‘ಸಾಮ್ರಾಜ್ಯಶಾಹಿ ದಾಳಿ ಹಾಗೂ ಅದರ ಪರಿಣಾಮಗಳು’ ಕುರಿತ ವಿಚಾರಸಂಕಿರಣ
ಹೊಸದಿಲ್ಲಿ: ಪಶ್ಚಿಮ ಏಷ್ಯದಲ್ಲಿ ತಲೆದೋರಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಬದಲಾದ ವಿದೇಶ ನೀತಿಯು ಅತ್ಯಂತ ಕಳವಳಕಾರಿಯಾಗಿದ್ದು, ದೀರ್ಘಾವಧಿಯಲ್ಲಿ ಭಾರತದ ಹಿತಕ್ಕೆ ವಿರುದ್ಧವಾಗಿದೆ. ಭಾರತೀಯರೆಲ್ಲರೂ ಮಾನವೀಯತೆಗೆ ವಿರುದ್ಧವಾದ ಇಂಥ ವಿದೇಶ ನೀತಿಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಅಗತ್ಯವಿದೆ ಎಂದು ದಿ ಹಿಂದೂ ಪತ್ರಿಕಾ ಸಮೂಹದ ನಿರ್ದೇಶಕ ಎನ್.ರಾಮ್ ಅಭಿಪ್ರಾಯಪಟ್ಟರು.
ಭಾನುವಾರ ಹೊಸದಿಲ್ಲಿಯ ಹರಕಿಶನ್‌ಸಿಂಗ್ ಸುರ್ಜೀತ್ ಸಭಾ ಭವನದಲ್ಲಿ ‘ಸಾಮ್ರಾಜ್ಯಶಾಹಿ ದಾಳಿ ಹಾಗೂ ಅದರ ಪರಿಣಾಮಗಳು’ ಕುರಿತ ವಿಚಾರಸಂಕಿರಣ ದಲ್ಲಿ ಮಾತನಾಡಿದ ಅವರು, ಭಾರತದ ವಿದೇಶ ನೀತಿ ಬದಲಾಗಿರುವುದು ಮೂರು ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತದೆ: ಅಮೆರಿಕದ ಜೊತೆಗಿನ ಕಾರ್ಯತಂತ್ರದ ಪಾಲುಗಾರಿಕೆಯನ್ನು ಮತ್ತಷ್ಟು ಗಾಢವಾಗಿಸಿರುವುದು, ಬಹಿರಂಗವಾಗಿ ಇಸ್ರೇಲ್ ಜೊತೆಗೆ ಗುರುತಿಸಿ ಕೊಂಡಿರುವುದು ಮತ್ತು ವಸಾಹತುಶಾಹಿ ವಿರೋಧಿ ಅಭಿಯಾನ ಕುರಿತ ಭಾರತದ ಐತಿಹಾಸಿಕ ಬದ್ಧತೆಯನ್ನು ದುರ್ಬಲಗೊಳಿಸಿರುವುದು.
ಈ ಮೂರು ಬೆಳವಣಿಗೆಗಳು ಭಾರತ ಈಗ ಸಾಮ್ರಾಜ್ಯವಾದಿಗಳು, ವಸಾಹತುಶಾಹಿಗಳು ಮತ್ತು ದಬ್ಬಾಳಿಕೆ ಮಾಡುವವರ ಪರವಾಗಿ ನಿಂತುಕೊಂಡಿದೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ಸಾರಿವೆ ಎಂದರು. ಪ್ಯಾಲಿಸ್ತೇನ್ ಮತ್ತು ಇರಾನ್ ಮೇಲೆ ಇಸ್ರೇಲ್ ನಡೆಸಿರುವ ಅಪ್ರಚೋದಿತವಾದ ದಾಳಿ ಹಾಗೂ ಈ ಕುರಿತ ಭಾರತದ ಬದಲಾದ ನಿಲುವನ್ನು ಅವರು ಉಲ್ಲೇಖಿಸಿದರು. ಪಶ್ಚಿಮ ಏಷ್ಯಾ, ಲ್ಯಾಟಿನ್ ಅಮೆರಿಕ ಅಥವಾ ಜಗತ್ತಿನ ಯಾವುದೇ ರಾಷ್ಟ್ರದ ಮೇಲೆ ಸಾಮ್ರಾಜ್ಯಶಾಹಿಗಳು ನಡೆಸುವ ದೌರ್ಬಲ್ಯದ ವಿರುದ್ಧ ಭಾರತ ದನಿ ಎತ್ತಬೇಕು. ಆ ರಾಷ್ಟ್ರಗಳ ನತದೃಷ್ಟ ಜನರ ಪರವಾಗಿ ಅನುಕಂಪ ಹೊಂದಬೇಕು. ಇಲ್ಲಿಯವರೆಗೆ ಇದುವೇ ಭಾರತ ಪಾಲಿಸಿಕೊಂಡು ಬಂದಿರುವ ವಿದೇಶ ನೀತಿಯಾಗಿತ್ತು.
