ಗಿರೀಶ್ ಹುಣಸೂರು
ಅಕ್ಟೋಬರ್ ತಿಂಗಳ ಪಡಿತರ ವಿತರಿಸಲು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸಂಕಷ್ಟ; ಅಕ್ಕಿ-ರಾಗಿ ಪಡೆಯಲು ಗ್ರಾಹಕರ ಪರದಾಟ
ಮೈಸೂರು: ನವೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಕಾರ್ಡುದಾರರಿಗೆ ಅಕ್ಟೋಬರ್ ತಿಂಗಳ ಪಡಿತರ ಅಕ್ಕಿ-ರಾಗಿ ವಿತರಿಸಲಾಗಿಲ್ಲ.
ಆಹಾರ ಇಲಾಖೆಯ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಿತರಣೆ ವಿಳಂಬವಾಗಿದ್ದು, ನ.೨೦ರ ನಂತರ ದಿನಕ್ಕೆ ಹತ್ತು ಜನರಿಗೂ ಪಡಿತರ ವಿತರಿಸಲಾಗದೆ ನ್ಯಾಯಬೆಲೆ ಅಂಗಡಿ ಮಾಲೀಕರುಗಳು ಸಮಸ್ಯೆ ಎದುರಿಸುತ್ತಿದ್ದರೆ, ಜನ ಕೆಲಸ ಬಿಟ್ಟು ಬೇಸಿಗೆಯ ಈ ಬಿಸಿಲಲ್ಲಿ ದಿನವಿಡೀ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿಯಲ್ಲಿ ನಿಂತರೂ ಕಡೆಗೆ ಅಕ್ಕಿ-ರಾಗಿ ಸಿಗದೆ ಬರಿಗೈಲಿ ಮನೆಗೆ ಹಿಂತಿರುಗಬೇಕಾದ ಪರಿಸ್ಥಿತಿ ಎದುರಾಗಿದೆ.
ನ್ಯಾಯಬೆಲೆ ಅಂಗಡಿಗಳವರಿಗೆ ಒಂದು ಗಣಕಯಂತ್ರಕ್ಕೆ ಒಂದೇ ಲಾಗಿನ್ ನೀಡಲಾಗಿದ್ದು, ಪ್ರಸ್ತುತ ಒಟಿಪಿ ಮೂಲಕ ಪಡಿತರ ವಿತರಿಸುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಪಡಿತರ ಚೀಟಿದಾರ ಕುಟುಂಬದ ಸದಸ್ಯರೊಬ್ಬರು ನ್ಯಾಯಬೆಲೆ ಅಂಗಡಿಯ ಮುಂದೆ ಸರತಿ ಸಾಲಿನಲ್ಲಿ ನಿಂತು ಬಯೋಮೆಟ್ರಿಕ್ ನೀಡಿ, ಚೀಟಿ ಪಡೆದು ಬಳಿಕ ಪಡಿತರ ಪಡೆಯಬೇಕಿದೆ. ಆದರೆ, ಆಹಾರ ಇಲಾಖೆ ಸರ್ವರ್‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿರುವುದರಿಂದ ಒಬ್ಬರ ಬಯೋಮೆಟ್ರಿಕ್‌ಗೆ ನಾಲ್ಕೈದು ಬಾರಿ ಪ್ರಯತ್ನಪಟ್ಟ ಮೇಲೂ ೧೦ ರಿಂದ ೧೫ ನಿಮಿಷ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರಕ್ಕಾಗಿ ಬರುವ ವಯೋವೃದ್ಧ ಹಿರಿಯ ನಾಗರಿಕರುಗಳು, ಅನಾರೋಗ್ಯ ಪೀಡಿತರು ಸರತಿ ಸಾಲಿನಲ್ಲಿ ನಿಂತು ಬಸವಳಿದು ಹೋಗುತ್ತಿದ್ದಾರೆ.
