Andolana originals

108 ವರ್ಷದ ಶಾಲೆಯ ಕುಂಟು ನಡಿಗೆ..

ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ

ಮೈಸೂರು: ನಗರದ ಅಗ್ರಹಾರದಲ್ಲಿರುವ ಶ್ರೀ ಕೃಷ್ಣ ರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮಕ್ಕಳ ಪ್ರವೇಶಾತಿ ಹೆಚ್ಚಳವಿಲ್ಲದೆ, ಮೂಲಭೂತ ಸೌಲಭ್ಯ ಕೊರತೆಯಿಂದಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಏದುಸಿರು ಬಿಡುತ್ತಿದ್ದು, ನೂರೆಂಟು ವರ್ಷ ಗಳ ಈ ಶಾಲೆ ಕುಂಟುತ್ತಾ ಸಾಗುತ್ತಿದೆ.

ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಈ ಶಾಲೆಯು ಮಕ್ಕಳ ಪ್ರವೇಶಾತಿ ಇಲ್ಲದೆ ತನ್ನ ಉಳಿವಿಗಾಗಿ ಹೆಣಗಾಡುತ್ತಿದೆ. ಈ ಶಾಲೆಯು ೧೯೧೮ರಲ್ಲಿ ಆರಂಭವಾಗಿದ್ದು, ೧೦೮ ವರ್ಷಗಳನ್ನು ದಾಟಿದೆ. ಪ್ರಸ್ತುತ ಇಲ್ಲಿ ೧ನೇ ತರಗತಿಯಿಂದ ೭ನೇ ತರಗತಿವರೆಗೆ ಇದ್ದು, ಕೇವಲ ೩೦ ಮಕ್ಕಳು ಕಲಿಯುತ್ತಿದ್ದಾರೆ. ಮಕ್ಕಳ ಪ್ರವೇಶಾತಿ ಹೆಚ್ಚಳಕ್ಕೆ ಶಾಲಾ ಶಿಕ್ಷಕರು ಪರದಾಡುವ ಸ್ಥಿತಿಯಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸರೆಯಲ್ಲಿ ೧೯೧೮ರಲ್ಲಿ ಕಟ್ಟಿರುವ ಕಟ್ಟಡವು ಯಥಾಸ್ಥಿತಿಯಲ್ಲಿ ಹೆಂಚುಗಳನ್ನು ಹೊದ್ದುಕೊಂಡು ನಿಂತಿದೆ. ಮಳೆ ಬಂದರೆ ಹೆಂಚುಗಳ ಕಿಂಡಿಯಿಂದ ನೀರು ಸುರಿಯುತ್ತದೆ. ಗೋಡೆಗಳಿಗೆ ಯಾವ ಕಾಲದಲ್ಲಿ ಬಣ್ಣ ಬಳಿಯಲಾಗಿದೆಯೋ ಏನೋ, ಅದೂ ಗಾರೆ ಸಮೇತ ಉದುರುತ್ತಿದೆ. ಶಾಲಾ ನಾಮಫಲಕವು ಮಾಸಿ ಕಂದು ಬಣ್ಣಕ್ಕೆ ತಿರುಗಿದೆ. ಕಂಪ್ಯೂಟರ್ ಸೌಲಭ್ಯ, ಸ್ಮಾರ್ಟ್ ಕ್ಲಾಸ್ ಕಲಿಕೆ, ಕುರ್ಚಿಗಳ ಕೊರತೆ ಸೇರಿದಂತೆ ಯಾವ ಸೌಲಭ್ಯಗಳೂ ಶಾಲೆಯಲ್ಲಿ ಇಲ್ಲದಿರುವುದು ಎದ್ದು ಕಾಣುತ್ತದೆ.

