ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು
೨೦ ವರ್ಷಗಳಲ್ಲಿ ಸಂಸತ್ತಿನ ಎರಡೂ ಸದನಗಳನ್ನು ಕಳೆದುಕೊಂಡ ಮೊದಲ ಅಧ್ಯಕ್ಷ ಎಂಬ ‘ಹೆಗ್ಗಳಿಕೆ’
ಮಂಗಳವಾರ (ನವೆಂಬರ್೩) ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರೀ ಮುಖಭಂಗ ಅನುಭವಿಸಿದ್ದಾರೆ. ಟ್ರಂಪ್ ಅವರ ವಿರೋಧಿಯಾದ ಡೆಮೊಕ್ರಟಿಕ್ ಪಕ್ಷ ಊಹೆಗೂ ಮೀರಿ ಯಶಸ್ಸು ಸಾಧಿಸಿದ್ದು, ಅಮೆರಿಕದ ಸಂಸತ್ತಿನ ಎರಡೂ ಸದನಗಳಲ್ಲಿ ನಿಚ್ಚಳ ಬಹುಮತ ಪಡೆದಿದೆ. ಸಂಸತ್ತಿನ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನ ಮತ ಕ್ಷೇತ್ರಗಳನ್ನು ಟ್ರಂಪ್ ಮರು ವಿಂಗಡನೆ ಮಾಡಿ ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ರಚಿಸಿಕೊಂಡಿದ್ದರೂ, ಆ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ವಿಫಲವಾಗಿದೆ. ಎರಡು ವರ್ಷದ ಹಿಂದೆ ಟ್ರಂಪ್ ಸುಮಾರು ಶೇ.೨೦ರಷ್ಟು ಬೃಹತ್ ಅಂತರದಲ್ಲಿ ಗೆದ್ದಿದ್ದ ಕ್ಷೇತ್ರಗಳೂ ಈಗ ಅವರ ವಿರೋಧಿಗಳ ಕೈವಶವಾಗಿದೆ. ಕಳೆದ ೨೦ ವರ್ಷಗಳಲ್ಲಿ ಮಧ್ಯಂತರ ಚುನಾವಣೆಯಲ್ಲಿ ಸಂಸತ್ತಿನ ಎರಡೂ ಸದನಗಳನ್ನು ಕಳೆದುಕೊಂಡ ಮೊದಲ ಅಧ್ಯಕ್ಷ ಎಂಬ ‘ಹೆಗ್ಗಳಿಕೆ’ಗೆ ಟ್ರಂಪ್ ಪಾತ್ರರಾಗಿದ್ದಾರೆ.
ಮತದಾರರ ಈ ನಿರ್ಧಾರಕ್ಕೆ ಒಂದೇ ಕಾರಣವಿದ್ದಂತಿಲ್ಲ; ಬದಲಿಗೆ, ಇದನ್ನು ಟ್ರಂಪ್ ಅವರ ಇಡೀ ಆಡಳಿತ ಶೈಲಿಯ ಸಂಪೂರ್ಣ ತಿರಸ್ಕಾರವೆನ್ನಬಹುದು. ಭಾರತ, ಕೆನಡಾದಂತಹ ಮಿತ್ರ ರಾಷ್ಟ್ರಗಳೂ ಸೇರಿದಂತೆ ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳ ಮೇಲೂ ಟ್ರಂಪ್ ಸರ್ಕಾರ ಹೇರಿದ್ದ ತರ್ಕರಹಿತ ಆಮದು-ಸುಂಕ ಅಮೆರಿಕವನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡಿದೆ. ಈ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುವ ಮುನ್ನವೇ ಟ್ರಂಪ್ ಪ್ರಾರಂಭಿಸಿದ ಇರಾನ್ ಮೇಲಿನ ಯುದ್ಧ ಅಮೆರಿಕನ್ನರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಅಮೆರಿಕದ ಮುಖ್ಯ ಟಿ.ವಿ. ವಾಹಿನಿಗಳಲ್ಲಿ ಒಂದಾದ ಎನ್ಬಿಸಿ ಈ ಚುನಾವಣೆಯ ಫಲಿತಾಂಶವನ್ನು ಟ್ರಂಪ್ ಆಡಳಿತದ ಭ್ರಷ್ಟಾಚಾರ, ಸರ್ಕಾರವನ್ನು ನಿಯಂತ್ರಿಸುವಲ್ಲಿ ಸಂಸತ್ತಿನ ವೈಫಲ್ಯ ಹಾಗೆಯೇ ಪೆಟ್ರೋಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ವಿರುದ್ಧದ ಜನಾದೇಶ ಎನ್ನುತ್ತದೆ.
ಇವೆಲ್ಲವೂ ಜನಾಕ್ರೋಶಕ್ಕೆ ಕಿಡಿ ಹೊತ್ತಿಸಿರುವುದು ನಿಜವಾದರೂ, ವ್ಯಕ್ತಿ ಪೂಜೆಯನ್ನೇ ತನ್ನ ಅಂತಿಮ ಗುರಿಯಾಗಿಸಿಕೊಂಡು, ನ್ಯಾಯಾಂಗದ ಆದೇಶಗಳನ್ನು ಮತ್ತೆ ಮತ್ತೆ ಧಿಕ್ಕರಿಸುತ್ತಾ ಸರ್ವಾಧಿಕಾರದಂತೆ ಪ್ರವೃತ್ತಿಸುತ್ತಿರುವುದು ಈ ಜಲೆಗೆ ಇಂಧನವನ್ನೊದಗಿಸಿದೆ. ಅಮೆರಿಕದಲ್ಲಿರುವ ವಲಸೆಗಾರರ ವಿರುದ್ಧ ಟ್ರಂಪ್ ಮತ್ತು ಅವರ ಹಿಂಬಾಲಕರು ಪ್ರತಿದಿನ ಬಳಸುವ ದ್ವೇಷಪೂರ್ಣ ಭಾಷೆ ಮತ್ತು ಕ್ರೌರ್ಯದ ಕ್ರಮಗಳೂ ಸಹ ತನ್ನ ಇತಿಹಾಸದುದ್ದಕ್ಕೂ ವಲಸೆಗಾರರಿಂದಲೇ ನಿರ್ಮಿತವಾಗಿರುವ ಆ ದೇಶದ ಪ್ರಜೆಗಳಲ್ಲಿ ನೈತಿಕ ಪ್ರeಯನ್ನು ಕೊಂಚ ಮಟ್ಟಿಗಾದರೂ ಜಾಗೃತಗೊಳಿಸಿರುವುದನ್ನು ಈ ಚುನಾವಣೆ ತೋರಿಸಿ ಕೊಟ್ಟಿದೆ.ಆದರೆ, ತಮಗಾದ ಈ ಮುಖಭಂಗವನ್ನು ಅಧ್ಯಕ್ಷ ಟ್ರಂಪ್ ತಾವು ಕಲಿಯಬೇಕಾದ ಪಾಠದಂತೆ ಭಾವಿಸಿದಂತಿಲ್ಲ. ಅವರು ವಿರೋಧ ಪಕ್ಷದ ನಾಯಕರಿಗೆ ಶುಭಾಶಯ ಕೋರಿzರಾದರೂ, ತಮ್ಮ ಪಕ್ಷದ ಸೋಲಿಗೆ ದುರ್ಬಲ ಅಭ್ಯರ್ಥಿಗಳೇ ಹೊಣೆ ಎಂದಿದ್ದಾರೆ. ಜೊತೆಗೆ, ಸಂಸತ್ತಿನಲ್ಲಿ ತಮ್ಮ ವಿರೋಧಿಗಳು ಅಂಗೀಕರಿಸುವ ಯಾವುದೇ ಮಸೂದೆಯನ್ನಾದರೂ ವೀಟೋ ಅಧಿಕಾರದ ಮೂಲಕ ತಿರಸ್ಕರಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಸಂಸತ್ತು ಯಾರ ವಶದಲ್ಲಿದ್ದರೂ, ಕಾರ್ಯಾಂಗದ ಇಡೀ ವ್ಯವಸ್ಥೆ ತಮ್ಮ ಹತೋಟಿಯ ಇರುವುದನ್ನೂ ಅವರು ಉಲ್ಲೇಖಿಸುತ್ತಿದ್ದಾರೆ. ತನಗೆ ಯಾರ ನಿಯಂತ್ರಣವೂ ಇಲ್ಲ ಎಂದು ಭಾವಿಸಿರುವ ಒಬ್ಬ ಅಧ್ಯಕ್ಷನನ್ನು ಸಾಂವಿಧಾನಿಕ ಮೇಲ್ವಿಚಾರಣೆಗಳ ಮೂಲಕ ಕಟ್ಟಿಹಾಕಲು ಅಮೆರಿಕದ ಸಂಸತ್ತಿಗೆ ಸಾಧ್ಯವೇ ಎಂಬುದನ್ನು ಮುಂದಿನ ಎರಡು ವರ್ಷಗಳು ಪರೀಕ್ಷಿಸಲಿವೆ.
ಮಧ್ಯಂತರ ಚುನಾವಣೆ ಮತ್ತು ಭಾರತ: ಭಾರತ ಮತ್ತು ಅಮೆರಿಕಗಳ ಕಳೆದೆರಡು ವರ್ಷಗಳ ಸಂಬಂಧ ಒಂದು ಅಸ್ಥಿರತೆಯ ಅಧ್ಯಯನದಂತಿದೆ. ಟ್ರಂಪ್ ಸರ್ಕಾರ ಕಳೆದ ವರ್ಷ ಭಾರತೀಯ ಸರಕುಗಳ ಮೇಲಿನ ಆಮದು ಸುಂಕವನ್ನು ಶೇ. ೫೦ಕ್ಕೆ ಏರಿಸಿತ್ತು. ಆದರೆ, ಈ ವರ್ಷದ -ಬ್ರವರಿಯಲ್ಲಿ ಅದನ್ನು ಶೇ. ೧೮ಕ್ಕೆ ಇಳಿಸುವ ಭರವಸೆಯನ್ನೂ ನೀಡಿತ್ತು. ಈ ಮಧ್ಯೆಯೇ ಹೊಸ ಎಚ್-೧ಬಿ ವೀಸಾ ಅರ್ಜಿಗಳ ಮೇಲೆ ಒಂದು ಲಕ್ಷ ಡಾಲರ್ ಶುಲ್ಕ ಹಾಕುವ ನಿಯಮಾವಳಿಯೂ ಜರಿಗೆ ಬಂದಿದೆ; ಇತ್ತೀಚಿನ ವರ್ಷಗಳಲ್ಲಿ ಈ ವೀಸಾ ಬಳಸುವ ಮೂವರಲ್ಲಿ ಇಬ್ಬರು ಭಾರತೀಯರೇ ಆಗಿರುವುದು ಇಲ್ಲಿ ಗಮನಾರ್ಹ. ಟ್ರಂಪ್ ಸರ್ಕಾರದ ಒತ್ತಡದಿಂದಾಗಿ ಭಾರತವು ಇರಾನ್ನೊಂದಿಗಿನ ವ್ಯಾಪಾರವನ್ನು ಕಡಿತಗೊಳಿಸಬೇಕಾಗಿದೆ ಮತ್ತು ಚಾಬಹಾರ್ ಬಂದರು ಹೂಡಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕಾಗಿದೆ. ಹಾಗೆಯೇ ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ತೈಲ ಸಹ ಭಾರತ ಮತ್ತು ಅಮೆರಿಕಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿವೆ. ಅಂತರ ರಾಷ್ಟ್ರೀಯ ಸಂಬಂಧಗಳಲ್ಲಿ, ಇಂತಹ ತಿಕ್ಕಾಟಗಳು ಅಸಾಮಾನ್ಯವೇನಲ್ಲ; ಆದರೆ, ಇಂದು, ಅಮೆರಿಕದ ವಿಚಾರದಲ್ಲಿ, ಇದು ದೇಶ-ದೇಶಗಳ ಮಾತುಕತೆಯ ಬದಲಿಗೆ ದೇಶ ಮತ್ತು ಚಂಚಲ ಚಿತ್ತನೊಬ್ಬನ ಮನಸ್ಥಿತಿಯೊಂದಿಗಿನ ಮಾತುಕತೆಯಾಗಿ ಬದಲಾಗಿದೆ.
