Andolana originals

ಉದ್ಯೋಗ ಇಲ್ಲದೇ ಪರಿತಪಿಸುತ್ತಿರುವ ಪೌರ ಕಾರ್ಮಿಕರು

ಕೃಷ್ಣ ಸಿದ್ದಾಪುರ

ಮರೀಚಿಕೆಯಾದ ಕಾರ್ಮಿಕ ಹಕ್ಕುಗಳು; ಸೌಲಭ್ಯ ವಂಚಿತರಾಗಿ ಬದುಕು ಸಾಗಿಸುತ್ತಿರುವ ದಿನಗೂಲಿ ನೌಕರರು 

ಸಿದ್ದಾಪುರ: ಆರೋಗ್ಯ ಸಮಾಜ ನಿರ್ಮಾಣಕ್ಕೆ ಪೌರ ಕಾರ್ಮಿಕರು ಮಾಡುವ ತ್ಯಾಗ, ಸೇವೆ ಮತ್ತು ಸಮರ್ಪಣೆ ಅಗ್ರಮಾನ್ಯವಾಗಿದ್ದರೂ ಇವರ ಬೇಡಿಕೆಗಳು ಮಾತ್ರ ಮೌನ ರೋದನವಾಗಿದೆ. ಇಂದಿಗೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ದುಡಿಯುತ್ತಿರುವ ಪೌರಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದಾರೆ.

ಗುಮಾಸ್ತ ಕೆಲಸದಿಂದ ಹಿಡಿದು ಪ್ರತಿಯೊಂದು ಕ್ಷೇತ್ರದಲ್ಲೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ ಪೈಪೋಟಿ ನೀಡುವ ಯುಗದಲ್ಲಿ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸಲು ಮಾತ್ರ ಯಾವುದೇ ಪೈಪೋಟಿ ಇಲ್ಲ. ಕಸ ಸಂಗ್ರಹಣೆ, ವಿಂಗಡಣೆ, ಸಂಸ್ಕರಣೆ, ಚರಂಡಿಗಳ ಕೊಚ್ಚೆಯನ್ನು ಸ್ವಚ್ಛಗೊಳಿಸಿ ನಗರವನ್ನು ಸ್ವಚ್ಛಂದವಾಗಿಸುವ ಪೌರ ಕಾರ್ಮಿಕರ ಬದುಕು ಶೋಚನೀಯವಾಗಿದೆ.

ಪಟ್ಟಣದ ಎಲ್ಲೆಡೆ ಕಸ ಸಂಗ್ರಹಣೆ ಮಾಡಿ ಹಸಿ ಕಸ, ಒಣ ಕಸವನ್ನಾಗಿ ಬೇರ್ಪಡಿಸುವ ಇವರು ಗಾಜು, ತುಕ್ಕು ಹಿಡಿದ ಕಬ್ಬಿಣ ವಸ್ತುಗಳು, ಬ್ಲೇಡ್ ಇತ್ಯಾದಿ ವಸ್ತುಗಳನ್ನು ಕೈಯಿಂದ ಬೇರ್ಪಡಿಸಬೇಕಾಗಿದೆ. ಈ ಸಂದರ್ಭದಲ್ಲಿ ಗಾಯಗಳಾದರೆ ಅನಾರೋಗ್ಯ ರಜೆಯ ವೇತನವನ್ನೂ ನೀಡದೆ ಸಂಕಷ್ಟಕ್ಕೆ ತಳ್ಳುತ್ತಿರುವುದಾಗಿ ಪೌರಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಇಬ್ಬರು ಮಹಿಳಾ ಸಿಬ್ಬಂದಿ ಸೇರಿ ಒಟ್ಟು ೬ ಮಂದಿ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಒಬ್ಬ ಮಹಿಳಾ ಸಿಬ್ಬಂದಿಗೆ ಮಾತ್ರ ಅನುಮೋದನೆ ದೊರೆಕಿದ್ದು ಸರ್ಕಾರದಿಂದ ಸಕಲ ಸೌಲಭ್ಯದೊಂದಿಗೆ ವೇತನ ಪಡೆಯುತ್ತಿದ್ದಾರೆ. ಇನ್ನುಳಿದಂತೆ ೫ ಮಂದಿ ದಶಕಗಳಿಂದಲೂ ದಿನಗೂಲಿ ನೌಕರರಾಗಿ ಮಾಸಿಕ ೧೮ ಸಾವಿರ ರೂ. ಸಂಬಳ ಪಡೆಯುತ್ತಿದ್ದು, ಇತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಪಂಚಾಯತ್ ರಾಜ್ ಕಾಯಿದೆಗೆ ಒಳಪಡುವ ಪೌರಕಾರ್ಮಿಕರು ಭವಿಷ್ಯ ನಿಧಿ (ಪಿಎಫ್), ಆರೋಗ್ಯ ಸೌಲಭ್ಯ, ಕ್ಟಾಟ್ರರ್ಸ್, ಪಿಂಚಣಿ ಹಾಗೂ ಕಾರ್ಮಿಕ ಕಾಯಿದೆ ಅಡಿಯಲ್ಲಿ ಬರುವ ಸರ್ಕಾರಿ ಸೌಲಭ್ಯಗಳು ಪಡೆಯಲು ಅನುಮೋದನೆ ಮಾಡಬೇಕಿದೆ. ಆದರೆ ಇಲ್ಲಿನ ಪೌರ ಕಾರ್ಮಿಕರು ಅನುಮೋದನೆಗೊಳ್ಳದೆ ಸೌಲಭ್ಯ ವಂಚಿತರಾಗಿದ್ದಾರೆ.

ನಮ್ಮನ್ನು ಖಾಯಂಗೊಳಿಸಿ, ಅನಾರೋಗ್ಯ ರಜೆ ಭತ್ಯೆ, ಸೇವಾ ಭದತ್ರೆ ನೀಡಿ ಎಂದು ಮನವಿ ಮಾಡಿದರೂ ಯಾವೊಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ಇವರ ಕೂಗಿಗೆ ಸ್ಪಂದಿಸುತ್ತಿಲ್ಲ. ಕೊಳಚೆ ಪ್ರದೇಶಗಳಲ್ಲಿ ದುಡಿಯುವ ಕಾರ್ಮಿಕರು ಮಾರಕ ರೋಗಕ್ಕೆ ಬಹು ಬೇಗನೆ ತುತ್ತಾಗುವ ಸಾಧ್ಯತೆ ಇದ್ದರೂ ಆರೋಗ್ಯ ಭದ್ರತೆ ಕೂಡ ದೊರಕುತ್ತಿಲ್ಲ.

ಅನುಮೋದನೆಗೊಳಿಸುವಂತೆ ಆಡಳಿತ ಮಂಡಳಿ ಬಳಿ ವಿಚಾರಿಸಿದಾಗ ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ಅಳಲು ತೋಡಿಕೊಳ್ಳುತ್ತಿರುವ ಪೌರ ಕಾರ್ಮಿಕರು, ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸವಿಲೇವಾರಿಗೆ ಜಾಗವನ್ನು ಗುರುತಿಸದ ಆಡಳಿತ ಮಂಡಳಿ ತನ್ನ ತಪ್ಪನ್ನು ಮರೆಮಾಚಲು ಸಾರ್ವಜನಿಕವಾಗಿ ಪೌರ ಕಾರ್ಮಿಕರು ಕೆಲಸ ಮಾಡುತ್ತಿಲ್ಲವೆಂದು ಆರೋಪಿಸುತ್ತಿದೆ ಎಂದು ದೂರಿದ್ದಾರೆ

” ಗಾಂಧಿ ಜಯಂತಿಯಂದು ಸನ್ಮಾನ ಸ್ವೀಕಾರಕ್ಕೆ ನಿರಾಕರಿಸಿದ್ದ ಸಂದರ್ಭದಲ್ಲಿ ಮುಂದಿನ ಸಭೆಯಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸುವುದಾಗಿ ಆಡಳಿತ ಮಂಡಳಿ ತಿಳಿಸಿದೆ. ಒಂದು ವೇಳೆ ಭರವಸೆಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು.”

-ಮಾದೇವ, ಹಿರಿಯ ಪೌರಕಾರ್ಮಿಕ

ʼ ಪೌರಕಾರ್ಮಿಕರಾಗಿ ದಿನಗೂಲಿ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಖಾಯಂಗೆ ಅನುಮೋದನೆಗೊಳಿಸಲು ಆದೇಶ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಗೆ ಬಂದು ಏಳೆಂಟು ತಿಂಗಳು ಕಳೆದರೂ ಈವರೆಗೂ ಆಡಳಿತ ಮಂಡಳಿ ಕ್ರಮ ಕೈಗೊಂಡಿಲ್ಲ. ನಮ್ಮ ಹಾಜರಾತಿ ಪುಸ್ತಕದ ಪ್ರತಿ ಕೇಳಿದರೆ ಅದು ಕಳೆದುಹೋಗಿದೆ ಎಂದು ಹೇಳುತ್ತಾರೆ.”

