Andolana originals

ಕಸದ ರಾಶಿಗೆ ನಲುಗಿದ ಮುಡಾ ಕಾಂಪ್ಲೆಕ್ಸ್

ಮೈಸೂರು: ಕಸಕಡ್ಡಿಗಳ ರಾಶಿ, ಮದ್ಯದ ಖಾಲಿ ಬಾಟಲುಗಳು, ಬಂದ್ ಆಗಿರುವ ಶೌಚಾಲಯ, ಗಬ್ಬು ನಾರುವ ಆವರಣ, ಪಾಳುಬಿದ್ದಿರುವ ಕೋಟ್ಯಂತರ ರೂ. ಮೌಲ್ಯದ ಆಸ್ತಿ…

ಇದು ಮೈಸೂರಿನ ರಾಮ ಕೃಷ್ಣನಗರದಲ್ಲಿರುವ ಮುಡಾ ಕಾಂಪ್ಲೆಕ್ಸ್‌ನ ಚಿತ್ರಣ. ಸರ್ಕಾರಿ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತರೆ, ಸರ್ಕಾರದ ಆಸ್ತಿಯ ಸ್ಥಿತಿಗತಿ ಹೇಗಿರಬಹುದು ಎಂಬುದಕ್ಕೆ ಈ ಕಾಂಪ್ಲೆಕ್ಸ್ ಒಂದು ಉದಾಹರಣೆ. ವಾರಕ್ಕೆ ಒಮ್ಮೆಯಾ ದರೂ ಇಲ್ಲಿನ ಆವರಣವನ್ನು ಸ್ವಚ್ಛಗೊಳಿಸಬೇಕು ಎಂಬ ಕನಿಷ್ಠ ಪ್ರಜ್ಞೆ ಕೂಡ ಮುಡಾ ಅಧಿಕಾರಿಗಳಿಗೆ ಇಲ್ಲ ಎಂಬುದು ಇಲ್ಲಿ ಸಾಬೀತಾಗಿದೆ. ರಾಮಕೃಷ್ಣಗಗರದ ಆಂದೋಲನ ವೃತ್ತದ ಕಳೆದ 15 ವರ್ಷಗಳ ಹಿಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ವತಿಯಿಂದ ವಾಣಿಜ್ಯ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗಿದೆ. ಇಲ್ಲಿ ಕೆಳ ಹಂತದಲ್ಲಿ 30 ಮಳಿಗೆಗಳಿವೆ. ಮೊದಲ ಅಂತಸ್ತಿನಲ್ಲಿ ಎರಡು ಸರ್ಕಾರಿ ಕಚೇರಿಗಳಿವೆ. ಮೂವತ್ತು ಮಳಿಗೆಗಳಿಗೆ ಇರುವುದು ಎರಡು ಶೌಚಾಲಯಗಳು ಮಾತ್ರ. ಅದು ಕೂಡ ಮಳಿಗೆದಾರರ ಬಳಕೆಗಾಗಿ, ಸಾರ್ವಜನಿಕರಿಗೆ ಪ್ರತ್ಯೇಕ ಶೌಚಾಲಯಗಳೂ ಇಲ್ಲ. ಹೀಗಾಗಿ ಕಾಂಪ್ಲೆಕ್ಸ್‌ನ ಖಾಲಿ ಜಾಗದಲ್ಲಿಯೇ ಮೂತ್ರ ವಿಸರ್ಜನೆ ಮಾಮೂಲು.

ಇನ್ನು ಕಾಂಪ್ಲೆಕ್ಸ್‌ನಲ್ಲಿ ನೀರಿನ ಸಮಸ್ಯೆ ಕೂಡ ಆಗಾಗ್ಗೆ ಕಾಡುತ್ತಿರುತ್ತದೆ. ಸುಮಾರು 1 ಎಕರೆವಿಸ್ತೀರ್ಣದಲ್ಲಿರುವ ಕಾಂಪ್ಲೆಕ್ಸ್‌ನ ಆವರಣದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ ಸ್ವಾಗತಿಸುತ್ತದೆ. ಕೆಳ ಹಾಗೂ ಮೊದಲ ಅಂತಸ್ತುಗಳಲ್ಲಿ ಕಸಕಡ್ಡಿ, ಗಲೀಜು ವಾಸನೆಯಿಂದ ಮೂಗು ಮುಚ್ಚಿಕೊಳ್ಳುವುದು ಅನಿವಾರ್ಯವಾಗಿದೆ.

ಕುಡುಕರ ಹಾವಳಿ…
ಇನ್ನು ರಾತ್ರಿ ಆಯಿತೆಂದರೆ ಕಾಂಪ್ಲೆಕ್ಸ್‌ನ ಆವರಣದಲ್ಲಿ ಕುಡುಕರ ಹಾವಳಿ ವಿಪರೀತವಾಗಿರುತ್ತದೆ. ಆವರಣದ ಅನೇಕ ಕಡೆಗಳಲ್ಲಿ ಬಿಯರ್, ವಿಸ್ಕಿ, ಬ್ರಾಂದಿಯ ಖಾಲಿ ಬಾಟಲುಗಳು, ಆಹಾರ ತಿಂದು ಬಿಸಾಡಿದ ತ್ಯಾಜ್ಯಗಳು ಎಗ್ಗಿಲ್ಲದೆ ಕಾಣಸಿಗುತ್ತವೆ.

ಗೇಟ್‌ಗೆ ಬೀಗ ಇಲ್ಲ…
ಕಾಂಪ್ಲೆಕ್ಸ್‌ನಲ್ಲಿರುವ ಮಳಿಗೆದಾರರು ಪ್ರತಿದಿನ ಸಂಜೆ 7 ಗಂಟೆ ವೇಳೆಗೆ ತಮ್ಮ ವ್ಯವಹಾರವನ್ನು ಮುಗಿಸಿ ಮನೆಗೆ ತೆರಳುತ್ತಾರೆ. ನಂತರ ಈ ಕಟ್ಟಡದಲ್ಲಿ ಏನು ನಡೆದರೂ ಹೇಳುವವರು, ಕೇಳುವವರು ಯಾರೂ ಇಲ್ಲ. ಕನಿಷ್ಠ ಇಲ್ಲಿನ ಗೇಟ್‌ಗಳಿಗೆ ಬೀಗವನ್ನೂ ಹಾಕುವುದಿಲ್ಲ.

ನಗರ ಯೋಜನಾ ಶಾಖೆ ಸ್ಥಳಾಂತರ…
ಹಿಂದೆ ಈ ಕಾಂಪ್ಲೆಕ್ಸ್‌ನಲ್ಲಿ ಮುಡಾದ ನಗರ ಹಾಗೂ ಗ್ರಾಮಾಂತರ ಯೋಜನಾ ಶಾಖೆ ಕರ್ತವ್ಯ ನಿರ್ವಹಿಸುತ್ತಿತ್ತು. ಹಾಗಾಗಿ ಆಗಿಂದಾಗ್ಗೆ ಸ್ವಚ್ಛತಾ ಕೆಲಸಗಳು ನಡೆಯುತ್ತಿದ್ದು, ಕೆಲ ತಿಂಗಳ ಹಿಂದೆ ಕಚೇರಿ ಸ್ಥಳಾಂತರವಾಗಿದ್ದು, ಇಲ್ಲಿ ಸ್ವಚ್ಛತಾ ಕಾರ್ಯ ಸ್ಥಗಿತಗೊಂಡಿದೆ.

ಕೋಟ್ಯಂತರ ರೂ. ಮೌಲ್ಯದ ಆಸ್ತಿ ವ್ಯರ್ಥ…
ಇಲ್ಲಿ ಕಟ್ಟಡವನ್ನು ಹೊರತುಪಡಿಸಿ ಕೋಟ್ಯಂತರ ರೂ. ಮೌಲ್ಯದ ಖಾಲಿ ಜಾಗವಿದೆ. ಈ ಜಾಗವೀಗ ಪಾಳು ಬಿದ್ದಿದೆ. ರಸ್ತೆಯಲ್ಲಿ ನಿಲ್ಲಬೇಕಾದ ಖಾಸಗಿ ವ್ಯಕ್ತಿಗಳ ಕಾರು ನಿಲ್ದಾಣವಾಗಿ ಮಾರ್ಪಟ್ಟಿದೆ. ಇಲ್ಲಿ ಮತ್ತಷ್ಟು ಕೊಠಡಿಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದರೆ ಮುಡಾಗೆ ಪ್ರತಿ ತಿಂಗಳು ಆದಾಯ ಬರುತ್ತದೆ. ಈ ಬಗ್ಗೆ ಯಾರೂ ಗಮನ ಹರಿಸಿಲ್ಲ.

ಸುಣ್ಣ ಬಣ್ಣವಿಲ್ಲ…
ಕಟ್ಟಡ ನಿರ್ಮಾಣ ಮಾಡಿದಾಗ ಮಾತ್ರ ಕಟ್ಟಡಕ್ಕೆ ಸುಣ್ಣ, ಬಣ್ಣ ಮಾಡಿಸಲಾಗಿದೆ. ಮಳಿಗೆಗಳನ್ನು ಹರಾಜು ಹಾಕಿದ ನಂತರ ಕಾಂಪ್ಲೆಕ್ಸ್‌ನ ಉಸ್ತುವಾರಿ ಬಗ್ಗೆ ಮುಡಾ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಹೀಗಾಗಿ ಇಡೀ ಕಟ್ಟಡಕ್ಕೆ ಮಂಕು ಬಡಿದಂತೆ ಇದೆ.

ಸ್ವಚ್ಛ ನಗರಿ ಎಂಬ ಬಿರುದು ಮೈಸೂರಿಗಿದೆ. ಆದರೆ ಕೆಲ ಇಲಾಖೆಗಳು ಮಾತ್ರ ತಮ್ಮ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲ. ಅದರಲ್ಲಿ ರಾಮಕೃಷ್ಣನಗರದ ಮುಡಾ ಕಾಂಪ್ಲೆಕ್ಸ್ ಕೂಡ ಒಂದು. ಮುಡಾ ಸಿಬ್ಬಂದಿ ಸೂಕ್ತವಾಗಿ ನಿರ್ವಹಣೆ ಮಾಡುವುದಿಲ್ಲ. ಹೀಗಾಗಿ ಅಲ್ಲಿನ ಆವರಣ ಅಶುಚಿತ್ವದಿಂದ ಕೂಡಿದೆ. ನಮ್ಮ ಮನವಿ ಮೇರೆಗೆ ಸಾಕಷ್ಟು ಬಾರಿ ನಗರಪಾಲಿಕೆ ಸಿಬ್ಬಂದಿ ಅಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಆದರೆ,
ಕಾಂಪ್ಲೆಕ್ಸ್ ನಗರಪಾಲಿಕೆಗೆ ಹಸ್ತಾಂತರವಾಗಿಲ್ಲ. ಮುಡಾ ಅಧಿಕಾರಿಗಳು ತಕ್ಷಣವೇ ಕಾಂಪ್ಲೆಕ್ಸ್‌ ನ್ನು ನಗರಪಾಲಿಕೆಗೆ ಹಸ್ತಾಂತರ ಮಾಡಬೇಕು. ಇದರಿಂದಲಾದರೂ ಕಾಲಕಾಲಕ್ಕೆ ಸ್ವಚ್ಛತಾಕಾರ್ಯ ನಡೆಯುತ್ತದೆ.
-ಬಸವಣ್ಣ, ನಾಗರಿಕ ಕ್ಷೇಮಾಭಿವೃದ್ಧಿ ಸಂಘ, ರಾಮಕೃಷ್ಣನಗರ.

 

ದೂರು ನೀಡಿದ್ದರೂ ಪ್ರಯೋಜನ ಆಗಿಲ್ಲ…

ಈ ಮೊದಲು ವಾರಕ್ಕೆ ಅಥವಾ ತಿಂಗಳಿಗೆ ಒಮ್ಮೆಯಾದರೂ ಕಾಂಪ್ಲೆಕ್ಸ್‌ನ ಕಸವನ್ನು ಸ್ವಚ್ಛಗೊಳಿಸಲಾಗುತ್ತಿತ್ತು. ಆದರೀಗ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ. ಕಟ್ಟಡದ ಸುತ್ತಮುತ್ತ ಗಿಡ ಗಂಟಿಗಳು ಬೆಳೆದು ನಿಂತಿವೆ. ಈ ಸಂಬಂಧ ಮುಡಾ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
-ಎಂ.ಕೆ.ಸುನಿಲ್, ಸ್ಥಳೀಯರು.

