Andolana originals

ಅಳಿವಿನತ್ತ ರಾಜ್ಯದ ಮೊದಲ ಬಾಲಕಿಯರ ಶಾಲೆ

ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ

ಮೈಸೂರು: ಹೆಣ್ಣುಮಕ್ಕಳಿಗಾಗಿ ರಾಜ್ಯದಲ್ಲಿ ಸ್ಥಾಪಿಸಿದ ಮೊದಲ ಶಾಲೆ ಇದು. ಶತೋತ್ತರ ಅರ್ಧ ಶತಕ ಬಾರಿಸುವ ಹಾದಿಯಲ್ಲಿದೆ. ಆದರೆ ಅಸ್ತಿತ್ವ ಉಳಿಸಿಕೊಳ್ಳಲು ಶಾಲೆ ಏದುಸಿರು ಬಿಡುತ್ತಿದೆ. ಸ್ವಂತ ನೆಲದಿಂದ ಬಾಡಿಗೆ ಜಾಗಕ್ಕೆ ಸ್ಥಳಾಂತರಗೊಂಡಿರುವ ಈ ಸರ್ಕಾರಿ ಶಾಲೆಯನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಅರಸರ ಮನೆತ ನದವರು ಸ್ಥಾಪಿಸಿದ್ದಾರೆ ಎಂಬುದು ಗಮನಾರ್ಹ.

ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ರಾಜ್ಯದ ಮೊದಲ ಬಾಲಕಿಯರ ಶಾಲೆಯಾದ ಸರ್ಕಾರಿ ಮಹಾ ರಾಣಿ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಎನ್‌ಟಿಎಂಎಸ್)ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಅಳಿವು ಉಳಿವಿನ ಅಂಚಿನಲ್ಲಿ ಜೀವಿಸುತ್ತಿದೆ.

೧೮೮೧ರಲ್ಲಿ ಮೈಸೂರಿನ ರಾಜಮನತನದ ಕೆಂಪನಂಜಮ್ಮಣ್ಣಿ ಅವರು ಬಾಲಕಿಯರಿಗಾಗಿ ಸ್ಥಾಪಿಸಿದ ಈ ಶಾಲೆಗೆ ಈಗ ೧೪೫ ವರ್ಷಗಳು ತುಂಬಿವೆ. ಈ ಶತಮಾನದ ಶಾಲೆ ಖಾಸಗಿ ಶಾಲೆಗಳ ಹೊಡೆತಕ್ಕೆ ಸಿಲುಕಿ ತತ್ತರಿಸಿ ಹೋಗಿದೆ. ಈ ಶಾಲೆಯನ್ನು ೨೦೨೨ರಲ್ಲಿ ಸಮೀಪದ ಮಹಾರಾಣಿ ಪ್ರೌಢಶಾಲೆಯ ಸುಪರ್ದಿಗೆ ಹಸ್ತಾಂತರ ಮಾಡಲಾಗಿದೆ.

ಈ ಹಸ್ತಾಂತರದ ಸಮಯದಲ್ಲಿ ೪೦ ಮಂದಿಯಿದ್ದ ಮಕ್ಕಳ ಸಂಖ್ಯೆ ಈಗ ೧೫ಕ್ಕೆ ಕುಸಿದಿದೆ. ರಾಜ್ಯದ ಬಾಲಕಿಯರ ಮೊದಲ ಶಾಲೆಯ ಸ್ಥಳವನ್ನು ಉಳಿಸಲು ೧೫ ವರ್ಷಗಳು ನಿರಂತರ ಹೋರಾಟ ನಡೆಯಿತು. ಜೊತೆಗೆ ಖಾಸಗಿ ಶೈಕ್ಷಣಿಕ ಸಂಸ್ಥೆಗಳಾದ ಮರಿಮಲ್ಲಪ್ಪ ವಿದ್ಯಾ ಸಂಸ್ಥೆಗಳು, ಸದ್ವಿದ್ಯಾ ಸಂಸ್ಥೆಗಳು, ಅವಿಲಾ ಕಾನ್ವೆಂಟ್ ಸೇರಿದಂತೆ ಸಮೀಪದ ಖಾಸಗಿ ಶಾಲೆಗಳ ಹೊಡೆತ ಈ ಶಾಲೆಯನ್ನು ಕುಗ್ಗಿಸಿರುವುದರಲ್ಲಿ ಅನುಮಾನವೇ ಇಲ್ಲ. ಈ ಶಾಲೆಯನ್ನು ಉಳಿಸಲೇಬೇಕು ಎಂಬ ಅಚಲವಾದ ನಿರಂತರ ಪ್ರಯತ್ನದಲ್ಲಿ ಶಾಲೆಯ ಆಡಳಿತ ವರ್ಗವು ತೊಡಗಿದೆ. ಕೂಲಿ ಅರಸಿ ಹಳ್ಳಿಯಿಂದ ಬರುವ ಕಾರ್ಮಿಕ ಕುಟುಂಬಗಳನ್ನು ಹುಡುಕಿ, ಅಲ್ಲಿನ ಮಕ್ಕಳನ್ನು ಶಾಲೆಗೆ ಕರೆತರುವ ಕಾರ್ಯ ಯೋಜನೆ ರೂಪಿಸಲಾಗಿದ್ದು, ವಲಸೆ ಕಾರ್ಮಿಕ ಕುಟುಂಬಗಳನ್ನು ಕೇರಿ, ಮೊಹಲ್ಲಾಗಳಲ್ಲಿ ಹುಡುಕಿ ಕರೆತರುವುದೇ ದೊಡ್ಡ ಸಾಹಸವಾಗಿದೆ. ದಾಖಲಾಗಿ ಸಂಖ್ಯೆ ಹೆಚ್ಚಳವಾಗದಿದ್ದರೆ, ಮುಂದಿನ ವರ್ಷಗಳಲ್ಲಿ ಶಾಲೆ ಮುಚ್ಚುವ ಸ್ಥಿತಿಗೆ ತಲುಪಿದರೂ ಆಶ್ಚರ್ಯವಿಲ್ಲ.

