ಅರವಿಂದ ಚೊಕ್ಕಾಡಿ
ಜವಾಹರಲಾಲ್ ನೆಹರೂ ವಿಷಯದಲ್ಲಿ ನನ್ನ ತಂದೆ ಸ್ವಲ್ಪ ಭಾವುಕರಾಗಿದ್ದರು. ನನ್ನ ತಂದೆ ಕುಶಾಲನಗರದಲ್ಲಿ ಶಾಲೆಗೆ ಹೋಗುತ್ತಿದ್ದಾಗ ನೆಹರೂ ಅವರು ಮೈಸೂರಿನಿಂದ ಮಂಗಳೂರಿಗೆ ಜೀಪ್ನಲ್ಲಿ ಬರುವಾಗ ಅರ್ಧ ದಾರಿಯಲ್ಲಿ ಸ್ವಾಗತಿಸಲು ಮಕ್ಕಳನ್ನು ಸಾಲಾಗಿ ನಿಲ್ಲಿಸಿದ್ದರಂತೆ. ‘ನಾನು ಇದೇ ಕೈಯಲ್ಲಿ ನೆಹರೂ ಅವರಿಗೆ ಹೂವು ಕೊಟ್ಟಿದ್ದೇನೆ. ಅವರು ನನ್ನ ಕೆನ್ನೆ ತಟ್ಟಿದ್ದಾರೆ’ ಎಂದು ನನ್ನ ತಂದೆ ಬದುಕಿರುವವರೆಗೂ ಆಗಾಗ ಹೇಳುತ್ತಿದ್ದರು. ಅಂದರೆ ಮಕ್ಕಳ ಮನದಲ್ಲಿ ನಿಲ್ಲುವ ಹಾಗೆ ಸ್ಪಂದಿಸುವ ಶಕ್ತಿ ನೆಹರೂಗೆ ಇತ್ತು. ರಾಮಧಾರಿ ಸಿಂಹ ಅವರು ಭಾರತದ ಜನರು ವ್ಯಾಪಕವಾಗಿ ಆದರಿಸಿದ್ದು ಗಾಂಧಿ, ರಾಮಕೃಷ್ಣ ಪರಮಹಂಸರಂತಹ ಧಾರ್ಮಿಕ ನೆಲೆಗಟ್ಟಿನವರನ್ನೆ. ಧಾರ್ಮಿಕ ನೆಲೆಗಟ್ಟನ್ನು ಕೈಬಿಟ್ಟ ಒಬ್ಬ ವ್ಯಕ್ತಿಯನ್ನು ಭಾರತೀಯರು ವ್ಯಾಪಕವಾಗಿ ಆದರಿಸಿದ್ದರೆ ಅದು ನೆಹರೂ ಒಬ್ಬರೇ ಎಂದು ಬರೆದಿದ್ದಾರೆ. ಇದು ನೆಹರೂ ಜನರ ಮನಸ್ಸನ್ನು ವ್ಯಾಪಿಸಿಕೊಂಡದ್ದಕ್ಕೆ ಸಾಕ್ಷಿಯಾಗುವ ಮಾತೂ ಹೌದು.
೧೯೧೨ರಲ್ಲಿ ಅವರು ಭಾರತಕ್ಕೆ ಹಿಂದಿರುಗಿದ ನಂತರ ಪಾಟ್ಣಾದಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು. ಗಾಂಧೀಜಿಯವರು ದಕ್ಷಿಣ ಆಫ್ರಿಕಾ ದಿಂದ ಭಾರತಕ್ಕೆ ಹಿಂದಿರುಗುವ ಮೊದಲೇ ನೆಹರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾವಹಿಸಿದ್ದರು. ಮಂದಗಾಮಿಗಳು ಅವರಿಗೆ ಆಗಿಬರಲಿಲ್ಲ. ತೀವ್ರಗಾಮಿಗಳ ನಾಯಕ ಬಾಲಗಂಗಾಧರ ತಿಲಕರೇ ನೆಹರೂ ಅವರ ನಾಯಕ.
ನೆಹರೂ ಅವರು ಗಾಂಧೀಜಿಯವರೊಂದಿಗೆ ಸೇರಿದ ಮೇಲೆ ಅವರಲ್ಲಿ ಎರಡು ನಡೆಯನ್ನು ಗುರುತಿಸಬಹುದು. ಒಂದು ಗಾಂಧಿಯವರನ್ನು ಅನುಸರಿಸುವವನಾಗಿ ಮಾಂಸಾಹಾರವನ್ನು ಬಿಡುವುದು, ಸಿಗರೇಟು ಸೇದುವುದನ್ನು ಬಿಡುವುದು ಇತ್ಯಾದಿ. ಆದರೆ ಹೆಚ್ಚು ಕಾಲ ಬಿಡಲು ಆಗದೆ ಪುನಃ ಶುರು ಮಾಡಿದರು. ಒಂದು ಸಿಗರೇಟನ್ನು ಎರಡು ತುಂಡು ಮಾಡಿ ಸೇದಿ ಆರೋಗ್ಯ ರಕ್ಷಣೆ ಮಾಡಿಕೊಳ್ಳುವವರೆಗೆ ತಲುಪಿದರು. ಅಂದರೆ ಗಾಂಧೀಜಿಯನ್ನು ಅನುಸರಿಸಿ ನೆಹರೂ ನಿಗ್ರಹ ಮಾಡಿಕೊಂಡ ಪ್ರಯತ್ನಗಳು ಹೀಗಿದ್ದವು. ಎರಡನೆಯದು ಗಾಂಧೀಜಿ ಯವರಿಗೆ ವಿರುದ್ಧವಾದ ನಡೆಗಳು. ಚೌರಿ ಚೌರದಲ್ಲಿ ಸತ್ಯಾಗ್ರಹಿಗಳು ಹಿಂಸೆಗೆ ಇಳಿದರೆಂದು ಗಾಂಧೀಜಿ ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡಾಗ ನೆಹರೂ ಗಾಂಧೀಜಿಯನ್ನು ಖಂಡಿಸಿದ್ದರು.
