ಬಿ.ಟಿ.ಮೋಹನ್ ಕುಮಾರ್
ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ವಜಾ ನಮ್ಮ ಹೋರಾಟಕ್ಕೆ ಸಂದ ಫಲ: ಸಾಹಿತಿಗಳ ಅಭಿಮತ
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾಗಿದ್ದ ಡಾ. ಮಹೇಶ್ ಜೋಶಿ ಅವರು ತಮ್ಮ ಆಡಳಿತಾವಧಿಯಲ್ಲಿ ನಡೆಸಿರುವ ಭ್ರಷ್ಟ ಆಡಳಿತ ಮತ್ತು ಸಾಹಿತ್ಯ ಸಮ್ಮೇಳನಗಳ ಖರ್ಚು-ವೆಚ್ಚಗಳ ಬಗ್ಗೆ ತನಿಖಾಧಿಕಾರಿಗಳಿಗೆ ಸರಿಯಾದ ನಿಖರ ಮಾಹಿತಿ ನೀಡದ ಕಾರಣ ಸರ್ಕಾರ ಮಹೇಶ್ ಜೋಶಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯತ್ರಿ ಅವರನ್ನು ಆಡಳಿತಾಧಿಕಾರಿಯನ್ನಾಗಿ ನಿಯೋಜಿಸಿರುವುದು ಸ್ವಾಗತಾರ್ಹ ಎಂದು ಜಿಲ್ಲೆಯ ಹಿರಿಯ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಸಂತಸ ವ್ಯಕ್ತಪಡಿಸಿ, ಇದು ನಮ್ಮಗಳ ಹೋರಾಟಕ್ಕೆ ಫಲ ಎಂದು ಹೇಳಿದ್ದಾರೆ.
ಪರಿಷತ್ತಿನ ಹಣವನ್ನು ಕಸಾಪ ಅಧ್ಯಕ್ಷರ ಕುಟುಂಬದ ಸದಸ್ಯರ ಕಾರ್ಯಕ್ರಮಗಳಿಗೆ ನಿಯಮಬಾಹಿರವಾಗಿ ಬಳಕೆ ಮಾಡಿಕೊಂಡಿರುವುದು, ಹಾವೇರಿ ಮತ್ತು ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ನೀಡಲಾಗಿದ್ದ ಕೋಟ್ಯಂತರ ರೂ. ಹಣದ ಬಗ್ಗೆ ಲೆಕ್ಕ ಕೊಡದಿರುವುದು, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಯು ಲೆಕ್ಕ ಪರಿಶೋಧನೆ ವರದಿಯಲ್ಲಿ ಆಕ್ಷೇಪಿಸಿರುವ ಅಂಶಗಳಿಗೆ ಅನುಪಾಲನಾ ವರದಿ ಸಲ್ಲಿಸದಿರುವುದರ ಬಗ್ಗೆ ತನಿಖೆ ನಡೆಸಬೇಕೆಂದು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಲ್ಲದೆ, ಜೋಶಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ತನಿಖೆ ನಡೆಸಬೇಕೆಂದು ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಸಮಿತಿಯನ್ನು ರಚಿಸಿ ತನಿಖೆ ನಡೆಸಿತಾದರೂ ಸಮಿತಿಗೂ ಸರಿಯಾದ ಸಹಕಾರ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಮಹೇಶ್ ಜೋಶಿ ನೇತೃತ್ವದ ಸಮಿತಿಯನ್ನು ಬರ್ಖಾಸ್ತು ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಿರುವುದಕ್ಕೆ ಜಿಲ್ಲೆಯ ಕನ್ನಡಪರ ಹೋರಾಟಗಾರರು ಹಾಗೂ ಸಾಹಿತಿಗಳು ಇದು ನಮ್ಮ ಹೋರಾಟಕ್ಕೆ ಸಂದ ಫಲ ಎಂದಿದ್ದಾರೆ.
