ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ‘ಧರ್ಮ ಯುದ್ಧ’ ಸಾರಿರುವ ಆದಿಗುರು ಶಂಕರಾಚಾರ್ಯರೇ ಸ್ಥಾಪನೆ ಮಾಡಿದ ಜ್ಯೋತಿರ್ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಅವರನ್ನು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆಗಳು ದಟ್ಟವಾಗಿವೆ. ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ಶೋಷಣೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಶಂಕರಾಚಾರ್ಯ ಸ್ವಾಮೀಜಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಪ್ರಯಾಗ್‌ರಾಜ್‌ನ ಪೋಕ್ಸೊ ನ್ಯಾಯಾಲಯ ಶನಿವಾರ ಆದೇಶ ನೀಡಿತ್ತು.
ಸಿಎಂ ಯೋಗಿ ಆದಿತ್ಯನಾಥ್ ಅವರ ಆಪ್ತ ಹಾಗೂ ರಾಮಭದ್ರಾಚಾರ್ಯ ಸ್ವಾಮೀಜಿಯ ಶಿಷ್ಯ ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ಅಲಿಯಾಸ್ ಅಶುತೋಷ್ ಪಾಂಡೆ ಎಂಬಾತ ಪ್ರಯಾಗರಾಜ್‌ನ ಝೂಸಿ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರು ಆಧರಿಸಿ ಶಂಕರಾಚಾರ್ಯ ಸ್ವಾಮೀಜಿ ಹಾಗೂ ಅವರ ಶಿಷ್ಯ ಮುಕುಂದಾನಂದ್ ಗಿರಿ ಸ್ವಾಮೀಜಿ ವಿರುದ್ಧ ಈಗ ಭಾರತೀಯ ನ್ಯಾಯ ಸಂಹಿತೆ ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
‘ವಾರಣಾಸಿಯಲ್ಲಿರುವ ಶಂಕರಾಚಾರ್ಯ ಪೀಠದ ವಿದ್ಯಾಮಠ ಹಾಗೂ ಪ್ರಯಾಗರಾಜ್‌ನ ಮಾಘ ಮೇಳದ ಸಂದರ್ಭದಲ್ಲಿ ಆಶ್ರಮದ ಹೊರಗೆನಿಲ್ಲಿಸಲಾಗಿದ್ದ ಶಂಕರಾಚಾರ್ಯರ ವಾಹನದಲ್ಲಿಜನವರಿ ೧೩, ೨೦೨೫ ಹಾಗೂ ಫೆಬ್ರವರಿ ೧೫, ೨೦೨೬ರ ಮಧ್ಯೆ ಈ ಲೈಂಗಿಕ ದೌರ್ಜನ್ಯಗಳುನಡೆದಿವೆ. ಹಾಗೂ ಶಂಕರಾಚಾರ್ಯರರು ‘ಗುರು ಸೇವೆ’ಯ ಹೆಸರಿನಲ್ಲಿ ಆಶ್ರಮದಲ್ಲಿ ವೇದ ಅಧ್ಯಯನ ಮಾಡುತ್ತಿರುವ ವಟುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ’ ಎಂದು ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಶಂಕರಾಚಾರ್ಯರ ಪೀಠದ ವಿದ್ಯಾಮಠದಲ್ಲಿ ೨೦ಕ್ಕೂ ಅಽಕ ವಟುಗಳ ಮೇಲೆ ಈ ರೀತಿಯ ಲೈಂಗಿಕ ದೌರ್ಜನ್ಯವೆಸಗಲಾಗಿದೆ ಎಂದಿರುವ ದೂರುದಾರರು, ಹದಿನಾಲ್ಕು ವರ್ಷ ಮತ್ತು ಹದಿನೇಳು ವರ್ಷದ ಇಬ್ಬರು ವಟುಗಳ ಮೇಲೆ ನಡೆದ ದೌರ್ಜನ್ಯದ ಕುರಿತಂತೆ ಸಾಕ್ಷ್ಯಗಳನ್ನೂ ಪೊಲೀಸರಿಗೆ ಒದಗಿಸಿರುವುದಾಗಿ ಹೇಳಿಕೊಂಡಿದ್ದಾರೆ.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಝೂಸಿ ಪೊಲೀಸ್ ಠಾಣೆಯ ಪೊಲೀಸರು ಶಂಕರಾಚಾರ್ಯ ಸ್ವಾಮೀಜಿ, ಮುಕುಂದಾನಂದ್ ಗಿರಿ ಸ್ವಾಮೀಜಿ ಅವರನ್ನು ವಿಚಾರಣೆಗೊಳಪಡಿಸಲು ಮತ್ತು ಸಾಕ್ಷ ಸಂಗ್ರಹಿಸಲು ಸೋಮವಾರ ವಾರಣಾಸಿಗೆ ತಲುಪಿದ್ದು, ಶಂಕರಾಚಾರ್ಯರನ್ನು ಬಂಧಿಸುವ ಸಾಧ್ಯತೆಗಳು ದಟ್ಟವಾಗಿವೆ ಎಂಬ ಮಾಹಿತಿ ಇದೆ.
