Andolana originals

ಗಾನ ಸರಸ್ವತಿಯ ವಿನಮ್ರ ಸೇವಕ ವೀರಭದ್ರಯ್ಯ

ಮೈಸೂರಿನಲ್ಲಿ ಉತ್ತರಾದಿ ಸಂಗೀತ ಪರಿಮಳ ಹರಡಲು ಪರಿಶ್ರಮ

-ಡಾ.ರಮಾ ವಿ ಬೆಣ್ಣೂರ್

ಮೈಸೂರು ಮತ್ತು ಹಿಂದುಸ್ತಾನೀ ಸಂಗೀತದ ನಂಟು ಇಂದು ನೆನ್ನೆಯದಲ್ಲ. ಯಾವ ಒಳ್ಳೆಯ ಸಂಗೀತವನ್ನಾದರೂ ಆನಂದಿಸುತ್ತಿದ್ದ ಒಡೆಯರರ ಅಗಾಧ ಸಂಗೀತಾಸಕ್ತಿಯಿಂದಾಗಿ ಅವರ ಕಾಲದಲ್ಲೇ ಉತ್ತರಾದಿ ಸಂಗೀತವು ಮೈಸೂರಿಗೆ ಕಾಲಿಟ್ಟಿದ್ದಿತು. ಉತ್ತರಾದಿ ಸಂಗೀತ ಕಲಾವಿದರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಹಾಡುವುದು, ಮಹಾರಾಜರಿಂದ ಗೌರವಿಸಲ್ಪಡುವುದು ಒಂದು ಹೆಮ್ಮೆಯ ಸಂಗತಿಯೇ ಆಗಿತ್ತು. ಅಬ್ದುಲ್ ಕರೀಂ ಖಾನ್, ಮೌಲಾನ ಭಕ್ಷ್ ಮುಂತಾದವರೆಲ್ಲ ತಮ್ಮ ಸಂಗೀತದ ಪ್ರಭೆಯನ್ನು ಇಲ್ಲಿ ಬೆಳಗಿದವರೇ.

ಒಡೆಯರರ ಕಾಲಾನಂತರ ಏಕೋ ಏನೋ ಮೈಸೂರಿನಲ್ಲಿ ಈ ಹಿಂದೂಸ್ತಾನೀ ಸಂಗೀತದ ಹರಿವು ಕಡಿಮೆ ಆಗತೊಡಗಿತು. ಹಾಗೆ ನೋಡಿದರೆ, ಉತ್ತರಾದಿ ಸಂಗೀತ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಬಹಳಷ್ಟಿದೆ ಎಂದೇ ಹೇಳಬಹುದು. (ಅಂದಿನ ಮುಂಬಯಿಗೆ ಸೇರಿದ್ದ) ಉತ್ತರ ಕರ್ನಾಟಕದಲ್ಲಿ ಆ ಸಂಗೀತದ ಮೋಡಿಗೆ ಮರುಳಾಗಿ ಅದರಲ್ಲಿ ನಿಷ್ಣಾತರಾಗಿ, ದೇಶಕ್ಕೆ ಕೀರ್ತಿ ತಂದ ಹಲವಾರು ಮಹನೀಯರಲ್ಲಿ ಸವಾಯಿ ಗಂಧರ್ವ ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್ ಮುಂತಾದವರೆಲ್ಲ ಇದ್ದಾರೆ. ಅಷ್ಟಾಗಿ ಉತ್ತರಾದಿಯ ಗಂಗೆ ಗುಪ್ತಗಾಮಿನಿಯಾಗಿದ್ದ ಮೈಸೂರಿನಲ್ಲಿ ಅದು ಮತ್ತೆ ತಲೆಯೆತ್ತಿ, ಪ್ರವಹಿಸುವಂತೆ ಮಾಡಿದ ಅನೇಕರು ಇದ್ದಾರೆ. ಅದರಲ್ಲಿ ಎದ್ದು ಕಾಣುವ ಮೊದಲ ತಲೆಮಾರಿನ ಹೆಸರೆಂದರೆ ಹುನಗುಂದ ಮತ್ತು ಅವರ ಗೆಳೆಯರು. ಸೋಮಶೇಖರರು, ಕೇಶವ ಭಾದ್ರಿಯವರೂ ಇದರಲ್ಲಿ ಸೇರುತ್ತಾರೆ.

