ಎಸ್.ನಾಗಸುಂದರ್
ಹೆಚ್ಚಿದ ಮಾಲಿನ್ಯ; ಕ್ರಮಕ್ಕೆ ಮುಂದಾಗದ ಕಾರ್ಖಾನೆ ಆಡಳಿತ
ಪಾಂಡವಪುರ: ರೋಗಗ್ರಸ್ಥವಾಗಿದ್ದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದ ಎಂಆರ್‌ಎನ್ ಸಂಸ್ಥೆ ಕಾರ್ಖಾನೆಯನ್ನು ಸುಸ್ಥಿತಿಗೆ ತಂದು ಕಬ್ಬು ಸರಬರಾಜು ಮಾಡಿದ ರೈತರಿಗೆ ಸಮಯಕ್ಕೆ ಸರಿಯಾಗಿ ಹಣವನ್ನು ಬಟವಾಡೆ ಮಾಡುತ್ತಿರುವುದು ರೈತರಿಗೆ ಉಪಯುಕ್ತವಾಗಿದೆ. ಆದರೆ, ಇದೇ ಕಾರ್ಖಾನೆಯ ತ್ಯಾಜ್ಯ ನೀರನ್ನು ಸಿಡಿಎಸ್ ನಾಲೆಗೆ ಹರಿಸುತ್ತಿರುವುದರಿಂದ ರೈತರು ಅನೇಕ ದುಷ್ಪರಿಣಾಮಗಳನ್ನು ಎದುರಿಸುವಂತಾಗಿದೆ.
ಪಾಂಡವಪುರ ರೈಲು ನಿಲ್ಣಾಣದ ಬಳಿಯ ಪಿಎಸ್‌ಎಸ್ಕೆ ಕಾರ್ಖಾನೆಯ ತ್ಯಾಜ್ಯ ನೀರು ನಾಲೆಯ ಒಡಲು ಸೇರುತ್ತಿರುವುದರಿಂದ ಕಾರ್ಖಾನೆ ಸುತ್ತಮುತ್ತಲಿನ ರೈತರು ವ್ಯವಸಾಯ ಮಾಡಲು ತೊಂದರೆಯಾಗಿದ್ದು, ಕಲುಷಿತ ನೀರಿನಿಂದ ಜನ-ಜಾನುವಾರುಗಳಿಗೆ ರೋಗ ರುಜಿನಗಳು ಹರಡುವ ಭೀತಿ ಎದುರಾಗಿದೆ. ಸಮಸ್ಯೆಯಲ್ಲಿದ್ದ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಮಾಜಿ ಸಚಿವ ಮುರುಗೇಶ್ ಆರ್.ನಿರಾಣಿ ಅವರ ಒಡೆತನದ ಎಂಆರ್‌ಎನ್ ಸಂಸ್ಥೆ ೪೦ ವರ್ಷಗಳ ಅವಧಿಗೆ ಗುತ್ತಿಗೆ ಪಡೆದು, ಅಗತ್ಯವಿದ್ದ ಯಂತ್ರೋಪಕರಣಗಳನ್ನು ಮರು ಜೋಡಣೆ ಮಾಡಿಕೊಂಡು ಈಗಾಗಲೇ ಹಲವು ಹಂಗಾಮಿನ ಕಬ್ಬು ಅರೆಯುವಿಕೆಯನ್ನು ಪೂರ್ಣಗೊಳಿಸಿದೆ. ಕಾರ್ಖಾನೆ ಸುಸ್ಥಿತಿಯಲ್ಲಿರುವುದರಿಂದ ಪಾಂಡವ ಪುರ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ತಾಲ್ಲೂಕಿನ ಕೆಲವು ಕಬ್ಬು ಬೆಳೆಗಾರರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿ ನಿಗದಿತ ಸಮಯಕ್ಕೆ ಹಣ ಪಡೆಯುತ್ತಿದ್ದಾರೆ. ಆದರೆ, ಕಾರ್ಖಾನೆಗೆ ಅಗತ್ಯವಿರುವ ನೀರನ್ನು ವಿಶ್ವೇಶ್ವರಯ್ಯ ನಾಲೆಯಿಂದ ಪಡೆದುಕೊಂಡು ಸಿಡಿಎಸ್ ನಾಲೆಗೆ ವಿಷಯುಕ್ತ ತ್ಯಾಜ್ಯ ನೀರನ್ನು ಹರಿಯ ಬಿಡುತ್ತಿರುವ ಪರಿಣಾಮ ರೈತರ ಕೃಷಿ ಚಟುವಟಿಕೆ ಕೈಗೊಳ್ಳುವುದು ಕಷ್ಟವಾಗಿದೆ. ಈ ತ್ಯಾಜ್ಯ ನೀರಿನಲ್ಲಿವ್ಯವಸಾಯ ಮಾಡುವುದರಿಂದ ಸಾಂಕ್ರಾಮಿಕ ರೋಗಗಳು ಹರಡಬಹುದು ಎಂಬ ಆತಂಕ ರೈತರನ್ನು ಕಾಡುತ್ತಿದೆ.
ಪ್ರತಿ ನಿತ್ಯ ೫ ಸಾವಿರ ಟನ್ ಕಬ್ಬು ನುರಿತ ಶ್ರೀರಂಗಪಟ್ಟಣ -ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ (೧೫೦ಎ) ಪಕ್ಕದಲ್ಲಿರುವ ಪಿಎಸ್‌ಎಸ್‌ಕೆ ಕಾರ್ಖಾನೆ ಪ್ರತಿನಿತ್ಯ ೫ ಸಾವಿರ ಟನ್ ಕಬ್ಬು ಅರೆಯುತ್ತಿದ್ದು, ಇದಕ್ಕಾಗಿ ಲಕ್ಷಾಂತರ ಲೀಟರ್ ನೀರು ಬಳಕೆಯಾಗುತ್ತದೆ. ಕಾರ್ಖಾನೆ ಆಡಳಿತ ಮಂಡಳಿ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿ ತ್ಯಾಜ್ಯ ನೀರು ಮರುಬಳಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆದರೆ, ಕಾರ್ಖಾನೆಯಲ್ಲಿ ಇಂತಹ ಯಾವುದೇ ವ್ಯವಸ್ಥೆ ಇಲ್ಲ. ಮಲಿನ ನೀರಿನಿಂದ ಜನ-ಜಾನುವಾರುಗಳ ಜತೆಗೆ ಜಲಚರಗಳು ಹಾಗೂ ಪ್ರಾಣಿ, ಪಕ್ಷಿಗಳಿಗೆ ಅಪಾಯ ಎದುರಾಗಿದೆ. ನಾಲೆ ನೀರು ಬಿಳಿ ನೊರೆಯಂತಾಗಿ, ಪಾಚಿ ಕಟ್ಟುತ್ತದೆ. ನಾಲೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುವ ಸಂದರ್ಭದಲ್ಲಿ ಇದರ ಪರಿಣಾಮ ಹೆಚ್ಚು ಇರುವುದಿಲ್ಲ. ನೀರಿನ ಹರಿವು ಕಡಿಮೆ ಇದ್ದಾಗ ಕಾರ್ಖಾನೆಯ ತ್ಯಾಜ್ಯ ನೀರು ಇಡೀ ನಾಲೆಯನ್ನೇ ಆವರಿಸುವುದರಿಂದ ಹೆಚ್ಚಿನ ತೊಂದರೆ ಉಂಟಾಗುತ್ತದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಗದ್ದೆಗಳಿಗೆ ತೂರಿ ಬರುತ್ತಿರುವ ಹಾರು ಬೂದಿ ಕಾರ್ಖಾನೆ ಹಿಂಭಾಗದಲ್ಲಿ ಬೂದಿ ಮತ್ತು ಮುಂಭಾಗದಲ್ಲಿ ರಚ್ಚು (ಕಬ್ಬಿನ ಸಿಪ್ಪೆ) ಸಂಗ್ರಹಿಸಲಾಗಿದೆ. ಗಾಳಿಗೆ ಬೂದಿ ತೂರಿಬಂದು ಗದ್ದೆಗಳನ್ನು ಆವರಿಸುತ್ತಿದೆ. ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮೇಲೆ ಬೂದಿ ಆವರಿಸಿ, ಇಳುವರಿ ಕಡಿಮೆಯಾಗುತ್ತಿದೆ. ಅಲ್ಲದೆ ರಚ್ಚಿನ ಸಿಪ್ಪೆ ಗಾಳಿಯಲ್ಲಿ ತೂರಿ ಬರುತ್ತಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕಾರ್ಖಾನೆಯ ದೂಳು ಮತ್ತು ಕಿಟ್ಟ ಗಾಳಿಯಲ್ಲಿ ಸೇರುತ್ತಿರುವುದರಿಂದ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಉಸಿರಾಟದ ತೊಂದರೆ ಉಂಟಾಗುತ್ತಿದೆ.
ನಾಲೆಗೆ ತ್ಯಾಜ್ಯ ನೀರು ಹರಿಸಬೇಡಿ
ಪರಿಸರ ಇಲಾಖೆ ಅಧಿಕಾರಿಗಳು ಕಾರ್ಖಾನೆ ಆಡಳಿತ ಮಂಡಳಿಯವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸಿಡಿಎಸ್ ನಾಲೆಗೆ ಚರಂಡಿ ನೀರು ಹರಿಯುತ್ತಿರಬಹುದು. ಹೀಗಾಗಿ ದುರ್ವಾಸನೆ ಬೀರುತ್ತಿದೆ ಎಂಬುದು ಪರಿಸರ ಇಲಾಖೆ ಅಧಿಕಾರಿಗಳ ವಾದ.
ಅಧಿಕಾರಿಗಳು ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಬೇಕು. ಜತೆಗೆ ನೀರಾವರಿ ಇಲಾಖೆ ಅಧಿಕಾರಿಗಳು ಕೂಡ ನಾಲೆಗೆ ತ್ಯಾಜ್ಯ ನೀರು ಹರಿಸದಂತೆ ಕಾರ್ಖಾನೆ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಕಾರ್ಖಾನೆ ಪ್ರಸಕ್ತ ಹಂಗಾಮು ಕಬ್ಬು ಅರೆಯುವಿಕೆಯನ್ನು ಸ್ಥಗಿತಗೊಳಿಸಿದೆ. ಆದರೆ, ಮುಂದಿನ ಹಂಗಾಮಿಗೆ ನಾಲೆ ನೀರು ಕಲುಷಿತಗೊಳ್ಳದಂತೆಕಾರ್ಖಾನೆ ಆಡಳಿತ ಮಂಡಳಿ ಅಗತ್ಯ ಕ್ರಮ ತೆಗೆದು ಕೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
ನಾಲೆಗೆ ನೀರು ಬಿಡದಂತೆ ಸೂಚನೆ:
” ಕಾರ್ಖಾನೆಯ ತ್ಯಾಜ್ಯ ನೀರನ್ನು ನಾಲೆಗೆ ಬಿಡದಂತೆ ಕಾರ್ಖಾನೆ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ಇದಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಒಪ್ಪಿ, ಲಿಖಿತವಾಗಿ ಹೇಳಿಕೆ ನೀಡಿದ್ದಾರೆ. ಪರಿಸರ ಮತ್ತು ವಾಯು ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ನಾಲೆ ನೀರನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ ತ್ಯಾಜ್ಯ ನೀರು ನಾಲೆಗೆ ಹರಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸೂಚಿಸಲಾಗಿದೆ.”
-ಶಿವಪ್ರಸಾದ್, ಎಇಇ, ಕಾವೇರಿ ನೀರಾವರಿ ನಿಗಮ
ನಿಯಮ ಪಾಲನೆಯಾಗುತ್ತಿಲ್ಲ:
ನಿಯಮಗಳ ಪ್ರಕಾರ ಕಾರ್ಖಾನೆ ಆಡಳಿತ ಮಂಡಳಿ ಪರಿಸರ ಅಧಿಕಾರಿಯನ್ನು ನೇಮಿಸಿಕೊಂಡು ಪ್ರತಿನಿತ್ಯ ಬಳಕೆಯಾಗುವ ನೀರಿನ ಪ್ರಮಾಣ ಮತ್ತು ಹೊರ ಹೋಗುವ ತ್ಯಾಜ್ಯ ನೀರಿನ ಪ್ರಮಾಣವನ್ನು ರಿಜಿಸ್ಟರ್ ಬುಕ್‌ನಲ್ಲಿ ನಮೂದಿಬೇಕು. ಜತೆಗೆ ಬಾಯ್ಲರ್‌ಗೆ ಎಷ್ಟು ನೀರು ಬೇಕು. ಬಾಯ್ಲಿಂಗ್ ಹೌಸ್‌ನಲ್ಲಿ ಕಬ್ಬು ಕ್ರಷಿಂಗ್‌ಗೆ ಎಷ್ಟು ನೀರು ಬಳಕೆಯಾಗುತ್ತದೆ ಎಂಬುದನ್ನು ದಾಖಲಿಸಬೇಕು.ಆದರೆ ಕಾರ್ಖಾನೆಯಲ್ಲಿ ಯಾವುದೇ ಅಧಿಕಾರಿಗಳು ಈ ರೀತಿಯ ಕೆಲಸ ಮಾಡುತ್ತಿಲ್ಲ. ತ್ಯಾಜ್ಯ ನೀರನ್ನು ಬಳಕೆ ಮಾಡಿ ವ್ಯವಸಾಯ ಮಾಡುವುದರಿಂದ ತುರಿಕೆ ಹಾಗೂ ನೀರು ಕ್ಷಾರೀಯಗೊಳ್ಳುತ್ತಿದ್ದು, ಇಳುವರಿ ಕುಂಠಿತವಾಗುತ್ತಿದೆ.
ವಿಜಯಕುಮಾರ್, ಕೆನ್ನಾಳು, ರೈತಸಂಘದ ತಾಲ್ಲೂಕು ಅಧ್ಯಕ್ಷ
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…