ಭೇರ್ಯ ಮಹೇಶ್
ಯುಗಾದಿಯಂದು ಗ್ರಾಮೀಣ ಭಾಗದಲ್ಲಿ ಇಂದಿಗೂ ಉಳಿದಿರುವ ಆಚರಣೆ
ಕೆ.ಆರ್.ನಗರ: ಯುಗಾದಿ ಹಬ್ಬದ ಅಂಗವಾಗಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳ ಹಲವೆಡೆ ರೈತರು ಸಂಭ್ರಮದಿಂದ ಹೊನ್ನಾರನ್ನು ಕಟ್ಟಿ ಭೂತಾಯಿ ಯನ್ನು ಪ್ರಾರ್ಥಿಸಿ ತಮ್ಮ ಜಮೀನಿನಲ್ಲಿ ಪೂಜೆ ಸಲ್ಲಿಸಿದರು.
ಸೂರ್ಯೋದಯಕ್ಕೂ ಮುನ್ನವೇ ರೈತರು ಹೊನ್ನೇರನ್ನು ಕಟ್ಟಿ ಹೊಸ ಬಟ್ಟೆಗಳನ್ನು ಧರಿಸಿ ಜಮೀನುಗಳಿಗೆ ಗೊಬ್ಬರ ಸಿಂಪಡಿಸಿ ಉಳುವ ಮೂಲಕ ಹೊಸ ವರ್ಷದ ಮೊದಲ ದಿನ ಕೃಷಿ ಚಟುವಟಿಕೆ ಆರಂಭಿಸಿ ಬೆಳೆ-ಬೆಲೆ ಚೆನ್ನಾಗಿ ಬಂದು ರೋಗ- ರುಜಿನ ಮಾಯವಾಗಿ ನೆಮ್ಮದಿಯ ಜೀವನ ಸಿಗಲೆಂದು ಬೇಡುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ.
ಹೊನ್ನೇರು ಸಡಗರ: ಯುಗಾದಿ ಆರಂಭವಾಗುತ್ತಿದ್ದಂತೆ ಮಳೆ ಬರಲಿದ್ದು, ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಎತ್ತುಗಳು ಮತ್ತು ಗಾಡಿಗೆ ಹೊಂಬಾಳೆ ಕಟ್ಟಿ ಪೂಜೆ ಸಲ್ಲಿಸಿ ಗೊಬ್ಬರವನ್ನು ಜಮೀನುಗಳಿಗೆ ಸಿಂಪಡಿಸುವ ಸಂಪ್ರದಾಯಕ್ಕೆ ಹೊನ್ನೇರು ಎಂದು ಕರೆಯುತ್ತಾರೆ. ಅವಳಿ ತಾಲ್ಲೂಕುಗಳಲ್ಲಿ ಬಹುತೇಕ ಗ್ರಾಮಗಳಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ.
