Andolana originals

ಶತಮಾನದ ಶಾಲೆ; ಆರದ ಅಕ್ಷರ ದೀಪಮಾಲೆ

ಮಹಾದೇಶ್ ಎಂ ಗೌಡ

ಹನೂರು: ಇದು ಶತೋತ್ತರ ದಶಮಾನೋತ್ಸವ ದಾಟಿ ಮುಂದೆ ಸಾಗಿರುವ ಶಾಲೆ. ಕಾಲ ಕಾಲಕ್ಕೆ ಅಭಿವೃದ್ಧಿಗೊಂಡು, ಪ್ರಸ್ತುತ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮುನ್ನಡೆದಿದೆ. ಕೊಠಡಿಗಳು ಬಿಡಿ ಬಿಡಿಯಾಗಿದ್ದರೂ, ಮೂಲ ಸೌಕರ್ಯಗಳು ಒಂದು ಹಂತಕ್ಕೆ ಚೆನ್ನಾಗಿವೆ. ಮುಖ್ಯವಾಗಿ ಇಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಮತ್ತು ಶಾಲೆಗೆ ಕಾಂಪೌಂಡ್ ನಿರ್ಮಾಣ ಆಗಬೇಕಾಗಿದೆ.

ತಾಲ್ಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದ ಹುತ್ತೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತೋತ್ತರ ದಶಮಾನೋತ್ಸವ ದಾಟಿ ಮುಂದೆ ಸಾಗಿದೆ. ಅದರ ಹಿರಿತನಕ್ಕೆ ತಕ್ಕಂತೆ ಮೂಲಸೌಕರ್ಯಗಳು ದೊರೆತಿಲ್ಲ ಎಂಬ ಕೊರಗು ಇದೆ. ಸರ್ಕಾರ ಇತ್ತ ಗಮನ ಹರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಹುತ್ತೂರು ಗ್ರಾಮದಲ್ಲಿ ೧೯೧೫ರಲ್ಲಿ ಈ ಶಾಲೆ ಪ್ರಾರಂಭವಾಗಿದ್ದು, ೧೧೧ ವರ್ಷಗಳ ಇತಿಹಾಸ ಇದಕ್ಕೆ ಇದೆ. ಪ್ರಸ್ತುತ ಶಾಲೆಯಲ್ಲಿ ೧೨೬ ವಿದ್ಯಾರ್ಥಿಗಳು ಗುಣ ಮಟ್ಟದ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಒಂದರಿಂದ ನಾಲ್ಕನೇ ತರಗತಿಯವರೆಗೆ ಹೆಂಚಿನ ಮನೆಯಲ್ಲಿ ಶಾಲೆ ಪ್ರಾರಂಭಿಸಲಾಯಿತು. ನಂತರ ಗ್ರಾಮಸ್ಥರ ಸಹಕಾರದೊಂದಿಗೆ ಬಸ್ ನಿಲ್ದಾಣದ ಪಕ್ಕದ ಜಾಗದಲ್ಲಿ ಸರ್ಕಾರಿ ನಿವೇಶನಕ್ಕೆ ಶಾಲೆಯನ್ನು ಸ್ಥಳಾಂತರಿಸಲಾಯಿತು. ಶಾಲೆ ಪ್ರಾರಂಭವಾದಾಗ ೧೫ರಿಂದ ೨೦ ಮಕ್ಕಳು ಮಾತ್ರ ವಿದ್ಯಾಭ್ಯಾಸ ಮಾಡುತ್ತಿದ್ದರು. ಹಂತ ಹಂತವಾಗಿ ಐದು, ಆರು, ಏಳು ಮತ್ತು ೮ನೇ ತರಗತಿಗಳನ್ನು ಆರಂಭಿಸಿದ್ದು, ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾಗಿದೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಕೊಠಡಿಗಳ ಕೊರತೆ ಎದುರಾಗಿದ್ದರಿಂದ ಗ್ರಾಮಸ್ಥರು ಹಾಗೂ ಮುಖಂಡರ ಸಹಕಾರದೊಂದಿಗೆ ೨೦೦೫ರಲ್ಲಿ ೧.೬೫ ಎಕರೆ ಹೊಸ ನಿವೇಶನವನ್ನು ಗುರುತಿಸಿ ಸಂಪೂರ್ಣವಾಗಿ ಹೊಸ ಕೊಠಡಿ ನಿರ್ಮಾಣ ಮಾಡಿ ಶಾಲೆಯನ್ನು ಸ್ಥಳಾಂತರ ಮಾಡಲಾಯಿತು. ಈ ಶಾಲೆಯಲ್ಲಿ ಪ್ರಸ್ತುತ ೮ ಕೊಠಡಿಗಳಿದ್ದು, ಹುತ್ತೂರು ಮಸ್ಕಿಬಾವಿ ದೊಡ್ಡಿ, ಸೊಪ್ಪಿನ ಗುಡ್ಡೆ ಗ್ರಾಮಗಳ ಹಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶೇ.೯೯ ರಷ್ಟು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೇ ಕಲಿಯುತ್ತಿರುವುದು ಈ ಶಾಲೆಯ ವಿಶೇಷವಾಗಿದೆ.

ಆಂಗ್ಲ ಮಾಧ್ಯಮ ಪ್ರಾರಂಭ: ೨೦೨೫- ೨೦೨೬ನೇ ಸಾಲಿನಲ್ಲಿ ಒಂದನೇ ತರಗತಿ ಆಂಗ್ಲ ಮಾಧ್ಯಮ ಪ್ರಾರಂಭವಾಗಿದ್ದು, ೩೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಟ್ಟು ೮ ಶಿಕ್ಷಕರಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಎಲ್‌ಕೆಜಿಗೆ ೩೦ ಮಕ್ಕಳು ದಾಖಲಾದರೆ, ಯುಕೆಜಿಗೂ ಅನುಮತಿ ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕ ಮಾದೇಶ್ ಎಲ್‌ಕೆಜಿ ಪ್ರಾರಂಭಿಸಲು ಉತ್ಸಾಹದಿಂದ ಮನೆಮನೆಗೂ ಭೇಟಿ ನೀಡಿ ಪೋಷಕರಿಗೆ ತಮ್ಮ ನಾಲ್ಕು ವರ್ಷ ತುಂಬಿದ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಆಂಗ್ಲ ಮಾಧ್ಯಮಕ್ಕೆ ಸೇರಿಸುವಂತೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

ಶಾಲೆಯಲ್ಲಿ ಎಂಟು ಕೊಠಡಿಗಳಿದ್ದು, ಅದರಲ್ಲಿ ಮುಖ್ಯ ಶಿಕ್ಷಕರ ಕೊಠಡಿ, ಸ್ಮಾರ್ಟ್ ಕ್ಲಾಸ್ ಇದ್ದು, ಉಳಿದ ಏಳು ಕೊಠಡಿಗಳಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಅಕ್ಷರ ದಾಸೋಹ ಕೊಠಡಿ ಪ್ರತ್ಯೇಕವಾಗಿದೆ. ಶಾಲೆಯ ಆವರಣದಲ್ಲಿ ಉತ್ತಮ ವ್ಯವಸ್ಥೆ ಹುತ್ತೂರು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಉತ್ತಮವಾಗಿದೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ತಮವಾದ ಆಟದ ಮೈದಾನವಿದೆ. ಶಾಲೆಯ ಆವರಣದಲ್ಲಿ ೨೮ ಅಶೋಕ ಮರಗಳಿದ್ದು, ಇದೀಗ ೪೮ ಸಸಿಗಳನ್ನು ನೆಡಲಾಗಿದೆ.

ಶಾಲೆಯ ಕೊಠಡಿಗಳು ಸಾಕಷ್ಟು ಗಾಳಿ ಬೆಳಕಿನಿಂದ ಕೂಡಿವೆ. ಶಾಲೆಯಲ್ಲಿ ಅಗತ್ಯವಾದ ಪ್ರಮಾಣದಲ್ಲಿ ಮೂಲ ಸೌಲಭ್ಯ ಇಲ್ಲದಿರುವುದನ್ನು ಹೊರತುಪಡಿಸಿದರೆ, ಶಾಲೆಯು ಯಾವುದೇ ತೊಂದರೆ ಇಲ್ಲದೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಹಳೆಯ ಕಟ್ಟಡದಲ್ಲಿ ಗ್ರಂಥಾಲಯ ಸ್ಥಾಪನೆ ಹಳೆಯ ಶಾಲೆ ಇದ್ದ ಜಾಗದಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವನ್ನು ಪ್ರಾರಂಭಿಸಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯರಿಗೆ ಅನುಕೂಲ ಮಾಡಿಕೊಡಲಾಗಿದೆ. ಇದಲ್ಲದೆ ಅಂಗನವಾಡಿ ಕೇಂದ್ರವು ಕೂಡ ಶಾಲೆಯ ಆವರಣದಲ್ಲೇ ನಡೆಯುತ್ತಿದೆ. ಇಲ್ಲಿಯೂ ಕಾಂಪೌಂಡ್ ಇಲ್ಲ. ಇದರಿಂದ ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಅಲ್ಲದೆ, ಕಾಂಪೌಂಡ್ ನಿರ್ಮಿಸಿದರೆ ಈ ನಿವೇಶನವನ್ನು ಸಂರಕ್ಷಣೆ ಮಾಡಿಕೊಳ್ಳಬಹುದು.

” ಕಳೆದ ನಾಲ್ಕು ವರ್ಷಗಳಿಂದ ಈ ಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕಳೆದ ವರ್ಷದಿಂದಲೇ ಒಂದನೇ ತರಗತಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಎಲ್‌ಕೆಜಿ ಪ್ರಾರಂಭಿಸಲು ಕ್ರಮ ವಹಿಸಲಾಗಿದೆ. ಒಟ್ಟಾರೆ ಎಸ್‌ಡಿಎಂಸಿ ಹಾಗೂ ಶಿಕ್ಷಕರ ಸಹಕಾರದಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.”

-ಮಾದೇಶ್, ಬಡ್ತಿ ಮುಖ್ಯ ಶಿಕ್ಷಕ, ಹುತ್ತೂರು ಶಾಲೆ

” ಹುತ್ತೂರು ಶಾಲೆಯು ಗುಡ್ಡಗಾಡು ಪ್ರದೇಶದಲ್ಲಿರುವ ಶಾಲೆಯಾಗಿದ್ದು, ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಶತಮಾನೋತ್ಸವ ಶಾಲೆಗೆ ಸರ್ಕಾರದಿಂದ ಅನುದಾನ ಸಮರ್ಪಕವಾಗಿ ಬರುತ್ತಿದೆ. ಆದರೆ, ವಿಶೇಷ ಅನುದಾನ ನೀಡಿದರೆ ಇನ್ನು ಉತ್ತಮವಾಗಿರುತ್ತದೆ.”

-ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಹನೂರು ಶೈಕ್ಷಣಿಕ ವಲಯ

” ೧೯೯೦-೯೧ನೇ ಸಾಲಿನಲ್ಲಿ ನಾನು ಈ ಶಾಲೆಯಲ್ಲಿ ಓದುತ್ತಿದ್ದಾಗ ೧೦೦ ಮಕ್ಕಳು ಇದ್ದೆವು. ಅಂದು ಶಿಕ್ಷಕರಾಗಿದ್ದ ಮಾದೇವ ಶೆಟ್ಟಿ, ಮಾದೇವಪ್ಪ ಶಾಲೆಯ ಅಭಿವೃದ್ಧಿಗೆ ಬಹಳಷ್ಟು ಶ್ರಮವಹಿಸಿದ್ದಾರೆ. ನಮ್ಮ ಗ್ರಾಮದ ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣಕ್ಕಾಗಿ ೨೦ ಕಿ.ಮೀ. ದೂರದಲ್ಲಿರುವ ಶಾಲೆಗೆ ಹೋಗಬೇಕಾಗಿದೆ. ಇದರಿಂದ ಹೆಣ್ಣುಮಕ್ಕಳಿಗೆ ಹೆಚ್ಚು ತೊಂದರೆ ಆಗುತ್ತಿದೆ. ನಮ್ಮ ಗ್ರಾಮದಲ್ಲಿಯೇ ಪ್ರೌಢಶಾಲೆ ತೆರೆದರೆ ಹೆಚ್ಚು ಅನುಕೂಲವಾಗುತ್ತದೆ.”

-ನಾಗರಾಜು, ಶಾಲೆಯ ಹಳೆಯ ವಿದ್ಯಾರ್ಥಿ, ಹುತ್ತೂರು

” ನಮ್ಮ ತಂದೆಯವರ ಕಾಲದಲ್ಲಿ ಹೆಂಚಿನ ಮನೆಯಲ್ಲಿ ಪ್ರಾರಂಭವಾದ ಶಾಲೆಯನ್ನು ಶಿಕ್ಷಕ ಕೃಷ್ಣ ಮೂರ್ತಿ ಅಭಿವೃದ್ಧಿಪಡಿಸಿದರು. ನಾವೆಲ್ಲ ಓದುವಾಗ ಮುನಿಮಾದ ಶೆಟ್ಟಿ ಎಂಬ ಶಿಕ್ಷಕರು ನಮ್ಮ ಗ್ರಾಮದಲ್ಲಿಯೇ ವಾಸ್ತವ್ಯ ಮಾಡಿ, ಮಕ್ಕ ಳಿಗೆ ಪಾಠ ಹೇಳುತ್ತಿದ್ದರು. ನಾನು ರಾಜಕೀಯವಾಗಿ ಬೆಳೆಯಬೇಕಾದರೆ ಶಾಲಾ ಶಿಕ್ಷಕರ ಶ್ರಮವಿದೆ.”

 -ಬಾಲಕೃಷ್ಣ, ಮಾಜಿ ಅಧ್ಯಕ್ಷ,

” ಎಪಿಎಂಸಿ ಹಾಗೂ ಹಳೆಯ ವಿದ್ಯಾರ್ಥಿ ಮೊಟ್ಟಮೊದಲು ಹೆಂಚಿನ ಮನೆಯಲ್ಲಿ ಶಾಲೆ ಪ್ರಾರಂಭಿಸಲಾಗಿತ್ತು. ಇದೀಗ ನಮ್ಮ ಶಾಲೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪ್ರೌಢಶಾಲೆಯನ್ನೂ ಆರಂಭಿಸಿ, ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದರೆ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ.”

-ಪುಟ್ಟವೀರ ನಾಯಕ, ಅಧ್ಯಕ್ಷ, ತಾಲ್ಲೂಕು ನಾಯಕ ಸಂಘ ಹಾಗೂ ಹಳೆ ವಿದ್ಯಾರ್ಥಿ

” ಹಲವು ಹಳೆಯ ವಿದ್ಯಾರ್ಥಿಗಳಿಗೆ ಸರ್ಕಾರಿ ನೌಕರಿ ಹುತ್ತೂರು ಗ್ರಾಮದ ಶಾಲೆಯಲ್ಲಿ ಕಲಿತಿರುವ ಹಲವು ವಿದ್ಯಾರ್ಥಿಗಳು ಸರ್ಕಾರಿ ಕೆಲಸ ಪಡೆದುಕೊಂಡಿದ್ದಾರೆ. ಈ ಪೈಕಿ ಚಾಮರಾಜನಗರ ಜಿಲ್ಲೆಯ ಹಿರಿಯ ಸರ್ಜನ್ ಆಗಿರುವ ಡಾ.ಚಿನ್ನಪ್ಪ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹುಲಿರಪ್ಪ, ಪ್ರೌಢಶಾಲಾ ಶಿಕ್ಷಕ ಶಿವಪ್ಪ ನಾಯಕ ಇದ್ದಾರೆ. ಅಲ್ಲದೆ, ಹಲವರು ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದಾರೆ, ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿದ್ದಾರೆ. ಭಾರತೀಯ ಅಂಚೆ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮುಂತಾದ ಇಲಾಖೆಗಳಲ್ಲಿ ಕೂಡ ಶಾಲೆಯ ಅನೇಕ ಹಳೆಯ ವಿದ್ಯಾರ್ಥಿಗಳು ಉದ್ಯೋಗಿಗಳಾಗಿದ್ದಾರೆ.

ಶಾಲೆಯ ಸಮಸ್ಯೆಗಳು: 

* ಶಾಲೆಯ ಕಾಂಪೌಂಡ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತಿದೆ. ಕಾಂಪೌಂಡ್ ಕಾಮಗಾರಿಯನ್ನು ಪೂರ್ಣಗೊಳಿಸ ಬೇಕಿದೆ.

* ಶೌಚಾಲಯ ತುಂಬಾ ಹಳೆಯದಾಗಿದೆ. ಅನಿವಾರ್ಯವಾಗಿ ಮಕ್ಕಳು ಅದನ್ನೇ ಉಪಯೋಗಿಸುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇಲ್ಲದೆ ಇರುವುದರಿಂದ, ವಿದ್ಯಾರ್ಥಿನಿಯರು ಕಿರಿಕಿರಿ ಅನುಭವಿಸುತ್ತಿದ್ದಾರೆ.

* ಕಾರ್ಯಕ್ರಮಗಳಿಗೆ ಸೂಕ್ತ ರಂಗಮಂದಿರ ಇಲ್ಲ.

* ಶಾಲಾ ಮುಂಭಾಗದಲ್ಲಿ ಖಾಸಗಿ ವ್ಯಕ್ತಿ ಗಳು ಮಳಿಗೆಗಳನ್ನು ಇಟ್ಟು ಕೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಕೂಡಲೇ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕಿದೆ.

* ಎಂಟು ಕೊಠಡಿಗಳ ಪೈಕಿ ಒಂದು ಕೊಠಡಿಯಲ್ಲಿ ನೆಲಹಾಸು ಕಾಮಗಾರಿ ಬಾಕಿ ಉಳಿದಿದ್ದು, ದುರಸ್ತಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ.

 

 

ಆಂದೋಲನ ಡೆಸ್ಕ್

Recent Posts

ಎಲ್‌ಪಿಜಿ ಕೊರತೆ; ಜನರ ಆತಂಕ ದೂರ ಮಾಡಬೇಕಿದೆ

ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧಕ್ಕಿಂತಲ್ಲೂ ಹೆಚ್ಚು ಸದ್ದು ಮಾಡುತ್ತಿರುವುದು ಭಾರತದಲ್ಲಿನ ಎಲ್‌ಪಿಜಿ ಪೂರೈಕೆ ವಿಚಾರ. ಯುದ್ಧೋನ್ಮಾದ ವೈರತ್ವ ಹೊಂದಿರುವ…

1 hour ago

ಭಾರತ-ಗಲ್ಛ್ ರಾಷ್ಟ್ರಗಳ ಸಂಬಂಧಕ್ಕೆ ಧಕ್ಕೆ ಇಲ್ಲ!

ಶುಭಾ ಖಟಾವಕರ ಮ್ಹೆತ್ರಸ್ ಬಲಾಢ್ಯ ರಾಷ್ಟ್ರಗಳಾದ ಅಮೆರಿಕ -ಇಸ್ರೇಲ್, ಇರಾನ್ ಮೇಲೆ ದಾಳಿ ಶುರು ಮಾಡಿ ೧೩-೧೪ ದಿನಗಳೇ ಕಳೆದು…

1 hour ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಕಾಂಗ್ರೆಸ್‌ನಲ್ಲಿ ನಿರ್ಣಾಯಕ ಘಟ್ಟಕ್ಕೆ ತಲುಪಿದ ಅಧಿಕಾರ ಹಂಚಿಕೆ

ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಕಚ್ಚಾಟ ನಿರ್ಣಾಯಕ ಘಟ್ಟಕ್ಕೆ ತಲುಪಿದಂತೆ ಕಾಣುತ್ತಿದೆ. ಕಾರಣ ಅಧಿಕಾರ ಹಂಚಿಕೆಯ ಮಾತು ಉಳಿದುಕೊಂಡಿದೆ…

1 hour ago

‘ಕೈಗೂಡಿದ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಕನಸು’

ನವೀನ್ ಡಿಸೋಜ ದೀರ್ಘಕಾಲದ ಬೇಡಿಕೆಗೆ ಸರ್ಕಾರದ ಸ್ಪಂದನೆ; ಕೊಡವರ ಶ್ರೇಯೋಭಿವೃದ್ಧಿಗೆ ಅನುಕೂಲ ಮಡಿಕೇರಿ:ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ…

1 hour ago

ನಗರಸಭೆಗೆ ಗೆಜ್ಜಲಗೆರೆ-ಗೊರವನಹಳ್ಳಿ ಸೇರ್ಪಡೆಗೆ ವಿರೋಧ

ಹೇಮಂತ್‌ ಕುಮಾರ್‌  ಮಂಡ್ಯ: ಪುರಸಭೆಯಾಗಿದ್ದ ಮದ್ದೂರು ಟೌನ್ ಆಡಳಿತ ನಗರಸಭೆಯಾಗಿ ಪರಿವರ್ತನೆ ಗೊಂಡಿದೆ. ಈ ನಗರಸಭೆಗೆ ಅಕ್ಕಪಕ್ಕದ ಗೆಜ್ಜಲಗೆರೆ ಗ್ರಾಮ…

1 hour ago

ಮಧ್ಯಾಹ್ನದ ಬಿಸಿಯೂಟಕ್ಕೂ ತಟ್ಟಲಿದೆ ಗ್ಯಾಸ್ ಬಿಸಿ?

ಗಿರೀಶ್ ಹುಣಸೂರು ಸಿಲಿಂಡರ್ ರೀಫಿಲ್ಲಿಂಗ್‌ಗೆ ೨೫ ದಿನಗಳ ಅವಧಿ ನಿಗದಿ; ವಸತಿ ಶಾಲೆಗಳು, ಹಾಸ್ಟೆಲ್‌ಗಳಿಗೆ ಬಿಸಿ ತಟ್ಟುವ ಸಂಭವ ಮೈಸೂರು: ಮಧ್ಯಪ್ರಾಚ್ಯದಲ್ಲಿ…

1 hour ago