ಈ ಕನ್ನಡ ಶಾಲೆಯಲ್ಲಿ ಎಲ್ಲಾ ಮೂಲ ಸೌಕರ್ಯಗಳು ಅಚ್ಚುಕಟ್ಟಾಗಿವೆ. ಪ್ರಭಾರ ಮುಖ್ಯೋಪಾಧ್ಯಾಯರಾಗಿ ಶಾಂತಮ್ಮ ಮತ್ತು ಸಹಶಿಕ್ಷಕರಾಗಿ ಸಮೀನಾ ಪರ್ವಿನ್ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲಾ ವಿಷಯಗಳನ್ನು ಈ ಇಬ್ಬರೇ ಬೋಧಿಸುತ್ತಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ೫ ಮಕ್ಕಳು, ಪರಿಶಿಷ್ಟ ಪಂಗಡಗಳಿಗೆ ಸೇರಿದ ೨ ಮಕ್ಕಳು, ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ೮ ಮಕ್ಕಳು ಓದುತ್ತಿದ್ದಾರೆ.

ಇತಿಹಾಸ ಪುಟ ಸೇರಿದ ಬಾಲಕಿಯರ ಮೊದಲ ಶಾಲೆ

ಶಾಲೆ ಕಟ್ಟ ನೆಲಸಮ ಮಾಡಿ ನಾಲ್ಕು ವರ್ಷ

ಮೈಸೂರು: ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿದ್ದ ಸರ್ಕಾರಿ ಮಹಾರಾಣಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಎನ್‌ಟಿಎಂಎಸ್)ಯನ್ನು ರಾತ್ರೋರಾತ್ರಿ ಧ್ವಂಸಗೊಳಿಸಿ ಇಂದಿಗೆ ನಾಲ್ಕು ವರ್ಷಗಳು ಕಳೆದಿವೆ.

೧೮೮೧ರಲ್ಲಿ ಸ್ಥಾಪನೆಗೊಂಡಿದ್ದ ಈ ಶಾಲೆಯ ಕಟ್ಟಡವನ್ನು ೨೦೨೨ರ ಫೆ.೯ನೇ ತಾರೀಖಿನ ಮಧ್ಯರಾತ್ರಿ ಪೊಲೀಸ್ ಭದ್ರತೆಯಲ್ಲಿ (ಇಂದಿಗೆ ೧೪೫ ವರ್ಷಗಳು) ಧ್ವಂಸಗೊಳಿಸಲಾಯಿತು.

ಆಗ ಕೇಂದ್ರದಲ್ಲಿದ್ದ ಯುಪಿಎ ನೇತೃತ್ವದ ಸರ್ಕಾರವು ‘ಸ್ವಾಮಿ ವಿವೇಕಾನಂದ ಅವರು ಭಾರತದಲ್ಲಿ ತಂಗಿದ್ದ ಸ್ಥಳಗಳನ್ನು ಸ್ಮಾರಕ ಮಾಡಲಾಗುವುದು’ ಎಂದು ಘೋಷಿಸಿ ಬಿಟ್ಟಿತು. ಆ ಸಮಯದಲ್ಲಿ ಶ್ರೀ ರಾಮಕೃಷ್ಣ ಆಶ್ರಮವು, ಈ ಶಾಲೆ ಇರುವ ಸ್ಥಳಕ್ಕೆ ಸ್ವಾಮಿ ವಿವೇಕಾನಂದ ಅವರು ಭೇಟಿ ನೀಡಿದ್ದರು. ಹಾಗಾಗಿ ಇದೇ ಜಾಗದಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಬೇಕು ಹಾಗೂ ವಿವೇಕಾನಂದರ ೧೫೦ನೇ ಜಯಂತ್ಯುತ್ಸವದ ಅಂಗವಾಗಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾಪವನ್ನು ರಾಜ್ಯ ಸರ್ಕಾರದ ಮುಂದಿಟ್ಟಿತು. ಅಲ್ಲಿಂದ ಶುರುವಾದ ಈ ವಿವಾದವು, ಸುಮಾರು ೧೫ ವರ್ಷಗಳು ವಿವಾದದ ಕೇಂದ್ರ ಬಿಂದುವಾಗಿತ್ತು. ಇಷ್ಟೆಲ್ಲದರ ನಡುವೆಯೂ ಎನ್‌ಟಿಎಂ ಶಾಲೆಯನ್ನು ಉಳಿಸಲೇಬೇಕು ಎಂದು ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳು, ರೈತ ಸಂಘಟನೆಗಳು ಜೊತೆಗೂಡಿ ‘ಎನ್ ಟಿಎಂ ಶಾಲೆಯನ್ನು ಉಳಿಸಿ ಹೋರಾಟ ಸಮಿತಿ’ ರಚಿಸಿಕೊಂಡು ಪ್ರಬಲ ಪ್ರತಿರೋಧ ಒಡ್ಡಿದ್ದವು. ಈ ಐತಿಹಾಸಿಕ ಶಾಲೆಯನ್ನು ಉಳಿಸಲೇಬೇಕು ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ, ‘ಆಂದೋಲನ ದಿನ’ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ, ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ಹಿರಿಯ ಸಮಾಜವಾದಿ ಪ.ಮಲ್ಲೇಶ್, ಸ.ರ.ಸುದರ್ಶನ ಸೇರಿದಂತೆ ಅನೇಕ ಪ್ರಗತಿಪರರು, ಹೋರಾಟಗಾರರು, ಸಾಹಿತಿಗಳು, ಇತಿಹಾಸ ತಜ್ಞರು ಧ್ವನಿ ಎತ್ತಿದ್ದರು. ಪ್ರಸ್ತುತ ‘ಆಂದೋಲನ’ ದಿನಪತ್ರಿಕೆಯ ಸಂಪಾದಕ ರವಿ ಕೋಟಿ ಅವರೂ ಈ ಶಾಲೆಯ ಉಳಿವಿನ ಹೋರಾಟಕ್ಕೆ ಬೆನ್ನೆಲುಬಾಗಿ ಶ್ರಮವಹಿಸಿದರು ಎಂಬುದು ಪ್ರಸ್ತುತಾರ್ಹ. ಈ ನಡುವೆ ರಾಮಕೃಷ್ಣ ಆಶ್ರಮವು ಶಾಲೆಯ ಜಾಗ ಹಸ್ತಾಂತರದ ಬಗ್ಗೆ ಹೈಕೋರ್ಟ್‌ನಿಂದ ಆದೇಶ ಪಡೆದು, ಅಂದಿನ ಬಿ.ಎಸ್.ಯಡಿಯೂರಪ್ಪರ ಬಿಜೆಪಿ ನೇತೃತ್ವದ ಸರ್ಕಾರದ ಮೂಲಕ ಶಾಲೆಯ ಜಾಗವನ್ನು ವಶಕ್ಕೆ ಪಡೆಯಲು ಮುಂದಾಗಿತ್ತು. ಆಗ ಪ್ರತಿಭಟನೆಗಳು ತೀವ್ರಗೊಂಡವು. ಈ ನಡುವೆಯೇ ತರಾತುರಿಯಲ್ಲಿ ಶಾಲೆಯ ಕಟ್ಟಡವನ್ನು ಧ್ವಂಸಗೊಳಿಸಲಾಯಿತು. ಒಂದರ್ಥದಲ್ಲಿ ಶಾಲೆಯನ್ನು ಸಮೀಪದ ಮಹಾರಾಣಿ ಪ್ರೌಢಶಾಲೆಗೆ ವರ್ಗಾಯಿಸುವ ಮೂಲಕ ಶಾಲೆ ಉಳಿದಿರಬಹುದು. ಆದರೆ ಐತಿಹಾಸಿಕ ರಾಜ್ಯದ ಮೊಟ್ಟ ಮೊದಲ ಬಾಲಕಿಯರ ಶಾಲೆಯನ್ನು ಧ್ವಂಸಗೊಳಿಸಿದ್ದು ಮಾತ್ರ ಸ್ಮಾರಕ ನಿರ್ಮಾಣಕ್ಕೆ ಮೆತ್ತಿದ ಕಳಂಕ ಎಂಬುದು ಶಾಲಾ ಪರವಾದ ಹಲವು ಹೋರಾಟಗಾರರ ನೋವಿನ ನುಡಿ.

” ಈ ನಮ್ಮ ಶಾಲೆಯಲ್ಲಿ ದಾಖಲಾತಿ ಸಂಖ್ಯೆ ಕ್ಷೀಣಿಸಲು ಸಮೀಪದ ಖಾಸಗಿ ಶಾಲೆಗಳೇ ಪ್ರಮುಖ ಕಾರಣ. ಇದರ ನಡುವೆಯೂ ಕಾರ್ಮಿಕರ ಮಕ್ಕಳನ್ನು ಹುಡುಕಿ ಶಾಲೆಗೆ ದಾಖಲಿಸಲು ಶ್ರಮವಹಿಸಿದ್ದೇವೆ. ಮುಂದಿನ ಸಾಲಿನಲ್ಲಿ ಪ್ರವೇಶಾತಿ ಹೆಚ್ಚಳ ಆಗುವ ನಿರೀಕ್ಷೆ ಇದೆ.”

-ಶಾಂತಮ್ಮ, ಪ್ರಭಾರ ಮುಖ್ಯೋಪಾದ್ಯಾಯರು, ಎನ್‌ಟಿಎಂಎಸ್

” ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂದು ಇಂಗ್ಲಿಷ್ ಮಾಧ್ಯಮವನ್ನು ಅಳವಡಿ ಸದೇ ಇರುವುದರಲ್ಲಿ ಅರ್ಥವಿಲ್ಲ. ಕಾಲಕ್ಕೆ ತಕ್ಕಂತೆ ಭಾಷೆಗಳ ಪ್ರಾಮುಖ್ಯತೆಯೂ ಮುಖ್ಯವಾಗಿರುತ್ತದೆ. ಹಾಗಾಗಿ ಈ ಶಾಲೆಯಲ್ಲಿಯೂ ಇಂಗ್ಲಿಷ್ ಮಾಧ್ಯಮವನ್ನು ಜಾರಿ ಮಾಡಬೇಕು. ಅದರಿಂದ ಮಕ್ಕಳ ಸಂಖ್ಯೆಯೂ ಹೆಚ್ಚಾಗಬಹುದು.”

-ಶೋಭ, ಎಸ್‌ಡಿಎಂಸಿ ಸದಸ್ಯರು, ಎನ್‌ಟಿಎಂಎಸ್

” ಸಿದ್ದರಾಮಯ್ಯ ಅವರು ಮೊದಲನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ, ಈ ಶಾಲೆ ವಿವಾದದ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಆ ಸಮಿತಿಯು, ಶಾಲೆಯ ಅರ್ಧ ಜಾಗವನ್ನು ಮಾತ್ರ ಬಳಸಿಕೊಂಡು ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಲು ಆದೇಶಿಸಿತ್ತು. ಆದರೆ, ಈ ಆದೇಶವನ್ನು ಉಲ್ಲಂಸಿ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ.”

-ಹೊಸಕೋಟೆ ಬಸವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ

” ಶಾಲೆಯ ಉಳಿವಿಗಾಗಿ ಬೀದಿ ಹೋರಾಟ ದೊಡ್ಡ ಪ್ರಮಾಣದಲ್ಲಿ ನಡೆಯಿತಾದರೂ, ಕಾನೂನು ಹೋರಾಟದಲ್ಲಿ ಹಿನ್ನಡೆಯಾಯಿತು. ಏಕೆಂದರೆ ಶಾಲೆ ಉಳಿವಿನ ವಿಷಯದಲ್ಲಿ ಕಾನೂನು ಹೋರಾಟವೇ ನಡೆಯಲಿಲ್ಲ. ಶ್ರೀ ರಾಮಕೃಷ್ಣ ಆಶ್ರಮವು ಐತಿಹಾಸಿಕ ಬಾಲಕಿಯರ ಶಾಲೆಯನ್ನು ಧ್ವಂಸಗೊಳಿಸಿದ್ದು, ವಿವೇಕಾನಂದರ ಚಿಂತನೆಗಳಿಗೆ ಮಸಿ ಬಳಿದಂತಾಗಿದೆ.”