ಹೊಸ ಅಗ್ರಹಾರ ಗ್ರಾಮದಲ್ಲಿ ಹೊನ್ನಾರು ವಿಶೇಷ : ಗ್ರಾಮದ ಹೊರಭಾಗದಲ್ಲಿ ಹನುಮನ ಹಳ್ಳಿ ರಸ್ತೆಯ ಮಗ್ಗುಲಲ್ಲಿರುವ ದಿವಂಗತ ಚನ್ನೇಗೌಡರ ಪುತ್ರ ಪ್ರಾಧ್ಯಾಪಕ ಎಚ್.ಸಿ.ಆನಂದ ಅವರ ಜಮೀನಿನಲ್ಲಿ ನಡೆದ ಹೊನ್ನೇರು ಸಂಭ್ರಮದಲ್ಲಿ ಗ್ರಾಮದ ಐವರು ಯುವಕರು ತಮ್ಮ ರಾಸುಗಳಿಗೆ ನೇಗಿಲನ್ನು ಹೂಡಿದರು. ಈ ವೇಳೆ ಹಳ್ಳಿಯ ಸಂಪ್ರದಾಯವನ್ನು ಪುನರುತ್ಥಾನಗೊಳಿಸಿ, ಗ್ರಾಮಸ್ಥರನ್ನು ಹುರಿದುಂಬಿಸಲು ಆಗಮಿಸಿದ್ದ ಗಾವಡಗೆರೆಯ ಗುರುಲಿಂಗ ಜಂಗಮ ದೇವರ ಮಠದ ಶ್ರೀ ನಟರಾಜ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಅಡಗೂರು ಎಚ್.ವಿಶ್ವನಾಥ್, ಶರಣ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕದ ಅಧ್ಯಕ್ಷರಾದ ಮ.ಗು. ಸದಾನಂದಯ್ಯ ಅವರು ಮೇಟಿ ಹಿಡಿದು ಚಾವಟಿಯನ್ನು ಬೀಸುತ್ತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಗ್ರಾಮದ ರಾಜಶೇಖರ, ಮೋಹನ, ಮನು ನಾಯಕ, ರಾಮಯ್ಯ, ಗಿರೀಶ ಎಂಬ ಯುವಕರು ಹೊನ್ನೇರನ್ನು ಮುನ್ನಡೆಸಿದರು. ಶ್ರೀ ನಟರಾಜ ಸ್ವಾಮೀಜಿ ಮಾತನಾಡಿದರು. ಮ.ಗು. ಸದಾನಂದಯ್ಯ ಅವರು ಮಾತನಾಡಿ, ಗ್ರಾಮದ ಐತಿಹಾಸದ ಕುರಿತು ತಿಳಿಸಿದರು.
ಇದಕ್ಕೂ ಮೊದಲು ಮಧ್ಯಾಹ್ನ ಗ್ರಾಮದ ಬಸವನಗುಡಿಗೆ ಆಗಮಿಸಿದ ಮುಖಂಡರು ಯುಗಾದಿ ಸಂಪ್ರದಾಯದಂತೆ ಪಂಚಾಂಗ ಶ್ರವಣಕ್ಕೆ ಅನುವು ಮಾಡಿಕೊಟ್ಟರು. ಗ್ರಾಮದ ಹಿರಿಯರಾದ ರಾಮರಾವ್ ಅವರು ಪಂಚಾಂಗ ಶ್ರವಣ ಮಾಡಿದರು. ಇದೇ ವೇಳೆ ಆನಂದ ಅವರು ತಮ್ಮ ಊರಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾದ ಬಸವರಾಜು, ವೀರಭದ್ರ ಶೆಟ್ಟಿ ನಾಗೇಗೌಡ ಹಾಗೂ ಶಾಲೆಯ ಆಯಾ ಆಗಿದ್ದ ಗ್ರಾಮದ ಸರೋಜಮ್ಮ ಅವರನ್ನು ಗೌರವಿಸಿದರು.
ಆ ಹೊತ್ತಿಗೆ ಬಸವನಗುಡಿಯ ಮುಂದೆ ಗ್ರಾಮದ ಯುವಕರು ತಮ್ಮ ಜಾನು ವಾರುಗಳನ್ನು ಸಿಂಗರಿಸಿಕೊಂಡು ಸಾಲಾಗಿ ನಿಲ್ಲಿಸಿದರು. ಮಂಜುನಾಥ ಮತ್ತು ಷಡಕ್ಷರಿ ಅವರು ಜಾನುವಾರುಗಳು ಮತ್ತು ನೇಗಿಲು- ನೊಗಕ್ಕೆ ಪೂಜೆ ಸಲ್ಲಿಸಿದರು. ಬಳಿಕ ನೇಗಿಲನ್ನು ಹೊತ್ತ ರಾಸುಗಳೊಂದಿಗೆ ತಳವಾರರಾದ ಸ್ವಾಮಿ ಮತ್ತು ರಾಮ ಅವರ ತಮಟೆಯ ಸದ್ದಿನಲ್ಲಿ ಊರ ಪ್ರದಕ್ಷಿಣೆ ಹೊರಟ ರೈತರು ಹೊಲದತ್ತ ಸಾಗಿದರು.
