Andolana originals

ಅಯ್ಯಾ ಎಂದಡೆ ಸ್ವರ್ಗ, ಎಲವೋ ಎಂದಡೆ ನರಕ

ಎಸ್.ಎಲ್.ಚೆನ್ನಬಸವಣ್ಣ , ಐಪಿಎಸ್, ಉಪ ನಿರ್ದೇಶಕರು,

ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು

ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆಯ ಜವಾಬ್ದಾರಿ ಹೊತ್ತ ಪೊಲೀಸ್ ಇಲಾಖೆಯೆಂದರೆ ಜನಸಾಮಾನ್ಯರ ಮನಸ್ಸಿನಲ್ಲಿ ಈಗಲೂ ಒಂದು ರೀತಿಯ ಅವ್ಯಕ್ತ ಆತಂಕ ಮತ್ತು ಭಯ ಮಿಶ್ರಿತ ಗೌರವ ಮೂಡುತ್ತದೆ ಎಂಬುದು ಬಹಳಷ್ಟು ಜನರ ಅಭಿಪ್ರಾಯ.

ಅಯ್ಯಾ ಎಂದಡೆ ಸ್ವರ್ಗ, ಎಲವೋ ಎಂದಡೆ ನರಕ ಎನ್ನುವಂತೆ, ಪೊಲೀಸ್ ಅಧಿಕಾರಿಯೊಬ್ಬರ ಸೌಜನ್ಯದ ಮಾತುಗಳು ಜನಸಾಮಾನ್ಯರಿಗೆ ಸ್ವರ್ಗದ ಅನುಭೂತಿ ನೀಡಿದರೆ, ಅದೇ ಇನ್ನೊಬ್ಬ ಅಧಿಕಾರಿಯ ಒರಟು ಧ್ವನಿ ಅಥವಾ ಬೈಗುಳದ ಭಾಷೆ ನರಕದ ಅನುಭವವನ್ನುಂಟು ಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಆಲೋಚನೆಯಲ್ಲಿ ಮಹತ್ವದ ಬದಲಾವಣೆಯಾಗುತ್ತಿದ್ದು, ಪೊಲೀಸ್ ಇಲಾಖೆಯು ಆರೋಪಿ ಕೇಂದ್ರೀಕೃತ ಧೋರಣೆಯಿಂದ ಸಂತ್ರಸ್ತರ ಕೇಂದ್ರೀಕೃತ ಜನಸ್ನೇಹಿ ಪೊಲೀಸಿಂಗ್ ಕಡೆಗೆ ಹೆಜ್ಜೆ ಇಡುತ್ತಿದೆ. ಹೀಗಾಗಿ ಸಮಾಜದ ದೃಷ್ಟಿಯಲ್ಲಿ ಹೊಸ ಭರವಸೆಯನ್ನು ಮೂಡಿಸಬೇಕಾದ ಗುರುತರ ಜವಾಬ್ದಾರಿ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳ ಹೆಗಲ ಮೇಲಿದೆ.

ಅದೇ ರೀತಿ ನಾಗರಿಕರು ಕೂಡ ಜನಸ್ನೇಹಿ ಅಧಿಕಾರಿಗಳ ಬಗ್ಗೆ ಸದ್ಭಾವ ಇಟ್ಟುಕೊಂಡು ಅವರ ಕಾರ್ಯಗಳಿಗೆ ಪ್ರೋತ್ಸಾಹಿಸಬೇಕಿದೆ. ಇದರಿಂದ ಇನ್ನೂ ಹೆಚ್ಚಿನ ಉತ್ಸಾಹದಿಂದ ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಾರೆ ಎಂಬುದು ನನ್ನ ವೈಯಕ್ತಿಕ ಅನುಭವದ ಮಾತು. ಎಸ್ ಪಿಯಾಗಿದ್ದಾಗ ನಾನು ಠಾಣೆಗಳಿಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ನನ್ನ ಅಧಿನ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಎಲೆ ಮರೆಯ ಕಾಯಿಗಳಂತೆ ಉತ್ತಮ ಜನಸ್ನೇಹಿಯಾಗಿ ಕೆಲಸ ನಿರ್ವಹಿಸುವವರ ಬಗ್ಗೆ ಸಂತ್ರಸ್ತರಿಂದ, ಸಾರ್ವಜನಿಕರಿಂದ ಮತ್ತು ಮಾಧ್ಯಮ ಸ್ನೇಹಿತರಿಂದ ಸಿಗುತ್ತಿದ್ದ ಗೌಪ್ಯಮಾಹಿತಿಯ ಮೇರೆಗೆ ಅವರಿಗೆ ಪ್ರಶಂಸನೆ ಮತ್ತು ಬಹುಮಾನ ನೀಡುತ್ತಿದ್ದೆ. ಅವರಿಗೆ ಅನಿರೀಕ್ಷಿತವಾಗಿ ದೊರೆತ ಈ ಮನ್ನಣೆಯಿಂದ ಇನ್ನೂ ಉತ್ತಮವಾಗಿ ಸಮಾಜಮುಖಿ ಕರ್ತವ್ಯ ನಿರ್ವಹಿಸಲು ಪ್ರೇರಣೆಯಾಗುತ್ತಿತ್ತು ಮತ್ತು ಉಳಿದವರಿಗೆ ಕೂಡ ತಾವು ಹೀಗೆ ಕರ್ತವ್ಯ ನಿರ್ವಹಿಸಬೇಕೆಂಬ ಮಾದರಿಯಾಗುತ್ತಿತ್ತು.