ನ್ಯಾಯಬೆಲೆ ಅಂಗಡಿಗಳವರು ಹೇಳುವ ಪ್ರಕಾರ ಬೆಳಿಗ್ಗೆ ೯ ಗಂಟೆಯವರೆಗೆ ಹಾಗೂ ಸಂಜೆ ೬ ಗಂಟೆ ನಂತರ ಸರ್ವರ್ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ. ಹೀಗಾಗಿ ಬಹುತೇಕ ನ್ಯಾಯಬೆಲೆ ಅಂಗಡಿಗಳವರು ಈಗಾಗಲೇ ಶೇ.೯೦ರಷ್ಟು ಪಡಿತರ ಅಕ್ಕಿ-ರಾಗಿ ವಿತರಿಸಿದ್ದಾರೆ. ಆದರೆ, ಇನ್ನುಳಿದ ಶೇ.೧೦ರಷ್ಟು ಪಡಿತರ ಚೀಟಿದಾರರಿಗೆ ಕಳೆದ ಒಂದು ವಾರದಿಂದ ಪಡಿತರ ವಿತರಣೆ ಮಾಡಲಾಗುತ್ತಿಲ್ಲ. ಯಾವ ಸಮಯದಲ್ಲಿ ಸರ್ವರ್ ಇರುತ್ತೆ ಎಂಬುದನ್ನು ಆಹಾರ ಇಲಾಖೆಯವರು ಮೊದಲೇ ನಮಗೆ ತಿಳಿಸಿದರೆ, ಅದನ್ನು ಹೇಳಿ ಕಳುಹಿಸಬಹುದು ಇಲ್ಲವೇ ಅಂಗಡಿ ಮುಂದೆ ನೋಟಿಸ್ ಹಾಕಬಹುದು. ಆದರೆ, ಸರ್ವರ್ ಯಾವಾಗ ಬರುತ್ತೆ ಯಾವಾಗ ಹೋಗುತ್ತೆ ಎಂಬುದು ನಮಗೇ ಗೊತ್ತಾಗುತ್ತಿಲ್ಲ. ಹೀಗಾಗಿ ದಿನವಿಡೀ ನ್ಯಾಯಬೆಲೆ ಅಂಗಡಿಯಲ್ಲಿ ಕಂಪ್ಯೂಟರ್ ಮುಂದೆ ಕಾದು ಕುಳಿತುಕೊಳ್ಳುವಂತಾಗಿದೆ ಎಂದು ನ್ಯಾಯಬೆಲೆ ಅಂಗಡಿಗಳ ಮಾಲೀಕರುಗಳು ಅಳಲು ತೋಡಿಕೊಳ್ಳುತ್ತಾರೆ. ಇದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗುವ ಅಕ್ಕಿ-ರಾಗಿಯನ್ನೇ ನಂಬಿಕೊಂಡಿರುವ ಬಡವರು ಪಡಿತರ ಸಿಗದೆ ವಂಚಿತರಾಗುವಂತಾಗಿದೆ.
ಸಮಸ್ಯೆಗೆ ಪರಿಹಾರ ಯಾವಾಗ?: ನಾವು ತಿಂಗಳ ಕೊನೆಯವರೆಗೂ ಬೆಳಿಗ್ಗೆ ೮ರಿಂದ ರಾತ್ರಿ ೮ ಗಂಟೆವರೆಗೂ ನ್ಯಾಯಬೆಲೆ ಅಂಗಡಿ ತೆರೆದಿರುತ್ತೇವೆ. ಹೀಗಾಗಿ ಜನ ನಮ್ಮಲ್ಲಿ ಕ್ಯೂ ನಿಲ್ಲುವುದಿಲ್ಲ. ಆದರೆ, ಸರ್ವರ್ ಸಮಸ್ಯೆಯಿಂದ ಪಡಿತರ ವಿತರಿಸಲಾಗುತ್ತಿಲ್ಲ ಎಂದು ಸ್ಥಳೀಯ] ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೆ ಸರ್ವರ್ ಸಮಸ್ಯೆ ಇದೆ ನಾವೇನೂ ಮಾಡಲಾಗಲ್ಲ, ಹೇಗೋ ಕೊಡಿ ನೋಡೋಣ ಎಂದು ಕೈ ಚೆಲ್ಲುತ್ತಾರೆ. ಹೀಗಾದರೆ ಜನ ನಮಗೆ ಬೈಯುತ್ತಾರೆ. ಹೋಗಲಿ ಇರುವ ೧೦೦-೧೫೦ಕಾರ್ಡ್ ದಾರರಿಗೆ ಬಯೋಮೆಟ್ರಿಕ್ ತೆಗೆದುಕೊಳ್ಳದೆ ಚೀಟಿ ಬರೆದುಕೊಟ್ಟು ಪಡಿತರ ವಿತರಿಸಿ, ಬಳಿಕ ಸರಿಪಡಿಸಿಕೊಡಿ ಎಂದರೂ ಅಧಿಕಾರಿಗಳು ಒಪ್ಪುತ್ತಿಲ್ಲ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರುಗಳು ಅಳಲು ತೋಡಿಕೊಳ್ಳುತ್ತಾರೆ.
” ಸರ್ವರ್ ಸಮಸ್ಯೆ ನಮ್ಮ ಜಿಲ್ಲೆಯಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಎದುರಾಗಿರುವುದರಿಂದ ಪಡಿತರವಿತರಣೆಯಲ್ಲಿ ವಿಳಂಬವಾಗುತ್ತಿದೆ. ಆಹಾರ ಇಲಾಖೆಯ ಸರ್ವರ್ ನಿರ್ವಹಿಸುವ ಎನ್‌ಐಸಿಯ ತಾಂತ್ರಿಕ ತಂಡ ಸಮಸ್ಯೆ ಪರಿಹರಿಸಲು ಕೆಲಸ ಮಾಡುತ್ತಿದ್ದು, ಸಮಸ್ಯೆ ಬಗೆಹರಿಯಲಿದೆ.”
-ಮಂಟೇಸ್ವಾಮಿ, ಉಪ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮೈಸೂರು
” ನಮ್ಮ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ೧,೧೫೦ ಕಾರ್ಡ್‌ಗಳಿವೆ. ಈಗಾಗಲೇ ೯೫೦ ಕಾರ್ಡ್‌ದಾರರಿಗೆ ಅಕ್ಕಿ ಕೊಟ್ಟಾಗಿದೆ. ಬೆಳಿಗ್ಗೆ ೯ ಗಂಟೆ ತನಕ ಸರ್ವರ್ ಸಮಸ್ಯೆ ಇರುವುದಿಲ್ಲ. ಆ ನಂತರ ಸಮಸ್ಯೆ ಎದುರಾಗಿ ಒಬ್ಬರ ಬಯೋಮೆಟ್ರಿಕ್‌ಗೆ ೧೦ರಿಂದ ೧೫ ನಿಮಿಷ ಸಮಯ ಹಿಡಿಯುತ್ತಿದೆ.”
-ಎಸ್.ಶಿವಸ್ವಾಮಿ, ಉಕ್ಕಲಗೆರೆ, ತಿ.ನರಸೀಪುರ ತಾಲ್ಲೂಕು
” ಸೊಸೈಟಿ ಬಾಗಿಲು ತೆರೆಯುವ ಮುಂಚೆಯೇ ಬಂದು ಸರತಿ ಸಾಲಿನಲ್ಲಿ ನಿಂತಿದ್ದೇನೆ. ಈಗ ೧೧ ಗಂಟೆ ಆಯ್ತು ಆದರೂ ಬಯೋಮೆಟ್ರಿಕ್ ಕೊಡಲಾಗಿಲ್ಲ. ಸರ್ವರ್ ಕಾರ್ಯನಿರ್ವಹಿಸುತ್ತಿಲ್ಲ. ಎರಡ್ಮೂರು ದಿನಗಳಿಂದ ಹೀಗೆ ಸೊಸೈಟಿಗೂ ಮನೆಗೂ ತಿರುಗುವುದೇ ಆಗಿದೆ. ಅಕ್ಕಿ ಮಾತ್ರ ಸಿಗುತ್ತಿಲ್ಲ.”
-ಮಮತ, ಹುಣಸೂರು
ಹೊಸದಿಲ್ಲಿ : ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಸಿಖ್ ಫಾರ್ ಜಸ್ಟೀಸ್ ನಿಯೋಜಿತ ಭಯೋತ್ಪಾದಕ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಪಿ.ದೊಡ್ಡಿ ಗ್ರಾಮದಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟು ಕಬ್ಬಿನ ಬೆಳೆ ಫಸಲನ್ನು ನಾಶಗೊಳಿಸಿರುವ ಘಟನೆ…
ಮಡಿಕೇರಿ : ಮೈಸೂರು-ಗೋಣಿಕೊಪ್ಪ ಹೆದ್ದಾರಿಯ ದಕ್ಷಿಣ ಕೊಡಗಿನ ತಿತಿಮತಿ ವ್ಯಾಪ್ತಿಯಲ್ಲಿ ಹುಲಿಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದು, ಹುಲಿ ಸೆರೆಗೆ ಶಾಸಕ…
ನಂಜನಗೂಡು : ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳನ್ನು ಸಹ ನಾಚಿಸುವಂತಹ ಆಧುನಿಕ ಸೌಲಭ್ಯಗಳನ್ನು…
ಬೃಹತ್ ಕೈಗಾರಿಕೆ ಸಚಿವಾಲಯ ಅಧೀನದ ಎಆರ್‌ಎಐ ಘಟಕ ಸ್ಥಾಪನೆಗೆ ಪರಿಶೀಲನೆ ನಡೆಯುತ್ತಿದೆ : ಕುಮಾರಸ್ವಾಮಿ ಮಂಡ್ಯ : ಜಿಲ್ಲೆಯಲ್ಲಿ ಕೈಗಾರಿಕೆ…
ಮಂಡ್ಯ : ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ನನ್ನ ಸ್ಪರ್ಧೆ ಮಾಡುತ್ತೇನೆ ಎನ್ನುವ…