Andolana originals

ಮಾರ್ಟಿನ್ ಲೂಥರ್ ಕಿಂಗ್ ಕಣ್ಣಲ್ಲಿ ಮಹಾತ್ಮ ಗಾಂಧಿ…

ಗೋವಿಂದರಾಜು ಲಕ್ಷ್ಮೀಪುರ, ಇಂಗ್ಲಿಷ್ ಸಹಪ್ರಾಧ್ಯಾಪಕ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು

ಭಗವಂತ ಯೇಸು ನಮಗೆ ದಾರಿ ಅಂದರೆ, ಶಾಂತಿ ಮಾರ್ಗ ತೋರಿಸಿದರು. ಆದರೆ, ಭಾರತದ ಮೋಹನ ದಾಸ್ ಕರಮಚಂದ ಗಾಂಧಿ ಭಗವಂತನ ಮಾರ್ಗವು ಉತ್ತಮ ಫಲಿತಾಂಶ ನೀಡುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ನಿರೂಪಿಸಿದವರು. ಹಾಗಾಗಿ ಗಾಂಧಿಜಿ ಆಧುನಿಕ ಜಗತ್ತಿನ ಅತ್ಯುನ್ನತ ಕ್ರಿಶ್ಚಿಯನ್.

ಹೀಗೆ ಗಾಂಧಿ ಬಗ್ಗೆ ಹೊಗಳಿ ಮಾತನಾಡಿದವರು ಬೇರಾರೂ ಅಲ್ಲ, ಅಮೆರಿಕದ ಕಪ್ಪು ಜನರ ಸಮಾನ ಹಕ್ಕು ಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ವಿಶ್ವಕಂಡ ಮಹಾನ್ ಸಮಾನತವಾದಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್.

ಅಹಿಂಸೆಯ ಮೂಲಕ ಕ್ರಾಂತಿಕಾರಿ ಹೆಜ್ಜೆ ಇರಿಸಿ, ಅದರಲ್ಲಿ ಜಯ ಕಾಣ ಬಹುದು ಎಂಬುದನ್ನು ಗಾಂಧಿ ನಿರೂಪಿಸಿದ್ದಾರೆ. ಅವರ ಈ ತತ್ವವು ನೈತಿಕವಾಗಿ ಮತ್ತು ಪ್ರಾಯೋಗಿಕವಾಗಿ ತುಳಿತಕ್ಕೊಳಗಾದ ಜನರ ಸ್ವಾತಂತ್ರ್ಯದ ಹೋರಾಟಕ್ಕೆ ಉತ್ತಮ ಮಾರ್ಗ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಕಿಂಗ್ ಜೂನಿಯರ್ ಅವರಿಗೆ, ಗಾಂಧಿಜಿ ಪರಿಚಯವಾಗಿದ್ದು ಕ್ರೂಜರ್ ತಿಯೋಲಾಜಿಕಲ್ ಸೆಮಿನರಿಯಲ್ಲಿ ಕಲಿಯುವಾಗ. ನಂತರ ಹೋವರ್ಡ್ ವಿಶ್ವವಿದ್ಯಾನಿಲಯದ ಮೊರ್ಡಸ್ಕಾ ಜಾನ್ಸನ್ ಅವರಿಂದ; ಆಗತಾನೆ ಭಾರತದ ಪ್ರವಾಸವನ್ನು ಮುಗಿಸಿ ಬಂದಿದ್ದ ಜಾನ್ಸನ್ ಗಾಂಧಿ ಅವರು ಅಹಿಂಸ ಚಳವಳಿಯ ಮೂಲಕ ಭಾರತದಲ್ಲಿ ಹೇಗೆ ಬದಲಾವಣೆಗೆ ಕಾರಣರಾಗಿದ್ದಾರೆ ಎಂಬುದನ್ನು ಹೇಳಿದಾಗ. ಹೀಗೆ ಗಾಂಧಿಜಿ ಅವರ ಅಹಿಂಸಾ ತತ್ವದಿಂದ ಪ್ರಭಾವಿತರಾದ ಕಿಂಗ್, ೧೯೫೫ರಿಂದ ೧೯೫೬ರ ವರೆಗೆ ನಡೆದ ಬಸ್ ಬಹಿಷ್ಕಾರದಲ್ಲಿ ಅಹಿಂಸಾ ಚಳವಳಿಯ ತಂತ್ರಗಳನ್ನು ಚೆನ್ನಾಗಿ ಬಳಸಿಕೊಂಡರು.

ಅದಕ್ಕೆ ಕಾರಣವಾದ ಘಟನೆ ‘ಮೊಂಟೋಗೊಮೆರಿ’. ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಯ ಅತ್ಯಂತ ಮುಖ್ಯ ಘಟನೆಗಳಲ್ಲಿ ಒಂದಾದ ಮೊಂಟೆಗ್ಮ್ರಿ ಬಸ್ ಬಹಿಷ್ಕಾರ ಡಿಸೆಂಬರ್ ೫, ೧೯೫೫ರಿಂದ ಡಿಸೆಂಬರ್ ೨೦, ೧೯೫೬ ರವರೆಗೆ ಒಟ್ಟು ೩೮೧ ದಿನಗಳವರೆಗೆ ಅಲಬಾಮಾ ರಾಜ್ಯದ ಮೊಂಟೆಗ್ಮ್ರಿ ನಗರದಲ್ಲಿ ಬಸ್‌ಗಳಲ್ಲಿ ಕಪ್ಪು ವರ್ಣೀಯರಿಗೆ ಇದ್ದ ಜನಾಂಗೀಯ ಪ್ರತ್ಯೇಕತೆಯ ನಿಯಮದ ವಿರುದ್ಧ ನಡೆಯಿತು. ಮೊಂಟೆಗ್ಮ್ರಿ ಕಾನೂನಿನ ಪ್ರಕಾರ ಕಪ್ಪು ಜನರು ಬಿಳಿಯರಿಗೆ ಸೀಟು ಬಿಟ್ಟುಕೊಡಬೇಕಿತ್ತು. ಆದರೆ, ಅಂದು ರೋಸಾ ಪಾರ್ಕ್ಸ್ ಎಂಬ ಕಪ್ಪು ವರ್ಣೀಯ ಮಹಿಳೆ ಬಸ್‌ನಲ್ಲಿ ಬಿಳಿಯ ವ್ಯಕ್ತಿಗೆ ಸೀಟು ಬಿಟ್ಟುಕೊಡಲು ನಿರಾಕರಿಸಿದರು.

ಹಾಗಾಗಿ, ಪಾರ್ಕ್ಸ್ ಬಂಧನವಾಯಿತು. ನಂತರ, ಸ್ಥಳೀಯ ಕಪ್ಪು ನಾಯಕರು ಒಂದು ದಿನದ ಬಸ್ ಬಹಿಷ್ಕಾರಕ್ಕೆ ಕರೆ ನೀಡಿದರು. ಆಗ, ೨೬ ವರ್ಷದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರನ್ನು ಮೊಂಟೆಗ್ಮ್ರಿ ಇಂಪ್ರೂವ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇದೇ ಅವರ ಮೊದಲ ದೊಡ್ಡ ಚಳವಳಿ. ಕಪ್ಪು ಜನರು ೧ ವರ್ಷಕ್ಕೂ ಹೆಚ್ಚು ಕಾಲ ಬಸ್ ಹತ್ತುವುದನ್ನು ನಿಲ್ಲಿಸಿದರು. ಕೆಲಸಕ್ಕೆ ನಡೆದುಕೊಂಡು ಹೋದರು. ಕಾರ್ ಪೂಲ್ ಮಾಡಿದರು.

ಟ್ಯಾಕ್ಸಿಗಳನ್ನು ಬಳಸಿದರು. ಪರಿಣಾಮ ಬಸ್ ಕಂಪೆನಿಗೆ ಭಾರಿ ನಷ್ಟ ಉಂಟಾಯಿತು. ಏಕೆಂದರೆ, ಬಸ್ ಪ್ರಯಾಣಿಕರಲ್ಲಿ ಶೇ.೭೫ರಷ್ಟು ಕಪ್ಪು ಜನರಾಗಿದ್ದರು. ಡಿಸೆಂಬರ್ ೨೦, ೧೯೫೬ ಸುಪ್ರೀಂ ಕೋರ್ಟ್ ಆದೇಶದ ನಂತರ ಮೊಂಟೆಗ್ಮ್ರಿ ಬಸ್‌ಗಳಲ್ಲಿ ಪ್ರತ್ಯೇಕತೆಕೊನೆಗೊಂಡಿತು. ಡಿಸೆಂಬರ್ ೨೧, ೧೯೫೬ರಂದು ಮಾರ್ಟಿನ್ ಲೂಥರ್ ಕಿಂಗ್, ರೋಸಾ ಪಾರ್ಕ್ಸ್ ಮತ್ತು ಇತರರು ಮೊದಲ ಬಾರಿಗೆ ಸಂಯೋಜಿತ ಬಸ್‌ನಲ್ಲಿ ಪ್ರಯಾಣಿಸಿದರು.

ಇದು ಏಕೆ ಮುಖ್ಯ ಅಂದರೆ, ಗಾಂಧಿಜಿಯ ಅಹಿಂಸಾ ತತ್ವದಿಂದ ಪ್ರೇರಿತವಾಗಿ ನಡೆದ ಮೊದಲ ದೊಡ್ಡ ಅಮೆರಿಕನ್ ಚಳವಳಿ. ಇದರ ಫಲಿತ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ರಾಷ್ಟ್ರೀಯ ನಾಯಕರಾದರು. ಇದು, ೧೯೬೪ರ ನಾಗರಿಕ ಹಕ್ಕುಗಳ ಕಾಯ್ದೆಗೆ ದಾರಿ ಮಾಡಿಕೊಟ್ಟಿತು. ಹೀಗೆ, ಗಾಂಧಿಜಿ, ಭಾರತದ ಆಚೆಗೂ ಅಹಿಂಸಾ ಚಳವಳಿ ಮೂಲಕ ಹೊಸ ತಂತ್ರದ ಕ್ರಾಂತಿಗೆ ನಾಂದಿ ಹಾಡಿದರು. ಕಿಂಗ್ ಜೂನಿಯರ್ ಮತ್ತು ಅಮೆ ರಿಕದ ಸಮಾನತವಾದಿಗಳು ಹಾಗೂ ನೀಗ್ರೋಗಳ ಮೇಲೆ ಗಾಂಧಿಜಿ ಅವರ ಅಹಿಂಸ ಚಳವಳಿಯ ಪ್ರಭಾವ ಎಷ್ಟು ಪರಿಣಾಮಕಾರಿಯಾಗಿತ್ತು ಎಂದರೆ ಆಗಲೇ ಕಿಂಗ್ ಜೂನಿಯರ್ ಅವರು ಭಾರತವನ್ನು ಸಂದರ್ಶಿಸಲು ಅವಕಾಶ ಪಡೆದರು.

ಪರಿಣಾಮ ೧೯೫೯ರಲ್ಲಿ ಗಾಂಧಿ ಸ್ಮಾರಕ ನಿಧಿ ಮತ್ತು ಅಮೆರಿಕ ಸ್ನೇಹಿತರ ಸೇವಾ ಸಮಿತಿ ಪ್ರಯೋಜಕತ್ವದಲ್ಲಿ ಕಿಂಗ್ ಜೂನಿಯರ್ ಅವರು, ತಮ್ಮ ಪತ್ನಿ ಕೊರೆಟ ಸ್ಕಾಟ್ ಕಿಂಗ್, ಮತ್ತು ಲಾರೆನ್ಸ್ ಬಿ ರೆಡ್ಡಿಕ್ ಅವರ ಜೊತೆ ಭಾರತದ ಪ್ರಯಾಣ ಕೈಗೊಂಡರು. ಗಾಂಧಿಜಿಯವರ ಸ್ಮಾರಕ, ಕುಟುಂಬದ ಸದಸ್ಯರು, ಇಲ್ಲಿನ ಚಳವಳಿಗಾರರು, ಆಡಳಿತಾತ್ಮಕ ಸಿಬ್ಬಂದಿ, ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಇನ್ನಿತರ ಪ್ರಮುಖ ನಾಯಕರನ್ನು, ಅಲ್ಲದೇ ಗಾಂಧಿ ತತ್ವಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಮಹಾನ್ ವ್ಯಕ್ತಿಗಳನ್ನು ಕಂಡು ಮಾತನಾಡಿದರು.

