ಸಂದರ್ಶನ: ರಶ್ಮಿ ಕೋಟಿ
” ಟ್ರಾನ್ಸ್‌ಜೆಂಡರ್ ಹಕ್ಕುಗಳ ತಿದ್ದುಪಡಿ ಮಸೂದೆ ದೇಶದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಸಮುದಾಯದವರೊಂದಿಗೆ ಸಮಾಲೋಚನೆ ಇಲ್ಲದೆ ತರಲಾಗಿದೆ ಎನ್ನಲಾಗುತ್ತಿರುವ ಈ ಮಸೂದೆ, ಸ್ವಯಂ ಗುರುತಿನ ಹಕ್ಕಿನಿಂದ ಹಿಡಿದು ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಕುಟುಂಬದ ಮಾನ್ಯತೆವರೆಗೂ ಅನೇಕ ಹಕ್ಕುಗಳಿಗೆ ಧಕ್ಕೆ ತರುವ ಆತಂಕ ಹುಟ್ಟಿಸಿದೆ. ಇಂತಹ ಸಂದರ್ಭದಲ್ಲಿ, ದೇಶದ ಪ್ರಮುಖ ಟ್ರಾನ್ಸ್ ಹಕ್ಕು ಹೋರಾಟಗಾರ್ತಿ ಮತ್ತು ಸಾಮಾಜಿಕ ನ್ಯಾಯದ ಸ್ಪಷ್ಟ ಧ್ವನಿಯಾಗಿರುವ ಅಕ್ಕೈ ಪದ್ಮಶಾಲಿ, ಈ ಮಸೂದೆ ಕುರಿತು ‘ಆಂದೋಲನಕ್ಕೆ’ ನೀಡಿದ ವಿಶೇಷ ಸಂದರ್ಶನದಲ್ಲಿ ಅದರ ಅಪಾಯಗಳು, ನಾಲ್ಸಾ ತೀರ್ಪಿನ ಆತ್ಮ ಮತ್ತು ಸಮುದಾಯದ ನೈಜ ಹಕ್ಕುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.”
ಆಂದೋಲನ: ಇತ್ತೀಚೆಗೆ ಕೇಂದ್ರ ಸರ್ಕಾರ ಏಕಾಏಕಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳ ತಿದ್ದುಪಡಿ ಮಸೂದೆಯನ್ನು ಜಾರಿ ಮಾಡಿದೆ. ಇದು ಅಷ್ಟೊಂದು ತುರ್ತಾಗಿ ಜಾರಿಯಾಗಬೇಕಿದ್ದ ಕಾನೂನಾಗಿತ್ತಾ?
ಅಕ್ಕೈ: ಇದು ನಮ್ಮ ಸಮುದಾಯದವರೊಂದಿಗೆ ಚರ್ಚಿಸದೆ, ನಮ್ಮ ಬದುಕನ್ನು ಅರ್ಥಮಾಡಿಕೊಳ್ಳದೆ ಆತುರದಲ್ಲಿ ಹೇರಲಾದ ಕ್ರಮ. ಭಾರತದ ಇತಿಹಾಸ, ಸಂಸ್ಕ ತಿ ಮತ್ತು ಪರಂಪರೆ ಯಲ್ಲೇ ಲಿಂಗ ವೈವಿಧ್ಯತೆ ಅಸ್ತಿತ್ವದಲ್ಲಿದೆ. ಹಾಗಿದ್ದಾಗ, ಇಂದು ಟ್ರಾನ್ಸ್ ಸಮುದಾಯದ ಗುರುತನ್ನೇ ಮತ್ತೆ ಕಾನೂನಿನ ಮೂಲಕ ನಿಯಂತ್ರಿಸಲು ಹೊರಟಿರುವುದು ಅನಗತ್ಯ, ಆತಂಕಕಾರಿ.
ಆಂದೋಲನ: ಕೇಂದ್ರ ಸರ್ಕಾರ ‘ಸಮುದಾಯದ ಜೊತೆ ಚರ್ಚೆ ನಡೆಸಿ’ ಈ ಮಸೂದೆಯನ್ನು ತಂದಿದ್ದೇವೆ ಎಂದು ಹೇಳುತ್ತಿದೆ. ಇದನ್ನು ಒಪ್ಪುತ್ತೀರಾ?
