ಕೀರ್ತಿ ಬೈಂದೂರು
ವಾಕಿಂಗ್ ಹೋಗಬೇಕೆಂಬ ಪ್ರತಿಜ್ಞೆಗೆ ಬದ್ಧರಾಗಿ ಕೆಲಸವೆಲ್ಲ ಮುಗಿಸಿ, ಸಂಜೆಯ ಹೊತ್ತಿಗೆ ತಯಾರಾಗುತ್ತಿದ್ದೆವು. ಅನಿತಾ ಸ್ವಲ್ಪ ಬೇಗನೇ ಹೆಜ್ಜೆ ಹಾಕುತ್ತಿದ್ದರೂ ಕತೆ ಹೇಳುತ್ತಾ, ಕೇಳುತ್ತಾ ನನ್ನ ವೇಗಕ್ಕೆ ಜೊತೆಯಾಗುತ್ತಿದ್ದಳು. ಆವತ್ತು ಎಂದಿಗಿಂತ ಹೆಜ್ಜೆಗಳು ನಿಧಾನ ಗತಿಯಲ್ಲಿ ಸಾಗುತ್ತಿತ್ತು. ದಿನದ ಕತೆ ಹಾಗಾಯಿತು, ನಾನು ಹೀಗಂದೆ ಎಂದು ಶುರು ಮಾಡಿದರೆ, ಅನಿತಾ ಮಾತ್ರ ತನಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಬೇರೆಯದೆ ಯೋಚನೆಯಲ್ಲಿ ತಲ್ಲೀನಳಾಗಿದ್ದಳು!
ಏನಾಯಿತೆಂದು ಕೇಳಿದಾಗ ವಿನೇಶ್ ಫೋಗಾಟ್ ಬಗ್ಗೆ ಒಂದಿಷ್ಟು ಮಾತುಗಳನ್ನಾಡಿದಳು. ಬೆಳಿಗ್ಗೆ ಎದ್ದಾಗಿಂದ ಒಂದೇ ಸಮನೆ ಅನಿತಾ ಈ ಹೆಸರನ್ನು ಬಡಬಡಾಯಿಸುತ್ತಿದ್ದಳು. ರಾತ್ರಿ ನೋಡಿರದ ಅವಳ ಆಟದ ವೈಖರಿಯನ್ನು ನೋಡೋಣವೆಂದು ಮೊಬೈಲ್ ತೆರೆದೆ. ಈಗ ವಿನೇಶ್ ಹೆಸರನ್ನು ಎಲ್ಲೋ ಕೇಳಿದಂತೆ ಅನಿಸಿತು. ಮುಖ ನೋಡಿದ ಮೇಲಂತೂ ‘ಅರೇ! ಎಲ್ಲೋ ನೋಡಿದ್ದೀನಿ ಕಣೆ’ ಎನ್ನುತ್ತಾ ಘಟನೆಯನ್ನು ನೆನಪಿಸಹೊರಟೆ. ವರ್ಷದ ಹಿಂದಷ್ಟೇ ದಂಗೆದ್ದ ಕುಸ್ತಿಪಟುಗಳಲ್ಲಿ ಇವಳೂ ಇದ್ದಳೆಂದು ತಿಳಿದ ಮೇಲಂತೂ ರೋಮಾಂಚನವಾಯಿತು.
ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ವಿನೇಶ್ ಅನೇಕರ ಅಚ್ಚರಿಯಾಗಿದ್ದಳು. ಹೆಣ್ಣುಮಕ್ಕಳ ಪಾಲಿಗಂತೂ ಕನಸು ಬಿತ್ತಿದ ವಿಸ್ಮಯವಾಗಿದ್ದಳು. ಬೀದಿ ಬದಿಯಲ್ಲಿ ಪೊಲೀಸರಿಂದ ಥಳಿಸಿಕೊಂಡು, ಛಲಬಿಡದೇ, ತನ್ನ ಜೊತೆಗೆ ಇತರ ಮಹಿಳಾ ಕುಸ್ತಿಪಟುಗಳ ಮೇಲಾಗುತ್ತಿದ್ದ ಲೈಂಗಿಕ ಶೋಷಣೆಗೆ ನ್ಯಾಯಬೇಕೆಂದು ಅಂದು ಬಂಡಾಯ ಕೂಗಿದ್ದ ವಿನೇಶ್ ಇಂದು ಜಾಗತಿಕ ಮಟ್ಟದಲ್ಲಿ ನಾಯಕಿಯಾಗಿದ್ದಳು.
