ಲಕ್ಷಿಕಾಂತ್ ಕೊಮಾರಪ್ಪ
ಬೂದಿ ಬಣ್ಣಕ್ಕೆ ತಿರುಗಿ ಒಣಗುತ್ತಿರುವ ಎಲೆ, ಕಾಂಡ; ಫಸಲು ನಷ್ಟದ ಭೀತಿಯಲ್ಲಿ ಕೃಷಿಕರು
ಸೋಮವಾರಪೇಟೆ: ಕೃಷಿಕರಿಗೆ ಆಶಾದೀಪವಾಗಿದ್ದ ಶುಂಠಿ ಬೆಳೆಗೆ ಈ ಬಾರಿ ಮುಂಗಾರು ಮಳೆ ದೊಡ್ಡ ಹೊಡೆತ ನೀಡಿದೆ. ಮುಂಗಾರು ಮಳೆ ಹಾಗೂ ಶೀತದಿಂದ ಶುಂಠಿ ಬೆಳೆಗೆ ರೋಗ ಬಾಧೆ ತೀವ್ರವಾಗಿದ್ದು ಗಂಭೀರ ಹಾನಿ ಉಂಟು ಮಾಡಿದೆ. ಪರಿಣಾಮವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಬಾರಿ ಮೇ ತಿಂಗಳಿಂದಲೇ ಮುಂಗಾರು ಮಳೆ ಆರಂಭಗೊಂಡಿತು. ಇದರಿಂದಾಗಿ ೬೦ ರಿಂದ ೭೦ ದಿನಗಳ ಹಿಂದೆ ನಾಟಿ ಮಾಡಿದ ಶುಂಠಿ ಬೆಳೆಗೆ ವಾತಾವರಣ ಸಹಕಾರಿಯಾಗಿಲ್ಲ. ಎಲೆಗಳು ಚೆನ್ನಾಗಿ ಚಿಗುರುವ ಸಂದರ್ಭದಲ್ಲಿ ಭಾರೀ ಮಳೆಯಾಗಿದ್ದು ಬೆಳವಣಿಗೆ ಕುಂಠಿತಗೊಂಡಿದೆ.
ಇದರೊಂದಿಗೆ ಶುಂಠಿ ಬೆಳೆಗೆ ಹೊಸ ಶಿಲೀಂಧ್ರ ಪೈರಿ ಕ್ಯುಲೇರಿಯಾ ಎಂಬ ಬೆಂಕಿ ರೋಗ ಕಾಣಿಸಿಕೊಂಡಿದ್ದು ರೈತರಲ್ಲಿ ಬೆಳೆ ನಷ್ಟದ ಆತಂಕ ಆವರಿಸಿದೆ. ಈ ರೋಗವನ್ನು ಬೆಳೆಗಳ ಐ.ಸಿ.ಎ.ಆರ್-ಭಾರತೀಯ ಸಂಬಾರ ಸಂಶೋ ಧನಾ ಸಂಸ್ಥೆ, ಕಲ್ಲಿಕೋಟೆ ಇವರು ನಡೆಸಿದ ಸಂಶೋಧನೆಯ ಪ್ರಕಾರ ಭತ್ತ, ಗೋಽಯಂತಹ ಏಕದಳ ಸಸ್ಯಗಳಲ್ಲಿ ಕಂಡು ಬರುವ ಬೆಂಕಿ ರೋಗವು ಶಿಲೀಂಧ್ರವಾದ ಪೈರಿಕ್ಯುಲೇರಿಯಾ ಎಂಬ ರೋಗಾಣುವಿನಿಂದ ಹರಡುತ್ತದೆ ಎಂದು ದೃಢಪಟ್ಟಿದೆ.
ಸೋಮವಾರಪೇಟೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಬೆಳೆದಿರುವ ಶುಂಠಿಗೆ ಕಾಣಿಸಿಕೊಂಡಿರುವ ರೋಗಬಾಧೆಯಿಂದ ರೈತರು ಫಸಲು ನಷ್ಟ ಅನುಭವಿಸುವಂತಾಗಿದೆ. ಶುಂಠಿ ಪೈರುಗಳು ಬೂದಿ ಬಣ್ಣಕ್ಕೆ ತಿರುಗಿ ಕಾಂಡ ಮತ್ತು ಎಲೆಗಳು ಒಣಗಲು ಪ್ರಾರಂಭಿಸಿವೆ. ರೋಗ ಪೀಡಿತವಾಗಿ ರುವ ಶುಂಠಿ ಗೆಡ್ಡೆಗಳು ಬೆಳವಣಿಗೆಯಾಗುತ್ತಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಮಳೆಗಾಲದಲ್ಲಿ ರೋಗಕ್ಕೆ ತುತ್ತಾದ ಶುಂಠಿ ಬೆಳೆಯನ್ನು ರಕ್ಷಿಸಿಕೊಳ್ಳಲು ಕೀಟನಾಶಕ ಹಾಗೂ ಶಿಲೀಂಧ್ರ ನಾಶಕಗಳಿಗೆ ದುಪ್ಪಟ್ಟು ಹಣವ್ಯಯ ಮಾಡಬೇಕಾಗಿದೆ. ಆದರೂ ರೋಗ ಹತೋಟಿಗೆ ಬಂದಿಲ್ಲ.
ರೋಗವನ್ನು ತರುವ ಶಿಲೀಂಧ್ರವಾದ ಪೈರಿಕ್ಯುಲೇರಿಯಾ ಎಂಬ ರೋಗಾಣುವಿನ ಕಣಗಳು ಗಾಳಿಯ ಮುಖಾಂತರ ಇತರ ಗಿಡಗಳಿಗೂ ಹರಡುತ್ತವೆ. ಮೋಡಕವಿದ ವಾತಾವರಣ, ಮಳೆ, ತುಂತುರು ಮಳೆ, ಬಿಟ್ಟು ಬಿಟ್ಟು ಬಿಸಿಲು ಬರುವುದು, ಹೆಚ್ಚಿನ ಸಾರಜನಕ ಗೊಬ್ಬರ ಬಳಕೆ ಇಂತಹ ಅನೇಕ ಕಾರಣಗಳಿಂದ ರೋಗ ತೀವ್ರವಾಗಿ ಹರಡಲು ಕಾರಣವಾಗಿದೆ. ರೋಗವು ಕೇವಲ ೧೫ರಿಂದ ೨೦ ಗಂಟೆಗಳ ಅವಧಿಯಲ್ಲಿ ಇತರೆ ಪ್ರದೇಶಗಳಿಗೂ ವೇಗವಾಗಿ ಹರಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕೊಡಗಿಗೆ ಕೇರಳ ರಾಜ್ಯದಿಂದ ಪರಿಚಯವಾದ ಶುಂಠಿ ಕೃಷಿಯಿಂದ ಇಲ್ಲಿನ ಅನೇಕರು ಆರ್ಥಿಕ ಲಾಭಗಳಿಸಿದ್ದಾರೆ. ಕೃಷಿಗೆ ಸರ್ಕಾರದಿಂದ ಯಾವುದೇ ಉತ್ತೇಜನ ಇಲ್ಲದಿದ್ದರೂ, ಇದೊಂದು ಲಾಭದಾಯಕ ಬೆಳೆ ಎಂದು ಕೃಷಿಕರು ನಂಬಿದ್ದಾರೆ. ಅದರಲ್ಲೂ ಸೋಮವಾರಪೇಟೆ ತಾಲ್ಲೂಕಿನ ಬಾಣಾವಾರ, ಗಣಗೂರು, ಆಲೂರು, ಸಂಗಯ್ಯನಪುರ, ಕಲ್ಲುಕೊರೆ, ಸಿದ್ದಲಿಂಗಪುರ, ಗೋಣಿಮರೂರು, ಯಲಕನೂರು, ಹೊಸಳ್ಳಿ, ಅರೆಯೂರು, ಮದಲಾಪುರ ಮುಂತಾದ ಕಡೆಗಳಲ್ಲಿ ಶುಂಠಿ ಬೆಳೆಯನ್ನು ಆಶ್ರಯಿಸಿದ್ದಾರೆ. ನಷ್ಟವಾದರೂ ಶುಂಠಿ ಕೃಷಿಯನ್ನು ಕೈ ಬಿಟ್ಟಿಲ್ಲ.