ಅಕ್ಕೈ: ಇಲ್ಲ. ಚರ್ಚೆ ನಡೆದಿದ್ದರೆ, ಅದರ ಮಾಹಿತಿ ದೇಶದಾದ್ಯಂತ ಸಮುದಾಯದೊಳಗೆ ತಲುಪುತ್ತಿತ್ತು. ನ್ಯಾಷನಲ್ ಕೌನ್ಸಿಲ್ ಫಾರ್ ಟ್ರಾನ್ಸ್‌ಜೆಂಡರ್ಸ್‌ನ ಇಬ್ಬರು ಸದಸ್ಯರಾದ ರಿತುಪರ್ಣ ನಿಯೋಗ್ ಮತ್ತು ಕಲ್ಕಿ ಸುಬ್ರಹ್ಮಣ್ಯಂ ರಾಜೀನಾಮೆ ನೀಡಿರುವುದು, ಈ ಮಸೂದೆ ಪ್ರಜಾಸತ್ತಾತ್ಮಕ ಸಮಾಲೋಚನೆಯಿಲ್ಲದೆ ತರಲಾಗಿದೆ ಎಂಬುದಕ್ಕೆ ಸಾಕ್ಷಿ. ಈ ಕಾಯ್ದೆ ಮ್ಯಾಜಿಸ್ಟ್ರೇಟ್ ಮತ್ತು ವೈದ್ಯಕೀಯ ಪ್ರಕ್ರಿಯೆಗಳ ಮೂಲಕ ನಮ್ಮ ಹಕ್ಕುಗಳನ್ನು ಕಟ್ಟಿ ಹಾಕುತ್ತದೆ. ಇಂತಹ ಕಾಯ್ದೆ ತರಬೇಕಾದರೆ ಪ್ರಾದೇಶಿಕದಿಂದ ರಾಷ್ಟ್ರೀಯ ಮಟ್ಟದ ಸಮಾಲೋಚನೆ ಅಗತ್ಯವಾಗಿತ್ತು.
ಆಂದೋಲನ: ಈ ಮಸೂದೆಯ ವೈದ್ಯಕೀಯ ಮತ್ತು ಆಡಳಿತಾತ್ಮಕ ಪರಿಶೀಲನೆಯ ಪ್ರಕ್ರಿಯೆಯನ್ನು ನೀವು ಯಾಕೆ ತೀವ್ರವಾಗಿ ವಿರೋಧಿಸುತ್ತೀರಿ?
ಅಕ್ಕೈ: ಯಾಕೆಂದರೆ, ಇದು ವ್ಯಕ್ತಿಯ ಗೌರವ, ಖಾಸಗಿತನ ಮತ್ತು ಆತ್ಮ ಗುರುತಿನ ಮೇಲಿನ ದಾಳಿ. ಡಾಕ್ಟರ್‌ಗಳು ಅಥವಾ ಸಮಿತಿಗಳು ಬಂದು ಒಬ್ಬ ವ್ಯಕ್ತಿಯ ಗುರುತಿಗೆ ಮುದ್ರೆ ಹಾಕುವುದು ಸ್ವೀಕಾರಾರ್ಹವಲ್ಲ. ಇದು ಕೇವಲ ಆಡಳಿತಾತ್ಮಕ ಪ್ರಕ್ರಿಯೆ ಅಲ್ಲ, ಮಾನಸಿಕ ಒತ್ತಡ ಮತ್ತು ಖಾಸಗಿತನದ ಉಲ್ಲಂಘನೆ. ಅದಕ್ಕಾಗಿಯೇ ನಾನು ಇದನ್ನು ‘ನಗ್ನ ಕಾನೂನು’ ಎಂದು ಕರೆಯುತ್ತೇನೆ. ಒಬ್ಬ ವ್ಯಕ್ತಿ ತನ್ನ ಗುರುತನ್ನು ಸಾಬೀತುಪಡಿಸಲು ವೈದ್ಯಕೀಯ ಪರಿಶೀಲನೆಗೆ ಒಳಗಾಗಬೇಕಾದರೆ, ಅದು ಗೌರವದ ಹಕ್ಕಿನ ಮೇಲಿನ ದಾಳಿ. ಈ ರೀತಿಯ ಪ್ರಕ್ರಿಯೆ ರಾಜ್ಯ ಪ್ರಾಯೋಜಿತ ಲೈಂಗಿಕ ಹಿಂಸೆ ಮತ್ತು ಅವಮಾನ ಆಗಿ ಅನುಭವವಾಗಬಹುದು.
