Andolana originals

ಗಾಂಧಿ ಹಾದಿಯಲ್ಲಿ ಹತಳಾದ ಮಾತಂಗಿನಿ ಹಜ್ರಾ

ಡಾ.ಟಿ.ಮಂಜು ಸತ್ತಿಗೆಹುಂಡಿ, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ, ಗಾಂಧಿ ಭವನ,

ಮೈಸೂರು ವಿಶ್ವವಿದ್ಯಾಲಯ ಭಾರತದ ಸ್ವಾತಂತ್ರ್ಯ ಚಳವಳಿಗೆ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ವಕೀಲರು, ರೈತರು, ರೈತಾಪಿ ಮಹಿಳೆಯರು, ಅವಿದ್ಯಾವಂತರು, ಕೂಲಿಕಾರ್ಮಿಕರು, ಮುಂತಾದ ವಿವಿಧ ಸ್ತರದ ಜನ ಸಮುದಾಯವನ್ನು ಗಾಂಧೀಜಿ ಪ್ರೇರಿಪಿಸಿದ್ದರು. ಅವರೊಂದು ಮಾಂತ್ರಿಕ ಶಕ್ತಿಯಾಗಿದ್ದರು. ಪ್ರಾಯದ ಯುವಕ ಯುವತಿಯರಿಂದ ಹಿಡಿದು ೭೩ ವರ್ಷ ವಯಸ್ಸಿನ ಮಾತಂಗಿನಿ ಹಜ್ರಾ ಅವರಂತಹ ವಯೋವೃದ್ಧರಿಗೂ ಗಾಂಧಿಜಿ ಸ್ವಾತಂತ್ರ್ಯದ ಚುಂಬಕ ಶಕ್ತಿಯಾಗಿದ್ದರು.

೧೮೭೦ರ ಅಕ್ಟೋಬರ್ ೧೯ ರಂದು, ಮಾತಂಗಿನಿ ಹಜ್ರಾ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ತಮ್ಲುಕ್ ಪೊಲೀಸ್ ಠಾಣೆ ವ್ಯಾಪ್ತಿಯ ‘ಹೊಗ್ಲಾ’ಗ್ರಾಮದ ಬಡ ರೈತ ಕುಟುಂಬದಲ್ಲಿ ಜನಿಸಿದರು. ಬಡತನದ ಕಾರಣಕ್ಕೆ ಮಾತಂಗಿನಿ ಅವರ ಬದುಕು ಅನೇಕ ಏರುಪೇರುಗಳನ್ನುಕಂಡಿತು. ಶಿಕ್ಷಣದ ಬೆಳಕು ಸಿಗದಾಯಿತು. ಶ್ರೀಮಂತ ವಿಧುರ ತ್ರಿಲೋಚನ್ ಹಜ್ರಾ ಅವರಿಗೆ ಬಾಲಿಕ ವಧು ಆಗುವಂತೆ ಮಾಡಿತು. ಕೇವಲ ೧೮ನೇ ವಯಸ್ಸಿಗೆ ವಿಧವೆ ಪಟ್ಟ ದೊರೆಯಿತು. ಪತಿಯ ಮರಣದ ನಂತರ ಅವರು ತಮ್ಮ ಸ್ವಗ್ರಾಮಕ್ಕೆ ಹಿಂದಿರುಗಿ ಸಂಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡುವ ಕಾರ್ಯ ಆರಂಭಿಸಿದರು. ಬಂಗಾಳದಲ್ಲಿ ಸ್ವಾತಂತ್ರ್ಯದ ಗಾಳಿ ವೇಗವಾಗಿ ಬೀಸತೊಡಗಿತ್ತು.

