ರಶ್ಮಿ ಕೋಟಿ
ಬದುಕುಳಿದವರ ಕಾಡುತ್ತಿರುವ ಘೋರ ದುರಂತ
ಮಣ್ಣಲ್ಲಿ ಮಣ್ಣಾದ ಚೂರಲ್ ಮಲ, ಮುಂಡಕ್ಕೈ…
ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿರುವ ಆತಂಕ
ಸಂತ್ರಸ್ತ ಕುಟುಂಬಕ್ಕೆ ೬,೦೦೦ ರೂ. ಬಾಡಿಗೆ ನೆರವು
ವಯನಾಡು (ಕೇರಳ): ಧಾರಾಕಾರ ಮಳೆಗೆ ರಾತ್ರೋರಾತ್ರಿ ಕುಸಿದ ಭೂಮಿ ಅಡಿಯಲ್ಲಿ ಸಿಲುಕಿ ವಯನಾಡು ಜಿಲ್ಲೆಯ ಮೂರು ಗ್ರಾಮಗಳು ಮಣ್ಣಲ್ಲಿ ಮಣ್ಣಾಗಿ ಹೋದ ದುರಂತ ಸಂಭವಿಸಿ ಇಂದಿಗೆ (ಜು.೩೦) ಒಂದು ವರ್ಷ. ಇನ್ನೂ ಸಂತ್ರಸ್ತರ ಕಣ್ಣಂಚಿನಲ್ಲಿ ಕಂಬನಿಯ ತೇವಾಂಶ ಸಂಪೂರ್ಣವಾಗಿ ಆರಿಲ್ಲ.
೨೦೨೪ರ ಜುಲೈ ೩೦ರಂದು ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಬದುಕುಳಿದ ಸಾವಿರಾರು ಜನರ ಮರೆಯಲಾಗದ ನೆನಪುಗಳಾಗಿ ಉಳಿದಿವೆ. ಮೆಪ್ಪಾಡಿ ಪಂಚಾಯತ್‌ನ ಚೂರಲ್‌ಮಲ, ಮುಂಡಕ್ಕೈ ಹಾಗೂ ವೆಲ್ಲಾರಿಮಲ ಊರುಗಳು ರಾತ್ರೋರಾತ್ರಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ಮಣ್ಣಿನಡಿಯಲ್ಲಿ ಹುದುಗಿಹೋಗಿ ಇಂದಿಗೆ (ಜು.೩೦) ಒಂದು ವರ್ಷ. ಒಂದು ಕಾಲದಲ್ಲಿ ಪ್ರವಾಸಿಗರ ನೆಚ್ಚಿನ ಸ್ಥಳವಾಗಿದ್ದ ಈ ಊರುಗಳು ಈಗ ನೆನಪಿಗೆ ಮಾತ್ರ ಸೀಮಿತ.
ಭೂಕುಸಿತದಿಂದ ೨೯೮ ಮಂದಿ ಪ್ರಾಣ ಕಳೆದುಕೊಂಡರೆ, ೩೨ ಜನರು ಇನ್ನೂ ಕಾಣೆಯಾಗಿದ್ದಾರೆ ಎಂಬುದು ಅಽಕೃತ ದಾಖಲೆ. ಆದರೆ ಮೆಪ್ಪಾಡಿಯ ನಿವಾಸಿಗಳು ಸಾವಿನ ಅಧಿಕೃತ ಸಂಖ್ಯೆ ಇನ್ನೂ ಹೆಚ್ಚಿರಬಹುದೆಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ದಾಖಲಾಗದ ಅನೇಕ ಕಾರ್ಮಿಕರು ಅಲ್ಲಿ ನೆಲೆಸಿದ್ದರಿಂದ ಈ ಸಂಖ್ಯೆ ೪೦೦ಕ್ಕೆ ತಲುಪಬಹುದು ಎಂಬುದು ಅವರ ಅಂದಾಜು. ರಕ್ಷಣಾ ಕಾರ್ಯಾಚರಣೆಯಲ್ಲಿ ವಿವಿಧ ಸ್ಥಳಗಳಿಂದ ೨೨೩ ಮಾನವ ಅಂಗಾಂಗಗಳು ಮತ್ತು ಚೂರಲ್‌ಮಲದಿಂದ ಸುಮಾರು ೫೦ ಕಿ.ಮೀ. ದೂರದವರೆಗೆ ಸೂಚಿಪಾರ ಜಲಪಾತಕ್ಕೆ ಹರಿದುಹೋಗಿರುವ ದೇಹದ ಭಾಗಗಳು ಭೂಕುಸಿತದ ಭೀಕರತೆಯನ್ನು ಬಿಚ್ಚಿಟ್ಟಿವೆ.
ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳ ಪೈಕಿ ಮುಂಡಕ್ಕೈ ಮತ್ತು ಚೂರಲ್‌ಮಲಗಳನ್ನು ಸರ್ಕಾರ ವಾಸಯೋಗ್ಯವಲ್ಲದ ಪ್ರದೇಶಗಳೆಂದು ಘೋಷಿಸಿದೆ. ಹಾಗಾಗಿ ಬದುಕುಳಿದವರು ಈಗ ವಯನಾಡಿನ ವಿವಿಧ ಭಾಗಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಭೂವಿಜ್ಞಾನಿ ಜಾನ್ ಮಥಾಯಿಯವರ ನೇತೃತ್ವದ ಸಮಿತಿಯು ೧೦೭.೫ ಹೆಕ್ಟೇರ್ ಪ್ರದೇಶವನ್ನು ಅಪಾಯಕಾರಿ ಎಂದು ಗುರುತಿಸಿದ್ದು, ಈ ಪ್ರದೇಶಗಳಲ್ಲಿ ಮಾನವ ಚಟುವಟಿಕೆ ಹಾಗೂ ಕಟ್ಟಡ ನಿರ್ಮಾಣಗಳ ಮೇಲೆ ನಿರ್ಬಂಧ ವಿಧಿಸುವಂತೆ ಶಿಫಾರಸು ಮಾಡಿದೆ. ಸರ್ಕಾರದ ಅಧಿಕೃತ ವರದಿಯಂತೆ, ೪೮೨ ಕಟ್ಟಡಗಳು ಸಂಪೂರ್ಣ ವಾಗಿ ನಾಶವಾಗಿದ್ದು, ೨೪೨ ಕಟ್ಟಡಗಳು ಭಾಗಶಃ ಹಾನಿಗೊಳಗಾಗಿವೆ. ೬೬೧ ಕಟ್ಟಡಗಳನ್ನು ವಾಸಯೋಗ್ಯವಲ್ಲವೆಂದು ಘೋಷಿಸಲಾಗಿದೆ. ಇವುಗಳಲ್ಲಿ ಬಹುಪಾಲು ಜನರು ವಾಸಿಸುತ್ತಿದ್ದ ಮನೆಗಳಾಗಿವೆ. ಭಾರೀ ಬೆಳೆ ಹಾನಿಯೂ ಉಂಟಾಗಿದ್ದು, ೨೯.೨೨೧೬ ಹೆಕ್ಟೇರ್ ಕೃಷಿಭೂಮಿಯೂ ಸಂಪೂರ್ಣ ನಾಶವಾಗಿರುವುದು ವರದಿಯಾಗಿದೆ.