‘ವ್ಯವಸ್ಥೆಯನ್ನು ಎದುರುಹಾಕಿಕೊಳ್ಳೋದು ಅಂದ್ರೇನು ಸುಲಭನಾ ಮಗಾ?’ ಎಂಬುದು ಅನಿತಾಳ ಪ್ರಶ್ನೆ, ಹತ್ತನೇ ತರಗತಿಗೆ ಬಂದ ಹಾಗೆ ಖೋಖೋ ಎಲ್ಲ ಬಿಟ್ಟು, ಓದಿ ಉದ್ಧಾರ ಆಗು ಎಂದಿದ್ದನ್ನು ಶಿರಸಾವಹಿಸಿ ಪಾಲಿಸಿದ ಅನಿತಾ ಇವತ್ತಿಗೂ ಓದುತ್ತಲೇ ಇದ್ದಾಳೆ. ಸೆಮಿಸ್ಟರ್ ಆರಂಭದಿಂದಲೂ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು, ಪುಸ್ತಕ ಹಿಡಿದು ಓದು ಆರಂಭಿಸಿದರೂ ಪರೀಕ್ಷೆ ಎಂದಾಗ ಸುಸ್ತಾಗುತ್ತಾಳೆ. ‘ನೀನೇನೂ ಓದಿಲ್ಲ ಅನ್ನೋದು ಆನ್ಸರ್ ಪೇಪರ್ ನೋಡಿದ್ರೆ ಗೊತ್ತಾಗತ್ತೆ’ ಎಂದು ಮೂವತ್ತೈದೋ ನಲವತ್ತನ್ನೋ ತೆಗೆದುಕೊಳ್ಳುವಾಗ ಅನಿತಾ ಬೇಸರಪಟ್ಟುಕೊಳ್ಳುವುದು ಅಷ್ಟಿಷ್ಟಲ್ಲ. ಬಹುಶಃ ಪರೀಕ್ಷೆಗಾಗಿ ಓದುವುದನ್ನು ಬಿಟ್ಟು, ಕ್ರೀಡೆಯನ್ನೇ ಆಯ್ದುಕೊಂಡು ಓಡು ಎಂದಿದ್ದರೆ ಅನಿತಾ ಇವತ್ತು ಖೋಖೋ ಪಟುವಾಗುತ್ತಿದ್ದಳೋ ಏನೋ!
ಇಡೀ ರಾತ್ರಿ ನಿದ್ದೆ ಬಿಟ್ಟು, ವಿನೇಶ್ ಆಟ ಕಂಡು ಕುಣಿದಾಡಿದ್ದಳು. ಅವಳು ಗೆದ್ದಾಗ, ತಾನೂ ಗೆದ್ದೆನೆಂದು ಸಂಭ್ರಮಿಸಿದ್ದಳು. ಚಿನ್ನದಂಥ ಹುಡುಗಿ ಗೆಲ್ಲಲೆಂದು ಅನಿತಾ ಅದೆಷ್ಟು ಪ್ರಾರ್ಥಿಸಿದ್ದಳೊ! ಹಾಸ್ಟೆಲ್ ತುಂಬೆಲ್ಲ ಇವತ್ತು ರಾತ್ರಿಯೂ ತನಗೆ ನಿದ್ದೆಯಿಲ್ಲ. ಇವತ್ತಾದರೂ ಎಲ್ಲಾ ಒಟ್ಟು ಸೇರಿ ನೋಡುವ ಎಂದು ಒಪ್ಪಿಸಿ, ತಯಾರಿ ನಡೆಸಿದ್ದಳು.
ತನ್ನ ದೇಶದವರನ್ನು ಬಿಟ್ಟು ಜಗದ ಬೇರಾರಿಂದಲೂ ಸೋಲದೆ, ಗೆಲುವಿನ ಜಯಭೇರಿ ಮೊಳಗಿಸುತ್ತಿದ್ದವಳಿಗೆ ವಿನೇಶ್ ಸೋಲಿನ ರುಚಿ ತೋರಿಸಿದ ಕತೆಯನ್ನು ಮತ್ತೆ ಮತ್ತೆ ಹೇಳುತ್ತಿದ್ದಳು. ತಾನೂ ಮನೆಯವರನ್ನು ಒಪ್ಪಿಸಿ, ಸಾಧಿಸಿ ತೋರಿಸಿಬೇಕಿತ್ತು ಎನಿಸಿತ್ತೆಂದು ಹೇಳಲು ಈ ಉತ್ಸಾಹವೇ ಸಾಕು, ಐವತ್ತು ಕೆಜಿಗಿಂತ ಹೆಚ್ಚುವರಿಯಾಗಿ ನೂರು ಗ್ರಾಂ ಹೆಚ್ಚಿನ ತೂಕಕ್ಕಾಗಿ ಅನರ್ಹಗೊಂಡ ಸುದ್ದಿಗೆ ಕಂಗಾಲಾಗಿದ್ದಳು. ಒಲಿಂಪಿಕ್ ನಂತಹ ಕ್ರೀಡಾಕೂಟದಲ್ಲಿ ಬಿಗುನಿಯಮಗಳಿರುತ್ತವೆ ಎಂಬುದನ್ನು ಅನಿತಾ ಒಪ್ಪುವುದಕ್ಕೆ ತಯಾರಿದ್ದರೂ ಗೆಲ್ಲಬೇಕಿತ್ತು ಎಂದು ಇವಳ ಮನಸ್ಸು ಮಿಡಿಯುತ್ತಿದೆ.
ಬೆಳ್ಳಿಯ ಪದಕವನ್ನು ಪಡೆಯುತ್ತಾಳಾ ಎಂಬುದು ಸದ್ಯದ ಮಟ್ಟಿಗೆ ಊಹಾತೀತ. ಹೆಣ್ಣುಮಕ್ಕಳು ನಾನೂ ಅವಳಂತಾಗಬೇಕು ಎಂದು ಕನಸು ಕಟ್ಟುತ್ತಿದ್ದಾರೆ. ಪದಕ ಸಿಗಲಿ-ಬಿಡಲಿ, ಗೆದ್ದವಳ ಸಾಧನೆ ಭಾರತೀಯರ ಮನದಲ್ಲಿ
ದಾಖಲಾಗಿಯಾಗಿದೆ. ಕ್ರೀಡಾಪಟುವಾಗಿ ಮಾತ್ರವಲ್ಲ ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಳ್ಳದ ವಿನೇಶ್ ಖಂಡಿತಾ ಗೆದ್ದ ಹುಡುಗಿಯೇ ಸರಿ, ಚಂಪಾ ಅವರ ‘ಒಂದಾನೊಂದು ಕಾಲಕೆ ಕವಿತೆಯ ಸಾಲು ನೆನಪಾಗುತ್ತಿದೆ: ‘ಮೌನ ಮುರಿಯಲು ಸ್ವಲ್ಪ ಹೆಣಗಿದರೆ ನೀವು ಶಬ್ದ ಹೊರಡಲಿಕ್ಕಿಲ್ಲ, ಆದರೆ ನೆಲವೇ ಎದೆ ಬಿರಿತು ಹಾಡುತ್ತದೆ’, ಪುರುಷ ಅಹಂಕಾರಗಳನ್ನೆಲ್ಲ ಮೆಟ್ಟಿನಿಂತ ವಿನೇಶ್ ಎಂದರೆ ಈ ನೆಲದ ಗಟ್ಟಿದನಿ.
keerthisba2018@gmail.com
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕಾರ್ಯನಿರ್ವಾಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ತಿಂಗಳಿಗೊಂದು ದಿನ ಋತುಚಕ್ರ ರಜೆ ನೀಡುವಂತೆ…
ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತಸೌಕರ್ಯ ಮರಿಚಿಕೆಯಾಗಿದೆ ಎಂದು ಆರೋಪಿಸಿ ಸಂಶೋಧಕರು ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟವು ಪ್ರತಿಭಟನೆ…
ಕೆ.ಆರ್.ನಗರ : ಪಟ್ಟಣದಲ್ಲಿ ಇಬ್ಬರು ಯುವಕರು ಮಾರುತಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ…