ಕೀರ್ತಿ ಬೈಂದೂರು
ವಯಸ್ಸು ೬೬ರ ಗಡಿ ದಾಟುತ್ತಿದ್ದರೂ ಶ್ಯಾಮಲಾ ಅವರು ಈಗಲೂ ಪರ್ವತಾರೋಹಣಕ್ಕೆ ತುದಿಗಾಲಿನಲ್ಲಿ ನಿಲ್ಲುತ್ತಾರೆ. ಸಂಸ್ಕ ತ ಅಧ್ಯಾಪಕರಾಗಿದ್ದ ತಂದೆಯ ಸಂಪ್ರದಾಯ ಮಗಳ ಆಸಕ್ತಿಗೆ ತೊಡಕಾಗಲಿಲ್ಲವೇ? ಪತ್ರಕರ್ತೆಯಾಗಿದ್ದ ಶ್ಯಾಮಲಾ ಅವರು ಹಿಮಾಲಯದ ಪೂರ್ವದಿಂದ ಪಶ್ಚಿಮದವರೆಗೆ ಟ್ರಾನ್ಸ್ ಹಿಮಾಲಯನ್ ಚಾರಣ ಕೈಗೊಂಡು ಪರ್ವತಾರೋಹಿಯಾದ ಸಾಹಸಯಾನವೇ ರೋಚಕ.
ಶ್ಯಾಮಲಾ ಪದ್ಮನಾಭನ್ ಅವರು ಮೂಲತಃ ಮೈಸೂರಿನವರು. ತಂದೆ ಪದ್ಮನಾಭನ್, ತಾಯಿ ಶಾರದಾ. ಮನೆ ಜನರಿಗೆಲ್ಲ ಪ್ರೀತಿಯ ಮಗಳಾಗಿದ್ದ ಶ್ಯಾಮಲಾ ಅವರಿಗೆ ಈ ಪ್ರೀತಿಯ ಬಂಧ ಬಂಧನವಾಗಲೇ ಇಲ್ಲ. ತಂದೆಯವರ ಕಟ್ಟುನಿಟ್ಟಾದ ಅಧ್ಯಾಪನ, ಮನೆಯ ಸಂಪ್ರದಾಯ ವಾತಾವರಣ ಮಗಳ ಆಸಕ್ತಿಗೆ ಪೂರಕವಾಗಿಯೇ ಒದಗಿಬಂತು. ಶ್ಯಾಮಲಾ ಅವರು ಓದುತ್ತಿದ್ದುದು ವಿಜ್ಞಾನವೇ ಆಗಿದ್ದರೂ ಎನ್.ಎನ್.ಸಿ.ಯ ಶಿಸ್ತುಬದ್ಧ ವಿದ್ಯಾರ್ಥಿನಿಯಾಗಿದ್ದರು. ಅಲ್ಲಿ ನೀಡುತ್ತಿದ್ದ ಶಿಕ್ಷೆ ಕಲಿಕೆಯ ಭಾಗವೆನ್ನುತ್ತಿದ್ದರು. ಎನ್.ಎನ್.ಸಿ.ಯಲ್ಲಿದ್ದಾಗ ರಾಕ್‌ಲೈನ್ ವಿಂಗ್ ಟ್ರೈನಿಂಗ್ ಎಂಬ ಕೋರ್ಸ್ ಇತ್ತು. ಅದಕ್ಕಾಗಿ ಬಂಡೆ ಏರುವುದು ಹೇಗೆ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದ್ದರು. ಚಾಮುಂಡಿ ಬೆಟ್ಟ ಏರುತ್ತಿರ ಬೇಕಾದರೆ ಮುಂದೆ ತಾನು ಹಿಮಾಲಯದ ಶಿಖರಗಳನ್ನು ಏರಬಹುದೆಂದು ಊಹಿಸಿಯೂ ಇರಲಿಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಸಾಹಸಮಯ ಬದುಕನ್ನು ತಾನೂ ಅನುಭವಿಸಬೇಕೆಂದು ಕನಸು ಕಂಡಿದ್ದ ಅವರನ್ನು ಕೈಬೀಸಿ ಕರೆದದ್ದು, ಚಾರಣ ಮತ್ತು ಪರ್ವತಾರೋಹಣದ ವಿಸ್ಮಯಲೋಕ.