ಅದು ಮಾನವೀಯತೆಯ ಪರವಾಗಿತ್ತು ಎಂದರು. ವಿಶ್ವಾಸಘಾತುಕ ರಾಷ್ಟ್ರಗಳಾದ ಅಮೆರಿಕ ಮತ್ತು ಇಸ್ರೇಲ್‌ಗಳು ಇರಾನ್ ಮೇಲೆ ಅಮಾನವೀಯ ದಾಳಿ ನಡೆಸಿದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ತಳೆದ ನಿಲುವು ಅತ್ಯಂತ ನಾಚಿಕೆಗೇಡಿನದಾಗಿದೆ ಎಂದ ಎನ್.ರಾಮ್, ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಯಿತು. ಆ ದೇಶದ ಮಿನಾಬ್ ನಗರದಲ್ಲಿ ಬಾಲಕಿಯರ ಪ್ರೌಢ ಶಾಲೆಯ ಮೇಲೆ ಕ್ಷಿಪಣಿ ದಾಳಿ ಮಾಡಿ ೧೬೫ಕ್ಕಿಂತ ಹೆಚ್ಚು ಮುಗ್ಧ ಬಾಲಕಿಯರನ್ನು ನಿರ್ದಯವಾಗಿ ಹತ್ಯೆಗೈದಿರುವುದು ಯುದ್ಧ ಅಪರಾಧ ಮಾತ್ರವಲ್ಲ, ಮಾನವೀಯತೆಯ ವಿರುದ್ಧ ನಡೆಸಿದ ಘೋರ ದಾಳಿಯಾಗಿತ್ತು ಎಂದೂ ಅಭಿಪ್ರಾಯಪಟ್ಟರು.
ಈ ಘೋರ ದಾಳಿಗಳನ್ನು ಭಾರತ ಖಂಡಿಸದೇ ಇರುವುದು ಜಾಗತಿಕವಾಗಿ ಭಾರತದ ಬಗೆಗೆ ಬಹಳ ಕೆಟ್ಟ ಚಿತ್ರಣವನ್ನು ಮೂಡಿಸುವಂತಾಯಿತು. ಅದಕ್ಕಿಂತಲೂ ಮುಖ್ಯವಾಗಿ ಯುದ್ಧ ಆರಂಭವಾಗುವುದಕ್ಕಿಂತ ೪೮ ಗಂಟೆಗಳ ಮೊದಲು ಪ್ರಧಾನಿ ಮೋದಿ ಅವರು ಇಸ್ರೇಲ್ಗೆ ಭೇಟಿ ನೀಡಿದ್ದು ಬಹಳ ದೊಡ್ಡ ಪ್ರಮಾದವಾಗಿತ್ತು. ಭಾರತ ಇಸ್ರೇಲ್ ಪರವಾಗಿ ನಿಂತಿದೆ ಎಂಬ ಅಭಿಪ್ರಾಯ ರೂಪುಗೊಳ್ಳಲು ಇದು ಕಾರಣವಾಯಿತು ಅಥವಾ ಇದರಿಂದಾಗಿ ಯುದ್ಧೋನ್ಮಾದದಲ್ಲಿ ತೇಲುತ್ತಿದ್ದ ಇಸ್ರೇಲ್ಗೆ ಭಾರತ ರಕ್ಷಣೆ ನೀಡಿದಂತಾಯಿತು ಎಂದು ರಾಮ್ ಹೇಳಿದರು.
