ಸಾಲು ಸಾಲು ಹೊಸ ಹೂಗಳ ಚಲುವಿನ ಪರಿ
ದೇವು ಶಿರಮಳ್ಳಿ
ಎತ್ತೆತ್ತಲು ತೆನೆ ಚೆಲ್ಲಿ ಹಾಲ ಚಿಲಿಪಿಲಿ ಹರಿಸಿತು ಹಕ್ಕಿಯ ಮೇಳ ಕಣಕಣಸಲಿ ಬಂಗಾರ ಜಾಲ ಬೆರಗಾಗಿ ನಿಂತಿತೊ ಚಲಿಸದೆ ಕಾಲ – ಕೆ. ಎಸ್. ನಿಸಾರ್ ಅಹಮದ್
ಇಡೀ ಜಗತ್ತೇ ಇಂದು ಒಂದು ಹಳ್ಳಿಯಾಗಿರಲು ಪ್ರತಿ ಹಳ್ಳಿಯ ಸುಗ್ಗಿಯ ಸೊಬಗಿಂದು ಎಲ್ಲಿದೆ ? ಹಳ್ಳಿಗರ ಸುಗ್ಗಿಯ ಹಬ್ಬ ಮರೆಯಾಗಿ ಇಂದು ನಗರಿಗರ ಸಂಕ್ರಾಂತಿಯೇ ಆಗಿಬಿಟ್ಟಿದೆ. ಸಂಕ್ರಾಂತಿ ಎಂದರೆ ಡಿಜಿಟಲ್ ಶುಭಾಶಯಗಳ ವಿನಿಮಯ, ಬಣ್ಣದ ಬಟ್ಟೆಗಳ ಮೆರವಣಿಗೆ, ಪ್ಲಾಸ್ಟಿಕ್ ಪೊಟ್ಟಣದಲ್ಲಿ ಕಂಡ ಎಳ್ಳು ಬೆಲ್ಲ, ಹಳ್ಳಿಯಂತೆ ತೋರಲೊಂದು ತುಂಡು ಕಬ್ಬು. ಮಧ್ಯಾಹ್ನಕ್ಕೆ ಹಬ್ಬ ಮುಗಿದು ಒಂದು ಗಡದ್ದು ನಿದ್ದೆ.
ಸಂಕ್ರಾಂತಿ ಎಂದರೆ ಹಳ್ಳಿಗರ ಸುಗ್ಗಿ ಹಬ್ಬ, ಬಸವನ ಹಬ್ಬ – ಎತ್ತುಗಳ ಹಬ್ಬ, ಜಾನುವಾರುಗಳ ಹಬ್ಬ . “ನೇಗಿಲ ಹಿಡಿದು ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ” ಎಂಬ ಕುವೆಂಪು ಅವರ ಕವಿತೆಯ ಸಾಲೊಂದು ಕಿವಿಯ ತಾಗಲು ರೈತನೊಟ್ಟಿಗೆ ಎತ್ತುಗಳ ಚಿತ್ರವೊಂದು ನಮ್ಮ ಮನದಲಿ ಮೂಡದೆ ಹೋಗಲು ಸಾಧ್ಯವೆ? ಊರಿಗೊಂದು ಮಾರಮ್ಮನ ಗುಡಿಯಿದ್ದಂತೆ ಬಸವನ ಗುಡಿಯು ಎಲ್ಲೆಡೆಯುಂಟು. ಕೆಲವು ಊರುಗಳಲ್ಲಿ ಬಸವ -ಮಾರಮ್ಮ ಅಣ್ಣ – ತಂಗಿ ಎಂಬ ಪ್ರತೀತಿ ಇದೆ. ಬಸವನೆಂದರೆ ಎತ್ತುಗಳು, ರೈತರ ದೇವರು (ಬಸವನ ಗುಡಿ ಬದಲಾದ ಕಾಲದಲ್ಲಿ ಬಸವೇಶ್ವರ ದೇವಾಲಯಗಳು ಆಗಿಬಿಟ್ಟಿವೆ! ) ರೈತರ ಬದುಕಿನಲ್ಲಿ ಹಸು, ಎತ್ತುಗಳೆಂದರೆ ಅತ್ಯಮೂಲ್ಯ ಜೀವಗಳು. ಹಳ್ಳಿಗರ ಬಾಳ ಬಂಡಿ ನಡೆಸುವವರು ಎತ್ತು, ಹಸುಗಳೇ ಅಲ್ಲವೇ. ಹಸುಗಳಿಲ್ಲದೆ ಮಕ್ಕಳಿಗೆ ಹಾಲಿಲ್ಲ, ಎತ್ತುಗಳಿಲ್ಲದೆ ಹೊಲದ ಕಾಳಿಲ್ಲ.
ಸಂಕ್ರಾಂತಿ ಎಂದರೆ ಚಳಿಗಾಲದ ಸೊಬಗು, ಸೂರ್ಯ ಪಥ ಬದಲಿಸುತ್ತ ಬಂದ ಕಾಲದಲ್ಲಿ ಧರೆಯ ತುಂಬಾ ಮಂಜು ಮುಸುಕು. ಅವರೆ, ತೊಗರಿ, ಹುರುಳಿ, ತುಂಬೆ ಸಾಲು ಸಾಲು ಹೊಸ ಹೂಗಳ ಚಲುವಿನ ಪರಿ, ಹಕ್ಕಿ-ಪಿಕ್ಕಿಗಳ ಇಂಚರ. ಭುವಿಯ ಸೊಬಗ ನಾವು ಕಣ್ಣ ತೆರೆದು ನೋಡಿ ಸಂಭ್ರಮಿಸಬೇಕು.
ಭೂಮಿಯು ನಮ್ಮ ತಾಯಿ ತಂದೆಯು ಬಸವಣ್ಣ ಅವರಿತ್ತ ಸಿರಿಯ ನೋಡ ಬನ್ನಿ ಸುಗ್ಗಿ ಬಂದಿದೆ ಬನ್ನಿ ಹಿಗ್ಗ ತಂದಿದೆ ಬನ್ನಿ ಸಗ್ಗವಾಗಿದೆ ಭೂಮಿ ನೋಡ ಬನ್ನಿ ನಮ್ಮ ಜನಪದರು ಭೂಮಿಯು ತಾಯಿ, ತಂದೆ ಬಸವಣ್ಣ. ಇವರಿತ್ತ ಸಿರಿಯೇ ಸುಗ್ಗಿಯಾಗಿದೆ ಎಂದು ಹಾಡುತ್ತಾರೆ. ಸುಗ್ಗಿಯಿಂದ ಭೂಮಿ ಸಗ್ಗವಾಗಿದೆ.
ಕೊಟ್ಟಿಗೆಯ ತುಂಬಾ ಕರುಗಳು ಅಂಬಾ ಎನ್ನಲು ಅದಕೂ ಮಿಗಿಲು ಸಿರಿ ಯಾವುದು? ಹಟ್ಟಿಯ ಬಡತನವ ತೊಡೆದು ಬಿಡುವ ಹಸುಗಳೇ ಹಳ್ಳಿಗರ ಸಂಪತ್ತು. ವರುಷವಿಡೀ ಬೆವರ ಹರಿಸಿ ಗಳಿಸಿದ ಶ್ರಮದ ಫಸಲು ಮನೆಯಲ್ಲಿ ತುಂಬಿರಲು ಮನವು ತುಂಬಿ ಬರದೆ. ಬೆವರ ಹನಿಯೇ ಹಸಿರ ಹಬ್ಬವಾಗಿ ಜನರಿಗೆ ಉಸಿರು ಬಂದಂತಾಗಿದೆ.
ಕನಕಪುರ ಭಾಗದಲ್ಲಿ ಸಂಕ್ರಾಂತಿ ಹಬ್ಬ ಕ್ಯಾಲೆಂಡರ್ ತೋರುವ ಕೆಂಪು ದಿನದಂದು ಅಲ್ಲ. ಈ ದಿನದಂದು ಅವರೆ ಕಾಳು ಒಕ್ಕಣೆ ಮುಗಿಯದು, ಹಬ್ಬವೆಂದರೆ ಎಲ್ಲಾ ಬೆಳೆಗಳ ಒಕ್ಕಣೆ ಮುಗಿದು ದನಕರುಗಳು ಬೆಳೆ ಇಲ್ಲದ ಹೊಲದಲ್ಲಿ ಒಂದಷ್ಟು ದಿನಗಳು ಕಾಲಾಡಿ ಬರಬೇಕು. ಹಾಗಾಗಿ ಎಲ್ಲರೂ ಜನವರಿ ತಿಂಗಳಲ್ಲಿ ಸಂಕ್ರಾಂತಿ ಆಚರಿಸಿದರೆ ಇಲ್ಲಿಯ ಜನ ಫೆಬ್ರವರಿಯಲ್ಲಿ ಸುಗ್ಗಿ ಸಂಕ್ರಾಂತಿ ಆಚರಿಸು ತ್ತಾರೆ. ಫೆಬ್ರವರಿಯಲ್ಲಿ ಕೂಡ ಬುಧವಾರದಂದೇ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆ. ಸೋಮವಾರ ರೈತರು ಆರು ಕಟ್ಟುವುದಿಲ್ಲ. ಅಂದು ಬಸವನಿಗೆ ವಿಶ್ರಾಂತಿಯ ದಿನ, ಪೂಜಿಸಲ್ಪಡುವ ದಿನ. ಸೋಮವಾರ ದಂದು ಬಸವನ ಗುಡಿಯಲ್ಲಿ ಊರ ಜನರೆಲ್ಲ ಒಟ್ಟಾಗಿ ಪೂಜೆಯ ಸಲ್ಲಿಸುತ್ತಾರೆ. ಅನಂತರ ಬರುವ ಬುಧವಾರ ದಂದೇ ಸಂಕ್ರಾಂತಿ ಆಚರಿಸುವುದು ವಾಡಿಕೆ. ಸಂಕ್ರಾಂತಿಯನ್ನು ‘ಸಂಕ್ರಣ್ಣ ಬಂದ’ ಎಂದೇ ಕರೆಯುವ ಇಲ್ಲಿಯ ಜನರು ತಮ್ಮ ಮನೆಯ ಹಸು, ಕರು, ಎತ್ತುಗಳನ್ನು ಊರಾಚೆ, ಮಣ್ಣಿನ ಗುಡಿ ಕಟ್ಟಿದ ಬಯಲಲ್ಲಿ ಸಾಲು ಸಾಲು ನಿಲ್ಲಿಸಿ ಪೂಜಿಸುತ್ತಾರೆ. ಸುಣ್ಣ, ಕೆಮ್ಮಣ್ಣು ಮೆತ್ತಿಕೊಂಡು ನಿಂತ ಗುಡಿಗೆ ಚೆಂದದೊಂದು ಮಣ್ಣಿನ ಹಣತೆ ಇರಿಸಿ, ಕಾರೆಮುಳ್ಳು, ಉಗನಿ ಹೂವು, ತುಂಬೆ ಹೂವಿನಿಂದ ಅಲಂಕರಿಸುತ್ತಾರೆ.
ಒಂದೆಡೆ ಕಲೆತ ದನ, ಎತ್ತುಗಳಿಗೆ ಧೂಪ ಹಾಕಿ ಉನ್ನಿ ಸಮೇತ ಬೇಯಿಸಿದ ಅನ್ನದಿಂದ ದೃಷ್ಟಿ ನಿವಾಳಿಸುತ್ತಾರೆ. ಪೂಜಿಸಲು ಬಂದು ಧೂಪ ಹಿಡಿದ ಕೈ ಇಂಡೆಚ್ಚಲೋ (ದನಗಳ ಹಿಂಡು ಹೆಚ್ಚಲಿ) ಎಂದು ಕೂಗಿ ಹರಸುತ್ತದೆ. ಮತ್ತೊಂದು ಕೈ ಪಂಗಳೋ (ಹಾಲ ಕುಂಭಗಳು ಉಕ್ಕಿ ಹರಿಯಲಿ) ಎಂದು ನಮಿಸುತ್ತದೆ. ಊರ ದನಗಳೆಲ್ಲ ಅಂದು ವಂದಿಸಲ್ಪಡುವ ಗಳಿಗೆಯೇ ಸುಗ್ಗಿಯ ಹಬ್ಬವಾಗಿ ಸಂಕ್ರಾಂತಿ ಆಗಿದೆ. ಹೀಗೆ ಪೂಜೆಗೊಂಡ ದನಕರು, ಎತ್ತುಗಳು ಸಂಜೆ ಕಿಚ್ಚಾದು ಮನೆ ಮುಂದಣ ಒನಕೆ, ಕೆಂಪು ನೀರು (ರತ್ನೀರು- ದೃಷ್ಟಿ ನಿವಾಳಿಸುವ ನೀರು, ಕೆಲವು ಮನೆಗಳಲ್ಲಿ ಕೋಳಿಗಳ ರಕ್ತವನ್ನು ಎತ್ತುಗಳ ಕಾಲಿಗೆ ಹಾಕುತ್ತಾರೆ) ದಾಟಿ ಮನೆಯಂಗಳಕ್ಕೆ ಬರುತ್ತವೆ. ಹಾಗಾಗಿ ಸುಗ್ಗಿ ಹಬ್ಬವೆಂದರೆ ಇಲ್ಲಿ ದನಕರು – ಎತ್ತುಗಳ ಹಬ್ಬ. ರೈತರ ಹಬ್ಬ
ಪಕ್ಕದ ತಮಿಳುನಾಡಿನ ಪೊಂಗಲ್ ಪ್ರಭಾವವೋ ಇಲ್ಲ, ಇಲ್ಲಿನ ಜನರ ಪದ್ಧತಿಯೋ ಜಲ್ಲಿಕಟ್ಟು ನೆನಪಿಸುವ ಕ್ರೀಡೆಯೂ ಜರುಗುತ್ತದೆ. ಊರ ಮಧ್ಯೆದಲ್ಲಿ ಹಸು, ಕರುಗಳ ಜೊತೆ ಜನರೂ ಓಡುತ್ತಾ ಸಂಭ್ರಮಿಸುತ್ತಾರೆ. ರಾಜ್ಯದ ಬಹು ಭಾಗಗಳಲ್ಲಿ ಸಾಮಾನ್ಯವಾಗಿ ಹೊಲಗಳಲ್ಲಿ ಭತ್ತ, ರಾಗಿ, ಜೋಳ, ಅವರೆ, ತೊಗರಿ, ಹುರುಳಿ ಫಸಲು ರಾಶಿಗೆ ಪೂಜಿಸಿ, ಹೆಚ್ಚೊಕ್ಕ ಲಾಗಲಿ ಎಂದು ಹರಸಿ, ಹಾಡಿ, ಕುಣಿದ ಹಬ್ಬ ಸುಗ್ಗಿಯಾಗಿದೆ. ವರುಷಕೊಮ್ಮೆ ಬರುವ ಸಂಕ್ರಮಣದ ಹಬ್ಬ ಎಳ್ಳು ಬೆಲ್ಲದಂತಹ ಒಳಿತನ್ನೇ ತಾರಲಿ.
ಮಹಾದೇಶ್ ಎಂ ಗೌಡ ಹನೂರು: ತನ್ನ ಜಮೀನಿನಲ್ಲಿ ಬೆಳೆಯಲಾಗಿದ್ದ ಜೋಳದ ಫಸಲು ಕಾಯುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ…
ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನೆಲೆಸಿರುವ ಅಕ್ರಮ ವಲಸಿಗರಿಗೆ ಸರ್ಕಾರದ ವತಿಯಿಂದ ಮನೆ ನಿರ್ಮಾಣ ಮಾಡಿಕೊಡಲು ಅವಕಾಶ ಕೊಡುವುದಿಲ್ಲ. ಎಲ್ಲಾ…
ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿರುವ ನಗರದ ಕೋಗಿಲು ಲೇಔಟ್‍ನಲ್ಲಿ ವಲಸಿಗರು ಅನಧಿಕೃತವಾಗಿ ಮನೆ ನಿರ್ಮಾಣ…
ಬೆಂಗಳೂರು: ಅರಣ್ಯ ಪ್ರದೇಶದ ಹೊರಗೆ ವನ್ಯಜೀವಿಗಳು ಕಂಡ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿ ಎಂದು ರಾಜ್ಯ ಸರ್ಕಾರ ಸಾರ್ವಜನಿಕರಿಗೆ…
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 106ನೇ ವಾರ್ಷಿಕ ಘಟಿಕೋತ್ಸವವು ಕ್ರಾಪರ್ಡ್ ಹಾಲ್‌ನಲ್ಲಿ ನೆರವೇರಿತು. ಈ ಬಾರಿಯ ಘಟಿಕೋತ್ಸವದಲ್ಲಿ 30,966 ಅಭ್ಯರ್ಥಿಗಳಿಗೆ ವಿವಿಧ…
ಬೆಂಗಳೂರು: ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತನ ಶವ ಪರೀಕ್ಷೆಯನ್ನು ಸರ್ಕಾರ ಎರಡು ಬಾರಿ ಮಾಡಿದ್ದು ಯಾಕೆ ಎಂದು…