-ಸುರೇಶ, ಪೌರ ಕಾರ್ಮಿಕ 

” ಇತ್ತೀಚೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪೌರಕಾರ್ಮಿಕರ ಖಾಯಂ ಬಗ್ಗೆ ಚರ್ಚಿಸಲಾಗಿದೆ. ಗ್ರಾಮ ಪಂಚಾಯಿತಿಯ ಜನಸಂಖ್ಯೆ ಆಧಾರದಲ್ಲಿ ಪ್ರತಿ ೫, ೮ ಮತ್ತು ೧೦ ಸಾವಿರ ಜನರಿಗೆ ಒಬ್ಬರನ್ನು ಖಾಯಂಗೊಳಿಸಲು ಸೂಚಿಸಿದ್ದು, ಇದರ ಅನುಸಾರ ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಮೂವರು ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಅವಕಾಶ ಇದೆ.”

-ಅಪ್ಪಣ್ಣ, ತಾಪಂ ಕಾರ್ಯನಿರ್ವಾಹಣಾಧಿಕಾರಿ, ಪೊನ್ನಂಪೇಟೆ

” ಪೌರಕಾರ್ಮಿಕರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರ ಬೇಡಿಕೆಗಳು ನ್ಯಾಯಯುತವಾಗಿವೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಬಗೆಹರಿಸಲು ಕ್ರಮಕೈಗೊಳ್ಳುತ್ತೇನೆ.”

-ಜಾಫರ್ ಅಲಿ, ಗ್ರಾಮ ಪಂಚಾಯಿತಿ ಸದಸ್ಯ

ಆಂದೋಲನ ಡೆಸ್ಕ್

Recent Posts

ಉಡುಪಿ ಮಲ್ಪೆ ಬಳಿ ದೋಣಿ ಪಲ್ಟಿ: ಮೈಸೂರಿನ ಇಬ್ಬರು ಸಾವು

ಉಡುಪಿ: ಇಲ್ಲಿನ ಮಲ್ಪೆ ಕೋಡಿಬೆಂಗ್ರೆ ಬೀಷಚ್‌ ಸಮೀಪ ಪ್ರವಾಸಿ ದೋಣಿ ಮುಗುಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಮೈಸೂರಿನ ಇಬ್ಬರು ಮೃತಪಟ್ಟಿರುವ…

2 hours ago

ಜೆಡಿಎಸ್‌ ಬಿಟ್ಟಿದ್ದು ದ್ರೋಹ ಹೇಗಾಗುತ್ತೆ: ಶಾಸಕ ಶಿವಲಿಂಗೇಗೌಡ

ಹಾಸನ: ನಾನು ಜೆಡಿಎಸ್‌ ಬಿಟ್ಟು ಹೋದರೆ ದ್ರೋಹ ಹೇಗಾಗುತ್ತದೆ? ನಾನು ಅಲ್ಲಿದ್ದರೆ ಇನ್ನೊಂದು ಸೀಟ್‌ ಜಾಸ್ತಿ ಆಗೋದು ಅಷ್ಟೇ. ಏನು…

2 hours ago

ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲರಿಗೆ ಅಡ್ಡಿಪಡಿಸಿದ ವಿಚಾರ: ರಾಷ್ಟ್ರಪತಿಗೆ ವರದಿ ರವಾನಿಸಿದ ಲೋಕಭವನ

ಬೆಂಗಳೂರು: ವಿಧಾನಮಂಡಲ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಕಾಂಗ್ರೆಸ್‌ ಸದಸ್ಯರು…

3 hours ago

ಮಳವಳ್ಳಿ: ಈಜಲು ಹೋಗಿದ್ದ ಯುವಕ ಸಾವು

ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ…

3 hours ago

ಮಂಡ್ಯದಲ್ಲಿ 3 ಕೋಟಿ ವೆಚ್ಚದಲ್ಲಿ ಗಾಂಧಿಭವನ ನಿರ್ಮಾಣ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ಗಾಂಧಿ ಭವನದಲ್ಲಿ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ…

3 hours ago

ಗ್ರಾಮ ಪಂಚಾಯತ್‌ಗಳ 590 ಸಿಬ್ಬಂದಿಗಳಿಗೆ ಅನುಮೋದನೆ: ಆದೇಶ ಪ್ರತಿ ವಿತರಿಸಿದ ಸಚಿವ ಎನ್‌.ಚಲುವರಾಯಸ್ವಾಮಿ

ಮಂಡ್ಯ: ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ದಿನಾಂಕ:31-10-2017ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯತ್ ನಿಂದ ನೇಮಕಗೊಂಡು ನೀರುಗಂಟಿ, ಸ್ವಚ್ಛತಗಾರ, ಅಟೆಂಡರ್…

3 hours ago