ಇಲ್ಲಿಂದ ಮುಂದೆ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ತಯಾರಾದ ಹಲವು ಪ್ರತಿಭೆಗಳು ಮೈಸೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಇಲ್ಲಿ ಹಿಂದುಸ್ತಾನೀ ಸಂಗೀತವು ಹುಲುಸಾಗಿ ಬೆಳೆಯುವಂತೆ ನೋಡಿಕೊಂಡವು. ಆ ಪುಣ್ಯಾಶ್ರಮದ ಪ್ರತಿಭೆಗಳಲ್ಲಿ ಎದ್ದು ಕಾಣುವ ಹೆಸರೇ ವೀರಭದ್ರಯ್ಯ ಹಿರೇಮಠ್ ಅವರದು. ಗಾಯನ ಮತ್ತು ವಾದನ ಎರಡರಲ್ಲೂ ಪಳಗಿದುದು ಅವರಿಗೆ ಬಹಳ ಸಹಾಯವಾಯಿತು.

ವೀರಭದ್ರಯ್ಯ ಅವರನ್ನು ಹತ್ತಿರದಿಂದ ಬಲ್ಲವರೆಲ್ಲರ ಅನುಭವಕ್ಕೆ ಬರುವ ಒಂದು ಸಂಗತಿ ಎಂದರೆ, ಅವರ ಗುರುಭಕ್ತಿ ಮತ್ತು ಆ ಗುರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆವ ಛಲ. ಆಶ್ರಮದಲ್ಲಿ ಅವರು ಕಲಿತ ಸಂಗೀತ ಮತ್ತು ಶಿಸ್ತು ಅವರ ಕೈ ಹಿಡಿದು ನಡೆಸುವ ದಾರಿದೀಪವಾಗಿದೆ ಎಂದರೆ ಅತಿಶಯೋಕ್ತಿ ಅಲ್ಲ. ಆ ಗುರುವಿನ ಪ್ರಭಾವವು ಅವರ ಇಡೀ ವ್ಯಕ್ತಿತ್ವವನ್ನು ರೂಪಿಸಿದೆ ಎಂದರೆ ತಪ್ಪಾಗಲಾರದು. ಅದೇ ಅವರನ್ನು ಕೈಹಿಡಿದು ನಡೆಸುತ್ತಿರುವ ದಾರಿದೀಪ, ಶ್ರೀರಕ್ಷೆ.

