ಜಿ.ಕೃಷ್ಣ ಪ್ರಸಾದ್
ಮಂಡ್ಯ ಜಿಲ್ಲೆಯ ಕಿರುಗಾವಲಿನ ಸೈಯದ್ ಘನಿ ಖಾನ್ ಹೆಸರಾಂತ ಭತ್ತ ಸಂರಕ್ಷಕರು, ತಮ್ಮ ಹತ್ತು ಎಕರೆ ಭತ್ತದ ಗದ್ದೆಯನ್ನು ದೇಸಿ ತಳಿಗಳ ಸಂರಕ್ಷಣೆಗೆ ಮುಡಿಪಾಗಿಟ್ಟಿದ್ದಾರೆ. ಇವರ ಸಂಗ್ರಹದಲ್ಲಿ 1,200ಕ್ಕೂ ಹೆಚ್ಚು ಭತ್ತದ ತಳಿಗಳಿವೆ. ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿದ ಅಪರೂಪದ ಭತ್ತದ ತಳಿಗಳನ್ನು, ತಮ್ಮ ಒಂದು ಎಕರೆ ಭತ್ತದ ಗದ್ದೆಯಲ್ಲಿ ಪ್ರತಿ ವರ್ಷ ಬೆಳೆಸುತ್ತಾರೆ. ದೇಸಿ ಭತ್ತದ ಮ್ಯೂಸಿಯಂ ಸ್ಥಾಪಿಸಿದ್ದಾರೆ.
ವಿವಿಧ ತಳಿಯ ಭತ್ತಗಳನ್ನು ಮಿಶ್ರವಾಗದಂತೆ ಬೆಳೆಸುವುದು ಸವಾಲಿನ ಕೆಲಸವಾದರೆ, ಬೀಜಕ್ಕೆ ಎತ್ತಿಟ್ಟ ನಂತರ ಉಳಿಯುವ ಸಣ್ಣ ಪ್ರಮಾಣದ ಭತ್ತವನ್ನು ಸಂಸ್ಕರಣೆ ಮಾಡುವುದು ಇನ್ನೊಂದು ಸವಾಲು. ದೊಡ್ಡ ಮಿಲ್‌ಗಳು 5-10 ಕೆ.ಜಿ. ಭತ್ತ ಸಂಸ್ಕರಣೆ ಮಾಡಿಕೊಡುವುದಿಲ್ಲ. ಮಾಡಿಕೊಟ್ಟರೂ, ಶುದ್ಧ ಅಕ್ಕಿ ಸಿಗುವ ಭರವಸೆ ಇಲ್ಲ. ರಾಸಾಯನಿಕದಲ್ಲಿ ಬೆಳೆದ ಹೈಬ್ರಿಡ್ ಅಕ್ಕಿಯ ಜೊತೆ ಮಿಶ್ರವಾಗುವ ಆತಂಕ.
ಪ್ರತಿವರ್ಷ ದೇಶದ ವಿವಿಧ ಭಾಗಗಳಿಂದ ಘನಿಖಾನರ ಭತ್ತ ಸಂರಕ್ಷಣೆಯ ಕಾರ್ಯ ನೋಡಲು ಆಸಕ್ತರು ಬರುತ್ತಾರೆ. ಅವರಿಗೆ ಭತ್ತದ ತಳಿಯ ಅಕ್ಕಿ ಹೇಗಿರುತ್ತದೆ ಎಂದು ತೋರಿಸಲು, ಕೈಯಿಂದ ಭತ್ತದ ಸಿಪ್ಪೆ ಸುಲಿದು ಅಕ್ತಿ ತೋರಿಸಬೇಕಾಗಿತ್ತು. ಕೈಯಿಂದ ಕುಟ್ಟಿ ಅಕ್ಕಿ ಮಾಡಿಕೊಳ್ಳಬೇಕಾಗಿತ್ತು. ಇವರ ಪಡಿಪಾಟಲನ್ನು ಕಂಡ ಬೆಂಗಳೂರಿನ ಸೆಲ್ಲೋ ಫೌಂಡೇಷನ್ ಸೌರಶಕ್ತಿ ಆಧಾರಿತ ಭತ್ತದ ಸಂಸ್ಕರಣಾ ಘಟಕ ಸ್ಥಾಪಿಸಲು ಮುಂದೆ ಬಂದಿತು.
ಕಿರುಗಾವಲಿನ ಹೊರವಲಯದ ಇವರ ಹೊಲದಲ್ಲೇ ಭತ್ತ ಸಂಸ್ಕರಣಾ ಘಟಕ ಸ್ಥಾಪಿಸಲಾಯಿತು. ಸೌರಶಕ್ತಿಯಿಂದ ನಡೆಯುವ ಅಕ್ಕಿ ಗಿರಣಿ ಇದಾಗಿರುವುದರಿಂದ, ದೊಡ್ಡ ಮಿಲ್‌ಗಳಂತೆ ಯಾಂತ್ರಿಕವಾಗಿ ಸಂಸ್ಕರಣೆ ನಡೆಯದು. ಸಣ್ಣ ಪ್ರಮಾಣದ ವಿವಿಧ ಯಂತ್ರಗಳನ್ನು ಬಳಸಿ ಆರು ಹಂತಗಳಲ್ಲಿ ಭತ್ತವನ್ನು ಅಕ್ಕಿ ಮಾಡಲಾಗುತ್ತದೆ.
ಮೊದಲು ಭತ್ತವನ್ನು ಪ್ರೀ-ಕ್ಲೀನರ್‌ಗೆ ಹಾಕಿ, ಕಲ್ಲು ಮಣ್ಣು, ಗಲೀಜು ತೆಗೆದು ಶುದ್ಧ ಮಾಡಲಾಗುವುದು, ನಂತರ ಶುದ್ಧ ಮಾಡಿದ ಭತ್ತವನ್ನು ಹಲ್ಲರ್‌ನಲ್ಲಿ ಹಾಕಿ ಸಿಪ್ಪೆ ಸುಲಿಯಲಾಗುತ್ತದೆ. ಮಿಲ್ ಮಾಡಿದ ಅಕ್ಕಿಯನ್ನು ಸಪರೇಟರ್‌ಗೆ ಹಾಕಿದರೆ, ಅಕ್ತಿ ಮತ್ತು ಉಳಿದ ಭತ್ತ ಪ್ರತ್ಯೇಕವಾಗುತ್ತವೆ. ಇಲ್ಲಿ ಸಿಗುವ ಉಳಿಕೆ ಭತ್ತವನ್ನು ಮತ್ತೆ ಹಲ್ಲರ್‌ಗೆ ಹಾಕಿ ಸಂಸ್ಕರಿಸಲಾಗುತ್ತದೆ. ನಾಲ್ಕನೇ ಹಂತದಲ್ಲಿ, ಸಂಸ್ಕರಿಸಿದ ಅಕ್ಕಿಯನ್ನು ಡಿಸ್ಟೋನರ್‌ಗೆ ಹಾಕಿ ಸಣ್ಣ ಕಲ್ಲು ಮತ್ತು ಮಣ್ಣು ತೆಗೆಯಲಾಗುತ್ತದೆ. ಮಿಲ್ ಮಾಡಿದ ಅಕ್ಕಿಯಲ್ಲಿ ತುಂಡಾದ ಅಕ್ಕಿಯ ನುಚ್ಚು ಕೂಡ ಇರುತ್ತದೆ. ಅದನ್ನು ಪ್ರತ್ಯೇಕಿಸಲು ಗ್ರೇಡರ್‌ಗೆ ಅಕ್ಕಿಯನ್ನು ಹಾಕಿದರೆ, ಗುಣಮಟ್ಟದ ಅಕ್ಕಿ ಮತ್ತು ನುಚ್ಚು ಪ್ರತ್ಯೇಕವಾಗುತ್ತವೆ.
ಕೊನೆಯ ಹಂತದಲ್ಲಿ ಪಾಲಿಷರ್ ಯಂತ್ರಕ್ಕೆ ಅಕ್ಕಿಯನ್ನು ಹಾಕಿ, ನಮಗೆ ಬೇಕಾದ ರೀತಿ ಅಕ್ಕಿಯನ್ನು ಪಾಲೀಷ್ ಮಾಡಲಾಗುತ್ತದೆ. ಪಾಲೀಷ್ ಮಾಡದ ಅಕ್ಕಿ ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ, ಘನಿಖಾನ್‌ರವರು ಹೆಚ್ಚು ಪಾಲೀಷ್ ಮಾಡಲು ಹೋಗುವುದಿಲ್ಲ.
ಅಕಿ ಗಿರಣಿ ನಡೆಯಲು ಬಿರು ಬಿಸಿಲೇ ಇರಬೇಕು ಎಂದೇನಿಲ್ಲ. ಮೋಡ ಮುಸುಕಿದ ವಾತಾವರಣವಿದ್ದರೂ ಒಂದಷ್ಟು ಬಿಸಿಲು ಇದ್ದರೆ ಅಕ್ಕಿ ಗಿರಣಿ ಕೆಲಸ ಮಾಡುತ್ತದೆ. ಒಂದು ಗಂಟೆಗೆ 75 ಕೆ.ಜಿ. ಭತ್ತವನ್ನು ಸಂಸ್ಕರಣೆ ಮಾಡಬಹುದಾಗಿದೆ. ಒಬ್ಬರೇ ಸಂಸ್ಕರಣಾ ಘಟಕವನ್ನು ನಿರ್ವಹಿಸಬಹುದು. ‘ಸುತ್ತಮುತ್ತಲಿನ ಗ್ರಾಮಗಳ ರೈತರು ತರುವ ಭತ್ತವನ್ನು ನಾನೇ ಮಿಲ್ ಮಾಡಿಕೊಡುತ್ತೇನೆ. ಮನೆಗೆಲಸ ಮಾಡಿಕೊಳ್ಳುತ್ತಾ, ಅಕ್ಕಿ ಗಿರಣಿ ಕೂಡ ನಡೆಸಬಹುದು. ಮಹಿಳೆಯರಿಗೆ ಸ್ವಯಂ ಉದ್ಯೋಗ ಸಿಗುತ್ತದೆ’ ಎನ್ನುತ್ತಾರೆ ಘನಿಖಾನ್ ಮಡದಿ ಸೈಯದ್ ಫೀರದೊಸ್. ಘನಿಖಾನ್ ಇಲ್ಲದೆ ಇರುವಾಗ, ಅಕ್ಕಿ ಗಿರಣಿಯ ಉಸ್ತುವಾರಿ ಇವರೇ ನೋಡಿಕೊಳ್ಳುತ್ತಾರೆ.
ಸಂಪೂರ್ಣವಾಗಿ ಸೌರಶಕ್ತಿಯಿಂದ ನಡೆಯುವ ಮಿಲ್ ಇದು. ದೇಸಿ ಭತ್ತಗಳು ತುಂಡಾಗದೆ, ಪಾಲೀಷ್ ಇಲ್ಲದೆ ಮೂಲ ಗುಣ ಮತ್ತು ಬಣ್ಣವನ್ನು ಉಳಿಸಿಕೊಳ್ಳುವ ಅವಕಾಶವಿದೆ. ಕೆಂಪು, ಕಪ್ಪು, ಹಸಿರು, ಕಂದು ಬಣ್ಣದ ಪಾಲೀಷ್ ಮಾಡದ ಅಕ್ಕಿಗಳ ನೋಡುವುದೇ ಒಂದು ಚೆಂದ. ತಮ್ಮ ಭತ್ತದ ಗಿರಣಿಯಲ್ಲಿ ಸಂಸ್ಕರಿಸಿದ ಅಕ್ಕಿಗಳನ್ನು ತಮ್ಮದೇ ವಲಯದ ಮೈಸೂರಿನ ಗ್ರಾಹಕರಿಗೆ ಕೊಡುತ್ತಾರೆ. ದೇಶದ ವಿವಿಧ ಭಾಗಗಳ ಜನಪ್ರಿಯ ದೇಸಿ ಭತ್ತದ ತಳಿಗಳ ಭತ್ತವನ್ನು ಸಂಸ್ಕರಿಸಿ, ಗ್ರಾಹಕರಿಗೆ ಕೊಡುವ ಆಶಯ ಘನಿಖಾನರದು.
6 ಕಿ.ಲೋ. ವ್ಯಾಟ್ ಸಾಮರ್ಥ್ಯದ ಅಕ್ಕಿ ಗಿರಣಿ ಸ್ಥಾಪನೆಗೆ 21 ಲಕ್ಷ ರೂಪಾಯಿ ಬೇಕು. ಇದರಲ್ಲಿ 16.5 ಲಕ್ಷ ಯಂತ್ರಗಳ ಖರೀದಿಗೆ ಮತ್ತು 5 ಲಕ್ಷ ರೂ. ಕಟ್ಟಡ ನಿರ್ಮಾಣಕ್ಕೆ ಖರ್ಚಾಗಿದೆ. ಸೆಲ್ಲೋ ಫೌಂಡೇಷನ್‌ನ ಉದಾರ ನೆರವಿನಿಂದ ಸೋಲಾರ್ ಅಕ್ಕಿ ಗಿರಣಿ ಸ್ಥಾಪಿತವಾಗಿದೆ. ಕಾವೇರಿ ಬಯಲು ಭತ್ತದ ತವರು, ಅಗ್ಗದ ಬೆಲೆಗೆ ಭತ್ತವನ್ನು ದಲ್ಲಾಳರಿಗೆ ಕೊಟ್ಟು ಕೈ ಸುಟ್ಟುಕೊಳ್ಳುವ ಬದಲು, ಹತ್ತಾರು ರೈತರು ಸೇರಿ ಸಣ್ಣ ಪ್ರಮಾಣದ ಅಕ್ಕಿ ಗಿರಣಿ ಸ್ಥಾಪಿಸಿ, ತಾವು ಬೆಳೆದ ಭತ್ತ ತಾವೇ ಸಂಸ್ಕರಿಸಿ ಗ್ರಾಹಕರಿಗೆ ಮಾರುವುದರಿಂದ ಹೆಚ್ಚಿನ ಲಾಭ ಮಾಡಿಕೊಳ್ಳಬಹುದು. ಮಹಿಳಾ ಸಂಘಗಳು ಕೂಡ ಇದನ್ನೊಂದು ಆದಾಯ ಉತ್ಪನ್ನ ಕಾರ್ಯಕ್ರಮವಾಗಿ ಬಳಸಿಕೊಳ್ಳುವ ಅವಕಾಶವಿದೆ. ಅಂಥ ಅವಕಾಶವನ್ನು ಸಾಕಾರಗೊಳಿಸಿದ ಸೈಯದ್ ಘನಿಖಾನ್ ಅಭಿನಂದನಾರ್ಹರು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಘನಿಖಾನ್ – 99017 13351 ರವರನ್ನು ಸಂಪರ್ಕಿಸಬಹುದು.
ಬೆಂಗಳೂರು: ಕಾಂಗ್ರೆಸ್ ಸರ್ಕಾರದಿಂದ ಕನ್ನಡದ ಉದ್ಧಾರ ಸಾಧ್ಯವೇ ಇಲ್ಲ, ಕನ್ನಡ ಶಾಲೆಗಳ ಅಸ್ತಿತ್ವ ಉಳಿಯುವ ಭರವಸೆ ಇಲ್ಲ ಎಂದು ಬಿಜೆಪಿ…
ಮಂಡ್ಯ: ರಾಷ್ಟ್ರದ ಜಿಡಿಪಿಯಲ್ಲಿ ಕೃಷಿ ಪಾಲು ಶೇ.೨೦ ರಷ್ಟು ಇದ್ದು, ಶೇ.೬೦ ರಷ್ಟು ಜನರು ಕೃಷಿ ಅವಲಂಭಿಸಿದ್ದಾರೆ. ಆದ್ದರಿಂದ ರಾಷ್ರ್ಟದ…
ಕುವೈತ್/ನವದೆಹಲಿ: 26ನೇ ಅರೇಬಿಯನ್ ಗಲ್ಫ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಕುವೈತ್ ದೊರೆ ಶೇಖ್ ಮಿಶಾಲ್…
371 J ಕೊಡುಗೆಯಾಗಿ 371 ಬೆಡ್ ಗಳ ಆಸ್ಪತ್ರೆ: ಸಿಎಂ ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಉದ್ದೇಶ…
‘ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಈಗ ಒಂದು ಫ್ಯಾಶನ್ ಆಗಿಬಿಟ್ಟಿದೆ. ಹೀಗೆ ಹೇಳುವವರು ಭಗವಂತನ ಹೆಸರನ್ನಾದರೂ ಇಷ್ಟು ಬಾರಿ ಸ್ಮರಿಸಿದ್ದರೆ ಅವರಿಗೆ…
ರಸ್ತೆ ಬದಿಯೇ ಕಸದ ವಾಹನ ನಿಲುಗಡೆಗೊಳಿಸಬೇಕಾದ ಪರಿಸ್ಥಿತಿ; ದುರ್ವಾಸನೆಯಿಂದ ಸಾರ್ವಜನಿಕರಿಕೆ ಕಿರಿಕಿರಿ ಕೃಷ್ಣ ಸಿದ್ದಾಪುರ ಸಿದ್ದಾಪುರ: ಪಟ್ಟಣದಲ್ಲಿ ಕಸ ವಿಲೇವಾರಿ…