ಇತ್ತೀಚೆಗೆ ಬಿಡುವಿಲ್ಲದ ಬಂದೋಬಸ್ತ್ ಸಂದರ್ಭದಲ್ಲಿ, ಇಲಾಖೆಯಲ್ಲಿ ಬರೋಬ್ಬರಿ ೩೩ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ, ಮೂಲತಃ ಮಲೆನಾಡಿನವರಾದ ಅಡಿಷನಲ್ ಎಸ್‌ಪಿರವರೊಬ್ಬರೊಂದಿಗೆ ಕಾಫಿ ಕುಡಿಯುತ್ತಾ ನಡೆಸಿದ ಸಮಾಲೋಚನೆ ಸಂದರ್ಭದಲ್ಲಿ ಅವರು ಸಹೋದ್ಯೋಗಿಗೆ ಅಗೌರವ ತೋರಿದ್ದ ವಿಷಯದಲ್ಲಿ (ಗುರುತರವಲ್ಲದ) ಕೆಳಹಂತದ ಅಧಿಕಾರಿಯೊಬ್ಬರ ವಿಚಾರಣೆ ನಡೆಸುವಾಗ, ಆ ಅಧಿಕಾರಿಯವರಿಗೆ ತುಂಬಾ ಕಠಿಣವಾದ ಕ್ರಮ ಜರುಗಿಸುವ ಬದಲು, ಅವರು ಹುಣಸೂರಿನವರೆಂದು ತಿಳಿದುಬಂದಿದ್ದಕ್ಕೆ ದೇವರಾಜ ಅರಸು ಅವರ ಕುರಿತಾದ ಪುಸ್ತಕವನ್ನು ಒಂದು ಗಂಟೆ ಕಾಲ ಓದಲು ಸೂಚಿಸಿದ್ದಾಗಿ ತಿಳಿಸಿದರು. ಈ ರೀತಿಯ ಸೃಜನಾತ್ಮಕ ಮತ್ತು ಪರಿವರ್ತನಾತ್ಮಕ ದಂಡನೆಯು ಆ ಅಧಿಕಾರಿಯಲ್ಲಿ ಸಕಾರಾತ್ಮಕ ಬದಲಾವಣೆ ತಂದಿದ್ದನ್ನು ಮತ್ತೆಂದೂ ಆ ಅಧಿಕಾರಿ ಮೇಲೆ ಆ ತರಹದ ಆಪಾದನೆ ಬರಲಿಲ್ಲವೆಂದು ಅವರು ನನಗೆ ತಾವು ಸಂಯಮದಿಂದ ಕೈಗೊಂಡ ವಿಶಿಷ್ಟ ಕ್ರಮದ ಬಗ್ಗೆ ಹೆಮ್ಮೆಯಿಂದ ಹೇಳಿದಾಗ ನಾನು ಅವರಿಗೆ ಸಾಹಿತ್ಯಕ್ಕೆ ಮನುಷ್ಯನ ಭಾವನೆಗಳನ್ನು ಮಾತ್ರವಲ್ಲದೆ ಭಾಷೆಯನ್ನು ಕೂಡ ಬದಲಾಯಿಸುವ ಶಕ್ತಿ ಇದೆ ನೋಡಿ ಅಂತ ಹೇಳಿದೆ . ಆಗ ಅದೇ ಸಮಯದಲ್ಲಿ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ತಾಯಿಯೊಬ್ಬರು ತನ್ನ ಮಗುವನ್ನು ಗದರಿಸುತ್ತಾ, ನೀನು ಗಲಾಟೆ ಮಾಡಿದರೆ ಈ ಪೊಲೀಸ್ ಮಾಮ ಕರ್ಕೊಂಡು ಹೋಗ್ತಾರೆ ನೋಡು ಎಂದು ಹೆದರಿಸಿದ್ದು ನಮ್ಮಿಬ್ಬರ ಮಾತಿಗೆ ಬ್ರೆಕ್ ಹಾಕಿತು. ತಕ್ಷಣವೇ ನಾವು ಆಕೆಗೆ ಚಿಕ್ಕಮಗುವಿನ ಮನಸ್ಸಿನಲ್ಲಿ ಪೊಲೀಸರೆಂದರೆ ದಯವಿಟ್ಟು ಭಯ ಹುಟ್ಟಿಸಬೇಡಿ ತಾಯಿ! ಎಂದು ತಿಳಿಹೇಳಬೇಕಾಯಿತು. ನಾವು ಮಗುವಿಗೆ ಗದರಿಸುತ್ತೇವೆಂದು ಭಾವಿಸಿದ್ದ ಆಕೆಗೆ ನಮ್ಮ ಮಾತಿನ ವರಸೆ ಕಂಡು ನಿರಾಸೆಗೊಂಡರೂ ವ್ಯಕ್ತಪಡಿಸದೆ ಸಾರಿ ಸರ್ ಎಂದರು. ಅಲ್ಲಿಂದ ಹೊರಡುವಾಗ ‘ ಜನರೇಷನ್-ಅಲ್ಫಾ’ ಪೀಳಿಗೆಯ ಆ ಪುಟ್ಟ ಮಗು ನಮಗೆ ‘ಹೈಫೈ’ ಮಾಡಿ ಹೋದದ್ದು ನಮ್ಮೊಳಗಿನ ಮಗುವಿಗೆ ಕೂಡ ಅಷ್ಟೇ ಸಂತೋಷವಾಯಿತು.

ಶಾಲಾ ಪಠ್ಯಗಳಲ್ಲಿ ನಮ್ಮಂತೆ ಸಮವಸ್ತ್ರ ಧರಿಸುವ ಅಂಚೆ ಅಣ್ಣ, ಕಂಡಕ್ಟರ್ ಎಲ್ಲರೂ ಮಕ್ಕಳಿಗೆ ಶಿಶು ಸಾಹಿತ್ಯದ ಮೂಲಕ ಆಪ್ತರಾಗುವಂತಾದರೆ, ಗನ್ ಹಿಡಿದುಕೊಂಡು ತಿರುಗಾಡುವ ನಾವುಗಳು ಮಾತ್ರ ‘ಪೊಲೀಸ್ ಮಾಮ’ ಎಂಬ ಉಕ್ತಿ ಪಡೆದು, ತುಂಟಾಟ ಮಾಡುವ ಮಕ್ಕಳಿಗೆ ಭಯಪಡಿಸುವ ಸಲುವಾಗಿ ಅಮ್ಮಂದಿರು ಸೃಷ್ಟಿಸಿದ ಭೂತಗಳಂತೆ ಆಗಿ, ದೇಶದ ಭವಿಷ್ಯದ ನಾಗರಿಕರಾದ ಮಕ್ಕಳ ಸುಪ್ತ ಮನಸಿನಲ್ಲಿ ಪೊಲೀಸರು ಕೇವಲ ಶಿಕ್ಷೆಯಮ ಪ್ರತೀಕವಾಗಬಾರದು ಮತ್ತು ಅದನ್ನೇ ತಲೆಯಲ್ಲಿಟ್ಟುಕೊಂಡ ಮಕ್ಕಳು ಮುಂದೆ ಪೊಲೀಸ್ ಇಲಾಖೆಯ ಸೇವೆಗೆ ಸೇರಿ ಅವರ ತಾಯಂದಿರು ಹೇಳುವಂತಹ ‘ಪೊಲೀಸ್ ಮಾಮ’ ನಂತ ಭೂತಗಳಾಗಬಾರದೆಂದು ನಮ್ಮ ಆಶಯವಷ್ಟೇ.

ಇತಿಹಾಸದ ಹೆಜ್ಜೆಗುರುತುಗಳು ಮತ್ತು ಬ್ರಿಟಿಷ್ ಕಾಲೋನಿಯಲ್ ಪ್ರಭಾವ: ಪೊಲೀಸ್ ವ್ಯವಸ್ಥೆ ಎಂದರೆ ಅದು ಆಯಾ ಸಮಾಜದ ಭಾಷೆ ಮತ್ತು ಸಂಸ್ಕೃತಿಯ ಪ್ರತಿಬಿಂಬ ಎಂದರೆ ತಪ್ಪಾಗದು. ಕರ್ನಾಟಕವು ಐತಿಹಾಸಿಕವಾಗಿ ಮುಂಬೈ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ, ಹೈದರಾಬಾದ್ ನಿಜಮ್ ಪ್ರಾಂತ್ಯ ಮತ್ತು ಹಳೆ ಮೈಸೂರು ರಾಜ್ಯ, ಹೀಗೆ ವಿಂಗಡನೆಗೊಂಡಿದ್ದ ಕಾಲದಲ್ಲಿ, ಪೊಲೀಸ್ ವ್ಯವಸ್ಥೆಯೂ ಕೂಡ ಪ್ರಾಂತೀಯವಾಗಿ ಭಿನ್ನವಾಗಿತ್ತು. ಉದಾಹರಣೆಗೆ ಮುಂಬೈ ಕರ್ನಾಟಕದಲ್ಲಿ ಪಿಎಸ್‌ಐ ಹುದ್ದೆಯನ್ನು ‘ಫೌಜ್ಧಾರ್’ ಎಂದೂ, ಹೈದರಾಬಾದ್ ಪ್ರಾಂತ್ಯದಲ್ಲಿ ‘ಅಮೀನ್ ಸಾಬ’ ಎಂದೂ, ಮೈಸೂರು ಪ್ರಾಂತ್ಯದಲ್ಲಿ ‘ಜಮೇದಾರ್ ’ ಎಂದೂ, ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ‘ಎಸ್ ಎಚ್‌ಒ’ ಎಂದೂ ಕರೆಯಲ್ಪಡುತ್ತಿತ್ತು.

ಉತ್ತರ ಕರ್ನಾಟಕದ ನನ್ನ ಹಳ್ಳಿಯಲ್ಲಿ ಹಿಂದಿನ ಕಾಲದಲ್ಲಿ ದಫೇದಾರರವರು ಸೈಕಲ್ ಮೇಲೆ ಬಂದಾಗ ಆತ ಹೋಗುವ ಸೈಕಲ್ಲಿನಿಂದ ಜಂಪ್ ಮಾಡುತ್ತಿದ್ದರೆ, ಊರಿನವರು ಖಾಲಿ ಸೈಕಲ್ ಓಡುತ್ತಿರುವಾಗಲೇ ಕೆಳಗೆ ಬೀಳುವ ಮೊದಲು ಅದನ್ನು ಹಿಡಿದುಕೊಳ್ಳಬೇಕಾಗಿತ್ತಂತೆ, ಹೀಗೆ ಪೊಲೀಸ್ ದರ್ಪದ ಸಾಕಷ್ಟು ರೋಚಕ ಕಥೆಗಳು ಅಲ್ಲಿ ಈಗಲೂ ಚಾಲ್ತಿಯಲ್ಲಿವೆ. ಇನ್ನು ಹೈದರಾಬಾದ್ ಪ್ರಾಂತ್ಯದಲ್ಲಿ ಅಮೀನ್ ಸಾಬ ಅವರನ್ನು ಭೇಟಿಯಾಗಲು ಗಣ್ಯರ ಶಿಫಾರಸು ಪಡೆದು ಕಚೇರಿಗೆ ಬಂದಾಗ ಸೊಂಟ ಬಾಗಿಸಿ ಮೂರು ಬಾರಿ ಸಲಾಮಿ ಸಲ್ಲಿಸಬೇಕಿತ್ತಂತೆ.