ಗಾಂಧೀಜಿಯವರ ಇಚ್ಛೆಗೆ ವಿರುದ್ಧವಾಗಿ ನೆಹರೂ ಅವರು ಕಾಂಗ್ರೆಸ್ಸಿನ ಮದ್ರಾಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯದ ನಡಾವಳಿಯನ್ನು ಮಂಡಿಸಿದ್ದರು. ತಮ್ಮ ತಂದೆ ಮೋತಿಲಾಲ್ ನೆಹರೂ ಅವರು ಪ್ರಸ್ತಾಪಿಸಿದ್ದ ‘ಡೊಮಿನಿಯನ್ ಸ್ಥಾನ ಮಾನ’ ದ ಪರಿಕಲ್ಪನೆಯನ್ನು ವಿರೋಧಿಸಿದ್ದ ಜವಾಹರ ಲಾಲ್ ಅವರು, ಪೂರ್ಣ ಸ್ವರಾಜ್ಯ ವನ್ನೇ ಅಜೆಂಡಾ ಮಾಡಿಕೊಂಡಿದ್ದರು. ಆಗ ಕಾಂಗ್ರೆಸ್ನಲ್ಲಿ ಜವಾಹರ ಲಾಲ್ ನೆಹರೂ ಮತ್ತು ಸುಭಾಷ ಚಂದ್ರಬೋಸರು ಆಪ್ತ ಮಿತ್ರರಾಗಿದ್ದು ಒಂದೇ ಸಮಾಜವಾದಿ ಧೋರಣೆಯನ್ನು ಹೊಂದಿದ್ದರು. ಹಲವು ಬಾರಿ ಬೋಸ್- ಗಾಂಧಿ ಜಗಳಗಳನ್ನು ಪರಿಹರಿಸಿದವರೂ ನೆಹರೂ ಅವರೇ! ಎರಡನೆಯದು ಸ್ವಾರಸ್ಯದ ವಿಷಯ. ಆಗಸ್ಟ್ ೧೪ ರ ಮಧ್ಯ ರಾತ್ರಿ ಸ್ವಾತಂತ್ರ್ಯ ಏಕೆ ಬಂತು ಎಂದು ಹಲವರಿಗೆ ಗೊತ್ತಿಲ್ಲ. ಆಗಸ್ಟ್ ೧೫ ರಂದು ಒಳ್ಳೆಯ ಮುಹೂರ್ತವೇ ಇಲ್ಲ; ಆ ದಿವಸ ಬೇಡವೇ ಬೇಡ ಎಂದು ಭಾರತದ ಜ್ಯೋತಿಷಿಗಳ ಒತ್ತಾಯವಾಗಿತ್ತು.
ನೆಹರೂ ಜ್ಯೋತಿಷವನ್ನಾಗಲಿ, ಲಕ್ಕಿ ಡೇಯನ್ನಾಗಲಿ ನಂಬುವವರಲ್ಲ. ಆದರೆ ಸನ್ನಿವೇಶಕ್ಕೆ ಅವರು ಎರಡೂ ತಂಡಗಳಿಗೆ ಸ್ಪಂದಿಸಿದರು. ಆಗಸ್ಟ್ ೧೪ ರಾತ್ರಿ ೧೨ ಗಂಟೆಯಾದರೆ ಮೌಂಟ್ ಬ್ಯಾಟನ್ ಅವರಿಗೆ ೧೫ನೆಯ ತಾರೀಕು ಬಂದಾಯಿತು. ಜ್ಯೋತಿಷಿಗಳಿಗೆ ೧೫ರ ಸೂರ್ಯೋದಯ ಆಗುವವರೆಗೂ ಹದಿನಾಲ್ಕೇ. ಈ ಸೂತ್ರದಲ್ಲಿ ಮುಹೂರ್ತ ಹುಡುಕಿದಾಗ ೧೪ರ ಮಧ್ಯರಾತ್ರಿ ೧೧.೫೧ ರಿಂದ ೧೨.೩೯ರ ನಡುವೆ ಒಳ್ಳೆಯ ಮುಹೂರ್ತ ಇದೆ ಎಂದಾಯಿತು. ಆಗಲೂ ಕೂಡ ಅಽಕಾರ ಹಸ್ತಾಂತರ ಆಗಿ ನೆಹರೂ ಅವರ ಭಾಷಣವನ್ನು ೩ ನಿಮಿಷ ನಿಲ್ಲಿಸಬೇಕು; ಶಂಖ ಊದುವ ಕಾರ್ಯಕ್ರಮವಿದೆ ಎಂಬ ಬೇಡಿಕೆ ಬಂತು. ಅದಕ್ಕೂ ನೆಹರೂ ಅವರು ಒಪ್ಪಿಕೊಂಡರು.
ಗಾಂಧೀಜಿಯಾಗಲಿ, ನೆಹರೂ ಆಗಲಿ ಮನುಷ್ಯರನ್ನು ಹಿಂದೂ, ಮುಸ್ಲಿಂ ಎಂದು ಪ್ರತ್ಯೇಕಿಸಲಿಲ್ಲ. ಸಮಾನ ನಾಗರಿಕ ಸಂಹಿತೆಯನ್ನು ಸಂವಿಧಾನಕ್ಕೆ ಸೇರಿಸಲು ಹೊರಟವರೇ ನೆಹರೂ ಮತ್ತು ೧೫ ಮಂದಿ ಮಹಿಳಾ ಸದಸ್ಯರು. ಅದಕ್ಕೆ ಮುಸ್ಲಿಮರ ಕಡೆಯಿಂದ ತೀವ್ರ ಪ್ರತಿಭಟನೆ ಬಂದಾಗ ಅಲ್ಪಸಂಖ್ಯಾತರಲ್ಲಿ ಅಭದ್ರ ತೆಯ ಭಾವನೆ ಹುಟ್ಟುವುದು ಬೇಡ ಎನ್ನುವ ಕಾರಣಕ್ಕಾಗಿ ಸಮಾನ ನಾಗರಿಕ ಸಂಹಿತೆಯನ್ನು ತಾತ್ಕಾಲಿಕವಾಗಿ ಮುಂದೂಡಿ ಅದನ್ನು ರಾಜ್ಯ ನಿರ್ದೇಶಕ ತತ್ವಗಳಿಗೆ ಅಳವಡಿಸಲಾಯಿತು. ಆದರೆ ಮುಸ್ಲಿಂ ಲೀಗಿನ ರಾಜಕೀಯವನ್ನು ಎದುರಿಸುವುದರಲ್ಲಿ ನೆಹರೂ ಯಾವ ಮೃದು ಧೋರಣೆಯನ್ನೂ ಅನುಸರಿಸಲಿಲ್ಲ.