ಧನಸಹಾಯ ವಿತರಣೆ ಕುರಿತು ಅಸಮಾಧಾನ: ದುರ್ಘಟನೆ ನಂತರ ಅನೇಕ ಸಂಸ್ಥೆಗಳು ಸಹಾಯಕ್ಕೆ ಧಾವಿಸಿದರೂ, ಪರಿಹಾರ ವಿತರಣೆಯಲ್ಲಿ ಸಮಾನತೆ ಇಲ್ಲದಿದ್ದರಿಂದ ಹಲವಾರು ಸಮಸ್ಯೆಗಳು ಮುಂದುವರಿದಿವೆ. ಕೆಲವರಿಗೆ ಸಾಕಷ್ಟು ಸಹಾಯ ದೊರಕಿದರೆ, ಮತ್ತೆ ಕೆಲವರಿಗೆ ಅಲ್ಪಭಾಗವೂ ಸಿಕ್ಕಿಲ್ಲ. ಇದು ಬದುಕುಳಿದವರಲ್ಲಿ ಅಸಮಾಧಾನ ಮತ್ತು ಪ್ರತಿಭಟನೆಯ ಚಿಂತನೆಗೆ ದಾರಿ ಮಾಡಿತು. ಖಾಸಗಿ ಹಾಗೂ ಸರ್ಕಾರಿ ಸಹಾಯಗಳ ನಡುವೆ ಸ್ಪಷ್ಟತೆ ಇಲ್ಲದ ಕಾರಣ ಹಲವರು ನಿರಾಸೆಗೊಂಡಿದ್ದಾರೆ. ಖಾಸಗಿ ಸಂಸ್ಥೆಗಳು ಬದುಕುಳಿದವರ ಜೀವನೋಪಾಯ ಪುನರ್ ನಿರ್ಮಾಣದ ಪ್ರಯತ್ನದಲ್ಲಿ ಭಾಗಿಯಾದರೂ, ಸರ್ಕಾರವೂ ಅನೇಕ ಯೋಜನೆಗಳನ್ನು ರೂಪಿಸಿದೆ.
ಸರ್ಕಾರವು ಅಲ್ಪಾವಧಿ ಹಾಗೂ ದೀರ್ಘಾವಧಿ ಉದ್ಯೋಗದ ಯೋಜನೆಗಳನ್ನು ಹಾಕಿಕೊಂಡು ಅದರಡಿ ಆಸಕ್ತರಿಗೆ ತರಬೇತಿಯನ್ನು ನೀಡುವುದರ ಜೊತೆಗೆ ಸಲಕರಣೆಗಳನ್ನೂ ವಿತರಿಸುವ ವ್ಯವಸ್ಥೆ ಮಾಡಿದೆ. ಹೀಗೆ ಒಂದು ಯೋಜನೆಯಡಿ ವಿತರಣೆಯಾದ ಹೊಲಿಗೆ ಯಂತ್ರಗಳನ್ನು ಪಡೆದುಕೊಂಡ ಕೆಲವರು, ಅರ್ಧ ಬೆಲೆಯಲ್ಲಿ ಮಾರಿಬಿಟ್ಟಿದ್ದೂ ವರದಿಯಾಗಿದೆ.
ಒರು ವೀಟು ವೇಣಂ (ಒಂದು ಮನೆ ಬೇಕು) ಈ ದುರಂತದಲ್ಲಿ ನಿರಾಶ್ರಿತರಾದವರಿಗೆ ಕೇರಳ ಸರ್ಕಾರವು ಕಲ್ಪೆಟ್ಟಾದ ಎಲ್‌ಸ್ಟೋನ್ ಎಸ್ಟೇಟ್‌ನಲ್ಲಿ ಮಾದರಿ ಪುನರ್ವಸತಿ ನಿರ್ಮಾಣ ಯೋಜನೆಯನ್ನು ಪ್ರಾರಂಭಿಸಿದೆ. ಈ ನಿರ್ಮಾಣ ಕಾರ್ಯವನ್ನು ಉರಳುಂಗಲ್ ಲೇಬರ್ ಕಾಂಟ್ರಾಕ್ಟ್ ಕೋ – ಆಪರೇಟಿವ್ ಸೊಸೈಟಿ (ULCCS) ನಿಭಾಯಿಸುತ್ತಿದ್ದು, ಮಾದರಿ ಮನೆ ಈಗಾಗಲೇ ಪೂರ್ಣಗೊಳ್ಳುವ ಹಂತದಲ್ಲಿದೆ. ಅಲ್ಲಿಯವರೆಗೆ ಬದುಕುಳಿದವರಿಗೆ ತಾತ್ಕಾಲಿಕ ನೆಲೆಯನ್ನು ಹುಡುಕಲು ಹರಸಾಹಸ ಪಡಬೇಕಾಯಿತು. ಕಡೆಗೆ ಜಿಲ್ಲಾಡಳಿತ “ಒರು ವೀಟು ವೇಣಂ ” (ಒಂದು ಮನೆ ಬೇಕು) ಎಂಬ ಫಲಕಗಳನ್ನು ವಯನಾಡಿನಾದ್ಯಂತ ಅಳವಡಿಸಿತು. ಸರ್ಕಾರ ಪ್ರತಿ ಕುಟುಂಬಕ್ಕೆ ೬,೦೦೦ ರೂ. ಬಾಡಿಗೆ ನೆರವು ಮತ್ತು ಕುಟುಂಬದ ಇಬ್ಬರಿಗೆ ತಲಾ ೯,೦೦೦ ರೂ. ಆರ್ಥಿಕ ನೆರವನ್ನು ನೀಡುತ್ತಿದೆ. ಈ ನೆರವನ್ನು ಸರ್ಕಾರದ ವತಿಯಿಂದ ಮನೆಗಳು ನಿರ್ಮಾಣವಾಗುವವರೆಗೂ ವಿಸ್ತರಿಸಬೇಕು ಎಂಬುದು ದುರಂತ ದಲ್ಲಿಬದುಕುಳಿ ದವರು ಮನವಿ.
ಒಂದು ವರ್ಷದಲ್ಲಿ ಚೂರಲ್‌ಮಲ ಮತ್ತು ಮುಂಡಕ್ಕೈ ಜನರ ದೈಹಿಕ ಗಾಯಗಳು ನಿಧಾನವಾಗಿ ಗುಣಮುಖ ವಾಗುತ್ತಿದ್ದರೂ, ತಮ್ಮ ಪ್ರೀತಿಪಾತ್ರರು ಹಾಗೂ ತಮ್ಮದಾಗಿದ್ದ ಎಲ್ಲವನ್ನೂ ಕಳೆದುಕೊಂಡ ನೋವು ಮಾತ್ರ ಶಾಶ್ವತವಾಗಿ ಉಳಿದಿದೆ. ಅವರೆಲ್ಲರ ಜೀವನದ ಪುನರ್ ನಿರ್ಮಾಣದ ಪಯಣ ದೀರ್ಘ ಹಾಗೂ ಸಂಕಷ್ಟದ ಹಾದಿಯೇ ಆಗಿರಬಹುದು. ಆದರೆ ತಮ್ಮ ಮನೆ ಹಾಗೂ ತಮ್ಮ ಜೀವನವನ್ನು ಮರಳಿ ಕಟ್ಟಿಕೊಳ್ಳುವ ಹೋರಾಟದಲ್ಲಿ ಅವರು ತೋರಿಸುತ್ತಿರುವ ಧೈರ್ಯ ಮತ್ತು ಸಹಿಷ್ಣುತೆಯು ಕತ್ತಲೆಯ ನಡುವೆ ಪ್ರಜ್ವಲಿತವಾಗುವ ದೀಪದಂತೆ ಉಳಿಯಲಿದೆ.
” ನಾನು ಕಣ್ಣು ಮುಚ್ಚಿದರೆ ನೆನಪುಗಳು ಪ್ರವಾಹದಂತೆ ಮರಳಿ ಬರುತ್ತವೆ. ಭೂಕುಸಿತದ ಶಬ್ದ, ಭಾರೀ ಹೆಲಿಕಾಪ್ಟರ್ ಇಳಿಯುತ್ತಿರುವ ಧ್ವನಿ… ಈಗಲೂ ನನ್ನ ಮನಸ್ಸಿನಲ್ಲಿ ಮೊಳಗುತ್ತಲೇ ಇದೆ, ಒಂದು ವರ್ಷದ ನಂತರವೂ.”
ಲಕ್ಷ್ಮಿ ಕುಟ್ಟಿ, ದುರಂತದಲ್ಲಿ ಬದುಕುಳಿದವರು
” ಕಲ್ಪೆಟ್ಟಾ ಬೈಪಾಸ್ ರಸ್ತೆಯಲ್ಲಿರುವ ೬೪ ಹೆಕ್ಟೇರ್ ಭೂಮಿಯಲ್ಲಿ ೪೧೦ ಮನೆಗಳನ್ನೊಳಗೊಂಡ ಮಾದರಿ ವಸತಿ ಪೂರೈಕೆ ಯೋಜನೆಗೆ ಕೇರಳ ಸರ್ಕಾರ ಈಗಾಗಲೇ ಚಾಲನೆ ನೀಡಿದೆ. ಪ್ರತಿಯೊಬ್ಬ ಫಲಾನುಭವಿಗೂ ೭ ಸೆಂಟು ಭೂಮಿಯಲ್ಲಿ ೧,೦೦೦ ಚದರ ಅಡಿಗಳ ಮನೆ ನೀಡಲಾಗುವುದು. ಜೊತೆಗೆ ಆರೋಗ್ಯ ಕೇಂದ್ರ, ಆಧುನಿಕ ಅಂಗನವಾಡಿ, ವ್ಯಾಪಾರ ವಲಯ, ಸಮುದಾಯ ಕೇಂದ್ರ ಸೇರಿದಂತೆ ಮೂಲ ಸೌಕರ್ಯಗಳನ್ನೂ ಒದಗಿಸಲಾಗುವುದು. ಅದರಲ್ಲಿ ೧೦೪ ಫಲಾನುಭವಿಗಳು ಯೋಜನೆಯಿಂದ ಹೊರಗುಳಿದಿದ್ದು, ತಲಾ ೧೫ ಲಕ್ಷ ರೂ. ಪಡೆದುಕೊಂಡಿದ್ದಾರೆ. ಡಿಸೆಂಬರ್, ೨೦೨೫ರೊಳಗೆ ಈ ವಸತಿ ಯೋಜನೆ ಪೂರ್ಣಗೊಳ್ಳಲಿದೆ.”
ಡಿ.ಆರ್.ಮೇಘಶ್ರೀ, ಜಿಲ್ಲಾಧಿಕಾರಿ, ವಯನಾಡು, ಕೇರಳ
ಮೈಸೂರು : ಸಂಕ್ರಾಂತಿ ಹೊಸ್ತಿಲಲ್ಲಿ ಮೈಸೂರಿನಲ್ಲಿ ನಡೆಯುವ ಕಲಾ ಹಬ್ಬವಾದ ಬಹುರೂಪಿ ನಾಟಕೋತ್ಸವವಕ್ಕೆ ಮುನ್ನುಡಿ ಬರೆದು ‘ಜಾನಪದ ಉತ್ಸವ’ ರಂಗಾಯಣದಲ್ಲಿ…
ರಸಪ್ರಶ್ನೆ ಕಾರ್ಯಕ್ರಮದ ಸಮಾರಂಭದಲ್ಲಿ ಡಾ.ಚಿದಾನಂದ ಗೌಡ ಮಾಹಿತಿ ಕುಶಾಲನಗರ : ಕುವೆಂಪುರವರ ಉದಯರವಿ ಮನೆಯನ್ನು ಸಂಗ್ರಹಾಲಯ ಮಾಡುವ ಬಗ್ಗೆ ಚಿಂತನೆ…
ಹನೂರು : ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಾರ್ಗಮಧ್ಯ ರಂಗಸ್ವಾಮಿ ಒಡ್ಡಿನ ಬಳಿ ತಡೆಗೋಡೆಯ ಮೇಲೆ ಚಿರತೆ ಮತ್ತು ಅದರ ಎರಡು…
ನಂಜನಗೂಡು : ದ್ವೇಷ ಮರೆತು, ಪ್ರೀತಿ ಗಳಿಸುವಂತೆ ಕೆಲಸ ಮಾಡಿ ಜೀವನ ನಡೆಸಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ…
ಬೆಂಗಳೂರು : ನಟ ಯಶ್ ಅವರು ‘ಟ್ಯಾಕ್ಸಿಕ್’ ಸಿನಿಮಾದ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟೀಸರ್ ನಲ್ಲಿನ ಕಾರು…
ಸೋಮನಾಥ : ಗುಜರಾತ್‌ನ ಗಿರ್ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಆಯೋಜಿಸಲಾದ ವಿಧ್ಯುಕ್ತ…