ಸ್ವಚ್ಛಗೊಳಿಸಲು ಕ್ರಮ
ಕಾಂಪ್ಲೆಕ್ಸ್‌ನಲ್ಲಿ ಇರುವ ಮಳಿಗೆಗಳನ್ನು ಹರಾಜು ಹಾಕಲಾಗಿದೆ. ಸ್ವಚ್ಛತೆಗೆ ಮಳಿಗೆದಾರರೂ ಸಹಕರಿಸಬೇಕು. ಕಟ್ಟಡದ ಸುತ್ತಮುತ್ತಲಿನ ಜಾಗ ಮುಡಾ ವ್ಯಾಪ್ತಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಕಾಂಪ್ಲೆಕ್ಸ್‌ನ ಆವರಣವನ್ನು ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು.
-ಶೇಖರ್, ಕಾರ್ಯದರ್ಶಿ, ಮುಡಾ

ಹೆಚ್. ಎಸ್.‌ ದಿನೇಶ್‌ ಕುಮಾರ್

ಮೈಸೂರಿನವನಾದ ನಾನು, 1994ರಲ್ಲಿ ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಬಿಕಾಂ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 22 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಮೈಸೂರಿನ ಪಾದೇಶಿಕ ಪತ್ರಿಕೆ ʼಸಂಕ್ರಾಂತಿʼಯಿಂದ ಪ್ರಾರಂಭಿಸಿ, ಇಂದು ಸಂಜೆ ಪತ್ರಿಕೆಯಲ್ಲಿ ವರದಿಗಾರ, ಮುಖ್ಯ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಸದ್ಯ ಮೈಸೂರಿನ ʼಆಂದೋಲನ ದಿನಪತ್ರಿಕೆಯಲ್ಲಿ ಕಳೆದ 15 ವರ್ಷಗಳಿಂದ ಅಪರಾಧ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸ.

Recent Posts

ಫಲಾನುಭವಿಗಳ ಖಾತೆಗೆ ಜಮೆಯಾಗದ ಗೃಹಲಕ್ಷ್ಮಿ ಹಣ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಿಷ್ಟು.!

ಬೆಳಗಾವಿ: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಕೆಲ ತಿಂಗಳಿಂದ ಹಣ ಜಮೆಯಾಗಿದಿರುವುದು ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನು ಓದಿ: ಗೃಹ…

13 mins ago

ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಕೊಡಗು: ಸೋಮವಾರಪೇಟೆ ವಿದ್ಯುತ್‌ ವಿತರಣಾ ಉಪ ಕೇಂದ್ರದಿಂದ ನಾಳೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಫೀಡರ್‌ ನಿರ್ವಹಣೆ ಕಾಮಗಾರಿ…

27 mins ago

ಗಾಂಜಾ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ: ಓರ್ವನ ಕೊಲೆಯಲ್ಲಿ ಅಂತ್ಯ

ಎಚ್.ಡಿ.ಕೋಟೆ: ಗಾಂಜಾ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಪಟ್ಟಣದಲ್ಲಿ…

49 mins ago

ನಟಿ ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ಪಬ್‌ ಮೇಲೆ ಐಟಿ ದಾಳಿ

ಬೆಂಗಳೂರು: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ಪಬ್‌ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.…

1 hour ago

ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಹೊಸ ರೂಲ್ಸ್

ಬೆಂಗಳೂರು: ಈ ಬಾರಿ ಹೊಸ ವರ್ಷ ಸ್ವಾಗತಿಸಲು ಬೆಂಗಳೂರು ನಗರ ಸಜ್ಜಾಗಿದ್ದು, ಪೊಲೀಸ್‌ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. 1)…

2 hours ago

ಹುಣಸೂರು| ಅಪೆ ಆಟೋ ಕೆರೆಗೆ ಉರುಳಿ ಚಾಲಕ ಸಾವು

ಹುಣಸೂರು: ಚಾಲಕನ ನಿಯಂತ್ರಣ ತಪ್ಪಿ ಅಪೆ ಆಟೋವೊಂದು ಕೆರೆಗೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯಲ್ಲಿ…

2 hours ago