ನವೀನ್ ಡಿಸೋಜ
ರಾಜಾಸೀಟ್ ರಸ್ತೆಯ ೧೨ ಮರಗಳ ತೆರವಿಗೆ ಮುಂದಾದ ನಗರಸಭೆ; ಪರಿಸರ ಪ್ರೇಮಿಗಳ ತೀವ್ರ ವಿರೋಧ
ಮಡಿಕೇರಿ: ಮಂಜಿನ ನಗರಿ ಮಡಿಕೇರಿ ತನ್ನ ಅಚ್ಚಹಸಿರಿನ ಪ್ರಕೃತಿ ಸೌಂದರ್ಯ, ತಂಪಾದ ವಾತಾವರಣ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತಿರುವ ಬೃಹತ್ ಮರಗಳಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ, ಇದೇ ಪ್ರಕೃತಿಯ ಸೊಬಗಿಗೆ ಅಭಿವೃದ್ಧಿಯ ಹೆಸರಿನಲ್ಲಿ ಧಕ್ಕೆಯಾಗುವ ಆತಂಕ ಎದುರಾಗಿದೆ.
ನಗರದ ಪ್ರಮುಖ ಪ್ರವಾಸಿ ತಾಣವಾದ ರಾಜಾಸೀಟ್ ರಸ್ತೆಯ ಬದಿಯಲ್ಲಿರುವ ಸುಮಾರು ೧೨ ಮರಗಳನ್ನು ತೆರವುಗೊಳಿಸಲು ನಗರಸಭೆ ಮುಂದಾಗಿದೆ ಎನ್ನಲಾಗಿದ್ದು, ಈ ಬೆಳವಣಿಗೆ ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದೆ.
ಈ ರಸ್ತೆಯ ಬದಿಗಳಲ್ಲಿರುವ ಬೃಹತ್ ಮರಗಳು ನಗರದ ಪರಿಸರ ಸಮತೋಲನ ಕಾಪಾಡುವ, ಬಿಸಿಲಿನ ತಾಪದಿಂದ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ನೆರಳು ಒದಗಿಸುವ ಜೀವಂತ ಪರಿಸರ ಸಂಪತ್ತಾಗಿವೆ. ಮಡಿಕೇರಿಯ ನೈಸರ್ಗಿಕ ಸೌಂದರ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಈ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ ತೆರವುಗೊಳಿಸುವ ಪ್ರಸ್ತಾಪವೇ ಪರಿಸರ ಕಾಳಜಿಯುಳ್ಳವರನ್ನು ಚಿಂತಿಸುವಂತೆ ಮಾಡಿದೆ.
ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು, ಸಂಚಾರ ವ್ಯವಸ್ಥೆಯನ್ನು ಸುಧಾರಿಸುವುದು ಹಾಗೂ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಸ್ಥಳೀಯ ಆಡಳಿತದ ಜವಾಬ್ದಾರಿ. ಆದರೆ, ಈ ಅಭಿವೃದ್ಧಿ ಪ್ರಕೃತಿಯ ಅಸ್ತಿತ್ವವನ್ನೇ ಅಳಿಸಿಹಾಕುವಂತಿರಬಾರದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕೊಡಗು ಜಿಲ್ಲೆಗೆ ಪ್ರವಾಸಿಗರು ಆಗಮಿಸುವ ಪ್ರಮುಖ ಕಾರಣಗಳಲ್ಲಿ ಇಲ್ಲಿನ ಹಸಿರು ಪರಿಸರ, ತಂಪಾದ ವಾತಾವರಣ ಹಾಗೂ ಪ್ರಕೃತಿಯ ಸೊಬಗು ಪ್ರಮುಖವಾಗಿವೆ. ರಾಜಾಸೀಟ್‌ಗೆ ಭೇಟಿ ನೀಡುವ ಪ್ರವಾಸಿಗರನ್ನು ಅಲ್ಲಿನ ಸುಂದರ ಕಣಿವೆಗಳಷ್ಟೇ ಅಲ್ಲದೆ, ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳೂ ಆಕರ್ಷಿಸುತ್ತಿವೆ.