ಮಿಡ್ನಾಪುರ ಪ್ರಾಂತ್ಯದಲ್ಲಿ ಗಾಂಧಿ ಹೆಚ್ಚು ಹೆಚ್ಚು ಮಹಿಳೆಯರನ್ನು ಸಂಘಟಿಸುತ್ತಿದ್ದರು. ಗಾಂಧಿಜಿ ಅವರ ಹಲವು ಪ್ರತಿಭಟನೆಗಳಲ್ಲಿ ಮಾತಂಗಿನಿ ಸಕ್ರಿಯವಾಗಿ ಭಾಗವಹಿಸಿದ್ದರು. ಮಹಾತ್ಮ ಗಾಂಧಿಯಿಂದ ಪ್ರೇರಿತರಾಗಿ ಖಾದಿ ಬಟ್ಟೆ ಉಡಲು ಆರಂಭಿಸಿದರು. ದೃಷ್ಟಿ ದುರ್ಬಲವಾಗಿದ್ದರೂ ಚರಕದಲ್ಲಿ ನೂಲು ನೂಲಲು ಆರಂಭಿಸಿ, ತಮ್ಮ ಸುತ್ತ ಮುತ್ತಲಿನ ಗ್ರಾಮಗಳ ಮಹಿಳೆಯರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಘಟಿಸಿದರು. ಅವರ ಗಾಂಧಿಯ ತತ್ವಗಳ ಮೇಲಿನ ನಿಷ್ಠೆಗಾಗಿ ಜನರು ಪ್ರೀತಿಯಿಂದ ‘ಗಾಂಧಿ ಬುರಿ’ (ವೃದ್ಧ ಗಾಂಧಿ ಮಹಿಳೆ) ಎಂದು ಕರೆಯ ತೊಡಗಿದರು.

ಗ್ರಾಮೀಣ ಮಹಿಳೆಯರಲ್ಲಿ ಸ್ವಾತಂತ್ರ್ಯದ ಸ್ಛೂರ್ತಿ ತುಂಬುತ್ತ, ದೊಡ್ಡ ದೊಡ್ಡ ಮೆರವಣಿಗೆಗಳಿಗೆ ನಾಯಕತ್ವ ನೀಡುತ್ತಿದ್ದರು. ಗಾಂಧಿಜಿಯವರ ‘ಭಾರತ ಬಿಟ್ಟು ತೊಲಗಿ’ ಮತ್ತು ‘ಅಸಹಕಾರ ಚಳವಳಿ’ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಉಪ್ಪಿನ ಸತ್ಯಾಗ್ರಹದ ಚಳವಳಿಯಲ್ಲಿ ಬಂಗಾಳದ ತಮ್ಲುಕ್ ನ್ಯಾಯಾಲಯದ ಆವರಣದಲ್ಲಿ ಪೊಲೀಸರ ಕಣ್ತಪ್ಪಿಸಿ ರಾಷ್ಟ್ರ ಧ್ವಜ ಹಾರಿಸಿದರು. ತಕ್ಷಣವೇ ಅವರನ್ನು ಪೊಲೀಸರು ಬಂಧಿಸಿದರು. ಆರು ತಿಂಗಳ ಕಾಲ ಸೆರೆಮನೆವಾಸ ಅನುಭವಿಸಿದರು. ಹೊರ ಬಂದ ನಂತರ ವಿವಿಧ ಪ್ರತಿಭಟನೆಗಳಲ್ಲಿ ಭಾಗವಹಿಸಿ ಬಂಧಿಸಲ್ಪಟ್ಟರೂ, ಅವರ ವಯಸ್ಸನ್ನು ಪರಿಗಣಿಸಿ ಪೊಲೀಸರು ಬಿಡುಗಡೆ ಮಾಡುತ್ತಿದ್ದರು. ಅವರು ಎಷ್ಟು ಬಾರಿ ಬಂಧಿಸಿದರೂ ಹೆದರುತ್ತಿರಲಿಲ್ಲ, ಬದಲಿಗೆ ಹೋರಾಟದ ಮನೋಭಾವ ಇನ್ನಷ್ಟು ಬಲವಾಗುತ್ತಿತ್ತು.