ಶನಿವಾರಸಂತೆ, ಕೊಡ್ಲಿಪೇಟೆ, ಶಾಂತಳ್ಳಿ, ಸೋಮವಾರಪೇಟೆ ಹೋಬಳಿಗಳಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಇಲ್ಲಿನ ಕೃಷಿಕರು ಶುಂಠಿ ಬೆಳೆಗೆ ಮಾರುಹೋಗಿ, ಬೆಳೆಯಲು ಪ್ರಾರಂಭಿಸಿ ಕೆಲವರು ದುಪ್ಪಟ್ಟು ಆದಾಯ ಗಳಿಸಿದ್ದಾರೆ. ಶುಂಠಿ ಕೃಷಿಗೆ ಅನುಭವವಿರುವ ಕಾರ್ಮಿಕರ ಅಗತ್ಯವಿದ್ದು, ಹೆಚ್ಚಿನ ಸಂಬಳವನ್ನು ನೀಡಬೇಕಾಗುತ್ತದೆ. ಕೀಟನಾಶಕ, ರಾಸಾಯನಿಕಗೊಬ್ಬರ ಸೇರಿದಂತೆ ಇತರ ಕೆಲಸಗಳಿಗೆ ಹೆಚ್ಚು ಹಣವನ್ನು ವ್ಯಯಿಸಬೇಕಾಗಿರುವುದರಿಂದ ಉತ್ಪಾದನಾ ವೆಚ್ಚವೂ ಜಾಸ್ತಿಯಾಗಿದೆ. ಶುಂಠಿ ಕೃಷಿಗೆ ಸರ್ಕಾರದಿಂದ ಸೌಲಭ್ಯಗಳು ಸಿಗಬೇಕು. ಸರ್ಕಾರ ಬೆಳೆಹಾನಿ ಪರಿಹಾರ ಕಲ್ಪಿಸಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.
” ಶುಂಠಿ ಬೆಳೆಗೆ ರೋಗ ಕಾಣಿಸಿಕೊಂಡು ನಷ್ಟ ಅನುಭವಿಸುವಂತಾಗಿದೆ. ಕೀಟನಾಶಕ ಬಳಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗಿದ್ದು, ಶುಂಠಿ ಆಹಾರ ಬೆಳೆಯಾಗಿರುವುದರಿಂದ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು ಲಭ್ಯವಾಗಬೇಕು. ಬೆಳೆಹಾನಿಗೆ ಪರಿಹಾರ ನೀಡಿ, ಕೃಷಿಕರನ್ನು ಆರ್ಥಿಕ ಸಂಕಷ್ಟದಿಂದ ರಕ್ಷಿಸಲು ಸರ್ಕಾರ ಮುಂದಾಗಬೇಕು.”
-ಸರೋಜ, ಕೃಷಿಕರು, ಕೂತಿ ಗ್ರಾಮ
” ಮಣ್ಣು ಪರೀಕ್ಷೆಯ ಆಧಾರದ ಮೇಲೆ ಸಾರಜನಕವನ್ನು ಶಿಫಾರಸು ಪ್ರಮಾಣದಲ್ಲಿ ಕೊಡಬೇಕು. ರೋಗಬಾಧೆ ಕಂಡುಬಂದಿರುವ ಶುಂಠಿ ತೋಟಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ೧.೦ ಮಿ.ಲೀ ಪ್ರೊಪಿಕೋನಜೋಲ್ ಅಥವಾ ಟೆಬುಕೊನಜೋಲ್ ೧.೦. ಮಿ.ಲೀ ಶಿಲೀಂಧ್ರ ನಾಶಕದ ಜೊತೆಗೆ ಅಂಟು ದ್ರಾವಣವನ್ನು ಸೇರಿಸಿ ಮಳೆ ಬಿಡುವು ಕೊಟ್ಟಾಗ ಸಿಂಪಡಿಸಬೇಕು. ರೈತರು ತ್ವರಿತಗತಿಯಲ್ಲಿ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕು.”
-ಡಾ.ಕೆ.ವಿ.ವೀರೇಂದ್ರ ಕುಮಾರ್, ವಿಜ್ಞಾನಿ, ಸಸ್ಯ ಸಂರಕ್ಷಣೆ ವಿಭಾಗ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ
ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…
ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…
ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…
ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…
ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…