ಮರಗಳನ್ನು ತೆರವುಗೊಳಿಸಿದರೆ ತಕ್ಷಣಕ್ಕೆ ರಸ್ತೆ ಅಭಿವೃದ್ಧಿಯಾಗಬಹುದು. ಆದರೆ, ಮರ ಕಡಿದ ಜಾಗದಲ್ಲಿ ಗಿಡ ನೆಟ್ಟು ಬೆಳೆಸುವುದು ಸುಲಭದ ಕೆಲಸವಲ್ಲ. ಒಂದು ಮರವನ್ನು ಕಡಿಯುವುದು ಕೆಲವೇ ನಿಮಿಷಗಳ ಕೆಲಸವಾದರೂ, ಅದಕ್ಕೆ ಪರ್ಯಾಯವಾಗಿ ಮತ್ತೊಂದು ಮರ ಬೆಳೆದು ನೆರಳು ನೀಡುವ ಹಂತ ತಲುಪಲು ಹಲವು ವರ್ಷಗಳೇ ಬೇಕಾಗುತ್ತವೆ. ಹೀಗಾಗಿ ಮರಗಳ ತೆರವು ನಿರ್ಧಾರವು ಕೇವಲ ರಸ್ತೆ ಕಾಮಗಾರಿಯ ವಿಚಾರವಾಗಿ ಉಳಿಯದೆ, ನಗರದ ಪರಿಸರ ಸವ ತೋಲನದ ಪ್ರಶ್ನೆಯಾಗಿಯೂ ಪರಿಣಮಿಸಿದೆ.
ಮರಗಳ ತೆರವು ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ನಿರ್ಧಾರವನ್ನು ಮರುಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪರಿಸರ ಪ್ರೇಮಿಗಳು ಹಾಗೂ ಸಾರ್ವಜ ನಿಕರು ಮನವಿ ಸಲ್ಲಿಸುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮರಗಳ ಪ್ರಸ್ತುತ ಸ್ಥಿತಿ, ಅವುಗಳ ಮಹತ್ವ ಹಾಗೂ ಕಾಮಗಾರಿಗೆ ಅವುಗಳಿಂದಾಗಬಹುದಾದ ಅಡಚಣೆಗಳ ಕುರಿತು ಸಮಗ್ರವಾಗಿ ಅಧ್ಯಯನ ನಡೆಸಬೇಕು. ಸಾಧ್ಯವಾದಷ್ಟು ಮರಗಳನ್ನು ಉಳಿಸಿಕೊಂಡೇ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಅನವಶ್ಯಕವಾಗಿ ಮರಗಳ ಹನನ ನಿಲ್ಲಿಸಿ..!: ಮರಗಳು ರಸ್ತೆಯ ಬದಿಯಲ್ಲಿದ್ದು, ರಸ್ತೆ ಅಭಿವೃದ್ಧಿಗೆ ಯಾವುದೇ ರೀತಿಯ ಅಡಚಣೆಯಾಗದಿದ್ದರೂ ಮರಗಳಿರುವ ಸ್ಥಳದಲ್ಲಿ ಇಂಟರ್ ಲಾಕ್ ಅಳವಡಿಸಿ ‘ಬ್ಯೂಟಿಫಿಕೇಷನ್’ ನೆಪದಲ್ಲಿ ಅವುಗಳನ್ನು ಕಡಿದು ಸೌದೆಯನ್ನು ಹರಾಜು ಮಾಡಲು ಉದ್ದೇಶಿಸಲಾಗಿದೆ. ರಸ್ತೆ ಅಭಿವೃದ್ಧಿಗೆ ಯಾವುದೇ ಆಕ್ಷೇಪವಿಲ್ಲ, ಆದರೆ ರಾಜಾಸೀಟ್ಪ್ರ ಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿ ಅನವಶ್ಯಕವಾಗಿ ಮರಗಳ ಹನನ ನಿಲ್ಲಿಸಬೇಕು. ವೈಜ್ಞಾನಿಕವಾಗಿ ಕಾಮಗಾರಿ ನಡೆಸಿದಲ್ಲಿ ಮರಗಳನ್ನು ಕಡಿಯುವ ಅವಶ್ಯಕತೆಯೇ ಇಲ್ಲ. ಸ್ಥಳೀಯ ಪಕ್ಷಿ ಪ್ರಭೇದಗಳಿಗೂ ಇಲ್ಲಿರುವ ಅತ್ತಿ ಮರಗಳು ಆಶ್ರಯ ನೀಡಿದ್ದು, ಮರಗಳನ್ನು ಹನನ ಮಾಡಬಾರದು ಎಂದು ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.