೧೯೮೧ರಲ್ಲಿ ಶ್ಯಾಮಲಾ ಅವರು ಭಾರತೀಯ ಪರ್ವತಾರೋಹಣ ಪ್ರತಿಷ್ಠಾನದ ಮೂಲಕ ಪರ್ವತಾರೋಹಣಕ್ಕೆ ಸಂಬಂಽಸಿದಂತೆ ಬೇಸಿಕ್ ಮತ್ತು ಅಡ್ವಾನ್ಸ್ಡ್ ಕೋರ್ಸ್‌ಗಳನ್ನು ಕಲಿಯುವ ಸಲುವಾಗಿ ಡಾರ್ಜಲಿಂಗ್‌ಗೆ ತೆರಳಿದ್ದರು. ಇದಕ್ಕೆಂದೇ ನಡೆವ ಆಯ್ಕೆ ಪ್ರಕ್ರಿಯೆಯಲ್ಲಿ ಶ್ಯಾಮಲಾ ಅವರು ಉತ್ತೀರ್ಣರಾಗಿದ್ದರು. ಪ್ರತೀ ಶನಿವಾರ, ಭಾನುವಾರಗಳಂದು ಚಾಮುಂಡಿ ಬೆಟ್ಟ ಏರುತ್ತಿದ್ದುದು, ನಾಡಿನುದ್ದಗಲಕ್ಕೂ ಸ್ಕೂಲ್ ಆಫ್ ಅಡ್ವೆಂಚರ್ ಸಂಸ್ಥೆಯ ಸದಸ್ಯರೊಂದಿಗೆ ಚಾರಣ ಹೊರಡುತ್ತಿದ್ದುದರಿಂದ ದೇಹ ಸರ್ವ ಬಗೆಯಲ್ಲೂ ಸದೃಢವಾಗಿತ್ತು. ಡಾರ್ಜಿಲಿಂಗ್ ಹಿಮಾಲಯನ್ ಮೌಂಟನೇರಿಂಗ್ ಇನ್ ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆಯುವ ವೇಳೆ, ದೇಹ ಪ್ರತಿಸ್ಪಂದಿಸದಿದ್ದರೆ ಒಂದು ವಾರದೊಳಗೆ ವಾಪಸ್ ಕಳುಹಿಸಿಕೊಡುತ್ತಿದ್ದರು. ಎತ್ತರ ಪ್ರದೇಶಕ್ಕೆ ಹೋಗುತ್ತಿದ್ದಂತೆ ತಲೆನೋವು ಸಹಜವಾಗಿ ಕಾಣಿಸಿಕೊಳ್ಳುತ್ತದೆ, ಒಂದು ದಿನದೊಳಗೆ ದೇಹಪ್ರಕೃತಿ ಹೊಂದಿಕೊಳ್ಳಬೇಕು. ಇಲ್ಲದಿದ್ದರೆ, ಏರುತ್ತಾ ಹೋದಂತೆ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಉಸಿರಾಟ, ಹೃದಯಬಡಿತ ವ್ಯತ್ಯಯವಾಗಿ ಕೆಲವಷ್ಟು ಮಂದಿ ಹಿಂತಿರುಗುತ್ತಿದ್ದರು.
ಭಾರತೀಯ ಪರ್ವತಾರೋಹಣ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುತ್ತಿದ್ದ ಪರ್ವತಾರೋಹಣ ಚಟುವಟಿಕೆಗಳಿಗೆ ವಿದೇಶಿಗರೂ ಬರುತ್ತಿದ್ದರು. ಹೀಗೆ ಬಂದವರಿಗೆ ಸ್ಥಳೀಯ ಸಂಪರ್ಕಕ್ಕೆ ನೆರವಾಗಲೆಂದು ಸಂಪರ್ಕಾಧಿಕಾರಿಗಳ ಅಗತ್ಯವಿರುತ್ತಿತ್ತು. ಆಗೆಲ್ಲ ಸಂಪರ್ಕಾಧಿಕಾರಿಯಾಗಿ ಶ್ಯಾಮಲಾ ಅವರು ವಿದೇಶಿಗರೊಂದಿಗೆ ಕೇವಲ ಶಿಖರ ಹತ್ತುವುದಕ್ಕೆ ಮಾತ್ರ ನೆರವು ನೀಡುತ್ತಿರಲಿಲ್ಲ. ಅವರೆಲ್ಲರೊಂದಿಗೆ ಸಾಂಸ್ಕ ತಿಕ ಕೊಡು-ಕೊಳ್ಳುವಿಕೆ, ಬಾಂಧವ್ಯವನ್ನೂ ಬೆಸೆದುಕೊಳ್ಳುತ್ತಿದ್ದರು. ಹೀಗೊಮ್ಮೆ ಸಿಬಿ೧೩ ಶಿಖರವೇರುವುದಕ್ಕೆ ಅಮೆರಿಕನ್ ಲೇಡಿಸ್ ಎಕ್ಸ್‌ಪೆಡಿಷನ್ ತಂಡ ಬಂದಿತ್ತು. ಇವರೊಂದಿಗೆ ಧರ್ಮಶಾಲಾಗೆ ತೆರಳುತ್ತಿರಬೇಕಾದರೆ, ಬಸ್ಸಿನ ಮೇಲೆ ಶಿಖರವೇರಲು ಬೇಕಾದ ಅತ್ಯಗತ್ಯ ಸಾಮಾನುಗಳನ್ನೆಲ್ಲ ಗಂಟುಕಟ್ಟಿ ಇಟ್ಟಿದ್ದರು. ಬಹುದೂರದ ಪ್ರಯಾಣ ಬೇರೆ, ತಮ್ಮ ಸಾಮಾನುಗಳಿವೆಯೇ ಎಂದು ಪದೇಪದೇ ಪರೀಕ್ಷಿಸುವ ಗೋಜಿಗೂ ಹೋಗಿರಲಿಲ್ಲ. ಇಳಿಯಬೇಕೆನ್ನುವಾಗ ತಾವಿಟ್ಟ ವಸ್ತುಗಳ ಗಂಟನ್ನೇ ಅಪಹರಿಸಿದ್ದಾರೆಂದು ತಿಳಿಯಿತು. ಶಿಖರವೇರಲು ಬೇಕಾದ ರೋಪ್‌ಗಳು, ಹಿಮಗಡ್ಡೆಯಲ್ಲಿ ನಡೆಯುವುದಕ್ಕೆಂದೇ ಬಳಸುವ ಶೂಗಳು, ದೇಹರಕ್ಷಣೆಯ ಜಾಕೆಟ್‌ಗಳು ಹೀಗೆ ಎಲ್ಲವನ್ನೂ ಕದ್ದೊಯ್ದಿದ್ದರು. ಏನು ಮಾಡಬೇಕೆಂದು ತೋಚದೆ, ನಾಲ್ಕೈದು ದಿನ ಸ್ಥಳೀಯ ಪೊಲೀಸ್ ಸ್ಟೇಷನ್‌ಗೆ ಓಡಾಟ. ಅಂತೂ ಕಳ್ಳರನ್ನು ಹುಡುಕಿಸಿದ್ದಾಯಿತು. ಜಾಕೆಟ್ ಚೀಲವೊಂದನ್ನು ಬಿಟ್ಟು, ಉಳಿದ ಅಗತ್ಯ ಸಾಮಾನುಗಳೆಲ್ಲ ದೊರೆಯಿತು. ಹತ್ತಿರದಲ್ಲಿದ್ದ ಅಂಗಡಿಗಳಿಂದಲೇ ಜಾಕೆಟ್ ಕೊಂಡುಕೊಂಡರು.
ಡಿಯೋಟಿಬ್ಬ ಶಿಖರವೇರುವ ಸಂದರ್ಭವದು. ಈಗಿನಂತೆ ಲೈಟರ್ ವ್ಯವಸ್ಥೆ ಇದ್ದಿರಲಿಲ್ಲ. ಆಗೆಲ್ಲ ಬೆಂಕಿ ಹೊತ್ತಿಸಿ ಬಿಸಿ ಕಾಯಿಸಿಕೊಳ್ಳುವುದಕ್ಕೂ ಅಡುಗೆ ಮಾಡಿಕೊಳ್ಳುವುದಕ್ಕೂ ಬೆಂಕಿಪೊಟ್ಟಣವೇ ಜೀವನಾಧಾರ. ಆ ಬೆಂಕಿಪೊಟ್ಟಣವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿಡಬೇಕಿತ್ತು. ಮರೆತ ದಿನವಿಡೀ ಬರಿಯ ಬೇಳೆ, ಅಕ್ಕಿ ಕಾಳುಗಳನ್ನೇ ತಿಂದು ದಿನದೂಡಿದ್ದೂ ಇದೆ. ಹಾಗಾಗಿ ಅಗತ್ಯವಿರುವ ಬೇಳೆ, ನ್ಯೂಡಲ್ಸ್ ಪ್ಯಾಕೆಟ್, ಹಾಲಿನ ಡಬ್ಬಗಳನ್ನೆಲ್ಲ ಹೊತ್ತುಕೊಂಡೇ ಸಾಗಬೇಕು ಎನ್ನುತ್ತಾರೆ ಶ್ಯಾಮಲಾ ಪದ್ಮನಾಭನ್. ಇನ್ನೊಮ್ಮೆ ಹೀಗಾಗಿತ್ತು: ತಂದಿಟ್ಟ ವಸ್ತುಗಳನ್ನೆಲ್ಲ ಹರಡಿ, ಮೇಲಿಂದ ಬಟ್ಟೆ ಅಥವಾ ಪ್ಲಾಸ್ಟಿಕ್ ಚೀಲವನ್ನು ಮುಚ್ಚಿಟ್ಟು ಹೋಗಿದ್ದರು. ಬರುವಷ್ಟರಲ್ಲಿ ಕಾಣುವುದಕ್ಕೆ ಕಾಗೆಯಂತಿದ್ದು, ಹಳದಿ ಮೂಗು ಹೊಂದಿರುವ ಆಲೈನ್ ಚೆಫ್ ಎಂಬ ಹಕ್ಕಿ ಅಷ್ಟೂ ನ್ಯೂಡಲ್ಸ್ ಪ್ಯಾಕೆಟ್‌ನ್ನೂ ಹರಿದು, ತಿನ್ನುತ್ತಾ ಮಜಾ ಮಾಡುತ್ತಿತ್ತು!
ಆಸಕ್ತಿಗಳ ಜೊತೆಯಲ್ಲಿಯೇ ಶ್ಯಾಮಲಾ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. ಫುಲ್‌ಬ್ರೈಟ್ ಸ್ಕಾಲರ್ ಆಗಿ ನ್ಯೂಯಾರ್ಕ್‌ನ ಸಿರಾಕ್ಯೂಸ್ ವಿಶ್ವವಿದ್ಯಾಲಯದಿಂದ ಕಮ್ಯುನಿಕೇಷನ್ ಟೆಕ್ನಾಲಜಿಯಲ್ಲಿ ಎಂ.ಎಸ್. ಪದವಿಯನ್ನು ಪಡೆದದ್ದು ಶ್ಯಾಮಲಾ ಅವರ ಹೆಗ್ಗಳಿಕೆಯೇ ಸರಿ. ಅವರಿಗೆ ೧೯೮೦ರ ದಶಕದಲ್ಲಿ ರಾಷ್ಟ್ರೀಯ ದಿನಪತ್ರಿಕೆಗಳಿಗೆ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ನಂತರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿಗೆ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರಾಗಿ ನೇಮಕಗೊಂಡರು. ಆದರೆ ಕೆಲಸದ ಒತ್ತಡ, ಪಠ್ಯ ಬೋಧನೆಗೆ ತಯಾರಿ, ಕಾಲೇಜಿನ ನಿಯಮಗಳಿಂದಾಗಿ ಒಂದಷ್ಟು ವರ್ಷಗಳವರೆಗೆ ಚಾರಣ, ಪರ್ವತಾರೋಹಣ ಚಟುವಟಿಕೆಗಳೆಲ್ಲ ಅಪರೂಪವಾಗಿತ್ತು. ಆದರೆ ಶ್ಯಾಮಲಾ ಅವರ ಬದುಕು ಹರಿವ ನದಿ. ರಜಾ ಅವಽಯಲ್ಲಿ ಮ್ಯಾರಥಾನ್ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪದಕ ಗಳಿಸಿದ್ದರು. ಮುಂದೆ ಬಹುರಾಷ್ಟ್ರೀಯ ಕಂಪೆನಿಯೊಂದರ ಉದ್ಯೋಗ ಅರಸಿ ಬಂತು. ಅದೇ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ, ನಿವೃತ್ತರಾದರು.
೧೯೮೨ರಲ್ಲಿ ಕಾಂಗ್ಲಾಕಾಂಗ್ ಶಿಖರವನ್ನು ಏರಿದ ಮೊದಲ ಪರ್ವತಾರೋಹಿ ಎಂಬ ಕೀರ್ತಿಯ ಜೊತೆಗೆ, ೧೯೮೬ರಲ್ಲಿ ಡಿಯೋಟಿಬ್ಬವನ್ನು ಏರಿದಾಗ ‘ಎ’ ಗ್ರೇಡ್ ಮಾನ್ಯತೆ ಪಡೆದರು. ೨೦೨೨ರಲ್ಲಿ ಐದು ತಿಂಗಳುಗಳ ಕಾಲ ದೇಶದ ವಿವಿಧ ಭಾಗಗಳಿಂದ ಐವತ್ತಕ್ಕೂ ಹೆಚ್ಚಿನ ವಯಸ್ಸಿನ ಹನ್ನೊಂದು ಮಹಿಳೆಯರ ತಂಡ ಹಿಮಾಲಯದ ಪೂರ್ವದಿಂದ ಪಶ್ಚಿಮದವರೆಗೆ ‘ಟ್ರಾನ್ಸ್ ಹಿಮಾಲಯನ್ ಚಾರಣ’ ಕೈಗೊಂಡಿತ್ತು. ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿದ್ದ ಈ ಚಾರಣದ ಸದಸ್ಯರು ಕ್ರಮಿಸಿದ್ದು ಸರಿಸುಮಾರು ಐದು ಸಾವಿರ ಕಿಲೋಮೀಟರ್! ಆಗ ಸ್ಮಶಾನದಲ್ಲೇ ಎರಡು ರಾತ್ರಿಗಳನ್ನು ಕಳೆದದ್ದನ್ನು ಈಗ ನೆನೆದರೆ ಶ್ಯಾಮಲಾ ಅವರಿಗೆ ರೋಚಕ ಭಾವ. ನಿವೃತ್ತಿ ಬರೀ ವಯಸ್ಸಿನ ಲೆಕ್ಕಾಚಾರ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಿಟ್ಟುಕೊಳ್ಳುವುದು ಮುಖ್ಯ ಎಂಬುದು ಶ್ಯಾಮಲಾ ಅವರ ಮಾತು. ಒಮ್ಮೊಮ್ಮೆ ತಿಂಗಳುಗಟ್ಟಲೆ, ಥರಗುಟ್ಟುವ ಚಳಿಯಲ್ಲಿ ನಡುಗುತ್ತಾ ನಡೆಯುತ್ತಿದ್ದಾಗ ಮನೆಯಲ್ಲಿ ಮಲಗಿ ನಿದ್ರಿಸಬಹುದಿತ್ತಲ್ವಾ? ಎಂದೂ ಅನಿಸುತ್ತಿತ್ತು. ಆದರೆ, ಗಮ್ಯ ತಲುಪಿದ ಮೇಲೆ ಸಿಗುತ್ತಿದ್ದ ನಿರ್ಲಿಪ್ತತೆ, ವಿಶೇಷ ಆನಂದ, ಮತ್ತೊಂದು ಹೊಸ ಸಾಹಸ ಯಾನದ ಕನಸನ್ನು ಇವರ ಎದೆಭೂಮಿಯಲ್ಲಿ ಬಿತ್ತುತ್ತಿತ್ತು.