ಇದನ್ನೂ ಓದಿ:-ಭ್ರಷ್ಟ ವ್ಯಕ್ತಿಯ ದುರಾಡಳಿತಕ್ಕೆ ಸರ್ಕಾರ ಅಂತ್ಯ ಹಾಡಿದೆ
” ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಇದುವರೆಗೆ ಯಾರೂ ಮಾಡಲಾಗದ ಭ್ರಷ್ಟಾಚಾರವನ್ನು ಮೆರೆದಂತಹ ವ್ಯಕ್ತಿಯೊಬ್ಬನ ದುರಾಡಳಿತಕ್ಕೆ ಅಂತ್ಯಹಾಡಿದ ಸರ್ಕಾರವನ್ನು ಅಭಿನಂದಿಸುತ್ತೇನೆ. ಇದು ನಮ್ಮಹೋರಾಟಕ್ಕೆ ಸಂದ ಫಲವಾಗಿದೆ. ನಾವು ಮಹೇಶ್ ಜೋಶಿ ಅವರುಭ್ರಷ್ಟತೆ ಮತ್ತು ಸರ್ವಾಧಿಕಾರ ಧೋರಣೆಯ ವಿರುದ್ಧ ಹೋರಾಟವನ್ನು ಮಾಡಲಾಗಿ, ಅದು ಸಫಲವಾಗಿದೆ. ಮುಂದಿನ ಅಧ್ಯಕ್ಷರಾದವರಿಗೆ ಇದು ಮಾದರಿಯಾಗಿದೆ. ಯಾವಾಗಲೂ ಸಾಹಿತ್ಯ ಪರಿಷತ್ತಿನ ಹುದ್ದೆ ಕನ್ನಡ ಸೇವೆಯದೇ ಹೊರತು, ದರ್ಪದ ಹುದ್ದೆಯಲ್ಲ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದವರು ನಯ, ವಿನಯ ಹಾಗೂ ಸೌಜನ್ಯವನ್ನು ಹೊಂದಿರಬೇಕಾಗುತ್ತದೆ. ಅತ್ಯಂತ ಸರಳವಾಗಿ ಬದುಕುತ್ತಾ, ಸೌಹಾರ್ದಯುತವಾಗಿ ಕಚೇರಿಯನ್ನು ನಡೆಸುತ್ತಾ ಎಲ್ಲರಿಗೂ ಮುಕ್ತವಾಗಿ ಪ್ರವೇಶ ಕೊಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.
– ಡಾ.ಬಿ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮಂಡ್ಯ
” ಸಾಹಿತ್ಯ ಪರಿಷತ್‌ನಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಹಲವಾರು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸರ್ಕಾರ ಸಮಿತಿಯನ್ನು ರಚನೆ ಮಾಡಿತ್ತು. ಆ ಸಮಿತಿಗೆ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರು ಸರಿಯಾದ ಸಹಕಾರ ಕೊಡದಿದ್ದರಿಂದ ಪೂರ್ಣ ಸತ್ಯ ಹೊರತರುವ ಉದ್ದೇಶದಿಂದ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಆಡಳಿತಾಧಿಕಾರಿಯನ್ನು ನೇಮಕ ಮಾಡಿರುವುದರಿಂದ ತನಿಖಾಧಿಕಾರಿಗಳು ತನಿಖೆ ನಡೆಸಿ, ಕಸಾಪದಲ್ಲಿ ನಡೆದಿರುವ ಭ್ರಷ್ಟತೆಯನ್ನು ಹೊರಗೆಡಹಿ ಸತ್ಯವನ್ನು ಎಲ್ಲರಿಗೂ ತಿಳಿಸಬೇಕಿದೆ. ಪರಿಷತ್ತಿನ ನೂರು ವರ್ಷಗಳ ಅವಧಿಯಲ್ಲಿ ಇಷ್ಟು ಕೆಟ್ಟ ಮತ್ತು ಭ್ರಷ್ಟ ಅಧ್ಯಕ್ಷರನ್ನು ಕಂಡಿರಲಿಲ್ಲ. ಜೋಶಿ ಪರಿಷತ್ತಿನ ಘನತೆಯನ್ನು ಹಾಳು ಮಾಡಿದ್ದಾರೆ. ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಜೋಶಿ ಅವರು ನಡೆಸಿರುವ ಭ್ರಷ್ಟಾಚಾರವನ್ನು ರಾಜ್ಯದ ಜನರ ಮುಂದಿಡಬೇಕು.
