ವಿಲ್ಪ್ರೆಡ್ ಡಿಸೋಜ
ಸೈದ್ಧಾಂತಿಕವಾಗಿ ಸಿದ್ದರಾಮಯ್ಯ ಅವರನ್ನು ಮೀರಿಸುವ ಇನ್ನೊಬ್ಬ ರಾಜಕಾರಣಿ ಇಲ್ಲ
ಡಿ.ದೇವರಾಜ ಅರಸು ಅವರ ಸಮಕ್ಕೆ ನಿಲ್ಲುವ ಮುತ್ಸದ್ದಿ
ಇದು ಸಂಭ್ರಮ ಪಡುವ ಸಮಯ ಅಲ್ಲ ರಾಜಕೀಯ ಅನಿವಾರ್ಯತೆಯೋ, ಒತ್ತಡವೋ.., ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗರ ನಡುವಿನ ಹಗ್ಗ ಜಗ್ಗಾಟದಲ್ಲಿ ಈ ಬಾರಿ ಡಿಕೆಶಿ ಬಣ ಗೆದ್ದಿದೆ. ಕರ್ನಾಟಕದ ಅಹಿಂದ ಸಮುದಾಯದ ಆಶಯಕ್ಕೆ ಸೋಲಾಗಿದೆ. ಅಂತಿಮವಾಗಿ ಕರ್ನಾಟಕದ ಜನತೆ ಓರ್ವ ಮುತ್ಸದ್ದಿ ರಾಜಕಾರಣಿಯ ಆಡಳಿತದ ಅವಕಾಶದಿಂದ ವಂಚಿತವಾಗುತ್ತಿದೆ.
ಸುದೀರ್ಘ ರಾಜಕೀಯ ಅನುಭವ, ಶೋಷಿತ ಸಮುದಾಯಗಳು, ಹಿಂದುಳಿದ ವರ್ಗಗಳ ಪರವಾದ ನಿಲುವು, ಸಾಮಾಜಿಕ ನ್ಯಾಯಕ್ಕೆ ಬದ್ಧತೆ, ಸೈದ್ಧಾಂತಿಕ ಬದ್ಧತೆ ಮತ್ತು ರಾಜಕೀಯ ಸ್ಪಷ್ಟತೆ ಸಿದ್ದರಾಮಯ್ಯನವರ ಹೆಚ್ಚುಗಾರಿಕೆಯಾಗಿದೆ. ಹೀಗಾಗಿ ವಿಶಿಷ್ಟ ಶೈಲಿಯ ಜನಪರ ಆಡಳಿತದ ಮೂಲಕ ಮುಖ್ಯಮಂತ್ರಿ ಕುರ್ಚಿಗೆ ಘನತೆ ತಂದು ಕೊಡಲು ಅವರಿಗೆ ಸಾಧ್ಯವಾಯಿತು. ಈಗ ಅವರ ರಾಜೀನಾಮೆಯಿಂದ ತೆರವಾಗಲಿರುವ ಈ ಕುರ್ಚಿಯಲ್ಲಿ ‘ಕನಕಪುರ ಬಂಡೆ’ ಡಿ.ಕೆ.ಶಿವಕುಮಾರ್ ವಿರಾಜಮಾನರಾಗಲಿದ್ದಾರೆ.
ಸಮಾಜವಾದಿ ಸಿದ್ದು: ‘ನಾನು ರಾಹುಕಾಲ, ಗುಳಿಕ ಕಾಲ, ಯಮಗಂಡ ಕಾಲ ನೋಡಿ ಬಜೆಟ್ ಮಂಡನೆ ಮಾಡುವುದಿಲ್ಲ. ನನಗೆ ಎಲ್ಲವೂ ಒಂದೇ ದಿನ. ಹೀಗಾಗಿ ಯುಗಾದಿ, ಶಿವರಾತ್ರಿ ದಿನ ಕೂಡ ಮಾಂಸ ತಿನ್ನುತ್ತೇನೆ. ಇದು ನನ್ನ ಆಯ್ಕೆ. ಇದರಲ್ಲಿ ತಪ್ಪೇನು..!? ” ಇದು ೨೦೨೬-೨೭ನೇ ಸಾಲಿನ ರಾಜ್ಯದ ಆಯವ್ಯಯದ ಮೇಲಿನ ಚರ್ಚೆಗೆ ಉತ್ತರ ಕೊಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ ಮಾತುಗಳು. ಪೊಳ್ಳು ಧಾರ್ಮಿಕತೆಯ ಮುಖವಾಡವೇ ರಾಜಕಾರಣದ ಉಸಿರಾಗಿರುವ ಈ ದಿನಗಳಲ್ಲಿ ಇಂತಹ ಹೇಳಿಕೆಗಳನ್ನು ಸದನದಲ್ಲಿ ನೀಡುವ ಎದೆಗಾರಿಕೆ ಇರುವ ಏಕೈಕ ರಾಜಕಾರಣಿ ಸಿದ್ದರಾಮಯ್ಯ. ಪ್ರಸ್ತುತ ಕಾಲಘಟ್ಟದಲ್ಲಿ ಸೈದ್ಧಾಂತಿಕವಾಗಿ ಸಿದ್ದರಾಮಯ್ಯ ಅವರನ್ನು ಮೀರಿಸುವ ಇನ್ನೊಬ್ಬ ರಾಜಕಾರಣಿ ಇಲ್ಲ.
ಅಹಿಂದ ಸಮುದಾಯಗಳ ಪ್ರಭಾವಿ ನಾಯಕ, ದಿವಂಗತ ಡಿ.ದೇವರಾಜ ಅರಸು ಅವರ ಸಮಕ್ಕೆ ನಿಲ್ಲುವ ಮುತ್ಸದ್ದಿ, ಅತಿ ಹೆಚ್ಚು ಬಾರಿ ಯಶಸ್ವಿಯಾಗಿ ಬಜೆಟ್ ಮಂಡನೆ ಮಾಡಿದ ಸಾಧಕ ಎನ್ನುವ ಹೊಗಳಿಕೆಗಳಿಗೆ ಸಿದ್ದರಾಮಯ್ಯನವರು ಪಾತ್ರರಾಗಿದ್ದಾರೆ. ತಾನೊಬ್ಬ ಸಮಾಜವಾದಿ ಎಂದು ಸಿದ್ದರಾಮಯ್ಯ ಸಾರ್ವಜನಿಕವಾಗಿ ಹೇಳಿಕೊಂಡಿದ್ದನ್ನು ನಾನು ಗಮನಿಸಿಲ್ಲ. ಆದರೆ ಸುದ್ದಿ ಮಾಧ್ಯಮಗಳು ಮತ್ತು ಅವರ ಪ್ರಗತಿಪರ ಅಭಿಮಾನಿಗಳ ಪಾಲಿಗೆ ಸಿದ್ದು ಸಮಾಜವಾದಿಯೇ ಆಗಿದ್ದಾರೆ.
ಕೆಲವೊಮ್ಮೆ ಅವರ ಮಾತು, ವರ್ತನೆ ಮತ್ತು ನಿರ್ಧಾರಗಳನ್ನು ನೋಡಿದಾಗ, ಹೌದಲ್ವಾ.., ನಮ್ಮ ಸಿದ್ದರಾಮಯ್ಯ ಸಮಾಜವಾದಿಯೇ ಹೌದು ಎಂದು ಅನಿಸುತ್ತದೆ. ಆದರೆ ಇನ್ನೂ ಕೆಲವು ಸಂದರ್ಭಗಳಲ್ಲಿ ಅವರ ವರ್ತನೆ ಮತ್ತು ನಿರ್ಧಾರಗಳು ಮತ್ತು ಕೆಲವು ವ್ಯಕ್ತಿಗಳ ಜೊತೆಗಿನ ಅವರ ಆಪ್ತತೆ ಮತ್ತು ಸಂಬಂಧಗಳನ್ನು ನೋಡಿದಾಗ ‘ಇದೆಂತಹ ಸಮಾಜವಾದ..!!’ ಎಂದು ಅಚ್ಚರಿಯೂ ಆಗುತ್ತದೆ. ಅದೇನೇ ಇರಲಿ. ಸದ್ಯಕ್ಕಂತೂ ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರನ್ನು ‘ಸಮಾಜವಾದಿ’ ಎಂದೇ ಗುರುತಿಸಲಾಗುತ್ತದೆ.
ಗೌಡರ ಗದ್ದಲದಲ್ಲಿ ಕಳೆದು ಹೋಗುತ್ತಿದ್ದ ಸಿದ್ದರಾಮಯ್ಯ: ರಾಜಕಾರಣದಲ್ಲಿ ಆಸಕ್ತಿ ಇರುವ ಒಬ್ಬ ಪತ್ರಕರ್ತನಾಗಿ, ಅಭಿವೃದ್ಧಿ ಕಾರ್ಯಕರ್ತನಾಗಿ ನಾನು ಸಿದ್ದರಾಮಯ್ಯ ಅವರನ್ನು ಗಮನಿಸುತ್ತಾ ಬಂದಿದ್ದೇನೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಎಚ್.ಡಿ.ದೇವೇಗೌಡ ಮತ್ತು ಸಿದ್ದರಾಮಯ್ಯ ಅವರ ಜೋಡಿ ಜಾತ್ಯತೀತ ಜನತಾ ದಳವನ್ನು ಯಶಸ್ವಿಯಾಗಿ ಸಂಘಟಿಸುತ್ತಿದ್ದಾಗ ನಾನು ಅವರಿಬ್ಬರ ಅಭಿಮಾನಿಯಾಗಿ ಬಿಟ್ಟಿದ್ದೆ. ಮುಂದೆ ಪರಿಸ್ಥಿತಿ ಏಕಾಏಕೀ ಬದಲಾಗಿ ಹೋಯಿತು. ದೇವೇಗೌಡರ ಕುಟುಂಬ ರಾಜಕಾರಣದ ಮೋಹದಲ್ಲಿ ತನ್ನ ರಾಜಕೀಯ ಭವಿಷ್ಯಕ್ಕೆ ತೊಂದರೆ ಇದೆ ಎನ್ನುವ ತೀರ್ಮಾನಕ್ಕೆ ಬಂದಿದ್ದ ಸಿದ್ದರಾಮಯ್ಯ ಅಹಿಂದ ಸಂಘಟನೆಯ ಮೂಲಕ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿಬಿಟ್ಟರು. ಇದು ಗೌಡರನ್ನು ಯಾವ ಮಟ್ಟಕ್ಕೆ ಕೆರಳಿಸಿತು ಎಂದರೆ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಿಬಿಟ್ಟರು. ಸಿದ್ದರಾಮಯ್ಯ ಪಕ್ಷದಲ್ಲಿ ಇದ್ದರೆ ಮಗ ಕುಮಾರ ಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ಆಗುವುದಿಲ್ಲ ಎನ್ನುವ ಭಯಕ್ಕೆ ಗೌಡರು ಇಂತಹ ನಿರ್ಧಾರ ಕೈಗೊಂಡಿದ್ದರು.
ಆರ್ಥಿಕ ಸಮಸ್ಯೆಯಿಂದಾಗಿ ಅಹಿಂದ ಸಂಘಟನೆಯನ್ನು ಅಖಿಲ ಭಾರತ ಪ್ರಗತಿ ಪರ ಜನತಾ ದಳ ಹೆಸರಿನ ರಾಜಕೀಯ ಪಕ್ಷವಾಗಿ ಕಟ್ಟುವ ಆಸೆಯನ್ನು ಸಿದ್ದರಾಮಯ್ಯ ಕೈಬಿಟ್ಟರು. ೨೦೦೬ ಡಿಸೆಂಬರ್ ತಿಂಗಳಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ರಾಜಕೀಯ ಭವಿಷ್ಯವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ನಾನಾಗ ಮೈಸೂರಿನಲ್ಲೇ ಇದ್ದೆ. ಪತ್ರಕರ್ತನ ವೃತ್ತಿಗೆ ರಾಜೀನಾಮೆ ಕೊಟ್ಟು ಪ್ರತಿಷ್ಠಿತ ಅಬ್ದುಲ್ ನಜೀರ್ ಸಾಬ್ ಸಂಸ್ಥೆಯಲ್ಲಿ ಸಲಹೆಗಾರ ಹುದ್ದೆ ನಿರ್ವಹಿಸುತ್ತಿದ್ದೆ. ಮೈಸೂರಿನಲ್ಲೇ ೨ ವರ್ಷ ಪತ್ರಕರ್ತನಾಗಿ ಕೆಲಸ ಮಾಡಿದ್ದ ಕಾರಣ ಉಪ ಚುನಾವಣೆಯ ಪ್ರತಿಯೊಂದು ಮಾಹಿತಿಯೂ ಲಭ್ಯವಾಗುತ್ತಿತ್ತು. ಹರದನಹಳ್ಳಿಯ ದೇವೇಗೌಡರು ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸುವ ನಿರ್ಧಾರ ಮಾಡಿದ್ದರು. ಆಗ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಎಚ್.ಡಿ.ಕುಮಾರ ಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೀರಶೈವ ಸಮಾಜಕ್ಕೆ ಸೇರಿದ ಶಿವಬಸವಯ್ಯ ಎನ್ನುವ ದುಡ್ಡಿನ ಕುಳವನ್ನು (ಕ್ಲಾಸ್ ಒನ್ ಗುತ್ತಿಗೆದಾರ) ಸಿದ್ದರಾಮಯ್ಯ ಅವರ ಮುಂದೆ ಜಾ.ದಳ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದರು. ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಮತ್ತು ದುಡ್ಡಿನ ಹೊಳೆ ಹರಿಸುವುದು ಹೇಗೆ ಎನ್ನುವುದನ್ನು ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಕಣ್ಣಾರೆ ನೋಡಿದರು, ಅನುಭವಿಸಿದರು. ಒಂದು ಚುನಾವಣೆ ಗೆಲ್ಲಲು ಅಧಿಕಾರ ದುರುಪಯೋಗವನ್ನು ಹೇಗೆಲ್ಲಾ ಮಾಡಬಹುದು ಎಂದು ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಜೋಡಿ ತೋರಿಸಿಕೊಟ್ಟಿತು..!! ಸಿದ್ದರಾಮಯ್ಯ ಅವರಿಗೆ ಆಪ್ತ ಸ್ನೇಹಿತರಾಗಿದ್ದ ಕೆಲವು ಹಿರಿಯ ಅಧಿಕಾರಿಗಳು ಜಾತಿ ಕಾರಣಕ್ಕಾಗಿ ದೇವೇಗೌಡರ ಬಣ ಸೇರಿ ಗುಟ್ಟಾಗಿ ಸಿದ್ದರಾಮಯ್ಯ ಅವರ ಸೋಲಿಗಾಗಿ ಕೆಲಸ ಮಾಡಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಇಂತಹ ಹುನ್ನಾರಗಳಿಂದ ಸಿದ್ದರಾಮಯ್ಯ ಕೇವಲ ೨೫೭ ಮತಗಳ ಅಂತರದಿಂದ ಗೆದ್ದು ನಿಟ್ಟುಸಿರು ಬಿಡುವ ಸ್ಥಿತಿ ನಿರ್ಮಾಣ ಆಗಿತ್ತು. ಈ ಗೆಲುವು ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿತು.
ಈ ಉಪ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಯುವ ನಾಯಕರೊಬ್ಬರು ಅವರ ಮೇಲೆ ಸಿಟ್ಟು ಮಾಡಿಕೊಂಡು ಪಕ್ಷ ತೊರೆಯುವ ನಿರ್ಧಾರ ಮಾಡಿದ್ದರು. ನನಗೆ ವೈಯಕ್ತಿಕವಾಗಿ ಗೆಳೆಯರಾಗಿದ್ದ ಆ ಯುವಕನ ಜೊತೆಗೆ ಮಾತನಾಡಿ ಅವರನ್ನು ಇಂತಹ ನಿರ್ಧಾರ ತೆಗೆದುಕೊಳ್ಳದಂತೆ ಮನ ಒಲಿಸಲು ಸಾಧ್ಯವಾಗಿತ್ತು. ಜೊತೆಗೆ ಮೈಸೂರಿನ ‘ಆಂದೋಲನ’ ಪತ್ರಿಕೆ ಸಿದ್ದರಾಮಯ್ಯ ಅವರ ಜೊತೆಗೆ ಗಟ್ಟಿಯಾಗಿ ನಿಂತಿತ್ತು. ‘ಆಂದೋಲನ’ ಪತ್ರಿಕೆಯ ಬೆಂಬಲ ಇಲ್ಲದೆ ಹೋಗಿದ್ದರೆ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಸಿದ್ದರಾಮಯ್ಯಅವರ ಪಾಲಿಗೆ ಘೋರವಾಗಿರುತ್ತಿತ್ತು. ದೊಡ್ಡ ಗೌಡರ ಗದ್ದಲದಲ್ಲಿ ಸಿದ್ದರಾಮಯ್ಯ ಖಂಡಿತವಾಗಿಯೂ ರಾಜಕೀಯವಾಗಿ ಕಳೆದುಹೋಗುತ್ತಿದ್ದರು.
ಸಿದ್ದರಾಮಯ್ಯ ಪರ ಮತ್ತು ವಿರೋಧ: ಒಬ್ಬ ಅಭಿವೃದ್ಧಿ ಕಾರ್ಯಕರ್ತನಾಗಿ ನಾನು ಈಗಲೂ ಸಿದ್ದರಾಮಯ್ಯ ಅವರ ಅಭಿಮಾನಿ. ಹಾಗೆ ಹೇಳಿದ ಮಾತ್ರಕ್ಕೆ ಅವರ ಭಕ್ತ ಅಲ್ಲ. ೧೭ವರ್ಷಗಳ ಕಾಲ ಮೈಸೂರಿನಲ್ಲಿ ಇದ್ದು ಕಾರ್ಯ ನಿರ್ವಹಿಸಿದ ಅನುಭವದ ಆಧಾರದಲ್ಲಿ ಸಿದ್ದರಾಮಯ್ಯ ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಸ್ವಲ್ಪ ಮಟ್ಟಿನ ಅರಿವು ನನಗೆ ಇದೆ. ಅವರು ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲಿ ನಾನು ಮತ್ತು ಈಗ ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನ ಗೊಂಡಿರುವ ಗೆಳೆಯ ಶಿವಕುಮಾರ್ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುಮಾರು ೨ ಗಂಟೆಗಳ ಕಾಲ ಸಿದ್ದರಾಮಯ್ಯ ಅವರ ಜೊತೆಗೆ ಲೋಕಾಭಿರಾಮವಾಗಿ ವಿಚಾರ ವಿನಿಮಯ ಮಾಡಿದ್ದೆವು. ಅಂದು ಅವರು ನಮ್ಮ ಜೊತೆಗೆ ಚರ್ಚೆ ಮಾಡಿದ್ದ ಕೆಲವು ಪ್ರಮುಖ ವಿಚಾರಗಳು ನನಗೆ ಈಗಲೂ ನೆನಪಿನಲ್ಲಿವೆ. ಆನಂತರದಲ್ಲಿ ಅವರು ಎರಡು ಅವಧಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ. ಆದರೆ ಅವರೇ ಪ್ರತಿಪಾದಿಸಿದ ವಿಚಾರಗಳನ್ನು ಅನುಷ್ಠಾನ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಈ ಕುರಿತು ನನಗೆ ಬೇಸರ ಇದೆ. ಆದರೆ ಕಾಂಗ್ರೆಸ್ ನಂತಹ ಸೈದ್ಧಾಂತಿಕ ಬದ್ಧತೆ ಇಲ್ಲದ ಅರೆ ಮನುವಾದಿ ಪಕ್ಷದಲ್ಲಿ ಇದ್ದುಕೊಂಡು ಸರ್ಕಾರ ನಡೆಸುವ ಸನ್ನಿವೇಶದಲ್ಲಿ ಅವರು ಎದುರಿಸಿರುವ ಅಸಹಾಯಕತೆಯ ಅರಿವು ಕೂಡ ನನಗಿದೆ.
ಪಂಚ ಗ್ಯಾರಂಟಿಗಳ ಕುರಿತು:
ಪ್ರಸ್ತುತ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕವಾಗಿ ನಾನು ಬೆಂಬಲ ನೀಡಿದ್ದೇನೆ. ಜನರ ತೆರಿಗೆಯ ಹಣದಲ್ಲಿ ಒಂದು ಪಾಲು ಈ ಯೋಜನೆಗಳ ಮೂಲಕ ಜನರಿಗೆ ದಕ್ಕಲು ಸಾಧ್ಯವಾಗಿದೆ. ಹಲವು ಲಕ್ಷ ಕುಟುಂಬಗಳಿಗೆ ಇದರ ಲಾಭ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆ ವಿರೋಧಿಸುವವರ ಜೊತೆಗೆ ವಾದ, ಜಗಳ ಮಾಡಿದ್ದೇನೆ. ಆದರೆ ವೈಯಕ್ತಿಕವಾಗಿ ನನಗೆ ಒಂದಿಷ್ಟು ವಿಷಾದ ಇದೆ. ಸ್ವಾತಂತ್ರ್ಯಗಳಿಸಿ ಇಷ್ಟು ವರ್ಷ ಆದ ನಂತರವೂ ಮತದಾರರನ್ನು ಓಲೈಸಲು, ಅವರ ಬೆಂಬಲಗಳಿಸಲು ಇಂತಹ ಕೊಡುಗೆಗಳನ್ನು ನೀಡಬೇಕಾದ ಪರಿಸ್ಥಿತಿಗೆ ಯಾರು ಕಾರಣ..!? ದಿನಕ್ಕೆ ೧ ರಿಂದ ೫ ಸಾವಿರ ರೂ. ವೇತನ ಪಡೆಯುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಅಗತ್ಯಇದೆಯೇ.!? ಉಚಿತ ರೇಷನ್, ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ, ನಿರುದ್ಯೋಗ ಭತ್ಯೆ ಇತ್ಯಾದಿ ಯೋಜನೆಗಳನ್ನು ರೂಪಿಸುವಾಗ ಇಂತಹ ಸಹಾಯದ ಅನಿವಾರ್ಯತೆ ಇರುವ ಜನರಿಗೆ ಮಾತ್ರ ಮಿತಿಗೊಳಿಸಲು ಸಾಧ್ಯವಿಲ್ಲವೇ..!?
