ಕೆ.ಬಿ.ರಮೇಶನಾಯಕ
ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ
ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು ಮಹಾ ನಗರಪಾಲಿಕೆಯಲ್ಲಿ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಸಂಗ್ರಹಿಸಿದ ತೆರಿಗೆಯು ಹಣಕಾಸಿನ ಬರವನ್ನು ನೀಗಿಸಿದೆ.
ಚುನಾಯಿತ ಜನಪ್ರತಿನಿಧಿಗಳು ಇಲ್ಲದ ಕಾರಣ ೨ ವರ್ಷಗಳಿಂದ ೧೫ನೇ ಹಣಕಾಸು ಆಯೋಗದ ಅನು ದಾನ ಬಿಡುಗಡೆ ಮಾಡದೆ ಬ್ರೇಕ್ ಹಾಕಿದ್ದರಿಂದ ಹಲವು ಸಮಸ್ಯೆಗಳಿಗೆ ಸಿಲುಕಿದ್ದ ನಗರ ಪಾಲಿಕೆಯನ್ನು ಆಸ್ತಿ ಮಾಲೀಕರು ತಮ್ಮ ತೆರಿಗೆ ಪಾವತಿಸುವ ಮೂಲಕ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಪಾಲಿಕೆ ಆಯುಕ್ತರು, ಉಪ ಆಯುಕ್ತರು ಕೈಗೊಂಡ ಹಲವು ಸುಧಾರಣಾ ಕ್ರಮಗಳು ವರ್ಕ್‌ಔಟ್ ಆಗುವ ಜತೆಗೆ ರಾಜ್ಯ ಸರ್ಕಾರ ಶೇ.೫ರಷ್ಟು ರಿಯಾಯಿತಿಯನ್ನು ಸೆಪ್ಟೆಂಬರ್ ತಿಂಗಳವರೆಗೆ ವಿಸ್ತರಿಸಿದ್ದರಿಂದ ನಿರೀಕ್ಷೆಗೂ ಮೀರಿ ತೆರಿಗೆ ಸಂಗ್ರಹವಾಗಿದೆ
ಕಳೆದ ನಾಲ್ಕು ವರ್ಷಗಳನ್ನು ಗಣನೆಗೆ ತೆಗೆದುಕೊಂಡರೆ ಅಕ್ಟೋಬರ್ ತಿಂಗಳಲ್ಲಿ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಆಗಿದ್ದು, ಡಿಸೆಂಬರ್ ಅಂತ್ಯಕ್ಕೆ ಶೇ.೧೦೦ರಷ್ಟು ಗುರಿ ಸಾಧಿಸುವ ಲೆಕ್ಕಾಚಾರ ಹಾಕಲಾಗಿದೆ. ನಗರಪಾಲಿಕೆಯಲ್ಲಿ ಘೋಷಿತ ಮತ್ತು ಅಘೋಷಿತ ಸೇರಿದಂತೆ ೨.೩೦ ಲಕ್ಷ ಆಸ್ತಿಗಳು ಇದ್ದು, ಇದರಲ್ಲಿ ವಸತಿ-೧,೪೮,೫೮೯, ವಾಣಿಜ್ಯ-೭,೧೮೪, ಖಾಲಿ-೨೩,೨೫೨, ಕೈಗಾರಿಕೆ-೩೨೮ ಆಸ್ತಿಗಳಿಂದ ವರ್ಷಕ್ಕೆ ೧೫೦ರಿಂದ ೨೦೦ ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ, ನಿರೀಕ್ಷೆಯಂತೆ ತೆರಿಗೆ ವಸೂಲಾತಿಯಾಗದ ಕಾರಣ ನಗರಪಾಲಿಕೆಯಲ್ಲಿ ಅಭಿವೃದ್ಧಿಗೆ ದೊಡ್ಡ ಹೊಡೆತ ಬಿದ್ದಿತ್ತು.
ಗುತ್ತಿಗೆದಾರರು ನಿರ್ವಹಿಸಿದ್ದ ಕಾಮಗಾರಿಗಳ ಬಿಲ್ ಪಾವತಿ ಮಾಡಲು ಕೂಡ ಸಾಧ್ಯವಾಗದ ಕಾರಣ ಗುತ್ತಿಗೆದಾರರು ಪ್ರತಿಭಟನೆ ನಡೆಸಿ ಬಾಕಿ ಹಣ ಬಿಡುಗಡೆಗೆ ಒತ್ತಡ ಹೇರಿದ್ದರು. ಇದಲ್ಲದೆ, ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ, ಮುಖ್ಯಮಂತ್ರಿಗಳ ನಗರೋತ್ಥಾನದಿಂದ ಅನುದಾನ ಕೂಡ ಬಿಡುಗಡೆ ಮಾಡದ ಕಾರಣ ಮತ್ತಷ್ಟು ಸಮಸ್ಯೆಯಾಗಿತ್ತು. ಹೀಗಾಗಿ, ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ನಗರಪಾಲಿಕೆ ಆಯುಕ್ತರಾಗಿದ್ದಾಗ ತೆರಿಗೆ ಪಾವತಿ ಸರಳೀಕರಣಗೊಳಿಸುವ ಮೂಲಕ ತೆರಿಗೆ ಪಾವತಿದಾರರಿಗೆ ಅನುಕೂಲ ಕಲ್ಪಿಸಿದ್ದರು. ನಂತರ ಬಂದ ಆಯುಕ್ತರೂ ಅದನ್ನೇ ಮುಂದುವರಿಸಿದ್ದರಿಂದಾಗಿ ಕಳೆದ ಮೂರು ವರ್ಷಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಾಗುತ್ತಿರುವುದು ಕಂಡುಬಂದಿದೆ.
” ತೆರಿಗೆ ವಸೂಲಿಗೆ ಕೈಗೊಂಡ ಹಲವು ಕ್ರಮಗಳು, ಸರ್ಕಾರ ಶೇ.೫ರಷ್ಟು ರಿಯಾಯಿತಿಯನ್ನು ಸೆಪ್ಟೆಂಬರ್ ವರೆಗೆ ವಿಸ್ತರಿಸಿದ್ದರಿಂದಾಗಿ ಆಸ್ತಿ ಮಾಲೀಕರು ತೆರಿಗೆಪಾವತಿಸಲು ಅನುಕೂಲವಾಗಿದೆ. ಆಯುಕ್ತರ ಮುತುವರ್ಜಿಯಿಂದ ಇದು ಸಾಧ್ಯವಾಗಿದೆ.”
-ಜಿ.ಎಸ್.ಸೋಮಶೇಖರ್, ಉಪ ಆಯುಕ್ತರು (ಕಂದಾಯ)
ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…