ಸ್ವಾತಂತ್ರ್ಯಾನಂತರ ಮತ್ತು ಕರ್ನಾಟಕ ಏಕೀಕರಣದ ಬಳಿಕ ಈ ಬ್ರಿಟಿಷ್ ಕಾಲೋನಿಯಲ್ ಮತ್ತು ರಾಜಪ್ರಭುತ್ವದ ಮನಸ್ಥಿತಿಯಿಂದ ಹೊರಬರಲು ಪೊಲೀಸ್ ವ್ಯವಸ್ಥೆ ನಿರಂತರವಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಪರಿವರ್ತನೆಗೊಳ್ಳುತ್ತಾ ಬಂದಿದೆ. ಅದರಂತೆ ‘ಸಂತ್ರಸ್ತರ ಕೇಂದ್ರೀಕೃತ ಪೊಲೀಸಿಂಗ್’ ಇಂದಿನ ತುರ್ತು ಅಗತ್ಯವೂ ಆಗಿದೆ. ಕಳೆದ ವರ್ಷ ನಮ್ಮ ಪೊಲೀಸ್ ಇಲಾಖೆಯ ಮುಖ್ಯಸ್ಥರು ನೀಡಿದ ಕರೆಯ ಮೇರೆಗೆ, ಇಲಾಖೆಯು ‘ಆರೋಪಿ ಕೇಂದ್ರೀಕೃತ’ ನೀತಿಯಿಂದ ‘ಸಂತ್ರಸ್ತರ ಕೇಂದ್ರೀಕೃತ’ ಪೊಲೀಸಿಂಗ್ ಕಡೆಗೆ ಹೆಜ್ಜೆ ಇಡುತ್ತಿದೆ. ಸಂತ್ರಸ್ತರಿಗೆ ಅವರ ಹಕ್ಕುಗಳು, ತನಿಖೆಯ ಪ್ರಗತಿ ಹಾಗೂ ಸರಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದು ಇಂದಿನ ಪ್ರಮುಖ ಆದ್ಯತೆಯಾಗಿದೆ. ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರೊಂದಿಗೆ ವಿಶೇಷ ಕಾಳಜಿಯಿಂದ ವರ್ತಿಸುವುದು ನಮ್ಮಸೇವೆಯ ಬದ್ಧತೆಯಾಗಿದೆ.

ಇತ್ತೀಚೆಗೆ ಪೊಲೀಸರು ಸಮವಸಗಳ ಮೇಲೆ ಧರಿಸುವ ಕ್ಯಾಮೆರಾಗಳು ನಮ್ಮ ನಡವಳಿಕೆಯಲ್ಲಿನ ಜವಾಬ್ದಾರಿಯ ಜೊತೆಗೆ ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಸಾರ್ವಜನಿಕರೊಂದಿಗೆ ಮಾತನಾಡುವಾಗ ಪೊಲೀಸ್ ಭಾಷೆ ಎನ್ನುವ ಉಪಸಂಸ್ಕೃತಿಯ ಭಯ ಹುಟ್ಟಿಸುವ ಶೈಲಿಯನ್ನು ಬಿಟ್ಟು, ಭರವಸೆಯ ಭಾಷೆಯನ್ನು ಅಳವಡಿಸಿಕೊಂಡು, ಶರಣರ ವಚನಗಳಾದ ನುಡಿದರೆ ಮುತ್ತಿನ ಹಾರದಂತಿರಬೇಕು,ಅನ್ಯರಿಗೆ ಅಸಹ್ಯ ಪಡಬೇಡ, ಇದಿರ ಹಳಿಯಲುಬೇಡ ಅಯ್ಯಾ ಎಂದಡೆ ಸ್ವರ್ಗ.. ಎಲ್ಲವೋ ಎಂದರೆ ನರಕ..!ಎನ್ನುವ ತತ್ವಗಳು ನಮ್ಮ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಮಾರ್ಗದರ್ಶಿಗಳಾಗಿವೆ. ಪ್ರತಿನಿತ್ಯ ಅಪರಾಧಿಕ ಜಗತ್ತಿನೊಂದಿಗೆ ವ್ಯವಹರಿಸುವ ಪೊಲೀಸರು ತಮ್ಮ ದೈಹಿಕ  ಮತ್ತು ಮಾನಸಿಕ ಆರೋಗ್ಯದ ಸಮತೋಲನವನ್ನು ಕಾಪಾಡಿಕೊಳ್ಳುವುದು ಅತೀ ಅವಶ್ಯಕವಾಗಿದೆ.

ಮೈಸೂರು ದಸರೆಯ ಬನ್ನಿಮಂಟಪದ ಪಂಜಿನ ಕವಾಯತಿನಂತಹ ಭದ್ರತೆಗೆ ಅತಿ ಹೆಚ್ಚು ಸವಾಲೊಡ್ಡುವ ೩೫ ಸಾವಿರ ಜನ ಒಂದೆಡೆ ಸೇರುವ ಕಾರ್ಯಕ್ರಮದ ವಿಐಪಿ ಸೆಕ್ಟರ್ ಮತ್ತು ಸಾರ್ವಜನಿಕರು ಆಗಮಿಸುವ ಸ್ಟೇಡಿಯಂ ಗೇಟ್‌ಗಳ ಉಸ್ತುವಾರಿಯನ್ನು ನಾನು ನಿರ್ವಹಿಸುವಾಗ ಸಹೋದ್ಯೋಗಿಗಳಿಗೆ ನಮ್ಮ ಭಾಷೆ ಸೌಜನ್ಯತೆಯಿಂದ ಕೂಡಿರಲಿ, ಆದರೆ ದೃಢವಾಗಿರಲಿ ಎಂದು ತಿಳಿಸಿ ಪ್ರಾತ್ಯಕ್ಷಿಕೆ ಮಾಡಿಸಿ ಮಾರ್ಗದರ್ಶನ ನೀಡಿದ್ದೆ. ಇದರ ಪರಿಣಾಮವಾಗಿ ಬನ್ನಿಮಂಟಪ ಕಾರ್ಯಕ್ರಮ ಸುಗಮವಾಗಿ ಜರುಗಿ ಅತ್ಯಂತ ಯಶಸ್ವಿಯಾಯಿತು. ಸಹೋದ್ಯೋಗಿ ಸಿಬ್ಬಂದಿಗಳು ಈ ಕುರಿತು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡ ತಮ್ಮ ಅನುಭವ ಮತ್ತು ಅಭಿಮಾನದ ಮಾತುಗಳು ಎಲ್ಲರಿಗೂ ಅಪಾರ ಆತ್ಮಸಂತೋಷ ತಂದವು. ಇದು ನಮ್ಮ ಅಧಿಕಾರಿ ಸಿಬ್ಬಂದಿಗಳು ಮನೆ ಕುಟುಂಬ ತೊರೆದು೧೦ ದಿನಗಳ ಕಾಲ ನಿರಂತರವಾಗಿ ಕರ್ತವ್ಯ ನಿರ್ವಹಿಸಿದ್ದ ಆಯಾಸವನ್ನು ಮರೆಸಿತು.

ಜರ್ಮನಿ ದೇಶದ ಬವೇರಿಯಾ ಪೊಲೀಸ್ ಅಕಾಡೆಮಿಯ ಹಿರಿಯ ಅಧಿಕಾರಿಗಳಾದ ಮಲಫ್ರೆಡ್ ಮತ್ತು ರೌಲ್ಫ್ ರವರು ಇತ್ತೀಚೆಗೆ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರೊಂದಿಗೆ ನಾನು ಪೊಲೀಸ್ ಸಂವಹನದ ಕುರಿತು ಅನುಭವಗಳನ್ನು ಹಂಚಿಕೊಂಡಾಗ, ಅವರು ಪೊಲೀಸರು ನಾಗರಿಕರೊಂದಿಗೆ ಸಂವಹನ ನಡೆಸುವಾಗ ಭಾಷೆಯ ಬಳಕೆ, ಮುಕ್ತತೆ, ತಟಸ್ಥ ಧೋರಣೆ, ಸಮಾನತೆ ಮತ್ತು ನಿರಂತರತೆಯ ತತ್ವವನ್ನು ಸದಾ ಪಾಲಿಸಬೇಕು ಎಂದು ಅಭಿಪ್ರಾಯಪಟ್ಟರು. ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿರುವ ನಮ್ಮ ಗಡಿಗಳು ಮತ್ತು ಪೊಲೀಸ್ ವ್ಯವಸ್ಥೆಗಳು ಬೇರೆ ಬೇರೆಯಾಗಿದ್ದರೂ, ಜನರ ರಕ್ಷಣೆ ಮತ್ತು ಜನಸ್ನೇಹಿ ಪೊಲೀಸಿಂಗ್‌ನ ಮೂಲ ಉದ್ದೇಶ ಮಾತ್ರ ಎರಡೂ ದೇಶಗಳಲ್ಲಿ ಒಂದೇ ಆಗಿದೆ. ಅದು ‘ನಾಗರಿಕರ ಸುರಕ್ಷತೆಯೇ ಪೊಲೀಸರ ಆದ್ಯತೆ’ ಆದಾಗ ನಾಗರಿಕರ ಹೃದಯದಲ್ಲೂ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ಎಂಬ ಸದ್ಭಾವನೆ ಸಹಜವಾಗಿಯೇ ಮೂಡುತ್ತದೆ.

ಜನಸ್ನೇಹಿ ಪೊಲೀಸಿಂಗ್:  ಪೊಲೀಸ್ ತರಬೇತಿ ಶಾಲೆಗಳು ಮತ್ತು ಅಕಾಡೆಮಿಯಲ್ಲಿ ಈಗ ಯೋಗ ಮತ್ತು ಧ್ಯಾನವನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಂಡು ನಮ್ಮ ಅಂತರಂಗದ ಪ್ರಶಾಂತತೆಯಿಂದ ಮಾತ್ರ ಬಹಿರಂಗದಲ್ಲಿ ನಾವು ಶಾಂತಿ, ಸೌಹಾರ್ದತೆಯನ್ನು ಕಾಪಾಡಲು ಸಾಧ್ಯ ಎಂಬ ಸತ್ಯವನ್ನು ತಿಳಿಸಿಕೊಡಲಾಗುತ್ತಿದೆ.

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸೂಚನಾ ಫಲಕ, ಬೀದಿ ದೀಪ ಅಳವಡಿಸಿ

ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ಕಾಮಗಾರಿ ನಡೆಯುತ್ತಿದ್ದು, ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ…

2 mins ago

ಯುವನಿಧಿ: ನಿರುದ್ಯೋಗಿಗಳ ಖಾತೆಗೆ 47 ಕೋಟಿ ರೂ

ಕೇಶವ್ ಎಂ. ಮೈಸೂರು ಜಿಲ್ಲೆಯಲ್ಲಿ ಪದವಿ ೧೯,೨೭೯, ಡಿಪ್ಲೊಮಾ ೨೬೮ ಮಂದಿ ಸೇರಿದಂತೆ ಒಟ್ಟು ೧೯,೫೪೭ ಮಂದಿ ನೋಂದಣಿ ಮೈಸೂರು:…

15 mins ago

ಕನ್ನಡ ಸಾಂಸ್ಕೃತಿಕ ತೇರಾದ ಕೆಎಸ್‌ಆರ್‌ಟಿಸಿ ಬಸ್!

ಭೇರ್ಯ ಮಹೇಶ್ ಕೆ.ಆರ್.ನಗರ: ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಂದು ತಮ್ಮ ಸ್ವಂತ ಖರ್ಚಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಮದುವಣಿಗಿತ್ತಿಯಂತೆ ಶೃಂಗರಿಸಿ, ಕನ್ನಡದ…

22 mins ago

ಚುನಾವಣಾ ಆಯೋಗದ ವಿರುದ್ಧ ನ.5ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ನವೆಂಬರ್‌ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ ಎಂದು ಬಿ.ಕೆ.…

18 hours ago

ದಿಲ್ಲಿಯಲ್ಲಿ 2 ದಿನ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಅಸ್ತು – ನ.9 ರಿಂದ ಮತ್ತೆ ಸಂಪೂರ್ಣ ನಿಷೇಧ

ನವದೆಹಲಿ: ದೀಪಾವಳಿ ಹಿನ್ನೆಲೆಯಲ್ಲಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡು ದಿನ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್‌ ಅನುಮತಿ…

18 hours ago