ನನ್ನ ಈ ಪ್ರಶ್ನೆ ಪಂಚ ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಸಿಮಿತ ಆಗುವುದಿಲ್ಲ. ಇನ್ನೊಬ್ಬ ಸಮಾಜವಾದಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರು ಆರಂಭಿಸಿದ, ಈಗಲೂ ಚಾಲ್ತಿಯಲ್ಲಿರುವ ಕೃಷಿಕರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಯೋಜನೆ ಕೂಡ ಮರು ಪರೀಕ್ಷೆಗೆ ಒಳಗಾಗಬೇಕಿದೆ. ಇಂತಹ ವರಾತಗಳ ನಡುವೆಯೂ ಸಿದ್ದರಾಮಯ್ಯಈ ನಾಡು ಕಂಡ ಅಪರೂಪದ ರಾಜಕಾರಣಿ ಎಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ಸಿದ್ದರಾಮಯ್ಯ ಅವರಿಗೆ ಪರ್ಯಾಯ ಎಂದು ಹೇಳಲು ಶಕ್ತಿ, ಸಾಮರ್ಥ್ಯ, ಸೈದ್ಧಾಂತಿಕ ಬದ್ಧತೆಯನ್ನು ಹೊಂದಿರುವ ಯಾವ ರಾಜಕಾರಣಿಯೂ ಕರ್ನಾಟಕದಲ್ಲಿ ನನ್ನ ಕಣ್ಣಳತೆಗೆ ಗೋಚರಿಸುತ್ತಿಲ್ಲ.
” ಮೈಸೂರಿನ ‘ಆಂದೋಲನ’ ಪತ್ರಿಕೆ ಸಿದ್ದರಾಮಯ್ಯ ಅವರ ಜೊತೆಗೆ ಗಟ್ಟಿಯಾಗಿ ನಿಂತಿತ್ತು. ಆಂದೋಲನ ಪತ್ರಿಕೆಯ ಬೆಂಬಲ ಇಲ್ಲದೆ ಹೋಗಿದ್ದರೆ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಸಿದ್ದರಾಮಯ್ಯ ಅವರ ಪಾಲಿಗೆ ಘೋರವಾಗಿರುತ್ತಿತ್ತು. ದೊಡ್ಡ ಗೌಡರ ಗದ್ದಲದಲ್ಲಿ ಸಿದ್ದರಾಮಯ್ಯ ಖಂಡಿತವಾಗಿಯೂ ರಾಜಕೀಯವಾಗಿ ಕಳೆದುಹೋಗುತ್ತಿದ್ದರು.”
ಪಿರಿಯಾಪಟ್ಟಣ : ಪಿರಿಯಾಪಟ್ಟಣದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಜನರು ಪಡಿತರ ಪಡೆಯಲು ಪರದಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. ಜನಸಾಮಾನ್ಯರು ಎಂದಿನಂತೆ ಪ್ರತಿ…
ಮೈಸೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯನವರ ಮುಂದಿನ ಜೀವನ ಚೆನ್ನಾಗಿರಲಿ. ನೂತನ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್ ಉತ್ತಮ…
ಹೊಸದಿಲ್ಲಿ : ಕಳೆದ ಎರಡ್ಮೂರು ದಿನಗಳಿಂದ ಮೌನಕ್ಕೆ ಶರಣಾಗಿದ್ದ ಡಿಕೆ ಶಿವಕುಮಾರ್ ಕೊನೆಗೂ ತುಟಿ ಬಿಚ್ಚಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ…
ಮೈಸೂರು: ನಾನು ಸಹ ಹೊಸ ಸಚಿವ ಸಂಪುಟದಲ್ಲಿ ಸೇರುವ ಬಯಕೆ ಇದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ಈ…
ಬೆಂಗಳೂರು: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಗೀಕರಿಸಿದ್ದಾರೆ. ರಾಜೀನಾಮೆ ಅಂಗೀಕಾರವಾದ ಬೆನ್ನಲ್ಲೇ…
ಬೆಂಗಳೂರು: ದೇವರು ವರನೂ ಕೊಡಲ್ಲ. ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ…