ವಾಹನ ಸಂಚಾರಕ್ಕೆ ಹರಸಾಹಸ, ಅಧಿಕಾರಿಗಳು – ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಪಾಂಡವಪುರ: ಪಾಂಡವಪುರದಿಂದ ಕೆ. ಆರ್. ಪೇಟೆಗೆ ಸಂಪರ್ಕ ಕಲ್ಪಿಸುವ ಮುಖ್ಯ ಹೆದ್ದಾರಿಯು ಗುಂಡಿಬಿದ್ದು ಸಂಪೂರ್ಣ ಹದಗೆಟ್ಟಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನಿತ್ಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದಲೂ ಪಾಂಡವಪುರ-ಕೆ. ಆರ್. ಪೇಟೆ ಮುಖ್ಯರಸ್ತೆ ಗುಂಡಿಬಿದ್ದು ಹಾಳಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಭಿವೃದ್ಧಿಪಡಿಸುವ ಮಾತಿರಲಿ, ಕನಿಷ್ಠ ಪಕ್ಷ ಗುಂಡಿ ಮುಚ್ಚುವ ಕೆಲಸಕ್ಕೂ ಮುಂದಾಗಿಲ್ಲ. ರಸ್ತೆಯಲ್ಲಿ ಮಂಡಿಯುದ್ದ ಗುಂಡಿಬಿದ್ದು ಓಡಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿರುವ ಕುರಿತು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಲ್ಲೂಕಿನ ರೈಲ್ವೆ ನಿಲ್ದಾಣದಿಂದ ಎಲೆಕೆರೆ ಹ್ಯಾಂಡ್ ಪೋಸ್ಟ್, ಬೆಟ್ಟಹಳ್ಳಿ, ಕಣಿವೆಕೊಪ್ಪಲು, ಚಿನಕುರಳಿ, ಅಂಕೇಗೌಡನಕೊಪ್ಪಲು, ಕನಗನಹಳ್ಳಿಯಿಂದ ತಾಲ್ಲೂಕಿನ ಗಡಿ ಗ್ರಾಮವಾದ ಅಶೋಕನಗರದವರೆಗೂ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಅದರಲ್ಲೂ ಚಿನಕುರಳಿ, ಅಂಕೇಗೌಡನಕೊಪ್ಪಲು ಹಾಗೂ ಕನಗನಹಳ್ಳಿ ಗೇಟ್ ಬಳಿ ರಸ್ತೆಯ ಸ್ಥಿತಿ ಹೇಳತೀರದಾಗಿದೆ.
ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸಲು ಸವಾರರು ಹರಸಾಹಸ ಪಡಬೇಕಿದೆ. ಹಲವರು ಬಿದ್ದು ಗಾಯ ಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ.
ಮೈಸೂರು- ಶ್ರೀರಂಗಪಟ್ಟಣ- ಪಾಂಡವಪುರ ಮಾರ್ಗವಾಗಿ ಕೆ. ಆರ್. ಪೇಟೆ ಮೂಲಕ ಹಾಸನ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು, ಕಾರು, ಬೈಕ್‌ಗಳು ಸಂಚರಿಸುತ್ತವೆ. ರಸ್ತೆಯಲ್ಲಿ ಗುಂಡಿಗಳೇ ಹೆಚ್ಚಾಗಿರುವುದರಿಂದ ವಾಹನಗಳ ಸಂಚಾರಕ್ಕೆ ತೀರ ಅಡಚಣೆ ಉಂಟಾಗಿದೆ.