ಪ್ಯಾಲಿಸ್ತೇನ್ ಕುರಿತಂತೆ ಭಾರತದ ಬದಲಾದ ನಿಲುವುನಮ್ಮ ವಿದೇಶ ನೀತಿಯಲ್ಲಿ ಭಾರೀ ಸ್ಥಿತ್ಯಂತರವಾಗಿದೆ ಎಂಬುದರ ಸ್ಪಷ್ಟ ದ್ಯೋತಕ ಎಂದ ಅವರು, ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಪ್ಯಾಲಿಸ್ತೇನ್‌ನ ಹಕ್ಕುಗಳ ಬಗ್ಗೆ ನಿರಂತರವಾಗಿ ಸ್ಪಷ್ಟ ನಿಲುವು ತಳೆದ ದೇಶ ಭಾರತ ಎಂಬ ಹೆಮ್ಮೆ ನಮಗೆ ಸದಾ ಇತ್ತು. ಈ ಐತಿಹಾಸಿಕ ನಿಲುವು ಈಗ ಬದಲಾಗಿರುವುದು ದುರದೃಷ್ಟಕರ ಎಂದರು. ಇಸ್ರೇಲ್ -ಪ್ಯಾಲಿಸ್ತೇನ್ ಬಿಕ್ಕಟ್ಟಿಗೆ ‘ದ್ವಿರಾಷ್ಟ್ರ ಪರಿಹಾರ ಸೂತ್ರ’ವನ್ನು ಭಾರತ ಅಧಿಕೃತವಾಗಿ ಬೆಂಬಲಿಸುತ್ತದೆ. ಆದರೆ, ಸದ್ಯದ ಬದಲಾದ ಭಾರತದ ವಿದೇಶ ನೀತಿ ನಮ್ಮ ದೇಶದ ಆ ಐತಿಹಾಸಿಕ ನಿಲುವಿನ ಮಹತ್ವವನ್ನೇ ಕಳೆದಂತಾಗಿದೆ ಎಂದರು. ಇಸ್ರೇಲ್‌ನ ನೀತಿಗಳ ಕುರಿತಂತೆ ಗಂಭೀರ ಟೀಕೆ ಮಾಡುವುದರಿಂದ ತಪ್ಪಿಸಿಕೊಳ್ಳುವ ಮೂಲಕ ಭಾರತ ಈಗ ಪ್ಯಾಲಿಸ್ತೇನ್‌ನ ನ್ಯಾಯಸಮ್ಮತ ಹಕ್ಕುಗಳು ಮತ್ತು ಸ್ವಯಂ ನಿರ್ಧಾರದ ಅಧಿಕಾರಗಳ ರಕ್ಷಣೆಗಿಂತ ಹೆಚ್ಚಾಗಿ ಇಸ್ರೇಲ್ ಜೊತೆಗಿನ ಕಾರ್ಯತಂತ್ರದ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಎನ್.ರಾಮ್ ಅಭಿಪ್ರಾಯಪಟ್ಟರು.
ಭಾರತದ ಈ ನಿಲುವು ವಸಾಹತುಶಾಹಿ ವಿರೋಧಿ ಅಂತಾರಾಷ್ಟ್ರೀಯ ಭಾವನೆಗೆ ವಿರುದ್ಧವಾಗಿದೆ. ತುಳಿತಕ್ಕೊಳಗಾದ ಜನರ ಪರವಾಗಿ ಒಗ್ಗಟ್ಟು ಪ್ರದರ್ಶಿಸುವ ಭಾಷೆಯಲ್ಲಿ ಮಾತನಾಡುವುದಕ್ಕಿಂತ ಹೆಚ್ಚಾಗಿ ಭದ್ರತಾ ಪಾಲುದಾರಿಕೆ, ತಾಂತ್ರಿಕ ಸಹಯೋಗ ಮತ್ತು ಭೌಗೋಳಿಕ ರಾಜಕೀಯದ ಭಾಷೆಗೇ ಎಲ್ಲಿಲ್ಲದ ಮಹತ್ವವನ್ನು ಭಾರತವೀಗ ನೀಡಿದಂತಾಗಿದೆ ಎಂದು ವಿಶ್ಲೇಷಿಸಿದರು.
ಸಾರ್ವಭೌಮತೆಗೇ ಸವಾಲು: ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುವ ವಿಷಯದಲ್ಲಿ ನಮ್ಮ ಜೊತೆ ಅಮೆರಿಕ ಹೇಗೆ ನಡೆದುಕೊಂಡಿತು ಎಂಬುದಕ್ಕೆ ಇಡೀ ಜಗತ್ತು ಸಾಕ್ಷಿಯಾಗಿದೆ. ‘೩೦ ದಿನಗಳವರೆಗೆ ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡಲು ಭಾರತಕ್ಕೆ ಅಮೆರಿಕ ಅನುಮತಿ ನೀಡಿದೆ’ ಎಂಬ ಅವಮಾನಕರ ಶೀರ್ಷಿಕೆಗಳನ್ನು ನಾವು ಪತ್ರಿಕೆಗಳಲ್ಲಿ ನೋಡಿದ್ದೇವೆ. ಭಾರತ ಅಮೆರಿಕದ ಅಧಿನ ರಾಷ್ಟ್ರವೆಂಬಂತೆ ಬಿಂಬಿಸುವ ಇಂಥ ಬೆಳವಣಿಗೆಗಳು ನಮ್ಮ ಸಾರ್ವಭೌಮತೆಗೇ ಸವಾಲು ಒಡ್ಡಿವೆ.