ಮೈಸೂರಿನಲ್ಲಿಯೇ ನೆಲಸುವ ನಿರ್ಧಾರವನ್ನು ಅವರು ಕೈಗೊಂಡ ನಂತರ ಕೆಲಕಾಲ ಅವರು ಸೋಮಶೇಖರ್ ಅವರೊಂದಿಗೂ ಸೇರಿ ಸಂಗೀತ ಕಲಿಸುವ ಕೈಂಕರ್ಯವನ್ನು ಮಾಡಿದ್ದುಂಟು. ಮುಂದೆ ಅವರೇ ಸ್ವತಂತ್ರವಾಗಿ ಮೈಸೂರಿನಲ್ಲಿ ಉತ್ತರಾದಿ ಸಂಗೀತದ ಪರಿಮಳವನ್ನು ಹರಡುವ ಕಾರ್ಯಕ್ಕೆ ಕಟಿಬದ್ಧರಾಗಿ ನಿಂತರು. ಅವರಲ್ಲಿ ಉತ್ತಮ ಶಾರೀರ ಸಂಪತ್ತು, ಸೊಗಸಾದ ಮನೋಧರ್ಮ ಮಿಳಿತವಾಗಿವೆ. ಒಳ್ಳೆಯ ಹಾರ್ಮೋನಿಯಂ ವಾದಕರೂ ಹೌದು. ಹೀಗಾಗಿ ಮೈಸೂರಿಗೆ ಯಾವುದೇ ಹಿಂದುಸ್ತಾನೀ ಕಲಾವಿದರು ಬಂದರೂ ಅವರಿಗೆ ವೀರಭದ್ರಯ್ಯನವರದೇ ಹಾರ್ಮೋನಿಯಂ ಸಾಥ್ ಒದಗಿ ಬರುತ್ತಿತ್ತು. ಇದರಿಂದ ಅವರ ಸಂಗೀತವೂ ಕೂಡ ಮತ್ತಷ್ಟು ಪಕ್ವವಾಗಿ, ಹಲವು ಕಲಾವಿದರ ಉತ್ತಮ ಅಂಶಗಳು ಇವರ ಸಂಗೀತದಲ್ಲೂ ಸೇರ್ಪಡೆ ಆಯಿತು. ಕೆಲವು ಕಾಲ ಅವರ ಕಂಠವು ಅವರಿಗೆ ಸಾಥ್ ನೀಡದಿದ್ದಾಗ, ಛಲ ಬಿಡದ ತ್ರಿವಿಕ್ರಮನಂತೆ ಮೌನದಿಂದ, ಶುಶ್ರೂಷೆಯಿಂದ ಅವರು ಅದನ್ನು ಗೆದ್ದು ಬಂದು, ಮತ್ತೆ ಹಾಡಲು ಉಪಕ್ರಮಿಸಿದರು. ಅದು ವೀರಭದ್ರಯ್ಯ ಅವರ ಸಂಗೀತ ಪ್ರೀತಿಗೆ ಹಿಡಿದ ಕೈಗನ್ನಡಿ ಎನ್ನಬಹುದು. ಮೈಸೂರಿನಲ್ಲಿ ನೆಲೆಸಿದ್ದ ಹಿರಿಯ ಸಂಗೀತ ವಿದ್ವಾಂಸ ಪಂಡಿತ್ ಇಂದೂಧರ್ ನಿರೋಡಿ ಅವರಲ್ಲಿ ತಮ್ಮ ಸಂಗೀತವನ್ನು ಮತ್ತಷ್ಟು ಉತ್ತಮಗೊಳಿಸುತ್ತಲೇ ಅಧ್ಯಾಪನವನ್ನೂ ತಮ್ಮದಾಗಿಸಿಕೊಂಡರು.