ಆ ಮೂಲಕ ಭಾರತದ ಉದ್ದಗಲಕ್ಕೂ ಗಾಂಧಿ ಪ್ರಭಾವಿಸಿದ ಅಹಿಂಸ ತಂತ್ರ ಚಳವಳಿಯಾಗಿ ರೂಪುಗೊಂಡ ಬಗೆಗೆ ಪ್ರಾಯೋಗಿಕವಾದ ಅರಿವು ಪಡೆದುಕೊಂಡರು. ಹೀಗೆ ಗಾಂಧಿ, ಕಿಂಗ್ ಜೂನಿಯರ್ ಅವರ ಮೇಲೆ ಗಂಭೀರವಾದ ಪ್ರಭಾವವನ್ನು ಬೀರಿದರು. ಇದರ ಪರಿಣಾಮೇನೆಂದರೆ, ಅಮೆರಿಕಾದ ನೀಗ್ರೋಗಳ ಸಮಾನತೆಗಾಗಿ ನಡೆಸಿದ ಎಲ್ಲಾ ಹೋರಾಟಗಳು ಅಹಿಂಸಾತ್ಮಕ ಚಳವಳಿಯ ಹಾದಿಯಲ್ಲಿ ನಡೆದವು. ಅವು ನಿರೀಕ್ಷಿತ ಫಲಿತಾಂಶವನ್ನು ನೀಡಿದವು. ಅಷ್ಟೇ ಅಲ್ಲ, ೧೯೫೯ರಲ್ಲಿ ಕಿಂಗ್ ಜೂನಿಯರ್ ಅವರುಪಾಮ್ ಸಂಡೇ ಧರ್ಮೋಪದೇಶ ಕಾರ್ಯಕ್ರಮದಲ್ಲಿ, ೧೯೨೮ರಲ್ಲಿ ಇಂಡಿಯಾದಲ್ಲಿ ನಡೆದ ದಂಡಿ ಸತ್ಯಾಗ್ರಹದ ಪ್ರಾಮುಖ್ಯತೆ ಮತ್ತು ಆಮರಣಾಂತ ಉಪವಾಸ, ಅಲ್ಲದೆ ಭಾರತದಲ್ಲಿರುವ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ಮುಂತಾದ ಸಾಮಾಜಿಕ ಅಸಮಾನತೆಗಳ ಕುರಿತು ಸುದೀರ್ಘವಾದ ಭಾಷಣ ಮಾಡಿದರು.

ಕಿಂಗ್ ಅವರ ಅಂತಿಮ ನಂಬಿಕೆ ಏನೆಂದರೆ: ಗಾಂಧಿ ಅವರ ಅಹಿಂಸಾತ್ಮಕ ಚಳವಳಿ ಅಮೆರಿಕದಲ್ಲಿರುವ ಜನಾಂಗೀಯ ಸಮಸ್ಯೆಗೆ ಒಂದು ಪರಿಹಾರವನ್ನು ಒದಗಿಸುತ್ತದೆ ಎಂಬುದೇ ಆಗಿತ್ತು. ಹಾಗಾಗಿ ಅಂತಹ ಚಳವಳಿಯ ಕುರಿತು ಅವರಿಗೆ ಭರವಸೆ ಮೂಡಿತು. ಹೀಗೆ ಗಾಂಧಿ ಅವರ ಅಹಿಂಸಾ ತಂತ್ರ, ಭಾರತ ಎಂಬ ವೃತ್ತವನ್ನೂ ದಾಟಿ ಸಾಗರದಾಚೆ ಸಮಾನತೆಯ ಡಿಂಡಿಮ ಭಾರಿಸಿತು. ಮತ್ತದು, ಇನ್ನೂ ಸದ್ದು ಮಾಡುತ್ತಲೇ ಇದೆ ಎಂಬುದು ನಿತ್ಯಸತ್ಯ.