ಹೆಚ್ಚಿನ ಸಂಖ್ಯೆಯಲ್ಲಿ ಶಂಕರಾಚಾರ್ಯರ ಶಿಷ್ಯರೂ ವಾರಣಾಸಿಯಲ್ಲಿರುವ ಸ್ವಾಮೀಜಿಯ ಆಶ್ರಮಕ್ಕೆ ತಲುಪುತ್ತಿದ್ದು, ‘ಸ್ವಾಮೀಜಿ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು, ರಾಜಕೀಯ ಷಡ್ಯಂತ್ರದ ಭಾಗವಾಗಿ ಈಆರೋಪ ಮಾಡಲಾಗುತ್ತಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಮಾಘ ಮೇಳದ ವಿವಾದ: ಮಾಘ ಮೇಳದ ಸಂದರ್ಭದಲ್ಲಿ ಕಳೆದ ಜನವರಿ ೧೮ರಂದು ಮೌನಿ ಅಮಾವಾಸ್ಯೆಯ ದಿನ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಅವರು ಪಾಲಕಿಯಲ್ಲಿ ಕುಳಿತು ಪ್ರಯಾಗರಾಜ್‌ನ ತ್ರಿವೇಣಿ ಸಂಗಮಕ್ಕೆ ಪವಿತ್ರ ಗಂಗಾ ಸ್ನಾನಕ್ಕೆಂದು ತಮ್ಮ ಹಲವು ಶಿಷ್ಯರ ಜೊತೆ ಹೊರಟಿದ್ದಾಗ ಪೊಲೀಸರು ಅವರನ್ನು ತಡೆದಿದ್ದರು. ತ್ರಿವೇಣಿ ಸಂಗಮದವರೆಗೆ ಪಾಲಕಿಯಲ್ಲಿ ಹೋಗಲು ಅನುಮತಿ ನಿರಾಕರಿಸಿ ಅಲ್ಲಿಯವರೆಗೆ ನಡೆದುಕೊಂಡೇ ಹೋಗುವಂತೆ ಪೊಲೀಸರು ಸೂಚಿಸಿದ್ದರು. ಆದರೆ, ಶಂಕರಾಚಾರ್ಯರ ಶಿಷ್ಯರು ಇದಕ್ಕೆ ಒಪ್ಪಿರಲಿಲ್ಲ. ಆಗ ಪೊಲೀಸರು ಮತ್ತು ಶಂಕರಾಚಾರ್ಯರ ಶಿಷ್ಯರ ನಡುವೆ ತಳ್ಳಾಟ, ಘರ್ಷಣೆಯೂ ನಡೆದಿತ್ತು. ಪೊಲೀಸರು ಶಂಕರಾಚಾರ್ಯರ ಶಿಷ್ಯರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು, ಅವರ ಶಿಖಾ ಹಿಡಿದು ಎಳೆದಾಡಿ ಥಳಿಸಿದ್ದರು.
ಈ ರೀತಿ ಸಣ್ಣ ಮಕ್ಕಳು ಮತ್ತು ವೃದ್ಧರ ಮೇಲೆ ಹಲ್ಲೆ ಮಾಡಿದ ಪೊಲೀಸರು ಕ್ಷಮೆಯಾಚನೆ ಮಾಡಬೇಕು, ಮಾಘ ಮೇಳದ ಆಡಳಿತದ ವ್ಯವಸ್ಥಾಪಕರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದು ಶಂಕರಾಚಾರ್ಯರರು ಎರಡು ವಾರಗಳವರೆಗೆ ಧರಣಿ ಕುಳಿತಿದ್ದರು. ಆದರೆ, ಉತ್ತರ ಪ್ರದೇಶದ ಆಡಳಿತ ಕ್ಷಮೆಯಾಚನೆ ಮಾಡುವುದು ದೂರದ ಮಾತು, ಪೊಲೀಸರು ಶಂಕರಾಚಾರ್ಯರಿಗೆ ನೋಟಿಸ್ ಕೊಟ್ಟು ‘ನೀವು ಶಂಕರಾಚಾರ್ಯರೇ ಅಲ್ಲ, ನೀವು ನಿಜವಾದ ಶಂಕರಾಚಾರ್ಯರಾಗಿದ್ದರೆ ಅದನ್ನು ಸಾಬೀತು ಮಾಡಿ’ ಎಂದು ಕೇಳಿತ್ತು. ಅಷ್ಟೇ ಅಲ್ಲದೇ, ಮಾಘ ಮೇಳಕ್ಕೆ ಶಂಕರಾಚಾರ್ಯರು ಬರದಂತೆ ಶಾಶ್ವತವಾಗಿ ನಿಷೇಧ ಹೇರುವ, ಶಂಕರಾಚಾರ್ಯ ಪೀಠಕ್ಕೆ ಉತ್ತರ ಪ್ರದೇಶದಿಂದ ಕೊಟ್ಟಿರುವ ಜಮೀನು ವಾಪಸ್ ಪಡೆಯುವ ಬೆದರಿಕೆಯನ್ನೂ ಹಾಕಿತ್ತು. ಈ ನೋಟಿಸ್‌ಗಳಿಗೆಶಂಕರಾಚಾರ್ಯರು ಬೆದರದೇ ಎಲ್ಲದಕ್ಕೂ ಉತ್ತರವನ್ನೂ ಕೊಟ್ಟಿದ್ದರು.
ಈ ಘಟನೆಯ ನಂತರವೂ ಸಿಎಂ ಯೋಗಿ ಅದಿತ್ಯನಾಥ್ ಮತ್ತು ಅವರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ಶಂಕರಾಚಾರ್ಯರು ಮುಂದುವರಿಸಿದ್ದರು. ಯೋಗಿ ಅದಿತ್ಯನಾಥ್ ಹಿಂದುತ್ವದ ಹೆಸರಿನಲ್ಲಿ ಸನಾತನ ಧರ್ಮದ ವಿರುದ್ಧವೇ ಕೆಲಸ ಮಾಡುತ್ತಿರುವ ವ್ಯಕ್ತಿ. ನಿಜವಾದ ಹಿಂದೂ ಆಗಿದ್ದರೆ ಗೋಹತ್ಯೆ ನಿಷೇಧ ಮತ್ತು ಗೋಮಾಂಸ ರಫ್ತು ನಿಷೇಧವನ್ನು ಅವರು ಮಾಡಲಿ ಎಂದು ಸವಾಲು ಹಾಕಿದ್ದರು. ಹಿಂದೂಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಗೋಮಾಂಸ ರಫ್ತು ಮಾಡುವವರಿಂದ ದೇಣಿಗೆ ಪಡೆದು ಯೋಗಿ ಅದಿತ್ಯನಾಥ್ ರಾಜಕಾರಣ ಮಾಡುತ್ತಿದ್ದಾರೆ ಎಂದೂ ಶಂಕರಾಚಾರ್ಯರು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಯೋಗಿ ಅದಿತ್ಯನಾಥರು, ‘ಹಿಂದೂ ಧರ್ಮವನ್ನು ದುರ್ಬಲಗೊಳಿಸುತ್ತಿರುವ ಕಾಲನೇಮಿ ರಾಕ್ಷಸ’ ಎಂದುಶಂಕರಾಚಾರ್ಯರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.