ಇಂದು ವೀರಭದ್ರಯ್ಯನವರ ಗರಡಿಯಲ್ಲಿ ತಯಾರಾಗಿರುವ ಅನೇಕ ಶಿಷ್ಯರು ಇದ್ದಾರೆ. ಅವರ ಶಿಷ್ಯರ ಸಂಖ್ಯೆಯನ್ನು ನೋಡಿದಾಗ, ಮೈಸೂರಿನಲ್ಲಿ ಉತ್ತರಾದಿ ಸಂಗೀತ ಗಟ್ಟಿಯಾಗಿ ನೆಲೆಯೂರುವುದರಲ್ಲಿ ಸಂದೇಹವೇ ಇಲ್ಲ ಎಂದೆನಿಸದಿರದು. ಸ್ವರ ಸಂಕುಲ ಎಂಬ ಸಂಗೀತ ವಿದ್ಯಾಲಯವು ಅವರ ಕನಸಿನ ಕೂಸು. ಸಂಗೀತ ಶಿಕ್ಷಣ ಒಂದೇ ಅಲ್ಲದೆ ಹಲವಾರು ಉತ್ತಮ ಗಾಯಕ, ವಾದಕರನ್ನು ಮೈಸೂರಿಗೆ ಕರೆಸಿ, ಅವರ ಕಛೇರಿಗಳನ್ನು ಏರ್ಪಾಡು ಮಾಡುವುದರಲ್ಲಿಯೂ ಈ ಸಂಸ್ಥೆ ಮುಂದಾಗಿದೆ. ಇದಕ್ಕೆ ಬೆನ್ನೆಲುಬಾಗಿ ನಿಂತವರು ಡಾ.ಭಾಸ್ಕರ್ ಅವರು. ಪ್ರತಿ ವರ್ಷ ತಮ್ಮ ಎಲ್ಲ ಸ್ತರಗಳ ಶಿಷ್ಯರನ್ನೂ ಸೇರಿಸಿಕೊಂಡು ಅವರು ನಡೆಸುವ ವಾರ್ಷಿಕೋತ್ಸವವು ಮೈಸೂರಿನ ಕಲಾಪ್ರೇಮಿಗಳು ಕಾತುರದಿಂದ ಎದುರು ನೋಡುವ ಒಂದು ಉತ್ಸವವಾಗಿ ಮಾರ್ಪಟ್ಟಿದೆ. ಉತ್ತರಾದಿ ಸಂಗೀತದ ಎಲ್ಲ ಮಜಲುಗಳನ್ನೂ ಈ ಕಾರ್ಯಕ್ರಮವು ವಿಶಿಷ್ಟ ರೀತಿಯಲ್ಲಿ ಪರಿಚಯಿಸುವುದು ಅದರ ವೈಶಿಷ್ಟ್ಯ. ವೀರಭದ್ರಯ್ಯ ಅವರ ಮಗಳು ಸುನಿತಾ ಸಹ ಭರವಸೆಯ ಹಿಂದುಸ್ತಾನೀ ಗಾಯಕಿಯಾಗಿ ಹೊರಹೊಮ್ಮಿದ್ದಾರೆ. ಅವರ ಪತ್ನಿ ಕೂಡ ಎಲ್ಲ ರೀತಿಯಿಂದಲೂ ಪತಿಯ ಸಂಗೀತ ಕೈಂಕರ್ಯಕ್ಕೆ ತಮ್ಮ ಸಹಾಯಹಸ್ತವನ್ನು ಜೋಡಿಸುತ್ತಾರೆ. ಸಂಗೀತವನ್ನೇ ಉಸಿರಾಡುತ್ತಿರುವ ಇಂತಹ ಸಾರ್ಥಕ ಬದುಕನ್ನು ನಡೆಸುತ್ತಿರುವ ಈ ಕಲಾಯೋಗಿಗೆ ಇದೀಗ ಅರವತ್ತರ ಸಂಭ್ರಮ. ಕಲಾದೇವಿಯು ಅವರಿಗೆ ಸಕಲ ಸನ್ಮಂಗಳವನ್ನು ಉಂಟುಮಾಡಲಿ ಎಂಬುದಾಗಿ ಈ ಲೇಖನ ಮೂಲಕ ಹಾರೈಕೆ.

 

  • ನಾಳೆ ಅಭಿನಂದನಾ ಸಮಾರಂಭ
    ಪಂ.ವೀರಭದ್ರಯ್ಯ ಹಿರೇಮಠ ರವರಿಗೆ ೬೦ ವರ್ಷಗಳು ತುಂಬಿದ ಪ್ರಯುಕ್ತ ಅವರ ಆಪ್ತ ಬಳಗದ ವತಿಯಿಂದ ಅಭಿನಂದನಾ ಸಮಾರಂಭವನ್ನು ಜೂ.೭ರಂದು ಸಂಜೆ ೬ಕ್ಕೆ ಮೈಸೂರಿನ ಶ್ರೀರಾಂಪುರದ ಎಸ್‌ಬಿಎಂ ಕಾಲೋನಿಯ ೨ನೇ ಹಂತದ ಆದಿಚುಂಚನಗಿರಿ ರಸ್ತೆಯಲ್ಲಿರುವ ಶಿವಭವನದಲ್ಲಿ ಆಯೋಜಿಸಲಾಗಿದೆ.
ಆಂದೋಲನ ಡೆಸ್ಕ್

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

7 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

8 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

9 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

11 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

13 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

13 hours ago