Andolana originals

ಜೀವಕಳೆ ಪಡೆದುಕೊಂಡ ಮಲ್ಲಹಳ್ಳಿ ಫಾಲ್ಸ್‌

ಲಕ್ಷಿ ಕಾಂತ್ ಕೊಮಾರಪ್ಪ

ನೋಡುಗರ ಕಣ್ಮನ ಸೆಳೆಯುತ್ತಿರುವ ಜಲಪಾತ; ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು

ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಸುಂದರ ಪ್ರಕೃತಿಯ ಸೊಬಗು… ನಿಮಿಷಕ್ಕೊಮ್ಮೆ ಮಂಜಿನಿಂದ ಮುಸುಕಿ ಕಣ್ಮರೆಯಾಗುವ ಜಲಧಾರೆ… ಒಬ್ಬರ ಮಾತುಗಳು ಇನ್ನೊಬ್ಬರಿಗೆ ಕೇಳದಷ್ಟು ಭೋರ್ಗೆರೆಯುವ ನೀರಿನ ಶಬ್ದ… ಇದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮಲ್ಲಹಳ್ಳಿ ಜಲಪಾತದ ಸದೃಶ್ಯ.

ಹೌದು, ದಕ್ಷಿಣದ ಕಾಶ್ಮೀರ, ಭಾರತದ ಸ್ಕಾಟ್‌ಲ್ಯಾಂಡ್ ಖ್ಯಾತಿಯ ಕೊಡಗು ಜಿಲ್ಲೆಯ ಜಲಪಾತಗಳಿಗೆ ಈಗ ಜೀವ ಕಳೆ ಬಂದಿದೆ. ಅದರಲ್ಲೂ ಹಚ್ಚ ಹಸಿರಿನ ಪರಿಸರದ ನಡುವೆ ಭೋರ್ಗರೆಯುತ್ತಿರುವ ಮಲ್ಲಹಳ್ಳಿ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ.

ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಗಳಲ್ಲಿ ಕಳೆದ ಒಂದು ವಾರ ವರುಣ ಆರ್ಭಟಿಸಿದ್ದರಿಂದ ಮಲ್ಲಹಳ್ಳಿ ಜಲಪಾತದ ಸೌಂದರ್ಯ ದ್ವಿಗುಣಗೊಂಡು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಮಲ್ಲಹಳ್ಳಿ ಜಲಧಾರೆಯನ್ನು ನೋಡಲು ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿದ್ದಾರೆ.

ನಿಸರ್ಗ ರಮಣೀಯತೆಯನ್ನು ತನ್ನೊಡಲಲ್ಲಿರಿಸಿ ಕೊಂಡಿರುವ ಪುಷ್ಪಗಿರಿ ಬೆಟ್ಟದ ತಪ್ಪಲಿನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಹಳ್ಳಿ ಗ್ರಾಮದ ಬೃಹತ್ ಕಲ್ಲು ಬಂಡೆಯಿಂದ ಕೆಳಭಾಗಕ್ಕೆ ಭೋರ್ಗರೆಯುತ್ತಾ ಧುಮುಕಿ ಜಲಧಾರೆಯಾಗಿ ಪ್ರವಹಿಸುವ ದೃಶ್ಯ ಮನಮೋಹಕವಾಗಿದೆ.

ಜಲಪಾತದಲ್ಲಿ ನಡೆಯುವ ಅವಘಡಗಳನ್ನು ತಪ್ಪಿಸಲು ನೀರಿನೊಳಗೆ ಯಾರೂ ಇಳಿಯದಂತೆ ಪ್ರವಾಸೋದ್ಯಮ ಇಲಾಖೆಯಿಂದ ಬ್ಯಾರಿಕೇಡ್ ಆಳವಡಿಸಲಾಗಿದೆ. ಜಲಪಾತದ ಮೇಲ್ಭಾಗದಲ್ಲಿರುವ ಬೃಹತ್ ಗಾತ್ರದ ಕಲ್ಲುಗಳು ಅತ್ಯಂತ ಆಕರ್ಷಣೀಯವಾಗಿವೆ. ಇಲ್ಲಿ ನಿಂತು ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಜಲಪಾತದ ಅಂದವನ್ನು ಸೆರೆಹಿಡಿದು ಪ್ರವಾಸಿಗರು ಸಂಭ್ರಮಿಸುತ್ತಾರೆ. ಕೊಡಗು ಹಾಗೂ ಹೊರ ಜಿಲ್ಲೆಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ. ಬೆಂಗಳೂರಿನಿಂದ ಅತೀ ಹೆಚ್ಚು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುವುದು ಜಲಪಾತದ ಆಕರ್ಷಣೀಯ ಸೌಂದರ್ಯಕ್ಕೆ ಸಾಕ್ಷಿಯಾಗಿದೆ.