ಮಾ.೧೧ಕ್ಕೆ ಸಂತರ ಸಮ್ಮೇಳನ: ಗೋಹತ್ಯೆ ನಿಷೇಧ, ಗೋಮಾಂಸ ರಫ್ತು ನಿಷೇಧಕ್ಕೆ ಒತ್ತಾಯಿಸಿ ಮಾರ್ಚ್ ೧೧ ರಂದು ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಹಿಂದೂ ಸಂತರ ಸಮ್ಮೇಳನ ನಡೆಸುವುದಾಗಿ ಶಂಕಾಚಾರ್ಯರು ಈಗಾಗಲೇ ಘೋಷಣೆ ಮಾಡಿದ್ದಾರೆ. ಅಷ್ಟರೊಳಗೇ ಈ ಎರಡೂ ಕೆಲಸಗಳನ್ನು ಮಾಡುವ ಮೂಲಕ ಯೋಗಿ ಅದಿತ್ಯನಾಥ್, ತಾವು ನಿಜವಾದ ಹಿಂದೂ ಹಿತೈಷಿ ಎಂಬುದನ್ನು ಸಾಬೀತು ಮಾಡಬೇಕು ಎಂದು ಸವಾಲನ್ನೂ ಸ್ವಾಮೀಜಿ ಹಾಕಿದ್ದಾರೆ. ಮಾರ್ಚ್ ೧೧ರೊಳಗೇ ಈ ಕೆಲಸಗಳು ಆಗದಿದ್ದರೆ ಇವೇ ವಿಷಯಗಳನ್ನು ಇಟ್ಟುಕೊಂಡು ಸಂತ ಸಮಾಜ ದೇಶಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಅಷ್ಟರೊಳಗೇ ಅವರ ವಿರುದ್ಧ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಈಗ ಕೇಳಿ ಬಂದಿದೆ.
ಸ್ವಪಕ್ಷೀಯರಿಂದಲೇ ಯೋಗಿಗೆ ವಿರೋಧ:
ಈ ಇಬ್ಬರೂ ಕಾವಿಧಾರಿಗಳ ನಡುವಿನ ವಾಕ್ಸಮರ ಉತ್ತರ ಪ್ರದೇಶದ ರಾಜಕಾರಣದ ಮೇಲೆಯೂ ಪ್ರಭಾವ ಬೀರಿದೆ. ಉತ್ತರ ಪ್ರದೇಶದ ಇಬ್ಬರು ಉಪ ಮುಖ್ಯಮಂತ್ರಿಗಳಾದ ಕೇಶವಪ್ರಸಾದ್ ಮೌರ್ಯ ಮತ್ತು ಬೃಜೇಶ್ ಪಾಠಕ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಪಂಕಜ್ ಚೌಧರಿ ಪರೋಕ್ಷವಾಗಿ ಶಂಕರಾಚಾರ್ಯ ಸ್ವಾಮೀಜಿ ಪರವಾಗಿ ಬ್ಯಾಟ್ ಬೀಸಲಾರಂಭಿಸಿದ್ದಾರೆ. ‘ಶಂಕರಾಚಾರ್ಯರು ದೇವರಿಗೆ ಸಮನಾದ ಪೂಜ್ಯರು, ಅವರ ಶಿಷ್ಯರ ಶಿಖಾ ಎಳೆದಾಡಿ ಹಲ್ಲೆ ಮಾಡಿರುವುದು ಸನಾತನ ಧರ್ಮಕ್ಕೆ ಮಾಡಿದ ಅಪಮಾನ’ ಎಂದೂ ಈ ನಾಯಕರು ಹೇಳಿದ್ದಾರೆ. ಈ ವಿವಾದದ ಕುರಿತಂತೆ ಉತ್ತರ ಪ್ರದೇಶ ಬಿಜೆಪಿಯಲ್ಲಿ ಎರಡು ಬಣಗಳಾಗಿರುವುದು ಮತ್ತು ಬ್ರಾಹ್ಮಣ್ ವರ್ಸಸ್ ಠಾಕೂರ್ ಸಮರವಾಗಿ ಈ ವಿವಾದ ಮಾರ್ಪಟ್ಟಿರುವುದೂ ಈಗ ಸ್ಪಷ್ಟವಾಗಿದೆ. ಉತ್ತರ ಪ್ರದೇಶ ಬಿಜೆಪಿ ಬಹುಸಂಖ್ಯಾತ ಬ್ರಾಹ್ಮಣ ಶಾಸಕರು ಶಂಕರಾಚಾರ್ಯರಪರವಾಗಿದ್ದರೆ, ಠಾಕೂರ್ ಶಾಸಕರು ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ಬೆನ್ನಿಗೆ ನಿಂತಿದ್ದಾರೆ. ಶಂಕರಾಚಾರ್ಯರನ್ನು ಬೆಂಬಲಿಸಿ ಬರೇಲಿಯ ಸಿಟಿ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೂ ಈ ವಿವಾದವೀಗ ಬಿಸಿ ತುಪ್ಪವಾಗಿ ಪರಿಣಮಿಸಿದೆ.