ನೆಹರೂ ಅವರ ಸೆಕ್ಯುಲರಿಸಂ ಪರಿಕಲ್ಪನೆಯ ಬಗ್ಗೆ ಹಲವು ತಪ್ಪು ತಿಳುವಳಿಕೆಗಳಿವೆ. ನೆಹರೂ ಅವರು,‘ಸೆಕ್ಯುಲರಿಸಂ ಎಂದರೆ ಸರ್ವ ಧರ್ಮ ಸಮ ಭಾವ’ ಎಂದು ವಿವರಿಸಿದ್ದಾರೆ. ನೆಹರೂ ಅವರು ಜ್ಯೋತಿಷ, ಪೂಜೆ, ಸಂಪ್ರದಾಯಶರಣತೆ, ಮೂಢ ನಂಬಿಕೆಗಳನ್ನೆಲ್ಲ ಒಪ್ಪಲಿಲ್ಲ. ಆದರೆ ಭಗವದ್ಗೀತೆಯ ಎರಡನೆಯ ಅಧ್ಯಾಯ ನೆಹರೂ ಅವರಿಗೆ ಬಾಯಿ ಪಾಠ ಬರುತ್ತಿತ್ತು. ಮಹಾಭಾರತವು ಯಾರಿಗೆ ಯಾವ ರತ್ನವನ್ನು ಬೇಕಾದರೂ ದೊರಕಿಸುವಂಥ ರತ್ನಾಕರ’ ಎಂದೂ ನೆಹರು ಹೇಳುತ್ತಾರೆ. ಸ್ವತಂತ್ರ ಭಾರತದ ಮೊದಲ ಸಂಸ್ಕ ತ ವಿಶ್ವವಿದ್ಯಾನಿಲಯವನ್ನೂ ನೆಹರೂ ಅವರೇ ಸ್ಥಾಪಿಸಿದ್ದರು. ದೆಹಲಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟಿಕೋತ್ಸವ ಭಾಷಣದಲ್ಲಿ ನೆಹರೂ, ‘ವಿಜ್ಞಾನಕ್ಕೂ ಮಿತಿ ಇದೆ. ಆದ್ದರಿಂದ ಧರ್ಮಗಳ ಬಗ್ಗೆ ವಿನಮ್ರತೆ ಇರಬೇಕು’ ಎಂದು ಹೇಳಿದ್ದರು.
ಪ್ರತಿಯೊಬ್ಬ ಹಿಂದೂವೂ ಮುಸ್ಲಿಮರ ಪರ ಇರಬೇಕು, ಪ್ರತಿಯೊಬ್ಬ ಮುಸ್ಲಿಮನೂ ಹಿಂದೂಗಳ ಪರ ಇರಬೇಕು ಎಂದು ಗಾಂಧೀಜಿ ಹೇಳಿದ್ದನ್ನೇ ನೆಹರೂ ಮಾಡಲು ಹೊರಟಿದ್ದರು. ೧೯೪೭ರ ಸ್ವಾತಂತ್ರ್ಯದ ದಿನ ಯಾರೂ ಸಂತೋಷದಲ್ಲಿರಲಿಲ್ಲ. ನೆಹರೂ ಅವರು ಅಧಿಕಾರ ಹಸ್ತಾಂತರಕ್ಕಾಗಿ ಸಂಸತ್ ಭವನಕ್ಕೆ ಹೋಗಲು ಊಟ ಮಾಡಿ ಭಾಷಣದ ಟಿಪ್ಪಣಿ ಮಾಡಿಕೊಳ್ಳ ಬೇಕೆಂದು ಮನೆಯವರೊಂದಿಗೆ ಊಟಕ್ಕೆ ಕುಳಿತಿದ್ದಾಗ ಅವರಿಗೆ ಲಾಹೋರ್ನಿಂದ ಒಂದು ಫೋನ್ ಬರುತ್ತದೆ. ವಿಚಾರ ಲಾಹೋರ್ನಲ್ಲಿ ನಡೆದ ಜನಾಂಗೀಯ ಹತ್ಯೆಗೆ ಸಂಬಂಧಿಸಿರುತ್ತದೆ. ಅದನ್ನು ಕೇಳಿ ಅರ್ಧದಲ್ಲೆ ಊಟವನ್ನು ಬಿಟ್ಟು ಎದ್ದ ನೆಹರೂ ಯಾವ ಸಿದ್ಧತೆಯನ್ನೂ ಮಾಡದೆ ಸಂಸತ್ ಭವನಕ್ಕೆ ಹೋಗುತ್ತಾರೆ. ಅವತ್ತು ಅವರು ಮಾಡಿದ ‘ಟ್ರಿಸ್ಟ್ ವಿದ್ ಡೆಸ್ಟಿನಿ’ ಎಂಬ ಭಾಷಣ ವನ್ನು ‘ಗಾರ್ಡಿಯನ್’ ಪತ್ರಿಕೆ ೨೦ನೆಯ ಶತಮಾನದ ಹತ್ತು ಶ್ರೇಷ್ಠ ಭಾಷಣಗಳಲ್ಲಿ ಒಂದು ಎಂದು ಗುರುತಿಸಿದೆ.