ಪ್ರವಾಸಿಗರ ರಕ್ಷಣೆ, ಮಾಹಿತಿಗಾಗಿ ಇಲಾಖೆಯಿಂದ ಪ್ರವಾಸಿ ಮಿತ್ರರನ್ನು ಇಲ್ಲಿಗೆ ನಿಯೋಜಿಸಲಾಗಿದ್ದು, ಇವರು ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಮಾಹಿತಿ ನೀಡುತ್ತಿದ್ದಾರೆ. ಜಲಪಾತದ ನೀರಿಗೆ ಇಳಿಯದಂತೆ, ಅಪಾಯಕಾರಿ ಸ್ಥಳಗಳತ್ತ ತೆರಳದಂತೆ ಎಚ್ಚರಿಕೆಯನ್ನು ನೀಡುತ್ತಾರೆ.

ಮಲ್ಲಹಳ್ಳಿ ಜಲಪಾತದವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿರುವುದರಿಂದ ಪ್ರವಾಸಿಗರು ನಡೆಯುವ ಪ್ರಯಾಸ ತಪ್ಪಿದಂತಾಗಿದೆ. ಹಾಲ್ನೊರೆಯಂತಹ ನೀರಿನ ವೈಭವ, ಜುಳುಜುಳು ನಾದದೊಂದಿಗೆ ಹೃನ್ಮನ ತಣಿಸುವ ಸೌಂದರ್ಯದ ಮಲ್ಲಹಳ್ಳಿ ಜಲಪಾತ ವೀಕ್ಷಣೆಗೆ ಇದು ಸುಸಂದರ್ಭವಾಗಿದ್ದು, ವಾರಾಂತ್ಯದ ದಿನಗಳಲ್ಲಿ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಭಾರಿ ಮಳೆಯ ಸಂದರ್ಭದಲ್ಲಿ ಜಲಪಾತದ ಬುಡದಲ್ಲಿ ನಿಂತು ನೋಡುವುದು ಕಷ್ಟ. ಜಲಪಾತದ ಸಮೀಪಕ್ಕೆ ತೆರಳಲು ೪೦೦ಕ್ಕೂ ಅಽಕ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಮೆಟ್ಟಿಲುಗಳನ್ನು ಇಳಿದು ಹೋಗಬಹುದಾಗಿದೆ.

ತಲುಪುವುದು ಹೇಗೆ?…: 

ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಹಳ್ಳಿಯಲ್ಲಿ ಜಲಪಾತವಿದೆ. ಪಟ್ಟಣದಿಂದ ೨೫ ಕಿ.ಮೀ. ದೂರ ಕ್ರಮಿಸಿದರೆ, ಜಲಪಾತ ಸಿಗುತ್ತದೆ. ಯಡೂರು, ಶಾಂತಳ್ಳಿ, ಕುಮಾರಳ್ಳಿ ಮಾರ್ಗವಾಗಿ ೨೦ ಕಿ.ಮೀ. ಕ್ರಮಿಸಿ, ಹಂಚಿನಳ್ಳಿ ಗ್ರಾಮವನ್ನು ತಲುಪಿ, ಬಲಕ್ಕೆ ತಿರುಗಿ ೪ ಕಿ.ಮೀ. ತೆರಳಿದರೆ ಮಲ್ಲಳ್ಳಿ ಜಲಪಾತದ ದರ್ಶನವಾಗುತ್ತದೆ. ಜಲಪಾತದವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವುದರಿಂದ ಸ್ಥಳಕ್ಕೆ ವಾಹನಗಳಲ್ಲಿ ತೆರಳಬಹುದು. ಮಲ್ಲಹಳ್ಳಿ ಜಲಪಾತವನ್ನು ಹತ್ತಿರದಿಂದ ನೋಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

