Andolana originals

ಹಂಗಾಮಿ ನೌಕರರ ಬದುಕಿಗೆ ಭದ್ರತೆ ನೀಡಿದ ಮಂಡ್ಯ ಜಿಪಂ

ಬಿ.ಟಿ.ಮೋಹನ್‌ಕುಮಾರ್

ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯಿತಿಗಳಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಾ, ನಮ್ಮ ಹಳ್ಳಿಗಳ ಪ್ರತಿ ಮನೆಯ ಬಾಗಿಲಿಗೆ ನೀರು ತಲುಪಿಸುವ ನೀರುಗಂಟಿಗಳು, ಪಂಚಾಯಿತಿ ಕಚೇರಿಯ ಓಡಾಟದ ಕೆಲಸ ಮಾಡುವ ಅಟೆಂಡರ್‌ಗಳು ಹಾಗೂ ಊರಿನ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರು… ಇವರು ಗ್ರಾಮ ಪಂಚಾಯಿತಿ ವ್ಯವಸ್ಥೆಯ ನಿಜವಾದ ಬೆನ್ನೆಲುಬು. ಆದರೆ, ಕಳೆದ ಎರಡು ದಶಕಗಳಿಂದ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದ್ದ ಈ ಶ್ರಮಿಕ ವರ್ಗದ ಬದುಕು ಅತಂತ್ರವಾಗಿತ್ತು. ಸುಮಾರು ೧೫-೨೦ ವರ್ಷಗಳಿಂದ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದ ಇವರಿಗೆ ಉದ್ಯೋಗ ಭದ್ರತೆ ಎಂಬುದು ಕೇವಲ ಕನಸಾಗಿತ್ತು. ಸರ್ಕಾರಗಳು ಭರವಸೆ ನೀಡುತ್ತಿದ್ದರೂ, ವಿದ್ಯಾರ್ಹತೆಯ ಕೊರತೆ ಮತ್ತು ತಾಂತ್ರಿಕ ದಾಖಲೆಗಳ ಅಲಭ್ಯತೆಯ ಕಾರಣದಿಂದ ಇವರ ಸೇವೆ ಅನುಮೋದನೆಗೊಳ್ಳದೆ ನನೆಗುದಿಗೆ ಬಿದ್ದಿತ್ತು.

ಈ ಎಲ್ಲ ಅಡೆತಡೆಗಳ ನಡುವೆ ಮಂಡ್ಯ ಜಿಲ್ಲಾ ಪಂಚಾಯಿತಿ ಈ ಹಂಗಾಮಿ ನೌಕರರಿಗೆ ಉದ್ಯೋಗ ಭದ್ರತೆ ನೀಡುವ ಮೂಲಕ ಇಡೀ ರಾಜ್ಯಕ್ಕೇ ಮಾದರಿ ಯಾಗುವಂತಹ ಮಾನವೀಯ ಕಾರ್ಯ ಮಾಡಿದೆ.

ಹಿನ್ನೆಲೆ ಮತ್ತು ಸವಾಲುಗಳು: ಈ ಪ್ರಕ್ರಿಯೆಯ ಹಿಂದಿದ್ದ ಸವಾಲುಗಳು ಸಣ್ಣವುಗಳಲ್ಲ. ಸರ್ಕಾರವು ೨೦೧೭ರ ಅ.೩೧ಕ್ಕಿಂತ ಮೊದಲು ನೇಮಕಗೊಂಡವರಿಗೆ ಅನುಮೋದನೆ ನೀಡಲು ಮುಂದಾಗಿದ್ದರೂ, ಅಲ್ಲಿ ಒಂದು ದೊಡ್ಡ ತಾಂತ್ರಿಕ ಅಡ್ಡಿಯಿತ್ತು. ಹೆಚ್ಚಿನ ಶ್ರಮಿಕರಿಗೆ ಕನಿಷ್ಠ ವಿದ್ಯಾರ್ಹತೆಯ ದಾಖಲೆಗಳಿರಲಿಲ್ಲ. ಅಕ್ಷರ ಜ್ಞಾನವಿಲ್ಲದ, ಕೇವಲ ಕೈಯಲ್ಲಿ ಆಧಾರ್ ಕಾರ್ಡ್ ಮಾತ್ರ ಹಿಡಿದು ದಶಕಗಳಿಂದ ದುಡಿಯುತ್ತಿದ್ದ ಈ ವರ್ಗಕ್ಕೆ ನ್ಯಾಯಯುತವಾಗಿ ಅನುಮೋದನೆ ನೀಡುವುದು ನಮ್ಮ ಮುಂದಿರುವ ಸವಾಲಾಗಿತ್ತು. ಮಂಡ್ಯ ಜಿಲ್ಲೆಯೊಂದರಲ್ಲೇ ಇಂತಹ ಸುಮಾರು ೭೨೭ ಹುದ್ದೆಗಳಿದ್ದವು (೫೫೦ ನೀರುಗಂಟಿ ಗಳು, ೪೧ ಅಟೆಂಡರ್ ಹಾಗೂ ೧೩೮ ಸ್ವಚ್ಛತಾಗಾರರು).

