ಎಸ್.ನಾಗಸುಂದರ್
ಪುರಸಭೆ ಆಡಳಿತ,ಅಧಿಕಾರಿಗಳ ವಿರುದ್ಧ ನಾಗರಿಕರ ಆಕ್ರೋಶ ಕುಡಿಯಲು ಶುದ್ಧೀಕರಿಸಿದ ನೀರು ಸರಬರಾಜು ಮಾಡಲು ಆಗ್ರಹ
ಪಾಂಡವಪುರ: ಮನುಷ್ಯ ಆರೋಗ್ಯವಂತನಾಗಿರಲು ಶುದ್ಧ ನೀರು, ಗಾಳಿ ಹಾಗೂ ಪೌಷ್ಟಿಕ ಆಹಾರ ಬಹುಮುಖ್ಯ. ಅದರಲ್ಲೂ, ಕುಡಿಯುವ ನೀರು ಶುದ್ಧವಾಗಿರಬೇಕು. ಇಲ್ಲವಾದರೆ ಸಾಂಕ್ರಾಮಿಕ ರೋಗಗಳು ಹರಡುವುದು ನಿಶ್ಚಿತ ಎಂಬುದು ಪುರಸಭೆ ಅಧಿಕಾರಿಗಳಿಗೆ ತಿಳಿದಿದ್ದರೂ ಪಟ್ಟಣದ ನಾಗರೀಕರಿಗೆ ಕುಡಿಯಲು ಶುದ್ಧೀಕರಿಸಿದ ನೀರನ್ನು ಪೂರೈಕೆ ಮಾಡದೆ, ಹಾಗೇ ಸರಬರಾಜು ಮಾಡುವ ಮೂಲಕ ಬೇಜವಾಬ್ದಾರಿ ತೋರುತ್ತಿದ್ದಾರೆ.
ಪಟ್ಟಣ ವ್ಯಾಪ್ತಿಯ ಎಲ್ಲಾ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ವಿವಿಧೆಡೆ ಓವರ್ ಹೆಡ್ ಟ್ಯಾಂಕ್ಗಳನ್ನು ನಿರ್ಮಿಸಲಾಗಿದೆ. ಶ್ರೀರಂಗಪಟ್ಟಣ ಬಳಿಯ ಕಾವೇರಿ ನದಿ,ವಿಶ್ವೇಶ್ವರಯ್ಯ ಕಾಲುವೆಯಿಂದ ಓವರ್ ಟ್ಯಾಂಕ್‌ಗಳಿಗೆ ನೀರು ಪೂರೈಕೆ ಮಾಡಿಕೊಂಡು ಅದನ್ನು ಫಿಲ್ಟರ್ ಮಾಡದೆ ನೇರವಾಗಿ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಜತೆಗೆ ಕೆಲ ಬಡಾವಣೆಗಳಿಗೆ ಬೋರ್ ವೆಲ್ ನೀರು ಪೂರೈಕೆಯಾಗುತ್ತಿದೆ. ಶ್ರೀರಂಗಪಟ್ಟಣದ ಕಿರಂಗೂರು ಸಮೀಪದ ಕಾವೇರಿ ನದಿಯಿಂದ ಲಿಫ್ಟ್ ಮಾಡುವ ನೀರನ್ನು ಕೂಡಲಕುಪ್ಪೆ ಗೇಟ್ ಬಳಿ ಫಿಲ್ಟರ್ ಮಾಡಲಾಗುತ್ತಿದೆ. ಆದರೆ, ಉಳಿದಂತೆ ಕಾಲುವೆ ಮತ್ತು ಬೋರ್‌ವೆಲ್ ನೀರನ್ನು ಶುದ್ಧೀಕರಣ ಮಾಡಲಾಗುತ್ತಿಲ್ಲ.
ಅಶುದ್ಧ ನೀರು ಸೇವನೆ ಡೆಂಗ್ಯು,ಮಲೇರಿಯ, ಹಕ್ಕಿ ಜ್ವರ, ವಾಂತಿ, ಭೇದಿ ಮುಂತಾದ ಹಲವು ಸಾಂಕ್ರಾಮಿಕ ರೋಗಗಗಳನ್ನು ತಂದೊಡ್ಡಬಹುದು. ಶುದ್ಧ ನೀರನ್ನಾದರೂ ಕುಡಿಯೋಣ ಎಂದುಕೊಂಡರೆ ಅಧಿಕಾರಿಗಳ ನಿರ್ಲಕ್ಷ ದಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಪಟ್ಟಣದ ಜನತೆ ಆರೋಪಿಸಿದ್ದಾರೆ.
೧೯೯೯-೨೦೦೦ನೇ ಇಸವಿಯಲ್ಲಿ ಪಾಂಡವಪುರ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ಸರ್ಕಾರದ ವಿಶೇಷ ಅನುದಾನದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಬಳಿ ಕಾವೇರಿ ನದಿಯಿಂದ ಜಾಕ್‌ವೆಲ್ ಮೂಲಕ ನೀರನ್ನು ಎತ್ತಿ ಕೂಡಲಕುಪ್ಪೆ ಗೇಟ್ ಬಳಿ ನಿರ್ಮಾಣ ಮಾಡಲಾಗಿರುವ ಪಂಪ್‌ಹೌಸ್ ಮೂಲಕ ಪಟ್ಟಣದ ಕೃಷ್ಣಾನಗರದಲ್ಲಿರುವ ಓವರ್ ಟ್ಯಾಂಕ್‌ಗಳಿಗೆ ತುಂಬಿಸಿ ಅಲ್ಲಿಂದ ಪಟ್ಟಣದ ಎಲ್ಲ ಮನೆಗಳಿಗೂ ನೀರು ಒದಗಿಸಲಾಗುತ್ತದೆ. ನದಿಯಿಂದ ಲಿಫ್ಟ್ ಮಾಡಲಾಗುವ ಈ ನೀರನ್ನು ವಿವಿಧ ಹಂತಗಳಲ್ಲಿ ಶುದ್ಧೀಕರಣ ಮಾಡಬೇಕಿದೆ. ಕ್ಲೋರಿನೇಷನ್ ಕೂಡ ನೀರನ್ನು ಶುದ್ಧೀಕರಣ ಮಾಡುವ ಪ್ರಮುಖ ಘಟ್ಟವಾಗಿದೆ. ಆದರೆ, ಕೃಷ್ಣಾ ನಗರದಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ಕ್ಲೋರಿನೇಷನ್ ಮಾಡುವ ಘಟಕ ಕೆಟ್ಟು ಹೋಗಿರುವ ಕಾರಣ ಹಲವು ವರ್ಷಗಳಿಂದ ನೀರು ಕ್ಲೋರಿನೇಷನ್ ಆಗುತ್ತಿಲ್ಲ. ಕ್ಲೋರಿನ್ ಪ್ರಯೋಗಿಸುವಿಕೆ ಘಟಕವನ್ನು ದುರಸ್ತಿ ಮಾಡಿಸಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ. ಹೀಗಾಗಿ ನದಿಯಿಂದ ಹೊರ ತೆಗೆಯುವ ಅಶುದ್ಧ ನೀರನ್ನೇ ಕುಡಿಯಬೇಕಾಗಿರುವುದು ಜನರ ದುರದೃಷ್ಟವಾಗಿದೆ.
ಕಾರ್ಖಾನೆಗಳ ತ್ಯಾಜ್ಯ ನೀರು ಸೇರಿದಂತೆ ನದಿ ಹರಿಯುವ ಮಾರ್ಗ ಮಧ್ಯೆ ಹಲವು ವಿಷಯುಕ್ತ ಅಂಶಗಳು ನದಿ ಒಡಲು ಸೇರುತ್ತಿವೆ. ಜತೆಗೆ ವಿಶ್ವೇಶ್ವರಯ್ಯ ನಾಲೆ ದಡದಲ್ಲಿರುವ ಅನೇಕ ಗ್ರಾಮಗಳ ಮನೆಗಳ ಮಲಿನ ನೀರು ಚರಂಡಿಗಳ ಮೂಲಕ ನಾಲೆ ಸೇರುತ್ತಿರುವ ಪರಿಣಾಮ ನೀರು ಅಶುದ್ಧವಾಗುತ್ತಿದೆ. ಈ ನೀರನ್ನು ಶುದ್ಧೀಕರಿಸದೆ ಕುಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ವಿಷಯ ತಿಳಿದಿದ್ದರೂ ಪುರಸಭೆ ಅಧಿಕಾರಿಗಳು ನೀರನ್ನು ಶುದ್ಧೀಕರಿಸದೆ,ಕ್ಲೋರಿನೇಷನ್ ಮಾಡದೆ ನೇರವಾಗಿ ಮನೆಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಅಧಿಕಾರಿಗಳು, ಪುರಸಭೆ ಆಡಳಿತ ಮಂಡಳಿ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹವಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕಗಳ ಹೆಚ್ಚಳ: ಪಾಂಡವಪುರ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬ ಕಾರಣಕ್ಕಾಗಿಯೇ ಪಟ್ಟಣದ ಹಲವೆಡೆ ಖಾಸಗಿ ವ್ಯಕ್ತಿಗಳು ಶುದ್ಧ ನೀರಿನ ಘಟಕಗಳನ್ನು ತೆರೆದಿದ್ದು, ಒಂದು ಕ್ಯಾನಿಗೆ ೫ ರೂ. ಮತ್ತೆ ಕೆಲವೆಡೆ ೧೦ ರೂ. ಪಡೆದು ಶುದ್ಧೀಕರಿಸಿದ ನೀರನ್ನುಮಾರಾಟ ಮಾಡುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸಿ ನೀರು ಶುದ್ಧೀಕರಿಸಿ, ನಾಗರಿಕರಿಗೆ ಪೂರೈಕೆ ಮಾಡಿದರೆ ಜನ ನೀರಿಗೆ ಹಣ ಕೊಡುವ ಅವಶ್ಯಕತೆ ಇರುವುದಿಲ್ಲ.
” ಪಟ್ಟಣದ ಕೃಷ್ಣಾನಗರದಲ್ಲಿ ನೀರು ಶುದ್ಧೀಕರಣ ಘಟಕ ಮರು ಸ್ಥಾಪನೆಗೆ ಸರ್ಕಾರ ೪೦ ಲಕ್ಷ ರೂ.ಅನುದಾನ ನೀಡಿದ್ದು, ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ವರ್ಕ್ ಆರ್ಡರ್ ನೀಡಿದರೆ ಕೆಲಸ ಪ್ರಾರಂಭವಾಗುತ್ತದೆ. ವಿಶ್ವೇಶ್ವರಯ್ಯ ನಾಲೆಯಿಂದ ಲಿಫ್ಟ್ ಮಾಡುವ ಕುಡಿಯುವ ನೀರಿಗೆ ಕ್ಲೋರಿನೇಷನ್ ಮಾಡಲು ಇಲ್ಲಿ ಅವಕಾಶ ಇಲ್ಲದ ಕಾರಣ ಶ್ರೀರಂಗಪಟ್ಟಣದ ಪಂಪ್‌ಹೌಸ್‌ನಲ್ಲಿ ಈ ನೀರಿಗೂ ಅಗತ್ಯವಿರುವಷ್ಟು ಕ್ಲೋರಿನ್ ಅನ್ನು ಹೆಚ್ಚುವರಿಯಾಗಿ ಹಾಕಲಾಗುತ್ತಿದೆ. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಕ್ಲೋರಿನೇಷನ್ ಹೊರತುಪಡಿಸಿ ಉಳಿದಂತೆ ಎಲ್ಲ ರೀತಿಯಲ್ಲೂ ನೀರನ್ನು ಶುದ್ಧೀಕರಿಸಲಾಗುತ್ತಿದೆ.”
-ಚೌಡಪ್ಪ, ಪುರಸಭೆ ಇಂಜಿನಿಯರ್
ಹೊಸ ವರ್ಷದಂದು ಹಲವರು ಬಂಧು,ಬಳಗ, ಸ್ನೇಹಿತರ ಜತೆ ಸೇರಿ ಸಂಭ್ರಮಿಸಿದರು. ಆದರೆ ಸಾಂಸ್ಕ ತಿಕ ನಗರ ಮೈಸೂರಿನಲ್ಲಿ ದಾಖಲೆ ಮದ್ಯ…
ಸ್ವಾಗತಾರ್ಹ ನಡೆ! ಜಾತಿ ಮೀರಿ ಪ್ರೀತಿಸಿದರೆ ಕುಂದಲ್ಲವದು ಮರ್ಯಾದೆಗೆ ಬದಲಿಗೆ ಹೆಚ್ಚುವುದು ಮರ್ಯಾದೆ ಗೌರವ! ಜಾತಿ ಕಟ್ಟಳೆ ಮುರಿವ ಸಮತೆಯ…
ಸಾಂಸ್ಕ ತಿಕ ನಗರಿ ಮೈಸೂರಿನಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಬ್ಯಾರಿಕೇಡ್‌ಗಳು ಬಳಕೆಯಾದ ನಂತರ ನಿರ್ಲಕ್ಷ್ಯಕ್ಕೆ ಒಳಪಡುತ್ತಿವೆ. ಅವುಗಳನ್ನು ಸುರಕ್ಷಿತವಾಗಿ ಒಂದೆಡೆ…
ಲೊಕ್ಕನಹಳ್ಳಿ ಬಳಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ; ಅಧಿಕಾರಿಗಳ ವಿರುದ್ಧ ಆಕ್ರೋಶ ಹನೂರು: ಒಂದೆಡೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ-ಕಾಲೇಜು…
ನವೀನ್ ಡಿಸೋಜ ೧೮,೫೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿರುವ ರೈತರು; ಹವಾಮಾನ ವೈಪರೀತ್ಯದ ನಡುವೆಯೂ ಕಟಾವು ಕಾರ್ಯ ಚುರುಕು ಮಡಿಕೇರಿ:…
ಚಾಮರಾಜನಗರ: ತೀವ್ರ ಚಳಿಯಿಂದ ತತ್ತರಿಸಿದ್ದ ಜಿಲ್ಲೆಯ ಜನತೆ ಕಳೆದ ೨-೩ ದಿನಗಳಿಂದ ಎದುರಾಗಿರುವ ಮೋಡ ಕವಿದ ವಾತಾವರಣ ಮತ್ತು ಅಲ್ಲಲ್ಲಿ…