” ಸುಮಾರು ೩೦-೩೫ ವರ್ಷಗಳಿಂದ ಈ ಮರಗಳು ಇಲ್ಲಿವೆ. ಶಾಲೆಗೆ ಹೋಗುವ ದಿನಗಳಿಂದಲೂ ಈ ಮರಗಳನ್ನು ನೋಡುತ್ತಿದ್ದೇವೆ. ಇಲ್ಲಿ ರಸ್ತೆ ಅಭಿವೃದ್ಧಿ ಆಗಲೇಬೇಕಿದೆ. ಆದರೆ, ಪರಿಸರವನ್ನು ಉಳಿಸಿ ಅಭಿವೃದ್ಧಿ ಮಾಡಬೇಕಾಗಿದೆ. ಇದರೊಂದಿಗೆ ಇನ್ನಷ್ಟು ಗಿಡಗಳನ್ನು ಬೆಳೆಸುವ ಕೆಲಸ ಆಗಬೇಕಿದೆ.”
-ಪೊನ್ನಚ್ಚನ ಮಧು, ಸ್ಥಳೀಯರು
” ಮರಗಳನ್ನು ಕಡಿಯದೆಯೇ ಕಾಮಗಾರಿ ನಡೆಸಲು ನಗರಸಭೆಗೆ ಮನವಿ ಮಾಡಿದ್ದೇವೆ. ಆದರೆ ಅದು ಸಾಧ್ಯವಾಗುವುದಿಲ್ಲ ಎಂಬುದಾಗಿ ನಗರಸಭೆ ಅಭಿಯಂತರರು ತಿಳಿಸಿದ್ದು, ಮರ ಕಡಿದು ಹರಾಜು ನಡೆಸಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಮರ ಕಡಿತಲೆ ವಿರುದ್ಧ ಇದೀಗ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಸದ್ಯಕ್ಕೆ ಮರ ಕಡಿದು ಸೌದೆ ಹರಾಜಿಗೆ ಅನುಮತಿ ನೀಡುವುದಿಲ್ಲ. ನಗರಸಭೆಯವರೊಂದಿಗೆ ಮತ್ತೆ ಚರ್ಚೆ ನಡೆಸಿ ಮರಗಳಿಗೆ ಹಾನಿಯಾಗದಂತೆ ಕಾಮಗಾರಿ ನಡೆಸಲು ಒತ್ತಾಯ ಮಾಡಲಾಗುವುದು.”
-ಅಭಿಷೇಕ್, ಉಪಅರಣ್ಯ ಸಂರಕ್ಷಣಾಧಿಕಾರಿ
ಅರವಿಂದ ಚೊಕ್ಕಾಡಿ ಜವಾಹರಲಾಲ್ ನೆಹರೂ ವಿಷಯದಲ್ಲಿ ನನ್ನ ತಂದೆ ಸ್ವಲ್ಪ ಭಾವುಕರಾಗಿದ್ದರು. ನನ್ನ ತಂದೆ ಕುಶಾಲನಗರದಲ್ಲಿ ಶಾಲೆಗೆ ಹೋಗುತ್ತಿದ್ದಾಗ ನೆಹರೂ…
ಎಸ್.ಎಸ್.ಭಟ್ ನಂಜನಗೂಡು: ರಾಜ್ಯದ ಧಾರ್ಮಿಕ ಹಾಗೂ ಕೈಗಾರಿಕಾ ಕ್ಷೇತ್ರವಾದ ನಂಜನಗೂಡು ಈಗ ಮಾದಕ ದ್ರವ್ಯ ಎಂಡಿಎಂಎ ವ್ಯವಹಾರದ ಕೇಂದ್ರವಾಗಲಾರಂಭಿಸಿದೆಯೇ? ಎಂಬ…
ಮೈಸೂರು: ಮೈಸೂರಿನ ವಿಜ್ಞಾನ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಗರಿ ಸೇರ್ಪಡೆಯಾಗಿದೆ. ಚಾಮುಂಡಿಬೆಟ್ಟದ ತಪ್ಪಲಿನ ತಾವರೆಕಟ್ಟೆ ಸಮೀಪ ನಿರ್ಮಿಸಿರುವ ಅತ್ಯಾಧುನಿಕ ಟಿಲ್ಟೆಡ್…
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಇದೀಗ ಸಿನಿಮಾ ರೂಪದಲ್ಲಿ ಬರಲಿದೆ ಎಂದು ವರದಿಯಾಗಿದೆ. ನವೆಂಬರ್…
ಹಾಸನ: ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವ ಹೊಸ ದಾಖಲೆ ಬರೆದಿದೆ! ಒಟ್ಟು 30 ಲಕ್ಷದ 6 ಸಾವಿರ ಭಕ್ತರು…