ದಾಖಲೆ ಗಳ ಕೊರತೆಯಿಂದಾಗಿ ಇವರ ಬದುಕು ಅತಂತ್ರವಾಗಿತ್ತು. ಈ ಸಮಸ್ಯೆಯನ್ನು ಅರಿತ ಜಿಲ್ಲಾ ಪಂಚಾಯತ್, ಕೇವಲ ಅಂಕಪಟ್ಟಿಗಳನ್ನು ನೋಡುವ ಬದಲು, ಅವರು ಕೆಲಸ ಮಾಡಿದ ದಿನಗಳ ಹಾಜರಾತಿ, ಪಾವತಿಯಾದ ವೇತನದ ವಿವರ ಮತ್ತು ಗ್ರಾಮ ಪಂಚಾಯಿತಿಯ ಸಭೆಯ ನಿರ್ಣಯಗಳನ್ನು (Proceedings) ಪ್ರಮುಖ ಮಾನದಂಡವಾಗಿ ಪರಿಗಣಿಸಲು ನಿರ್ಧರಿಸಿತು. ಇದು ಕೇವಲ ತಾಂತ್ರಿಕ ಪ್ರಕ್ರಿಯೆಯಾಗಿರದೆ, ಹಕ್ಕಿಗಾಗಿ ಕಾಯುತ್ತಿದ್ದ ಶ್ರಮಿಕರ ಪರವಾಗಿ ನಿಂತ ನ್ಯಾಯದ ನಡೆಯಾಗಿದೆ.

ಜಿಪಂ ದಕ್ಷ ನಡೆ: ಜಿಲ್ಲೆಯ ನೂರಾರು ಕುಟುಂಬಗಳು ದಶಕಗಳಿಂದ ಈ ಉದ್ಯೋಗ ಅನುಮೋದನೆಗಾಗಿ ಕಾಯುತ್ತಿರುವುದು ನನ್ನ ಗಮನಕ್ಕೆ ಬಂದಿತು. ಇದು ಕೇವಲ ಕಡತಗಳ ವಿಲೇವಾರಿಯಾಗಿರದೆ, ನೂರಾರು ಬಡ ಕುಟುಂಬಗಳ ಭವಿಷ್ಯದ ಪ್ರಶ್ನೆಯಾಗಿತ್ತು. ಈ ಪ್ರಕ್ರಿಯೆಯಲ್ಲಿ ಯಾವುದೇ ಜಾತಿ, ಧರ್ಮ ಅಥವಾ ಲಿಂಗ ತಾರತಮ್ಯಕ್ಕೆ ಆಸ್ಪದ ನೀಡಬಾರದು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ, ಅರ್ಹರನ್ನು ಗುರುತಿಸುವಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇರಬಾರದು ಮತ್ತು ಸಂಪೂರ್ಣ ದಕ್ಷತೆಯಿಂದ ಈ ಕಾರ್ಯವನ್ನು ಪೂರೈಸಬೇಕು ಎಂದು ಜಿಲ್ಲಾ ಪಂಚಾಯಿತಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯ ಸ್ವಾಮಿ ಸ್ಪಷ್ಟ ನಿರ್ದೇಶನ ನೀಡಿದ್ದರು.

ಜಿಪಂ ಆಡಳಿತ ವಿಭಾಗದಿಂದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಹಾಗೂ ತಾಲ್ಲೂಕು ಮಟ್ಟದ ಪರಿಶೀಲನಾ ಸಮಿತಿಯನ್ನು ರಚಿಸಿ ಪರಿಶೀಲನೆ ನಡೆಸಲಾಯಿತು. ಇವರೆಲ್ಲರೂ ೨೦೧೭ರ ಅ.೩೧ಕ್ಕಿಂತ ಮೊದಲೇ ನೇಮಕಗೊಂಡು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದವರು. ಕೇವಲ ಶಾಲಾ ಅಂಕಪಟ್ಟಿಗಳಿಲ್ಲ ಎಂಬ ಕಾರಣಕ್ಕೆ ಯಾರನ್ನೂ ತಿರಸ್ಕರಿಸಬಾರದು. ಅವರ ಕೆಲಸದ ಅನುಭವ, ಹಾಜರಾತಿ ಮತ್ತು ನಿರಂತರ ಸೇವೆಯನ್ನು ಆಧರಿಸಿ ಮೂರು ಹಂತಗಳ ಕಟ್ಟುನಿಟ್ಟಿನ ಮೌಲ್ಯಮಾಪನ ನಡೆಸಲಾಯಿತು. ಅಂತಿಮವಾಗಿ ೫೯೦ ನೌಕರರ ಪ್ರಸ್ತಾವನೆಗಳು ಅರ್ಹವೆಂದು ಸಾಬೀತಾಗಿದ್ದು, ಶ್ರಮಿಕರ ಮುಖದಲ್ಲಿ ಮಂದಹಾಸ ಮೂಡಿದೆ.

ಗಣರಾಜ್ಯೋತ್ಸವದ ಉಡುಗೊರೆ: ದಶಕಗಳಿಂದ ‘ತಾತ್ಕಾಲಿಕ’ ಅಥವಾ ‘ಹಂಗಾಮಿ’ ಎಂಬ ಅನಿಶ್ಚಿತತೆಯ ಹಣೆಪಟ್ಟ ಹೊತ್ತು ದುಡಿಯುತ್ತಿದ್ದ ೫೮೬ ಶ್ರಮಜೀವಿಗಳಿಗೆ ಈ ಬಾರಿಯ ೭೭ನೇ ಗಣರಾಜ್ಯೋತ್ಸವದ ದಿನದಂದು ಅಧಿಕೃತವಾಗಿ ಸೇವಾ ಅನುಮೋದನೆ ಪತ್ರಗಳನ್ನು ವಿತರಿಸಿದ್ದು, ನನಗೆ ಸಂತಸ ನೀಡಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ‘ಪತ್ರಿಕೆ’ಗೆ ತಿಳಿಸಿದ್ದಾರೆ.

ಹಿಂದೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಇಂತಹ ನೇಮಕಾತಿ ಪ್ರಕ್ರಿಯೆಗಳು ನಡೆದಾಗ, ತಾಂತ್ರಿಕ ಕಾರಣಗಳಿಂದಾಗಿ ಅವು ನ್ಯಾಯಾಲಯದ ಮೆಟ್ಟಿಲೇರಿದ ಉದಾಹರಣೆಗಳಿದ್ದವು. ಇದರಿಂದಾಗಿ ಅರ್ಹ ನೌಕರರಿಗೆ ಅನ್ಯಾಯ ವಿಳಂಬವಾಗುತ್ತಿತ್ತು. ಮಂಡ್ಯ ಜಿಲ್ಲೆಯಲ್ಲಿ ಇಂತಹ ಯಾವುದೇ ಕಾನೂನು ಅಡೆತಡೆಗಳು ಎದುರಾಗಬಾರದು ಎಂಬುದು ನಮ್ಮ ಆಶಯವಾಗಿತ್ತು. ಇದಕ್ಕಾಗಿ ಅತ್ಯಂತ ಪಾರದರ್ಶಕ ಮತ್ತು ವೈಜ್ಞಾನಿಕ ದಾರಿಯನ್ನು ನಾವು ಕಂಡುಕೊಂಡೆವು ಎಂದರು.

೬೫೧ ಪ್ರಸ್ತಾವನೆಗಳ ಪೈಕಿ ಆಯ್ಕೆಯಾದ ೫೯೦ ನೌಕರರ ತಾತ್ಕಾಲಿಕ ಪಟ್ಟಿಯನ್ನು ಗೌಪ್ಯವಾಗಿಡದೆ, ಈ ವರ್ಷದ ಜನವರಿ ೨ರಂದು ಜಿಪಂನಿಂದ ಹಿಡಿದು ಗ್ರಾಪಂ ಮಟ್ಟದವರೆಗೆ ಸಾರ್ವಜನಿಕವಾಗಿ ಪ್ರಕಟಿಸಲಾಯಿತು. ಆಕ್ಷೇಪಣೆ ಸಲ್ಲಿಸಲು ೧೫ ದಿನಗಳ ಕಾಲಾವಕಾಶ ನೀಡಿ, ಪ್ರತಿಯೊಂದು ಅಹ ವಾಲನ್ನೂ ತಾಲ್ಲೂಕು ಪಂಚಾಯಿತಿ ಮಟ್ಟದಲ್ಲಿ ಕೂಲಂಕಷವಾಗಿ ಪರಿಶೀಲಿಸಲಾಯಿತು. ಇಡೀ ಪ್ರಕ್ರಿಯೆ ಯಾವುದೇ ಗೊಂದಲವಿಲ್ಲದೆ ಅತ್ಯಂತ ಕಾನೂನುಬದ್ಧವಾಗಿ ಪೂರ್ಣಗೊಂಡಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ರಾಜ್ಯಕ್ಕೆ ಮಂಡ್ಯವೇ ಮಾದರಿ:  ಒಂದೇ ಹಂತದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಗ್ರಾಮ ಪಂಚಾಯಿತಿ ನೌಕರರ ಸೇವೆಯನ್ನು ಅನುಮೋದಿಸಿದ ಹೆಗ್ಗಳಿಕೆ ಈಗ ಮಂಡ್ಯ ಜಿಲ್ಲೆಯದ್ದು. ಈ ಐತಿಹಾಸಿಕ ಕಾರ್ಯದ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ತಂಡ, ಮಂಡ್ಯ ಜಿಲ್ಲಾ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳ ಒಗ್ಗಟ್ಟಿನ ಶ್ರಮವಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

” ಮಂಡ್ಯ ಜಿಲ್ಲೆಯ ಈ ‘ಸೇವಾ ಸಕ್ರಮದ ಮಾದರಿ’ಯು ಇಡೀ ರಾಜ್ಯಕ್ಕೆ ದಾರಿದೀಪವಾಗಲಿ ಎಂಬುದು ನನ್ನ ಆಶಯ. ಅರ್ಹತೆಯಿರುವ ಪ್ರತಿಯೊಬ್ಬ ಶ್ರಮಿಕನಿಗೂನ್ಯಾಯ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಿದರೆ, ಸಾಮಾಜಿಕ ನ್ಯಾಯವನ್ನು ತಳಮಟ್ಟದ ಜನರಿಗೂ ಹೇಗೆ ತಲುಪಿಸಬಹುದು ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ.”

-ಎನ್.ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ, ಮಂಡ್ಯ ಜಿಲ್ಲೆ

 

 

ಆಂದೋಲನ ಡೆಸ್ಕ್

Recent Posts

ಅರಣ್ಯ ಅಧಿಕಾರಿಗಳಿಂದಲೇ ಮೈಸೂರಿನಲ್ಲಿ ʻಮರಗಳ ಮಾರಣಹೋಮ’

ಮೈಸೂರು : ನಗರದ ಎನ್‌ಐಇ ಕಾಲೇಜು ಹಿಂಭಾಗದ ಅರಣ್ಯ ಇಲಾಖೆಯ ಶ್ರೀಗಂಧದ ಕೋಠಿ ಆವರಣದಲ್ಲಿ ಕ್ವಾರ್ಟರ್ಸ್ ಕಟ್ಟಡ ನಿರ್ಮಾಣಕ್ಕಾಗಿ ಹತ್ತಾರು…

42 mins ago

ಮೈಸೂರಿನಿಂದ ಲಕ್ನೋಗೆ ಭವ್ಯ ಪೀಠ : UP ವಿಧಾನಸಭೆಯಲ್ಲಿ ಕರ್ನಾಟಕದ ಕಲಾ ಛಾಪು

ಮೈಸೂರು : ಕರ್ನಾಟಕದ ಕಲಾ-ಶಿಲ್ಪ ಪರಂಪರೆಯು ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಮೈಸೂರಿನ ಖ್ಯಾತ ಕರಕುಶಲ ಶಿಲ್ಪಿ ಕೈಸರ್…

2 hours ago

ಮಾರ್ಚ್‌ನಲ್ಲಿ ಬಜೆಟ್‌ ಮಂಡನೆ : ಪೂರ್ವಭಾವಿ ಸಭೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಗುರುವಾರದಿಂದ ಬಜೆಟ್ ತಯಾರಿಕೆಯ ಪೂರ್ವಭಾವಿ ಸಭೆಗಳನ್ನು ಆರಂಭಿಸಿದ್ದಾರೆ. ಮಾರ್ಚ್.6ರಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ…

2 hours ago

ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್‌ ಸೇದಿ ಫೋಟೋಶೂಟ್:‌ ರಜತ್‌ ವಿರುದ್ಧ ಎಫ್‌ಐಆರ್‌ ದಾಖಲು

ಮೈಸೂರು: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಮೈಸೂರಿನ ಲಕ್ಷ್ಮೀಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ…

2 hours ago

ಮೆಟ್ರೋ ಪ್ರಯಾಣ ದರ ಏರಿಕೆ: ಸಚಿವ ದಿನೇಶ್‌ ಗುಂಡೂರಾವ್‌ ಸಮರ್ಥನೆ

ಬೆಂಗಳೂರು: ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಿರುವುದನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,…

3 hours ago

ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮುಂದುವರಿದ ಹಸುಗಳ ಮರಣ ಮೃದಂಗ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಹಸುಗಳ ಮರಣ ಮೃದಂಗ ಮುಂದುವರೆದಿದ್ದು ಸಂಬಂಧಪಟ್ಟ ಪಶುಸಂಗೋಪನಾ…

3 hours ago