ಕೃಷ್ಣ ಸಿದ್ದಾಪುರ
ಮಳೆಗಾಲದಲ್ಲಿ ಕಿಟ್ ದೊರಕದೆ ಬಡವರಿಗೆ ಸಂಕಷ್ಟ; ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ದಲಿತಪರ ಸಂಘಟನೆಗಳಿಂದ ಹೋರಾಟದ ಎಚ್ಚರಿಕೆ
ಸಿದ್ದಾಪುರ: ಪರಿಶಿಷ್ಟ ಪಂಗಡಗಳ ಜನಾಂಗದವರ ಹಸಿವು ಮುಕ್ತಗೊಳಿಸಿ, ಅವರು ಆರೋಗ್ಯ ಕಾಪಾಡಿಕೊಳ್ಳಲು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮೂಲಕ ವಿತರಿಸುಲಾಗುತ್ತಿದ್ದ ಪೌಷ್ಟಿಕ ಆಹಾರದ ಕಿಟ್ ಕಳೆದ ಮೂರು ತಿಂಗಳುಗಳಿಂದ ವಿತರಣೆಯಾಗದಿರುವ ಆರೋಪ ಕೇಳಿ ಬಂದಿದೆ.
ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇಟ್ ಹಾಡಿ, ತಟ್ಟಳ್ಳಿ, ಹಣ್ಣಿನ ತೋಟ, ದಿಡ್ಡಳ್ಳಿ ಹಾಡಿಯ ಸುಮಾರು ೧೫೦ ಕುಟುಂಬಗಳು ತಮಗೆ ಕಳೆದ ಮೂರು ತಿಂಗಳುಗಳಿಂದ ಐ.ಟಿ. ಬಿ.ಟಿ ಇಲಾಖೆಯಿಂದ ಪೌಷ್ಟಿಕ ಆಹಾರ ಕಿಟ್ ದೊರಕದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಪಂಗಡಗಳ ಕುಟುಂಬವೊಂದಕ್ಕೆ ಇಲಾಖೆಯಿಂದ ಮಾಸಿಕ ೨,೨೫೮.೧೪ ರೂ. ಮೊತ್ತದ ೧೪ ವಿವಿಧ ಬಗೆಯ ಪೌಷ್ಟಿಕಾಂಶವುಳ್ಳ ಪಡಿತರಗಳನ್ನು ಒಳಗೊಂಡ ಕಿಟ್‌ನ್ನು ನೀಡಲಾಗುತ್ತಿದೆ. ರಾಜ್ಯದ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ೧೧ ತಿಂಗಳವರೆಗೆ ಸರಬರಾಜು ಮಾಡಲು ೧,೧೮.೮೭ ಕೋಟಿ ರೂ. ಗುತ್ತಿಗೆಯ ಟೆಂಡರ್‌ನ್ನು ಆರ್.ಆರ್ ಎಂಟರ್ ಪ್ರೈಸಸ್‌ಗೆ ೧೮.೨.೨೦೨೫ ರಂದು ನೀಡಿ ಆದೇಶಿಸಲಾಗಿದೆ. ಅರಣ್ಯ ಹಾಗೂ ಅರಣ್ಯ ದಂಚಿನಲ್ಲಿ ವಾಸಿಸುವ ಮೂಲ ನಿವಾಸಿ ಪರಿಶಿಷ್ಟ ಪಂಗಡಗಳಾದ ಕೊರಗ, ಜೇನು ಕುರುಬ, ಕಾಡು ಕುರುಬ, ಸೋಲಿಗ, ಎರವ, ಮಲೆಕುಡಿಯ ಸಿದ್ದಿ, ಹಸಲರು, ಗೌಡಲು, ಗೊಂಡ ಹಾಗೂ ಬೆಟ್ಟ ಕುರುಬ ಜನಾಂಗದವರು ಈ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. ಅಕ್ಕಿ, ರಾಗಿ, ಗೋಧಿ, ತೊಗರಿ ಬೇಳೆ, ಕಡಲೆಕಾಳು, ಕಡ್ಲೆಬೀಜ, ಅಲಸಂದೆ, ಹುರುಳಿ, ಹೆಸರುಕಾಳು, ಸಕ್ಕರೆ, ಬೆಲ್ಲ,ಮೊಟ್ಟೆ, ಸೂರ್ಯ ಕಾಂತಿ ಎಣ್ಣೆ, ನಂದಿನಿ ತುಪ್ಪ ಸೇರಿದಂತೆ ೧೪ ಬಗೆಯ ಪದಾರ್ಥಗಳನ್ನು ಒಳಗೊಂಡ ಕಿಟ್‌ಗಳನ್ನು ವಿತರಿಸಲಾಗುತ್ತದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ೫೮೬, ಸೋಮವಾರಪೇಟೆ ತಾಲ್ಲೂಕಿನ ೧,೯೦೮ ಮತ್ತು ವಿರಾಜಪೇಟೆ ತಾಲ್ಲೂಕಿನ ೭,೧೩೭ ಕುಟುಂಬಗಳೂ ಸೇರಿದಂತೆ ಒಟ್ಟು ೯,೬೩೧ ಕುಟುಂಬದವರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಕಳೆದ ಮೂರು ತಿಂಗಳುಗಳಿಂದ ಕೊಡಗು ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಕೆಲವೆಡೆ ಕೆಲಸವಿಲ್ಲದೆ ಸಂಕಷ್ಟ ಎದುರಾಗಿದೆ. ವೃದ್ಧರು, ಮಕ್ಕಳು, ಬಾಣಂತಿಯರು ಸೇರಿದಂತೆ ಹಾಡಿ ನಿವಾಸಿಗಳಿಗೆ ಈ ಯೋಜನೆ ದೊರೆತಲ್ಲಿ ಒಂದಷ್ಟು ಉಪಯೋಗವಾಗುತ್ತಿತ್ತು.
ಆದರೆ, ಕಳೆದ ೩ ತಿಂಗಳುಗಳಿಂದ ನಮಗೆ ಈ ಸೌಲಭ್ಯ ದೊರೆಯುತ್ತಿಲ್ಲ ಎಂದು ಸೌಲಭ್ಯಕ್ಕೆ ಆಯ್ಕೆಯಾಗಿರುವ ಫಲಾನುಭವಿಗಳು ದೂರಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಆಹಾರ ಕಿಟ್ ದೊರಕಿಸಿಕೊಡಬೇಕೆಂದು ಹಾಡಿ ನಿವಾಸಿಗಳು ಆಗ್ರಹಿಸಿದ್ದಾರೆ.
” ಕೊಡಗು ಜಿಲ್ಲೆಯಲ್ಲಿ ವಾಸವಿರುವ ಪರಿಶಿಷ್ಟ ಪಂಗಡಗಳ ಸಮುದಾಯದ ಕುಟುಂಬಗಳಿಗೆ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿದೆ. ಗುಡ್ಡಗಾಡು ಪ್ರದೇಶವಾಗಿರುವುದರಿಂದ ಕೆಲೆವೆಡೆ ತಡವಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.”
-ಹೊನ್ನೇಗೌಡ, ಐಟಿಡಿಪಿ ಇಲಾಖೆ ಅಧಿಕಾರಿ
” ೪ ಹಾಡಿಗಳ ೧೫೦ ಕುಟುಂಬಗಳಿಗೆ ೩ ತಿಂಗಳುಗಳಿಂದ ಪೌಷ್ಟಿಕ ಆಹಾರ ನೀಡದೆ ವಂಚಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಸಮುದಾಯದ ಬಡ ಕುಟುಂಬಗಳ ಆಹಾರ ಕಿಟ್ಗೆ ವ್ಯಯಿಸಬೇಕಾದ ಹಣವನ್ನು ಅರ್ಹ ಫಲಾನುಭವಿಗಳ ಕುಟುಂಬದ ಖಾತೆಗೆ ಜಮಾ ಮಾಡದೇ ಇದ್ದಲ್ಲಿ ಸಂಘಟನೆ ನೇತೃತ್ವದಲ್ಲಿ ಹೋರಾಟ ಕೈಗೊಳ್ಳಲಾಗುವುದು.”
-ರಮೇಶ್, ಜಿಲ್ಲಾಧ್ಯಕ್ಷರು, ದಲಿತ ರೈಟ್ಸ್ ಮೂಮೆಂಟ್
” ರಾಜ್ಯ ಸರ್ಕಾರವು ಬುಡಕಟ್ಟು ಜನಾಂಗದವರಿಗಾಗಿ ಪೌಷ್ಟಿಕ ಆಹಾರದ ಕಿಟ್ ವಿತರಿಸುತ್ತಿತ್ತು. ಕೆಲಸವಿಲ್ಲದೇ ಬಡತನದಿಂದ ಬಳಲುವ ಹಾಡಿ ನಿವಾಸಿಗಳಿಗೆ ಆಹಾರ ಪದಾರ್ಥಗಳು ಜೀವನ ನಿರ್ವಹಣೆಗೆ ಸಹಕಾರಿಯಾಗಿದ್ದವು. ಆದರೆ ಕಳೆದ ಮೂರು ತಿಂಗಳುಗಳಿಂದ ಯಾವುದೇ ಪದಾರ್ಥಗಳು ಸಿಕ್ಕಿಲ್ಲ. ಆಹಾರ ಕಿಟ್ ಸರಬರಾಜು ಮಾಡುವ ಟೆಂಡರ್ ಅನ್ನು ಪ್ರಾಮಾಣಿಕ ಗುತ್ತಿಗೆದಾರರಿಗೆ ನೀಡಿದರೆ ಸಮಸ್ಯೆ ಬಗೆಹರಿಯಲಿದೆ.”
-ಇಂದಿರಾ, ಹಾಡಿ ನಿವಾಸಿ
” ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಸೌಲಭ್ಯ ವಿಸ್ತರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಜನಪ್ರತಿನಿಧಿಗಳ ಕಡೆಗಣನೆಯಿಂದ ಕಲ್ಯಾಣ ಕಾರ್ಯಗಳಿಗೆ ಬಳಕೆಯಾಗ ಬೇಕಿದ್ದ ಹಣ ಈ ಸಮುದಾಯದ ಕೈ ತಪ್ಪುತ್ತಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.”
-ಕೆ.ವಿ ಸುನೀಲ್, ಪರಿಶಿಷ್ಟ ಜಾತಿ ಪಂಗಡಗಳ ಹಿತರಕ್ಷಣಾ ಸಮಿತಿ ಸದಸ್ಯ
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…