-ಎನ್.ರಾಮ್, ದಿ ಹಿಂದೂ ಪತ್ರಿಕಾ ಸಮೂಹದ ನಿರ್ದೇಶಕ
‘ಕ್ಯೂಬಾ ಉಸಾಬರಿಗೆ ಬಂದರೆ ತಕ್ಕ ಶಾಸ್ತಿ’: ಕ್ಯೂಬಾದ ವಿರುದ್ಧ ಸೈನಿಕ ಕಾರ್ಯಾಚರಣೆ ನಡೆಸುವ ಬೆದರಿಕೆಯನ್ನು ಅಮೆರಿಕ ಒಡ್ಡುತ್ತಿದೆ. ಅಮೆರಿಕದ ಈ ಹೇಳಿಕೆಯನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಅಂಥದೊಂದು ಕಾರ್ಯಾಚರಣೆಯನ್ನು ನಾವು ಎದುರು ನೋಡುತ್ತಿದ್ದೇವೆ. ಅಮೆರಿಕದ ಸೈನಿಕ ಕಾರ್ಯಾಚರಣೆಗೆ ತಕ್ಕ ಉತ್ತರ ಕೊಡಲು ನಿನ್ನೆ-ಇಂದಿನಿಂದ ಅಲ್ಲ, ಕಳೆದ ೬೫ ವರ್ಷಗಳಿಂದ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಭಾರತದಲ್ಲಿ ಕ್ಯೂಬಾದ ರಾಯಭಾರಿ ಜುಆನ್ ಕಾರ್ಲೋಸ್ ಮಾರ್ಸನ್ ಆಗ್ಯೂಲೆರಾ ಹೇಳಿದರು. ನಾವು ಕ್ಯೂಬಾ ವಶಪಡಿಸಿಕೊಳ್ಳುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಾರೆ. ಆದರೆ, ಹೀಗೆ ಯಾರೋ ಬಂದು ಸುಲಭವಾಗಿ ವಶಪಡಿಸಿಕೊಳ್ಳುವಂಥ ದೇಶವಲ್ಲ ಕ್ಯೂಬಾ. ನಾವು ಕೇಕ್‌ನ ತುಂಡು ಅಲ್ಲ ಎಂಬುದನ್ನು ಅಮೆರಿಕಕ್ಕೆ ತೋರಿಸುತ್ತೇವೆ. ಕ್ಯೂಬಾದ ಸ್ವಾತಂತ್ರ್ಯ ಕ್ಯೂಬನ್ ಜನರಿಗೆ ಅತ್ಯಂತ ಪ್ರಿಯವಾಗಿದೆ. ನಮ್ಮ ಸಂಸ್ಕ ತಿ, ಇತಿಹಾಸ ಮತ್ತು ನಾಯಕರ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು.ಕ್ಯೂಬಾ, ವೆನಿಜುವೆಲಾ, ಪ್ಯಾಲಿಸ್ತೇನ್ ಮತ್ತು ಇರಾನ್ ರಾಷ್ಟ್ರಗಳು ದುರ್ಬಲವೂ ಅಲ್ಲ, ಏಕಾಂಗಿಯೂ ಅಲ್ಲ ಎಂದ ಅವರು, ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ನಮ್ಮ ಲಕ್ಷಾಂತರ ಜನ ನೆಲೆಸಿದ್ದಾರೆ. ಅಮೆರಿಕನ್ನರ ದಾಳಿಯ ವಿರುದ್ಧ ಎದೆಯುಬ್ಬಿಸಿ ಸೆಣೆಸುವುದಕ್ಕೆ ಅವರೆಲ್ಲರೂ ಕಟಿಬದ್ಧರಾಗಿದ್ದಾರೆ. ಎಲ್ಲ ಅಡಚಣೆಗಳು ದೂರವಾಗಲಿವೆ, ಕ್ಯೂಬಾದಲ್ಲಿ ಶಾಶ್ವತ ಶಾಂತಿ ನೆಲೆಸಲಿದೆ, ಕ್ಯೂಬಾದ ಅಸ್ತಿತ್ವ ಹಿಂದೆಯೂ ಇತ್ತು, ಮುಂದೆಯೂ ಇರಲಿದೆ ಎಂದರು.
ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…
ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…
ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…
ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…
ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…
ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…