Andolana originals

ನಡು ಬೀದಿಯಲ್ಲಿ ಕೆರೆಯಂತೆ ನಿಂತಿರುವ ಯುಜಿಡಿ ನೀರು

ಜಯಶಂಕರ್ ಬದನಗುಪ್ಪೆ

* ವಿದ್ಯಾರಣ್ಯಪುರಂ ಬೆಸ್ತರ ಬೀದಿ ೬ನೇ ಕ್ರಾಸ್ ನಿವಾಸಿಗಳ ಗೋಳು

* ಮಳೆ ಬಂದರೆ ಮಳೆ ನೀರಿನ ಜೊತೆ ಮನೆಗಳಿಗೆ ನುಗ್ಗುವ ಕಲುಷಿತ ನೀರು

* ಸಾಂಕ್ರಾಮಿಕ ರೋಗ ಆಹ್ವಾನಿಸುತ್ತಿರುವ ಕೊಳಚೆ ನೀರು

* ನಿತ್ಯ ನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳು

ಮೈಸೂರು: ನಗರದ ವಿದ್ಯಾರಣ್ಯಪುರಂ (ಕನಕಗಿರಿ) ಸೀವೇಜ್ ಫಾರಂ ರಸ್ತೆಯ ಬೆಸ್ತರ ಬ್ಲಾಕ್ ೬ನೇ ಕ್ರಾಸ್ ಕಳೆದ ಎರಡು ತಿಂಗಳುಗಳಿಂದಲೂ ಸಂಪೂರ್ಣವಾಗಿ ಯುಜಿಡಿ ನೀರಿನಿಂದ ಆವೃತವಾಗಿದೆ.

ನಳಂದ ಆಂಗ್ಲ ಮಾಧ್ಯಮ ಶಾಲೆಯಿಂದ ಕೆಳಭಾಗದಲ್ಲಿ ಎಡಕ್ಕೆ ಇರುವ ದೊಡ್ಡ ಖಾಲಿ ನಿವೇಶನದ ಎರಡೂ ಬದಿಯ ವಾಸದ ಮನೆಗಳ ನಿವಾಸಿಗಳು ಮನೆಯಿಂದ ಹೊರಗೆ ಬರಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಲುಷಿತ ನೀರು ಕೆರೆಯಂತೆ ನಿಂತು, ಇಡೀ ಪ್ರದೇಶ ದುರ್ವಾಸನೆ ಬೀರುತ್ತಿದ್ದು, ಮನೆಗಳ ಒಳಗೂ ಇರಲು ಸಾಧ್ಯವಾಗದ ಪರಿಸ್ಥಿತಿ ಸೃಷ್ಟಿಯಾಗಿದೆ.

ಕೆಲವರು ಹೊಲಸು ನೀರನ್ನು ದಾಟಲು ಹೋಗಿ ಜಾರಿ ಬಿದ್ದಿರುವ ಘಟನೆಗಳೂ ನಡೆದಿವೆ. ಇಲ್ಲಿ ವಾಸ ಮಾಡುವವರು ತಮ್ಮ ಮನೆಗಳ ಮುಂದೆ ಕಲುಷಿತ ನೀರು ದಾಟಿ ಹೋಗಲು ಕಲ್ಲುಗಳನ್ನು ಇರಿಸಿ ಕೊಂಡಿದ್ದಾರೆ. ಈ ಹೊಸಲು ನೀರನ್ನು ದಾಟಿ ಹೋಗಲು ನಿತ್ಯ ಸರ್ಕಸ್ ಮಾಡಬೇಕಿದೆ. ಈಗ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಇಡೀ ಪ್ರದೇಶ ಮಲಿನ ನೀರಿನಿಂದ ಆವೃತವಾಗಿ ಪಾಚಿಕಟ್ಟಿ ಸೊಳ್ಳೆ, ನೊಣ, ಹಾವು, ಚೇಳು,ಇಲಿ, ಹೆಗ್ಗಣಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಮಳೆ ಜೋರಾಗಿ ಬಂದರೆ ಒಂದು ಲೇನ್‌ನ ಮನೆಗಳಿಗೆ ನೀರು ನುಗ್ಗುತ್ತದೆ. ಇದು ಮಳೆ ನೀರಾದರೆ ಸಹಿಸಿಕೊಳ್ಳಬಹುದು, ಆದರೆ ಯುಜಿಡಿ ನೀರು ಮಳೆಯ ನೀರಿನೊಂದಿಗೆ ಸೇರಿ ಮನೆಗಳಿಗೆ ನುಗ್ಗುವುದರಿಂದ ನರಕಯಾತನೆ ಅನುಭವಿಸುವಂತಾಗಿದೆ. ಬಾಡಿಗೆಗೆ ಮನೆ ಪಡೆದು ವಾಸಿಸಲು ಬಂದವರು ಇಲ್ಲಿನ ಯುಜಿಡಿ ನೀರಿನ ವಾಸನೆಯಿಂದ ಪಾರಾಗಲು ಮೂರೇ ತಿಂಗಳಿಗೆ ಇಲ್ಲಿಂದ ಜಾಗ ಖಾಲಿಮಾಡುತ್ತಾರೆ.

ಇಲ್ಲೇ ಮನೆ ನಿರ್ಮಿಸಿಕೊಂಡು ವಾಸ ಮಾಡುವವರು ವಿಧಿ ಇಲ್ಲದೆ ದುರ್ವಾಸನೆಯನ್ನು ಸಹಿಸಿಕೊಂಡು, ಹೊಲಸು ನೀರಿನ ನಡುವೆಯೇ ವಾಸಮಾಡಬೇಕಾಗಿದ್ದು, ಇವರ ಪಾಡು ಹೇಳ ತೀರದಾಗಿದೆ. ಈ ಕಲುಷಿತ ವಾತಾವರಣದಿಂದ ಬೇಸತ್ತ ಇಲ್ಲಿನ ನಿವಾಸಿಗಳು ಮೈಸೂರು ಮಹಾನಗರಪಾಲಿಕೆ, ಶಾಸಕರು ಹಾಗೂ ಪಾಲಿಕೆ ಇಂಜಿನಿಯರ್‌ಗಳಿಗೆ ಹಲವು ಬಾರಿ ಈ ಸಮಸ್ಯೆಯ ಬಗ್ಗೆ ತಿಳಿಸಿ ಪರಿಹರಿಸಿಕೊಡುವಂತೆ ಮನವಿ ಮಾಡಿದ ಮೇರೆಗೆ ಶಾಸಕ ಟಿ.ಎಸ್.ಶ್ರೀವತ್ಸ, ಪಾಲಿಕೆ ಇಂಜಿನಿಯರ್ ಹಾಗೂ ಸಿಬ್ಬಂದಿ ಪರಿಶೀಲಿಸಿ ಯುಜಿಡಿ ನೀರು ಹೊರಗೆ ಉಕ್ಕಿ ಹರಿಯುವುದನ್ನು ನಿಲ್ಲಿಸಲು ಪ್ರಯತ್ನ ಮಾಡಿದರಾದರೂ ಈ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಜನರಿಗೆ ಯುಜಿಡಿ ನೀರಿನ ಕಿರಿಕಿರಿಯೂ ತಪ್ಪಿಲ್ಲ. ಈ ಭಾಗದ ಯುಜಿಡಿ ಮ್ಯಾನ್ ಹೋಲ್‌ಗಳು ಸದಾ ಉಕ್ಕಿ ಹರಿಯುತ್ತವೆ. ಅವೈಜ್ಞಾನಿಕ ಯುಜಿಡಿ ವ್ಯವಸ್ಥೆಯೇ ಇದಕ್ಕೆ ಕಾರಣವಾಗಿದೆ. ಮೈಸೂರು ನಗರ ಪಾಲಿಕೆಯಲ್ಲಿ ಈಗ ಕಾರ್ಪೊರೇಟರ್‌ಗಳೂ ಇಲ್ಲ, ಅವರ ಅವಧಿ ಮುಗಿದು ಹಲವು ತಿಂಗಳುಗಳು ಕಳೆದರೂ ಚುನಾವಣೆ ನಡೆಯದಿರುವುದರಿಂದ ಎಲ್ಲ ಸಮಸ್ಯೆಗಳಿಗೂ ಅಧಿಕಾರಿಗಳೇ ಸ್ಪಂದಿಸಬೇಕಿದೆ.

ಆದರೆ ಇಂತಹ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ, ಯುಜಿಡಿ ನೀರು ಹೊರ ಬಾರದ ಹಾಗೆ ಶಾಶ್ವತ ಪರಿಹಾರ ಕಂಡುಹಿಡಿಯುವುದು ಮಹಾನಗರಪಾಲಿಕೆಗೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಯಮಯಾತನೆಯಲ್ಲಿ ಬದುಕುತ್ತಿರುವ ಇಲ್ಲಿನ ನಿವಾಸಿಗಳು ಪ್ರಶ್ನಿಸುತ್ತಾರೆ. ಸಂಬಂಧಪಟ್ಟವರು ಸಾಂಕ್ರಾಮಿಕ ರೋಗಗಳು ಹರಡುವ ಮುನ್ನ ಈ ಸಮಸ್ಯೆಗೆ ಪರಿಹಾರ ಕಲ್ಪಿಸಿ, ನಾವು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡ ಬೇಕೆಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

” ತಾತ್ಕಾಲಿಕವಾಗಿ ನೀರು ಹರಿಯುವುದನ್ನು ನಿಲ್ಲಿಸಿದರೂ ಒಂದೇ ದಿನದಲ್ಲಿ ಯಥಾ ಸ್ಥಿತಿ ನಿರ್ಮಾಣವಾಗುತ್ತದೆ. ಇಲ್ಲಿರುವ ಯುಜಿಡಿಯ ಎಲ್ಲ ಮ್ಯಾನ್ ಹೋಲ್‌ಗಳಿಂದ ಕಲುಷಿತ ನೀರು ಹೊರಬಂದು ಸದಾ ಹರಿಯುತ್ತಿರುವುದರಿಂದ ನಾವು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.”