ಇದೇ ರಸ್ತೆಯಲ್ಲಿ ಅಧಿಕಾರಿಗಳು, ಶಾಸಕರು, ಸಂಸದರು, ಸಚಿವರು ಪ್ರತಿದಿನ ಸಂಚರಿಸುತ್ತಾರೆ. ಆದರೂ ರಸ್ತೆಯ ಅಭಿವೃದ್ಧಿಗೆ ಮುಂದಾಗಿಲ್ಲ, ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಸ್ಥಳೀಯರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ವಹಿಸಿಲ್ಲ. ಗುಂಡಿಬಿದ್ದ ರಸ್ತೆ ಯಲ್ಲಿ ಸಂಚರಿಸುವಾಗ ಹಲವು ವಾಹನಗಳು ಅಪಘಾತಕ್ಕೀಡಾಗಿ ಸಾವು ನೋವು ಸಂಭವಿಸುತ್ತಿವೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗದಿದ್ದರೆ ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ಚಿನಕುರಳಿ ಗ್ರಾಮದ ಸಿ. ಎಸ್. ಗೋಪಾಲಗೌಡ, ಸಿ. ಎ. ಲೋಕೇಶ್, ರಮೇಶ್ ಎಚ್ಚರಿಕೆ ನೀಡಿದ್ದಾರೆ.
ಹದಗೆಟ್ಟ ಬೂಕನಕೆರೆ ರಸ್ತೆ : ಚಿನಕುರಳಿ-ಬೂಕನಕೆರೆ ಸಂಪರ್ಕ ರಸ್ತೆಯೂ ಗುಂಡಿಬಿದ್ದು ಅದ್ವಾನ ಗೊಂಡಿದೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಅಧಿಕಾರಿಗಳು ಇತ್ತೀಚೆಗೆ ಕೆಲವು ಕಡೆ ಗುಂಡಿಮುಚ್ಚುವ ಕೆಲಸ ಮಾಡಿದ್ದಾರೆ. ಅದರೂ ಅಲ್ಲಲ್ಲಿ ಗುಂಡಿಗಳಿದ್ದು ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ. ಕೂಡಲೇ ರಸ್ತೆಯನ್ನು ಅಭಿವೃದ್ಧಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಾಂಡವಪುರ -ಕೆ. ಆರ್. ಪೇಟೆ ಮುಖ್ಯರಸ್ತೆ ಹಲವಾರು ವರ್ಷಗಳಿಂದ ಹದಗೆಟ್ಟಿದೆ. ಚಿನಕುರಳಿ ಗ್ರಾಮದ ಬಳಿಯಂತೂ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ತಲುಪಿದೆ. ಗುಂಡಿಮುಚ್ಚುವಂತೆ ಹಲವಾರು ಬಾರಿ ಸಂಬಂಧಪಟ್ಟ ಅಽಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಕೆಲಸವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಭಿವೃದ್ಧಿಪಡಿಸದಿದ್ದರೆ ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕಲಾಗುವುದು.
– ಸಿ. ಶಿವಕುಮಾರ್ ಚಿನಕುರಳಿ, ಮನ್‌ಮುಲ್ ನಿರ್ದೇಶಕರು
1 ಕೆ.ಜಿ.ಬೆಳ್ಳಿಗೆ 3.30 ಲಕ್ಷ ರೂಪಾಯಿ ಹೈದರಾಬಾದ್ : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ನಿಲ್ಲುತ್ತಿಲ್ಲ. ಬುಧವಾರ ಹಳದಿ…
ಮೈಸೂರು : ಸೋಮವಾರ ತಡರಾತ್ರಿ ಯುವಕನೋರ್ವನನ್ನು ಐವರ ಗುಂಪು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ…
ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವುದರಿಂದ ಚಿರತೆ…
ಇಡಿ ಬಂಧನದಿಂದ ಬಿಡುಗಡೆ ಕೋರಿ ಮಾಜಿ ಆಯುಕ್ತ ಸಲ್ಲಿಸಿದ್ದ ಅರ್ಜಿ ತಿರಸ್ಕಾರ ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ…
ಬೆಂಗಳೂರು : ಜನವರಿ ಅಂತ್ಯ ಅಥವಾ ಫೆಬ್ರವರಿ 10ರೊಳಗೆ ಮಧುಸೂದನ್ ನಾಯಕ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ…
ಹೆಚ್.ಡಿ.ಕೋಟೆ : ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶ, ನಾಗರಹೊಳೆ-ಬಂಡೀಪುರ ಅರಣ್ಯ ವ್ಯಾಪ್ತಿ ಹಾಗೂ ಪರಿಸರ ಸಂವೇದಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ…