Andolana originals

ಪಂಜು ಗಂಗೊಳ್ಳಿ ಅವರ ವಾರದ ಅಂಕಣ | ಹೆಣ್ಣು ಭ್ರೂಣ ಹಂತಕ ವೈದ್ಯರನ್ನು ಬೇಟೆಯಾಡುವ ವರ್ಷಾ ದೇಶಪಾಂಡೆ

50ಕ್ಕೂ ಹೆಚ್ಚು ಸ್ಟಿಂಗ್‌ ಆಪರೇಷನ್‌ ; 20 ವೈದ್ಯರುಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿ

ಮಹಾರಾಷ್ಟ್ರದ ಭೀಡ್ ಜಿಲ್ಲೆಯ ಪಾರ್ಲಿ ಗ್ರಾಮದ ಡಾ. ಸರಸ್ವತಿ ಮುಂಡೆ ಮತ್ತು ಡಾ. ಸುಧಾಮ್ ಮುಂಡೆ ಎಂಬ ಹೆಸರು ಕೇಳಿದರೆ ಅಲ್ಲಿನ ಜನರ ಬೆನ್ನೆಲುಬಿನಲ್ಲಿ ನಡುಕ ಹುಟ್ಟುತ್ತದೆ. ಇವೆರಡೂ ಹೆಣ್ಣು ಭ್ರೂಣ ಹತ್ಯೆಗೆ ಕುಖ್ಯಾತಿ ಪಡೆದ ಹೆಸರುಗಳು. ದೇಶದಲ್ಲಿ 1994ರಿಂದ ಭ್ರೂಣ ಲಿಂಗ ಪತ್ತೆ ಪರೀಕ್ಷೆಗಳು ಕಾನೂನಾತ್ಮಕವಾಗಿ ನಿಷೇಧಿಸಲ್ಪಟ್ಟಿದ್ದರೂ ಡಾ. ಮುಂಡೆ ದಂಪತಿ ಕ್ಲಿನಿಕ್‌ನಲ್ಲಿ ಭ್ರೂಣ ಲಿಂಗ ಪತ್ತೆ ಪರೀಕ್ಷೆ ಅವ್ಯಾಹತವಾಗಿ ನಡೆಯುತ್ತಿತ್ತು. ಈ ದಂಪತಿ 7000ಕ್ಕೂ ಹೆಚ್ಚು ಗರ್ಭಪಾತಗಳನ್ನು ನಡೆಸಿದ್ದಾರೆಂದು ಹೇಳಲಾಗುತ್ತದೆ. ಗರ್ಭಪಾತಗೊಂಡ ಹೆಣ್ಣು ಭ್ರೂಣಗಳು ಅವರ ಮನೆ ನಾಯಿಗಳಿಗೆ ಆಹಾರವಾಗುತ್ತಿದ್ದವು! ಅವರ ಕ್ಲಿನಿಕ್‌ಗೆ ಬರುವ ಗರ್ಭಿಣಿಯರ ಭ್ರೂಣದ ಲಿಂಗ ಪತ್ತೆ ತಪಾಸಣೆ ನಡೆದು, ಅದು ಹೆಣ್ಣು ಎಂದು ಗೊತ್ತಾದರೆ ಗರ್ಭಿಣಿಯ ಜತೆಯಲ್ಲಿರುವವರು ಅದನ್ನು ತೆಗೆಯಬೇಕು ಅಂತ ಹೇಳಿದರೆ ಸಾಕು, ಡಾ. ಮುಂಡೆ ದಂಪತಿ ಹಣ ತೆಗೆದುಕೊಂಡು ಅದನ್ನೇ ಮಾಡಿ ಕಳಿಸಿಕೊಡುತ್ತಿದ್ದರು.

2010ರ ಆ ಒಂದು ದಿನ ಪ್ರೇರಣಾ ಭಿಲಾರೆ ಎಂಬ ಒಬ್ಬಳು ಗರ್ಭಿಣಿ ಹೀಗೆಯೇ ಮುಂಡೆ ದಂಪತಿಯ ಕ್ಲಿನಿಕ್‌ಗೆ ಬಂದು ತನ್ನ ಭ್ರೂಣದ ಪರೀಕ್ಷೆ ನಡೆಸಬೇಕೆಂದು ಕೇಳಿಕೊಂಡಳು. ಡಾ. ಸರಸ್ವತಿ ಮುಂಡೆ ಐದು ನಿಮಿಷಗಳಲ್ಲಿ ಭ್ರೂಣ ಪರೀಕ್ಷೆ ನಡೆಸಿ, ಅವರ ಕೇಸ್ ಪೇಪರ್ ಮೇಲೆ ‘16’ ಎಂದು ಬರೆದರು. ಆಗ ಪ್ರೇರಣಾ ಮಗುವಿನ ಲಿಂಗವೇನು ಎಂದು ಕೇಳಿದಾಗ ಡಾ. ಸರಸ್ವತಿ ಮುಂಡೆ, ‘ನಿಮಗೆ ಸಿಹಿ ಸುದ್ದಿ. ಗಂಡು ಮಗು’ ಅಂದರು. 16ನೇ ವಾರದ ಗರ್ಭದಲ್ಲಿ ಗಂಡು ಮಗುವಿನ ಲಿಂಗ ಸ್ಪಷ್ಟವಾಗಿ ಗೋಚರಿಸುವುದರಿಂದ ಹೀಗೆ 16 ಅಂತ ಬರೆಯುವುದು ರೂಢಿ. ಹೆಣ್ಣಾಗಿದ್ದರೆ 19. ಬೇರೆ ವೈದ್ಯರು ಬೇರೆ ಬೇರೆ ರೀತಿಯ ಸಂಕೇತಗಳನ್ನು ಬಳಸುತ್ತಾರೆ. ಆದರೆ, ಡಾ. ಮುಂಡೆ ದಂಪತಿಗೆ ಗೋಚರಿಸದ ಸಂಗತಿಯೆಂದರೆ ಪ್ರೇರಣಾ ಭಿಲಾರೆಯ ಬಳಿ ಇದ್ದ ರಹಸ್ಯ ಕ್ಯಾಮೆರಾ ಮತ್ತು ಟೇಪ್ ರೆಕಾರ್ಡರ್. ಆ ‘ಸ್ಟಿಂಗ್ ಆಪರೇಷನ್’ನಲ್ಲಿ ಡಾ. ಸರಸ್ವತಿ ಮತ್ತು ಡಾ. ಸುಧಾಮ್ ಮುಂಡೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದು, ಅವರ ಮೇಲೆ ಕೇಸು ದಾಖಲಾಗಿ, ಐದು ವರ್ಷಗಳ ಕಾಲ ವಿಚಾರಣೆ ನಡೆದು, 2015ರಲ್ಲಿ ಇಬ್ಬರಿಗೂ 5 ವರ್ಷಗಳ ಜೈಲಾಯಿತು.

ಮುಂದೆ, ಪ್ರೇರಣಾ ಭಿಲಾರೆ ಇದೇ ರೀತಿಯಲ್ಲಿ ‘ಸ್ಟಿಂಗ್ ಆಪರೇಷನ್’ ನಡೆಸಿ, ಭ್ರೂಣ ಲಿಂಗ ಪತ್ತೆ ಪರೀಕ್ಷೆ ನಡೆಸುತ್ತಿದ್ದ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರ್‌ನ ಡಾ. ಮೋಹನ್ ಫಾರ್ನೆಗೆ ಎರಡು ವರ್ಷಗಳ ಜೈಲು ಶಿಕ್ಷೆ, ಸೋಲಾಪುರ ಜಿಲ್ಲೆಯ ಕರ್ಮಾಲಾ ಎಂಬಲ್ಲಿನ ಡಾ. ಕವಿತಾ ಲೊಂಢೆಗೆ ಮೂರು ವರ್ಷಗಳ ಜೈಲು ಶಿಕ್ಷೆಯಾಗಲು ಕಾರಣರಾದರು. ಪ್ರೇರಣಾ ಭಿಲಾರೆಯ ಆ ‘ಸ್ಟಿಂಗ್ ಆಪರೇಷನ್’ಗಳ ಹಿಂದಿನ ಮಾಸ್ಟರ್ ಮೈಂಡ್ 56 ವರ್ಷ ಪ್ರಾಯದ ಅಡ್ವೊಕೇಟ್ ವರ್ಷಾ ದೇಶಪಾಂಡೆ. ಅವರು ಭ್ರೂಣ ಲಿಂಗ ತಪಾಸಣೆ ಮಾಡುವ ವೈದ್ಯರುಗಳನ್ನು ಹಿಡಿಯುವ ಸಲುವಾಗಿಯೇ ‘ಲೇಕ್ ಲಡ್ಕಿ ಅಭಿಯಾನ್’ ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದಾರೆ. ಕಳೆದ ಮೂರು ದಶಕಗಳಿಂದ ಇವರು ಪ್ರೇರಣಾ ಭಿಲಾರೆಯಂತಹ ಧೈರ್ಯಶಾಲಿ ಗರ್ಭಿಣಿಯರನ್ನು ರಹಸ್ಯ ಕ್ಯಾಮೆರಾ, ಟೇಪ್ ರೆಕಾರ್ಡರ್ ಮೊದಲಾದ ಪರಿಕರಗಳೊಂದಿಗೆ ಕಳಿಸಿಕೊಟ್ಟು, ಮುಂಡೆಯಂತಹ ಹಲವಾರು ಕ್ರಿಮಿನಲ್ ವೈದ್ಯರುಗಳನ್ನು ಸಾಕ್ಷಾ ಧಾರಗಳ ಸಮೇತ ಹಿಡಿದು, ಕಾನೂನಿನ ಕಟಕಟೆಯಲ್ಲಿ ನಿಲ್ಲಿಸುತ್ತಿದ್ದಾರೆ.

ಆದರೆ, ಈ ಸ್ಟಿಂಗ್ ಆಪರೇಷನ್ ನಡೆಸುವುದು ಮೇಲು ನೋಟಕ್ಕೆ ತೋರುವಷ್ಟು ಸುಲಭದ ಕೆಲಸವಲ್ಲ. ಮೊದಲಿಗೆ, ಸ್ಟಿಂಗ್ ಆಪರೇಷನ್ನಿಗೆ ಗರ್ಭಿಣಿಯರನ್ನು ಒಪ್ಪಿಸುವುದು ಬಹು ಕಷ್ಟದ ಕೆಲಸ. ಎಷ್ಟೋ ಬಾರಿ ಸ್ಟಿಂಗ್ ಆಪರೇಷನ್ನಿನಲ್ಲಿ ಭಾಗವಹಿಸಿದ ಗರ್ಭಿಣಿಯರು ಮುಂದೆ ಕೋರ್ಟು ವಿಚಾರಣೆಯ ಸಮಯದಲ್ಲಿ ಒತ್ತಡಗಳಿಗೆ ಒಳಗಾಗಿ ವ್ಯತಿರಿಕ್ತ ಸಾಕ್ಷ ನೀಡಿ, ಕೇಸುಗಳು ಬಿದ್ದು ಹೋದ ಉದಾಹರಣೆಗಳೂ ಇವೆ. 2004ರಲ್ಲಿ ವರ್ಷಾ ದೇಶಪಾಂಡೆ ಮೊತ್ತ ಮೊದಲ ಬಾರಿಗೆ ನಡೆಸಿದ ಸ್ಟಿಂಗ್ ಆಪರೇಷನ್ ಇದೇ ಕಾರಣಕ್ಕೆ ವಿಫಲಗೊಂಡಿತ್ತು. ಆಗ ಅವರ ಗುರಿಯಾಗಿದ್ದುದು ಸತಾರಾದ ಡಾ. ದೇವದತ್ತ್ ಶೆಟ್ಟೆ ಎಂಬ ರೇಡಿಯಾಲಾಜಿಸ್ಟ್. ಆತನನ್ನು ಹಿಡಿಯುವ ಸಲುವಾಗಿ ವರ್ಷ ದೇಶಪಾಂಡೆ 15 ಸಾವಿರ ರೂ. ಖರ್ಚು ಮಾಡಿ ಒಂದು ವಿಡಿಯೋ ಕ್ಯಾಮೆರಾ ಹಾಗೂ 5 ಸಾವಿರ ರೂ. ಖರ್ಚು ಮಾಡಿ ಒಂದು ಟೇಪ್ ರೆಕಾರ್ಡರ್ ಖರೀದಿಸಿ, ತಮ್ಮ ಮನೆಯಾಳಿನ ಬಸುರಿ ಸಹೋದರಿಯ ಸಹಾಯ ಪಡೆದು ಡಾ. ದೇವದತ್ತ್ ಶೆಟ್ಟೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಸಫಲರಾದರು. ಆದರೆ, ಕೋರ್ಟು ವಿಚಾರಣೆ ನಡೆಯುವಾಗ ಆ ಮಹಿಳೆ ದೇವದತ್ತ್ ಶೆಟ್ಟೆ ಕೊಟ್ಟ ಹಣಕ್ಕೆ ಮಾರು ಹೋಗಿ, ವ್ಯತಿರಿಕ್ತ ಸಾಕ್ಷ ಹೇಳಿದ ಕಾರಣ ಪ್ರಕರಣ ಬಿದ್ದು ಹೋಯಿತು.

ತಮ್ಮ ಪ್ರಪ್ರಥಮ ಆಪರೇಷನ್ ವಿಫಲಗೊಂಡರೂ ವರ್ಷಾ ದೇಶಪಾಂಡೆ ಎದೆಗುಂದದೆ ಮುಂದುವರಿದರು. ಅವರು ತಮ್ಮ ಎರಡನೇ ಪ್ರಕರಣವಾಗಿ ಡಾ.ಅಂಬಾ ದಾಸ್ ಕದಮ್ ಎಂಬ ವೈದ್ಯನ ಮೇಲೆ ನಡೆಸಿದ ಸ್ಟಿಂಗ್ ಆಪರೇಷನ್ ಯಶಸ್ವಿಯಾಗಿ ನಡೆದು, ಆತನಿಗೆ ಮೂರು ವರ್ಷಗಳ ಜೈಲು ಶಿಕ್ಷೆಯಾಯಿತು. ಕೆಲವು ಬಾರಿ ಆರೋಗ್ಯಾಧಿಕಾರಿಗಳು ತಪ್ಪಿತಸ್ಥ ವೈದ್ಯರ ಜೊತೆ ಶಾಮೀಲಾಗಿ ಸ್ಟಿಂಗ್ ಆಪರೇಷನ್‌ಗಳು ವಿಫಲವಾಗುವುದಿದೆ.

ಇದಲ್ಲದೆ, ಎಷ್ಟೋ ಬಾರಿ ಅವರು ಹಾಗೂ ಸ್ಟಿಂಗ್ ಆಪರೇಷನ್‌ಗಳಲ್ಲಿ ಭಾಗವಹಿಸಿದ ಗರ್ಭಿಣಿಯರು ಜೀವ ಬೆದರಿಕೆಗಳನ್ನು ಎದುರಿಸಬೇಕಾಗಿ ಬಂದಿತ್ತು. 2011ರಲ್ಲಿ ಕೊಲ್ಹಾಪುರದಲ್ಲಿ ನಡೆಸಿದ ಸ್ಟಿಂಗ್ ಆಪರೇಷನ್‌ನಲ್ಲಿ ಭಾಗವಹಿಸಿದ್ದ ಗರ್ಭಿಣಿಗೆ ಹೀಗೇ ಜೀವ ಬೆದರಿಕೆಗಳು ಬಂದು, ಆಕೆ ತನ್ನ ಮಗುವಿನೊಂದಿಗೆ ಕಣ್ಮರೆಯಾಗಿ ಮುಂದೆ ಅವಳು ಏನಾದಳು ಎಂಬುದು ಈವರೆಗೂ ತಿಳಿದು ಬಂದಿಲ್ಲ. ರಾಜಕಾರಣಿಗಳು ತಪ್ಪಿತಸ್ಥ ವೈದ್ಯರ ಪರವಾಗಿ ವರ್ಷಾ ದೇಶಪಾಂಡೆಯವರ ಮೇಲೆ ಒತ್ತಡ ಹೇರಿದ್ದೂ ಇದೆ. ಆದರೆ, ಇಷ್ಟೆಲ್ಲವನ್ನು ಎದುರಿಸಿಯೂ 58 ವರ್ಷ ಪ್ರಾಯದ ವರ್ಷಾ ದೇಶಪಾಂಡೆ ಈವರೆಗೆ 50ಕ್ಕೂ ಹೆಚ್ಚು ಸಂಖ್ಯೆಯ ಸ್ಟಿಂಗ್ ಆಪರೇಷನ್‌ಗಳನ್ನು ನಡೆಸಿ, 20 ವೈದ್ಯರುಗಳಿಗೆ ಶಿಕ್ಷೆ ಕೊಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಈ ಸ್ಟಿಂಗ್ ಆಪರೇಷನ್‌ಗಳನ್ನು ನಡೆಸುವುದು ಎಷ್ಟು ಅಪಾಯಕಾರಿಯೋ ಅಷ್ಟೇ ದುಬಾರಿಯೂ ಹೌದು. ಒಂದು ಸ್ಟಿಂಗ್ ಆಪರೇಷನ್ ನಡೆದು, ಕೇಸು ದಾಖಲಾಗಿ, ವರ್ಷಾನುಗಟ್ಟಲೆ ಕೋರ್ಟುಗಳಲ್ಲಿ ವಿಚಾರಣೆ ನಡೆದು ತೀರ್ಮಾನವಾಗುವ ಹೊತ್ತಿಗೆ ವರ್ಷಾ ದೇಶಪಾಂಡೆ ಒಂದೆರಡು ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿ ಬರುತ್ತದೆ. ರಹಸ್ಯ ಕ್ಯಾಮೆರಾ, ಟೇಪ್ ರೆಕಾರ್ಡರ್‌ಗಳೂ ದುಬಾರಿಯಾದವುಗಳು. ಇಷ್ಟೆಲ್ಲ ಖರ್ಚುಗಳಿಗೂ ವರ್ಷಾ ದೇಶಪಾಂಡೆ ತಮ್ಮ ಸ್ವಂತದ ಹಣವನ್ನೇ ಬಳಸುತ್ತಾರೆ. ಯಾವುದೇ ಸಂಘಟನೆಗಳಾಗಲೀ, ಸರ್ಕಾರಿ ಇಲಾಖೆಗಳಾಗಲೀ ಇವರಿಗೆ ಸಹಾಯ ಹಸ್ತ ಚಾಚುವುದಿಲ್ಲ. ಇವರಿಗೆ ಸಹಾಯಕರಾಗಿ ನಿಲ್ಲುವವರೆಂದರೆ ಅದಮ್ಯ ಸಾಮಾಜಿಕ ಕಳಕಳಿಯುಳ್ಳ ಆ ಗರ್ಭಿಣಿಯರು ಮಾತ್ರ. ಅವರಲ್ಲಿ ಇಬ್ಬರು ಪತ್ರಕರ್ತೆಯರು ಹಾಗೂ ಮೂವರು ವೇಶ್ಯೆಯರೂ ಸೇರಿದ್ದಾರೆ. 2025ಲ್ಲಿ ವಿಶ್ವ ಸಂಸ್ಥೆ ತನಗೆ ‘ಯುನೈಟೆಡ್ ನೇಷನ್ಸ್ ಪಾಪ್ಯುಲೇಷನ್ ಆವಾರ್ಡ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದಾಗ ವರ್ಷಾ ದೇಶಪಾಂಡೆ ಆ ಪ್ರಶಸ್ತಿಯನ್ನು ಈ ಗರ್ಭಿಣಿಯರಿಗೆ ಅರ್ಪಿಸಿದರು.

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

21 mins ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

4 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

4 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

4 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

4 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

5 hours ago