ಸಂಪದ್ಭರಿತವಾಗಿದ್ದ ಭಾರತವನ್ನು ಸಂಪೂರ್ಣ ಲೂಟಿ ಹೊಡೆದು ಇನ್ನಿಲ್ಲಿ ಏನೂ ಇಲ್ಲ ಎನ್ನುವ ಸ್ಥಿತಿಯಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಿದ್ದರು. ನೆಹರೂ ಶೂನ್ಯದಿಂದಲೇ ಶುರು ಮಾಡಬೇಕಾಗಿತ್ತು. ಇಡೀ ದೇಶದ ಬಜೆಟ್ಟೇ ೧೫೪ ಕೋಟಿ ರೂಪಾಯಿ ಇದ್ದ ಕಾಲದಲ್ಲಿ ತಮ್ಮ ಖಾಸಗಿ ಆಸ್ತಿಯಲ್ಲಿ ಬಹುಭಾಗವನ್ನು ನೆಹರೂ ಅವರು ರಾಷ್ಟ್ರಕ್ಕಾಗಿ ಕೊಟ್ಟಿದ್ದರು. ಸ್ವಾತಂತ್ರ್ಯ ಬರುವ ಕಾಲಕ್ಕೆ ಭಾರತದ ಜನಸಂಖ್ಯೆ ೪೪ ಕೋಟಿ ಇತ್ತು. ಆಗ ಶೇ.೧೨ ರಷ್ಟು ಭಾರತೀಯರು ಸಾಕ್ಷರರಾಗಿದ್ದರು. ೨೦೧೧ಕ್ಕೆ ಶೇ.೭೨ ಆಗಿದೆ. ನೆಹರೂ ಅವರ ಸರಕಾರ ಶಿಕ್ಷಣವನ್ನು ಆದ್ಯತೆಯ ವಿಷಯವಾಗಿ ತೆಗೆದುಕೊಂಡಿತ್ತು. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳಂತಹ ಶಿಕ್ಷಣ ಸಂಸ್ಥೆಗಳನ್ನು ನೆಹರೂ ಸರಕಾರವೇ ಸ್ಥಾಪಿಸಿತ್ತು.
ನೆಹರೂ ಅವರು ಸಮಾಜವಾದಿ ಆರ್ಥಿಕ ನೀತಿಯನ್ನು ಜಾರಿಗೆ ತಂದರು ಎಂದು ಹಲವರು ಭಾವಿಸಿದ್ದಾರೆ. ಅದು ತಪ್ಪು. ನೆಹರೂಸಮಾಜವಾದಿ ಹೌದು. ಆದರೆ ಅವರು ಜಾರಿಗೆ ತಂದದ್ದು ಕೆನೇಶಿಯನ್ ಆರ್ಥಿಕತೆಯ ಮಾದರಿಯ ಆರ್ಥಿಕತೆಯನ್ನು. ಮಿಶ್ರ ಅರ್ಥ ವ್ಯವಸ್ಥೆಯು ಸರಕಾರದ ಒಡೆತನದ ಮೂಲಕ ರಾಷ್ಟ್ರ ಮತ್ತು ದುರ್ಬಲ ವರ್ಗಗಳೆರಡರ ಹಿತ ಕಾಯುವ ಕೆಲಸವನ್ನು ಮಾಡಿದರೆ, ಖಾಸಗಿ ಬಂಡವಾಳದ ಆರ್ಥಿಕತೆ ತ್ವರಿತ ಅಭಿವೃದ್ಧಿಗೆ ಪೂರಕವಾಗಿತ್ತು. ಇವೆರಡನ್ನೂ ಒಟ್ಟಾಗಿ ಕೊಂಡೊಯ್ಯುವ ಜವಾಬ್ದಾರಿ ಸರಕಾರದ್ದಾಗಿದ್ದ ಆರ್ಥಿಕತೆ ಅದು.
ದೇಶದ ಭದ್ರತೆಯ ಆತಂಕದಲ್ಲೆ ಅಧಿಕಾರ ಹಿಡಿದವರು ನೆಹರೂ. ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ೧೯೪೯ರಲ್ಲಿ ‘ನ್ಯಾಷನಲ್ ಡಿಫೆನ್ಸ್ ಅಕಾಡೆಮಿ’ಯನ್ನು ಸ್ಥಾಪಿಸಿದರು. ಭಾರತಕ್ಕೆ ಅಣುಶಕ್ತಿಯ ಅವಶ್ಯಕತೆಯನ್ನು ಅರ್ಥ ಮಾಡಿಕೊಂಡು ೧೯೪೮ ರಲ್ಲಿ ಬಾಬಾ ಪರಮಾಣು ಆಯೋಗವನ್ನು ರಚಿಸಿದರು. ಹೋಮಿ ಬಾಬಾ ಅವರೊಂದಿಗೆ ನೆಹರೂ ಅವರಿಗಿದ್ದ ವೈಯಕ್ತಿಕ ಸ್ನೇಹವನ್ನು ಬಳಸಿ ಹೋಮಿ ಬಾಬಾ ಅವರನ್ನು ಕರೆತಂದಿದ್ದರು. ೧೯೬೨ರಲ್ಲಿ ಸ್ಥಾಪಿಸಿದ್ದ ‘ಇಂಡಿಯನ್ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್’ ನಂತರ ‘ಇಸ್ರೋ’ ಆಯಿತು. ಭಾರತದ ಮೊದಲ ಕೃತಕ ಉಪಗ್ರಹವನ್ನು ಸೋವಿಯತ್ ರಷ್ಯಾಕ್ಕೆ ಕೊಂಡೊಯ್ದು ಉಡಾವಣೆ ಮಾಡಬೇಕಿತ್ತು. ಇವತ್ತು ಇಸ್ರೋವೇ ರಷ್ಯಾ, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ಗಳ ಕೃತಕ ಉಪಗ್ರಹಗಳನ್ನು ಉಡಾವಣೆ ಮಾಡಿಕೊಡುತ್ತಿದೆ ಎನ್ನುವುದು ನೆಹರೂ ಅವರ ದೂರದೃಷ್ಟಿಯ ಫಲವಾಗಿದೆ. ಕೈಗಾರಿಕೀಕರಣ ನೆಹರೂ ಆಸಕ್ತಿಯ ವಿಷಯವಾಗಿತ್ತು. ಭಿಲಾಯ್, ಬೊಕಾರೊ, ದುರ್ಗಾಪುರ, ರೂರ್ಕೆಲ ಗಳಲ್ಲಿ ಅವರು ಸ್ಥಾಪಿಸಿದ್ದ ಬೃಹತ್ ಕೈಗಾರಿಕೆಗಳು ವಿಸ್ತರಿಸುತ್ತಾ ಭಾರತವು ಜಗತ್ತಿನ ೭ನೇ ಅತಿ ದೊಡ್ಡ ಕೈಗಾರಿಕಾ ದೇಶವಾಗಿದೆ.
ನೆಹರೂ ಅವರ ವೈಚಾರಿಕ ಸಮತೋಲನ ಎಷ್ಟು ಸ್ಪಷ್ಟ ಇತ್ತು ಎಂದರೆ ದುರ್ಬಲ ವರ್ಗಗಳಿಗೆ ಮೀಸಲಾತಿಯನ್ನೂ ಜಾರಿಗೆ ತಂದರು. ಆದರೆ ಪ್ರತಿಭೆಯನ್ನು ಉಳಿಸಿಕೊಳ್ಳುವುದಕ್ಕಾಗಿ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯ ಚಿಂತನೆಯನ್ನು ಕೊಟ್ಟರು. ಇಂದಿಗೂ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ನಡೆಯುತ್ತಲೇ ಇದೆ. ೧೯೬೧ರಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಮೀಸಲಾತಿಯು ಪ್ರತಿಭಾವಂತರನ್ನು ದ್ವಿತೀಯ ಅಥವಾ ತೃತೀಯ ದರ್ಜೆಯವರನ್ನಾಗಿ ಮಾಡಬಾರದು ಎಂದು ಬರೆದಿದ್ದರು. ಪ್ರತೀ ೧೫ ದಿನಗಳಿಗೊಮ್ಮೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆಯುವ ಪದ್ಧತಿಯನ್ನಿರಿಸಿಕೊಂಡಿದ್ದ ಪ್ರಧಾನಿ ನೆಹರೂ ಒಬ್ಬರೇ. ಅದೇ ಒಂದು ಸಾಹಿತ್ಯವಾಗಿದೆ. ನೆಹರೂ ಅವರ ಮೇಲೆ ನಾಲ್ಕು ಬಾರಿ ಹತ್ಯೆ ಯತ್ನಗಳು ನಡೆದವು. ಆದರೂ ಅವರು ಧೈರ್ಯಶಾಲಿಯೇ ಆಗಿದ್ದರು. ಒಮ್ಮೆ ದೆಹಲಿ ಯಲ್ಲಿ ಗಲಭೆ ನಡೆ ದಾಗ ಸ್ವತಃ ಪ್ರಧಾನಿ ನೆಹರೂ ಅವರೇ ಜೀಪ್ ಚಲಾಯಿಸಿ ಕೊಂಡು ಬಂದು ಜೀಪ್ನ ಮೇಲೆ ಹತ್ತಿ ‘ಧೈರ್ಯವಿದ್ದರೆ ಬಂದು ನನ್ನನ್ನು ಹೊಡೆ ಯಿರೊ’ ಎಂದು ಆವಾಝ್ ಹಾಕಿದಾಗ ಗಲಭೆಕೋರರು ಓಡಿ ಹೋದ ಘಟನೆ ನಡೆದಿದೆ.
ನೆಹರೂಗಾಗಿ ಒಮ್ಮೆ ಪುರುಷೋತ್ತಮ ದಾಸ್ ಟಂಡನ್ ಏರ್ಪಡಿ ಸಿದ್ದ ಕಾರ್ಯಕ್ರಮದಲ್ಲಿ ಗಲಾಟೆ ಆದಾಗ ನೆಹರೂ ಜಗಳವಾಡುತ್ತಿದ್ದವರ ನಡುವೆ ನುಗ್ಗಿ ದೈಹಿಕ ಶಕ್ತಿ ಪ್ರದರ್ಶನ ಮಾಡಿಯೇ ಬಿಟ್ಟರು. ನೆಹರೂ ರಕ್ಷಣೆಗೆ ಮುನ್ನುಗ್ಗಿದ ಅವರ ಅಂಗರಕ್ಷಕನಿಗೂ ಬಿತ್ತು. ಈ ಕುಸ್ತಿ ಮುಗಿಸಿ ಬಂದು ಪುರುಷೋತ್ತ ಮದಾಸ್ ಟಂಡನ್ ಬಳಿ ನೆಹರೂ, ‘ಹೇಗಿತ್ತು ಕುಸ್ತಿ?’ ಎಂದು ಕೇಳಿದ್ದರು. ನೆಹರೂ ಅವರಲ್ಲಿ ಯಾರ ಮಾತನ್ನೂ ಕೇಳದೆ ಇರುವ ಒಂದು ಪ್ರವೃತ್ತಿಯೂ ಇತ್ತು. ಅದಕ್ಕೇ ಸರ್ದಾರ್ ಪಟೇಲರೊಂದಿ ಗಿನ ಭಿನ್ನಾಭಿಪ್ರಾಯ ಎಂದೂ ಅವರಿಗೆ ಸರಿಯಾಗಲಿಲ್ಲ. ಗಾಂಧಿ ಹತ್ಯೆಯಾದ ದಿವಸ ಮೌಂಟ್ ಬ್ಯಾಟನ್ ನೆಹರೂ ಮತ್ತು ಪಟೇಲ ರನ್ನು ಕರೆದು,‘ನಿಮ್ಮಿಬ್ಬರನ್ನು ಒಂದು ಮಾಡಬೇಕೆಂದು ಗಾಂಧಿ ನನ್ನ ಬಳಿ ಹೇಳಿದ್ದರು. ಮಹಾತ್ಮನ ಕೊನೆಯ ಆಸೆಯನ್ನು ಸಾಧ್ಯ ವಾದರೆ ಈಡೇರಿಸಿ’ ಎಂದಿದ್ದರು. ಮರುದಿನ ಪಟೇಲರು ಮಾತ ನಾಡಿದ ಸಭೆಯಲ್ಲಿ,‘ನನ್ನ ಪ್ರಿಯ ಸಹೋದರ ನೆಹರೂ’ ಎಂದೇ ಸಂಬೋಽಸಿದ್ದರು. ನೆಹರೂ ಅವರು ಪಟೇಲರು ಕಳಿಸಿದ ಯಾವುದೇ ಕಡತವನ್ನು ಪರಿಶೀಲಿಸಲಿಕ್ಕೆ ಇಲ್ಲ. ನೇರವಾಗಿ ಸಹಿಗೆ ಇಡಿ ಎಂದು ಪ್ರಧಾನಿ ಕಾರ್ಯಾಲಯಕ್ಕೆ ಸೂಚಿಸಿದ್ದರು. ಆದರೆ ಕೊನೆಗೂ ಅವರ ಭಿನ್ನಾಭಿಪ್ರಾಯ ಸರಿ ಹೋಗಲಿಲ್ಲ. ಗಾಂಧೀಜಿ ಇರುವ ತನಕ ಜೊತೆಯಾಗಿದ್ದ ಆಚಾರ್ಯ ಕೃಪಲಾನಿ, ರಾಜಗೋಪಾಲಾ ಚಾರಿ ಎಲ್ಲರೂ ನೆಹರೂ ಅವರಿಂದ ಬೇರೆಯಾಗಿ ಒಂಟಿಯಾ ಗುತ್ತಾ ಹೋದರು.