೧೯೪೨ರ ಸೆಪ್ಟೆಂಬರ್ ೨೯ರಂದು ಮಾತಂಗಿನಿ ಸುಮಾರು ೬೦೦೦ ಬೆಂಬಲಿಗರ ಮೆರವಣಿಗೆಯನ್ನು ತಮ್ಲುಕ್ ಪೊಲೀಸ್ ಠಾಣೆಯ ಕಡೆಗೆ ಮುನ್ನಡೆಸಿದರು. ಅವರು ಮುಂದೆ ಸಾಗುತ್ತಿದ್ದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವುದಕ್ಕೆ ಸಜ್ಜಾದರು. ಆಗ ಮಾತಂಗಿನಿಯು ದಯವಿಟ್ಟು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ಮಾಡಬೇಡಿ. ನನ್ನ ಮೇಲೆಯೇ ಗುಂಡುಹಾರಿಸಿ ಎಂದರು. ಪೊಲೀಸರು ಅವರ ಮೇಲೆ ಗುಂಡು ಹಾರಿಸಿದರು. ಆದರೂ ಅವರು ಧೃತಿಗೆಡಲಿಲ್ಲ, ಒಂದರ ಹಿಂದೆ ಒಂದಾಗಿ ಮೂರು ಗುಂಡುಗಳನ್ನು ಹಾರಿಸಲಾಯಿತು. ಪ್ರತಿಯೊಂದು ಗುಂಡಿನ ಹೊಡೆತದೊಂದಿಗೆ ‘ವಂದೇ ಮಾತರಂ’ ಎಂದು ಘೋಷಣೆ ಕೂಗಿ ದರು. ಅವರು ರಾಷ್ಟ್ರ ಧ್ವಜವನ್ನು ಎತ್ತಿ ಹಿಡಿದೇ ಜೋರಾಗಿ ‘ವಂದೇ ಮಾತರಂ’ ಎನ್ನುತ್ತಾ ೭೩ ವರ್ಷದ ಮಾತಂಗಿನಿ ಹಜ್ರಾ ನೆಲಕ್ಕೆ ಬಿದ್ದರು. ಹುತಾತ್ಮರಾದರೂ ಅವರ ಕೈಯಲ್ಲಿ ರಾಷ್ಟ್ರ ಧ್ವಜ ಇತ್ತು. ಮಾತಂಗಿನಿ ಹಜ್ರಾ ಅಪಾರ ಧೈರ್ಯ, ಅಸಾಧಾರಣ ಶೌರ್ಯ ಮತ್ತು ಅಚಲ ಸಂಕಲ್ಪ ಹೊಂದಿದ್ದ ಮಹಿಳೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಗೆ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕರು ಅವರ ಹೆಜ್ಜೆ ಗುರುತುಗಳನ್ನು ಅನುಸರಿಸಲು ಪ್ರೇರಿತರಾದರು. ಇಂತಹ ಮಹಾನ್ ತ್ಯಾಗಿಯ ಪ್ರತಿಮೆಯನ್ನು ಕೊಲ್ಕತ್ತಾದ ಹೃದಯ ಭಾಗದಲ್ಲಿರುವ ಮೈದಾನದಲ್ಲಿ ಸ್ಥಾಪಿಸಲಾಗಿದೆ. ಇದೇ ರೀತಿ ಆಕೆಯ ಹುಟ್ಟೂರು ಹಾಗೂ ಕೊನೆಯುಸಿರೆಳೆದ ಸ್ಥಳದಲ್ಲಿಯೂ ಪ್ರತಿಷ್ಠಾಪಿಸಲಾಗಿದೆ.

೨೦೦೨ನೇ ಇಸವಿಯಲ್ಲಿ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳವಳಿಗೆ ಅರವತ್ತು ವರ್ಷಗಳು ತುಂಬಿದವು. ಇದರ ಸ್ಮರಣಾರ್ಥವಾಗಿ ಭಾರತ ಸರ್ಕಾರದ ಅಂಚೆ ಇಲಾಖೆಯು ಸರಣಿ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿತು. ಇದರಲ್ಲಿ ಶ್ರೀಮತಿ ಮಾತಂಗಿನಿ ಹಜ್ರಾ ಅವರ ಅಂಚೆ ಚೀಟಿಯನ್ನು ಕೂಡ ಬಿಡುಗಡೆ ಮಾಡಿತು. ದಕ್ಷಿಣ ಕೊಲ್ಕತ್ತಾದ ಪ್ರಮುಖ ರಸ್ತೆಯೊಂದಕ್ಕೆ ‘ಹಜ್ರಾ ರಸ್ತೆ’ ಎಂಬುದಾಗಿ ನಾಮಕರಣ ಮಾಡಿದ್ದು, ಇದು ಮಾತಂಗಿನಿ ಹಜ್ರಾ ಅವರನ್ನು ಸದಾ ನೆನಪಿಸುತ್ತದೆ.

ಆಂದೋಲನ ಡೆಸ್ಕ್

Recent Posts

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಗಾಂಧೀಜಿಯವರ ಜೀವನವೇ ತೆರೆದ ಪುಸ್ತಕ:  ಇಡೀ ವಿಶ್ವವೇ ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯಾಗ್ರಹಗಳನ್ನು ಗೌರವಿಸುತ್ತದೆ. ಗಾಂಧಿಯವರು ತಮ್ಮ ಶಾಲಾ ದಿನಗಳಲ್ಲಿಯೇ…

1 hour ago

ಧರ್ಮವೆಂದು ತಿಳಿದು ತಿಗಣೆ ಇತ್ಯಾದಿಗಳನ್ನು ಕೊಲ್ಲುತ್ತಿದ್ದೆ

ನನ್ನ ಆರು ಏಳನೆಯ ವಯಸ್ಸಿನಿಂದ ಹದಿನಾರನೆಯ ವಯಸ್ಸಿನವರೆಗೆ ಪಾಠಶಾಲೆಯಲ್ಲಿ ವಿದ್ಯೆಯನ್ನು ಕಲಿತೆ. ಆದರೆ ಸ್ಕೂಲಿನಲ್ಲಿ ನನಗೆ ಯಾವ ಧಾರ್ಮಿಕ ಶಿಕ್ಷಣವೂ…

1 hour ago

ಜೂ.28ರಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ನವೀನ್ ಡಿಸೋಜ ಮಡಿಕೇರಿ: ಜೂ.೨೮ರಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಕೊಡಗು ಜಿಲ್ಲೆಯಲ್ಲಿಯೂ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ…

1 hour ago

ಅಕ್ರಮ ಮದ್ಯ ಮಾರಾಟ: ಕಡಿವಾಣ ಕಾರ್ಯಾಚರಣೆ

ದಿನೇಶ್ ಕುಮಾರ್ ಹೆಚ್.ಎಸ್. ಅಗ್ನಿ ಅವಘಡದ ಬಳಿಕ ಎಚ್ಚೆತ್ತ ಅಧಿಕಾರಿಗಳು ಮೈಸೂರು: ನಗರದ ದಟ್ಟಗಳ್ಳಿಯ ಮಾರಾ ರೆಸ್ಟೋ ಬಾರ್‌ನಲ್ಲಿ ನಡೆದ…

2 hours ago

ಓದುಗರ ಪತ್ರ: ವಂಚನೆ ತಡೆಗಾಗಿ ನಿರ್ಬಂಧ

ನೀಟ್ -ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಇದೇ ಜೂನ್ ೨೧ ರಂದು ಮರು ಪರೀಕ್ಷೆ ನಡೆಯಲಿದೆ. ವಂಚನೆ ಜಾಲ…

3 hours ago

ಓದುಗರ ಪತ್ರ: ಮರಗಳ ಹನನ ಏಕೆ?

ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿ ಮೈಸೂರು ವಿಶ್ವವಿದ್ಯಾನಿಲಯದ ಹಿಂಭಾಗ ಮೈಸೂರು - ಚಾಮರಾಜನಗರ ರೈಲ್ವೆ ಹಳಿಯ ಪಕ್ಕದಲ್ಲಿದ್ದ ೩೫ ಮರಗಳನ್ನು…

3 hours ago