ಆಂದೋಲನ: ೨೦೧೪ರ ನಾಲ್ಸಾ ತೀರ್ಪಿಗೂ, ಈಗಿನ ತಿದ್ದುಪಡಿಗೂ ಇರುವ ವ್ಯತ್ಯಾಸವೇನು?
ಅಕ್ಕೈ: ೨೦೧೪ರ ನಾಲ್ಸಾ ತೀರ್ಪು ವ್ಯಕ್ತಿಯ ಲಿಂಗ ಗುರುತು ಕೇವಲ ದೇಹದಿಂದ ಅಲ್ಲ, ಅವರ ಅನುಭವ ಮತ್ತು ಸಾಮಾಜಿಕ ಅಸ್ತಿತ್ವದಿಂದ ನಿರ್ಧಾರವಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿತ್ತು. ಆದರೆ ಈಗಿನ ತಿದ್ದುಪಡಿ ಆ ಅಸ್ಮಿತೆಯ ಹಕ್ಕನ್ನೇ ದುರ್ಬಲ ಗೊಳಿಸುತ್ತಿದೆ. ಸಮುದಾಯಕ್ಕೆ ಬೇಕಾಗಿರು ವುದು ಪ್ರಮಾಣ ಪತ್ರವಲ್ಲ, ಬದಲಾಗಿ ಕುಟುಂಬದಲ್ಲಿ ಮಾನ್ಯತೆ, ಆಸ್ತಿ ಹಕ್ಕು, ವಿವಾಹ ಹಕ್ಕು, ವಾರಸುದಾರಿಕೆ, ಶಿಕ್ಷಣ, ಗೌರವದ ಬದುಕು.
ಆಂದೋಲನ: ಈ ಹೊಸ ವ್ಯಾಖ್ಯಾನದಿಂದ ಯಾವ ರೀತಿಯ ಅಪಾಯಗಳನ್ನು ನೀವು ನೋಡುತ್ತೀರಿ?
ಅಕ್ಕೈ: ಇದರಿಂದ ಅನೇಕರು ಕಾನೂನಿನ ರಕ್ಷಣೆಯ ಹೊರಗೆ ತಳ್ಳಲ್ಪಡುವ ಅಪಾಯ ಹೆಚ್ಚಾಗಿದೆ. ಇದು ಕೇವಲ ಟ್ರಾನ್ಸ್ ಪುರುಷರು ಅಥವಾ ಟ್ರಾನ್ಸ್ ಮಹಿಳೆಯರ ವಿಷಯವಲ್ಲ, ನಾನ್-ಬೈನರಿ, ಜೆಂಡರ್ ನಾನ್-ಕನ್ಛಾರ್ಮಿಂಗ್ ವ್ಯಕ್ತಿಗಳು ಮತ್ತು ಲಿಂಗ ವೈವಿಧ್ಯತೆಯ ಮಕ್ಕಳು ಕೂಡ ಇದರ ಪರಿಣಾಮಕ್ಕೆ ಒಳಗಾಗುತ್ತಾರೆ. ಟ್ರಾನ್ಸ್ ಸಮುದಾಯದ ವಿವಿಧ ಗುರುತು ಗಳಾದ ಅಂತರ್ಲಿಂಗಿ, ಜೋಗಪ್ಪ, ಅರವಾಣಿ, ಜೋಕ್ತಾ, ಜೆಂಡರ್ ಕ್ವಿಯರ್, ನಾನ್-ಬೈನರಿ ಸೇರಿದಂತೆ ಎಲ್ಲರ ಧ್ವನಿಗೂ ಆದ್ಯತೆ ಸಿಗಬೇಕಿತ್ತು. ಆದರೆ ನಮ್ಮನ್ನೇ ಕೇಳದೆ, ನಮ್ಮ ವೈವಿಧ್ಯತೆಯನ್ನು ನಿರ್ಲಕ್ಷಿಸಿ ಮಸೂದೆ ತರಲಾಗಿದೆ. ಸಮು ದಾಯದ ನೈಜ ಅನುಭವಗಳನ್ನು ಅರಿಯದೇ ರೂಪಿಸಲಾದ ವ್ಯಾಖ್ಯಾನಗಳು, ಹಕ್ಕುಗಳಿಗಿಂತ ಹೆಚ್ಚು ಹೊರತಳ್ಳುವಿಕೆ ಮತ್ತು ಗೊಂದಲ ಉಂಟುಮಾಡುತ್ತವೆ.