” ಈ ಜಲಪಾತಕ್ಕೆ ಹಲವು ವರ್ಷಗಳಿಂದ ಬರುತ್ತಿದ್ದೇವೆ. ಮೊದಲು ಜಲಪಾತದ ಸಮೀಪಕ್ಕೆ ತೆರಳಲು ಮೆಟ್ಟಿಲಿನ ವ್ಯವಸ್ಥೆ ಇಲ್ಲದೇ ಕಷ್ಟವಾಗಿತ್ತು. ಇತ್ತೀಚಿನ ದಿನಗಳಲ್ಲಿ ಮೆಟ್ಟಿಲಿನ ಸೌಕರ್ಯದೊಂದಿಗೆ ಜಲಪಾತದ ಪಕ್ಕದಲ್ಲಿ ಮೆಶ್ ಅಳವಡಿಸಲಾಗಿದೆ. ಎತ್ತರದಿಂದ ಬೀಳುವ ನೀರನ್ನು ಸಮೀಪದಲ್ಲಿ ನೋಡುವಾಗ ರೋಮಾಂಚನವಾಗುತ್ತದೆ.”

-ಸಂಕಿತ್ ಹರಪಳ್ಳಿ, ಪ್ರವಾಸಿ

” ಜಲಪಾತ ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೇ ಅಪಾಯಕಾರಿಯೂ ಆಗಿದೆ. ಸಾಕಷ್ಟು ಮಂದಿ ನೀರಿಗಿಳಿದು ಇಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಪ್ರವಾಸಿಗರು ನೀರಿಗೆ ಇಳಿಯಬಾರದು. ಈ ಬಗ್ಗೆ ಎಚ್ಚರಿಕೆ ಫಲಕ, ಮೆಶ್ ಅಳವಡಿಕೆ, ಹೋಂ ಗಾರ್ಡ್‌ಗಳನ್ನು ನೇಮಕದ ಬಳಿಕವೂ ಅವರ ಕಣ್ಣು ತಪ್ಪಿಸಿ ನೀರಿಗಿಳಿಯುವುದು ಹಾಗೂ ಅನಾಹುತ ಸಂಭವಿಸುತ್ತಿರುವುದು ವಿಪರ್ಯಾಸ. ಪ್ರವಾಸಿಗರು ತಾವಾಗಿಯೇ ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು.”

-ರಕ್ಷಿತ್ ಕೂತಿ, ಸ್ಥಳೀಯರು, ಸೋಮವಾರಪೇಟೆ

ಆಂದೋಲನ ಡೆಸ್ಕ್

Recent Posts

ಹೆಣ್ಣು ಮಗು ಮಾರಾಟ ; ಐವರ ಬಂಧನ

ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…

10 hours ago

ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ : ಗಡಿ ಜಿಲ್ಲೆಯಲ್ಲಿ ಅಮಾನವೀಯ ಘಟನೆ

ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…

10 hours ago

ಹಾಸನದಲ್ಲಿ ಜಾ.ದಳ ಶಕ್ತಿ ಪ್ರದರ್ಶನ : ಚುನಾವಣೆಗೆ ತಯಾರಾಗುವಂತೆ ಕಾರ್ಯಕರ್ತರಿಕೆ ಎಚ್‌ಡಿಕೆ ಕರೆ

ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…

11 hours ago

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ; 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…

11 hours ago

ನಂಜನಗೂಡು | ಶ್ರೀಕಂಠೇಶ್ವರ ದೇವಾಲಯದ ಮುಂದಿನ ಅನಧಿಕೃತ ಅಂಗಡಿ ತೆರವು

ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…

11 hours ago

ಚಿನ್ನ ಕಳ್ಳ ಸಾಗಾಣಿಕೆ ಪತ್ತೆ : 2.89 ಕೋಟಿ ರೂ. ಮೌಲ್ಯದ ಚಿನ್ನ ವಶ

ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…

12 hours ago