ಬ್ಯಾಂಡ್‌ಗೆ ಸೇರಿದ ಮೊದಲ ಮೂರು ವರ್ಷ ಇವರಿಗೆ ಸಂಬಳವಿರಲಿಲ್ಲ. ನಾಲ್ಕೈದು ವರ್ಷಗಳವರೆಗೆ ಸಂಗೀತ ಕಲಿಕೆ, ಅಭ್ಯಾಸವಂತೂ ಸಾಗುತ್ತಿತ್ತು. ಮಹಾರಾಜರು ಪಂಜಾಬ್‌ನಿಂದ ಬ್ಯಾಂಡ್ ತರಬೇತಿಗೆಂದು ಕಲಾವಿದರನ್ನು ಕರೆಸಿದ್ದರು. ರಾಮು ಅವರು ಸಂಗೀತವನ್ನು ಉಚಿತವಾಗಿಯೇ ಕಲಿಯುತ್ತಿದ್ದರೂ ಬ್ಯಾಂಡ್ ಹೇಳಿಕೊಡುತ್ತಿದ್ದವರ ಮನೆಗೆಲಸ ಮಾಡಿಕೊಟ್ಟ ಪ್ರಸಂಗಗಳಿವೆ. ಅಂತೂ ೧೯೪೯ರಲ್ಲಿ ಮೊದಲ ಬಾರಿಗೆ ೧೯ ರೂಪಾಯಿ ಸಂಬಳ ಪಡೆದರು. ಆಗ ಭಾರತ ಸ್ವತಂತ್ರವಾಗಿತ್ತು. ರಾಮು ಅವರಿಗೂ ಸಂಬಳ ಪಡೆವಷ್ಟು ಪ್ರಾವೀಣ್ಯತೆ ದಕ್ಕಿತ್ತು. ಅರಮನೆ ಬ್ಯಾಂಡ್ ಮತ್ತು ಪೊಲೀಸ್ ಬ್ಯಾಂಡ್ ತನ್ನ ಬದುಕನ್ನು ಕಟ್ಟಿಕೊಡಬಹುದೆಂದು ರಾಮು ಅವರು ನಂಬಿದ್ದರು. ಅದಕ್ಕೆ ಪೂರಕವಾಗಿ ೪೫ ವರ್ಷಗಳ ಒಡನಾಟವನ್ನು ಬ್ಯಾಂಡ್ ಜೊತೆಗೆ ರಾಮು ಅವರು ಹೊಂದಿದ್ದಾರೆ. ಇಂತಹ ನೂರಾರು ಕಲಾವಿದರ ಬದುಕಿಗೆ ನೆರವಾದ ಪೊಲೀಸ್ ಬ್ಯಾಂಡ್ ತನ್ನ ಸಂಗೀತ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ. ನಿರಂತರವಾದ ಸಂಗೀತಾಭ್ಯಾಸಗಳೇ ಆ ಯಶಸ್ಸಿನ ಗುಟ್ಟು ಎನ್ನಬಹುದು. ೨೦೦೬ರಂದು ದೆಹಲಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ವಿಶೇಷ ಆಹ್ವಾನಿತರಾಗಿದ್ದರೆಂಬುದು ಇಂಗ್ಲಿಷ್ ಬ್ಯಾಂಡ್‌ನ ಹೆಗ್ಗಳಿಕೆ. ಸರ್ಕಾರದ ಮುಖ್ಯ ಕಾರ್ಯಕ್ರಮಗಳು, ದಸರಾ ಉತ್ಸವಗಳ ಸಂದರ್ಭದಲ್ಲಿ ಬ್ಯಾಂಡ್ ದಳದವರು ನುಡಿಸುವ ಸಂಗೀತ ವಾದ್ಯಗಳನ್ನು ಕೇಳುವ ಅವಕಾಶ ಸಿಗುತ್ತದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…