ಆಂದೋಲನ: ಈ ಸೀಮಿತ ವ್ಯಾಖ್ಯಾನವು ಸಮುದಾಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?
ಅಕ್ಕೈ: ಇದು ಕೇವಲ ಗುರುತಿನ ಪ್ರಶ್ನೆಯಲ್ಲ, ಉದ್ಯೋಗ, ಶಿಕ್ಷಣ, ದಾಖಲೆಗಳು, ಆರೋಗ್ಯ, ವಸತಿ ಮತ್ತು ಕುಟುಂಬದಲ್ಲಿ ಮಾನ್ಯತೆ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಸಮುದಾಯಕ್ಕೆ ಸರ್ಕಾರದಿಂದ ‘ಉಪಕಾರ’ ಬೇಕಿಲ್ಲ, ಗೌರವ ಮತ್ತು ಸಮಾನ ಅವಕಾಶ ಬೇಕು. ನಮ್ಮಲ್ಲಿ ಪ್ರತಿಭೆ, ಕೌಶಲ, ಸಾಮರ್ಥ್ಯ ಎಲ್ಲವೂ ಇದೆ. ಆದರೆ ವ್ಯವಸ್ಥೆಯಲ್ಲಿರುವ ಅಜ್ಞಾನ ಮತ್ತು ಅಸಂವೇದನಾಶೀಲತೆ ನಮ್ಮನ್ನು ಇನ್ನೂ ಅಂಚಿಗೆ ತಳ್ಳುತ್ತಿದೆ.
ಆಂದೋಲನ: ಈ ಮಸೂದೆಯಲ್ಲಿ ‘ರಕ್ಷಣೆ’ ಹೆಸರಿನಲ್ಲಿ ಸೇರಿಸಿರುವ ಹೊಸ ಅಪರಾಧ ವಿಧಿಗಳು ಸಮುದಾಯಕ್ಕೆ ನ್ಯಾಯ ಕೊಡುತ್ತವೆಯೇ?
ಅಕ್ಕೈ: ಇಲ್ಲ. ಇದು ರಕ್ಷಣೆ ಹೆಸರಿನಲ್ಲಿ ಮಾಡುತ್ತಿರುವ ಅನ್ಯಾಯ. ಟ್ರಾನ್ಸ್ ಸಮುದಾಯದ ಮೇಲೆ ನಡೆಯುವ ಅತ್ಯಾಚಾರ, ಲೈಂಗಿಕ ಶೋಷಣೆ, ಸಾಮಾಜಿಕ ಬಹಿಷ್ಕಾರ ಮತ್ತು ತಾರತಮ್ಯಗಳನ್ನು ಕೇವಲ ಎರಡು ವರ್ಷಗಳ ಶಿಕ್ಷೆಯಲ್ಲಿ ಸೀಮಿತಗೊಳಿಸಲಾಗುವುದಿಲ್ಲ.
ಆಂದೋಲನ: ಈ ಕಾಯ್ದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆಯೇ?