ಈ ಶಾಲೆಯ ಜಾಗವು ಭಕ್ಷಿ ಬಸವಪ್ಪ ಗಾರ್ಡನ್ ಎಂಬವರಿಗೆ ಸೇರಿದ್ದಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಾಲೆಗಾಗಿ ಈ ಜಾಗವನ್ನು ಕೇಳಿದಾಗ ಬಸವಪ್ಪ ಅವರು ಬಿಟ್ಟುಕೊಟ್ಟಿರುವ ದಾಖಲೆ ಇದೆ. ಆ ಕಾರಣಕ್ಕೆ ಶಾಲೆಗೆ ಕೃಷ್ಣರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿ.ಬಿ.ಗಾರ್ಡನ್ (ಭಕ್ಷಿ ಬಸವಪ್ಪ) ಎಂದೇ ನಾಮಕರಣ ಮಾಡಿರುವುದು ಉಲ್ಲೇಖಾರ್ಹ. ‘೨೦೦೫ರಲ್ಲಿ ೧೨೦ ಮಕ್ಕಳವರೆಗೂ ಶಾಲೆಯಲ್ಲಿ ದಾಖಲಾತಿ ಇದ್ದದ್ದೇ ಹೆಚ್ಚು. ಕ್ರಮೇಣ ಕಡಿಮೆ ಆಗುತ್ತಾ ಹೋಯಿತು. ಮಕ್ಕಳ ಸಂಖ್ಯೆ ಹೆಚ್ಚಳಕ್ಕಾಗಿ ಈ ಸಾಲಿನಿಂದ ೧ನೇ ತರಗತಿಯಿಂದ ೫ನೇ ತರಗತಿವರೆಗೆ ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್ ಮಾಧ್ಯಮವನ್ನೂ ಆಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳ ಆಗುವ ಸಾಧ್ಯತೆಯೂ ಇದೆ’ ಎಂದು ಪ್ರಭಾರ ಮುಖ್ಯೋಪಾಧ್ಯಾಯರಾದ ಎನ್.ಸುಮ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯವಾಗಿ ಮಾಜಿ ಸಚಿವ ಎಸ್.ಎ.ರಾಮದಾಸ್, ಹೊಸದಿಲ್ಲಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸನ್, ಇದೇ ಶಾಲೆಯಲ್ಲಿ ಓದಿದ್ದು, ಇದೇ ಶಾಲೆಯಲ್ಲಿ ಮುಖ್ಯೋಪಾ ಧ್ಯಾಯರಾಗಿದ್ದ ಎಂ.ಎಲ್. ರಾಮನರಸಿಂಹ ಸೇರಿದಂತೆ ಇನ್ನೂ ಹಲವಾರು ಮಂದಿ ಈ ಶಾಲೆಯಲ್ಲಿ ಓದಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಪ್ರಸ್ತುತ ಶಾಲೆಯಲ್ಲಿ ಪರಿಶಿಷ್ಟ ಪಂಗಡಗಳ ೮ ಮಕ್ಕಳು, ಒಬ್ಬ ಮುಸ್ಲಿಂ ಸಮುದಾಯದ ವಿದ್ಯಾರ್ಥಿ, ೨೧ ಹಿಂದುಳಿದ ವರ್ಗಕ್ಕೆ ಸೇರಿದ ಮಕ್ಕಳು ಕಲಿಯುತ್ತಿದ್ದಾರೆ. ಮೂವರು ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದೂ, ಒಬ್ಬರು ಅಡುಗೆ ಸಹಾಯಕಿ ಕಾರ್ಯ ನಿರ್ವಹಿಸುತ್ತಿದ್ದಾರೆ.

” ಯಾವ ಯಾವ ಶಾಲೆಗಳಲ್ಲಿ ಸಣ್ಣಪುಟ್ಟ ರಿಪೇರಿ ಕೆಲಸಗಳು, ಪೈಂಟಿಂಗ್ ಕೆಲಸಗ ಳು ಆಗಬೇಕೋ ಆ ಕೆಲಸಗಳೆಲ್ಲವೂ ರಜಾ ಅವಧಿಯ ಜೂನ್- ಜುಲೈ ತಿಂಗಳ ವೇಳೆಗೆ ಆಗಲಿದೆ. ಆ ನಿಟ್ಟಿನಲ್ಲಿ ಆಡಳಿತ ವರ್ಗ ಕಾರ್ಯೋನ್ಮುಖವಾಗಿದೆ.”

-ಕೃಷ್ಣ, ಬಿಇಒ, ದಕ್ಷಿಣ ವಲಯ, ಮೈಸೂರು

” ಇದು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಶಾಲೆಯಾಗಿದೆ. ಶತಮಾನೋ ತ್ಸವ ಉದ್ಘಾಟನಾ ಸಮಯದಲ್ಲಿ ರಾಜ ವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರು ಈ ಶಾಲೆಯ ಅಭಿವೃದ್ಧಿ ಭರವಸೆ ನೀಡಿದ್ದರು. ಅದು ಕಾರ್ಯಗತವಾದರೆ  ಹೆಚ್ಚು ಅನುಕೂಲವಾಗುತ್ತದೆ.”

