ಜಿಲ್ಲೆಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ 1,504 ಮಂಜೂರಾತಿ, 816 ಹುದ್ದೆಗಳು ಖಾಲಿ
– ಕೆ.ಬಿ.ರಮೇಶ ನಾಯಕ
ಮೈಸೂರು: ಜನಸಾಮಾನ್ಯರಿಗೆ ತ್ವರಿತಗತಿಯಲ್ಲಿ ಕೆಲಸ ಮಾಡಿಕೊಡಬೇಕೆಂಬ ಕಾರಣಕ್ಕಾಗಿ ಆಡಳಿತವನ್ನು ವಿಂಗಡಿಸಿ ಹೊಸದಾಗಿ ಸ್ಥಳೀಯ ಸಂಸ್ಥೆಗಳನ್ನು ರಚನೆ ಮಾಡುವುದು, ಆಡಳಿತವನ್ನು ಜನಸ್ನೇಹಿಯಾಗಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಮಾಡಿದರೂ ಮೈಸೂರು ಜಿಲ್ಲೆಯಲ್ಲಿ ನಗರಪಾಲಿಕೆ ಹೊರತುಪಡಿಸಿದರೆ ಸ್ಥಳೀಯ ಸಂಸ್ಥೆಗಳಲ್ಲಿ ಮಂಜೂರಾಗಿರುವ ಖಾಯಂ ಹುದ್ದೆಗಳ ಪೈಕಿ ಖಾಲಿ ಹುದ್ದೆಗಳೇ ಹೆಚ್ಚಾಗಿವೆ.
ನಗರಪಾಲಿಕೆಯಲ್ಲಿ ಪ್ರಥಮ ದರ್ಜೆ ಮತ್ತು ಅದಕ್ಕಿಂತ ಮೇಲ್ಮಟ್ಟದ ಎಲ್ಲಾ ಹಂತದ ಹುದ್ದೆಗಳೂ ಬಹುತೇಕ ಭರ್ತಿಯಾಗಿದ್ದರೆ, ಪೌರಾಡಳಿತ ನಿರ್ದೇಶನಾಲಯದ ವ್ಯಾಪ್ತಿಗೆ ಬರುವ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಜಾಸ್ತಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 13 ನಗರ, ಪಟ್ಟಣ ಸ್ಥಳೀಯ
ಸಂಸ್ಥೆಗಳಲ್ಲಿ 1,504 ಹುದ್ದೆ ಗಳು ಸೃಜನೆಯಾಗಿದ್ದು, 689 ಮಂದಿ ಕಾರ್ಯ ನಿರ್ವಹಿಸಿದರೆ, 816 ಹುದ್ದೆಗಳು ಖಾಲಿ ಇರುವುದು ಆಡಳಿತದ ಮೇಲೆ ದೊಡ್ಡ
ಪರಿಣಾಮವನ್ನುಂಟು ಮಾಡಿದೆ. ಖಾಲಿ ಹುದ್ದೆಗಳನ್ನು ಸಕಾಲದಲ್ಲಿ ಭರ್ತಿ ಮಾಡಲು ಸಾಧ್ಯವಾಗದ ಕಾರಣ ಹಾಲಿ ಸಿಬ್ಬಂದಿಯ ಮೇಲೆ ಒತ್ತಡ ಬೀಳುವ
ಜತೆಗೆ ಜನಸಾಮಾನ್ಯರ ಕೆಲಸ ಕಾರ್ಯಗಳಿಗೂ ತೊಡಕಾಗಿದೆ.
ನಗರ ಮತ್ತು ಗ್ರಾಮಾಂತರ ಪ್ರದೇಶದ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸ್ಥಳೀಯ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ. ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯಿತಿ, ಪಟ್ಟಣ ಪಂಚಾಯಿತಿಗಳನ್ನು ಪುರಸಭೆ, ಪುರಸಭೆಯನ್ನು ನಗರಸಭೆ, ನಗರಸಭೆಯನ್ನು ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿ ಆಡಳಿತವನ್ನು ಸುಲಭ ಮಾಡಲಾಗುತ್ತದೆ. ಅದೇ ರೀತಿ ಮೈಸೂರು ನಗರದ ಹೊರವಲಯದಲ್ಲಿದ್ದ ಕೆಲವು ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಿ ಹೊಸದಾಗಿ ಬೋಗಾದಿ, ಕಡಕೊಳ, ಶ್ರೀರಾಂಪುರ, ರಮ್ಮನಹಳ್ಳಿ ಪಪಂ, ಹೂಟಗಳ್ಳಿ ನಗರಸಭೆಯನ್ನಾಗಿ ರಚಿಸಲಾಗಿತ್ತು.
ಅದೇ ರೀತಿ ನಂಜನಗೂಡು, ಹುಣಸೂರು ಪುರಸಭೆಗಳನ್ನು ನಗರಸಭೆಗಳಾಗಿ ಉನ್ನತೀಕರಿಸಲಾಗಿದೆ. ಅದಕ್ಕೆ ತಕ್ಕಂತೆ ಅಗತ್ಯವಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹುದ್ದೆಗಳನ್ನು ಸೃಜಿಸಲಾಗಿತ್ತು. ಆದರೆ, ನೇಮಕಾತಿ ಮಾಡಿಕೊಳ್ಳದ ಕಾರಣ ಹಾಲಿ ಸಿಬ್ಬಂದಿ, ಅಧಿಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ.
ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಮತ್ತು ಪೌರಾಡಳಿತ ಇಲಾಖೆ ಬರುವ ಸ್ಥಳೀಯ ಸಂಸ್ಥೆಗಳ ಕಾರ್ಯ ಒಂದೇ ಆಗಿದ್ದರೂ ಹುದ್ದೆಗಳು ಮಾತ್ರ ಬೇರೆಯಾಗಿರುತ್ತವೆ.
ಪಟ್ಟಣ ಪಂಚಾಯಿತಿಗಳಲ್ಲಿ ಮುಖ್ಯಾಧಿಕಾರಿ, ಪುರಸಭೆ, ನಗರಸಭೆಗಳಲ್ಲಿ ಪೌರಾಯುಕ್ತರು, ನಗರಪಾಲಿಕೆಯಲ್ಲಿ ಆಯುಕ್ತರು, ಉಪ ಆಯುಕ್ತರು, ಹೆಚ್ಚುವರಿ ಆಯುಕ್ತರ ಹುದ್ದೆ ಸೃಜನೆಯಾಗಿದ್ದರೆ, ಮುಖ್ಯ ಲೆಕ್ಕಾಧಿಕಾರಿ, ಅಧೀಕ್ಷಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕಾರ್ಯಪಾಲಕ ಇಂಜಿನಿಯರ್, ಹುದ್ದೆಗಳನ್ನು ಆಯಾಯ ಗ್ರೇಡ್‌ಗೆ ತಕ್ಕಂತೆ ಸೃಜಿಸಲಾಗಿದೆ. ಆದರೆ, ಈಗ ನಗರಸಭೆ, ಪುರಸಭೆಗಳಲ್ಲಿ ಮುಖ್ಯಾಧಿಕಾರಿ,
ಪೌರಾಯುಕ್ತರ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಶೇ.60ರಷ್ಟು ಇತರೆ ಹುದ್ದೆಗಳು ಖಾಲಿ ಇರುವುದನ್ನು ಅಂಕಿ ಅಂಶಗಳಿಂದ ಕಾಣಬಹುದಾಗಿದೆ.
ನಗರಪಾಲಿಕೆಯಲ್ಲಿ ಶೇ.10 ರಷ್ಟು ಗ್ರೂಪ್ ಸಿ ನೌಕರರ ಕೊರತೆ: ಮಹಾನಗರಪಾಲಿಕೆಯಲ್ಲಿ ಗ್ರೂಪ್ ಸಿ ಅಧಿಕಾರಿಗಳ ಕೊರತೆಯನ್ನು ಹೊರತುಪಡಿಸಿದರೆ ಮೇಲ್ಮಟ್ಟದ ಅಧಿಕಾರಿಗಳ ಹುದ್ದೆ ಖಾಲಿ ಇಲ್ಲದಿರುವುದು ಆಡಳಿತದ ವೇಗಕ್ಕೆ ಯಾವುದೇ ಅಡ್ಡಿ ಇಲ್ಲದಂತಾಗಿದೆ. ಮಹಾನಗರಪಾಲಿಕೆ ಕೇಂದ್ರ ಕಚೇರಿ ಹಾಗೂ ಒಂಬತ್ತು ವಲಯ ಕಚೇರಿಗಳಲ್ಲಿ ಯಾವುದಾದರೂ ಒಂದೇ ಒಂದು ಹುದ್ದೆ ಖಾಲಿಯಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದ ತಕ್ಷಣವೇ ವರ್ಗಾವಣೆ ಮಾಡಿಸಿಕೊಂಡು ಬರುವ ಹಿನ್ನೆಲೆಯಲ್ಲಿ ಹುದ್ದೆಗಳು ಸದಾ ಭರ್ತಿಯಾಗಿರುವುದಕ್ಕೆ ಕಾರಣವಾದರೆ, ಅಧೀನ ಹಂತದಲ್ಲಿ ಮಾತ್ರ ಹುದ್ದೆಗಳು ಖಾಲಿ ಇರುವುದು ಗಮನಾರ್ಹವಾಗಿದೆ.
ಪಾಲಿಕೆಯಲ್ಲಿ ಇಂಜಿನಿಯರಿಂಗ್, ನಗರ ಯೋಜನಾ ಶಾಖೆ, ಹಣಕಾಸು, ಕಂದಾಯ, ಜನನ ಮತ್ತು ಮರಣ, ಆರೋಗ್ಯ ಶಾಖೆಗಳಿದ್ದು, ಆಯುಕ್ತರು, ಹೆಚ್ಚುವರಿ ಆಯುಕ್ತರು, ಆಡಳಿತ, ಕಂದಾಯ,ಅಭಿವೃದ್ಧಿ ಉಪ ಆಯುಕ್ತರು ಹುದ್ದೆಗಳಲ್ಲಿ ಅಧಿಕಾರಿಗಳು ಇದ್ದರೆ, ಕೌನ್ಸಿಲ್ ಕಾರ್ಯದರ್ಶಿ ಹುದ್ದೆ ಮಾತ್ರ ಪ್ರಭಾರವಾಗಿದೆ.
ನಗರಪಾಲಿಕೆಯ ಒಂಬತ್ತು ವಲಯ ಕಚೇರಿಗಳ ಪೈಕಿ 8 ರಲ್ಲಿ ಸಹಾಯಕ ಆಯುಕ್ತರು ಇದ್ದರೆ, 9ನೇ ವಲಯ ಕಚೇರಿ ಸಹಾಯಕ ಆಯುಕ್ತರ ಹುದ್ದೆ ಖಾಲಿಯಾಗಿ ಪ್ರಭಾರ ಇದ್ದರೆ, ವಲಯ 8 ರ ಕಚೇರಿಯ ಪರಿಸರ ಅಭಿಯಂತರ ಹುದ್ದೆ ಪ್ರಭಾರ ಹೊರತುಪಡಿಸಿ ಸಹಾಯಕ ಆಯುಕ್ತರು, ಅಭಿವೃದ್ಧಿ ಅಧಿಕಾರಿಗಳು, ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಹುದ್ದೆಗಳು ಭರ್ತಿಯಾಗಿವೆ.
ನೀರು ಸರಬರಾಜು ವಿಭಾಗದಲ್ಲಿ ಪೂರ್ವ ವಲಯದ ಒಂದು ಹುದ್ದೆ, ವಿದ್ಯುತ್ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆ ಖಾಲಿ ಇರುವ ಕಾರಣ ಪ್ರಭಾರ ಅಧಿಕಾರಿಯನ್ನು ನೇಮಿಸಲಾಗಿದೆ.
ಕಂದಾಯ ಶಾಖೆಯಲ್ಲಿ ಕಚೇರಿ ಸಹಾಯಕರ ಒಂದು ಹುದ್ದೆ, ಆರೋಗ್ಯಾಧಿಕಾರಿ ಒಂದು ಹುದ್ದೆ ಖಾಲಿ ಇದೆ. ಪ್ರಥಮ ದರ್ಜೆ, ದ್ವಿತೀಯ ದರ್ಜೆ ಹುದ್ದೆಗಳಲ್ಲಿ ಶೇ.90 ರಷ್ಟು ಹುದ್ದೆಗಳು ಭರ್ತಿಯಾಗಿದ್ದರೆ, ಗಣಕಯಂತ್ರದ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಆಯಕಟ್ಟಿನ ಹುದ್ದೆಗಳ ಪೈಕಿ ಶೇ.90ರಷ್ಟು ಇವೆ. ಮಹಾಪೌರರು, ಉಪ ಮಹಾಪೌರರು, ಸ್ಥಾಯಿ
ಸಮಿತಿಗಳ ಅಧ್ಯಕ್ಷರ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರನ್ನು ಈಗ ಬೇರೆ ಬೇರೆ ವಿಭಾಗಗಳಿಗೆ ನಿಯೋಜನೆ ಮಾಡಿರುವುದರಿಂದ ಸಿಬ್ಬಂದಿ ಕೊರತೆ ಇಲ್ಲ ಎನ್ನುವ ಮಾತುಗಳನ್ನು ದೂರಾಗಿಸಿದೆ.
ಖಾಲಿಗೆ ಜಾಗವೇ ಇಲ್ಲ: ನಗರಪಾಲಿಕೆ ಕೇಂದ್ರ ಮತ್ತು ವಲಯ ಕಚೇರಿಗಳಲ್ಲಿ ಸಹಾಯಕ ಆಯುಕ್ತರು, ಅಭಿವೃದ್ಧಿ ಅಧಿಕಾರಿಗಳು, ಕಾರ್ಯಪಾಲಕ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಪರಿಸರ ಇಂಜಿನಿಯರ್‌ಗಳ ಹುದ್ದೆಗಳ ಖಾಲಿಗೆ ಜಾಗವೇ ಇಲ್ಲದಂತಾಗಿದೆ. ವಲಯ ಕಚೇರಿ ಸಹಾಯಕ
ಆಯುಕ್ತರ ಹುದ್ದೆಗೂ ದೊಡ್ಡ ಮಟ್ಟದಲ್ಲಿ ಲಾಬಿ ಮಾಡಿ ನಿಯೋಜನೆ ಮಾಡಿಸಿಕೊಂಡು ಬರುವ ಕಾರಣ ವರ್ಗಾವಣೆ ಅಥವಾ ನಿವೃತ್ತಿಯಾಗುವುದನ್ನು ಕಾದು ಕೂರಬೇಕಿದೆ.
ಆಯುಕ್ತರ ನಂತರದ ಹುದ್ದೆಗಳಾದ ಹೆಚ್ಚುವರಿ ಆಯುಕ್ತರು, ಮೂರು ಉಪ ಆಯುಕ್ತರ ಹುದ್ದೆಗಳು ಕೂಡ ಆಯಕಟ್ಟಿನ ಹುದ್ದೆಗಳಾಗಿರುವ ಕಾರಣ
ಅನೇಕರು ಕಣ್ಣಿಡುತ್ತಾರೆ. ಇದರಿಂದಾಗಿ ಚುನಾವಣೆ ಸಮಯದಲ್ಲಿ ವರ್ಗಾವಣೆಯಾಗಿ ಹೋಗುವುದನ್ನು ಬಿಟ್ಟರೆ ಬೇರೆ ಸಮಯದಲ್ಲಿ ನಗರಪಾಲಿಕೆಯ
ಯಾವುದಾದರೂ ಒಂದು ಹುದ್ದೆಯಲ್ಲಿ ಇರುವುದು ಸರ್ವೆ ಸಾಮಾನ್ಯವಾಗಿದೆ.
ಖಾಲಿ ಹುದ್ದೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೇಳುವ ಮಾಹಿತಿಯನ್ನು ಕಾಲ ಕಾಲಕ್ಕೆ ಒದಗಿಸುತ್ತೇವೆ. ನಗರಾಭಿವೃದ್ಧಿ ಮತ್ತು ಪೌರಾಡಳಿತ ನಿರ್ದೇಶನಾಲಯದಿಂದ ತೆರೆದಿರುವ ಪೋರ್ಟಲ್‌ಗೆ ತೆರವಾದ ಹುದ್ದೆಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಹುದ್ದೆಗಳನ್ನು ಭರ್ತಿ ಮಾಡುವುದು ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರ. ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಸಮಸ್ಯೆಗಳು ಇಲ್ಲದಂತೆ ಆಡಳಿತ ನಿರ್ವಹಣೆಗೆ ಗಮನಹರಿಸುವುದು ನಮ್ಮ ಆದ್ಯತೆ.
-ವಿ.ಪ್ರಿಯದರ್ಶಿನಿ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…