ಅಕ್ಕೈ: ರಾಷ್ಟ್ರಪತಿಗಳ ಸಹಿ ಬಿದ್ದ ಕ್ಷಣದಿಂದ ಇದು ಕಾಯ್ದೆ ಯಾಗಬಹುದು. ನಂತರವೂ ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವ ಅವಕಾಶವಿದೆ. ಸಮುದಾಯದ ಹಕ್ಕಿಗೆ ವಿರುದ್ಧವಾದ ಯಾವುದೇ ಕಾನೂನನ್ನು ನಾವು ಮೌನವಾಗಿ ಒಪ್ಪುವುದಿಲ್ಲ.
ಆಂದೋಲನ: ಈ ಹೋರಾಟ ಕೇವಲ ಟ್ರಾನ್ಸ್ ಸಮುದಾಯದ ವಿಷಯವೇ ಅಥವಾ ಭಾರತದ ನಾಗರಿಕ ಹಕ್ಕುಗಳ ವಿಷಯವೇ?
ಅಕ್ಕೈ: ಇದು ನಾಗರಿಕ ಹಕ್ಕುಗಳು, ಸಂವಿಧಾನಾತ್ಮಕ ಮೌಲ್ಯಗಳು ಮತ್ತು ಪ್ರಜಾತಂತ್ರದ ಭವಿಷ್ಯದ ಪ್ರಶ್ನೆ. ಇಂದು ಟ್ರಾನ್ಸ್ ಸಮುದಾಯದ ಮೇಲೆ ನಡೆಯುತ್ತಿರುವ ನಿಯಂತ್ರಣವನ್ನು, ನಾಳೆ ಇನ್ನಿತರ ಸಮುದಾಯಗಳ ಮೇಲೂ ಅನ್ವಯಿಸಬಹುದು
ಟೆಹರಾನ್: ಕುವೈತ್ ವಿದ್ಯುತ್ ಸ್ಥಾವರದ ಮೇಲೆ ಇರಾನ್ ಭೀಕರ ದಾಳಿ ನಡೆಸಿದ ಪರಿಣಾಮ ಭಾರತೀಯ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ಇದು ದೇಶದ…
ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಇಂದು ನಡೆದ ಗೌತಮ ಪಂಚಮಹಾರಥೋತ್ಸವದಲ್ಲಿ ದುರಂತವೊಂದು ಸಂಭವಿಸಿದ್ದು, ಜಗಜಂಗುಳಿಯಲ್ಲಿ ಸಿಲುಕಿ ಓರ್ವ ಭಕ್ತ ಸಾವನ್ನಪ್ಪಿರುವ…
ಹುಣಸೂರು: ಒಣಗಿದ್ದ ದಾಸವಾಳ ಹೂ ನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಮನಕಲಕುವ ಘಟನೆ ಹುಣಸೂರು ತಾಲ್ಲೂಕಿನ ದೊಡ್ಡಹೆಜ್ಜೂರಿನಲ್ಲಿ ನಡೆದಿದೆ. ದೊಡ್ಡಹೆಜ್ಜೂರಿನ…
ಜಾತಿ ಆಧಾರಿತ ಅಪರಾಧಕ್ಕೆ ತಡೆ, ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ ಒದಗಿಸುವ ಮಹತ್ವಪೂರ್ಣವಾದ ‘ಇವ ನಮ್ಮವ ಇವ ನಮ್ಮವ’ ಮಸೂದೆಯನ್ನು ರಾಜ್ಯ…
ನಾಳೆ ಸೇವೆಯಿಂದ ನಿವೃತ್ತಿ ಹೊಂದಲಿರುವ ಮೇಷ್ಟ್ರು ಸಿ.ಹರಕುಮಾರ್, ಬರಹಗಾರ ಮೂರ್ನಾಲ್ಕು ದಶಕಗಳ ಹಿಂದೆ ಮ್ಯಾನೇಜ್ಮೆಂಟ್ ಕೋರ್ಸ್ ಅಥವಾ ಎಂಬಿಎ ಪದವಿ…
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ದಾವಣಗೆರೆ ಉಪ ಚುನಾವಣೆ ಬಂಡಾಯ ಶಮನಗೊಳಿಸಿದ ಮುಖ್ಯಮಂತ್ರಿ ದಿಲ್ಲಿಯ ಕಾಂಗ್ರೆಸ್ ವರಿಷ್ಠರಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟ…