Andolana originals

ಪಾತಾಳಕ್ಕೆ ಈರುಳ್ಳಿ ಧಾರಣೆ; ರೈತ ಕಂಗಾಲು

ಕೆ.ಬಿ.ರಮೇಶನಾಯಕ

ಹಳೆಯ ಈರುಳ್ಳಿಗಿಂತ ಹೊಸ ಈರುಳ್ಳಿ ಬೆಲೆ ತೀವ್ರ ಕುಸಿತ 

ಅನ್‌ಲೋಡ್ ಮಾಡದೆ ನಿಂತ ಈರುಳ್ಳಿ ತುಂಬಿದ ಲಾರಿಗಳು

ಮೈಸೂರು: ಅತ್ತ ಭಾರತದಿಂದ ರಫ್ತಾಗುವ ವಸ್ತುಗಳಿಗೆ ಅಮೆರಿಕ ದುಪ್ಪಟ್ಟು ತೆರಿಗೆ ವಿಧಿಸುತ್ತಿದ್ದರೆ, ಇತ್ತ ಬಾಂಗ್ಲಾದೇಶ ಭಾರತದ ಈರುಳ್ಳಿಯನ್ನು ಆಮದು ಮಾಡಿಕೊಳ್ಳದಿರುವ ಪರಿಣಾಮವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ರೈತರು ಬೆಳೆದಿರುವ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದೆ.

ಕಳೆದ ವರ್ಷ ಬೆಲೆ ಏರಿಕೆಯಲ್ಲಿ ದಾಖಲೆ ಬರೆದಿದ್ದ ಈರುಳ್ಳಿ ದರ ಈಗ ತೀವ್ರ ಇಳಿಮುಖವಾಗಿದೆ. ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಂದ ಮೈಸೂರಿನ ಬಂಡೀಪಾಳ್ಯಕ್ಕೆ ಈರುಳ್ಳಿ ತರುತ್ತಿರುವ ರೈತರು ಕಡಿಮೆ ಬೆಲೆಯಿಂದಾಗಿ ನಷ್ಟಕ್ಕೊಳಗಾಗಿ ನಿರಾಸೆಯಿಂದ ಹಿಂತಿರುಗುತ್ತಿರುವುದು ಕಂಡುಬಂದಿದೆ.

ಬೆವರು ಸುರಿಸಿ ಈರುಳ್ಳಿ ಬೆಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಬೆಲೆ ಸಿಗದೆ ಇರುವುದರಿಂದ ಸಾಗಾಣಿಕೆ ಲಾರಿ ಬಾಡಿಗೆಯನ್ನೇ ಮುಕ್ಕಾಲು ಭಾಗ ನೀಡಿ ಉಳಿದ ಹಣವನ್ನು ಜೇಬಿಗೆ ಹಾಕಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಸೂರಿನ ಬಂಡೀಪಾಳ್ಯ ಎಪಿಎಂಸಿಯು ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ರೈತರಿಗೆ ವ್ಯಾಪಾರ ಸಂಪರ್ಕ ಕೊಂಡಿಯಾಗಿದೆ.

ರಾಜ್ಯದಲ್ಲೇ ನಂಬರ್ ಒನ್ ಎಪಿಎಂಸಿ ಎಂದು ಗುರುತಿಸಿಕೊಂಡಿರುವುದರಿಂದ, ರಾಜ್ಯದ ಯಾವುದೇ ಭಾಗಗಳಲ್ಲಿ ಏನೇ ಬೆಳೆದರೂ ಬಹುತೇಕ ಮೈಸೂರಿಗೆ ತರುವುದು ಸಹಜ. ಅದೇ ರೀತಿ ಚಿತ್ರದುರ್ಗ, ಬಾಗಲಕೋಟೆ,ಬಿಜಾಪುರ, ಹುಬ್ಬಳ್ಳಿ, ಧಾರವಾಡ, ಕೊಪ್ಪಳ, ಬೆಳಗಾವಿ ಜಿಲ್ಲೆಗಳಿಂದ ರೈತರು ಈರುಳ್ಳಿಯನ್ನು ಇಲ್ಲಿಗೆ ಹರಾಜಿಗೆ ತರುತ್ತಾರೆ. ಮೈಸೂರಿಗೆ ಪ್ರತಿನಿತ್ಯ ೫೦ರಿಂದ೬೦ ಲೋಡ್ ಬರುತ್ತಿದ್ದು, ಒಂದೊಂದು ಲೋಡ್ನಲ್ಲಿ ಅಂದಾಜು ೨೫ ಟನ್‌ಗಳಷ್ಟು ಈರುಳ್ಳಿ ಇರುತ್ತಿತ್ತು.

೨೫೦ರೂ.ಗೂ ಕೊನೆ ಕ್ವಾಲಿಟಿ ಕೇಳೋರು ಇಲ್ಲ: ಬಂಡಿಪಾಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೂರು ಕ್ವಾಲಿಟಿಯ ಈರುಳ್ಳಿ ಬರುತ್ತದೆ, ಒಂದು ಕೆಜಿಗೆ ೨ ರೂ.ನಿಂದ ೬ ರೂ.ಗೆ ಹರಾಜು ಆಗಿದ್ದರೆ, ಒಂದು ವಾರದಿಂದ ಮೊದಲ ಕ್ವಾಲಿಟಿ ದರ ೯ರಿಂದ ೧೨ ರೂ.ಗೆ ಮಾರಾಟವಾಗಿದೆ. ಅಕ್ಟೋಬರ್ ೧ರಿಂದ ಇಲ್ಲಿಯತನಕ ೧೨ ರೂ.ಗಳಿಗಿಂತ ಹೆಚ್ಚು ಹರಾಜು ಕೂಗಿಲ್ಲ ಎನ್ನುವುದನ್ನು ಅಂಕಿ ಅಂಶಗಳೇ ಹೇಳುತ್ತಿವೆ.

ಮಹಾರಾಷ್ಟ್ರಭಾಗದಿಂದ ಬರುವ ಈರುಳ್ಳಿಯ ಲಾರಿಗಳು ಹಾಗೇ ನಿಂತಿವೆ. ಮಹಾರಾಷ್ಟ್ರ ಕಡೆಯಿಂದ ಬರುವ ಈರುಳ್ಳಿ ಒಂದು ವಾರ ಇಟ್ಟುಕೊಂಡರೂ ತೇವ ಬರುವುದಿಲ್ಲ. ಆದರೆ, ಚಿತ್ರದುರ್ಗ, ಬಿಜಾಪುರ ಭಾಗದಿಂದ ಬರುವ ಈರುಳ್ಳಿ ೨-೩ ದಿನಗಳು ಮಾತ್ರ ಸುಸ್ಥಿತಿಯಲ್ಲಿರುತ್ತದೆ. ಹೀಗಾಗಿ ಈರುಳ್ಳಿ ತಂದವರಿಗೆ ಮಾರಾಟ ಮಾಡಿದೇ ವಿಧಿ ಇಲ್ಲ ಎನ್ನುವಂತಾಗಿದೆ. ೩ನೇ ಕ್ವಾಲಿಟಿ ಈರುಳ್ಳಿಯನ್ನು ಕ್ವಿಂಟಾಲ್‌ಗೆ ೨೫೦ ರೂ.ಗೂ ಕೇಳುವವರಿಲ್ಲದಂತಾಗಿದೆ. ಹೀಗಾಗಿ ಒಂದೊಂದು ಲಾರಿಯಲ್ಲಿ ೨೫೦ರಿಂದ ೫೦೦ ಚೀಲ ಈರುಳ್ಳಿಯನ್ನು ಮಾರಾಟಕ್ಕೆ ತರುವವರಿಗೆ ಲಾಭಕ್ಕಿಂತ ನಷ್ಟವೇ ಆಗುತ್ತಿದೆ ಎಂದು ರೈತರೊಬ್ಬರು ಅಳಲು ತೋಡಿಕೊಂಡರು.

ಒಂದು ಕ್ವಿಂಟಾಲ್ ಬಾಡಿಗೆ ೧೨೫ ರೂ., ಕೂಲಿಯಾಳುಗಳಿಗೆ ೧೦೦ ರೂ. ಆಗುತ್ತದೆ. ನಮ್ಮ ಈರುಳ್ಳಿಯನ್ನು ೨೦೦ ರೂ.ಗೆ ಕೊಟ್ಟಿದ್ದೇನೆ. ಒಂದು ಕ್ವಿಂಟಾಲ್‌ಗೆ ೨೫ ರೂ. ನಷ್ಟವಾಗಿದೆ ಎಂದು ಹೇಳಿದರೆ, ಮತ್ತೊಬ್ಬರು ಕ್ವಿಂಟಾಲ್‌ಗೆ ೨೫೦ ರೂ.ನಂತೆ ೨೫೦ ಚೀಲ ಮಾರಾಟ ಮಾಡಿದ್ದೇನೆ ಎಂದು ಬೇಸರಿಸಿದರು. ಕಳೆದ ವರ್ಷ ಮೂರು ತಿಂಗಳು ಈರುಳ್ಳಿ ಧಾರಣೆ ಇಳಿದಿರಲಿಲ್ಲ. ೩ ಎಕರೆಯಲ್ಲಿ ಬೆಳೆದಿದ್ದ ರಿಂದ ೬ ಲಕ್ಷ ರೂ.ಲಾಭ ಬಂದಿತ್ತು. ಈ ಬಾರಿ ೫೦೦ ಕ್ವಿಂಟಾಲ್ ಈರುಳ್ಳಿ ಬೆಳೆದಿದ್ದೇನೆ. ಒಂದು ಪೈಸೆ ಲಾಭವಿಲ್ಲ ಎಂದು ಬಿಜಾಪುರದ ರೈತ ಶಿವಾನಂದ ಪಟೇಲ್ ಸಂಕಟ ಹೇಳಿಕೊಂಡರು.

ಬಾಂಗ್ಲಾಕ್ಕಿಲ್ಲ ರಫ್ತು: ಭಾರತದಿಂದ ಯಥೇಚ್ಛವಾಗಿ ಬಾಂಗ್ಲಾದೇಶಕ್ಕೆ ಈರುಳ್ಳಿ ಯನ್ನು ರಫ್ತು  ಮಾಡಲಾಗುತ್ತಿತ್ತು. ಆದರೆ,ಅಲ್ಲಿ ಈಗ ಬಾಂಗ್ಲಾದೇಶ ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ಭಾರತದಲ್ಲಿ ದರ ಇಳಿಕೆಗೆ ಕಾರಣವಾಗಿದೆ. ಈಗ ಕೇಂದ್ರ ಸರ್ಕಾರ ರಫ್ತು ಮಾಡಲು ಅನುಮತಿ ನೀಡಿದರೂ ಆಮದು ಮಾಡಿಕೊಳ್ಳಲು ಅಲ್ಲಿ ಹಿಂದೇಟು ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

” ಈ ವರ್ಷ ೨೦೦ ಕ್ವಿಂಟಾಲ್ ಈರುಳ್ಳಿ ಬೆಳೆದಿದ್ದೆ. ಕ್ವಿಂಟಾಲ್‌ಗೆ ೪೦೦ ರೂ.ನಂತೆ ಮಾರಾಟ ಮಾಡಿದ್ದೇನೆ. ಬಾಡಿಗೆ ಹಣ ಕಳೆದು ಐದು ಸಾವಿರ ರೂಪಾಯಿಯೂ ಉಳಿದಿಲ್ಲ. ಕೊನೆ ಕ್ವಾಲಿಟಿ ತಂದವರಿಗೆ ಬಾಡಿಗೆನೂ ಸಿಗುತ್ತಿಲ್ಲ.”

ಮೂಡಲಗಿರಿಯಪ್ಪ, ಹೊಸದುರ್ಗ

” ಕಳೆದ ವರ್ಷ ಮೂರ‍್ನಾಲ್ಕು ತಿಂಗಳು ಬೆಲೆ ಇಳಿಕೆಯಾಗದೆ ಅಧಿಕ ಲಾಭ ಸಿಕ್ಕಿತ್ತು. ಈ ಬಾರಿ ನಷ್ಟವಾಗಿದೆ. ನಮ್ಮ ಈರುಳ್ಳಿಯನ್ನು ೨-೩ ದಿನಗಳ ಕಾಲ ಇಡಬಹುದು. ಮಹಾರಾಷ್ಟ್ರಭಾಗದವರು ಈರುಳ್ಳಿಗೆ ಪೌಡರ್ ಹಾಕಿ ಇಡುವುದರಿಂದ ಒಂದು ವಾರವಾದರೂ ಸಮಸ್ಯೆಯಾಗಲ್ಲ. ನಮ್ಮ ಈರುಳ್ಳಿಗೆ ಸರ್ಕಾರ ಒಂದಿಷ್ಟು ಬೆಂಬಲ ಬೆಲೆ ನೀಡಿ ಖರೀದಿಸಬೇಕು.”

ಕೆಂಚರಾಜು, ಬುರುಡೆಗುಂಟೆ, ಚಿತ್ರದುರ್ಗ

” ೨ ಎಕರೆಯಲ್ಲಿ ಈರುಳ್ಳಿ ಬೆಳೆದು ಕ್ವಿಂಟಾಲ್ ೨೦೦ರೂ.ಗಳಂತೆ ಇಂದು ಮಾರಾಟ ಮಾಡಿರುವೆ. ಇಷ್ಟೊಂದು ಬೆಲೆ ಇಳಿಕೆಯಾಗಿರುವುದನ್ನು ನೋಡಿರುವುದು ಮೊದಲು. ಬೇರೆ ಕಡೆಗೆ ಸಾಗಿಸಲು ಅವಕಾಶ ಕೊಡಬೇಕು.”

ಮಂಜುನಾಥ್, ಹಿರಿಯೂರು

ಆಂದೋಲನ ಡೆಸ್ಕ್

Recent Posts

ನೈಜ ಕೃಷಿಗೆ ಪ್ರೋತ್ಸಾಹ : ಸಚಿವ.ಎನ್.ಚಲುವರಾಯಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಶೇ 75% ರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು…

23 mins ago

ಮಹದೇಶ್ವರ ಬೆಟ್ಟ | ಪಾದಾಯಾತ್ರೆಗೆ ತಾತ್ಕಲಿಕ ನಿರ್ಬಂಧ

ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಾಯಾತ್ರೆ ತೆರಳುವುದಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ನಿರ್ಬಂಧ…

51 mins ago

ಮುಡುಕುತೊರೆ ಜಾತ್ರೆ : ಪೋಸ್ಟರ್ ಬಿಡುಗಡೆಗೊಳಿಸಿದ ಸಚಿವ ಎಚ್‌ಸಿಎಂ

ಮೈಸೂರು : ಮುಡುಕುತೊರೆ ಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಮತ್ತು ದತ್ತಿ ಇಲಾಖೆ ಹಾಗೂ…

1 hour ago

ಗುರಿ ಇಟ್ಟುಕೊಂಡು ನಿರಂತರ ಓದಿ : ಪಿಯುಸಿ ವಿದ್ಯಾರ್ಥಿಗಳಿಗೆ ನಿಶಾಂತ್‌ ಸಲಹೆ

ಹನೂರು : ಪ್ರತಿಯೊಬ್ಬ ವಿದ್ಯಾರ್ಥಿಗೂ ದ್ವಿತೀಯ ಪಿಯುಸಿ ಒಂದು ಪ್ರಮುಖ ಘಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಒಂದು ಗುರಿ…

2 hours ago

ಉತ್ತರ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ವಿಮಾನ ಪತನ: ಇಬ್ಬರು ಪೈಲಟ್‌ಗಳು ಬಚಾವ್‌

ಉತ್ತರ ಪ್ರದೇಶ: ಇಲ್ಲಿನ ಪ್ರಯಾಗ್‌ರಾಜ್‌ನಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ಭಾರತೀಯ ವಾಯುಪಡೆಯ ಮೈಕ್ರೋಲೈಟ್‌ ವಿಮಾನವೊಂದು ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳನ್ನು…

2 hours ago

ನೈಸರ್ಗಿಕ ಕೃಷಿ ಪದ್ಧತಿ ಎಲ್ಲರ ಪಾಲಿಗೆ ಜೀವನೋಪಾಯವಾಗಲಿ: ಡಾ. ಶರಣ ಪ್ರಕಾಶ್‌ ಪಾಟೀಲ್

ಬೆಂಗಳೂರು: ಕರ್ನಾಟಕದಲ್ಲಿ ಜೀವನೋಪಾಯಕ್ಕೆ ಅದರಲ್ಲೂ ಮಹಿಳೆಯರ ಜೀವನೋಪಾಯಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ ನೃಸರ್ಗಿಕ ಕೃಷಿ ಪದ್ಧತಿಯ ಬಗ್ಗೆ…

3 hours ago