ಟ್ರಂಪ್ ಮತ್ತು ಅವರ ಉಗ್ರ ರಾಷ್ಟ್ರೀಯತೆ ಮತ್ತು ಜನಾಂಗವಾದದ ರಾಜಕಾರಣಕ್ಕೆ, ದೂಷಿಸಲು ಹೊರಗಿನವರು ಬೇಕೇ ಬೇಕು. ಈ ರಾಜಕೀಯದಾಟಕ್ಕೆ ಕಳೆದೆರಡು ವರ್ಷಗಳಲ್ಲಿ ಭಾರತೀಯ ಎಂಜಿನಿಯರ್ ಗಳು, ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ಬಲಿ ಪಶುಗಳಾಗಿದ್ದಾರೆ. ಬದಲಾದ ವೀಸಾ ನಿಯಮಾವಳಿಗಳಿಂದ ಸಾವಿರಾರು ಮಂದಿ ಭಾರತೀಯರು ಅಮೆರಿಕದಿಂದ ಕೆಲಸ ಕಳೆದುಕೊಂಡು ವಾಪಸ್ಸಾಗಿದ್ದಾರೆ. ಇನ್ನೆಷ್ಟೋ ಮಂದಿಗೆ, ಕುಟುಂಬದ ಸಾವು-ನೋವುಗಳಂತಹ ತುರ್ತು ಎದುರಾಗಿದ್ದರೂ, ಭಾರತಕ್ಕೆ ಭೇಟಿ ನೀಡಲಾಗದೇ ಅಮೆರಿಕದ ಇರಬೇಕಾದ ಪರಿಸ್ಥಿತಿ ಉಂಟಾಗಿದೆ. ಅಮೆರಿಕದ ಕಾರ್ಯಾಂಗದ ಮುಖ್ಯಸ್ಥನಾಗಿ ಇಂತಹ ಹಲವು ವಿಚಾರಗಳಲ್ಲಿ ಅಧ್ಯಕ್ಷ ಟ್ರಂಪ್ ತನ್ನ ಅಧಿಕಾರವನ್ನು ಇನ್ನೂ ಉಳಿಸಿಕೊಂಡಿದ್ದರೂ, ಅವರ ಕಾರ್ಯಾಚರಣೆಗಳು ಇನ್ನು ಮುಂದೆ, ಮಧ್ಯಂತರ ಚುನಾವಣೆಯ ಫಲಿತಾಂಶದಿಂದಾಗಿ, ಸಂಸತ್ತಿನ ಮೇಲ್ವಿಚಾರಣೆಗೆ ಒಳಗಾಗುವುದು ಕೊಂಚ ಮಟ್ಟಿಗೆ ನೆಮ್ಮದಿ ತರುವ ವಿಚಾರ.
ಮಧ್ಯಂತರ ಚುನಾವಣೆ ಮತ್ತು ವಿಶ್ವ: ಕಳೆದ ಎರಡು ವರ್ಷಗಳಿಂದ, ಅಮೆರಿಕದ ಮಿತ್ರರಾಷ್ಟ್ರಗಳು ಮತ್ತು ಎದುರಾಳಿಗಳು ಅಮೆರಿಕದ ಅಸ್ಥಿರತೆಯನ್ನೇ ತಮ್ಮ ಲೆಕ್ಕಾಚಾರಕ್ಕೆ ಆಧಾರವಾಗಿಟ್ಟುಕೊಂಡಿವೆ. ಇಂದು ಅಮೆರಿಕದ ಸಂಸತ್ತು ಟ್ರಂಪ್ ವಿರೋಧಿಗಳ ಪಾಲಾಗಿರುವುದು ಒಂದೇ ರಾತ್ರಿಯಲ್ಲಿ ಸ್ಥಿರತೆಯನ್ನು ಮರುಸ್ಥಾಪಿಸುವುದಿಲ್ಲವೆನ್ನುವುದು ನಿಜ, ಆದರೆ, ಅಮೆರಿಕದ ನೀತಿಯು ಇನ್ನು ಮುಂದೆ ಕೇವಲ ಒಬ್ಬ ವ್ಯಕ್ತಿಯ ಮನಸ್ಥಿತಿಯ ಮೇಲೆ ಅವಲಂಬಿತವಾಗಿರುವುದಿಲ್ಲ ಎಂಬುದು ಮಾತ್ರ ಸುಸ್ಪಷ್ಟ. ಸ್ವಭಾವತಃ ಅಲಿಪ್ತ ಅಥವಾ ಬಹು-ಪಕ್ಷೀಯ ನೀತಿಯನ್ನು ಹೊಂದಿರುವ ಭಾರತದಂತಹ ಮಧ್ಯಮ ಕ್ರಮಾಂಕದ ಶಕ್ತಿಗಳಿಗೆ, ಅಮೆರಿಕದ ಸಂವಿಧಾನಿಕ ಚೌಕಟ್ಟಿನೊಳಗೆ ವ್ಯವಹರಿಸುವುದು ಹೆಚ್ಚು ಅನುಕೂಲಕರ. ಕಳೆದೆರಡು ವರ್ಷಗಳಲ್ಲಿ ಅಮೆರಿಕ ತನ್ನ ಮಿತ್ರರಾಷ್ಟ್ರಗಳೊಂದಿಗೆ ಕಾದಾಡುತ್ತಾ ಕಂದಕಗಳನ್ನು ತೋಡುವುದು ಚೈನಾ ಮತ್ತು ರಷ್ಯಾದಂತಹ ರಾಷ್ಟ್ರಗಳಿಗೆ ಅನುಕೂಲಕರವಾಗಿದೆ; ಸ್ಥಿರವಾದ ಅಮೆರಿಕ ಎದ್ದುನಿಂತರೆ ಆ ಕಂದಕಗಳ ಮೇಲೆ ಸೇತುವೆಗಳ ನಿರ್ಮಾಣ ಸಾಧ್ಯವಾಗಬಹುದು. ಯುರೋಪ್, ಜಪಾನ್ ಮತ್ತು ಗಲ್ಫ್ ದೇಶಗಳು ಕೂಡ ಮಂಗಳವಾರದ ಫಲಿತಾಂಶವನ್ನು ಬಹುಮಟ್ಟಿಗೆ ಭಾರತದಂತೆಯೇ ವಿಶ್ಲೇಷಿಸುತ್ತವೆ:
ಅಮೆರಿಕದ ನೀತಿಯನ್ನು ಇನ್ನುಮುಂದೆ ಅದರೊಂದಿಗೆ ಚರ್ಚಿಸಬಹುದು ಎನ್ನುವುದನ್ನು ಅವು ಸ್ವಾಗತಿಸುತ್ತವೆ. ಭಾರತವೂ ಸೇರಿದಂತೆ ಪ್ರತಿಯೊಂದು ಪ್ರಜಪ್ರಭುತ್ವಕ್ಕೂ ಇಂದು ಪ್ರಮುಖ ಪಾಠವಿದೆ. ಚುನಾವಣೆಗಳು ಮಾತ್ರವೇ ಪ್ರಜಾಪ್ರಭುತ್ವದ ಆರೋಗ್ಯದ ಸಂಕೇತವಲ್ಲ; ಸದ್ದಾ ಹುಸೇನ್ ಅಂತಹ ಸರ್ವಾಧಿಕಾರಿಗಳೂ ಚುನಾವಣೆಗಳನ್ನು ನಡೆಸಿದ್ದಾರೆ, ನಡೆಸುತ್ತಾರೆ. ಆಡಳಿತಾರೂಢ ಪಕ್ಷವು ನಿಜವಾಗಿಯೂ ಸೋಲಲು ಸಾಧ್ಯವೇ ಮತ್ತು ಆ ಸೋಲನ್ನು ಒಪ್ಪಿಕೊಳ್ಳುತ್ತದೆಯೇ ಎಂಬುದೇ ಪ್ರಜಪ್ರಭುತ್ವಕ್ಕೆ ನೈಜ ಪರೀಕ್ಷೆ. ಒಟ್ಟಿನಲ್ಲಿ ಈ ಪರೀಕ್ಷೆಯಲ್ಲಿ ಅಮೆರಿಕ ಪಾಸ್ ಆದಂತಿದೆ.
” ಕಳೆದೆರಡು ವರ್ಷಗಳಲ್ಲಿ ಅಮೆರಿಕ ತನ್ನ ಮಿತ್ರರಾಷ್ಟ್ರಗಳೊಂದಿಗೆ ಕಾದಾಡುತ್ತಾ ಕಂದಕಗಳನ್ನು ತೋಡುವುದು ಚೈನಾ ಮತ್ತು ರಷ್ಯಾದಂತಹ ರಾಷ್ಟ್ರಗಳಿಗೆ ಅನುಕೂಲಕರವಾಗಿದೆ; ಸ್ಥಿರವಾದ ಅಮೆರಿಕ ಎದ್ದುನಿಂತರೆ ಆ ಕಂದಕಗಳ ಮೇಲೆ ಸೇತುವೆಗಳ ನಿರ್ಮಾಣ ಸಾಧ್ಯವಾಗಬಹುದು.”
ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟರೆ, ಅದರ ಪರಿಣಾಮ ನಮ್ಮ ಅಡುಗೆ ಮನೆಯ ಬಜೆಟ್ ಮೇಲೂ ಬೀಳುತ್ತಾ? ಎಲ್ ನಿನೊ ಪ್ರಭಾವದಿಂದ…
ಚೆನ್ನೈ: ದೀಪಾವಳಿ ಹಬ್ಬಕ್ಕೆ ತಮಿಳುನಾಡು ಸರ್ಕಾರ ವಿಶೇಷ ತರಕಾರಿ ಕಿಟ್ ಪರಿಚಯಿಸಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರದ ‘ವೆಟ್ರಿ’ ಯೋಜನೆಯಡಿ,…
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿ ನವೆಂಬರ್ 6ರಿಂದ 18 ತಿಂಗಳ ಕಾಲ ಕೆಎಸ್ಆರ್ಟಿಸಿ…
ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಸರ್ಕಾರ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಅಕ್ಟೋಬರ್ 23ರಿಂದ ಕರ್ನಾಟಕ…
ಹಾಸನ: ಉತ್ತರಾಖಂಡದ ಹೆಲಿಕಾಪ್ಟರ್ ದುರಂತದಲ್ಲಿ ಉದ್ಯಮಿ ಪ್ರತಾಪ್ ಗೌಡ ಮೃತಪಟ್ಟ ಬೆನ್ನಲ್ಲೇ, ಅವರ ತಂದೆ ನಿಂಗರಾಜು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ…
ಬೆಂಗಳೂರು: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವ ಆರೋಪದಡಿ ಕ್ಯಾಬ್ ಚಾಲಕ ಇಂದುಶೇಖರ್ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.…