ಹೊಲದಲ್ಲಿ ಹೊನ್ನಾರು ಮುಗಿಸಿ ಊರಿಗೆ ವಾಪಸ್ ಆದ ಯುವಕರು ತಮ್ಮ ರಾಸುಗಳನ್ನು ಬಂಡಿಗಳಿಗೆ ಹೂಡಿ ಊರಿನ ಬೀದಿಗಳಲ್ಲಿ ಓಡಿಸಿ ಸಂಭ್ರಮಿಸಿದರು. ಗ್ರಾಮದ ಮುಖಂಡರಾದ ಸಿದ್ದೇಗೌಡ, ಸೀತಾರಾಮ ನಾಯಕ, ಪುಟ್ಟೇಗೌಡ, ಪ್ರಕಾಶ್, ಚಂದ್ರಪ್ಪ, ಗೋಪಾಲ್, ಕುಮಾರ್, ವೆಂಕಟೇಶ, ಮನು, ರಂಗಸ್ವಾಮಿ, ಜಲೇಂದ್ರ, ಲೋಕೇಶ, ಪ್ರಶಾಂತ್, ಮಣಿಯಮ್ಮ ಕಮಲಮ್ಮ ಮತ್ತಿತರರು ಹಾಜರಿದ್ದರು.
” ಇದು ನಾವೆಲ್ಲ ಚಿಕ್ಕಂದಿನಲ್ಲಿ ಈ ಹಬ್ಬದಂದು ಕಾಣುತ್ತಿದ್ದ ಸರ್ವೇಸಾಮಾನ್ಯವಾದ ದೃಶ್ಯ. ಆಧುನಿಕತೆಯ ನಗರ ಜೀವನದ ಆಕರ್ಷಣೆಯಲ್ಲಿ ಹಳ್ಳಿಗಳು ತಮ್ಮ ಸೊಗಡನ್ನು ಮರೆತೇ ಬಿಟ್ಟಿವೆ. ಅಲ್ಲಲ್ಲಿ ಬೆರಳೆಣಿಕೆಯಷ್ಟು ಮಂದಿ ಇದನ್ನು ಆಚರಿಸುತ್ತಾ ಬರುತ್ತಿದ್ದಾರಾದರೂ ಗ್ರಾಮದಲ್ಲಿ ಆಯೋಜಿಸಿರುವುದು ಪ್ರಶಂಸನಾರ್ಹ ವಿಷಯ. ಇದನ್ನು ನೀವು ಮುಂದುವರಿಸಿಕೊಂಡು ಹೋಗುವ ಮೂಲಕ ಹೆಮ್ಮರವಾಗಿ ಬೆಳೆಸಿ.”
-ಅಡಗೂರು ಎಚ್.ವಿಶ್ವನಾಥ್
ಸುಂಟಿಕೊಪ್ಪದಲ್ಲಿ ೧೮ ಲಕ್ಷ ರೂ. ವೆಚ್ಚದ ಮಂಟಪ ನಿರ್ಮಾಣ ೩ ದಿನಗಳ ಧಾರ್ಮಿಕ ಕಾರ್ಯಕ್ರಮ ಸುಂಟಿಕೊಪ್ಪ: ಇಲ್ಲಿನ ಶ್ರೀ ಪುರಂ…
ಪಿರಿಯಾಪಟ್ಟಣ: ದೇಸಿ ಬೀಜಗಳನ್ನು ಉಳಿಸಿದರೆ ಮಾತ್ರ ಮುಂದಿನ ಯುವ ಜನಾಂಗಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂದು ಸಾವಯವ ರೈತ…
ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್‌ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ…
ಕೆ.ಬಿ.ರಮೇಶನಾಯಕ ಟಿಎಚ್‌ಒ ಹುದ್ದೆಗೆ ಡಿಎಚ್‌ಒ ವರ್ಗಾವಣೆ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ…
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…