-ಶ್ರೀಕಾಂತ್, ನಿವಾಸಿ, ಅಗ್ರಹಾರ ಮೈಸೂರು

” ನಾನು ೧೯೫೨ರ ಕಾಲದಿಂದ ಈ ಶಾಲೆಯನ್ನು ನೋಡುತ್ತಿದ್ದೇನೆ. ಸುಮಾರು ೭೦೦-೮೦೦ ಮಕ್ಕಳು ಓದುತ್ತಿದ್ದರು. ಇವತ್ತು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದೇ ಸವಾಲು ಅನಿಸಿದೆ. ಸರ್ಕಾರಿ ಶಾಲೆಗಳು ಉಳಿದರೆ ಸಮಾಜವೂ ಚೆನ್ನಾಗಿ ಇರಲಿದೆ. ಯಾವ ಖಾಸಗಿ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡುತ್ತಾರೆ? ಹಾಗಾಗಿ ಖಾಸಗಿ ಅಂದರೆ ಒಂದರ್ಥದಲ್ಲಿ ವ್ಯಾಪಾರ ಅಂತ ಅರ್ಥ ಅಲ್ಲವೇ?”

-ಎಂ.ಎಲ್.ಕೃಷ್ಣ, ನಿವಾಸಿ, ಅಗ್ರಹಾರ, ಮೈಸೂರು

” ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ ಮಾಡಲು ಶಿಕ್ಷಕರೊಬ್ಬರನ್ನು ರಾಜ್ಯ ಸರ್ಕಾರ ನಿಯೋಜಿಸಿದರೆ ಅನುಕೂಲ ಆಗಲಿದೆ. ಜೊತೆಗೆ ತಮ್ಮ ಮನೆತನದ ನಾಲ್ವಡಿ ಅವರು ಸ್ಥಾಪಿಸಿದ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಮನಸ್ಸು ಪ್ರಮೋದಾದೇವಿ ಅವರಿಗೆ ಖಂಡಿತಾ ಇದೆ.”

-ಎನ್.ಸುಮ, ಪ್ರಭಾರ ಮುಖ್ಯೋಪಾಧ್ಯಾಯರು, ಶ್ರೀ ಕೃಷ್ಣರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಗ್ರಹಾರ 

” ಇಂಗ್ಲಿಷ್ ಮಾಧ್ಯಮ ಆರಂಭಿಸಿರುವುದರಿಂದ ಕಂಪ್ಯೂಟರ್ ಹಾಗೂ ಸ್ಮಾರ್ಟ್ ಟಿವಿ ನೀಡಿದರೆ ಮಕ್ಕಳಿಗೆ ಅನುಕೂಲ ಆಗಲಿದೆ. ಶಾಲೆಯ ಗೋಡೆಗಳಿಗೆ ಬಣ್ಣ ಬಳಿಸಬೇಕಿದೆ. ಕುರ್ಚಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಇದೆ.”

-ಬಿ.ಎಸ್.ರೂಪ, ಶ್ರೀ ಕೃಷ್ಣರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಗ್ರಹಾರ

” ಈ ಕಾಲದ ಜನರು ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳ ನಡುವೆ ಹೋಲಿಕೆ ಮಾಡುತ್ತಾರೆ. ಈ ಹೋಲಿಕೆ ಮಾಡುವುದರಲ್ಲಿ ಅರ್ಥವಿಲ್ಲ. ಯಾಕೆಂದರೆ ಸರ್ಕಾರಿ ಶಾಲೆಗಳ ಪರವಾಗಿ ಪೋಷಕರು ನಿಂತರೆ ಸರ್ಕಾರಿ ಶಾಲೆಗಳನ್ನು ಗಟ್ಟಿಗೊಳಿಸಬಹುದು. ಪೋಷಕರು ಈ ನಿಟ್ಟಿನಲ್ಲಿ ಆಲೋಚಿಸಬೇಕು.”

-ಎಂ.ಎನ್.ರಾಣಿ, ಹಳೇ ವಿದ್ಯಾರ್ಥಿನಿ, ಹುಲ್ಲಿನ ಬೀದಿ, ಮೈಸೂರು

” ಮೈಸೂರು ಅರಸು ಮನೆತನದ ಮೇಲೆ ಈಗಲೂ ಮೈಸೂರು ಜನತೆಗೆ ಅಪಾರವಾದ ಗೌರವ ಇದೆ. ನಾಲ್ವಡಿ ಅವರು ಅಕ್ಷರ ಜ್ಞಾನಕ್ಕಾಗಿ ಸ್ಥಾಪಿಸಿದ ಶಾಲೆಯು ಈಗ ಮಕ್ಕಳ ಪ್ರವೇಶಾತಿ ಕೊರತೆ ಅನುಭವಿಸುತ್ತಿದೆ. ಸಮಾಜೋದ್ಧಾರ ನಾಲ್ವಡಿ ಅವರ ಕನಸಾಗಿತ್ತು ಎಂದು ಭಾವಿಸಿದ್ದೇನೆ. ಹಾಗಾಗಿ ಈ ಶಾಲೆಯನ್ನು ಉನ್ನತೀಕರಿಸುವಲ್ಲಿ ರಾಜ ವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ಸಹಕರಿಸಿದರೆ ಒಳ್ಳೆಯದು.”

