ಎಸ್.ಎಸ್.ಭಟ್
ಪ್ರತಿಭಟನೆಗಿಳಿದ ಚಾಮಲಾಪುರದ ಹುಂಡಿ ಗ್ರಾಮಸ್ಥರು
ನಂಜನಗೂಡು: ಕಪಿಲಾ ನದಿ ದಡದ ತೋಟದಲ್ಲಿ ರೆಸಾರ್ಟ್ ನಿರ್ಮಿಸಲು ೬ಕೋಟಿ ರೂ.ಗೂ ಹೆಚ್ಚು ಮೊತ್ತದ ನಾಲಾ ಮಣ್ಣನ್ನು ಅಕ್ರಮವಾಗಿ ತಂದು ತುಂಬಿದ್ದ ಪಟ್ಟಭದ್ರ ಹಿತಾಸಕ್ತಿಗಳು ಅದೇ ತೋಟದ ಪಕ್ಕದಲ್ಲಿದ್ದ ಚಾಮಲಾಪುರದ ಹುಂಡಿಯ ಜನತೆಯ ಸ್ಮಶಾನವನ್ನೂ ಒತ್ತುವರಿ ಮಾಡಲು ಆರಂಭಿಸಿದ್ದು, ಸ್ಮಶಾನದ ಜಾಗವನ್ನೆಲ್ಲ ಈಗ ನಾಲೆಯ ಮಣ್ಣು ಆಕ್ರಮಿಸಿಕೊಂಡಿರುವುದರಿಂದ ಅಲ್ಲಿದ್ದ ಪುರಾತನವಾದ ಸಿದ್ದಪ್ಪಾಜಿ ದೇವಾಯವೂ ಭಾಗಶಃ ಮುಚ್ಚಿಹೋಗಿದೆ.
ಕೋಟ್ಯಂತರ ರೂ. ಮೌಲ್ಯದ ನಾಲೆಯ ಮಣ್ಣನ್ನು ಅಕ್ರಮವಾಗಿ ಸಾಗಿಸಿ, ೫ ಎಕರೆ ತೋಟವನ್ನು ಭರ್ತಿ ಮಾಡಿದ ಸುದ್ದಿ ‘ಆಂದೋಲನ’ ದಿನಪತ್ರಿಕೆಯಲ್ಲಿ ಜೂ.೨೩ ರಂದು ಪ್ರಕಟವಾದಾಗ ಕೆಲವು ದಿನಗಳ ಕಾಲ ಮೌನ ವಹಿಸಿದ್ದ ದುರಾತ್ಮರು, ಈಗ ಅದೇ ನಾಲೆಯ ಮಣ್ಣನ್ನು ಅಕ್ರಮವಾಗಿ ಸಾಗಿಸಿ ಅದೇ ತೋಟಕ್ಕೆ ಹೊಂದಿಕೊಂಡಂತಿರುವ ಸ್ಮಶಾನ ಒತ್ತುವರಿಯನ್ನೂ ಆರಂಭಿಸಿದ್ದಾರೆ.
ಲಾರಿಗಳನ್ನು ತಡೆದ ಗ್ರಾಮಸ್ಥರು: ನಾಲೆ ಮಣ್ಣು ತಂದು ಸ್ಮಶಾನವನ್ನು ಒತ್ತುವರಿ ಮಾಡುತ್ತಲೇ ಸಿದ್ದಪ್ಪಾಜಿ ದೇವಾಲಯವನ್ನೂ ಆವರಿಸಿರುವುದನ್ನು ಕಂಡ ಚಾಮಲಾಪುರದ ಜನರು, ಶನಿವಾರ ಸ್ಥಳಕ್ಕೆ ಆಗಮಿಸಿ ಮಣ್ಣು ಸಾಗಿಸುತ್ತಿದ್ದ ೩ ಲಾರಿಗಳು ಹಾಗೂ ೧ ಜೆಸಿಬಿಯನ್ನು ತಡೆದು ಪ್ರತಿಭಟನೆ ನಡೆಸಿ, ೨ ತಿಂಗಳುಗಳಿಂದ ಮೌನವಾಗಿದ್ದ ತಾಲ್ಲೂಕು ಆಡಳಿತಕ್ಕೆ ಬಿಸಿ ಮುಟ್ಟಿಸಿದರು.
ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಸ್ಮಶಾನ ಒತ್ತುವರಿ ವಿರುದ್ಧ ಕ್ರಮ ಜರುಗಿಸಬೇಕು. ಸ್ಮಶಾನ ಉಳಿಸಲೇ ಬೇಕು ಎಂದು ಆಗ್ರಹಿಸಿ ನೂರಕ್ಕೂ ಹೆಚ್ಚು ಜನರು ಪ್ರತಿಭಟನೆ ನಡೆಸಿದರು.
ಈ ಸುದ್ದಿ ತಿಳಿದು ದೌಡಾಯಿಸಿದ ನಂಜನಗೂಡು ಟೌನ್ ಪೊಲೀಸರು ಹಾಗೂ ತಾಲ್ಲೂಕು ಆಡಳಿತದವರು ಕೊನೆಗೂ ಅಕ್ರಮ ಮಣ್ಣು ಸಾಗಾಣಿಕೆಗಾಗಿ ಗ್ರಾಮಸ್ಥರೇ ತಡೆದು ನಿಲ್ಲಿಸಿದ್ದ ೩ ಲಾರಿಗಳು ಹಾಗೂ ಒಂದು ಜೆಸಿಬಿ ವಾಹನವನ್ನು ವಶಕ್ಕೆ ಪಡೆದರು.
ಭಾನುವಾರ ಸರ್ವೆಯರ್ರನ್ನು ಕರೆಸಿ ಸ್ಮಶಾನದ ಅಳತೆ ಮಾಡಿಸಿ ಒತ್ತುವರಿ ತೆರವು ಮಾಡಿಸುವುದಾಗಿ ಕಂದಾಯ ಅಧಿಕಾರಿಗಳಾದ ಹರೀಶ ಹಾಗೂ ಪ್ರೀತಂ ನೀಡಿದ ಭರವಸೆಯ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂತೆಗೆದುಕೊಂಡರು.
ಸ್ಮಶಾನ ಒತ್ತುವರಿ ತೆರವಾಗುವುದರೊಳಗೆ ಗ್ರಾಮದಲ್ಲಿ ಯಾರಾದರೂ ಮೃತರಾದರೆ ಶವವನ್ನು ಅಂತ್ಯಸಂಸ್ಕಾರಕ್ಕೆ ತಾಲ್ಲೂಕು ಕಚೇರಿಗೆ ಕೊಂಡೊಯ್ಯುವುದಾಗಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಗರಸಭಾ ಸದಸ್ಯ ಚಂದ್ರು ಹಾಗೂ ಗ್ರಾಮದ ಮುಖಂಡ ಶಂಕರಪ್ಪ, ಮತ್ತಿತರರು ತಾಲ್ಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.
” ಸ್ಮಶಾನದ ಭೂಮಿ ಅಳತೆ ಮಾಡಲಾಗುವುದು. ಒತ್ತುವರಿಯಾಗಿದ್ದರೆ ಭಾನುವಾರವಾದರೂ ತೆರವುಗೊಳಿಸಲಾಗುವುದು.”
-ಶಿವಕುಮಾರ್ ಕ್ಯಾಸನೂರು, ತಹಸಿಲ್ದಾರ್
” ಗ್ರಾಮಸ್ಥರು ತಡೆದಿದ್ದ ನಾಲ್ಕೂ ವಾಹನಗಳನ್ನು ಠಾಣೆಗೆ ತಂದು ನಿಲ್ಲಿಸಲಾಗಿದ್ದು, ಕಂದಾಯ ಅಧಿಕಾರಿಗಳು ನೀಡಬಹುದಾದ ದೂರು ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು. ಅದು ನಾಲೆಯ ಮಣ್ಣು ಎಂದು ದೃಢಪಟ್ಟರೆ ನೀರಾವರಿ ಅಧಿಕಾರಿಗಳು ದೂರು ದಾಖಲಿಸಬೇಕಾಗುತ್ತದೆ.”
-ರವೀಂದ್ರ, ಎಸ್‌ಐ, ನಗರ ಠಾಣೆ
” ಅಧಿಕಾರಿಗಳು ಶಾಮೀಲಾಗದಿದ್ದರೆ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಮಣ್ಣು ಸಾಗಾಣಿಕೆ ಹೇಗೆ ಸಾಧ್ಯ? ಜೂನ್ ತಿಂಗಳಲ್ಲೇ ನಾಲೆಯ ಮಣ್ಣಿನ ಅಕ್ರಮ ಸಾಗಣೆ ಕುರಿತು ‘ಆಂದೋಲನ’ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅದು ಕೆಡಿಪಿ ಸಭೆಯಲ್ಲೂ ಪ್ರತಿಧ್ವನಿಸಿ, ಶಾಸಕರು ಈ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ ನಂತರಸಭೆಗೆ ಬನ್ನಿ ಎಂದು ಸೂಚಿಸಿದ್ದರೂ ಮತ್ತೆ ಮಣ್ಣು ಸಾಗಣೆ ಆರಂಭವಾಗಲು ಮತ್ತು ಸ್ಮಶಾನ ಒತ್ತುವರಿಯಾಗಲು ತಾಲ್ಲೂಕಿನ ಅಧಿಕಾರಿಗಳೇ ಕಾರಣರಾಗಿದ್ದು, ಮೊದಲು ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು.”
-ಶಂಕರಪುರ ಸುರೇಶ
ಹನೂರು : ಯಾರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ ಅನ್ನೋದು ಮುಖ್ಯವಲ್ಲ. ಅಭಿವೃದ್ಧಿ ಮಾಡ್ತಿದ್ದಾರಾ, ರಾಜ್ಯವನ್ನು ಅಭಿವೃದ್ಧಿಯ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರಾ ಅನ್ನೋದೇ…
ಮೈಸೂರು : ಕರ್ನಾಟಕ ರತ್ನ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 16 ನೇ ವರ್ಷದ ಸ್ಮರಣೆಯನ್ನು ನಗರದ ವಿವಿಧೆಡೆ ವಿಷ್ಣುವರ್ಧನ್…
ಉತ್ತರಾಖಂಡ: ಇಲ್ಲಿನ ಅಲ್ಮೋರಾದ ಭಿಕಿಯಾಸೈನ್ ಪ್ರದೇಶದಲ್ಲಿ ಪ್ರಯಾಣಿಕರಿದ್ದ ಬಸ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, 12 ಮಂದಿ…
ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಪುತ್ರ ರೈಹಾನ್ ವಾದ್ರಾ ತಮ್ಮ ಬಹುಕಾಲದ ಗೆಳತಿ…
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಲು ಬಿಜೆಪಿಗೆ ಒಂದು ಅವಕಾಶ ಕೊಡಿ. ಭಯ, ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ಉತ್ತಮ ಆಡಳಿತದೊಂದಿಗೆ…
ಬೆಂಗಳೂರು: ದೇಶದಾದ್ಯಂತ ಕೇಂದ್ರ ಚುನಾವಣಾ ಆಯೋಗ ಕೈಗೆತ್ತಿಕೊಂಡಿರುವ ವಿಶೇಷ ಮತದಾರರ ಪರಿಷ್ಕರಣೆ (ಎಸ್‌ಐಆರ್)ಯನ್ನು ಕರ್ನಾಟಕದಲ್ಲೂ ನಡೆಸಬೇಕೆಂದು ಕೇಂದ್ರ ಸಚಿವೆ ಶೋಭಾ…