ಕೃಷ್ಣ ಸಿದ್ದಾಪುರ
ಲ್ಯಾಬ್ ಟೆಕ್ನಿಷಿಯನ್, ಸಿಬ್ಬಂದಿ ಅಲಭ್ಯ: ಸಾರ್ವಜನಿಕರಿಗೆ ಸಕಾಲಕ್ಕೆ ದೊರಕದ ಸೇವೆ; ಸೂಕ್ತ ಕ್ರಮಕ್ಕೆ ಒತ್ತಾಯ
ಸಿದ್ದಾಪುರ: ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಎದುರಾಗಿದ್ದು, ರೋಗಿಗಳಿಗೆ ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗದೆ ಸಮಸ್ಯೆ ಎದುರಿಸುವಂತಾಗಿದೆ.
ಈ ಆಸ್ಪತ್ರೆಗೆ ತಜ್ಞ ವೈದ್ಯರ ನೇಮಕದ ಜತೆ ಮೂಲ ಸೌಕರ್ಯಗಳನ್ನು ಕೂಡಲೇ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು ೩೦ ಸಾವಿರಕ್ಕೂ ಹೆಚ್ಚು ಜನರು ವಾಸವಿದ್ದು, ಸುತ್ತಮುತ್ತಲಿನ ಮಾಲ್ದಾರೆ, ಕರಡಿಗೋಡು,ನೆಲ್ಯಹುದಿಕೇರಿ, ಅಮ್ಮತ್ತಿ,ಮುಂತಾದ ಗ್ರಾಮಗಳಿಂದ ಸಾರ್ವಜನಿಕರು ಅನಾರೋಗ್ಯ, ತುರ್ತು ಸಂದರ್ಭಗಳಲ್ಲಿ ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಹೀಗಿದ್ದರೂ ಈ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನಸಂಖ್ಯೆಗೆ ಅನು ಗುಣವಾಗಿ ವೈದ್ಯರು ಲಭ್ಯವಿಲ್ಲ. ಇದರಿಂದಾಗಿ ಈ ವ್ಯಾಪ್ತಿಯ ಜನರು ಸಂಕಷ್ಟ ಎದುರಿಸುವಂತಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರ ಕೊರತೆಯಿಂದಾಗಿ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗದೆ ಹಿಂದಿರುಗುವಂತಾಗಿದೆ.
ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ ವೈದ್ಯರ ಕೊರತೆಯಿದ್ದು, ಗರ್ಭಿಣಿಯರು ಹೆರಿಗೆ ಸಂದರ್ಭದಲ್ಲಿ ದೂರದ ಊರುಗಳ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಆದ್ದರಿಂದ ಇಲ್ಲಿಗೆ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ವೈದ್ಯರ ನೇಮಕಾತಿ ಕೂಡ ಆಗಬೇಕಾಗಿದೆ. ಇದರ ಬಗ್ಗೆಯೂ ಇಲಾಖೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ವೈದ್ಯರು ಲಭ್ಯ ಇಲ್ಲದೆ ಇರುವುದರಿಂದ ಜನರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ರಮೇಶ್ ದೂರಿದ್ದಾರೆ. ಈ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಕಾರ್ಮಿಕ ವರ್ಗದ ವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಖಾಸಗಿ ಆಸ್ಪತ್ರೆಗೆ ಹೋಗಿ ಹಣ ನೀಡಿ ಚಿಕಿತ್ಸೆ ಪಡೆಯುವುದು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಸರ್ಕಾರ, ಜಿಲ್ಲಾಡಳಿತ ಅವಶ್ಯವಿರುವ ವೈದ್ಯರನ್ನು ತಕ್ಷಣವೇ ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
” ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗೆ ಮಹಿಳಾ ವೈದ್ಯರ ಅವಶ್ಯವಿದೆ. ತಜ್ಞ ವೈದ್ಯರ ಕೊರತೆಯಿಂದ ದೂರದ ಊರಿನ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಇಲ್ಲಿಯೇ ಪ್ರಸೂತಿ ತಜ್ಞರ ನೇಮಕ ಮಾಡಿದಲ್ಲಿ ಸ್ಥಳೀಯರಿಗೆ ಅನುಕೂಲವಾಗಲಿದೆ.”
-ಸುಮತಿ, ಸಂಜೀವಿನಿ ಒಕ್ಕೂಟ, ಸಿದ್ದಾಪುರ
” ಹಲವಾರು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದ ತಜ್ಞ ವೈದ್ಯರಾದ ರಾಘವೇಂದ್ರ ಅವರನ್ನು ಇತ್ತೀಚೆಗೆ ವರ್ಗಾವಣೆ ಮಾಡಲಾಗಿದೆ. ವೈದ್ಯರನ್ನು ಬೇರೆಡೆಗೆ ವರ್ಗಾವಣೆ ಮಾಡುವ ಸಂದರ್ಭ ಅಲ್ಲಿನ ಸ್ಥಿತಿಗತಿಯನ್ನು ಅವಲೋಕಿಸಿ ತೆರವಾಗುವ ಸ್ಥಳಕ್ಕೆ ಬದಲಿ ವ್ಯವಸ್ಥೆ ಮಾಡಿಕೊಂಡು ವರ್ಗಾವಣೆ ಮಾಡಬೇಕಿತ್ತು. ಆದರೆ ಸರ್ಕಾರ ಏಕಾಏಕಿ ಬೇರೆಡೆಗೆ ವೈದ್ಯರನ್ನು ವರ್ಗಾವಣೆ ಮಾಡಿ ತೆರವಾದ ಸ್ಥಾನಕ್ಕೆ ವೈದ್ಯರನ್ನು ನೇಮಕ ಮಾಡದೆ ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದೆ.”
-ಅಫ್ಜಲ್, ಸ್ಥಳಿಯ ನಿವಾಸಿ, ಸಿದ್ದಾಪುರ
” ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಹಣ ನೀಡಿ ಚಿಕಿತ್ಸೆ ಪಡೆಯುವುದು ಕಷ್ಟ ಸಾಧ್ಯ. ಈ ಭಾಗದ ಜನಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಯಲ್ಲಿ ಕನಿಷ್ಠ ೬ ವೈದ್ಯಾಧಿಕಾರಿಗಳ ಅವಶ್ಯಕತೆ ಇದೆ. ಜತೆಗೆ ಪರಿಣತ ಲ್ಯಾಬ್ ತಜ್ಞರನ್ನು ನೇಮಿಸಬೇಕು. ಹಾಗಾದರೆ ಮಾತ್ರ ಈ ಸಮಸ್ಯೆಗಳಿಗೆ ಪರಿ ಹಾರ ಕಂಡುಕೊಳ್ಳಲು ಮತ್ತು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಸಿಗಲು ಸಾಧ್ಯ.”
-ಎಚ್.ಬಿ.ರಮೇಶ್, ಕಾರ್ಮಿಕ ಮುಖಂಡ, ಸಿದ್ದಾಪುರ
” ಸಿದ್ದಾಪುರ ಆಸ್ಪತ್ರೆಯಲ್ಲಿ ಕನಿಷ್ಠ ೬ ಜನ ವೈದ್ಯಾಧಿಕಾರಿಗಳ ಅವಶ್ಯವಿದೆ. ರೋಗಿಗಳ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ಆದಷ್ಟು ಬೇಗ ವೈದ್ಯರ ಕೊರತೆ ನಿವಾರಿಸಲು ಕ್ರಮಕೈಗೊಳ್ಳಲಾಗುವುದು.”
-ಡಾ.ಸತೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಮನೆ ಮುಂಭಾಗ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿರುವ ಚರಂಡಿ ; ಸಾಂಕ್ರಾಮಿಕ ರೋಗ ಹರಡುವ ಭೀತಿ, ಚುನಾವಣೆ ಬಹಿಷ್ಕಾರಕ್ಕೆ ಸ್ಥಳೀಯರ…
ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…
ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…
ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…
ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…