-ಎಂ.ಮೋಹನ್‌ಕುಮಾರ್‌ಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ಕಾವಲು ಪಡೆ, ಮೈಸೂರು

ʼ ಸಮೀಪದ ಖಾಸಗಿ ಶಾಲೆಗಳಿಗೆ ಪ್ರವೇಶಾತಿ ಶುಲ್ಕವನ್ನು ಕಟ್ಟಲು ಸಾಧ್ಯವಾಗದೇ ಶಿಕ್ಷಣದಿಂದ ಹೊರಗೆ ಉಳಿಯುವ ಮಕ್ಕಳನ್ನು ಹುಡುಕಿ ನಮ್ಮ ಶಾಲೆಗೆ ಕರೆತರುವ ಕೆಲಸವೂ ಆಗುತ್ತಿದೆ. ಪ್ರವೇಶಾತಿ ಹೆಚ್ಚಳದ ಕೆಲಸಕ್ಕೆ ಪೂರ್ವ ತಯಾರಿ ನಡೆಯುತ್ತಿದೆ.”

-ಸಮೀನಾ ಪರ್ವಿನ್, ಸಹ ಶಿಕ್ಷಕಿ, ಎನ್‌ಟಿಎಂಎ

ಆಂದೋಲನ ಡೆಸ್ಕ್

Recent Posts

ವಿಬಿ ಜಿ ರಾಮ್ ಜಿ ಗೊಂದಲ ನಿವಾರಣೆ ಕೇಂದ್ರದ ಹೊಣೆ

ವಿಬಿ- ಜಿ ರಾಮ್ ಜಿ (ವಿಕಸಿತ್ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕ ಮಿಷನ್ (ಗ್ರಾಮೀಣ್)- ೨೦೨೫) ಕಾಯ್ದೆಯು…

6 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಿಎಂ ಶಿಶಿರ್ ಚಂದ್ರ ಏಕೆ ಕೆಳಗಿಳಿಯುತ್ತಿಲ್ಲ?

ಜನನಾಯಕ ಅನ್ನಿಸಿಕೊಂಡವರ ಅಧಿಕಾರ ಬದಲಿಸುವುದು ಅಷ್ಟು ಸುಲಭದ ಕೆಲಸವಲ್ಲ  ಅವತ್ತು ವಿಧಾನಸಭೆಯ ಮೊಗಸಾಲೆಗೆ ಪ್ರವೇಶ ಮಾಡುತ್ತಿದ್ದಂತೆಯೇ ಪತ್ರಕರ್ತ ರಾಕೇಶನ ಮುಖದಲ್ಲಿ…

6 hours ago

ರಂಗನತಿಟ್ಟು ಸಮೀಪ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ: ಪರ-ವಿರೋಧ ಅಭಿಪ್ರಾಯ

ಪರಿಸರ ಪ್ರೇಮಿಗಳು, ಸಾರ್ವಜನಿಕರ ಪರ-ವಿರೋಧ ಅಭಿಪ್ರಾಯ ಮಂಡ್ಯ: ಮೈಸೂರು ಬೈಪಾಸ್ ಮಾಡುವ ಗುರಿಯನ್ನು ಹೊಂದಿರುವ ಎನ್‌ಎಚ್ ೨೭೫ರ ವಿಸ್ತೃತ ಮಾರ್ಗವಾದ…

6 hours ago

2ನೇ ಮದುವೆಗೆ ಸಜ್ಜಾಗಿದ್ದ ವರ : ಕಲ್ಯಾಣ ಮಂಟಪಕ್ಕೆ ಬಂದು ಮದುವೆ ನಿಲ್ಲಿಸಿದ ಮೊದಲ ಹೆಂಡತಿ!

ತುಮಕೂರು : ಈಗಾಗಲೇ ಮದುವೆಯಾಗಿ ಹೆಂಡತಿಯಿದ್ದರೂ 2ನೇಯ ಮದುವೆಗೆ ತಯಾರಿ ನಡೆಸಿ ಕಲ್ಯಾಣ ಮಂಟಪದಲ್ಲಿ ಇನ್ನೇನು ಮಾಂಗಲ್ಯ ಧಾರಣೆ ನಡೆಯಬೇಕು…

11 hours ago

ಕೆಎಸ್‌ಆರ್‌ಟಿಸಿ ಬಸ್‌ ಮೇಲೆ ತಂಬಾಕು ಪ್ರಚಾರ : ತೆರವಿಗೆ ಫೆ.15 ಗಡವು

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಮೇಲಿನ ಜಾಹೀರಾತುಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ…

12 hours ago