ನಿತ್ಯವೂ ತಪ್ಪದ ವ್ಯಾಯಾಮ, ೫ ಕೆಜಿ ತೂಕ ಹೊತ್ತ ನಡಿಗೆ, ಈಜು ಶ್ಯಾಮಲಾ ಅವರ ಬದುಕಿನ ಭಾಗವೇ ಆಗಿದೆ. ಕಳೆದ ವರ್ಷವಷ್ಟೇ ಸಿಯಾಚಿನ್ ಗ್ಲೇಷಿಯರ್‌ಗೆ ಚಾರಣ ಮಾಡಿದ್ದು, ಮಾರ್ಚ್ ತಿಂಗಳಲ್ಲಿ ಡಾರ್ಜಿಲಿಂಗ್ ಸುತ್ತಲ ಸ್ಥಳಗಳಲ್ಲಿ ಚಾರಣ ಪೂರೈಸಿ, ಹಿಂತಿರುಗಿದ್ದಾರೆ. ತಮಾಷೆಗಾಗಿಯಲ್ಲ, ತಯಾರಿಯೊಂದಿಗೆ ಚಾರಣ ಮಾಡಿದರೆ ಒಳಿತೆಂದು ಶ್ಯಾಮಲಾ ಹೇಳುತ್ತಾರೆ. ಈಗಿನ ಚಾರಣಿಗರು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಅಗತ್ಯವೆಂಬುದು ಇವರ ನಿಲುವು. ಬದುಕನ್ನು ಏಕತಾನತೆಯ ಜಂಜಡಗಳಿಂದ ಮುಕ್ತವಾಗಿಸಿಕೊಳ್ಳುವುದಕ್ಕೆ, ಗಟ್ಟಿಮುಟ್ಟಾಗಿರುವ ದೇಹಕ್ಕೆ ‘ಅಷ್ಟೇನೂ ವಯಸ್ಸಾಗಿಲ್ಲ ನೋಡು’ ಎಂದು ಹೇಳಿಕೊಳ್ಳುವುದಕ್ಕಾದರೂ ಪರ್ವತಾರೋಹಣ, ಚಾರಣ ಬೇಕೆಂಬ ಅಭಿಪ್ರಾಯ ಶ್ಯಾಮಲಾ ಅವರದು
ಶ್ಯಾಮಲಾ ಅವರ ಪರ್ವತ ಪಯಣಕ್ಕೆ ಸ್ಛೂರ್ತಿಯಾಗಿದ್ದು ಗುರುಗಳಾದ ಬಚೇಂದ್ರಿಪಾಲ್ ಅವರು. ಇವರ ಮಾರ್ಗದರ್ಶನದಲ್ಲಿ ಶ್ಯಾಮಲಾ ಹಿಮಾಲಯದ ಗಿರಿ ಶಿಖರಗಳನ್ನು ಯಶಸ್ವಿಯಾಗಿ ಏರಿದ್ದಾರೆ. ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣದಲ್ಲೂ ಪಾಲ್ಗೊಂಡಿದ್ದಾರೆ. ಪರ್ವತಾರೋಹಣದ ಸಂದರ್ಭಗಳಲ್ಲಿ ನದಿ ದಾಟುವುದು ಸುಲಭವಿರಲಿಲ್ಲ. ಬ್ರಿಡ್ಜ್ ಕೊನೆಯಾಗುತ್ತಿದೆ ಎಂದರೆ ಅಪಾಯ ಎದುರಾಗಬಹುದು ಎಂಬುದನ್ನು ಯೋಚಿಸಬಲ್ಲ ಸೂಕ್ಷ್ಮಮತಿಗಳಾಗಿದ್ದ ಬಚೇಂದ್ರಿಪಾಲ್ ಅವರ ಜೊತೆಗಿನ ಸಾಹಸ ಪಯಣದಲ್ಲಿ ಶ್ಯಾಮಲಾ ಅವರು ಬದುಕಿನ ಅನಿಶ್ಚಿತತೆಗಳನ್ನೇ ಮುಖಾಮುಖಿಯಾಗತೊಡಗಿದರು. ಯಾರ ಅರಿವಿಗೂ ಬಾರದೆ, ಕಣ್ಣೆದುರು ಧುತ್ತೆಂದು ಘಟಿಸುತ್ತಿದ್ದ ಪ್ರಕೃತಿ ವಿಕೋಪಗಳಿಂದ ಕೂದಲೆಳೆಯ ಅಂತರದಲ್ಲಿ ಇವರು ಪಾರಾಗಿ ಬಂದದ್ದು ಆಶ್ಚರ್ಯಕರವೇ ಹೌದು. ನಂತರ ಸುಧಾರಿಸಿಕೊಂಡು ದುರ್ಗಮ ದಾರಿಯನ್ನು ಕ್ರಮಿಸುವ ಹೊತ್ತಿಗೆ ಐದಾರು ಗಂಟೆಗಳು ಕಳೆಯುತ್ತಿದ್ದವು.
” ಮೈಸೂರಿನ ಪರ್ವತಾರೋಹಿಗಳ ಇತಿಹಾಸ ಕಂಡರೆ ಶ್ಯಾಮಲಾ ಪದ್ಮನಾಭನ್, ಡಾ.ಉಷಾ ಹೆಗಡೆ ಅವರು ಪ್ರಮುಖರು. ಎವರೆಸ್ಟ್ ಶಿಖರವನ್ನು ಕರ್ನಾಟಕ ಭಾಗದಿಂದ ಮೊತ್ತ ಮೊದಲ ಬಾರಿಗೆ ಹತ್ತಿದವರು ಡಾ.ಉಷಾ ಹೆಗಡೆ.”
ಬಳ್ಳಾರಿ : ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಗುರುವಾರ ಸಂಜೆ ನಡೆದ ಘರ್ಷಣೆ…
ಮಳೆಗಾಲದಲ್ಲಿ ಕೆರೆ ಕಟ್ಟೆಗಳು ತುಂಬಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತಗಳೇ ಸೃಷ್ಟಿಯಾಗುತ್ತವೆ. ನಗರ ಪ್ರದೇಶಗಳಲ್ಲಿ ಇರುವ ಕೆರೆಗಳ ಹೂಳೆತ್ತಿ…
ಭ್ರಷ್ಟಾಚಾರವೇ ಇಲ್ಲದ ವ್ಯವಸ್ಥೆ ನಿರ್ಮಾಣ ಮಾಡುವುದು ಇನ್ನು ತುಂಬಾ ಕಷ್ಟಕರವಾದ ಕೆಲಸ ಎಂದು ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಎನ್.ಸಂತೋಷ್…
ಇಂದು ಡಿಜಿಟಲ್ ತಂತ್ರಜ್ಞಾನ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಇದರಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಆನ್ಲೈನ್ ತರಗತಿಗಳು, ಯೂಟ್ಯೂಬ್ ಶಿಕ್ಷಣ…
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ೨೦೨೬ರ ಆರಂಭದ ವೇಳೆ ಹಲವು ಬೆಳವಣಿಗೆಗಳು. ೨೦೨೫ರ ಕೊನೆಯ ಶುಕ್ರವಾರ ತೆರೆ ಕಂಡ ೨ ಚಿತ್ರಗಳ…
ಕೃಷ್ಣ ಸಿದ್ದಾಪುರ ಸಿಬ್ಬಂದಿ ಕೊರತೆ, ಜನಸಂಖ್ಯೆ ಆಧಾರದಲ್ಲಿ ಹೊಸ ಠಾಣೆ ಸ್ಥಾಪನೆ, ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಆಗ್ರಹ ಸಿದ್ದಾಪುರ:ಸಿದ್ದಾಪುರ ಪೊಲೀಸ್…