– ಪ್ರೊ.ಜಿ.ಟಿ.ವೀರಪ್ಪ, ಮಾಜಿ ಅಧ್ಯಕ್ಷರು, ಜಿಲ್ಲಾ ಕಸಾಪ, ಮಂಡ್ಯ
” ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ದುರಾಡಳಿತದ ವಿರುದ್ಧ ಮಂಡ್ಯ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಹಿತ್ಯಾಭಿಮಾನಿಗಳು ದನಿ ಎತ್ತಿ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಮನಕ್ಕೆ ತಂದಿದ್ದೆವು. ಈ ನಿಟ್ಟಿನಲ್ಲಿ ಸರ್ಕಾರ ಅವರ ಆಡಳಿತದ ಕ್ರಮವನ್ನು ಪರಿಶೀಲಿಸಿದಾಗ ಲೆಕ್ಕ ಪರಿಶೋಧನೆ ಯಲ್ಲಿ ಅನೇಕ ತಪ್ಪುಗಳಾಗಿರುವುದು ಗಮನಕ್ಕೆ ಬಂತು. ಹಾಗಾಗಿ ಸರ್ಕಾರ ೧೭ ಅಂಶಗಳ ಬಗ್ಗೆ ಒಂದು ವರದಿಯನ್ನು ಕೇಳಿತ್ತು. ಜೋಶಿ ಅವರು ಅದಕ್ಕೆ ಯಾವುದೇ ಸಮರ್ಪಕ ಉತ್ತರ ನೀಡಿಲ್ಲ. ತನಿಖೆ ಮಾಡಬಾರದು ಎಂದು ನ್ಯಾಯಾಲಯಕ್ಕೆ ಮೊರೆ ಹೋದರು. ನ್ಯಾಯಾಲಯ ಕೂಡ ತನಿಖೆ ನಡೆಯುತ್ತಿರುವುದು ಸರಿಯಿದೆ. ಎಲ್ಲ ಲೆಕ್ಕವನ್ನೂ ಕೊಡಬೇಕು ಎಂದು ಹೇಳಿ ತನಿಖೆಗೆ ಆದೇಶಿಸಿತ್ತು. ಸರ್ಕಾರ ರಚಿಸಿದ್ದ ಸಮಿತಿಗೆ ಇವರು ಸರಿಯಾಗಿ ಸಹಕಾರ ನೀಡದ ಕಾರಣ ಅವರನ್ನು ವಜಾಗೊಳಿಸಿ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ.
– ಡಾ.ಮೀರಾ ಶಿವಲಿಂಗಯ್ಯ, ಮಾಜಿ ಅಧ್ಯಕ್ಷರು, ಜಿಲ್ಲಾ ಕಸಾಪ, ಮಂಡ್ಯ
” ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರನ್ನು, ಸಾಹಿತಿಗಳು, ಲೇಖಕರನ್ನು, ಕನ್ನಡ ಸಂಘ ಸಂಸ್ಥೆಗಳ ಮುಖಂಡರು, ಹಿರಿಯರು-ಕಿರಿಯರೆನ್ನದೆ ಸರ್ವಾಧಿಕಾರಿ ಧೋರಣೆಯ ಮೂಲಕ ಅವಮಾನಿಸಿ, ‘ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬ ನಾಣ್ಣುಡಿಗೆ ಪೂರಕವಾಗಿ ದರ್ಪದಿಂದ ಅಧಿಕಾರ ಮೆರೆದ, ಪ್ರಶ್ನಿಸಿದವರಿಗೆ, ತಪ್ಪುಗಳನ್ನು ಎತ್ತಿಡಿದವರಿಗೆ ಕಾನೂನಿನ ನೋಟಿಸ್ ಕಳುಹಿಸಿ ಬೆದರಿಸುವ ತಂತ್ರ ಅನುಸರಿಸಿದ ಮಹೇಶ್ ಜೋಶಿ ಅವರಿಗೆ ತಡವಾಗಿಯಾದರೂ ಸಿಕ್ಕ ಉಡುಗೊರೆಗೆ ಮಂಡ್ಯ ಜಿಲ್ಲೆಯ ಸಮಸ್ತ ಕನ್ನಡ ಮನಸ್ಸುಗಳ ಪರವಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಅದಕ್ಕಾಗಿ ಶ್ರಮಿಸಿದ ಎಲ್ಲ ಕನ್ನಡದ ಮನಸ್ಸುಗಳಿಗೆ ಅನಂತಾನಂತ ಅಭಿನಂದನೆಗಳು.”
– ಕಾರಸವಾಡಿ ಮಹದೇವ, ಹೋರಾಟಗಾರರು
ತಡೆಯಾಜ್ಞೆ ಕೋರಿ ಅರ್ಜಿ:
ಮಂಡ್ಯ: ಜೋಶಿ ವಿಚಾರಣೆಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಕೋರ್ಟ್ ತಡೆಯಾಜ್ಞೆ ನೀಡಿಲ್ಲ, ನಂತರ ಪ್ರಕರಣ ಸಂಬಂಧ ತನಿಖೆಗೆ ಸಹಕರಿಸಲು ಕಾಲಾವಕಾಶ ಕೋರಿ ಮುಂಚೆ ಕೂಡ ಕೇಳಿದ್ದರು. ತನಿಖೆಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…