‘ಆಂದೋಲನ’ ಅಭಿಯಾನಕ್ಕೆ ಸಾರ್ವಜನಿಕರ ಮೆಚ್ಚುಗೆ
ಒಳಚರಂಡಿ ಕೊಳಚೆ ನೀರು ರಸ್ತೆಗೆ ಹರಿಯದಂತೆ ಕ್ರಮ ವಹಿಸಬೇಕು
ಸಾಂಕ್ರಾಮಿಕ ರೋಗಗಳು ಹರಡದಂತೆ ಕಟ್ಟೆಚ್ಚರ ಅಗತ್ಯ
ಒಣ ಮರಗಳು, ಕೊಂಬೆಗಳ ತೆರವಿಗೆ ಸಂಬಂಧಪಟ್ಟವರು ಮುಂದಾಗಬೇಕು
ಯುಜಿಡಿ ಮಲಿನ ನೀರು ರಸ್ತೆಗಳಿಗೆ ಹರಿಯದಂತೆ ಜಾಗ್ರತೆ ವಹಿಸಬೇಕು
ಮೈಸೂರು: ಮಳೆಗಾಲದಲ್ಲಿ ಹಲವು ಬಗೆಯ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಇದು ಪ್ರತಿ ವರ್ಷದ ಸಂಕಷ್ಟ. ರಸ್ತೆಗಳು ಜಲಾವೃತವಾಗುವುದು, ಒಳಚರಂಡಿಯ ಮಲಿನ ನೀರು ಉಕ್ಕಿ ರಸ್ತೆಯಲ್ಲಿ ಹರಿಯುವುದು ಒಂದೆಡೆಯಾದರೆ, ಸಾಂಕ್ರಾಮಿಕ ರೋಗಗಳ ಭೀತಿ ಇನ್ನೊಂದೆಡೆ. ಭಾರಿ ಮಳೆ ಬಿದ್ದರೆ ಮರಗಳು, ಮನೆಗಳು ಕುಸಿದು ಜನರ ಪ್ರಾಣಹಾನಿ, ಆಸ್ತಿ ನಷ್ಟ ಉಂಟಾಗುವ ಸಾಧ್ಯತೆಗಳು ಇವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಆಂದೋಲನ’ ದಿನಪತ್ರಿಕೆ ಒಂದು ವಾರ ನಡೆಸಿದ ಅಭಿಯಾನಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಹಲವರು ತಮ್ಮ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
” ನಗರದಲ್ಲಿ ಜೋರು ಮಳೆಯಾದರೆ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆಗೆ ಚಾಚಿಕೊಳ್ಳುವುದು ಮಾಮೂಲು ಎಂಬಷ್ಟು ಸಹಜವಾಗಿದೆ. ಈ ಮಳೆಯಿಂದ ಮೈಸೂರಿನಲ್ಲಿ ಬಹುತೇಕ ಕಡೆ ಭಾರೀ ಪ್ರಮಾಣದಲ್ಲಿ ಕೊಳಚೆ ನೀರು ಮಡುಗಟ್ಟಿ ನಿಂತಿದೆ. ವಾಹನ ಸವಾರರು, ಪಾದಚಾರಿಗಳ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಅಪಘಾತಗಳು ಕೂಡ ಹೆಚ್ಚಾಗುತ್ತಿವೆ. ನಾವು ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ.”
– ಕೃತಿಕಾ, ಸಾತಗಳ್ಳಿ , ಮೈಸೂರು
” ‘ಆಂದೋಲನ’ ದಿನಪತ್ರಿಕೆಯಲ್ಲಿ ಸಾಮಾಜಿಕ ಕಳಕಳಿಯಂತಹ ಸುದ್ದಿಗಳನ್ನು ಬಿಂಬಿಸುತ್ತಿರುವುದು ವಿಶೇಷವಾಗಿದೆ. ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು, ಅದನ್ನು ಸರಿಪಡಿಸುವ ಕೆಲಸವನ್ನು ಪತ್ರಿಕೆ ಮಾಡುತ್ತಿದೆ. ಮುಂಗಾರು ಮಳೆ ಆರಂಭವಾಗಿದೆ. ಅನಾಹುತಗಳು ಸಂಭವಿಸುವ ಸಾಧ್ಯತೆ ಕೂಡ ಇದೆ. ಈ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು.”
-ನವೀನ್ ಹಡ್ಯದ್, ಸಿದ್ದಾರ್ಥನಗರ, ಮೈಸೂರು.
” ಮಳೆಗಾಲದಲ್ಲಿ ಯುಜಿಡಿ ಸಮಸ್ಯೆಗಳಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಈ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಜೊತೆ ಸಭೆ ನಡೆಸಿ ಜಾಗೃತಿ ಮೂಡಿಸಬೇಕು.”
-ಮಹೇಶ್, ಗೋಕುಲಂ, ಮೈಸೂರು
” ಮಳೆಯಿಂದ ಸ್ಮಶಾನದಲ್ಲಿ ಶವಗಳ ಅಂತ್ಯಕ್ರಿಯೆ ನಡೆಸುವುದಕ್ಕೂ ಸಮಸ್ಯೆ ಆಗುತ್ತದೆ. ಅದಲ್ಲದೆ, ಬೀದಿ ದೀಪ ಅವ್ಯವಸ್ಥೆಯೂ ಸಾರ್ವಜನಿಕರನ್ನು ಬಾಧಿಸಬಹುದು. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸವನ್ನು ಸರಿಯಾಗಿ ಮಾಡಬೇಕು. ಪತ್ರಿಕೆಯು ಇಂತಹ ಸಮಸ್ಯೆಗಳ ಬಗ್ಗೆಯೂ ಸರಣಿ ಲೇಖನ ಪ್ರಕಟಿಸಿದರೆ, ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗುತ್ತದೆ.
-ಸಂತೋಷ್ ಕುಮಾರ್, ವಿದ್ಯಾರಣ್ಯಪುರಂ, ಮೈಸೂರು
” ಮನುಕುಲಕ್ಕೆ ಸಸ್ಯವರ್ಗದ ಮತ್ತು ಶುದ್ಧ ಪರಿಸರದ ಅವಶ್ಯಕತೆಯಿದೆ. ನಾಗರಿಕರಾದ ನಾವು ಮರಗಳನ್ನು ಬೆಳೆಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಳೆ ಅನಾಹುತದ ಬಗ್ಗೆ ಮುನ್ನೆಚ್ಚರಿಕೆಯಾಗಿ ‘ಆಂದೋಲನ’ ಪತ್ರಿಕೆಯಲ್ಲಿ ಪ್ರಕಟವಾದ ಸರಣಿ ತುಂಬಾ ವಿಶೇಷವಾಗಿದೆ. ಶಿಥಿಲಗೊಂಡ ಹಾಗೂ ಪ್ರಾಣ ಹಾನಿಗೆ ಕಾರಣವಾಗಬಹುದಾದಂಥ ಮರಗಳನ್ನು ಅತ್ಯಂತ ತುರ್ತಾಗಿ ತೆಗೆಯುವ ಕಾರ್ಯಗಳು ಕೂಡ ನಡೆಯಬೇಕು.”
– ಪುರುಷೋತ್ತಮ್ ಕುಕ್ಕರಹಳ್ಳಿ
” ಎಡೆಬಿಡದೆ ಬಿದ್ದ ಭಾರೀ ಮಳೆಯಿಂದ ನಗರದ ಹಲವೆಡೆ ರಸ್ತೆಯ ಮೇಲೆಯೇ ಮಳೆ ನೀರು ಹರಿದು ಹೋಯಿತು. ಇದರಿಂದ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಆದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಮಳೆಯಿಂದ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು, ಸೂಕ್ತ ಕ್ರಮ ಕೈಗೊಳ್ಳಬೇಕು.”
-ಚಿನ್ನಸ್ವಾಮಿ, ಅಶೋಕಪುರಂ, ಮೈಸೂರು
” ಮುಂಗಾರು ಶುರುವಾದರೂ ಒಣಗಿದ ಮರಗಳು ಮತ್ತು ಅದರ ರೆಂಬೆಕೊಂಬೆಗಳನ್ನು ತೆರವುಗೊಳಿಸುವ ಕೆಲಸ ಮಾಡದಿರುವುದು ಖಂಡನೀಯ. ಒಣಗಿದ ಮರಗಳ ತೆರವು ಕಾರ್ಯವನ್ನು ಕ್ಷಿಪ್ರವಾಗಿ ಮಾಡಬೇಕು. ಆ ಮೂಲಕ ಸಂಭವನೀಯ ಜೀವ ಮತ್ತು ಆಸ್ತಿ ಹಾನಿಯನ್ನೂ ತಡೆಗಟ್ಟಬಹುದು.”
-ಟಿ.ಸತೀಶ್ ಜವರೇಗೌಡ, ಆಲನಹಳ್ಳಿ, ಮೈಸೂರು
” ಮೈಸೂರಿನ ಬಹುತೇಕ ರಸ್ತೆಗಳಲ್ಲಿ ಐವತ್ತು ವರ್ಷ ದಾಟಿದ ಹಳೆಯ ಮರಗಳಿವೆ. ಪ್ರತಿ ಮುಂಗಾರು ಶುರುವಾದಾಗಲೂ ಜೋರು ಗಾಳಿ, ಮಳೆಗೆ ದೊಡ್ಡ ದೊಡ್ಡ ಕೊಂಬೆಗಳು ರಸ್ತೆಯ ಮೇಲೆ ಬೀಳುವ ಸಾಧ್ಯತೆ ಇದೆ. ಹಾಗಾಗಿ ವಾಹನ ಸವಾರರು ಪ್ರಾಣ ಭಯದಿಂದಲೇ ಸಂಚರಿಸುವಂತಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಅಪಾಯದ ಮುನ್ಸೂಚನೆ ಇರುವ ರೆಂಬೆ ಕೊಂಬೆಗಳನ್ನು ತೆರವುಗೊಳಿಸಬೇಕು.”
-ಚಂದ್ರು ಮಂಡ್ಯ, ವಿಜಯನಗರ, ಮೈಸೂರು
” ಮ್ಯಾನ್‌ಹೋಲ್ ಮಲಿನ ನೀರು ರಸ್ತೆಗೆ ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿ ತಮಿಳು ಶಾಲೆ ಪಕ್ಕದಲ್ಲಿರುವ ಮ್ಯಾನ್ ಹೋಲ್ನಲ್ಲಿ ೩ ದಿನಗಳಿಂದ ಮಲಿನ ನೀರು ಉಕ್ಕಿ ರಸ್ತೆಯಲ್ಲಿ ಹರಿಯುತ್ತಿದೆ. ದೂರು ನೀಡಿದ್ದರೂ ಯಾರೂ ಕ್ರಮವಹಿಸಿಲ್ಲ.”
ಎಂ.ನಿಖಿಲ್, ಚಾಮುಂಡಿಪುರಂ
” ಮೈಸೂರು – ಮಾನಂದವಾಡಿ ರಸ್ತೆಯಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆ ಬಳಿ ಮರದ ಕೊಂಬೆ ಒಣಗಿದ್ದು, ಜೋರಾಗಿ ಮಳೆ ಸುರಿದರೆ ಬೀಳುವ ಸಾಧ್ಯತೆ ಇದ್ದು, ಅಪಾಯ ಸಂಭವಿಸಬಹುದು. ಕೂಡಲೇ ಈ ಕೊಂಬೆಯನ್ನು ತೆರವು ಗೊಳಿಸಲು ಕ್ರಮವಹಿಸಬೇಕು.”
-ಗೋವಿಂದನಾಯಕ, ಅಶೋಕಪುರಂ
” ಗಂಗೋತ್ರಿ ಲೇಔಟ್‌ನಲ್ಲಿ ಬಿಸಿಲು ಮಾರಮ್ಮನ ದೇವಸ್ಥಾನದ ಬಳಿ ಮರವೊಂದು ಒಣಗಿದ್ದು, ಬೀಳುವ ಹಂತದಲ್ಲಿದೆ. ಅದನ್ನು ತೆರವು ಗೊಳಿಸಬೇಕು.”
ಕೆ.ಎಸ್.ಪ್ರಸನ್ನ, ಸ್ಥಳೀಯ ನಿವಾಸಿ
ಉಳ್ಳವರ ಕೈಯಿಂದ ಉಳುವವನ ಕೈಗೆ ಭೂಮಿ ಕೊಡಿಸಲು ನಡೆಸಿದ ಹೋರಾಟ ಸಣ್ಣದೇ? ಬಾನಂದೂರು ರಂಗಪ್ಪ ತಣ್ಣಗೆ ಕಿಟಕಿಯಾಚೆ ನೋಡಿದರು. ಮನೆಯೊಳಗೆ…
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಪ್ರಬಲ ವಿರೋಧದ ನಡುವೆಯೂ ಕಾಂಗ್ರೆಸ್ ಸರ್ಕಾರ, ಕರ್ನಾಟಕ…
ಕೊಡಗಿನ ಖ್ಯಾತಿ ಹೆಚ್ಚಿಸುವಲ್ಲಿ ಕ್ರೀಡಾಪಟುಗಳ ಕೊಡುಗೆ ಅಪಾರ: ಸುಜಾ ಕುಶಾಲಪ್ಪ ಪೊನ್ನಂಪೇಟೆ: ಕೊಡಗು ಜಿಲ್ಲೆ ರಾಷ್ಟ್ರಮಟ್ಟದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಎಲ್ಲ…
ಮುಚ್ಚಲ್ಪಟ್ಟಿರುವ ಶಾಲೆಯ ಕೊಠಡಿಯಲ್ಲಿ ರಾರಾಜಿಸುತ್ತಿರುವ ಮದ್ಯದ ಬಾಟಲಿಗಳು; ನಾಗರಿಕರ ಆಕ್ರೋಶ ಹನೂರು: ನಿಗದಿತ ಸಂಖ್ಯೆಯ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮುಚ್ಚಲ್ಪಟ್ಟಿರುವ…
ಕೆ.ಬಿ.ರಮೇಶನಾಯಕ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರ ಹುದ್ದೆಯತ್ತ ಶಾಸಕ ಅನಿಲ್ ಚಿತ್ತ ತಂದೆಗೆ ಅಧ್ಯಕ್ಷ ಹುದ್ದೆ ಕೊಡಿಸಲು ಶಾಸಕ ಡಿ.ರವಿಶಂಕರ್ ಯತ್ನ …