cm siddaramaiah
ಕೆ.ಪಿ.ನಾಗರಾಜ್, ಮೈಸೂರು
ಕರ್ನಾಟಕ ರಾಜಕೀಯ ವ್ಯಾಕರಣವನ್ನೇ ಬದಲಾಯಿಸಿದ ಸಿದ್ದರಾಮಯ್ಯ
ಮೈಸೂರು ರಾಜಕಾರಣ ಅಂದರೆ ಒಮ್ಮೆ ಒಡೆಯರ್ ಯುಗ, ನಂತರ ದೇವರಾಜ ಅರಸು ಯುಗ. ಆಮೇಲೆ ನಡೆದಿದ್ದು ಜಾತಿ ಸಮೀಕರಣಗಳ ಮೃದಂಗ. ಆದರೆ ಕಳೆದ ಎರಡು ದಶಕಗಳಲ್ಲಿ ಈ ರಾಜಕೀಯ ನಕ್ಷೆಯ ಮಧ್ಯದಲ್ಲಿ ದೊಡ್ಡ ಅಕ್ಷರದಲ್ಲಿ ಬರೆಯಲ್ಪಟ್ಟ ಹೆಸರೆ – ಸಿದ್ದರಾಮಯ್ಯ.
ಮೈಸೂರು ರಾಜಕಾರಣದ ಮಣ್ಣಿನಲ್ಲಿ ಹುಟ್ಟಿದ, ಹೋರಾಟದಲ್ಲಿ ಬೆಳೆದ, ಅಧಿಕಾರ ತ್ಯಾಗ, ಅಧಿಕಾರ ವಂಚಿತ, ಅಧಿಕಾರ ಅನುಭವಿಸಿದ ರಾಜಕಾರಣಿ ಅಂದರೆ ಅದು ಸಿದ್ದರಾಮಯ್ಯ ಮಾತ್ರ. ಕರ್ನಾಟಕ ರಾಜಕಾರಣದಲ್ಲಿ ಕೆಲವರು ಹುದ್ದೆ ಹಿಡಿದು ದೊಡ್ಡವರಾಗುತ್ತಾರೆ. ಕೆಲವರು ದೊಡ್ಡವರಾಗಿದ್ದರಿಂದ ಹುದ್ದೆ ಹುಡುಕಿಕೊಂಡು ಬರುತ್ತದೆ. ಆದರೆ ಸಿದ್ದರಾಮಯ್ಯ ಈ ಎರಡಕ್ಕಿಂತ ವಿಭಿನ್ನ. ಸಿದ್ದರಾಮಯ್ಯ ಕೇವಲ ಮುಖ್ಯಮಂತ್ರಿ ಅಲ್ಲ. ಸಿದ್ದರಾಮಯ್ಯ ಕೇವಲ ಒಬ್ಬ ರಾಜಕೀಯ ನಾಯಕ ಅಲ್ಲ. ಬದಲಾಗಿ ಸಿದ್ದರಾಮಯ್ಯ ಅಂದರೆ ಒಂದು ವರ್ಗದ ಕೋಪದ ಧ್ವನಿ, ಒಂದು ಸಮಾಜದ ಆತ್ಮಗೌರವ, ಮೈಸೂರಿನ ಮಣ್ಣಿನ ದನಿ, ಹಿಂದುಳಿದ ವರ್ಗದವರ ರಾಜಕೀಯದ ಭಾಷೆ ಎಂಬ ಮಟ್ಟಿಗೆ ರಾಜಕಾರಣ ಮಾಡಿದ್ದಾರೆ.
ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿ ಎಂಬ ಹಳ್ಳಿಯ ಕುರುಬ ಸಮುದಾಯದ ಬಡ ಕೃಷಿಕ ಕುಟುಂಬದಲ್ಲಿ ೧೯೪೮ರ ಆಗಸ್ಟ್ ೧೨ರಂದು ಹುಟ್ಟಿದ ಹುಡುಗನೊಬ್ಬ ಎರಡು ಬಾರಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಖುದ್ದು ಸಿದ್ದರಾಮಯ್ಯ ಅವರೇ ಇದನ್ನು ಅಂದುಕೊಂಡಿರಲಿಲ್ಲ. ಬಿ.ಎಸ್ಸಿ. ಓದಿ ನಂತರ ಕಾನೂನು ಪದವಿ ಪಡೆದು ಕೆಲ ಕಾಲ ವಕೀಲರಾಗಿಯೂ ಕೆಲಸ ಮಾಡಿದರು. ಆದರೆ ಅವರ ಮನಸ್ಸು ಕೋರ್ಟ್ನಲ್ಲಿ ಇರಲಿಲ್ಲ. ಅದು ಬೀದಿಯ ಸಭೆಗಳಲ್ಲಿ, ಜನರ ನೋವಿನಲ್ಲಿ, ರಾಜಕೀಯ ಚರ್ಚೆಗಳಲ್ಲಿ ಅಲೆದಾಡುತ್ತಿತ್ತು. ಪರಿಣಾಮ ಪೂರ್ಣ ಪ್ರಮಾಣದ ರಾಜಕಾರಣಿ ಆದರು.
ಕರ್ನಾಟಕದಲ್ಲಿ ಹಿಂದುಳಿದ ವರ್ಗದ ರಾಜಕಾರಣವನ್ನು ಹೊಸ ರೂಪಕ್ಕೆ ತಂದವರು ದೇವರಾಜ ಅರಸು. ಅವರ ನಂತರ ಆ ರಾಜಕೀಯ ಪರಂಪರೆಯನ್ನು ಬಲವಾಗಿ ಹಿಡಿದ ವ್ಯಕ್ತಿ ಸಿದ್ದರಾಮಯ್ಯ. ಆ ಕಾಲದ ಮೈಸೂರು ರಾಜಕಾರಣವನ್ನು ಅರ್ಥಮಾಡಿಕೊಳ್ಳಬೇಕು ಅಂದರೆ ಮೂರು ಸಂಗತಿಗಳನ್ನು ನೆನಪಿಟ್ಟುಕೊಳ್ಳಬೇಕು:
೧. ಒಕ್ಕಲಿಗರ ಪ್ರಭಾವ
೨. ಲಿಂಗಾಯತ ಪ್ರಭಾವ
೩. ಅರಸು ನಂತರ ಹಿಂದುಳಿದ ವರ್ಗದ ನಾಯಕತ್ವದ ಖಾಲಿತನ. ಈ ಖಾಲಿ ಜಾಗವನ್ನು ನಿಧಾನವಾಗಿ ತುಂಬಿದವರು ಸಿದ್ದರಾಮಯ್ಯ.
೧೯೯೦ರ ದಶಕದಲ್ಲಿ ಎಚ್.ಡಿ.ದೇವೇಗೌಡರ ನೇತೃತ್ವದ ಜನತಾ ಪರಿವಾರದಲ್ಲಿ ಸಿದ್ದರಾಮಯ್ಯ ದೊಡ್ಡ ಶಕ್ತಿಯಾಗಿ ಬೆಳೆದರು. ೧೯೯೪ರಲ್ಲಿ ಜನತಾದಳ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಹಣಕಾಸು ಸಚಿವರಾದರು. ಅವರ ಬಜೆಟ್ ಭಾಷಣಗಳು ಗ್ರಾಮೀಣ ಕರ್ನಾಟಕದ ನೋವಿನ ಮೇಲೆ ನಿಂತಿದ್ದವು. ಅವರು ಹಳ್ಳಿಗಳ ಭಾಷೆ ಮಾತನಾಡಿದರು. ಆಗಲೇ ಸಿದ್ದರಾಮಯ್ಯ ಜನನಾಯಕ ಆಗುವ ಹೆದ್ದಾರಿಗೆ ಬಂದಿದ್ದರು.
ಆ ವೇಳೆಯಲ್ಲೆ ಜನತಾದಳದಲ್ಲಿ ಒಂದು ಗಂಭೀರ ಒಳಸಂಘರ್ಷ ಶುರುವಾಯಿತು. ದೇವೇಗೌಡ ಕುಟುಂಬದ ಪ್ರಭಾವ, ಸಿದ್ದರಾಮಯ್ಯ ಅವರ ಜನಪ್ರಿಯತೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗಳು ಈ ಸಂಘರ್ಷವನ್ನು ದೊಡ್ದದಾಗಿಸಿತು. ಇದು ಕೇವಲ ರಾಜಕೀಯ ವೈಮನಸ್ಯವಿಲ್ಲ. ಇದು “ವಾರಸುದಾರ ರಾಜಕಾರಣ”ದ ವಿರುದ್ಧ “ಸ್ವಯಂ ನಿರ್ಮಿತ ನಾಯಕ” ಎಂಬ ಹೋರಾಟದ ರೀತಿ ಮಾರ್ಪಾಟಾಯಿತು. ಆಗ ೨೦೦೫ರಲ್ಲಿ ಜಾತ್ಯತೀತ ಜನತಾದಳದಿಂದ ಅವರನ್ನು ಹೊರಹಾಕಲಾಯಿತು. ಆ ದಿನ ಸಿದ್ದರಾಮಯ್ಯ ಅತ್ತರು ಎನ್ನಲಾಗಿದೆ. ಆದರೆ ಆ ಕಣ್ಣೀರು ಅವರ ರಾಜಕೀಯ ಅಂತ್ಯವಾಗಲಿಲ್ಲ. ಅದು ಹೊಸ ಅಧ್ಯಾಯದ ಆರಂಭ ಆಯ್ತು.
೨೦೦೬ರಲ್ಲಿ ಕಾಂಗ್ರೆಸ್ ಸೇರಿದರು. “ಜಾ.ದಳದಿಂದ ಬಂದ ಈ ನಾಯಕ ಕಾಂಗ್ರೆಸ್‌ನಲ್ಲಿ ಉಳಿಯುತ್ತಾನಾ?” ಎಂದು ಅಂದು ಕಾಂಗ್ರೆಸ್‌ನಲ್ಲೇ ಹಲವರು ಅನುಮಾನಪಟ್ಟಿದ್ದರು. ಆದರೆ “ಅಹಿಂದ” ರಾಜಕೀಯ ಸಿದ್ದರಾಮಯ್ಯ ರಾಜಕೀಯದ ಅತ್ಯಂತ ದೊಡ್ಡ ಬ್ರ್ಯಾಂಡ್ ಆಯ್ತು. ಕರ್ನಾಟಕದಲ್ಲಿOBC ಮತದಾರರು: ಅಂದಾಜು ೩೨- ೩೫%, ದಲಿತ ಮತದಾರರು: ೧೭%, ಮುಸ್ಲಿಂ ಮತದಾರರು: ೧೨- ೧೩% ಈ ಮೂರು ವರ್ಗಗಳನ್ನು ಒಟ್ಟಿಗೆ ಹಿಡಿದ ರಾಜಕೀಯ ಸೂತ್ರವೇ ಅಹಿಂದ. ಇದೇ ಸಿದ್ದರಾಮಯ್ಯ ಪಾಲಿಗೆ ಅತಿ ದೊಡ್ಡ ಶಕ್ತಿಯೂ ಆಯಿತು. ೨೦೧೩ರಲ್ಲಿ ಸಿದ್ದರಾಮಯ್ಯ ಯುಗ ಆರಂಭ ಆಯ್ತು: ೨೦೧೩ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ೧೨೨ ಸ್ಥಾನಗಳನ್ನು ಗೆದ್ದಿತು. ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಅದು ಮೈಸೂರು ಭಾಗದ ರಾಜಕೀಯ ಮನಃಸ್ಥಿತಿಯ ಬದಲಾವಣೆ ಎಂದು ವಿಶ್ಲೇಷಿಸಲಾಯಿತು. ಕರ್ನಾಟಕದಲ್ಲಿ ಪೂರ್ಣ ೫ ವರ್ಷಗಳ ಅವಧಿ ಮುಗಿಸಿದ ಕಾಂಗ್ರೆಸ್ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಪ್ರಮುಖರು.
೨೦೧೮ರಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗದಿದ್ದರೂ, ಬಿಜೆಪಿಯನ್ನು ತಡೆಯಲು ಜಾ.ದಳಕ್ಕೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟಿತು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ರಾಜಕೀಯದಲ್ಲಿ ಕೆಲ ಸೋಲುಗಳು ಚುನಾವಣೆಯಲ್ಲಿ ಮಾತ್ರ ಬರುವುದಿಲ್ಲ. ಅವು ಇಂತಹ ಸನ್ನಿವೇಶಗಳ ಮೂಲಕ ಒಳಗೆ ಸೃಷ್ಟಿಯಾಗುತ್ತವೆ. ಗ್ರಾಮೀಣ ಭಾಷಣ ಶೈಲಿ, ವರ್ಗ ರಾಜಕಾರಣದ ಹಿಡಿತ, ಸಂಘಟನಾ ಸಾಮರ್ಥ್ಯ, ಜನರ ಜೊತೆ ನೇರ ಸಂಪರ್ಕ, ತಕ್ಷಣ ಪ್ರತಿಕ್ರಿಯಿಸುವ ರಾಜಕೀಯ ಸ್ವಭಾವ ಸಿದ್ದರಾಮಯ್ಯರನ್ನು ಈ ಕಾಲದ ರಾಜಕೀಯದಲ್ಲಿ ಬಹು ಎತ್ತರಕ್ಕೆ ನಿಲ್ಲಿಸಿದ್ದು ಸತ್ಯ.
ಅವರ ವಿರುದ್ಧವೂ ಅನೇಕ ಟೀಕೆಗಳಿವೆ. ಅತಿಯಾದ ವರ್ಗ ರಾಜಕಾರಣ ಮಾಡುತ್ತಾರೆ. ಹಿಂದೂ ವಿರೋಧಿ ಎಂಬ ಆರೋಪ. ಇದರ ನಡುವೆಯೂ ಅವರ ವಿರೋಧಿಗಳೂ ಒಪ್ಪುವ ಸಂಗತಿ ಏನೆಂದರೆ “ಸಿದ್ದರಾಮಯ್ಯ ಜನಸಾಮಾನ್ಯರ ನಾಡಿ ಗೊತ್ತಿರುವ ನಾಯಕ.” ಸಿದ್ದರಾಮಯ್ಯ ಒಂದರ್ಥದಲ್ಲಿ ದೇವರಾಜ ಅರಸರ ನಂತರದ ದೊಡ್ಡ ಸಾಮಾಜಿಕ ರಾಜಕೀಯ ಪ್ರಯೋಗ. ಒಬ್ಬ ಕುರುಬ ಹುಡುಗ ಕರ್ನಾಟಕದ ರಾಜಕೀಯ ವ್ಯಾಕರಣವನ್ನೇ ಬದಲಾಯಿಸಿದ್ದು ಅಚ್ಚರಿ ವಿಚಾರ. ಇತಿಹಾಸದಲ್ಲಿ ಕೆಲವರು ಗೆಲುವಿನಿಂದ ನೆನಪಾಗುತ್ತಾರೆ. ಕೆಲವರು ಹೋರಾಟದಿಂದ ನೆನಪಾಗುತ್ತಾರೆ. ಸಿದ್ದರಾಮಯ್ಯ-ಎರಡರಿಂದಲೂ ನೆನಪಾಗುವ ನಾಯಕನಾಗಿದ್ದಾರೆ.
ಸಿದ್ದರಾಮಯ್ಯ ನಂತರ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಒಂದೇ ಕೇಂದ್ರ ಬಿಂದುವಿನ ನಾಯಕತ್ವ ಕಾಣಿಸುತ್ತಿಲ್ಲ. ಸ್ಥಳೀಯ ನಾಯಕರಿದ್ದಾರೆ. ಸಚಿವರಿದ್ದಾರೆ. ಪ್ರಭಾವಿಗಳಿದ್ದಾರೆ. ಆದರೆ ಎಲ್ಲ ಸಮುದಾಯಗಳಿಗೂ ಒಪ್ಪುವ ಮಾಸ್ ನಾಯಕ ಇನ್ನೂ ಖಾಲಿ! ಸಿದ್ದರಾಮಯ್ಯ ಅಽಕಾರ ತ್ಯಾಗದಿಂದ ಕಾಂಗ್ರೆಸ್ ಪ್ರಮುಖವಾಗಿ ಮೂರು ರಾಜಕೀಯ ಪರಿಣಾಮಗಳನ್ನಂತೂ ಎದುರಿಸಲೇಬೇಕಿದೆ. ಕಾಂಗ್ರೆಸ್ ಒಳಗಿನ ಗುಂಪು ರಾಜಕೀಯ ಹೆಚ್ಚಾಗಬಹುದು. ಮೈಸೂರು ಭಾಗದ ಕಾಂಗ್ರೆಸ್‌ನಲ್ಲಿ ಈಗಾಗಲೇ ಹಲವು ಸ್ಥಳೀಯ ಶಕ್ತಿ ಕೇಂದ್ರಗಳಿವೆ. ಸಿದ್ದರಾಮಯ್ಯ ಅಧಿಕಾರ ಗದ್ದುಗೆ ಮೇಲೆ ಇದ್ದಾಗ ಮೇಲ್ನೋಟಕ್ಕಾಗಿ ಅವೆಲ್ಲಾ ಒಂದೇ ನೆರಳಿನೊಳಗೆ ಇದ್ದವು. ಆ ನೆರಳು ಇರುವುದಿಲ್ಲ. ಅಲ್ಲಿಗೆ ಒಳ ಜಗಳ ತಾರಕ್ಕಕ್ಕೆ ಏರಬಹುದು. ಸಿದ್ದರಾಮಯ್ಯ ಕೇವಲ ಒಬ್ಬ ಮುಖ್ಯಮಂತ್ರಿಯಾಗಿ ಅಷ್ಟೆ ಕಾಂಗ್ರೆಸ್‌ನಲ್ಲಿ ಇರಲಿಲ್ಲ. ಸಿದ್ದರಾಮಯ್ಯ ಒಂದು ‘ವೋಟ್ ಟ್ರಾನ್ಸ್‌ಫರ್ ಮೆಷಿನ್’ ರೀತಿ ಇದ್ದರು. ಸಿಎಂ ಗದ್ದುಗೆಯಿಂದ ದಿಢೀರ್ ನಿರ್ಗಮಿಸುವ ಕಾರಣ ಆ ಮೆಷಿನ್ ಹೇಗೆ ವರ್ಕ್ ಆಗುತ್ತೆ ಅನ್ನೋದೆ ಬಹು ದೊಡ್ಡ ಪ್ರಶ್ನೆ.
ಮೈಸೂರು ರಾಜಕಾರಣದ ಇತಿಹಾಸ ನೋಡಿದರೆ ಪ್ರತಿಯೊಂದು ಯುಗಕ್ಕೂ ಒಬ್ಬ ಕೇಂದ್ರ ನಾಯಕ ಇದ್ದಾನೆ. ಒಡೆಯರ್ ಯುಗ, ದೇವರಾಜ ಅರಸು ಯುಗ, ಜಾ.ದಳ ಕುಟುಂಬ ರಾಜಕಾರಣ, ಸಿದ್ದರಾಮಯ್ಯ ಯುಗ. ಪ್ರಶ್ನೆ ಏನೆಂದರೆ – ಮುಂದಿನ ಯುಗ ಯಾರದು? ರಾಜಕಾರಣದಲ್ಲಿ ಖಾಲಿ ಜಾಗ ಎಂದಿಗೂ ಖಾಲಿಯಾಗಿರುವುದಿಲ್ಲ. ಆದರೆ ಸಿದ್ದರಾಮಯ್ಯ ಬಿಟ್ಟ ಜಾಗ ತುಂಬಲು ಕೇವಲ ನಾಯಕ ಸಾಕಾಗುವುದಿಲ್ಲ. ಜನಮನ ಓದಬಲ್ಲ ರಾಜಕೀಯ ಭಾಷೆ ಬೇಕು. ಮೈಸೂರು ರಾಜಕಾರಣ ಈಗ ಈ ಹೊಸ ಭಾಷೆಯ ನಿರೀಕ್ಷೆಯಲ್ಲಿದೆ.
” ಸಿದ್ದರಾಮಯ್ಯ ನಂತರ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಒಂದೇ ಕೇಂದ್ರ ಬಿಂದುವಿನ ನಾಯಕತ್ವ ಕಾಣಿಸುತ್ತಿಲ್ಲ. ಸ್ಥಳೀಯ ನಾಯಕರಿದ್ದಾರೆ. ಸಚಿವರಿದ್ದಾರೆ. ಪ್ರಭಾವಿಗಳಿದ್ದಾರೆ. ಆದರೆ ಎಲ್ಲ ಸಮುದಾಯಗಳಿಗೂ ಒಪ್ಪುವ ಮಾಸ್ ನಾಯಕ ಇನ್ನೂ ಖಾಲಿ!”
ಈ ಬಾರಿಯ ಬೇಸಿಗೆಯ ಧಗೆ ಮಧ್ಯಾಹ್ನದ ವೇಳೆ ಯಾರೂ ಹೊರಗಡೆ ಓಡಾಡದಂತೆ ಮಾಡಿದೆ. ವಾಹನ ಸವಾರರ ಸ್ಥಿತಿಯಂತೂ ಹೇಳತೀರದು. ರಸ್ತೆ…
ರಾಜ್ಯದಲ್ಲಿ ಅತ್ಯಂತ ಪ್ರಬಲ ನಾಯಕರಲ್ಲಿ ಸಿದ್ದರಾಮಯ್ಯನವರೂ ಕೂಡ ಒಬ್ಬರು. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದರ ಮೂಲಕ ಅವರ ಆಡಳಿತ…
ಮಹಾತ್ಮ ಗಾಂಧೀಜಿ ಅವರ ಆತ್ಮಕತೆಗೆ ನೂರು ವರ್ಷ ಸಂದಿರುವುದು ಸಂತಸದ ವಿಷಯ. ಇವತ್ತು ಗಾಂಧಿಜಿ ಅವರ ವಿಚಾರಕ್ಕೆ ಏನಾಗುತ್ತಿದೆ? ಆಚಾರಕ್ಕೆ…
ಗೋವಿಂದರಾಜು ಲಕ್ಷ್ಮೀಪುರ, ಇಂಗ್ಲಿಷ್ ಸಹಪ್ರಾಧ್ಯಾಪಕ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು ಭಗವಂತ ಯೇಸು ನಮಗೆ ದಾರಿ ಅಂದರೆ, ಶಾಂತಿ…
ಗಾಂಧಿ ಅಭಿಯಾನ ಅರಿವಿನ ಯಾನ ಗೊತ್ತಾಗಿದ್ದ ದಿನ ಬಂತು. ನನ್ನ ಆಗಿನ ಸ್ಥಿತಿಯನ್ನು ವರ್ಣಿಸುವುದು ಕಷ್ಟ. ಒಂದು ಕಡೆ ಸುಧಾರಣೆಯ ಮಾರ್ಗದ…
ಕೆ.ಬಿ.ರಮೇಶನಾಯಕ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್‌ಗೆ ಮಂತ್ರಿ ಸ್ಥಾನ ಸಾಧ್ಯತೆ ಎಚ್‌ಸಿಎಂಗೆ ಪ್ರಬಲ ಖಾತೆ ಕೊಡಿಸಲು ಹೈಕಮಾಂಡ್ ಮಟ್ಟದಲ್ಲಿ…