 ಸುಬ್ರಹ್ಮಣ್ಯ

” ಯುಜಿಡಿ ಕಲುಷಿತ ನೀರು ಸದಾ ಹರಿಯುವುದರಿಂದ ದುರ್ವಾಸನೆ ಬೀರುತ್ತಿದ್ದು, ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮನೆಯ ಒಳಗೂ ಇರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ಹೊರಗೆ ಹೋಗಬೇಕಾದರೆ ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ. ಕೆಲವರು ಕಾಲು ಜಾರಿ ಕೊಳಚೆ ನೀರಿನಲ್ಲಿ ಬಿದ್ದಿರುವ ಘಟನೆಗಳೂ ನಡೆದಿವೆ.”

ರಾಜು ಎಂ.

” ಯುಜಿಡಿ ಕಲುಷಿತ ನೀರು ನಿತ್ಯ ನಡು ಬೀದಿಯಲ್ಲಿ ಹರಿಯುತ್ತಿರುವುದರಿಂದ ತಿರುಗಾಡಲು, ವಾಹನಗಳು ಸಂಚರಿಸಲು ಯಾತನೆ ಅನುಭವಿಸುವಂತಾಗಿದೆ. ಶಾಸಕ ಟಿ.ಎಸ್.ಶ್ರೀವತ್ಸ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಸರಿಪಡಿಸುವ ಪ್ರಯತ್ನ ಮಾಡಲಾಯಿತು. ಆದರೆ ಕಲುಷಿತ ನೀರು ಹರಿಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯದಿರುವುದರಿಂದ ಇಲ್ಲಿನ ನಿವಾಸಿಗಳು ತುಂಬಾ ತೊಂದರೆ ಅನುಭವಿಸುವಂತಾಗಿದೆ.”

-ಕೃಷ್ಣೇ ಅರಸ್

ಆಂದೋಲನ ಡೆಸ್ಕ್

Recent Posts

ವರುಣಾ ನಾಲೆಯಲ್ಲಿ ಮಹಿಳೆ ಶವ ಪತ್ತೆ : ಚಿನ್ನಕ್ಕಾಗಿ ಕೊಲೆ ಶಂಕೆ?

ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…

44 seconds ago

ವಾಯುನೆಲೆ ಮೇಲೆ ಭಾರತದ ದಾಳಿ ಒಪ್ಪಿಕೊಂಡ ಪಾಕಿಸ್ತಾನ

ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…

12 mins ago

ಸಿನಿ ಪಯಣಕ್ಕೆ ದಳಪತಿ ವಿಜಯ್‌ ವಿದಾಯ : ಭಾವುಕರಾಗಿ ಅಭಿಮಾನಿಗಳಿಗೆ ಹೇಳಿದ್ದೇನು?

ಚೆನ್ನೈ : ದಳಪತಿ ವಿಜಯ್‌ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…

15 mins ago

ರಾಷ್ಟ್ರಪಿತನ‌ ಹೆಸರನ್ನೇ ಅಳಿಸುವ ಪಿತೂರಿಯನ್ನು ಸೋಲಿಸೋಣ : ಸಿ.ಎಂ.ಸಿದ್ದರಾಮಯ್ಯ ಕರೆ

ಬೆಂಗಳೂರು : ಕಾಂಗ್ರೆಸ್‌ ಎಂದರೆ ಕೇವಲ ಒಂದು ರಾಜಕೀಯ ಪಕ್ಷವಲ್ಲ. ಇದೊಂದು ಚಳುವಳಿ ಮತ್ತು ಸಿದ್ಧಾಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

22 mins ago

ಬೀದಿನಾಯಿ ದಾಳಿ : ಇಬ್ಬರು ವಿದ್ಯಾರ್ಥಿಗಳೂ ಸೇರಿದಂತೆ ನಾಲ್ವರಿಗೆ ಗಾಯ

ಗೋಣಿಕೊಪ್ಪ : ಪಟ್ಟಣದಲ್ಲಿ ಬೀದಿನಾಯಿ ದಾಳಿಗೆ ಇಬ್ಬರು ವಿದ್ಯಾರ್ಥಿಗಳೂ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ಎಚ್ಚೆತ್ತ ಸ್ಥಳೀಯರು ಮತ್ತಷ್ಟು…

36 mins ago

ಕನ್ನಡ ನಾಡು ನುಡಿ ನಮ್ಮ ಹೆಮ್ಮೆ : ಹಾಡಿ ಹೊಗಳಿದ ಪ್ರಧಾನಿ ಮೋದಿ

ಹೊಸದಿಲ್ಲಿ : ಕನ್ನಡ ನಾಡು-ನುಡಿ ನಮ್ಮ ಹೆಮ್ಮೆ, ಕನ್ನಡ ಭೂಮಿ ನಮ್ಮ ಹೆಮ್ಮೆಯಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ಮುಕ್ತಕಂಠದಿಂದ…

38 mins ago