‘ದೂರುದಾರ ವೃತ್ತಿಪರ ಅಪರಾಧಿʼ
ಪೋಕ್ಸೊ ಕಾಯ್ದೆಯಡಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಬಗ್ಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಕಟುವಾಗಿ ಪ್ರತಿಕ್ರಿಯಿಸಿದ್ದು, ಯೋಗಿ ಆದಿತ್ಯನಾಥರ ಸನಾತನ ವಿರೋಧಿ ಕೃತ್ಯಗಳ ವಿರುದ್ಧ ಸಮರ ಸಾರಿರುವುದರಿಂದ ನಮ್ಮ ಮೇಲೆ ಸರ್ಕಾರದ ಕಡೆಯಿಂದ ದಾಳಿಗಳು ನಡೆಯುತ್ತವೆ ಎಂಬ ನಿರೀಕ್ಷೆ ಇದ್ದೇ ಇತ್ತು. ಆದರೆ, ಲೈಂಗಿಕ ದೌರ್ಜನ್ಯದಂಥ ಸುಳ್ಳು ಆರೋಪ ಹೊರಿಸುವ ನೀಚ ಮಟ್ಟಕ್ಕೆ ಯೋಗಿ ಆದಿತ್ಯನಾಥ್ ಸರ್ಕಾರ ಹೋಗಬಹುದು ಎಂಬ ಕಲ್ಪನೆ ಮಾತ್ರ ಇರಲಿಲ್ಲ ಎಂದಿದ್ದಾರೆ. ಈ ದೂರು ಮತ್ತು ಪೋಕ್ಸೊ ನ್ಯಾಯಾಲಯದ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ತನಿಖಾಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು, ಯಾವ ವಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಲಾಗುತ್ತಿದೆಯೋ ಅವರು ನಮ್ಮ ಆಶ್ರಮಕ್ಕೆ ಬಂದೇ ಇಲ್ಲ.ಆಶ್ರಮದ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಪರೀಕ್ಷಿಸಲಿ, ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ ಎಂದೂ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಹೇಳಿದ್ದಾರೆ. ಈ ಆರೋಪ ಮಾಡಿರುವ ವ್ಯಕ್ತಿ ಅಶುತೋಷ್ ಬ್ರಹ್ಮಚಾರಿ ಯೋಗಿ ಆದಿತ್ಯನಾಥರ ಶಿಷ್ಯ. ಆತ ಒಬ್ಬ ರೌಡಿಶೀಟರ್. ಆತನ ಮೇಲೆ ಉತ್ತರಪ್ರದೇಶದ ಶಾಮಲಿ ಜಿಲ್ಲೆಯ ಕಾಂಡ್ಲಾ ಪೊಲೀಸ್ ಠಾಣೆಯಲ್ಲಿ ೨೧ ಪ್ರಕರಣಗಳಿವೆ. ಗೂಂಡಾಗಿರಿ, ದರೋಡೆ, ಬ್ಲಾಕ್‌ಮೇಲ್, ಕೊಲೆ, ಕೊಲೆ ಯತ್ನ, ಅಪಹರಣ, ಕೋಮು ಹಿಂಸೆಗೆ ಪ್ರಚೋದನೆ, ಗೋ ಕಳ್ಳಸಾಗಣೆ, ಗ್ಯಾಂಗ್ ರೇಪ್, ಸುಲಿಗೆ ಸೇರಿದಂತೆ ಅತ್ಯಂತ ಗಂಭೀರವಾದ ಪ್ರಕರಣಗಳು ಆತನ ಮೇಲಿವೆ. ಅಂಥ ವ್ಯಕ್ತಿಯ ಮೂಲಕ ನಮ್ಮ ವಿರುದ್ಧ ದೂರು ಕೊಡಿಸಲಾಗಿದೆ. ಇದೊಂದು ‘ಧರ್ಮ ಯುದ್ಧ’ ಈ ಯುದ್ಧ ನಿರ್ಣಾಯಕಹಂತ ತಲುಪುವವರೆಗೆ ನಾವು ವಿರಮಿಸುವುದಿಲ್ಲ ಎಂದೂ ಸ್ವಾಮೀಜಿ ಹೇಳಿದ್ದಾರೆ. ಉತ್ತರ ಪ್ರದೇಶದ ಪೊಲೀಸರು ಯಾವ ರೀತಿ ಕೆಲಸ ಮಾಡುತ್ತಾರೆ? ಯಾರ ಒತ್ತಡ ಮತ್ತು ಸೂಚನೆಯ ಮೇರೆಗೆ ಕೆಲಸ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ,ನ್ಯಾಯಾಲಯದ ಪ್ರಕ್ರಿಯೆ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದಿರುವ ಸ್ವಾಮೀಜಿ, ಈ ನ್ಯಾಯಾಲಯದ ಹೊರತಾಗಿಯೂ ಇನ್ನೂ ಮೂರು ರೀತಿಯ ನ್ಯಾಯ ಪ್ರಕ್ರಿಯೆ ಬಗ್ಗೆ ನಾವು ಅಪಾರವಾದ ವಿಶ್ವಾಸ ಇರಿಸಿಕೊಂಡಿದ್ದೇವೆ. ಮೊದಲನೆಯದು ಜನತಾ ನ್ಯಾಯಾಲಯ, ಎರಡನೆಯದು ನಮ್ಮ ಆತ್ಮಸಾಕ್ಷಿಯ ನ್ಯಾಯಾಲಯ ಹಾಗೂ ಮೂರನೆಯದು ಭಗವಂತನ ನ್ಯಾಯಾಲಯ. ಈ ಮೂರೂನ್ಯಾಯಾಲಯಗಳಲ್ಲೂ ನಮಗೆ ಕ್ಲೀನ್ ಚಿಟ್ ಸಿಗಲಿದೆ ಎಂಬ ನಂಬಿಕೆ ಇದೆ ಎಂದೂ ಹೇಳಿದ್ದಾರೆ.
” ಲೈಂಗಿಕ ದೌರ್ಜನ್ಯದಂಥ ಸುಳ್ಳು ಆರೋಪ ಹೊರಿಸುವ ನೀಚ ಮಟ್ಟಕ್ಕೆ ಯೋಗಿ ಆದಿತ್ಯನಾಥ್ ಸರ್ಕಾರ ಹೋಗಬಹುದು ಎಂಬ ಕಲ್ಪನೆ ಮಾತ್ರ ಇರಲಿಲ್ಲ.”
-ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸ್ವಾಮೀಜಿ
ನವದೆಹಲಿ: ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ಕೇರಳಂ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ…
ಬೆಂಗಳೂರು: ಯುವಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ, ಮೂರು ವರ್ಷ ಕಳೆಯತ್ತಾ ಬಂದರೂ ಒಂದೇ ಒಂದು…
ಮಂಡ್ಯ: ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸಿಇಓ…
ಬೆಂಗಳೂರು: ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕೆಂದು ಒತ್ತಾಯಿಸಿ ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ…
ಬೆಂಗಳೂರು: ನಟ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್-1 ಚಿತ್ರದ ದೈವದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾದ ಪ್ರಕರಣಕ್ಕೆ…
ನವದೆಹಲಿ: ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಬಾನು ಚಿಬ್ ಅವರನ್ನು ದೆಹಲಿ ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.…