” ಅಮೆರಿಕದ ಕಪ್ಪು ಜನರ ಹಕ್ಕುಗಳಿಗಾಗಿ ಹೋರಾಡಿದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌ಗೆ ಗಾಂಧಿ ಪ್ರೇರಣೆ”

 

 

ಆಂದೋಲನ ಡೆಸ್ಕ್

Recent Posts

ಗಾಂಧಿಯ ಸರಳತೆಯತ್ತ ನಡೆಯುತ್ತಿರುವ ಯುವಜನತೆ

ಮಹಾತ್ಮ ಗಾಂಧೀಜಿ ಅವರ ಆತ್ಮಕತೆಗೆ ನೂರು ವರ್ಷ ಸಂದಿರುವುದು ಸಂತಸದ ವಿಷಯ. ಇವತ್ತು ಗಾಂಧಿಜಿ ಅವರ ವಿಚಾರಕ್ಕೆ ಏನಾಗುತ್ತಿದೆ? ಆಚಾರಕ್ಕೆ…

14 seconds ago

ಮಾಂಸಾಹಾರ ಬಿಟ್ಟರೂ ಮಿತ್ರನ ಗೆಳೆತನ ಬಿಡಲಾಗಲಿಲ್ಲ

ಗಾಂಧಿ ಅಭಿಯಾನ ಅರಿವಿನ ಯಾನ ಗೊತ್ತಾಗಿದ್ದ ದಿನ ಬಂತು. ನನ್ನ ಆಗಿನ ಸ್ಥಿತಿಯನ್ನು ವರ್ಣಿಸುವುದು ಕಷ್ಟ. ಒಂದು ಕಡೆ ಸುಧಾರಣೆಯ ಮಾರ್ಗದ…

10 mins ago

ಡಿಕೆಶಿ ಸಂಪುಟದಲ್ಲಿ ಯಾರ‍್ಯಾರಿಗೆ ಒಲಿಯಲಿದೆ ಮಂತ್ರಿ ಸ್ಥಾನ?

ಕೆ.ಬಿ.ರಮೇಶನಾಯಕ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್‌ಗೆ ಮಂತ್ರಿ ಸ್ಥಾನ ಸಾಧ್ಯತೆ ಎಚ್‌ಸಿಎಂಗೆ ಪ್ರಬಲ ಖಾತೆ ಕೊಡಿಸಲು ಹೈಕಮಾಂಡ್ ಮಟ್ಟದಲ್ಲಿ…

15 mins ago

ಈ ಬಾರಿ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ಸಿಗುವುದೇ?

ಮಂಜು ಕೋಟೆ ಕೋಟೆ: ಮೈಸೂರು ಪ್ರಾಂತ್ಯದ ನಾಯಕ ಸಮುದಾಯದ ಏಕೈಕ ಶಾಸಕರಾಗಿರುವುದು ಪ್ಲಸ್ ಪಾಯಿಂಟ್ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…

20 mins ago

ಕಂದಾಯ ದಾಖಲೆಯಲ್ಲಿ ೪ ವಾರ್ಡ್‌ಗಳೇ ನಾಪತ್ತೆ!

ಎಸ್.ಎಸ್.ಭಟ್ ನಂಜನಗೂಡು ನಗರಸಭೆಯಲ್ಲಿ ೩೧ ವಾರ್ಡ್‌ಗಳು, ಕಂದಾಯ ಇಲಾಖೆಯಲ್ಲಿ ೨೭ ವಾರ್ಡ್‌ಗಳು ನಂಜನಗೂಡು: ಪುರಸಭೆ ನಗರಸಭೆಯಾಗಿ ಬಡ್ತಿ ಹೊಂದಿ ೨೭…

24 mins ago