-ಶಾರದಾ, ಹಳೇ ವಿದ್ಯಾರ್ಥಿನಿ, ಅಗ್ರಹಾರ, ಮೈಸೂರು

 

 

ಆಂದೋಲನ ಡೆಸ್ಕ್

Recent Posts

ರಾಜ್ಯದ ಹಲವೆಡೆ ಇಂದೂ ಕೂಡ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಸಂಜೆಯ ವೇಳೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯ…

19 mins ago

ಕುವೈತ್‌ ಮೇಲೆ ಇರಾನ್‌ ಭೀಕರ ದಾಳಿ: ಭಾರತೀಯ ಕಾರ್ಮಿಕ ಸಾವು

ಟೆಹರಾನ್:‌ ಕುವೈತ್‌ ವಿದ್ಯುತ್‌ ಸ್ಥಾವರದ ಮೇಲೆ ಇರಾನ್‌ ಭೀಕರ ದಾಳಿ ನಡೆಸಿದ ಪರಿಣಾಮ ಭಾರತೀಯ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ಇದು ದೇಶದ…

49 mins ago

ನಂಜನಗೂಡಿನ ಗೌತಮ ಪಂಚಮಹಾರಥೋತ್ಸವದಲ್ಲಿ ದುರಂತ: ಓರ್ವ ಭಕ್ತ ಸಾವು

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಇಂದು ನಡೆದ ಗೌತಮ ಪಂಚಮಹಾರಥೋತ್ಸವದಲ್ಲಿ ದುರಂತವೊಂದು ಸಂಭವಿಸಿದ್ದು, ಜಗಜಂಗುಳಿಯಲ್ಲಿ ಸಿಲುಕಿ ಓರ್ವ ಭಕ್ತ ಸಾವನ್ನಪ್ಪಿರುವ…

1 hour ago

ಹುಣಸೂರು: ಒಣಗಿದ್ದ ದಾಸವಾಳ ಹೂ ನುಂಗಿ ಮಗು ಸಾವು

ಹುಣಸೂರು: ಒಣಗಿದ್ದ ದಾಸವಾಳ ಹೂ ನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಮನಕಲಕುವ ಘಟನೆ ಹುಣಸೂರು ತಾಲ್ಲೂಕಿನ ದೊಡ್ಡಹೆಜ್ಜೂರಿನಲ್ಲಿ ನಡೆದಿದೆ. ದೊಡ್ಡಹೆಜ್ಜೂರಿನ…

1 hour ago

ಇವ ನಮ್ಮವ ಮಸೂದೆ; ಅಮಾಯಕ ಯುವ ಜೀವಗಳ ರಕ್ಷಣೆ

ಜಾತಿ ಆಧಾರಿತ ಅಪರಾಧಕ್ಕೆ ತಡೆ, ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ ಒದಗಿಸುವ ಮಹತ್ವಪೂರ್ಣವಾದ ‘ಇವ ನಮ್ಮವ ಇವ ನಮ್ಮವ’ ಮಸೂದೆಯನ್ನು ರಾಜ್ಯ…

2 hours ago

ಪ್ರೊ.ಡಿ.ಆನಂದ್ – ಮ್ಯಾನೇಜ್‌ಮೆಂಟ್ ಶಿಕ್ಷಣದ ಜಂಗಮ

ನಾಳೆ ಸೇವೆಯಿಂದ ನಿವೃತ್ತಿ ಹೊಂದಲಿರುವ ಮೇಷ್ಟ್ರು  ಸಿ.ಹರಕುಮಾರ್, ಬರಹಗಾರ ಮೂರ್ನಾಲ್ಕು ದಶಕಗಳ ಹಿಂದೆ ಮ್ಯಾನೇಜ್ಮೆಂಟ್ ಕೋರ್ಸ್ ಅಥವಾ ಎಂಬಿಎ ಪದವಿ…

2 hours ago