ವೈಜ್ಞಾನಿಕ ದೃಷ್ಟಿಕೋನದಲ್ಲಿ ಗಾಂಽಜಿಗಿಂತ ಹೆಚ್ಚು ನೆಹರೂ ಅವರಿಗೆ ಹತ್ತಿರವಾಗಿದ್ದ ಅಂಬೇಡ್ಕರ್ ನೆಹರೂ ಅವರೊಂದಿಗೆ ಉಳಿಯಲಿಲ್ಲ. ಮಿಲಿಟರಿ ವಿಚಾರದಲ್ಲಿ ಕ್ಷೇತ್ರ ಪರಿಣತರಾದ ಜನರಲ್ ತಿಮ್ಮಯ್ಯ, ಜನರಲ್ ಕಾರಿಯಪ್ಪರ ಮಾತನ್ನು ನೆಹರೂ ಕೇಳಲಿಲ್ಲ. ನಷ್ಟವಾಯಿತು. ಹಾಗೆಂದು ಇದೇ ನೆಹರೂ ಅವರ ವ್ಯಕ್ತಿತ್ವ ಎಂದಲ್ಲ. ನೆಹರೂ ಅವರ ಪ್ರಬಲ ಟೀಕಾ ಕಾರರಾಗಿದ್ದ ಲೋಹಿಯಾ ಅವರ ಮಾತುಗಳನ್ನು ತಪ್ಪಿಸಿಕೊಳ್ಳು ತ್ತಲೇ ಇರಲಿಲ್ಲ. ಆಚಾರ್ಯ ಕೃಪಲಾನಿ ಸದನದಿಂದ ಸಭಾತ್ಯಾ ಗಕ್ಕೆ ಹೊರಟಾಗ, ‘ನನ್ನ ಸರಕಾರಕ್ಕೆ ಇನ್ನೂ ಬೈಯಿರಿ. ಆದರೆ ಸಭಾತ್ಯಾಗದ ಅವಮಾನವನ್ನು ಮಾತ್ರ ನನ್ನ ಸರಕಾರಕ್ಕೆ ಮಾಡ ಬೇಡಿ’ ಎಂದು ನೆಹರೂ ಕೇಳಿಕೊಂಡಿದ್ದರು. ನೆಹರೂ ಅವರು, ‘ಮಾಡರ್ನ್ ರಿವ್ಯೂ’ ಪತ್ರಿಕೆಗೆ, ‘ಚಾಣಕ್ಯ’ ಎಂಬ ಹೆಸರಿನಲ್ಲಿ ತಮ್ಮ ಬಗ್ಗೆ ತಾವೇ ವಿಮರ್ಶೆ ಬರೆದಿದ್ದರು. ಅದರಲ್ಲಿ, ‘ಜವಾಹರ ಲಾಲ್ ನೆಹರೂ ಬಗ್ಗೆ ಜಾಗ್ರತೆಯಾಗಿರಿ. ಆತ ಜೊತೆಗಿರುವವರನ್ನು ಪ್ರೀತಿಸುತ್ತಾನಾದರೂ ಬಹಳ ಅಸಹನೆಯ ಪ್ರವೃತ್ತಿಯವನು’ ಎಂದು ಬರೆದಿ ದ್ದಾರೆ. ಜನರಲ್ಲಿ ನೆಹರೂ ಅರಿವು ಹುಟ್ಟಿ ಸುವ ಒಂದು ವಿಧಾನವಿತ್ತು. ಒಮ್ಮೆ ನೆಹರೂ ಕಾರಿನಿಂದ ಇಳಿದ ಕೂಡಲೇ ಜನರು,‘ಭಾರತ್ ಮಾತಾ ಕಿ ಜೈ’ ಎಂದರಂತೆ. ನೆಹರೂ ನಗುತ್ತಾ,‘ಸರಿ, ಈ ಭಾರತ ಮಾತೆ ಎಂದರೆ ಯಾರು?’ ಎಂದು ಕೇಳಿದರು. ಆಗ ಜನರಲ್ಲಿ ಗುಜುಗುಜು ಶುರುವಾಯಿತು. ಕಡೆಗೆ ನೆಹರೂ, ‘ನೀವೆಲ್ಲರೂ ಭಾರತ ಮಾತೆಯ ಅಂಗಗಳೇ. ನಿಜವಾಗಿ ಭಾರತ ಮಾತೆ ಎಂದರೆ ನೀವೇ’ ಎಂದರಂತೆ. ಈ ಪದ್ಧತಿ ಪುರಾತನ ಗ್ರೀಸ್ನ ಸ್ಟೋಯಿಕ್ ಶಿಕ್ಷಣ ಪದ್ಧತಿಯ ಪರಿಕಲ್ಪನೆಯಾಗಿದೆ.
ನೆಹರೂ ಅವರ ಸೌಜನ್ಯ ಅಪಾರವಾದದ್ದು. ಕೇಂದ್ರ ಸಾಹಿತ್ಯ ಅಕಾಡೆಮಿ ರಚನೆಯ ವೇಳೆಗೆ ನೆಹರೂ ಸಭೆ ನಡೆಸುತ್ತಾ ಇದ್ದರಂತೆ. ಆಗ ಡಿ.ವಿ.ಗುಂಡಪ್ಪ ಹೋದರು. ಡಿ.ವಿ.ಜಿ.ಯನ್ನು ಕಂಡ ತಕ್ಷಣ ‘ಇನ್ನು ನೀವು ನಡೆಸಿ’ ಎಂದು ನೆಹರೂ ಕೆಳಗೆ ಬಂದು ಕೂತರಂತೆ. ನೆಹರೂ ಶೀಘ್ರ ಕೋಪಿಷ್ಠನೂ ಆಗಿದ್ದರು. ಆದರೆ ಅವರಲ್ಲಿ ಸೆನ್ಸ್ ಆಫ್ ಹ್ಯೂಮರ್ ಬಹಳ ಚೆನ್ನಾಗಿತ್ತು. ನೆಹರೂ ಅವರು ಮಹಾವೀರ ತ್ಯಾಗಿಯವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳ ಬೇಕೆಂದು ‘ಮಂತ್ರಿಯಾಗಿ ಬನ್ನಿ’ ಎಂದು ಕರೆದರಂತೆ. ಮಹಾವೀರ ತ್ಯಾಗಿಯವರಿಗೆ ಪಕ್ಷದ ನಾಯಕನಾಗಿರಲು ಆಸಕ್ತಿ. ಮಂತ್ರಿಯಾಗಲು ಆಸಕ್ತಿ ಇರಲಿಲ್ಲ. ಆಗ ಮಹಾವೀರ ತ್ಯಾಗಿ, ‘ನಾನೂ ನೀವೂ ಜೈಲಿನಲ್ಲಿದ್ದಾಗ, ನೀವು ನನಗೆ ಫ್ರೆಂಚ್ ಕಲಿಸುತ್ತಿದ್ದಿರಿ. ಆಗ ಕತ್ತೆ, ಕುದುರೆ, ಕೋಣ ಎಂದೆಲ್ಲ ನನಗೆ ಬೈತಾ ಇದ್ದಿರಿ. ಈಗ ನನ್ನ ಮೇಲೆ ನಿಮಗೆ ವಿಶ್ವಾಸವಿಲ್ಲ. ನನ್ನನ್ನು ‘ನೀನು’ ಎನ್ನುವುದಿಲ್ಲ. ಕತ್ತೆ ಕುದುರೆ ಎಂದು ಬೈಯುವುದಿಲ್ಲ. ನನ್ನ ಬಗ್ಗೆ ನಿಮಗೆ ಸ್ನೇಹ ಕಡಿ ಮೆಯಾಗಿರುವುದರಿಂದ ನಾನು ಮಂತ್ರಿ ಆಗುವುದಿಲ್ಲ’ ಎಂದು ನೆಹರೂಗೆ ಹೇಳಿದರಂತೆ. ಅದಕ್ಕೆ ನೆಹರೂ, ‘ಇಂಗ್ಲಿಷ್ನಲ್ಲಿ, ಯಾವುದು ಸತ್ಯವೇ ಆಗಿರುತ್ತದೊ ಅಂತಾದ್ದರ ಬಗ್ಗೆ ಹಾಸ್ಯ ಮಾಡಬಾರದು ಎಂದು ಒಂದು ಗಾದೆ ಇದೆ. ಆದ್ದರಿಂದ ನಾನೀಗ ನಿಮ್ಮನ್ನು ಕತ್ತೆ, ಕುದುರೆ, ಕೋಣ ಎಂದೆಲ್ಲ ಕರೆಯಲಾಗುವುದಿಲ್ಲ’ ಎಂದರಂತೆ. ಹಾಸ್ಯ, ಕೋಪ, ಕಾಳಜಿ, ಆದರ್ಶ, ಹಠ, ಮುತ್ಸದ್ದಿತನ, ಉದಾರವಾದ ಹೀಗೆ ಹಲವು ಗುಣಗಳೂ, ಕೆಲ ವೈರುಧ್ಯದ ಗುಣಗಳೂ ಒಬ್ಬನಲ್ಲೆ ಇದ್ದ ಕನಸುಗಾರ ನೆಹರೂ ಬಿತ್ತಿದ ಕನಸುಗಳಿಗಾಗಿ ಅವರು ಮರೆಯಲಾಗದ ಮಹನೀಯರೇ ಆಗಿದ್ದಾರೆ.
ಜವಾಹರಲಾಲ್ ನೆಹರೂ ಪಡೆದ ಶಿಕ್ಷಣ: ನೆಹರೂ ತಮ್ಮ ಆರಂಭಿಕ ಶಿಕ್ಷಣವನ್ನು ಅಲಹಾ ಬಾದ್ನಲ್ಲಿರುವ ತಮ್ಮ ಮನೆಯಲ್ಲೇ ಖಾಸಗಿ ಶಿಕ್ಷಕರಿಂದ ಪಡೆದರು. ೧೯೦೫ರಲ್ಲಿ ತಮ್ಮ ೧೫ನೇ ವಯಸ್ಸಿನಲ್ಲಿ ಇಂಗ್ಲೆಂಡ್ಗೆ ತೆರಳಿ, ಅಲ್ಲಿನ ಪ್ರಸಿದ್ಧ ಹ್ಯಾರೋ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು.ಕೇಂಬ್ರಿಡ್ಜ್ ವಿಶ್ವ ವಿದ್ಯಾಲ ಯದಿಂದ ನೈಸರ್ಗಿಕ ವಿಜ್ಞಾನದಲ್ಲಿ (Natural Sciences) ಪದವಿ ಪಡೆದ ನಂತರ ಲಂಡನ್ನ ಇನ್ಸ್ ಆಫ್ ಕೋರ್ಟ್ (Inns of Court) ಸಂಸ್ಥೆಯಲ್ಲಿ ಕಾನೂನು ಅಧ್ಯಯನ ಮಾಡಿ ‘ಬ್ಯಾರಿಸ್ಟರ್’ ಪದವಿ ಪಡೆದರು
ಭಾರತದ ಸ್ವಾತಂತ್ರ್ಯಕ್ಕೆ ನೆಹರೂ ಕೊಡುಗೆ:
* ೧೯೧೬: ಹೋಮ್ ರೂಲ್ ಚಳವಳಿಗೆ ಸೇರಿದರು ಮತ್ತು ಅಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡ ಕಾರಣ ಬಂಧಿಸಲ್ಪಟ್ಟರು.
* ೧೯೨೦: ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದರು ಮತ್ತು ಯುನೈಟೆಡ್ ಪ್ರಾಂತ್ಯದಲ್ಲಿ ಚಳವಳಿಯನ್ನು ಮುನ್ನಡೆಸಿದರು.
* ೧೯೨೧: ಬ್ರಿಟಿಷ್ ವಿರೋಧಿ ಚಟುವಟಿಕೆಗಳಿಗಾಗಿ ಅವರನ್ನು ಬಂಧಿಸಲಾಯಿತು.
* ಭಾರತದ ಸ್ವಾತಂತ್ರ್ಯ ಹೋರಾಟದ ಅಂತಾರಾಷ್ಟ್ರೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದರು.
* ೧೯೨೯: ಡಿಸೆಂಬರ್ ೨೯ರಂದು ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು ಸ್ವರಾಜ್ಗೆ ಕರೆ ನೀಡುವ ಯಶಸ್ವಿ ನಿರ್ಣಯವನ್ನು ಮಂಡಿಸಿದರು.
* ೧೯೩೯: ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.
* ೧೯೪೦: ೨ನೇ ಮಹಾಯುದ್ಧದ ಕಷ್ಟದ ಸಮಯದಲ್ಲಿ ಸ್ವಾತಂತ್ರ್ಯ ಚಳವಳಿಗೆ ಮಾರ್ಗದರ್ಶನ ನೀಡಿದರು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ೯ ಬಾರಿ ಜೈಲು ಸೇರಿದ್ದ ನೆಹರೂ!:
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜವಾಹರಲಾಲ್ ನೆಹರೂ ಅವರು ೯ ಬಾರಿ ಜೈಲು ಶಿಕ್ಷೆ ಅನುಭವಿಸಿದ್ದರು. ಒಟ್ಟಾರೆ ೯ ವರ್ಷಗಳನ್ನು ಜೈಲಿನಲ್ಲಿಯೇ ಕಳೆದಿದ್ದರು.
ನೆಹರೂ ಬರೆದ ಪ್ರಮುಖ ಪುಸ್ತಕಗಳು:
* ದಿ ಡಿಸ್ಕವರಿ ಆಫ್ ಇಂಡಿಯಾ-The Discovery of India (ಭಾರತದ ಶೋಧ)
* ಗ್ಲಿಂಪ್ಸೆಸ್ ಆಫ್ ವರ್ಲ್ಡ್ ಹಿಸ್ಟರಿ-Glimpses of World History (ವಿಶ್ವ ಇತಿಹಾಸ ನೋಟಗಳು)
* ಆತ್ಮಚರಿತ್ರೆ/ಸ್ವಾತಂತ್ರ್ಯದ ಕಡೆಗೆ- An Autobiography/ Toward Freedom
* ಲೆಟರ್ಸ್ ಫ್ರಂ ಎ ಫಾದರ್ ಟು ಹಿಸ್ ಡಾಟರ್-Letters from a Father to his Daughter (ಮಗಳಿಗೆ ತಂದೆ ಬರೆದ ಪತ್ರಗಳು)
* ಎ ಬಂಚ್ ಆಫ್ ಓಲ್ಡ್ ಲೆಟರ್ಸ್-A Bunch of Old Letters (ಹಳೆಯ ಪತ್ರಗಳ ಗುಚ್ಛ)
* ಇಂಡಿಪೆಂಡೆನ್ಸ್ ಆಂಡ್ ಆಫ್ಟರ್ -Independence and After (ಸ್ವಾತಂತ್ರ್ಯದ ನಂತರ-ಭಾಷಣಗಳ ಸಂಗ್ರಹ)
* ಸೋವಿಯತ್ ರಷ್ಯಾ/ ಅನಿಸಿಕೆಗಳು-Soviet Russia
* ಲೆಟರ್ ಟು ಚೀಫ್ ಮಿನಿಸ್ಟರ್-Letters to Chief Ministers (೧೯೪೭-೧೯೬೪) (ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳು
ಸುಧಾ ಆಡುಕಳ ನಾಗರಿಕತೆ ಎಂದರೇನು? ನಾನೀಗ ನಿನಗೆ ಪ್ರಾಚೀನ ನಾಗರಿಕತೆಯ ಬಗ್ಗೆ ಹೇಳುತ್ತೇನೆ. ಅದಕ್ಕಿಂತ ಮೊದಲು ನಾವು ನಾಗರಿಕತೆ ಯೆಂದರೇನು…
ನವೀನ್ ಡಿಸೋಜ ರಾಜಾಸೀಟ್ ರಸ್ತೆಯ ೧೨ ಮರಗಳ ತೆರವಿಗೆ ಮುಂದಾದ ನಗರಸಭೆ; ಪರಿಸರ ಪ್ರೇಮಿಗಳ ತೀವ್ರ ವಿರೋಧ ಮಡಿಕೇರಿ: ಮಂಜಿನ…
ಎಸ್.ಎಸ್.ಭಟ್ ನಂಜನಗೂಡು: ರಾಜ್ಯದ ಧಾರ್ಮಿಕ ಹಾಗೂ ಕೈಗಾರಿಕಾ ಕ್ಷೇತ್ರವಾದ ನಂಜನಗೂಡು ಈಗ ಮಾದಕ ದ್ರವ್ಯ ಎಂಡಿಎಂಎ ವ್ಯವಹಾರದ ಕೇಂದ್ರವಾಗಲಾರಂಭಿಸಿದೆಯೇ? ಎಂಬ…
ಮೈಸೂರು: ಮೈಸೂರಿನ ವಿಜ್ಞಾನ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಗರಿ ಸೇರ್ಪಡೆಯಾಗಿದೆ. ಚಾಮುಂಡಿಬೆಟ್ಟದ ತಪ್ಪಲಿನ ತಾವರೆಕಟ್ಟೆ ಸಮೀಪ ನಿರ್ಮಿಸಿರುವ ಅತ್ಯಾಧುನಿಕ ಟಿಲ್ಟೆಡ್…
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಇದೀಗ ಸಿನಿಮಾ ರೂಪದಲ್ಲಿ ಬರಲಿದೆ ಎಂದು ವರದಿಯಾಗಿದೆ. ನವೆಂಬರ್…