ಕೆ.ಬಿ.ರಮೇಶನಾಯಕ
ಮೈಸೂರು: ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರಜಾಪ್ರತಿನಿಧಿ ವ್ಯವಸ್ಥೆಯನ್ನು ಜಾರಿಗೆ ತಂದ ಮೈಸೂರಿನ ಅರಸು ಮನೆತನ ಎರಡನೇ ಬಾರಿಗೆ ಪ್ರಜಾಪ್ರಭುತ್ವದಲ್ಲಿ ಜನರ ಮನಗೆಲ್ಲಲು ಮುಂದಾಗಿದೆ. ರಾಜಕೀಯ ಪ್ರವೇಶ ಇಲ್ಲ ಎನ್ನುತ್ತಲೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಣಕ್ಕಿಳಿದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪ್ಪಿಕೊಂಡ ಬಳಿಕವೂ ಜನಾನುರಾಗಿಗಳಾಗಿದ್ದ ಮಹಾರಾಜರ ಮನೆತನದ ಬಗ್ಗೆ ಹಳೆಯ ಮೈಸೂರು ಪ್ರಾಂತ್ಯದಲ್ಲಿ ವಿಶೇಷ ಗೌರವವಿರುವ ಕಾರಣದಿಂದಲೇ ಯದು ಅವರ ಪೂರ್ವಾಧಿಕಾರಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಾಲ್ಕು ಬಾರಿ ಮೈಸೂರಿನ ಸಂಸದರಾಗಿ ಸೇವೆ ಸಲ್ಲಿಸಿದ್ದರು.
ಶ್ರೀಕಂಠದತ್ತ ಒಡೆಯರ್ ಅವರು 1984 ಮತ್ತು 1989 ರಲ್ಲಿ ಕಾ೦ಗ್ರೆಸ್ ನಿ೦ದ ಗೆಲುವು ಸಾಧಿಸಿದ್ದರು. ಆದರೆ 1991ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ರಭಾ ಅರಸು ವಿರುದ್ಧ ಸೋಲು ಕಂಡಿದ್ದರು. ನಂತರ ಕಾಂಗ್ರೆಸ್ ಪಕ್ಷಕ್ಕೆ ಮರಳಿ 1996 ಮತ್ತು 1999ರಲ್ಲಿ ಮತ್ತೆ ಗೆಲುವು ಸಾಧಿಸಿದ್ದರು. 2004ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ವಿರುದ್ಧ ಸೋಲು ಕಂಡ ಬಳಿಕ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು. ಅವರ ನಿಧನಾನಂತರ ರಾಜಮನೆತನದವರು ರಾಜಕೀಯ ಪ್ರವೇಶ ಮಾಡುತ್ತಾರೆಂಬ ಮಾತುಗಳು ಕೇಳಿಬಂದರೂ ರಾಜವಂಶಸ್ಥೆ ಪ್ರಮೋದಾದೇವಿ ರಾಜಕೀಯಕ್ಕಿಂತ ತಮ್ಮ ಕುಟುಂಬದ ಆಸ್ತಿ ಪಾಸ್ತಿಗಳ ಸಂರಕ್ಷಣೆಗೆ ಹೆಚ್ಚು ಗಮನ ಹರಿಸಿದ್ದರು.
2ನೇ ಬಾರಿಗೆ ಮನವೊಲಿಕೆಗೆ ಹೈಕಮಾಂಡ್ ಸಫಲ: 2019ರ ಚುನಾವಣೆಯಲ್ಲಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಚುನಾವಣೆಗೆ ನಿಲ್ಲಿಸಲು ಬಿಜೆಪಿ ಹೈಕಮಾಂಡ್ ಒಲವು ತೋರಿತ್ತು. ಆದರೆ ಯದುವೀರ್ ಆಸಕ್ತಿ ತೋರಿಸಿ ರಲಿಲ್ಲ. ನಂತರದಲ್ಲಿ ಪ್ರಮೋದಾದೇವಿ ಒಡೆಯರ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗುತ್ತಿದೆ ಎನ್ನುವ ಸುದ್ದಿ ಹರಡಿತ್ತಾದರೂ ಅದು ಕಾವ್ಯರೂಪಕ್ಕೆ ಬಂದಿರಲಿಲ್ಲ. ಈ ಬಾರಿ ಬಿಜೆಪಿ ನಾಯಕರು ವ್ಯವಸ್ಥಿತವಾಗಿ ಕಾರ್ಯತಂತ್ರ ಹೆಣೆದು ಯದುವೀರ್ ಅವರನ್ನು ಕಣಕಿಳಿಸುವ ಯೋಜನೆಯನ್ನು ಕಾರ್ಯಗತಗೊಳಿಸಿ ರಾಜಸ್ಥಾನದಲ್ಲಿರುವ ಯದುವೀರ್ ಅವರ ಮಾವನ ಮನೆಯವರು ಕುಟುಂಬದವರನ್ನು ಒಪ್ಪಿ ಸುವ ಹೊಣೆ ಹೊತ್ತಿದ್ದರೆ, ಚುನಾವಣೆ ಕಣಕ್ಕಿಳಿಸಲು ಬಿಜೆಪಿಯ ಘಟಾನುಘಟಿ ನಾಯಕರೇ ಚರ್ಚೆ ಮಾಡಿದ್ದರು. ಕೇಂದ್ರ ಸಚಿವ ಭೂಪೇಂದ್ರ ಯಾದವ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕರು ಆಂತರಿಕವಾಗಿ ರಾಜಮನೆತನದ ಸದಸ್ಯರ ಜೊತೆ ಮಾತುಕತೆ ನಡೆಸಿದ್ದರು. ಮೂರು ದಿನಗಳ ಹಿಂದೆ ಸಮಯ ಕೇಳಿದ್ದ ರಾಜಮನೆತನ ಸಮ್ಮತಿ ಸೂಚಿಸುತ್ತಿ ದ್ದಂತೆ ಬಿಜೆಪಿ ಹೈಕಮಾಂಡ್ ಯದುವೀರ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಈ ಮೂಲಕ ಪ್ರತಾಪ್ ಸಿಂಹ ಅಖಾಡದಿಂದ ದೂರ ಉಳಿಯುವಂತಾಗಿದೆ.
ಯದುವೀರ್ ಹಿನ್ನೆಲೆ:
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಪ್ರಮೋದಾದೇವಿಯವರು 2015ರ, ಫೆಬ್ರವರಿ 23 ರಂದು ದತ್ತುಪುತ್ರನಾಗಿ ಸ್ವೀಕರಿಸುವ ಮೂಲಕ ಅವರು ಯದುವಂಶದ 27ನೆಯ ‘ಯುವರಾಜ’ ನೆನಿಸಿದರು. ಶ್ರೀಕಂಠದತ್ತ ಒಡೆಯರ್ ಮತ್ತು ಪ್ರಮೋದಾ ದೇವಿ ದಂಪತಿಗೆ ಮಕ್ಕಳಿಲ್ಲದ್ದರಿಂದ ಈ ನಿರ್ಧಾರ ಕೈಗೊಳ್ಳಬೇಕಾಯಿತು.
ಯದುವೀರರ ಮೊದಲ ಹೆಸರು, ಯದುವೀರ್ ಗೋಪಾಲರಾಜೇ ಅರಸ್. ದತ್ತು ಸ್ವೀಕಾರ ಸಮಾರಂ ಭದ ಸಮಯದಲ್ಲಿ ಈ ಹೆಸರನ್ನು ಬದಲಾಯಿಸಲಾ ಯಿತು. ಯದುವೀರರ ತಂದೆ ಬೆಟ್ಟದ ಕೋಟೆ ಅರಸು
ಪರಂಪರೆಯವರು. ಜಯಚಾಮರಾಜ ಒಡೆಯರ ಮರಿಮಗ. ಶ್ರೀಕಂಠದತ್ತ ಒಡೆಯರ್ ಅವರ ಹಿರಿಯ ಸೋದರಿ ಗಾಯತ್ರಿ ದೇವಿ ಮತ್ತು ರಾಮಚಂದ್ರ ಅರಸ್ ಅವರ ಪುತ್ರಿ ತ್ರಿಪುರಸುಂದರಿ ದೇವಿ ಮತ್ತು ಸ್ವರೂಪ್ ಗೋಪಾಲ ರಾಜೇ ಅರಸ್ ಅವರ ಏಕೈಕ ಪುತ್ರ ಯದುವೀರ್ ಗೆ ‘ಜಯಾತ್ಮಿಕಾ’ ಹೆಸರಿನ ಸಹೋದರಿ ಇದ್ದಾಳೆ. ಪತ್ನಿ ತ್ರಿಷಿಕಾ ಕುಮಾರಿ ಜೈಪುರದ ರಾಜಮನೆತನಕ್ಕೆ ಸೇರಿದವರು. ಆದ್ಯ ಒಡೆಯರ್ ಈ ದಂಪತಿಯ ಪುತ್ರ.
ಶಿಕ್ಷಣ
ಬೆಂಗಳೂರಿನ ವಿದ್ಯಾನಿಕೇತನ್ ಶಿಕ್ಷಣ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ, ‘ಕೆನೆಡಿಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ 12 ನೆಯ ತರಗತಿ ತೇರ್ಗಡೆಯಾಗಿದ್ದರು. ನಂತರ ಅಮೆರಿಕದಲ್ಲಿ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಆಂಗ್ಲಭಾಷಾ ವಿಷಯಗಳಲ್ಲಿ ಬಿ.ಎ ಪದವಿ ಮಾಡಿದ್ದಾರೆ. ಇತಿಹಾಸ ಅವರ ಆಸಕ್ತಿಯ ವಿಷಯ.
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…